ಇವರು ಟಿಪ್ಪುವನ್ನು ಕೊಂದ ಉರಿಗೌಡ ಮತ್ತು ನಂಜೇಗೌಡರಲ್ಲ; ಸ್ವಾತಂತ್ರ್ಯಕ್ಕಾಗಿ ವೀರ ಮರಣವನ್ನಪ್ಪಿದ ಶಿವಗಂಗೈ ಸೀಮೆಯ ಮರುದು ಸಹೋದರರು!
ಡಿ.ಸಿ.ಪ್ರಕಾಶ್ ಸಂಪಾದಕರು
ತಮಿಳುನಾಡಿನ ವಿರುದುನಗರ ಜಿಲ್ಲೆಯ ನರಿಕುಡಿ ಬಳಿಯ ಮುಕ್ಕುಳಂ ಗ್ರಾಮದಲ್ಲಿ ವಾಸಿಸುತ್ತಿದ್ದ ಮೊಕ್ಕ ಪಳನಿಯಪ್ಪನ್ ಅಲಿಯಾಸ್ ಉಡಯಾರ್ (ಒಡೆಯರ್) ಸೇರ್ವೈ ಮತ್ತು ಅವರ ಪತ್ನಿ ಆನಂದಾಯಿ ಅಲಿಯಾಸ್ ಪೊನ್ನತ್ತಾಳ್ ದಂಪತಿಗಳಿಗೆ ಡಿಸೆಂಬರ್ 15, 1748 ರಂದು ಜನಿಸಿದವರು ಪೆರಿಯ (ದೊಡ್ಡ) ಮರುದು ಪಾಂಡ್ಯರ್. ಐದು ವರ್ಷಗಳ ನಂತರ 1753 ರಲ್ಲಿ ಚಿನ್ನ (ಚಿಕ್ಕ) ಮರುದು ಪಾಂಡ್ಯರ್ ಜನಿಸಿದರು. ಇಬ್ಬರೂ ಶಿವಗಂಗೈ ಸೀಮೆಯ (ಪ್ರದೇಶದ) ಅರಸನಾದ ಮುತ್ತು ವಡುಗನಾಥನ್ ಸೇನೆಯಲ್ಲಿ ಸಾಮಾನ್ಯ ಸೈನಿಕರಾಗಿ ಸೇರಿಕೊಂಡು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದರು. ಇವರ ಪರಾಕ್ರಮವನ್ನು ನೋಡಿ ಹೊಗಳಿದ ರಾಜ ಮುತ್ತು ವಡುಗನಾಥರು ಮರುದು ಸಹೋದರರನ್ನು ತನ್ನ ಸೈನ್ಯದ ಪ್ರಮುಖ ಸ್ಥಾನಗಳಿಗೆ ನೇಮಿಸಿದರು.
ಆರ್ಕಾಟ್ ನವಾಬನ ತೆರಿಗೆ ಸಂಗ್ರಹವನ್ನು ಬ್ರಿಟಿಷರೊಂದಿಗೆ ಹಂಚಿಕೊಳ್ಳಲು ಒಪ್ಪಂದವನ್ನು ಮಾಡಿಕೊಂಡ ಜೋಸೆಫ್ ಸ್ಮಿತ್ ನೇತೃತ್ವದ ಬ್ರಿಟಿಷ್ ಕಂಪನಿ ಪಡೆ 1772ರಲ್ಲಿ ರಾಮನಾಥಪುರವನ್ನು ವಶಪಡಿಸಿಕೊಂಡ ನಂತರ, ಶಿವಗಂಗೆಯ ಮೇಲೆ ಯುದ್ಧವನ್ನು ಪ್ರಾರಂಭಿಸಿತು. ಈ ಹಠಾತ್ ದಾಳಿಯನ್ನು ನಿರೀಕ್ಷಿಸದ ರಾಜ ಮುತ್ತು ವಡುಗನಾಥರು ಕಾಳೈಯಾರ್ ಕೋವಿಲ್ ಯುದ್ಧದಲ್ಲಿ ಕೊಲ್ಲಲ್ಪಡುತ್ತಾರೆ. ಇದರಿಂದ ರಾಣಿ ವೇಲುನಾಚಿಯಾರ್, ಮಗಳು ವೆಳ್ಳಚ್ಚಿ, ಮಂತ್ರಿ ತಾಂಡವರಾಯನ್ ಪಿಳ್ಳೈ ಮತ್ತು ಮರುದು ಸಹೋದರರು ದಿಂಡಿಗಲ್ ಬಳಿಯ ವಿರುಪಾಕ್ಷಿ ಅರಣ್ಯಕ್ಕೆ ಓಡಿ ತಪ್ಪಿಸಿಕೊಳ್ಳುತ್ತಾರೆ. 1772ರ ನಂತರ, ಕಾಡಿನಲ್ಲಿ ಮರೆಯಾಗಿ ವಾಸಿಸುತ್ತಿದ್ದ ಮರುದು ಸಹೋದರರು 1779ರಲ್ಲಿ ತಮ್ಮ ದಂಗೆಯನ್ನು ಪ್ರಾರಂಭಿಸಿ, ಆರ್ಕಾಟ್ ನವಾಬ್, ತೊಂಡೈಮಾನ್ ಮತ್ತು ಕುಂಬಿನಿಯ ಪಡೆಗಳನ್ನು ಸೋಲಿಸಿ, 1780ರಲ್ಲಿ ಶಿವಗಂಗೈ ಪ್ರದೇಶವನ್ನು ವಶಪಡಿಸಿಕೊಂಡು ವೇಲು ನಾಚಿಯಾರ್ ಅವರನ್ನು ಮತ್ತೆ ಸಿಂಹಾಸನಕ್ಕೆ ಮರುಸ್ಥಾಪಿಸುತ್ತಾರೆ. ಈ ಯುದ್ಧವು ಚೋಳವಂದಾನ್ ಪ್ರದೇಶದಲ್ಲಿ ಪ್ರಾರಂಭವಾಗಿ ಸಿಲೈಮಾನ್, ಮಣಲೂರು, ತಿರುಪ್ಪುವನಂ, ಮುತ್ತನೇಂದಲ್ ವರೆಗೆ ಸಾಗಿ ಅಂತಿಮವಾಗಿ ಮಾನಾಮದುರೈನಲ್ಲಿ ಯಾವುದೇ ಮಿಲಿಟರಿ ತರಬೇತಿಯಿಲ್ಲದ ಸ್ವಾತಂತ್ರ್ಯದ ಕಿಚ್ಚಿನಿಂದ ಬೀದಿಗಿಳಿದು ಹೋರಾಡಿದ ಜನರ ಸಹಾಯದಿಂದ ಆ ಯುದ್ಧವನ್ನು ಗೆಲ್ಲುತ್ತಾರೆ. ಪಶ್ಚಿಮ ದಿಂಡಿಗಲ್ ನಿಂದ ಹೈದರ್ ಅಲಿಯ ಪಡೆಗಳು ಸಮಯೋಚಿತವಾಗಿ ಆಗಮಿಸಿ ಸಹಾಯಕ್ಕೆ ನಿಂತಿದ್ದು ಕೂಡ ಇವರ ಗೆಲುವಿಗೆ ನೆರವಾಗುತ್ತದೆ. ವೇಲು ನಾಚಿಯಾರ್ ಅವರನ್ನು ಮರುದು ಪಾಂಡ್ಯರ್ ಸಹೋದರರು ಮತ್ತೆ ಅಧಿಕಾರಕ್ಕೆ ತರುತ್ತಾರೆ.
ಮರುದು ಸಹೋದರರ ಆಳ್ವಿಕೆಯು ಧಾರ್ಮಿಕ ಏಕತೆ ಮತ್ತು ಸಾಮರಸ್ಯಕ್ಕೆ ಗಮನಾರ್ಹವಾಗಿದೆ. ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರಿಗೆ ಪೂಜಾ ಸ್ಥಳಗಳನ್ನು ನಿರ್ಮಿಸಿಕೊಟ್ಟಿದ್ದಾರೆ. ಅವರು ಕಾಳೈಯಾರ್ ಕೋವಿಲ್ ವಾಲಯದ ಗೋಪುರವನ್ನು ನಿರ್ಮಿಸಿ ಕೊಟ್ಟಿದ್ದೂ ಅಲ್ಲದೇ ಕುಂಡ್ರಕ್ಕುಡಿ ಮತ್ತು ತಿರುಮೋಗೂರು ದೇವಾಲಯಗಳನ್ನು ದುರಸ್ತಿ ಮಾಡಿಕೊಟ್ಟಿದ್ದಾರೆ. ಮಾನಾಮದುರೈ ಸೋಮೇಶ್ವರ ದೇವಾಲಯದ ಗೋಪುರ ಮತ್ತು ರಥವನ್ನೂ ಸಹ ನಿರ್ಮಿಸಿಕೊಟ್ಟಿದ್ದಾರೆ. ಶಿವಗಂಗೈ ಕವಿ ವೇದಾಂತ ಸುಬ್ರಮಣ್ಯಂ ಅವರ ವಾನರ ವೀರ ಮಧುರೈ ಪುರಾಣದಲ್ಲಿನ ಅಂತಿಮ ಸ್ತೋತ್ರವು ಮರುದು ಸಹೋದರರನ್ನು ‘ಯದುಕುಲ ಮರುದು ಭೂಪನ ಮೈಂದರ್ಗಳ್’ (ಸಹೋದರರು) ಎಂದು ಉಲ್ಲೇಖಿಸಿರುತ್ತದೆ. ಕಿರಿಯವನಾದ ಚಿನ್ನ ಮರುದು ರಾಜಕೀಯ ತಂತ್ರಗಾರಿಕೆಯಲ್ಲಿ ನಿಪುಣನಾಗಿದ್ದನು. ಇವರು ತಂಜಾವೂರಿನಿಂದ ತಿರುನಲ್ವೇಲಿಯವರೆಗೆ ದೊಡ್ಡ ರಾಜಕೀಯ ಮೈತ್ರಿಯನ್ನು ಪ್ರಾರಂಭಿಸಿ ಬ್ರಿಟಿಷರ ವಿರುದ್ಧ ಹೋರಾಟಕ್ಕೆ ಚಾಲನೆ ನೀಡಿದ ಮೊದಲಿಗರು. ಮರುದು ಸಹೋದರರು, ಪಾಂಚಾಲಂಕುರುಚ್ಚಿ ಊಮದುರೈ, ಸಿವತ್ತೈಯ ತಂಬಿ, ಮೀನಂಗುಡಿ ಮುತ್ತುಕರುಪ್ಪ ತೇವರ್, ಚಿತ್ರಂಗುಡಿ ಮಾಯಿಲಪ್ಪನ್ ಸೇರ್ವೈ, ವಿರುಪಾಕ್ಷಿ ಗೋಪಾಲರ್, ತೇಳಿ ಯಾದುಲರ್, ಪಳಸಿ ಕೇರಳ ವರ್ಮ ಮತ್ತು ದಿವಂಗತ ಟಿಪ್ಪುವಿನ ಸೇನಾಪತಿಯಾಗಿದ್ದ ಧೊಂಡಿಯ ವಾಘ್ ಅವರೊಂದಿಗೆ ಸೇರಿಕೋಂಡು ಬ್ರಿಟಿಷರ ವಿರುದ್ಧ ದಕ್ಷಿಣ ಭಾರತದ ಒಕ್ಕೂಟವನ್ನು ರಚಿಸಿದರು. ಜೂನ್ 12, 1801 ರಂದು ಚಿನ್ನ ಮರುದು ತಿರುಚ್ಚಿ ತಿರುವರಂಗಂ ಮುಂತಾದ ಸ್ಥಳಗಳಲ್ಲಿ ಪ್ರಕಟಿಸಿದ ಹೇಳಿಕೆಗಳನ್ನು ‘ಜಂಬೂ ದ್ವೀಪ ಘೋಷಣೆ’ ಎಂದು ಕರೆಯಲಾಗುತ್ತದೆ. ಆ ಪ್ರಕಟಣೆಯಲ್ಲಿ ಎಲ್ಲ ಜನಾಂಗದವರೂ ದೇಶಭಕ್ತಿಯ ಕೆಲಸಗಳಲ್ಲಿ ತೊಡಗಿಸಿಕೊಳ್ಳುಬೇಕು ಮತ್ತು ಬ್ರಿಟಿಷರ ವಿರುದ್ಧ ಸಮರ ಸಾರಬೇಕೆಂದು ಕರೆ ನೀಡಲಾಗಿತ್ತು.
ಮರಣದಂಡನೆ:
ಮೇ 28, 1801 ರಂದು ಬ್ರಿಟಿಷರು ವೀರಪಾಂಡಿಯ ಕಟ್ಟಬೊಮ್ಮನ್ ಅವರ ಕಿರಿಯ ಸಹೋದರ ಊಮೈದುರೈಗೆ ಆಶ್ರಯ ನೀಡಿದರು ಎಂಬ ಕಾರಣವನ್ನು ಮುಂದಿಟ್ಟು ಯುದ್ಧವನ್ನು ಪ್ರಾರಂಭಿಸಿದರು. ಈ ಯುದ್ಧವು ಅಡೆತಡೆಯಿಲ್ಲದೆ 150 ದಿನಗಳವರೆಗೆ ನಡೆಯಿತು. ಗೆರಿಲ್ಲಾ ಯುದ್ಧವು ಕಾಳೈಯಾರ್ ಕೋವಿಲ್ ಕಾಡುಗಳಲ್ಲಿ ನಡೆಯಿತು. ಪುದುಕೊಟ್ಟೈನ ತೊಂಡೈಮಾನ್ ಬ್ರಿಟಿಷರಿಗೆ ಸಹಾಯ ಮಾಡಲು ಸೈನ್ಯವನ್ನು ಕಳುಹಿಸಿದನು. ಮರುದು ಸಹೋದರರು ಮತ್ತು ಇತರ ಸ್ವಾತಂತ್ರ್ಯ ಹೋರಾಟಗಾರರನ್ನು ಸೆರೆಹಿಡಿದವರಿಗೆ ಬಹುಮಾನವನ್ನು ಘೋಷಿಸಲಾಯಿತು. ಕಾಳೈಯಾರ್ ಕೋವಿಲ್ ಅರಣ್ಯವನ್ನು ನಾಶಪಡಿಸುವವರಿಗೆ ನಾಶವಾದ ಭೂಮಿಯನ್ನು 20 ವರ್ಷಗಳವರೆಗೆ ಉಚಿತ ಗುತ್ತಿಗೆ ನೀಡಲಾಗುವುದು ಎಂದು ಬ್ರಿಟಿಷ್ ಸರ್ಕಾರ ಘೋಷಿಸಿತು. ಕ್ಲೊನಾಲ್ ಆಗ್ನ್ಯೂ ಮರುದು ಸಹೋದರರನ್ನು ಕಾಳೈಯಾರ್ ಕೋವಿಲ್ ನಲ್ಲಿ ಬಂಧಿಸಿದನು. ನಂತರ ಗೌರಿವಲ್ಲಭ ಪೆರಿಯ ಉಡಯ ದೇವರನ್ನು ಶಿವಗಂಗೈಯ ಇಸ್ತಿಮಿರ್ ಆಗಿ ನೇಮಿಸಿದನು. ಶಿವಗಂಗೈನ ಸ್ವತಂತ್ರ ಆಳ್ವಿಕೆ ಅಲ್ಲಿಗೆ ಕೊನೆಗೊಂಡಿತು.
ಮರುದು ಸಹೋದರರು 24-10-1801 ರಂದು ತಿರುಪತ್ತೂರ್ ಕೋಟೆಯಲ್ಲಿ ಗಲ್ಲಿಗೇರಿಸಿ ವೀರ ಮರಣವನ್ನಪ್ಪಿದರು. ಮರುದುವಿನೊಂದಿಗೆ ಅವರ ಎಲ್ಲಾ ಪುರುಷ ಉತ್ತರಾಧಿಕಾರಿಗಳನ್ನೂ (ಚಿಕ್ಕ ಮರುದುವಿನ ಒಬ್ಬನೇ ಮಗನಾದ ದುರೈಸ್ವಾಮಿಯನ್ನು ಹೊರತುಪಡಿಸಿ) ಗಲ್ಲಿಗೇರಿಸಲಾಯಿತು. ಇದೇ ಸಂದರ್ಭದಲ್ಲಿ 500ಕ್ಕೂ ಹೆಚ್ಚು ಸ್ವಾತಂತ್ರ್ಯ ಹೋರಾಟಗಾರರನ್ನು ವಿಚಾರಣೆಯಿಲ್ಲದೆಯೇ ಗಲ್ಲಿಗೇರಿಸಲಾಯಿತು. ಮರುದು ಸಹೋದರರ ಅಪೇಕ್ಷೆಯಂತೆ ಅವರ ತಲೆಗಳನ್ನು ಕಾಲೈಯಾರ್ ಕೋವಿಲ್ ದೇವಸ್ಥಾನದ ಮುಂದೆ ಹೂಳಲಾಯಿತು ಎಂದು ನಂಬಲಾಗುತ್ತಿದೆ. ಚಿನ್ನ ಮರುದುವಿನ ಮಗ ದುರೈಸ್ವಾಮಿ ಮತ್ತು ಮರುದುವಿನ ಸೇನಾಪತಿಗಳು ಬಿಳಿಯರಿಂದ ಸೆರೆಹಿಡಿಯಲ್ಪಟ್ಟು ಪ್ರಿನ್ಸ್ ಆಫ್ ವೇಲ್ಸ್ (ಇಂದಿನ ಪೆನಾಂಗ್) ಗೆ ಗಡಿಪಾರು ಮಾಡಲಾಯಿತು. ಮರುದು ಸಹೋದರರ ಶೌರ್ಯ ಮತ್ತು ತ್ಯಾಗವನ್ನು ಗೌರವಿಸುವ ಸಲುವಾಗಿ ಮರುದು ಸಹೋದರರ ಸ್ಮರಣಾರ್ಥ ಅಂಚೆ ಚೀಟಿಯನ್ನು ಭಾರತೀಯ ಅಂಚೆ ಇಲಾಖೆಯು ಅಕ್ಟೋಬರ್ 23, 2004 ರಂದು ಮಧುರೈ ಮತ್ತು ಚೆನ್ನೈನಲ್ಲಿ ಬಿಡುಗಡೆ ಮಾಡಿತು.
ಭಾರತದ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ ಮರುದು ಸಹೋದರರ ಶೌರ್ಯ ಮತ್ತು ತ್ಯಾಗವನ್ನು ಸ್ಮರಿಸದೇ ಅವರ ಚಿತ್ರವನ್ನು ತೋರಿಸಿ ಮೈಸೂರು ಹುಲಿ ಟಿಪ್ಪು ಸುಲ್ತಾನನನ್ನು ಕೊಂದ ಉರಿಗೌಡ ಮತ್ತು ನಂಜೇಗೌಡ ಇವರೇ ಎಂದು ಸುಳ್ಳು ಪ್ರಚಾರ ಮಾಡುತ್ತಿರುವ ಬಿಜೆಪಿಯವರಿಗೆ ನಾಚಿಕೆಯಾಗಬೇಕು. ಯದುಕುಲದ (ಯಾದವರ) ಮರುದು ಸಹೋದರರ ಚಿತ್ರವನ್ನು ಬಳಸಿಕೊಂಡು ಒಕ್ಕಲಿಗ ಸಮುದಾಯವನ್ನು ಪಾಪದ ಕೂಪಕ್ಕೆ ತಳ್ಳುವ ಬಿಜೆಪಿಯ ಓಟ್ ಬ್ಯಾಂಕ್ ರಾಜಕಾರಣವನ್ನು ಯಾರೂ ಮೆಚ್ಚುವುದಿಲ್ಲ. ಸರ್ಕಾರ ಇದನ್ನು ಕೂಡಲೇ ತಡೆಯಬೇಕು. ಒಕ್ಕಲಿಗರನ್ನು ಮುಸ್ಲಿಮರ ವಿರುದ್ಧ ಎತ್ತಿಕಟ್ಟುವ ಬಹುದೊಡ್ಡ ಹುನ್ನಾರವನ್ನು ಸಂಘ ಪರಿವಾರವು ಬಹಳ ವ್ಯವಸ್ಥಿತವಾಗಿ ಮಾಡುತ್ತಿದೆ. ಇದರಿಂದ ಒಕ್ಕಲಿಗ ಸಮುದಾಯವು ಬಹಳ ಎಚ್ಚರಿಕೆಯಿಂದ ಇರಬೇಕು. ಇತಿಹಾಸವನ್ನು ತಿರುಚುವ ಮತ್ತು ಅದನ್ನು ನಂಬಿಸುವ ಕೆಲಸವನ್ನು ಮನುವಾದಿಗಳು ಬಹಳ ಅಚ್ಚುಕಟ್ಟಾಗಿ ಮಾಡುತ್ತಾರೆ. ತಮಿಳುನಾಡು ಬಿಜೆಪಿ ಉಸ್ತುವಾರಿಯಾಗಿರುವ ಸಿ.ಟಿ.ರವಿಯೇ ಇದರ ಸೃಷ್ಟಿಕರ್ತ ಎಂಬ ವಿಚಾರ ಇನ್ನು ತಮಿಳುನಾಡಿನ ದ್ರಾವಿಡ ಪಕ್ಷಗಳಿಗೆ ಮತ್ತು ಅಲ್ಲಿನ ಯಾದವ ಸಮುದಾಯಕ್ಕೆ ತಿಳಿದಿಲ್ಲವೆಂದು ಅನ್ನಿಸುತ್ತಿದೆ. ಇಲ್ಲಿನ ಬಿಜೆಪಿಯವರು ಎಚ್ಚೆತ್ತುಕೊಂಡರೆ ಸರಿ; ಇಲ್ಲದಿದ್ದರೆ ನಡೆಯಲಿರುವ ಚುನಾವಣೆಯಲ್ಲಿ ಹಳೇ ಮೈಸೂರು ಭಾಗದಲ್ಲಿ ಬಿಜೆಪಿಗೆ ಇದುವೆ ಮುಳುವಾದರೂ ಆಗಬಹುದು.
ಬಿಜೆಪಿ ಸೃಷ್ಟಿಸಿದ ಉರಿಗೌಡ ಮತ್ತು ನಂಜೇಗೌಡ ಎಂಬ ಕಾಲ್ಪನಿಕ ಪಾತ್ರಗಳು ಒಂದುವೇಳೆ ನಿಜವೇ ಆಗಿದ್ದರೇ ಈಗ ಬಿಜೆಪಿಗೆ ಅದರಿಂದ ಆಗಬೇಕಿರುವುದಾದರೂ ಏನು? ಟಿಪ್ಪುವನ್ನು ಕೊಂದಿದ್ದಕ್ಕಾಗಿ ಒಕ್ಕಲಿಗರು ಪಶ್ಚಾತಾಪ ಪಡಬೇಕೆ? ಅಥವಾ ಇನ್ನುಳಿದ ಮುಸ್ಲಿಮರನೆಲ್ಲ ಒಕ್ಕಲಿಗರು ಕೊಲ್ಲಬೇಕೆ? ಎಂಬುದನ್ನು ಬಿಜಿಪಿ ಸ್ಪಷ್ಟಪಡಿಸಬೇಕು. ಅಭಿವೃದ್ಧಿಯ ಹೆಸರಿನಲ್ಲಿ ಮತ ಕೇಳಲು ವಿಫಲವಾಗಿರುವ ಕರ್ನಾಟಕ ಬಿಜೆಪಿ, ಒಕ್ಕಲಿಗರು ಮತ್ತು ಮುಸ್ಲಿಮರ ಮಧ್ಯೆ ಕೋಮು ದ್ವೇಶವನ್ನು ಬಿತ್ತಿ, ಹಳೇ ಮೈಸೂರು ಭಾಗದಲ್ಲಿ ತಮ್ಮ ನೆಲೆಯನ್ನು ವಿಸ್ತರಿಸಿಕೊಳ್ಳಲು ಪ್ರಯತ್ನಿಸುವುದು ಸೂಕ್ತವಲ್ಲ. ರಾಜಕೀಯ ಏನೇ ಇರಲಿ ಕೋಮು ಭಾವನೆ ಬೇಡ. ಕುವೆಂಪು ರವರ ಸರ್ವ ಜನಾಂಗದ ತೋಟದಲ್ಲಿ ಕಮಲಕ್ಕೂ ಜಾಗವಿದೆ. ಆದರೆ, ಅದನ್ನು ಪ್ರಜಾಪ್ರಭುತ್ವದ ಅಡಿಯಲ್ಲಿ ನಿಂತು ಶಾಂತಿ, ಪ್ರೀತಿ, ಸಮಾನತೆಯೆಂಬ ಗೊಬ್ಬರವನ್ನು ಹಾಕಿ ಬೆಳೆಸಬೇಕು. ಆಗ ಅದು ಉತ್ತಮವಾದ ಬೆಳೆಯನ್ನು ಕೊಡುತ್ತದೆ.
ಉದಯ ಪೆರುಮಾಳ್ ಗೌಂಡರ್:
ಮರುದು ಸಹೋದರರ ನೇತೃತ್ವದಲ್ಲಿ ರೈಫಲ್ ಬ್ರಿಗೇಡನ್ನು ರಚಿಸಿ ಅದರ ಕಮಾಂಡರ್ ಆಗಿದ್ದವರು ಉದಯ ಪೆರುಮಾಳ್ ಗೌಂಡರ್. ಇವರನ್ನು ಮರುದು ಸಹೋದರರು ತಿರುಪ್ಪಾಚೇತಿ ಪಟ್ಟಣದ ಮುಖ್ಯಸ್ಥರನ್ನಾಗಿ ನೇಮಿಸಿದ್ದರು. ಇವರ ಮೂಲ ಹೆಸರು ಉದಯ ಪೆರುಮಾಳ್ ಗೌಂಡರ್ (ಗೌಡರು) ಇವರನ್ನು ‘ತುಪ್ಪಾಕಿ ಗೌಂಡರ್’ ಎಂಬ ಅಡ್ಡ ಹೆಸರಿನಿಂದ ಜನ ಪ್ರೀತಿಯಿಂದ ಕರೆಯುತ್ತಿದ್ದರು. ಅಕ್ಟೋಬರ್ 1, 1801 ರಂದು, ಕಾಳೈಯಾರ್ ಕೋವಿಲ್ ನಲ್ಲಿ ಬ್ರಿಟಿಷರಿಗೂ ಮತ್ತು ಶಿವಗಂಗೈ ಪ್ರದೇಶದ ಪಡೆಗಳಿಗೂ ನಡೆದ ಯುದ್ಧದಲ್ಲಿ ಇವರು ವೀರ ಮರಣವನ್ನು ಹೊಂದಿದರು. ಬಿಜೆಪಿಯವರು ತಮಿಳುನಾಡಿನ ಉದಯ (ಪೆರುಮಾಳ್) ಗೌಡರನ್ನು ಇಲ್ಲಿಗೆ ತಂದು, ತಿರುಚಿ ಉರಿಗೌಡ ಎಂದು ಬಿಂಬಿಸುತ್ತಿದ್ದಾರೆಯೇ ಎಂಬ ಅನುಮಾನವಿದೆ. ಇತಿಹಾಸ ತಜ್ಞರೇ ಇದನ್ನು ಬಿಡಿಸಬೇಕು.