ಪಾಕಿಸ್ತಾನದಲ್ಲಿ ಆತ್ಮಹತ್ಯಾ ಬಾಂಬ್ ದಾಳಿ: 35 ಸಾವು 200 ಮಂದಿಗೆ ಗಾಯ!
ನಮ್ಮ ನೆರೆಯ ರಾಷ್ಟ್ರವಾದ ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯ ಬಜಾವುರ್ ಜಿಲ್ಲೆಯಲ್ಲಿ, ಕರ್ತೆಹ್ಸಿಲ್ ಪ್ರದೇಶದಲ್ಲಿ ಜಾಮಿಯತ್ ಉಲೇಮಾ-ಇ-ಇಸ್ಲಾಂ-ಫಜಲ್ ಎಂಬ ಸಂಘಟನೆಯ ವತಿಯಿಂದ ಇಂದು (ಜೂನ್ 30) ಸಮಾವೇಶ ನಡೆಯಿತು. 500ಕ್ಕೂ ಹೆಚ್ಚು ಮಂದಿ ಭಾಗವಹಿಸಿದ ಈ ಸಮಾವೇಶದಲ್ಲಿ ನಡೆದ ಗುಂಡಿನ ದಾಳಿಯಲ್ಲಿ, ಜಾಮಿಯತ್ ಉಲೇಮಾ-ಇ-ಇಸ್ಲಾಂ-ಫಜಲ್ ಸಂಘಟನೆಯ ಮುಖ್ಯಸ್ಥ ಮೌಲಾನಾ ಜಿಯಾವುಲ್ಲಾ ಜಾನ್ ಸೇರಿದಂತೆ 35 ಮಂದಿ ಸಾವನ್ನಪ್ಪಿದ್ದಾರೆ; 200ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಖೈಬರ್ ಪಖ್ತುಂಖ್ವಾದ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಫಿರೋಜ್ ಶಾ ಜಮಾಲ್ ಅವರು, ‘ಗಾಯಾಳುಗಳನ್ನು ಬಜಾವುರ್ ಮತ್ತು ಸಮೀಪದ ಆಸ್ಪತ್ರೆಗಳಿಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಚಿಂತಾಜನಕ ಸ್ಥಿತಿಯಲ್ಲಿರುವ ಜನರನ್ನು ಹೆಲಿಕಾಪ್ಟರ್‌ಗಳ ಮೂಲಕ ಪೇಶಾವರ ಮತ್ತು ಸುತ್ತಮುತ್ತಲಿನ ಆಸ್ಪತ್ರೆಗಳಿಗೆ ದಾಖಲಿಸುವ ಕೆಲಸ ನಡೆಯುತ್ತಿದೆ. ಸ್ಫೋಟ ನಡೆದ ಸ್ಥಳವನ್ನು ಸುತ್ತುವರಿಯಲಾಗಿದೆ. ಪ್ರಸ್ತುತ ಗಾಯಗೊಂಡವರಿಗೆ ಚಿಕಿತ್ಸೆ ನೀಡುವುದು ನಮ್ಮ ಮೊದಲ ಆದ್ಯತೆಯಾಗಿದೆ. ಸೇನೆ ಮತ್ತು ಇತರ ಸಂಘಟನೆಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ’ ಎಂದು ಅವರು ಹೇಳಿದರು.
150 ಮಂದಿಯನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಗಂಭೀರ ಸ್ಥಿತಿಯಲ್ಲಿದ್ದವರನ್ನು ಪೇಶಾವರದ ಲೇಡಿ ರೀಡಿಂಗ್ ಆಸ್ಪತ್ರೆಗೆ ರವಾನಿಸಲಾಗಿದೆ. ಸ್ಫೋಟದಲ್ಲಿ ಕೆಲವು ಸ್ಥಳೀಯ ವರದಿಗಾರರೂ ಗಾಯಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಈಗಾಗಲೇ ದಾಳಿಯನ್ನು ಆತ್ಮಹತ್ಯಾ ದಾಳಿ ಎಂದು ಗುರುತಿಸಲಾಗಿದೆ. ಘಟನಾ ಸ್ಥಳದಲ್ಲಿ ಸುಳಿವು ಸಂಗ್ರಹಿಸುವ ಕಾರ್ಯ ನಡೆಯುತ್ತಿದೆ. ಈ ದಾಳಿಯನ್ನು ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ತೀವ್ರವಾಗಿ ಖಂಡಿಸಿದ್ದಾರೆ.