ಇದೇನು ಒಕ್ಕೂಟ ವ್ಯವಸ್ಥೆಯ ಪ್ರಜಾಪ್ರಭುತ್ವವೋ ಅಥವಾ ಸರ್ವಾಧಿಕಾರದ ದೇಶವೋ? ಜೆಡಿಎಸ್
“ಬಹುಶಃ ಕರ್ನಾಟಕ ಚುನಾವಣೆಯಲ್ಲಿ ಈ ಮಟ್ಟದಲ್ಲಿ ಪ್ರಧಾನಿ ಸಹಿತ ಕೇಂದ್ರ ಬಿಜೆಪಿ ಸರ್ಕಾರದ ಸಚಿವರು, ದೇಶದ ಹಲವು ಭಾಗದ ಬಿಜೆಪಿ ಮುಖಂಡರು ರಾಜ್ಯದಲ್ಲಿ ಬೀಡು ಬಿಟ್ಟಿರುವುದು ಇದೇ ಮೊದಲಬಾರಿ ಅನಿಸುತ್ತಿದೆ. ದೇಶದ ಗೃಹ ಸಚಿವ ಅಮಿತ್ ಶಾ ಅವರಂತೂ, ರಾಜ್ಯದ ಭವಿಷ್ಯ ಮೋದಿಯವರ ಕೈಗೆ ಕೊಡುವ ನಿರ್ಧಾರ ಮಾಡುವ ಚುನಾವಣೆ ಇದು ಎಂದಿದ್ದಾರೆ.
ಇದೇನು ಒಕ್ಕೂಟ ವ್ಯವಸ್ಥೆಯ ಪ್ರಜಾಪ್ರಭುತ್ವವೋ ಅಥವಾ ಸರ್ವಾಧಿಕಾರದ ದೇಶವೋ? ಗೃಹ ಸಚಿವರಿಗೆ ಗೊತ್ತಿಲ್ಲದಿರುವುದು ಕ್ರೂರ ವ್ಯಂಗ್ಯ. ರಾಜ್ಯದ ಜನತೆ ಮೋದಿಯವರ ಮುಖ ನೋಡಿ ಮತ ಹಾಕುವುದಾದರೆ, ಇಲ್ಲಿನ ಬಿಜೆಪಿ ಸರ್ಕಾರ ಮತ್ತದರ ಮುಖಂಡರೆಲ್ಲ ಏಕೆ? ಮತ ಹಾಕದಿದ್ದರೆ ರಾಜ್ಯ ಸಂಕಷ್ಟಕ್ಕೀಡಾಗಲಿದೆ ಎಂಬ ಹೆದರಿಸುವ ಒಳಾರ್ಥವೂ ಇದ್ದಂಗಿದೆ!
ಬಿಜೆಪಿ ಗೆಲ್ಲದಿದ್ದರೆ ಕೋಮು ಗಲಭೆಗಳಾಗಲಿದೆ ಎಂದು ಹೇಳಿರುವ ಅಮಿತ್ ಶಾ ಅವರೆ, ನಿಮ್ಮ ಹುದ್ದೆಯ ಘನತೆ ಗೌಣವಾಗಿಸಬೇಡಿ. ಕೋಮು ಹಿಂಸೆ ಆರಂಭಿಸುವ ಹುನ್ನಾರ ನಿಮ್ಮ ಮಾತಿನಲ್ಲಿ ಅಡಗಿರುವ ಹಾಗಿದೆ! ಇದು ತೀರ ಅಪಾಯಕಾರಿ. ಈಗಾಗಲೇ, ಕನ್ನಡಿಗರು ರಾಜ್ಯ ಬಿಜೆಪಿ ಸರ್ಕಾರವನ್ನು ಮನೆಗೆ ಕಳಿಸಲು ನಿರ್ಧರಿಸಿದ್ದಾರೆ. ನಿಮಗೆ ಸೋಲು ಕಟ್ಟಿಟ್ಟ ಬುತ್ತಿ” ಎಂದು ಗೃಹ ಸಚಿವ ಅಮಿತ್ ಶಾ ಅವರಿಗೆ ಜೆಡಿಎಸ್ ತಿರುಗೇಟು ನೀಡಿದೆ.