ಸಂಬಳ ನೀಡಲು ಪರದಾಡುತ್ತಿರುವ ಕೇರಳ; ಕೂಲಿ ಕೆಲಸಕ್ಕೆ ಹೋಗಲು ರಜೆ ಕೇಳಿದ ಸರ್ಕಾರಿ ಬಸ್ ಚಾಲಕ!
ತಿರುವನಂತಪುರಂ: ಸಕಾಲಕ್ಕೆ ಸಂಬಳ ನೀಡದ ಕಾರಣ, ಕುಟುಂಬವನ್ನು ಹಸಿವಿನಿಂದ ಪಾರು ಮಾಡಲು, ಕೂಲಿ ಕೆಲಸಕ್ಕೆ ಹೋಗಲು ನಿರ್ಧರಿಸಿದ ಸರ್ಕಾರಿ ಬಸ್ ಚಾಲಕ, ಅದಕ್ಕಾಗಿ ವಾರದಲ್ಲಿ ಮೂರು ದಿನ ರಜೆ ನೀಡುವಂತೆ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.
ಕೇರಳದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಸರ್ಕಾರವಿದೆ. ಇಲ್ಲಿನ ರಾಜ್ಯ ಸಾರಿಗೆ ಸಂಸ್ಥೆ ತೀವ್ರವಾದ ಆರ್ಥಿಕ ಮುಗ್ಗಟ್ಟನ್ನು ಎದುರಿಸುತ್ತಿದೆ. ಕಳೆದ ತಿಂಗಳ ಸಂಬಳವನ್ನು ಇನ್ನೂ ನೀಡಿಲ್ಲ; ಪಿಂಚಣಿಯೂ ನೀಡಿಲ್ಲ. ಇವರಿಗೆ ಸಕಾಲದಲ್ಲಿ ವೇತನ ನೀಡುವಂತೆ ಕೇರಳ ಹೈಕೋರ್ಟ್ ಹಲವು ಬಾರಿ ಆದೇಶ ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ.
ಈ ಹಿನ್ನಲೆಯಲ್ಲಿ ತ್ರಿಶೂರ್ ಜಿಲ್ಲೆಯ ಚಾಲಕುಡಿ ಡಿಪೋದಲ್ಲಿ ಕೆಲಸ ಮಾಡುತ್ತಿರುವ ಚಾಲಕ ಅಜು ಎಂಬುವವರು, ಸಾರಿಗೆ ಸಂಸ್ಥೆ ಅಧಿಕಾರಿಗಳಿಗೆ ಬರೆದಿರುವ ಪತ್ರದಲ್ಲಿ, ಹಲವು ವರ್ಷಗಳಿಂದ ನಿಗದಿತ ಅವಧಿಯಲ್ಲಿ ವೇತನ ಸಿಗುತ್ತಿಲ್ಲ. ಕೆಲವೊಮ್ಮೆ ಸಂಬಳವನ್ನು ಎರಡು ತಿಂಗಳಿಗೊಮ್ಮೆ ಪಾವತಿಸಲಾಗುತ್ತದೆ. ಇದರಿಂದ ಕುಟುಂಬ ನಿರ್ವಹಣೆ ಸಾಧ್ಯವಾಗುತ್ತಿಲ್ಲ.
ಮಕ್ಕಳ ಶಿಕ್ಷಣ ಶುಲ್ಕ ಕಟ್ಟಲೂ ಸಾಧ್ಯವಾಗುತ್ತಿಲ್ಲ. ಜೀವನ ಸಾಗಿಸುವುದು ಬಹಳ ಕಷ್ಟವಾಗಿದೆ. ಕೂಲಿ ಕೆಲಸಕ್ಕೆ ಹೋದರೆ ದಿನಕ್ಕೆ 1000 ರೂಪಾಯಿ ಸಿಗುತ್ತದೆ. ಇದಕ್ಕಾಗಿ ನನಗೆ ವಾರದಲ್ಲಿ ಮೂರು ದಿನ ರಜೆ ನೀಡಬೇಕು. ಎಂದು ಪತ್ರದಲ್ಲಿ ಹೇಳಿದ್ದಾರೆ. ಈ ಪತ್ರ ಪ್ರಸಾರವಾಗುತ್ತಿದ್ದಂತೆ, ಕೇರಳ ಸರ್ಕಾರದ ಕಳಪೆ ಕ್ರಮಗಳೇ ಸಾರಿಗೆ ನಿಗಮದ ಈ ಸ್ಥಿತಿಗೆ ಕಾರಣ ಎಂದು ವಿರೋಧ ಪಕ್ಷಗಳು ಖಂಡಿಸಿವೆ.