2014ರಲ್ಲಿ ಅಧಿಕಾರಕ್ಕೆ ಬಂದಿದ್ದ ಬಿಜೆಪಿಯನ್ನು 2024ರಲ್ಲಿ ಕಿತ್ತೊಗೆಯಲಾಗುವುದು! ಅಖಿಲೇಶ್ ಯಾದವ್
ವಿರೋಧ ಪಕ್ಷಗಳ ‘ಇಂಡಿಯಾ’ ಮೈತ್ರಿಯು ಉತ್ತರ ಪ್ರದೇಶದಲ್ಲಿ ಮಾತ್ರವಲ್ಲದೆ ದೇಶಾದ್ಯಂತ ಬಿಜೆಪಿಯನ್ನು ಅಳಿಸಿಹಾಕಲಿದೆ ಎಂದು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅಖಿಲೇಶ್ ಯಾದವ್, “ವಿರೋಧ ಪಕ್ಷಗಳ ಇಂಡಿಯಾ ಮೈತ್ರಿಯನ್ನು ಕಂಡು ಬಿಜೆಪಿ ಆತಂಕಕ್ಕೆ ಒಳಗಾಗಿದೆ. 2014ರಲ್ಲಿ ಅಧಿಕಾರಕ್ಕೆ ಬಂದಿದ್ದ ಬಿಜೆಪಿಯನ್ನು 2024ರಲ್ಲಿ ಕಿತ್ತೊಗೆಯಲಾಗುವುದು. ಬಿಜೆಪಿ ಉತ್ತರ ಪ್ರದೇಶದಲ್ಲಿ ಮಾತ್ರವಲ್ಲದೆ ಇಡೀ ದೇಶದಿಂದಲೇ ಕಿತ್ತೊಗೆಯಲಾಗುವುದು. ಹೀಗಾಗಿ ಸಂವಿಧಾನವನ್ನು ಹಾಳುಗೆಡವಲು ಪ್ರಯತ್ನಿಸಿದವರು ಹೆದರುತ್ತಿದ್ದಾರೆ.
ಆರ್‌ಎಸ್‌ಎಸ್ ಹರಡಿದ ದ್ವೇಷ ಮತ್ತು ಬಿಜೆಪಿಯ ವೋಟ್ ಬ್ಯಾಂಕ್ ರಾಜಕಾರಣವೇ ಮಣಿಪುರದ ಇಂದಿನ ಪರಿಸ್ಥಿತಿಗೆ ಕಾರಣ. ಗುಪ್ತಚರ ಸಂಸ್ಥೆಗಳಿಗೆ ಇದೆಲ್ಲ ತಿಳಿಯದೇ ಇರಲು ಸಾಧ್ಯವಿಲ್ಲ. ಅಲ್ಲಿ ಏನು ನಡೆಯುತ್ತಿದೆ ಎಂದು ಅವರಿಗೆ ತಿಳಿದಿರಬೇಕು.
ಸರ್ಕಾರ ಇದನ್ನೆಲ್ಲ ಸುಮ್ಮನೆ ನೋಡುತ್ತಿರುವುದಾದರೆ, ಅವರು ಅಧಿಕಾರದಲ್ಲಿ ಮುಂದುವರಿಯಬಾರದು. ವಿರೋಧ ಪಕ್ಷಗಳ ‘ಇಂಡಿಯಾ’ ಮೈತ್ರಿಯ ಬಗ್ಗೆ ಮಾತನಾಡುವ ಮೊದಲು, ಮಣಿಪುರದಲ್ಲಿ ಇಬ್ಬರು ಮಹಿಳೆಯರನ್ನು ವಿವಸ್ತ್ರಗೊಳಿಸಿದ ಬಗ್ಗೆ ಬಿಜೆಪಿ ಮಾತನಾಡಬೇಕು” ಎಂದು ಹೇಳಿದ್ದಾರೆ.