ಬಿಜೆಪಿ ಭ್ರಷ್ಟಾಚಾರ ಮಾತ್ರ ಮಾಡುತ್ತಿದೆ; ಮೋದಿ ತಮ್ಮ ಬಗ್ಗೆ ಮಾತ್ರ ಮಾತನಾಡುತ್ತಾರೆ!
ತುಮಕೂರು: “ಕಳೆದ 3 ವರ್ಷಗಳಿಂದ ಬಿಜೆಪಿ ಮಾಡುತ್ತಿರುವ ಏಕೈಕ ಕೆಲಸವೆಂದರೆ ಅದು ಭ್ರಷ್ಟಾಚಾರ ಮಾತ್ರ. ಇದರಿಂದಾಗಿ ಕರ್ನಾಟಕದ ಜನತೆ ಬಿಜೆಪಿ ಸರ್ಕಾರವನ್ನು 40 ಪರ್ಸೆಂಟ್ ಕಮಿಷನ್ ಸರ್ಕಾರ ಎಂದು ಕರೆಯುತ್ತಾರೆ” ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ .
ತುಮಕೂರುನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, “ಪ್ರಧಾನಿ ಮೋದಿ ಕರ್ನಾಟಕಕ್ಕೆ ಬರುತ್ತಾರೆ, ಬಂದು ತಮ್ಮ ಬಗ್ಗೆ ಮಾತ್ರವೇ ಮಾತನಾಡುತ್ತಾರೆ. ಕರ್ನಾಟಕ ಚುನಾವಣೆ ತನ್ನ ಬಗ್ಗೆ ಅಲ್ಲ ಎಂಬುದನ್ನು ನರೇಂದ್ರ ಮೋದಿ ಅರ್ಥಮಾಡಿಕೊಳ್ಳಬೇಕು ಎಂದು ಲೇವಡಿ ಮಾಡಿದರು. ತಮ್ಮ ಬಗ್ಗೆ ಮಾತನಾಡುವ ಬದಲು ಬಿಜೆಪಿ ಸರ್ಕಾರದ ಕಾರ್ಯಗಳು ಮತ್ತು ಕರ್ನಾಟಕದ ಭವಿಷ್ಯದ ಕಾರ್ಯಕ್ರಮಗಳ ಬಗ್ಗೆ ಮಾತನಾಡುವಂತೆ ಪ್ರಧಾನಿಯನ್ನು ಕೋರಿದ ಅವರು, ನೀವು ಕರ್ನಾಟಕದಲ್ಲಿ ಚುನಾವಣಾ ಪ್ರಚಾರಕ್ಕೆ ಬಂದಿದ್ದೀರಿ, ಆದರೆ ಕರ್ನಾಟಕದ ಬಗ್ಗೆ ಮಾತನಾಡದೇ ನೀವು ನಿಮ್ಮ ಬಗ್ಗೆ ಮಾತ್ರವೇ ಮಾತನಾಡುತ್ತೀರಿ.
ಮುಂದಿನ ಐದು ವರ್ಷಗಳಲ್ಲಿ ನೀವು ಏನು ಮಾಡುತ್ತೀರಿ, ಯುವಕರು, ಶಿಕ್ಷಣ, ಆರೋಗ್ಯ ಮತ್ತು ಭ್ರಷ್ಟಾಚಾರದ ವಿರುದ್ಧ ಹೋರಾಡಲು ಏನು ಮಾಡುತ್ತೀರಿ ಎಂಬುದರ ಕುರಿತು ನಿಮ್ಮ ಭಾಷಣಗಳಲ್ಲಿ ನೀವು ಮಾತನಾಡಬೇಕು. ಈ ಚುನಾವಣೆ ನಿಮ್ಮದಲ್ಲ, ಕರ್ನಾಟಕದ ಜನರು ಮತ್ತು ಭವಿಷ್ಯದ ಬಗ್ಗೆ ಆಗಿದೆ. ಕಳೆದ ಮೂರು ವರ್ಷಗಳಿಂದ ಬಿಜೆಪಿಯವರು ಭ್ರಷ್ಟಾಚಾರ ಮಾತ್ರ ಮಾಡುತ್ತಿದ್ದಾರೆ. ಇದರ ಫಲವಾಗಿ ಕರ್ನಾಟಕದ ಜನ ಬಿಜೆಪಿ ಸರ್ಕಾರವನ್ನು 40 ಪರ್ಸೆಂಟ್ ಕಮಿಷನ್ ಸರ್ಕಾರ ಎಂದು ಕರೆಯುತ್ತಾರೆ. ಅಂದರೆ ಬಿಜೆಪಿಯವರು ಸಾರ್ವಜನಿಕರಿಗೆ ಮಾಡುವ ಎಲ್ಲಾ ಕೆಲಸಗಳಿಗೆ ಜನರಿಂದ ಶೇಕಡಾ 40 ಪರ್ಸೆಂಟ್ ಕಮಿಷನ್ ಪಡೆಯುತ್ತಾರೆ ಎಂಬುದಕ್ಕಾಗಿ. ಇದು ಪ್ರಧಾನಿಗೂ ಗೊತ್ತಿದೆ. ಆದರೆ ಅವರು ಏಕೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ?
ಕಾಂಗ್ರೆಸ್ 91 ಬಾರಿ ನಿಮ್ಮನ್ನು ನಿಂದಿಸಿದೆ ಎಂದು ನೀವು ಹೇಳುತ್ತೀರಿ, ಆದರೆ ನೀವು ಕರ್ನಾಟಕಕ್ಕಾಗಿ ಏನು ಮಾಡಿದ್ದೀರಿ ಎಂಬುದರ ಬಗ್ಗೆ ಮಾತನಾಡುವುದಿಲ್ಲ. ಮುಂದಿನ ಭಾಷಣದಲ್ಲಿ ನೀವು ಏನು ಮಾಡಿದ್ದೀರಿ ಮತ್ತು ಮುಂದಿನ ಐದು ವರ್ಷಗಳಲ್ಲಿ ನೀವು ಏನು ಮಾಡುತ್ತೀರಿ ಎಂಬುದರ ಕುರಿತು ಮಾತನಾಡಿ” ಎಂದು ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿಯ ವಿರುದ್ಧ ಕಿಡಿ ಕಾರಿದರು.