ಹಿಂದಿನ ಮೀಸಲಾತಿಯನ್ನು ರದ್ದುಗೊಳಿಸಿ ಮುಸ್ಲಿಮರನ್ನು EWS ವರ್ಗಕ್ಕೆ ಸೇರಿಸಿ ಮುಖ್ಯಮಂತ್ರಿ ಬೊಮ್ಮಾಯಿ ಧರ್ಮ ದ್ವೇಷದ ಕ್ರಮ; ಕರ್ನಾಟಕ ಮುಸ್ಲಿಂ ಯುನಿಟಿ ಖಂಡನೆ! » Dynamic Leader
October 22, 2024
ರಾಜಕೀಯ

ಹಿಂದಿನ ಮೀಸಲಾತಿಯನ್ನು ರದ್ದುಗೊಳಿಸಿ ಮುಸ್ಲಿಮರನ್ನು EWS ವರ್ಗಕ್ಕೆ ಸೇರಿಸಿ ಮುಖ್ಯಮಂತ್ರಿ ಬೊಮ್ಮಾಯಿ ಧರ್ಮ ದ್ವೇಷದ ಕ್ರಮ; ಕರ್ನಾಟಕ ಮುಸ್ಲಿಂ ಯುನಿಟಿ ಖಂಡನೆ!

ಬೆಂಗಳೂರು: ಹಿಂದುಳಿದ ವರ್ಗದಲ್ಲಿ ಮುಸ್ಲಿಮರಿಗೆ ಸಂವಿಧಾನ ಬದ್ಧವಾಗಿ ನೀಡಿರುವ ಶೇಕಡಾ 4ರ ಮೀಸಲಾತಿಯನ್ನು ಏಕಾ ಏಕಿ ರದ್ದು ಮಾಡುವ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಮುಸ್ಲಿಂ ದ್ವೇಷವನ್ನು ಬಹಿರಂಗಪಡಿಸಿದ್ದಾರೆ. ರಾಜ್ಯ ಸರಕಾರದ ಈ ಸಂವಿಧಾನ ವಿರೋಧಿ ಕ್ರಮದ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ಕರ್ನಾಟಕ ಮುಸ್ಲಿಂ ಯುನಿಟಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

ರಾಜ್ಯದಲ್ಲಿ ನಾಗನಗೌಡ ಸಮಿತಿಯಿಂದ ಹಿಡಿದು ನ್ಯಾ.ಚಿನ್ನಪ್ಪ ರೆಡ್ಡಿ ಆಯೋಗದವರೆಗೆ ಕಳೆದ 60 ವರ್ಷಗಳಲ್ಲಿ ಬಂದಿರುವ ಎಲ್ಲ ಆಯೋಗಗಳೂ ಮುಸ್ಲಿಮರನ್ನು ಹಿಂದುಳಿದ ವರ್ಗ ಎಂದೇ ಗುರುತಿಸಿದೆ. ನ್ಯಾ.ಚಿನ್ನಪ್ಪ ರೆಡ್ಡಿ ಆಯೋಗದ ಅಧ್ಯಯನ ಪೂರ್ಣ ವರದಿಯ ಹಿನ್ನೆಲೆಯಲ್ಲಿ ಹಿಂದುಳಿದ ವರ್ಗದಲ್ಲಿ 4% ಮೀಸಲಾತಿಯನ್ನು ಮುಸ್ಲಿಮರಿಗೆ ನೀಡಲಾಗಿದೆ. ಇದನ್ನು ಏಕಾ ಏಕಿ ರದ್ದು ಪಡಿಸಿರುವುದು ಸಂವಿಧಾನ ವಿರೋಧಿ ಕ್ರಮ. ಇದನ್ನು ಒಪ್ಪಲು ಸಾಧ್ಯವಿಲ್ಲ. ಚುನಾವಣೆ ಹತ್ತಿರ ಬಂದಿರುವ ಸಮಯದಲ್ಲಿ ಮುಸ್ಲಿಮರು ಮತ್ತು ಲಿಂಗಾಯತ / ಒಕ್ಕಲಿಗ ಸಮುದಾಯದ ಮಧ್ಯೆ ವೈಷಮ್ಯ ಹುಟ್ಟಿಸಲು ಬಿಜೆಪಿ ಸರ್ಕಾರ ಯತ್ನಿಸುತ್ತಿದೆ. ಈ ಮೂಲಕ ರಾಜಕೀಯ ದುರ್ಲಾಭ ಪಡೆಯಲು ಮುಖ್ಯಮಂತ್ರಿ ಬೊಮ್ಮಾಯಿ ಸಂಚು ಹೂಡಿದ್ದಾರೆ. ಈ ಸಂಚಿಗೆ ಮುಸ್ಲಿಮರು ಬಲಿಯಾಗಬಾರದು. ಸಂಯಮದಿಂದ ವರ್ತಿಸಬೇಕು. ಯಾವುದೇ ಬೀದಿ ಹೋರಾಟಕ್ಕೆ ಇಳಿಯದೆ, ಈ ಕ್ರಮದ ವಿರುದ್ಧ ಕಾನೂನು ಹೋರಾಟವನ್ನು ಕೈಗೆತ್ತಿಕೊಳ್ಳಬೇಕು. ಕರ್ನಾಟಕ ಮುಸ್ಲಿಂ ಯೂನಿಟಿ ಕಾನೂನು ತಜ್ಞರ ಜೊತೆಗೆ ಈಗಾಗಲೆ ಸಮಾಲೋಚನೆ ನಡೆಸುತ್ತಿದ್ದು ಕಾನೂನು ಹೋರಾಟವನ್ನು ಕೈಗೆತ್ತಿಕೊಳ್ಳಲಿದೆ.

ಜಯಪ್ರಕಾಶ್ ಹೆಗ್ಡೆ ನೇತೃತ್ವದ ರಾಜ್ಯ ಹಿಂದುಳಿದ ವರ್ಗಗಳ ಶಿಫಾರಸ್ಸಿನ ಅನ್ವಯ ಮುಸ್ಲಿಂ ಮೀಸಲಾತಿಯನ್ನು ರದ್ದುಗೊಳಿಸಲಾಗಿದೆ. ಅವರನ್ನು ಮುಂದುವರಿದ ವರ್ಗ ಎಂದು ಪರಿಗಣಿಸಿ, ಆರ್ಥಿಕವಾಗಿ ದುರ್ಬಲ ವರ್ಗಕ್ಕೆ (EWS) ಸೇರಿಸಿ, ಮೀಸಲಾತಿ ಕೊಡಲಾಗುವುದು (EWS) ಎಂದು ಮುಖ್ಯ ಮಂತ್ರಿಯವರು ಹೇಳಿದ್ದಾರೆ. ಜಯಪ್ರಕಾಶ್ ಹೆಗ್ಡೆ ಆಯೋಗವು ಈ ಕುರಿತು ಯಾವ ಸಮೀಕ್ಷೆಯನ್ನೂ ಮಾಡದೆ ಹೇಗೆ ನಿರ್ಧಾರ ಕೈ ಗೊಂಡಿದೆ? ಜಯಪ್ರಕಾಶ್ ಹೆಗ್ಡೆ ಆಯೋಗವು ರಹಸ್ಯ ಸಮೀಕ್ಷೆ ಏನಾದರೂ ಮಾಡಿದೆಯೆ? ಹಾಗಿದ್ದರೆ ಆ ವರದಿಯನ್ನು ಸರ್ಕಾರ ಬಹಿರಂಗ ಪಡಿಸಬೇಕು ಎಂದು ಕರ್ನಾಟಕ ಮುಸ್ಲಿಂ ಯೂನಿಟಿಯು ಒತ್ತಾಯಿಸಿದೆ. ಮುಸ್ಲಿಮರ ಮೀಸಲಾತಿಯನ್ನು ಸಂವಿಧಾನ ಬದ್ಧವಾಗಿ ರಕ್ಷಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಜಿಲ್ಲಾ ಮಟ್ಟದಲ್ಲಿ ಸಮಾಲೋಚನೆ ನಡೆಸಲಾಗುವುದು. ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯದ ಸ್ವಾಮೀಜಿಗಳ ಸಲಹೆಯನ್ನೂ ಪಡೆದು ಮುಂದು ವರಿಯಲಾಗುವುದು. ಸಮುದಾಯ ಯಾವುದೇ ಭಾವಾವೇಶಕ್ಕೆ ಒಳಗಾಗದೆ ಕಾನೂನು ಹೋರಾಟದ ಮೂಲಕ ನ್ಯಾಯ ಪಡೆಯಲು ಯತ್ನಿಸಬೇಕು ಎಂದು ಮುಸ್ಲಿಂ ಯೂನಿಟಿ ಮನವಿ ಮಾಡಿದೆ. karnataka Government scraps Reservation For muslim

Related Posts