ತೆಲಂಗಾಣದಲ್ಲಿ 24 ಬೆರಳುಗಳೊಂದಿಗೆ ಜನಿಸಿದ ಮಗು; ದೇವರಂತೆ ಪೂಜಿಸುವ ಜನರು!
ತೆಲಂಗಾಣ: ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ 20 ಬೆರಳುಗಳಿರುತ್ತವೆ. 2 ಕೈಗಳಲ್ಲಿ 10 ಬೆರಳುಗಳು ಮತ್ತು 2 ಪಾದಗಳಲ್ಲಿ 10 ಬೆರಳುಗಳಿರುತ್ತವೆ. ಅಪರೂಪಕ್ಕೆ 6 ಬೆರಳುಗಳೊಂದಿಗೆ ಜನಿಸುವ ಶಿಶುಗಳನ್ನು ಕೆಲವೊಮ್ಮೆ ನೋಡುತ್ತೇವೆ. 6 ಬೆರಳುಗಳಿಂದ ಜನಿಸುವ ಮಕ್ಕಳು ಅಪರೂಪ. ಆದರೆ ತೆಲಂಗಾಣ ರಾಜ್ಯದಲ್ಲಿ 24 ಬೆರಳುಗಳೊಂದಿಗೆ ಮಗುವೊಂದು ಜನಿಸಿದೆ. ನಿಜಾಮಾಬಾದ್ ಜಿಲ್ಲೆಯವರಾದ ರಾವಲಿ ಗರ್ಭಿಣಿಯಾಗಿದ್ದರು. ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದ ಕಾರಣ ಕೊರಟ್ಲ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ವಲ್ಪ ಸಮಯದಲ್ಲೇ ಅವಳು ಸುಂದರವಾದ ಗಂಡು ಮಗುವಿಗೆ ಜನ್ಮ ನೀಡಿದಳು. ಮಗುವಿನ ಕೈ ಮತ್ತು ಪಾದಗಳ ಮೇಲೆ ತಲಾ 6 ಬೆರಳುಗಳಂತೆ ಒಟ್ಟು 24 ಬೆರಳುಗಳಿದ್ದವು. ಇದು ಅತ್ಯಂತ ಅಪರೂಪ ಎಂದು ವೈದ್ಯರು ಹೇಳಿದ್ದಾರೆ. ಹಾಗೂ ಮಗು ಆರೋಗ್ಯವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಈ ಬಗ್ಗೆ ಆ ಪ್ರದೇಶದಲ್ಲಿ ಮಾಹಿತಿ ಹರಡುತ್ತಿದ್ದಂತೆ ನೂರಾರು ಜನರು ಆಸ್ಪತ್ರೆಯಲ್ಲಿ ಜಮಾಯಿಸಿದರು. ಮಗುವನ್ನು ದೇವತೆಯ ಅವತಾರವೆಂದು ಪೂಜಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. 24 ಬೆರಳುಗಳೊಂದಿಗೆ ಜನಿಸಿದ ಮಗುವಿನ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.