ಅಕ್ಕಿಯ ವಿಚಾರದಲ್ಲಿ ಸರ್ಕಾರದ ನಡೆ ಶ್ಲಾಘನೀಯ: ಬಿಜೆಪಿಗೆ ಮುಖಭಂಗ!
ಡಿ.ಸಿ.ಪ್ರಕಾಶ್ ಸಂಪಾದಕರು
ಕರ್ನಾಟಕದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ, ಬಡತನ ರೇಖೆಗಿಂತ ಕೆಳಗಿರುವ ಪ್ರತಿ ವ್ಯಕ್ತಿಗೆ, ತಲಾ 10 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡುವುದಾಗಿ, ಚುನಾವಣೆ ಸಂದರ್ಭದಲ್ಲಿ ಘೋಷಣೆ ಮಾಡಿತ್ತು. ಪ್ರತಿಷ್ಠಿತ ಅನ್ನಭಾಗ್ಯ ಯೋಜನೆಯನ್ನು ಜುಲೈ 1 ರಿಂದ ಜಾರಿಗೆ ತರಲು ಯೋಜನೆ ಹಾಕಿಕೊಂಡು, ಕೇಂದ್ರ ಸರ್ಕಾರದ ಬಳಿ ಹೆಚ್ಚುವರಿಯಾಗಿ 2.28 ಲಕ್ಷ ಮೆಟ್ರಿಕ್ ಟನ್ ಅಕ್ಕಿಯನ್ನು ಹಣಕೊಟ್ಟು ಖರೀದಿ ಮಾಡಲು ಬೇಡಿಕೆ ಇಟ್ಟಿತ್ತು. ಆದರೆ, ಕೇಂದ್ರ ಸರ್ಕಾರ ಈ ಬೇಡಿಕೆಯನ್ನು ಒಪ್ಪಿಕೊಳ್ಳದೇ ರಾಜ್ಯಗಳಿಗೆ ಅಕ್ಕಿ ಮಾರಾಟವನ್ನು ಏಕಾಏಕಿ ನಿಲ್ಲಿಸಿತು.
ಕೆಲವು ದಿನಗಳ ಹಿಂದೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿದ್ದ ಸಂದರ್ಭದಲ್ಲೂ ಇದರ ಬಗ್ಗೆ ಪ್ರಸ್ತಾಪ ಮಾಡಿದ್ದರು. ಅಮಿತ್ ಶಾ ಅವರು ಸಂಬಂಧಪಟ್ಟ ಸಚಿವರೊಂದಿಗೆ ಮಾತನಾಡುವುದಾಗಿ ಹೇಳಿದ್ದರು ಎಂದು ಪತ್ರಿಕೆಗಳಲ್ಲಿ ವರದಿಯಾಗಿತ್ತು. ಆದರೆ, ರಾಜ್ಯ ಸರ್ಕಾರದ ಬೇಡಿಕೆಗಳಿಗೆ ಕೇಂದ್ರವು ಸೊಪ್ಪುಹಾಕಲಿಲ್ಲ. ಅದೇ ಸಂದರ್ಭದಲ್ಲಿ ರಾಜ್ಯ ಸರ್ಕಾರವು ಬೇರೆ ಮೂಲಗಳಿಂದಲೂ ಅಕ್ಕಿ ಖರೀದಿಗೆ ಪ್ರಯತ್ನ ಮಾಡುತಿತ್ತು.
ಆಂಧ್ರಪ್ರದೇಶ, ತೆಲಂಗಾಣ, ಪಂಜಾಬ್ ಮುಂತಾದ ರಾಜ್ಯಗಳೂ ತಮ್ಮ ಬಳಿ ಅಷ್ಟೊಂದು ಅಕ್ಕಿ ಸಂಗ್ರವಿಲ್ಲ ಎಂದು ಹೇಳಿ ಕೈ ತೊಳೆದುಕೊಂಡಿತು. ರಾಜಕೀಯವಾಗಿ ಸೇಡು ತೀರಿಸಿಕೊಂಡ ಬಿಜೆಪಿ, ಅಕ್ಕಿ ಕೊಡುವ ವಿಚಾರವನ್ನು ಮುಂದಿಟ್ಟು, ಕಾಂಗ್ರೆಸ್ ಸರಕಾರವನ್ನು ಜನರ ಮುಂದೆ ಬೆತ್ತಲೆಗೊಳೀಸುವ ಪ್ರಯತ್ನವನ್ನು ಮಾಡಿತು. ಕೆಳದ ಚುನಾವಣೆಯಲ್ಲಿ ಬಿಜೆಪಿಗೆ ಮತ ಚಲಾಯಿಸಿದ 90% ಮತದಾರರು, ರಾಜ್ಯ ಸರ್ಕಾರದ ಪ್ರತಿಷ್ಠಿತ ಅನ್ನಭಾಗ್ಯ ಯೋಜನೆಯ ಫಲಾನುಭವಿಳು ಎಂಬುದನ್ನು ಬಿಜೆಪಿ ಈ ಸಂದರ್ಭದಲ್ಲಿ ಮರೆಯಬಾರದು.
“10 ಕೆಜಿ ಅಕ್ಕಿಯನ್ನು ಕೊಡಲಾಗದ ಸರ್ಕಾರ”, “ಕೇಂದ್ರ ಕೊಡುವ ಅಕ್ಕಿಗೆ ಸಿದ್ದರಾಮಯ್ಯ ಫೋಟೋ ಅಳವಡಿಸಿಕೊಳ್ಳೂವ ಪ್ರಯತ್ನ”, “ಅಕ್ಕಿ ಕೊಡುವ ಘೋಷಣೆಗೆ ಮುಂಚೆ ಕೇಂದ್ರದ ಅನುಮತಿಯನ್ನು ಪಡೆಯಲಾಗಿತ್ತೆ”, ಮೋದಿ ಕೊಡುವ 5 ಕೆಜಿ ಅಕ್ಕಿಯೊಂದಿಗೆ ಸರ್ಕಾರ ಕೊಡುವ 10 ಕೆಜಿ ಅಕ್ಕಿಯನ್ನೂ ಸೇರಿಸಿ 15 ಕೆಜಿ ಅಕ್ಕಿ ಕೊಡಿ” ಎಂಬಿತ್ಯಾದಿ ತಲೆಹರಟೆ ರಾಜಕೀಯವನ್ನು, ಕಳೆದ ಒಂದು ತಿಂಗಳಿನಿಂದ ಬಿಜೆಪಿಯ ಕೆಲವು ನಾಯಕರು ಮಾಡುತ್ತಿರುವುದು ನಾಚಿಕೆಗೇಡು.
ಕೇಂದ್ರ ಸರ್ಕಾರದ ಗೋದಾಮುಗಳಲ್ಲಿ ಹೆಚ್ಚುವರಿಯಾಗಿ ಸಂಗ್ರಹ ಮಾಡಿಟ್ಟಿರುವ ಅಕ್ಕಿಯನ್ನು ಕೊಡದೇ ತಡೆಮಾಡಿ, ಜನರಿಗೆ ಅಕ್ಕಿ ಕೊಡುವಂತೆ ಸರ್ಕಾರವನ್ನು ಪೀಡಿಸುತ್ತಿರುವ ರಾಜ್ಯ ಬಿಜೆಪಿ ಮತ್ತು ಕೇಂದ್ರ ಸರ್ಕಾರದ ಇಬ್ಬಗೆಯ ನೀತಿಯನ್ನು ರಾಜ್ಯದ ಜನರು ಗಮನಿಸುತ್ತಿದ್ದಾರೆ ಎಂಬುದನ್ನು, ಬಿಜೆಪಿ ಏಕೆ ಗಮನಿಸುತ್ತಿಲ್ಲ ಎಂಬುದು ಅರ್ಥವಾಗುತ್ತಿಲ್ಲ. ಜನರ ಮೂಲಭೂತ ಸೌಲಭ್ಯಗಳ ಮೇಲೆ ಬಿಜೆಪಿ ಚೆಲ್ಲಾಟ ಆಡುತ್ತಿರುವುದನ್ನು ನಿಲ್ಲಿಸದಿದ್ದರೆ, ಹಿಂದಿನ ಫಲಿತಾಂಷವೇ ಮುಂದಿನ ಚುನಾವಣೆಯಲ್ಲೂ ಮರುಕಳಿಸುತ್ತದೆ ಎಂಬುದನ್ನು ಬಿಜೆಪಿಗರು ಅರ್ಥ ಮಾಡಿಕೊಳ್ಳಬೇಕು.
ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ-2013ರ ಅಡಿಯಲ್ಲಿ ಆರ್ಥಿಕವಾಗಿ ಹಿಂದುಳಿದ ನಗರ ಮತ್ತು ಗ್ರಾಮೀಣ ಪ್ರದೇಶದ ಅರ್ಹ ಬಡಜರಿಗೆ 5 ಕೆಜಿ ಅಕ್ಕಿಯನ್ನು ಕೊಡುವ ಕಾಯ್ದೆಯನ್ನು ತಂದಿದ್ದು, ಅಂದಿನ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ನೇತೃತ್ವದ ಕಾಂಗ್ರೆಸ್ (ಯುಪಿಎ) ಸರ್ಕಾರ. ಅದನ್ನು ಮರೆಮಾಚುತ್ತಿರುವ ಬಿಜೆಪಿ ನಾಯಕರು, “ಮೋದಿ 5 ಕೆಜಿ ಅಕ್ಕಿ ಕೊಡುತ್ತಿದ್ದಾರೆ; ಮೋದಿ ಅಕ್ಕಿ- ಮೋದಿ ಅಕ್ಕಿ” ಎಂದು ಹೇಳಿಕೊಂಡು ಓಡಾಡುವುದು ಅಮಾಯಕರನ್ನು ನಂಬಿಸಿ, ವಂಚಿಸುವ ಕೃತ್ಯವಲ್ಲದೇ ಮತ್ತೇನು ಇಲ್ಲ.
ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯ್ ಅವರು, “170 ರೂಪಾಯಿಗೆ ಎರಡು ಕೆಜಿ ಅಕ್ಕಿಯೂ ಬರಲ್ಲ” ಎಂದಿದ್ದಾರೆ. ಇವರ ಕಾಲದಲ್ಲಿ ಬಡವರಿಗೆ ಪಡಿತರದಲ್ಲಿ ಜೀರಾ, ಕೇಸರ್ ಕಲಿ, ಬುಲೆಟ್ ರೈಸ್ ಮುಂತಾದ ಸ್ಥಿತಿವಂತರು ತಿನ್ನುವ ಅಕ್ಕಿ ನೀಡಲಾಗುತಿತ್ತೇ ಎಂಬುದನ್ನು ಅವರು ಈ ರಾಜ್ಯದ ಜನತೆಗೆ ಹೇಳಬೇಕು. 10 ಕೆಜಿ, 15 ಕೆಜಿ ಅಕ್ಕಿಗೂ ಪರದಾಡುವಂತ ಬಡಜನರು ಇನ್ನೂ ಈ ದೇಶದಲ್ಲಿ ಇದ್ದಾರೆ ಎಂಬುದಕ್ಕೆ ನೀವುಗಳೇ ಸಾಕ್ಷಿ. ಭಾರತ ಇನ್ನು ಆರ್ಥಿಕ ಪ್ರಗತಿಯನ್ನು ಹೊಂದಿಲ್ಲ; ಇನ್ನು ಬಡತನದಲ್ಲಿಯೇ ಇದೆ ಎಂಬುದನ್ನು ಮೋದಿ ಅವರ 9 ವರ್ಷಗಳ ಆಡಳಿತ ಈ ಜಗತ್ತಿಗೆ ತೋರಿಸಿಕೊಟ್ಟಿದೆ.
ಈ ಹಿನ್ನಲೆಯಲ್ಲಿ, ಕರ್ನಾಟಕ ಸರ್ಕಾರವು ತನ್ನ ಚುನಾವಣಾ ಗ್ಯಾರಂಟಿಯನ್ನು ಪೂರೈಸಲು ಅಗತ್ಯವಾದ ದೊಡ್ಡ ಪ್ರಮಾಣದ ಅಕ್ಕಿಯನ್ನು ಸಂಗ್ರಹಿಸಲು ತೊಂದರೆ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಫಲಾನುಭವಿಗಳಿಗೆ ಹೆಚ್ಚುವರಿ 5 ಕೆಜಿ ಅಕ್ಕಿ ಬದಲಿಗೆ ಪ್ರತಿ ಕೆಜಿಗೆ 34 ರೂ.ನಂತೆ ಹಣ ಪಾವತಿಸಲು ನಿರ್ಧರಿಸಿದೆ. ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಕೇಂದ್ರವು ಉಚಿತವಾಗಿ ನೀಡುವ ಐದು ಕೆಜಿ ಅಕ್ಕಿ ಜೊತೆಗೆ ತಿಂಗಳಿಗೆ ಹೆಚ್ಚುವರಿಯಾಗಿ ಐದು ಕೆಜಿ ಅಕ್ಕಿ ನೀಡುವುದಾಗಿ ಭರವಸೆ ನೀಡಿತ್ತು. ಆದರೆ ಅಕ್ಕಿ ಸಂಗ್ರಹಿಸಲು ಸಾಧ್ಯವಾಗದ ಕಾರಣ ಜುಲೈನಿಂದಲೇ ಹಣ ಪಾವತಿ ಮಾಡುವುದಾಗಿ ರಾಜ್ಯ ಸರ್ಕಾರ ತಿಳಿಸಿದೆ.
ಭಾರತೀಯ ಆಹಾರ ನಿಗಮ ಪ್ರತಿ ಕೆಜಿ ಅಕ್ಕಿಗೆ 34 ರೂಪಾಯಿಗಳ ಪ್ರಮಾಣಿತ ದರವನ್ನು ನಿಗದಿಪಡಿಸಿರುವುದರಿಂದ ಪ್ರತಿಯೊಬ್ಬ ಫಲಾನುಭವಿಗೆ 34 ರೂಗಳನ್ನು ನೀಡಲು ಸಂಪುಟ ಸಭೆ ತೀರ್ಮಾನಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಮಾತನಾಡಿದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್. ಮುನಿಯಪ್ಪ, “ನಾವು ಅಕ್ಕಿ ಖರೀದಿಸಲು ಎಲ್ಲಾ ಪ್ರಯತ್ನ ಮಾಡಿದೆವು. ಆದರೆ ನಮಗೆ ಅಗತ್ಯವಿರುವಷ್ಟು ಅಕ್ಕಿಯನ್ನು ಪೂರೈಸಲು ಯಾವುದೇ ಸಂಸ್ಥೆ ಮುಂದೆ ಬಂದಿಲ್ಲ. ಹೀಗಾಗಿ ಅಕ್ಕಿ ಖರೀದಿ ತಡವಾಗುತ್ತಿದೆ. ಹೀಗಾಗಿ ಅಕ್ಕಿ ಬದಲಿಗೆ ಹಣ ನೀಡಲು ಸಂಪುಟ ಸಭೆ ತೀರ್ಮಾನಿಸಿದೆ.
ಒಂದು ಕಾರ್ಡ್‌ನಲ್ಲಿ ಒಬ್ಬ ವ್ಯಕ್ತಿ ಇದ್ದರೆ, ಆ ವ್ಯಕ್ತಿಗೆ ಅನ್ನ ಭಾಗ್ಯ ಯೋಜನೆಯಡಿ ಐದು ಕೆಜಿ ಹೆಚ್ಚುವರಿ ಅಕ್ಕಿಗೆ ತಿಂಗಳಿಗೆ 170 ರೂ. ಸಿಗುತ್ತದೆ ಎಂದು ಸಚಿವರು ವಿವರಿಸಿದರು. ಪಡಿತರ ಚೀಟಿಯಲ್ಲಿ ಇಬ್ಬರಿದ್ದರೆ ಅವರು 340 ರೂ.ಗೆ ಅರ್ಹರಾಗಿರುತ್ತಾರೆ. ಐವರು ಸದಸ್ಯರಿದ್ದರೆ ಅವರಿಗೆ ತಿಂಗಳಿಗೆ 850 ರೂಪಾಯಿಯನ್ನು ನೀಡಲಾಗುತ್ತದೆ. ಫಲಾನುಭವಿಗಳ ಖಾತೆಗೆ ನೇರವಾಗಿ ಹಣ ಜಮಾ ಮಾಡಲು ಸರ್ಕಾರ ವ್ಯವಸ್ಥೆ ಮಾಡಿದೆ. ಇದು ಜುಲೈ 1ರಿಂದಲೇ ಜಾರಿಗೆ ಬರಲಿದೆ” ಎಂದು ಕೆ.ಎಚ್.ಮುನಿಯಪ್ಪ ತಿಳಿಸಿದ್ದಾರೆ.
ಅಕ್ಕಿ ಸಿಕ್ಕ ನಂತರ ಅನ್ನಭಾಗ್ಯ ಯೋಜನೆಯಡಿ 10 ಕೆಜಿ ಅಕ್ಕಿಯನ್ನೇ ನೀಡುತ್ತೇವೆ ಎಂದು ಮುನಿಯಪ್ಪ ತಿಳಿಸಿದ್ದಾರೆ. ಉಚಿತ ಅಕ್ಕಿ ನೀಡುವ ಯೋಜನೆ ಜಾರಿಗಾಗಿ ಅಕ್ಕಿ ಖರೀದಿಸಲು, ಕರ್ನಾಟಕ ಸರ್ಕಾರ ಕೇಂದ್ರ ಆಹಾರ ನಿಗಮದ ಮೊರೆ ಹೋಗಿತ್ತು. ಆದರೆ, ಅಲ್ಲಿಂದ ಹೆಚ್ಚುವರಿ ಅಕ್ಕಿ ಪೂರೈಕೆಗೆ ಒಪ್ಪಿಗೆ ಸಿಕ್ಕಿರಲಿಲ್ಲ. ನಂತರ ಸಚಿವ ಮುನಿಯಪ್ಪ ಅವರು ಕೇಂದ್ರ ಸಚಿವ ಪೀಯೂಷ್ ಗೋಯಲ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಆದರೂ ಹೆಚ್ಚುವರಿ ಅಕ್ಕಿ ಕೊಡಲು ಕೇಂದ್ರ ಸರ್ಕಾರ ನಿರಾಕರಿಸಿತ್ತು.
ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತರಲು ರಾಜ್ಯಕ್ಕೆ ಹೆಚ್ಚುವರಿಯಾಗಿ ಬೇಕಾಗಿರುವ ಅಕ್ಕಿಯನ್ನು ಖರೀದಿಸಲು ಕಾಲವಿಳಂಬ ಆಗುತ್ತಿದ್ದರೂ ಅದಕ್ಕೆ ಬದಲಾಗಿ ಫಲಾನುಭವಿಗಳಿಗೆ ಹಣ ಕೊಡುವ ಮೂಲಕ ಯೋಜನೆಯನ್ನು ಜುಲೈ 1 ರಿಂದಲೇ ಜಾರಿಗೊಳಿಸಬೇಕು ಎಂಬ ರಾಜ್ಯ ಸರ್ಕಾರದ ನಿರ್ಧಾರ ಶ್ಲಾಘನೀಯವಾದದ್ದು. ಏನೇ ಇರಲಿ, ರಾಜಕೀಯವಾಗಿ ಇದು ಬಿಜೆಪಿಗೆ ಮತ್ತೊಂದು ಮುಖಭಂಗವೇ.