'ಎಷ್ಟು ಹೋಡೆದರೂ ಈಶ್ವರಪ್ಪ ಸಹಿಸಿಕೊಳ್ಳುತ್ತಾನೆ; ಆತ ತುಂಬ ಒಳ್ಳೆಯವ' » Dynamic Leader
November 21, 2024
ರಾಜಕೀಯ

‘ಎಷ್ಟು ಹೋಡೆದರೂ ಈಶ್ವರಪ್ಪ ಸಹಿಸಿಕೊಳ್ಳುತ್ತಾನೆ; ಆತ ತುಂಬ ಒಳ್ಳೆಯವ’

ಡಿ.ಸಿ.ಪ್ರಕಾಶ್ ಸಂಪಾದಕರು

‘ನಾನು ನಿನಗೆ ಫೋನ್ ಮಾಡುತ್ತೇನೆ, ನೀನು ನನ್ನ ಜೊತೆ ಮಾತನಾಡುವುದನ್ನು ಪಕ್ಕದಿಂದ ವಿಡಿಯೋ ಮಾಡಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡು’ ಎಂದು ಹೇಳಿ ಮಾಡಿಸಿದಂಗಿದೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪನ ‘ಫೋನ್ ಕಾಲ್ ಸ್ಕ್ರಿಫ್ಟ್’. ಒಬ್ಬ ಮಾಜಿ ಸಚಿವರಿಗೆ ದೇಶದ ಪ್ರಧಾನಿಗಳು ಫೋನ್ ಮಾಡಿ ಮಾತನಾಡುವುದು ಸಂತೋಷ. ಆದರೆ ಅದನ್ನು ವಿಡಿಯೋ ಮಾಡಿಸಿ ಪ್ರಚಾರಕ್ಕೆ ಬಳಸುತ್ತಿರುವುದು ವಿವಾದಕ್ಕೆ ಎಡೆಮಾಡಿಕೊಡುತ್ತಿದೆ.

‘ಎಷ್ಟು ಹೋಡೆದರೂ ಈಶ್ವರಪ್ಪ ಸಹಿಸಿಕೊಳ್ಳುತ್ತಾನೆ; ಆತ ತುಂಬ ಒಳ್ಳೆಯವ ಎಂಬುದಕ್ಕಾಗಿಯೇ ಪ್ರಧಾನಿಗಳು ಈಶ್ವರಪ್ಪನಿಗೆ ಫೋನ್ ಮಾಡಿ ಸಮಾದಾನ ಮಾಡುತ್ತಿದ್ದಾರೆ’ ಎಂದು ವಿರೋಧ ಪಕ್ಷದ ಕಾರ್ಯಕರ್ತರು ಬೀದಿಗಳಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ. ಅದುಮಾತ್ರವಲ್ಲ, ‘ಸಂತೋಷ್ ಪಾಟೀಲ ಆತ್ಮಹತ್ಯೆ ವಿಚಾರದಲ್ಲಿ ಕಮಿಷನ್ ಆರೋಪ ಹೊತ್ತಿರುವ ಈಶ್ವರಪ್ಪಗೆ ಪ್ರಧಾನಿ ಮೋದಿ ಕರೆ ಮಾಡಿ ಶ್ಲಾಗಿಸಿದ್ದಾರೆ’ ಎಂದು ಕರ್ನಾಟಕ ಕಾಂಗ್ರೆಸ್ ಟ್ವೀಟ್ ಮಾಡಿ ಆರೋಪಿಸಿದೆ.

ಮುಂದಿನ ದಿನಗಳಲ್ಲಿ ಪಕ್ಷವು ಈಶ್ವರಪ್ಪ ಅವರಿಗೆ ಉನ್ನತ ಸ್ಥಾನಗಳನ್ನು ನೀಡಲಿದೆಯಂತೆ. ಈ ಬಾರಿ ಪಕ್ಷವು ಅವರಿಗೆ ಟಿಕೆಟ್ ನೀಡಲಿಲ್ಲ; ಅದಕ್ಕೆ ಎರಡು ಕಾರಣಗಳಿವೆ. ಒಂದು ವಯಸ್ಸು ಮತ್ತೊಂದು ಬೆಳಗಾವಿಯ ಗುತ್ತಿಗೆದಾರ ಸಂತೋಷ್ ಪಾಟೀಲ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ್ದು. ಇದನ್ನು ಮೊದಲೇ ಊಹಿಸಿದ್ದ ಅನುಭವಿ ಈಶ್ವರಪ್ಪ, ಟಿಕೆಟ್ ಘೋಷಣೆಯ ಒಂದು ದಿನದ ಮೊದಲೇ ನಿವೃತ್ತಿಯ ಘೋಷಣೆ ಮಾಡಿ, ಜಾನ್ಮೆಯನ್ನು ಪ್ರದರ್ಶಿಸಿದರು. ಪಕ್ಷದ ತತ್ವ, ಸಿದ್ಧಾಂತಗಳನ್ನು ಒಪ್ಪಿಕೊಂಡು ಮುಂದಿನ ತಲೆಮಾರುಗಳಿಗೆ ಅವಕಾಶ ಮಾಡಿಕೊಟ್ಟ ಈಶ್ವರಪ್ಪ ಅವರನ್ನು ಮಾದರಿ ನಾಯಕರೆಂದು ಬಿಜೆಪಿ ವರಿಷ್ಠರು ಹಾಡಿ ಹೊಗಳಿದರು.

ಲಕ್ಷ್ಮಣ ಸವದಿ

ಈ ಬಾರಿಯ ಚುನಾವಣೆಯಲ್ಲಿ ಟಿಕೆಟ್ ಕೈತಪ್ಪುವ ಹಿರಿಯ ನಾಯಕರು, ಬಿಜೆಪಿಯ ವಿರುದ್ಧ ಬಂಡಾಯ ಏಳಲಿದ್ದಾರೆ ಎಂಬುದನ್ನು ಮೊದಲೇ ತಿಳಿದುಕೊಂಡಿದ್ದ ಬಿಜೆಪಿಯವರನ್ನು ಈಶ್ವರಪ್ಪನ ನಿವೃತ್ತಿಯ ಘೋಷಣೆ ಹಾದಿ ತಪ್ಪಿಸುವಂತೆ ಮಾಡಿತು. ಇವರಂತೆಯೇ ಎಲ್ಲರೂ ನಿವೃತ್ತಿಯನ್ನು ಘೋಷಣೆ ಮಾಡುತ್ತಾರೆ ಅಥವಾ ಬಂಡಾಯ ಏಳದೆ ಸುಮ್ಮನಿರುತ್ತಾರೆ ಎಂದು ತಪ್ಪಾಗಿ ಅರ್ಥೈಸಿಕೊಂಡ ಕಮಲದ ವರಿಷ್ಠರು, ಹಿರಿಯ ನಾಯಕರಿಗೆ ಟಿಕೆಟ್ ನಿರಾಕರಿಸಿ ಪಟ್ಟಿಗಳನ್ನು ಬಿಡುಗಡೆ ಮಾಡುತ್ತಾ ಹೋದಂತೆ ಬಂಡಾಯದ ಬಿಸಿ ಕಮಲ ಪಕ್ಷದ ಅಸ್ತಿತ್ವನ್ನೇ ಅಲುಗಾಡಿಸುವಂತೆ ಮಾಡಿತು. ದೊಡ್ಡಮಟ್ಟದ ಬಂಡಾಯವನ್ನು ಸ್ವಲ್ಪವೂ ನಿರೀಕ್ಷಿಸದ ಬಿಜೆಪಿಗರಿಗೆ, ಈಶ್ವರಪ್ಪನ ನಿವೃತ್ತಿ ಘೋಷಣೆಯೇ ದಾರಿ ತಪ್ಪಿಸುವಂತೆ ಮಾಡಿದ್ದು. ಇಲ್ಲದಿದ್ದರೆ ಮೊದಲೇ ಹಿರಿಯ ನಾಯಕರ ಬಂಡಾಯಕ್ಕೆ ತೇಪೆ ಹಚ್ಚಿ ಶಮನಗೊಳಿಸುತ್ತಿದ್ದರು. ಬಂಡಾಯವು ಇಷ್ಟರಮಟ್ಟಿಗೆ ತೀವ್ರತೆಯನ್ನು ಪಡೆಯುತ್ತಿರಲಿಲ್ಲ. ಪ್ರಧಾನಿ ಮೋದಿಯವರು, ಈಶ್ವರಪ್ಪಗೆ ಫೋನ್ ಮಾಡಿ ಮಾತನಾಡಿದಂತೆ, ಸಮಯ ಕೊಟ್ಟು ಕಾಯುತ್ತಿದ್ದ ಲಕ್ಷ್ಮಣ ಸವದಿ, ಜಗದೀಶ್ ಶೆಟ್ಟರ್ ಮುಂತಾದ ಹಿರಿಯ ನಾಯಕರ ಜೊತೆಯಲ್ಲಿ ಮೊದಲೇ ಮಾತನಾಡಿದ್ದರೆ ಇಂತಹ ಬಂಡಾಯವನ್ನು ತಡೆಯಬಹುದಿತ್ತು.

ಜಗದೀಶ್ ಶೆಟ್ಟರ್

ಮಾಜಿ ಸಚಿವ ಈಶ್ವರಪ್ಪ ಅವರ ನಿವೃತ್ತಿ ಘೋಷಣೆಯು ತ್ಯಾಗವೇನಲ್ಲ. ಅವರ ನಿವೃತ್ತಿ ಘೋಷಣೆಯಲ್ಲಿ ಸ್ವಾರ್ಥವೂ ಅಡಗಿದೆ. ಅದು ತನ್ನ ಪುತ್ರ ಕಾಂತೇಶ್ ಅವರಿಗೆ ಟಿಕೆಟ್ ಪಡೆಯುವುದು. ‘ಎಷ್ಟು ಹೋಡೆದರೂ ಈಶ್ವರಪ್ಪ ಸಹಿಸಿಕೊಳ್ಳುತ್ತಾನೆ’ ಎಂಬ ಗುಟ್ಟನ್ನು ತಿಳಿದುಕೊಂಡ ಬಿಜೆಪಿ ವರಿಷ್ಠರು ಕೊನೆ ಗಳಿಗೆಯಲ್ಲಿ ಅವರ ಪುತ್ರನಿಗೂ ಟಿಕೆಟ್ ಕೊಡದೆ, ಚನ್ನಬಸಪ್ಪ ಅವರಿಗೆ ಟಿಕೆಟ್ ಘೋಷಣೆ ಮಾಡಿದರು. ಇದರಿಂದ ಈಶ್ವರಪ್ಪ ಮತ್ತು ಆತನ ಪುತ್ರ ಕಾಂತೇಶ್ ಅವರ ಭವಿಷ್ಯಕ್ಕೆ ದಿಕ್ಕು ಇಲ್ಲದಂತೆ ಆಯಿತು. ನಡೆಯಲಿರುವ ಕರ್ನಾಟಕ ವಿಧಾನಸಭೆ ಚುನಾವಣೆಯು ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಜೀವನ್ಮರಣ ಹೋರಾಟವಾಗಿದೆ. ಕರ್ನಾಟಕದಲ್ಲಿ ಸೋಲು ಗೆಲುವನ್ನು ನೋಡಿಕೊಂಡು ಮುಂದೆ ನಡೆಯಲಿರುವ ನಾಲ್ಕು ರಾಜ್ಯಗಳ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸುವ ಕಾರ್ಯಕ್ಕೆ ಬಿಜೆಪಿ ವರಿಷ್ಠರು ಮುಂದಾಗಬೇಕು. ಅದಾದನಂತರ 2024ರ ಸಂಸತ್ ಚುನಾವಣೆಯನ್ನು ಎದುರಿಸಬೇಕು. ಇದರ ಮಧ್ಯೆ ಬಿಜೆಪಿ ಪಕ್ಷವು ಈಶ್ವರಪ್ಪನನ್ನು ನೆನೆಪು ಮಾಡಿಕೊಳ್ಳುವುದು ಹೇಗೆ?

ಈ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮಾಜಿ ಸಚಿವ ಈಶ್ವರಪ್ಪಗೆ ಕಾಲ್ ಮಾಡಿ ಮಾತನಾಡಿರುವುದು ಎಲ್ಲಡೆ ಸುದ್ಧಿಯಾಗಿದೆ. ಚುನಾವಣೆಯ ಸಂದರ್ಭದಲ್ಲಿ ಪ್ರಧಾನಿಗಳು ಈಶ್ವರಪ್ಪಗೆ ಫೋನ್ ಮಾಡಿ ಮಾತನಾಡಿರುವುದು ಎರಡು ಸೂಚನೆಗಳನ್ನು ನೀಡುತ್ತದೆ. ಮೊದಲನೆಯದು ಪಕ್ಷದಲ್ಲಿ ಏನೇ ತೀರ್ಮಾನವಾದರೂ ಅದನ್ನು ಅರಗಿಸಿಕೊಂಡು, ಸ್ವಾಭಿಮಾನದ ಬಗ್ಗೆ ತಲೆಕೆಡೆಸಿಕೊಳ್ಳದೇ ಹಿಂದುಳಿದ ವರ್ಗಗಳ ನಾಯಕರುಗಳು ತಮ್ಮ ಇತಿಮಿತಿಯಲ್ಲಿ ಯೋಚಿಸಿ ಸುಮ್ಮನಿದ್ದರೆ ಇಲ್ಲಿ (ಬಿಜೆಪಿಯಲ್ಲಿ) ಅಧಿಕಾರ ಸಿಗುತ್ತದೆ. ಪ್ರತಿಷ್ಠೆಯ ಚುನಾವಣೆ ಇದಾಗಿರುವುದರಿಂದ ಪ್ರಚಾರದ ಸಂದರ್ಭದಲ್ಲಿ ಬಿಜೆಪಿ ವಿರುದ್ಧ ಮತ್ತೆ ಬಂಡಾಯವೆದ್ದು ಪಕ್ಷಾಂತರ ಮಾಡಿ, ಇರಿಸುಮುರಿಸು ಮಾಡಲು ಯೋಚಿಸುತ್ತಿರುವ ಮತ್ತೊಂದು ಹಂತದ ನಾಯಕರುಗಳಿಗೆ ಅಧಿಕಾರದ ಆಸೆಯನ್ನು ತೋರಿಸಿ, ಅವರನ್ನು ಪಕ್ಷದಲ್ಲೇ ಕಟ್ಟಿಹಾಕುವುದು ಇವರ ಎರಡನೆಯ ಉದ್ದೇಶವಾಗಿದೆ.

Related Posts