ಬಡವರಿಗೆ ಪ್ರತಿ ತಿಂಗಳು ತಲಾ 10 ಕೆಜಿ ಅಕ್ಕಿ ನೀಡುವ ಅನ್ನಭಾಗ್ಯ ಯೋಜನೆಯನ್ನು ತಡೆಯಲು ಕೇಂದ್ರ ಬಿಜೆಪಿ ಸರ್ಕಾರ ಸಂಚು! » Dynamic Leader
October 31, 2024
ರಾಜಕೀಯ ರಾಜ್ಯ

ಬಡವರಿಗೆ ಪ್ರತಿ ತಿಂಗಳು ತಲಾ 10 ಕೆಜಿ ಅಕ್ಕಿ ನೀಡುವ ಅನ್ನಭಾಗ್ಯ ಯೋಜನೆಯನ್ನು ತಡೆಯಲು ಕೇಂದ್ರ ಬಿಜೆಪಿ ಸರ್ಕಾರ ಸಂಚು!

ಬೆಂಗಳುರು: ಅಕ್ಕಿ ನೀಡುವ ವಿಚಾರದಲ್ಲಿ ಕೇಂದ್ರ ಸರ್ಕಾರ ರಾಜಕೀಯ ನಿರ್ಧಾರ ಕೈಗೊಂಡು ಕನ್ನಡಿಗರ ಪಾಲನ್ನು, ಬಡವರ ಪಾಲನ್ನು ಕಸಿದುಕೊಂಡಿದೆ. ಕೇಂದ್ರ ಸರ್ಕಾರ ಕನ್ನಡಿಗರ, ಬಡವರ ವಿರೋಧಿ ಎನ್ನುವುದರಲ್ಲಿ ಯಾವುದೇ ಸಂಶಯ ಉಳಿದಿಲ್ಲ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

“ರಾಜ್ಯ ಸರ್ಕಾರ ಈಗಾಗಲೇ ಒಂದು ಗ್ಯಾರಂಟಿಯನ್ನು ಜಾರಿಮಾಡಿದ್ದು, ಜುಲೈ 1 ರಂದು ಅಂತ್ಯೋದಯ ಹಾಗೂ ಬಿಪಿಎಲ್‌ ಕಾರ್ಡುದಾರರಿಗೆ ಪ್ರತಿ ತಿಂಗಳು ತಲಾ 10 ಕೆಜಿ ಅಕ್ಕಿ ನೀಡಲು ತೀರ್ಮಾನಿಸಲಾಗಿದ್ದ ಹಿನ್ನೆಲೆಯಲ್ಲಿ ಭಾರತೀಯ ಆಹಾರ ಮಂಡಳಿ ಉಪ ಪ್ರಧಾನ ವ್ಯವಸ್ಥಾಪಕರಿಗೆ 2.28 ಲಕ್ಷ ಮೆಟ್ರಿಕ್ ಟನ್ ಅಗತ್ಯವಿದೆ ಎಂದು ಕೋರಿ ಜೂನ್‌ 9 ರಂದು ಪತ್ರ ಬರೆಯಲಾಗಿತ್ತು. ಇದಕ್ಕೆ ಜೂನ್‌ 12 ರಂದು ಭಾರತೀಯ ಆಹಾರ ನಿಗಮವು ಒಪ್ಪಿಗೆ ಸೂಚಿಸಿ ಕ್ವಿಂಟಾಲ್‌ಗೆ 3400 ರೂ. ದರದಲ್ಲಿ ಅಕ್ಕಿ ಪೂರೈಕೆ ಮಾಡವುದಾಗಿ ಪತ್ರ ಬರೆದಿತ್ತು. ಇದಾದ ನಂತರ ಕೇಂದ್ರ ಸರ್ಕಾರ ರಾಜಕೀಯ ನಿರ್ಧಾರ ತೆಗೆದುಕೊಂಡಿದೆ” ಎಂದು ಸರಣಿ ಟ್ವೀಟ್ ಮಾಡುವ ಮೂಲಕ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.

“ಜೂನ್ 13 ರಂದು ಭಾರತ ಸರ್ಕಾರದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವಾಲಯವು ಭಾರತೀಯ ಆಹಾರ ನಿಗಮಕ್ಕೆ ಪತ್ರ ಬರೆದು, 15 ಲಕ್ಷ ಮೆಟ್ರಿಕ್ ಟನ್ ಗೋಧಿ ಹಾಗೂ ಅಕ್ಕಿಯನ್ನು ತೆರೆದ ಮಾರುಕಟ್ಟೆಯಲ್ಲಿ ಮಾರಾಟ ಯೋಜನೆಯಡಿ (OMSSD) ಮಾರಾಟ ಮಾಡಲು ಸೂಚಿಸಿದೆ. ಅಲ್ಲದೆ ಈಶಾನ್ಯ ರಾಜ್ಯಗಳನ್ನು ಹೊರತು ಪಡಿಸಿ, ಇತರ ರಾಜ್ಯಗಳಿಗೆ ಮಾರಾಟ ಮಾಡುವುದನ್ನು ಸ್ಥಗಿತಗೊಳಿಸುವಂತೆ ಸೂಚಿಸಲಾಗಿದೆ.

FCI ಒಪ್ಪಿಗೆ ಪತ್ರದ ಆಧಾರದ ಮೇಲೆ ಜುಲೈ 1 ರಿಂದ ತಲಾ 10ಕೆ.ಜಿ ಉಚಿತ ಅಕ್ಕಿ ನೀಡುವ ಅನ್ನಭಾಗ್ಯ ಯೋಜನೆ ಜಾರಿ ಮಾಡಲಾಗುವುದು ಎಂದು ಘೋಷಿಸಿದೆವು. ಎಫ್‌ಸಿಐನ ಪ್ರಧಾನ ವ್ಯವಸ್ಥಾಪಕ ಹರೀಶ್ ಎಂಬುವವರು 7 ಲಕ್ಷ ಟನ್ ಅಕ್ಕಿ ಸಂಗ್ರಹ ಇದೆ ಎಂದು ತಿಳಿಸಿದ್ದಾರೆ. ಅನ್ನಭಾಗ್ಯ ಕಾರ್ಯಕ್ರಮವನ್ನು ಜಾರಿಗೊಳಿಸದೇ ಇರುವಂತೆ ಅಡ್ಡಿಪಡಿಸುವುದು ಇದರ ಹಿಂದಿನ ಉದ್ದೇಶವಾಗಿದೆ.

ಅಕ್ಕಿ ಬೆಳೆಯುವ ರಾಜ್ಯಗಳಾದ ಪಂಜಾಬ್, ತೆಲಂಗಾಣ, ಆಂಧ್ರ, ಛತ್ತಿಸ್‍ಗಡ್, ಹರಿಯಾಣದವರಿಗೆ ಈಗಾಗಲೇ ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ ಮಾತನಾಡಿದ್ದಾರೆ. ಪಂಜಾಬ್ ರಾಜ್ಯದಲ್ಲಿ ಅಕ್ಕಿ ಸಂಗ್ರಹವಿಲ್ಲದಿರುವುದರಿಂದ ಅಕ್ಕಿ ಪೂರೈಸಲು ಆಗುವುದಿಲ್ಲ ಎಂದಿದ್ದಾರೆ. ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಅವರು ತೆಲಂಗಾಣ ಮುಖ್ಯಮಂತ್ರಿಗಳನ್ನು ಭೇಟಿಯಾಗಲಿದ್ದಾರೆ. ಅಂತೆಯೇ ಛತ್ತೀಸ್‌ಗಢ ರಾಜ್ಯದಿಂದಲೂ ಲಭ್ಯವಿರುವ ಅಕ್ಕಿಯ ಮಾಹಿತಿ ಲಭಿಸಲಿದೆ. ಇಂದು ಸಂಜೆಯೊಳಗೆ ಒಂದು ಸ್ಪಷ್ಟ ಚಿತ್ರಣ ದೊರೆಯಲಿದೆ.

ಅಕ್ಕಿ ಇಟ್ಟುಕೊಂಡು ಕೊಡಲಾಗುವುದಿಲ್ಲ ಎಂದರೆ ಇವರನ್ನು ಬಡವರ ವಿರೋಧಿಗಳು ಎಂದು ಕರೆಯದೆ ಬೇರೇನು ಹೇಳಬೇಕು. ಕೇಂದ್ರ ಸರ್ಕಾರ ಉಚಿತವಾಗಿಯೇನೂ ಅಕ್ಕಿ ನೀಡುವುದಿಲ್ಲ. ನಾವು ಹಣ ನೀಡಿಯೇ ಪಡೆಯುವುದು. ಇತರರಿಗೆ ಕೊಡುವ ರೀತಿಯಲ್ಲಿ ನಮಗೂ ಕೊಡುತ್ತಿದ್ದರು. ಆದರೆ ಈಗ ಕರ್ನಾಟಕ ರಾಜ್ಯಕ್ಕೆ ನೀಡುವುದಿಲ್ಲ ಎನ್ನುವ ತೀರ್ಮಾನಕ್ಕೆ ಅವರು ಬಂದಿದ್ದಾರೆ. ಈಗಲೂ ನಾವು ಪ್ರಯತ್ನ ಮಾಡುತ್ತಿದ್ದೇವೆ. ಪುನಃ ಮನವಿ ಮಾಡುವುದು ಇದ್ದೇ ಇರುತ್ತದೆ. ಆದರೆ, ಈ ರೀತಿ ಮಾಡಿರುವುದರಿಂದ ಇದೊಂದು ಷಡ್ಯಂತ್ರ ಎಂದೇ ಪರಿಗಣಿಸಬೇಕಾಗುತ್ತದೆ” ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ.

Related Posts