‘ನಿಮ್ಮೆಲ್ಲರ ಆರ್ಶೀರ್ವಾದ’ ಸಿನಿಮಾದ ಹೊಸ ಪೋಸ್ಟರ್ ರಿಲೀಸ್; ಶೀಘ್ರದಲ್ಲಿಯೇ ಚಿತ್ರ ತೆರೆಗೆ!
ವರದಿ: ಅರುಣ್ ಜಿ.,
ವರುಣ್ ಸಿನಿ ಕ್ರಿಯೇಷನ್ಸ್ ಚೊಚ್ಚಲ ಹೆಜ್ಜೆ ‘ನಿಮ್ಮೆಲ್ಲರ ಆರ್ಶೀರ್ವಾದ’ ಸಿನಿಮಾ ಪೋಸ್ಟ್ ಪ್ರೊಡಕ್ಷನ್ಸ್ ಕೆಲಸ ಮುಗಿಸಿ ಬಿಡುಗಡೆಗೆ ಹಂತಕ್ಕೆ ಬಂದಿದೆ. ಯುವ ಸಿನಿ ಸಿನಿಮೋತ್ಸಾಹಿಗಳೇ ಸೇರಿಕೊಂಡು ತಯಾರಿಸಿರುವ ಈ ಚಿತ್ರಕ್ಕೆ ವರುಣ್ ಹೆಗ್ಡೆ ಹಣ ಹಾಕಿದ್ದು, ಇದು ಇವರ ಮೊದಲ ಪ್ರಯತ್ನವಾಗಿದೆ. ಚಿತ್ರರಂಗದ ಮೇಲಿನ ಅಪಾರ ಅಭಿಮಾನ ಹಾಗೂ ಆಸಕ್ತಿಯಿಂದಾಗಿ ವರುಣ್ ಹೆಗ್ಡೆ ಸಿನಿಮಾ ನಿರ್ಮಾಣಕ್ಕಿಳಿದಿದ್ದಾರೆ. ಈ ಚಿತ್ರದ ಹೊಸ ಪೋಸ್ಟರ್ ರಿಲೀಸ್ ಆಗಿದ್ದು ನೋಡುಗರ ಗಮನಸೆಳೆಯುತ್ತಿದೆ.
ಕೌಟುಂಬಿಕ ಕಥಾಹಂದರದ ‘ನಿಮ್ಮೆಲ್ಲರ ಆಶೀರ್ವಾದ’ ಸಿನಿಮಾದಲ್ಲಿ ಪೊಲೀಸ್ ಅಧಿಕಾರಿಯೊಬ್ಬರ ವೃತ್ತಿ ಬದುಕು ಮತ್ತು ವೈಯಕ್ತಿಕ ಬದುಕಿನ ದಿನಚರಿಯನ್ನು ವಿಭಿನ್ನವಾಗಿ ಕಟ್ಟಿಕೊಡಲಾಗಿದೆ. ಈ ಚಿತ್ರದ ಮೂಲಕ ಪ್ರತೀಕ್ ಶೆಟ್ಟಿ ನಾಯಕನಾಗಿ ಸ್ಯಾಂಡಲ್ ವುಡ್ ಗೆ ಪದಾರ್ಪಣೆ ಮಾಡಿದ್ದು, ಭಿನ್ನ ಸಿನಿಮಾ ಖ್ಯಾತಿಯ ಪಾಯಲ್ ರಾಧಾಕೃಷ್ಣ ನಾಯಕಿಯಾಗಿ ನಟಿಸಿದ್ದಾರೆ. ಎಂ.ಎನ್.ಲಕ್ಷ್ಮೀದೇವಿ, ಅರವಿಂದ ಬೋಳಾರ್, ಗೋವಿಂದೇಗೌಡ, ಸ್ವಾತಿ ಗುರುದತ್, ದಿನೇಶ್ ಮಂಗಳೂರು ಸೇರಿದಂತೆ ಹಿರಿಯ ಹಾಗೂ ಅನುಭವಿ ಕಲಾದಂಡು ಚಿತ್ರದಲ್ಲಿದೆ.
‘ನಿಮ್ಮೆಲ್ಲರ ಆಶೀರ್ವಾದ’ ಸಿನಿಮಾಗೆ ಯುವ ನಿರ್ದೇಶಕ ರವಿಕಿರಣ್ ಆಕ್ಷನ್ ಕಟ್ ಹೇಳಿದ್ದು, ಸರವಣನ್ ಜಿ.ಎನ್. ಛಾಯಾಗ್ರಹಣ, ರಘು ನಿಡುವಳ್ಳಿ ಡೈಲಾಗ್, ರೂಪೇಂದ್ರ ಆಚಾರ್ ಕಲಾ ನಿರ್ದೇಶನ, ಸುನಾದ್ ಗೌತಮ್ ಸಂಗೀತ ಮತ್ತು ವಿವೇಕ್ ಚಕ್ರವರ್ತಿ ಹಿನ್ನೆಲೆ ಸಂಗೀತ, ಸುರೇಶ್ ಆರುಮುಗಂ ಸಂಕಲನ ಸಿನಿಮಾದ ಶ್ರೀಮಂತಿಕೆ ಹೆಚ್ಚಿಸಿದೆ.
ಕರಾವಳಿಯ ವಿವಿಧ ಭಾಗಗಳಲ್ಲಿ ಸಿನಿಮಾವನ್ನು ಚಿತ್ರೀಕರಿಸಲಾಗಿದೆ. ಈಗಾಗಲೇ ಒಂದಷ್ಟು ಪೋಸ್ಟರ್ ಮೂಲಕ ನಿರೀಕ್ಷೆ ಹೆಚ್ಚಿಸಿರುವ ‘ನಿಮ್ಮೆಲ್ಲರ ಆಶೀರ್ವಾದ’ ಚಿತ್ರ ಇದೇ ತಿಂಗಳು ರಾಜ್ಯಾದ್ಯಂತ ತೆರೆಗಪ್ಪಳಿಸಲಿದೆ. ಅದಕ್ಕೂ ಮುನ್ನ ಚಿತ್ರತಂಡ ಇದೇ ವಾರ ಆಡಿಯೋ ಬಿಡುಗಡೆಗೆ ತಯಾರಿ ನಡೆಸಿದೆ.