ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಚಿವ ಜಮೀರ್ ಅಹ್ಮದ್ ಖಾನ್ ಮುಖಾಂತರ ಕರ್ನಾಟಕ ಮುಸ್ಲಿಮ್ ಯುನಿಟಿ ಪತ್ರ! » Dynamic Leader
October 31, 2024
ರಾಜ್ಯ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಚಿವ ಜಮೀರ್ ಅಹ್ಮದ್ ಖಾನ್ ಮುಖಾಂತರ ಕರ್ನಾಟಕ ಮುಸ್ಲಿಮ್ ಯುನಿಟಿ ಪತ್ರ!

ಕರ್ನಾಟಕ ರಾಜ್ಯದ ಅಲ್ಪಸಂಖ್ಯಾತ ಮುಸ್ಲಿಮ್ ಸಮುದಾಯದ ಸಾಮಾಜಿಕ-ಆರ್ಥಿಕ-ಉದ್ಯೋಗ ಕ್ಷೇತ್ರಗಳಲ್ಲಿನ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರದ 2023-24ರ ಬಜೆಟ್ ನಲ್ಲಿ, ಸಾಮಾಜಿಕ ನ್ಯಾಯದ ಯೋಜನೆಗಳನ್ನು ಘೋಷಣೆ ಮಾಡಲು ಕರ್ನಾಟಕ ಮುಸ್ಲಿಮ್ ಯುನಿಟಿ ಮನವಿ ಮಾಡಿದೆ.

ಅಲ್ಪಸಂಖ್ಯಾತರ ಕಲ್ಯಾಣ, ವಸತಿ ಮತ್ತು ವಕ್ಫ್ ಸಚಿವ ಜಮೀರ್ ಅಹ್ಮದ್ ಖಾನ್ ರವರ ಮುಖಾಂತರ ಕರ್ನಾಟಕ ಮುಸ್ಲಿಮ್ ಯುನಿಟಿಯ ಮುಖಂಡರುಗಳು ಮಾನ್ಯ ಮುಖ್ಯಮಂತ್ರಿಗಳಿಗೆ ಸಲ್ಲಿಸಿರುವ ಮನವಿ ಪತ್ರದಲ್ಲಿ, “ರಾಜ್ಯದಲ್ಲಿ ತಮ್ಮ ನೇತೃತ್ವದಲ್ಲಿ ಅಸ್ತಿತ್ವಕ್ಕೆ ಬಂದಿರುವ ಪೂರ್ಣ ಬಹುಮತದ ಸರಕಾರಕ್ಕೆ ನಾಡಿನ ಸಮಸ್ತ ಮುಸ್ಲಿಮರ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇವೆ. ಈ ಹಿಂದಿನ ಕೋಮುವಾದಿ ಭ್ರಷ್ಟ ಸರ್ಕಾರದ ದುರಾಡಳಿತಕ್ಕೆ ಬೇಸತ್ತ ಜನ ತಮಗೆ ನೀಡಿರುವ ಚಾರಿತ್ರಿಕ ಅವಕಾಶವಿದು ಎಂದು ನಾವು ಭಾವಿಸುತ್ತೇವೆ.

ತಮಗೆ ತಿಳಿದಿರುವಂತೆ ಈ ರಾಜ್ಯದ ಮುಸ್ಲಿಮ್ ಸಮುದಾಯ ಕಳೆದ ನಾಲ್ಕು ವರ್ಷಗಳಲ್ಲಿ ಹಿಂದೆಂದಿಗಿಂತಲೂ ಅತೀ ಹೆಚ್ಚು ನೋವನ್ನು ಅನುಭವಿಸಿದ್ದು, ದಿನನಿತ್ಯದ ಬದುಕಿನಲ್ಲಿ ಭದ್ರತೆಯ ಸಮಸ್ಯೆಗಳನ್ನು ಅನುಭವಿಸಿದ್ದಾರೆ. ರಾಜ್ಯದಲ್ಲಿ ನಡೆದ 2023ರ ಚುನಾವಣೆಯಲ್ಲಿ ಸಂಪೂರ್ಣವಾಗಿ ಕಾಂಗ್ರೆಸ್ ಪಕ್ಷಕ್ಕೆ ಮುಸ್ಲಿಮರು ಮತ ನೀಡಿದ್ದಾರೆ. ಇದರ ಮೂಲಕ ರಾಜ್ಯದ ಅಭಿವೃದ್ದಿಗೆ, ತಮ್ಮ ನೇತೃತ್ವದ ಸರಕಾರಕ್ಕೆ, ಮುಸ್ಲಿಮರು ಬೆಂಬಲ ನೀಡಿದ್ದಾರೆ ಎಂಬುದು ಸಾಬೀತಾಗಿದೆ.

ಇಂತಹ ಸಂದರ್ಭದಲ್ಲಿ ಕಳೆದ ನಾಲ್ಕು ವರ್ಷಗಳ ಆಡಳಿತದ ಸರ್ಕಾರದಲ್ಲಿ ನಿರ್ಲಕ್ಷ್ಯ / ಅವಕಾಶಗಳ ವಂಚನೆಗೆ ಒಳಗಾಗಿರುವ ನಾಡಿನ ಮುಸ್ಲಿಮ್ ಸಮುದಾಯಕ್ಕೆ ತಮ್ಮ ಘನ ಸರಕಾರ ಸೂಕ್ತ ಸಾಮಾಜಿಕ ನ್ಯಾಯ ನೀಡುತ್ತದೆ ಎನ್ನುವ ವಿಶ್ವಾಸದೊಂದಿಗೆ ಕರ್ನಾಟಕ ಮುಸ್ಲಿಮ್ ಯುನಿಟಿಯು, ರಾಜ್ಯದ ಸಮಸ್ತ ಮುಸ್ಲಿಮ್ ಸಮುದಾಯದ ಪರವಾಗಿ, ನಮ್ಮ ಆಶೋತ್ತರ ಬೇಡಿಕೆಗಳನ್ನು ತಮ್ಮ ಮುಂದೆ ಮಂಡಿಸುತ್ತಿದೆ” ಎಂದು ಸಚಿವರ ಬಳಿ, ಮುಖ್ಯಮಂತ್ರಿಗಳಿಗೆ ನೀಡಿರುವ ಮನವಿ ಪತ್ರದಲ್ಲಿ ಮನವರಿಕೆ ಮಾಡಲಾಗಿದೆ.

ತಮ್ಮ ನೇತೃತ್ವದಲ್ಲಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ 10 ಸಾವಿರ ಕೋಟಿ ರೂಪಾಯಿಗಳನ್ನು ಅನುದಾನ ಒದಗಿಸಲಾಗುವದು ಎಂದು ಭರವಸೆ ನೀಡಿರುವುದು ಅಭಿನಂದನೀಯ. ಅದರಂತೆ, ಈ ವರ್ಷದ ಬಜೆಟ್‍ನಲ್ಲಿಯೇ ಸದರಿ ಅನುದಾನವನ್ನು ಘೋಷಿಸಬೇಕು ಎಂದು ಕರ್ನಾಟಕ ಮುಸ್ಲಿಮ್ ಯುನಿಟಿಯ ರಾಜ್ಯ ಸಮಿತಿ ಮುಖಂಡರ ತಂಡ ಸಚಿವರನ್ನು ಒತ್ತಾಸಿದೆ.

ಅಲ್ಲದೆ, ತಮ್ಮ ನೇತೃತ್ವದ ಹಿಂದಿನ ಸರ್ಕಾರದಲ್ಲಿ ಜಾರಿಯಲ್ಲಿದ್ದ ಎಲ್ಲಾ ಯೋಜನೆಗಳನ್ನು ಹೆಚ್ಚಿನ ಭೌತಿಕ ಗುರಿಯೊಂದಿಗೆ 2023-24ನೇ ಸಾಲಿನಿಂದ ಮರು ಜಾರಿಗೊಳಿಸಬೇಕು. 2ಬಿ ಪ್ರವರ್ಗದಡಿಯಲ್ಲಿ ನೀಡುತ್ತಿದ್ದ 4% ಮೀಸಲಾತಿಯನ್ನು EWS ಪ್ರವರ್ಗಕ್ಕೆ ವರ್ಗಾಯಿಸಿರುವುದನ್ನು ರದ್ದು ಪಡಿಸಬೇಕು. ಮತ್ತೊಮ್ಮೆ ಅದೇ 2ಬಿ ಪ್ರವರ್ಗದಲ್ಲಿ ಮೀಸಲಾತಿಯನ್ನು ಮುಂದುವರಿಸಬೇಕು. ಅಲ್ಲದೆ ರಾಜ್ಯದಲ್ಲಿ ಸುಮಾರು ಒಂದು ಕೋಟಿಗೂ ಹೆಚ್ಚು ಜನಸಂಖ್ಯೆಯುಳ್ಳ ಮುಸ್ಲಿಮರ ಮೀಸಲಾತಿಯನ್ನು ಶೇ.8ಕ್ಕೆ ಹೆಚ್ಚಿಸಬೇಕು.

ನ್ಯಾ.ರಾಜೇಂದ್ರ ಸಾಚಾರ್ ಶಿಫಾರಸ್ಸಿನಂತೆ ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುವ ಪ್ರದೇಶಗಳಲ್ಲಿ ಮುಸ್ಲಿಂ ಪೋಲಿಸ್ ಅಧಿಕಾರಿಯನ್ನು ನೇಮಿಸುವುದಲ್ಲದೇ ಹೆಚ್ಚಿನ ಪ್ರಮಾಣದಲ್ಲಿ ಮುಸ್ಲಿಂ ಸಿಬ್ಬಂದಿಗಳನ್ನು ನಿಯೋಜಿಸಬೇಕು.

ಅಕಾಡೆಮಿ, ಪ್ರಾಧಿಕಾರಗಳಲ್ಲಿ ಅವುಗಳ ಅಧ್ಯಕ್ಷ ಮತ್ತು ಸದಸ್ಯ ಸ್ಥಾನಗಳಿಗೆ ಸೂಕ್ತ ಪ್ರಮಾಣದಲ್ಲಿ ಮುಸ್ಲಿಂ ಪ್ರಾತಿನಿಧ್ಯವನ್ನು ಒದಗಿಸಿಕೊಡಬೇಕು.

ರಾಜ್ಯದಲ್ಲಿ ನಿಗಮ / ಮಂಡಳಿಗಳ ಅಧ್ಯಕ್ಷರುಗಳ ನೇಮಕಾತಿಯಲ್ಲಿ ಮುಸ್ಲಿಂ ಸಮುದಾಯಕ್ಕೆ ಕನಿಷ್ಠ 25ರಷ್ಟು ಪ್ರಾತಿನಿಧ್ಯ ನೀಡಬೇಕು. ಸದಸ್ಯರು / ನಿರ್ದೇಶಕರ ನೇಮಕಾತಿಯಲ್ಲಿ ಕನಿಷ್ಠ ಒಬ್ಬರು ಅಲ್ಪಸಂಖ್ಯಾತರನ್ನು ನಾಮನಿರ್ದೇಶನ ಮಾಡುವುದರೊಂದಿಗೆ ಇದನ್ನು ಕಡ್ಡಾಯಗೊಳಿಸಲು ನಿಯಮಗಳನ್ನು ತಿದ್ದುಪಡಿ ಮಾಡಿ ಜಾರಿಗೊಳಿಸಬೇಕು.

ಅಗತ್ಯ ಪ್ರದೇಶಗಳಲ್ಲಿ ಇದೇ ವರ್ಷದಲ್ಲಿ 100 ಅಲ್ಪಸಂಖ್ಯಾತ ವಸತಿ ನಿಲಯಗಳನ್ನು ಮಂಜೂರು ಮಾಡಬೇಕು ಮುಂತಾದ ಬೇಡಿಕೆ ಹಾಗೂ ಹಕ್ಕೋತ್ತಾಯದ ಮನವಿ ಪತ್ರವನ್ನು ಅಲ್ಪಸಂಖ್ಯಾತರ ಕಲ್ಯಾಣ, ವಸತಿ ಮತ್ತು ವಕ್ಫ್ ಸಚಿವರಾದ ಜಮೀರ್ ಅಹ್ಮದ್ ಖಾನ್ ರವರಿಗೆ ಸಲ್ಲಿಸಲಾಯಿತು.

ಈ ಸಂಧರ್ಭದಲ್ಲಿ ಕರ್ನಾಟಕ ಮುಸ್ಲಿಮ್ ಯುನಿಟಿಯ ರಾಜ್ಯ ಅಧ್ಯಕ್ಷರಾದ ಜಬ್ಬಾರ್ ಕಲಬುರ್ಗಿ, ಗೌರವಾಧ್ಯಕ್ಷರಾದ ಜಿ.ಎ.ಬಾವ, ಎಂ.ಎಲ್.ಸರಕಾವಸ್, ಸಂಚಾಲಕರು, ಉತ್ತರ ಕರ್ನಾಟಕ ಹಾಗೂ ಕರ್ನಾಟಕ ಮುಸ್ಲಿಮ್ ಯುನಿಟಿಯ ರಾಜ್ಯ ಸಮಿತಿಯ ಮುಖಂಡರುಗಳು ಉಪಸ್ಥಿತರಿದ್ದರು.

Related Posts