ಸರ್ಕಾರದ ಗ್ಯಾರಂಟಿ ಯೋಜನೆಗಳ ಜನಪ್ರಿಯತೆ ಬಿಜೆಪಿ ನಾಯಕರ ನಿದ್ದೆ ಹಾಗೂ ನೆಮ್ಮದಿ ಕೆಡಿಸಿದೆ! ದಿನೇಶ್ ಗುಂಡೂರಾವ್
ಬೆಂಗಳೂರು: ಬಿಜೆಪಿ ಪಕ್ಷದವರು ಅಧಿವೇಶನದಲ್ಲಿ ನಮ್ಮ ಗ್ಯಾರಂಟಿ ಯೋಜನೆಗಳ ಬಗ್ಗೆ ಅನಗತ್ಯವಾಗಿ ಗದ್ದಲ ಎಬ್ಬಿಸುತ್ತಿದ್ದಾರೆ. ಈಗಾಗಲೇ ನಮ್ಮ ಸರ್ಕಾರ, ನಾವು ಕೊಟ್ಟ 5 ಗ್ಯಾರಂಟಿಗಳ ಪೈಕಿ 3 ಗ್ಯಾರಂಟಿ ಅನುಷ್ಠಾನಕ್ಕೆ ತಂದಿದೆ. ಗೃಹಲಕ್ಷ್ಮಿ ಯೋಜನೆ ಆಗಸ್ಟ್ 15 ರಿಂದ ಚಾಲನೆಯಾಗಲಿದೆ. ಯುವನಿಧಿ ಯೋಜನೆಗೂ ಚಾಲನೆ ದೊರೆಯಲಿದೆ. ಹೀಗಿರುವಾಗ ಬಿಜೆಪಿಯವರಿಗೆ ಏನು ಸಮಸ್ಯೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಕೇಳಿದ್ದಾರೆ.
ನಾವು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದರೂ ಬಿಜೆಪಿ ಸದನದ ಒಳಗೆ ಹಾಗೂ ಹೊರಗೆ ಪ್ರತಿಭಟನೆ ನಡೆಸುತ್ತಿರುವುದು ಹತಾಶೆಯಿಂದಲೇ ಹೊರತು ಮತ್ಯಾವ ಕಾರಣದಿಂದಲೂ ಅಲ್ಲ. ನಮ್ಮ ಗ್ಯಾರಂಟಿ ಯೋಜನೆಗಳ ಜನಪ್ರಿಯತೆ ಬಿಜೆಪಿ ನಾಯಕರ ನಿದ್ದೆ ಹಾಗೂ ನೆಮ್ಮದಿ ಕೆಡಿಸಿದೆ. ಹಾಗಾಗಿ ಬಿಜೆಪಿ ನಾಯಕರ ಪ್ರತಿಭಟನೆ ಅತೃಪ್ತ ಆತ್ಮಗಳ ವೃಥಾ ಆಲಾಪದಂತೆ ಕಾಣುತ್ತಿದೆ.
ಬಿಜೆಪಿಯವರು ನಮ್ಮ ಗ್ಯಾರಂಟಿ ಯೋಜನೆಗಳ ಬಗ್ಗೆ ಅಧಿವೇಶನದಲ್ಲಿ ಅಂಗಿ ಹರಿದುಕೊಳ್ಳುತ್ತಿದ್ದಾರೆ, ಕೇಂದ್ರ ಅಕ್ಕಿ ಕೊಡದ ಬಗ್ಗೆ ಚಕಾರ ಎತ್ತಿದ್ದರೆ ರಾಜ್ಯದ ಜನ ಭೇಷ್ ಎನ್ನುತ್ತಿದ್ದರು. ಕೇಂದ್ರ ಸರ್ಕಾರ ಅಕ್ಕಿ ಕೊಡದಿದ್ದಾಗ ರಾಜ್ಯ ಬಿಜೆಪಿಯವರ ನಾಲಗೆಯ ಪಸೆ ಆರಿ ಹೋಗಿತ್ತು. ಈಗ ಅಕ್ಕಿ ಕೊಡಿ ಎನ್ನುತ್ತಿದ್ದಾರೆ ಇವರಿಗೆ ಯಾವ ನೈತಿಕತೆ ಇದೆ? ಎಂದು ಪ್ರಶ್ನಿಸಿದ್ದಾರೆ.