ನಾನು ಗುಲಾಮನಲ್ಲ ಎಂದು ಭಾವಿಸಿದ ಆ ಕ್ಷಣದಿಂದಲೇ ಗುಲಾಮಗಿರಿಯ ಸಂಕೋಲೆಗಳು ಒಡೆಯುತ್ತವೆ! ಆಗಸ್ಟ್ ಕ್ರಾಂತಿ ಒಂದು ನೋಟ » Dynamic Leader
October 31, 2024
ದೇಶ

ನಾನು ಗುಲಾಮನಲ್ಲ ಎಂದು ಭಾವಿಸಿದ ಆ ಕ್ಷಣದಿಂದಲೇ ಗುಲಾಮಗಿರಿಯ ಸಂಕೋಲೆಗಳು ಒಡೆಯುತ್ತವೆ! ಆಗಸ್ಟ್ ಕ್ರಾಂತಿ ಒಂದು ನೋಟ

ಡಿ.ಸಿ.ಪ್ರಕಾಶ್

ಆಗಸ್ಟ್ 8, 1942 ಭಾರತದ ಸ್ವಾತಂತ್ರ‍್ಯ ಹೋರಾಟದ ಇತಿಹಾಸವನ್ನು ನೆನಪಿಸಿಕೊಳ್ಳುವವರಿಗೆ ಮರೆಯಲಾಗದ ದಿನ. ಆ ದಿನವೇ ಮಹಾತ್ಮಾ ಗಾಂಧಿಯವರು ಮುಂಬೈ ಕಾಂಗ್ರೆಸ್ ಸಮ್ಮೇಳನದಲ್ಲಿ “ಕ್ವಿಟ್ ಇಂಡಿಯಾ” ಚಳವಳಿಯನ್ನು ಘೋಷಿಸಿದರು. ಇದರ ಪರಿಣಾಮದಿಂದ ಐದು ವರ್ಷಗಳ ನಂತರ, 1947 ಆಗಸ್ಟ್ 15 ರಂದು ಬ್ರಿಟಿಷರು ಭಾರತವನ್ನು ತೊರೆದರು.

1939 ಸೆಪ್ಟೆಂಬರ್ 1 ರಂದು ಜರ್ಮನಿ ಪೋಲೆಂಡ್ ಮೇಲೆ ಆಕ್ರಮಣ ಮಾಡಿದಾಗ ಎರಡನೇ ಮಹಾಯುದ್ಧ ಪ್ರಾರಂಭವಾಯಿತು. ಜರ್ಮನಿಯ ಆಕ್ರಮಣ ಕ್ರಮವನ್ನು ಖಂಡಿಸಿದ ಇಂಗ್ಲೆಂಡ್, ಜರ್ಮನಿಯ ಮೇಲೆ ಯುದ್ಧವನ್ನು ಘೋಷಿಸಿತು. ಅಲ್ಲದೇ ಘೋಷಿಸಿದ ಕೆಲವೇ ಗಂಟೆಗಳಲ್ಲಿ ‘ಜರ್ಮನಿಯ ವಿರುದ್ಧ ಭಾರತವೂ ಯುದ್ಧರಂಗದಲ್ಲಿದೆ’ ಎಂದು ಭಾರತೀಯ ವೈಸ್‌ರಾಯ್ ಲಾರ್ಡ್ ಲಿನ್ಲಿತ್ಗೋ ಘೋಷಿಸಿದರು. ವೈಸ್‌ರಾಯ್ ತಮ್ಮ ಅಭಿಪ್ರಾಯವನ್ನು ಯಾರ ಬಳಿಯೂ ಕೇಳದೆ,  ಭಾರತವನ್ನು ಯುದ್ಧದ ಮುನ್ನಲೆಗೆ ತಂದಿದ್ದು ಭಾರತೀಯರಲ್ಲಿ ಅಸಮದಾನವನ್ನು ಉಂಟುಮಾಡಿತು. ಕಾಂಗ್ರೆಸ್ ಪಕ್ಷವು ಫ್ಯಾಸಿಸಂ ಮತ್ತು ನಾಜಿಸಂ ವಿರುದ್ಧದ ನಿಲುವನ್ನು ತಳೆದಿತ್ತಾದರೂ ನೆಹರೂ ಹೇಳಿದಂತೆ ‘ಭಾರತೀಯ ಜನರು ಗುಲಾಮರಾಗಿ ಯುದ್ಧದಲ್ಲಿ ಭಾಗವಹಿಸುವುದಿಲ್ಲ’ ಎಂಬ ವಿಚಾರದಲ್ಲಿ ಸ್ಪಷ್ಟವಾಗಿತ್ತು.

ಯುದ್ಧದ ನಂತರ ಬ್ರಿಟನ್ ಸರ್ಕಾರ ಭಾರತಕ್ಕೆ ಸ್ವಾತಂತ್ರ‍್ಯವನ್ನು ನೀಡುತ್ತದೆ ಎಂಬ ನಿರೀಕ್ಷೆಯನ್ನು ಕಾಂಗ್ರೆಸ್ ಹೊಂದಿತ್ತು. ಆದರೆ ಇಂಗ್ಲೆಂಡ್ ಸರ್ಕಾರದಿಂದ ಯಾವ ಭರವಸೆಯ ಪ್ರಕಟನೆಯೂ ಹೊರಬಿದ್ದಿಲ್ಲದ ಕಾರಣ, ಅದೇ ಸಂದರ್ಭದಲ್ಲಿ ಕಾಂಗ್ರೆಸ್‌ನ ನಿರೀಕ್ಷೆಗೆ ವಿರುದ್ಧವಾಗಿ ‘ಸಮಿತಿಗಳನ್ನು ರಚಿಸಲಾಗುವುದು ಮತ್ತು ಅವುಗಳಲ್ಲಿ ಭಾರತೀಯರನ್ನು ಪ್ರತಿನಿಧಿಸಲಾಗುವುದು’ ಎಂದು ವೈಸ್‌ರಾಯ್ ಪ್ರಕಟಿಸಿದ್ದರಿಂದ ಕೆಂಡಾಮಂಡಲವಾದ ಕಾಂಗ್ರೆಸ್, ಇದನ್ನು ಒಪ್ಪಿಕೊಳ್ಳದಿದ್ದರೂ ಅದರ ವಿರುದ್ಧ ಯಾವುದೇ ಗಂಭೀರವಾದ ಪ್ರತಿಭಟನೆಗಳನ್ನು ನಡೆಸಲು ಮುಂದಾಗಲಿಲ್ಲ. ಯುದ್ಧದ ಸಂಧರ್ಭದಲ್ಲಿ ಬ್ರಿಟಿಷ್ ಸರ್ಕಾರದೊಂದಿಗೆ ಘರ್ಷಣೆಯ ಹಾದಿಯನ್ನು ಅನುಸರಿಸುವುದು ಸೂಕ್ತವಲ್ಲ ಎಂಬುದು ಕಾಂಗ್ರೆಸ್‌ನ ನಿಲುವಾಗಿತ್ತು. ಆದರೂ ತನ್ನ ವಿರೋಧವನ್ನು ವ್ಯಕ್ತಪಡಿಸಲು ಕಾಂಗ್ರೆಸ್ ಪಕ್ಷವು ಅಧಿಕಾರದಲ್ಲಿದ್ದ ಎಲ್ಲಾ ಪ್ರಾಂತ್ಯಗಳಲ್ಲಿಯೂ ರಾಜೀನಾಮೆಯನ್ನು ಘೋಷಿಸಿತು.

ಎರಡನೇ ಮಹಾಯುದ್ಧ

ಯುದ್ಧದ ಸಂದರ್ಭದಲ್ಲಿ ಭಾರತದ ಬೆಂಬಲವನ್ನು ಪಡೆಯಲು ಬ್ರಿಟಿಷ್ ಸರ್ಕಾರ ಆಗಸ್ಟ್ 8, 1940 ರಂದು ‘ಆಗಸ್ಟ್ ರಿಯಾಯಿತಿ’ಯನ್ನು ಘೋಷಿಸಿತು. ಯುದ್ಧದ ನಂತರ ಹೊಸ ರಾಜಕೀಯ ವ್ಯವಸ್ಥೆಯನ್ನು ರೂಪಿಸಲು ಭಾರತೀಯ ಪ್ರತಿನಿಧಿಗಳನ್ನು ಒಳಗೊಂಡ ಸಂಸ್ಥೆಯನ್ನೂ ರಚಿಸಲಾಗುವುದು ಎಂದು ಘೋಷಿಸಿತು. ಗಾಂಧಿ ಅದನ್ನು ಒಪ್ಪಿಕೊಳ್ಳದೇ ವೈಯಕ್ತಿಕ ಸತ್ಯಾಗ್ರಹವನ್ನು ಪ್ರಾರಂಭಿಸಿದರು. ಅದೇ ಸಂದರ್ಭದಲ್ಲಿ ಸಾಮ್ರಾಜ್ಯಶಾಹಿ ವಿರುದ್ಧ ಜನರನ್ನು ದೊಡ್ಡಮಟ್ಟದಲ್ಲಿ ಸಂಘಟಿಸಲು ಗಾಂಧಿ ಹಿಂದೇಟು ಹಾಕಿದರು.

1941 ಡಿಸಂಬರ್ 7 ರಂದು ಜಪಾನ್ ‘ಪರ್ಲ್ ಹಾರ್ಬರ್’ ಮೇಲೆ ದಾಳಿ ಮಾಡುವ ಮೂಲಕ ಅಮೆರಿಕಾವನ್ನು ಎರಡನೇ ಮಹಾಯುದ್ದಕ್ಕೆ ಎಳೆದು ತಂದಿತು. ಎರಡನೇ ಮಹಾಯುದ್ಧದ ಆರಂಭದಲ್ಲಿ, ಜರ್ಮನಿ ನೇತೃತ್ವದ ಆಕ್ಷಿಸ್ (ಜರ್ಮನಿ, ಇಟಲಿ, ಜಪಾನ್ ಮತ್ತಿತರ ರಾಷ್ಟ್ರಗಳು) ಶಕ್ತಿಗಳು ಉತ್ತಮ ಯಶಸ್ಸಿನೊಂದಿಗೆ ಮುನ್ನಡೆಯುತ್ತಿದ್ದವು. ಅಮೆರಿಕ-ಬ್ರಿಟಿನ್ ಪಡೆಗಳು ಹಿನ್ನಡೆಯನ್ನು ಎದುರಿಸುತ್ತಿದ್ದವು. ಜಪಾನಿನ ದಾಳಿಯಲ್ಲಿ ಬ್ರಿಟಿಷ್ ಪಡೆಗಳು ಸೋಲನ್ನು ಅನುಭವಿಸಿದವು. ಫಿಲಿಪೈನ್ಸ್, ಮಲೇಷ್ಯಾ, ಇಂಡೋನೇಷ್ಯಾ ಮತ್ತು ವಿಯೆಟ್ನಾಂ ಅನ್ನು ಸತತವಾಗಿ ಗೆದ್ದ ಜಪಾನ್ ನಂತರ ಬರ್ಮಾದತ್ತ ಸಾಗಿತ್ತು. ಅದರ ಮುಂದಿನ ಗುರಿ ಭಾರತವನ್ನು ವಶಪಡಿಸಿಕೊಳ್ಳುವುದೇ ಆಗಿತ್ತು.

ಬ್ರಿಟಿಷ್ ಭಾರತವನ್ನು ಜಪಾನ್ ಎದುರು ಕಳೆದುಕೊಳ್ಳುವ ಭಯದಲ್ಲಿತ್ತು. ಆ ಸಮಯದಲ್ಲಿ ಅಮೆರಿಕಾದ ಅಧ್ಯಕ್ಷರಾಗಿದ್ದ ರೂಸ್ವೆಲ್ಟ್, ಬ್ರಿಟನ್ ಪ್ರಧಾನಿ ವಿನ್‌ಸ್ಟನ್ ಚರ್ಚಿಲ್ ಅವರಿಗೆ ಪತ್ರವೊಂದನ್ನು ಬರೆದು, ಭಾರತೀಯ ಜನರಿಗೆ ಹೆಚ್ಚಿನ ಅಧಿಕಾರವನ್ನು ನೀಡುವ ಅಗತ್ಯತೆಯನ್ನು ಒತ್ತಿ ಹೇಳಿದರು. ಹಾಗಾಗಿ ಬ್ರಿಟನ್ ಸರ್ಕಾರ ತರಾತುರಿಯಲ್ಲಿ ಭಾರತದೊಂದಿಗೆ ಒಂದು ಒಪ್ಪಂದವನ್ನು ಮಾಡಿಕೊಳ್ಳಲು ಪ್ರಯತ್ನಿಸಿತು. ಇದಕ್ಕಾಗಿ ಪ್ರಧಾನಿ ಚರ್ಚಿಲ್, ಭಾರತೀಯರೊಂದಿಗೆ ಮಾತುಕತೆ ನಡೆಸಲು ಕ್ರಿಪ್ಸ್ ಎಂಬ ಬ್ರಿಟಿಷ್ ಮಂತ್ರಿಯನ್ನು ಕಳುಹಿಸಿಕೊಟ್ಟರು. ಕ್ರಿಪ್ಸ್ ಅವರು ನೆಹರೂವಿನ ಸ್ನೇಹಿತರಾಗಿದ್ದ ಕಾರಣ ಅವರ ಆಗಮನವು ಭಾರತದಲ್ಲಿ ಭಾರೀ ನಿರೀಕ್ಷೆಯನ್ನು ಮೂಡಿಸಿತ್ತು.

ಮಹಾತ್ಮ ಗಾಂಧಿಯೊಂಧಿಗೆ ಕ್ರಿಪ್ಸ್

ಕ್ರಿಪ್ಸ್ ಒತ್ತು ತಂದ ಬ್ರಿಟನ್ ಸರ್ಕಾರದ ಶಿಫಾರಸ್ಸುಗಳು:
ಯುದ್ಧದ ನಂತರ ಭಾರತಕ್ಕೆ ಡೊಮಿನಿಯನ್ ಸ್ಥಾನಮಾನ ನೀಡಲಾಗುವುದು. (ಅಂದರೆ, ಕೆನಡಾ, ಆಸ್ಟ್ರೇಲಿಯಾ, ಮತ್ತು ನ್ಯೂಜಿಲೆಂಡ್ ದೇಶಗಳು ಬ್ರಟಿಷ್ ರಾಜನನ್ನು ತನ್ನ ಮುಖ್ಯಸ್ಥನಾಗಿ ಸ್ವೀಕರಿಸಿಕೊಂಡಿರುವ ದೇಶಗಳಂತೆೆ)

ಯುದ್ಧದ ನಂತರ ಸ್ವದೇಶಿ ರಾಜ್ಯಗಳು ಮತ್ತು ಬ್ರಿಟಿಷ್ ಭಾರತೀಯ ಪ್ರಾಂತ್ಯಗಳ ಪ್ರತಿನಿಧಿಗಳನ್ನು ಒಳಗೊಂಡಿರುವ ಸಂವಿಧಾನ ಸಭೆಯನ್ನು ಸ್ಥಾಪಿಸಲಾಗುವುದು.

ಬ್ರಿಟಿಷ್ ಭಾರತದಲ್ಲಿನ ಯಾವುದೇ ಪ್ರಾಂತ್ಯವು ಈ ಸಂವಿಧಾನವನ್ನು ಒಪ್ಪಿಕೊಳ್ಳಲು ನಿರಾಕರಿಸಿದರೆ, ಅದು ಹಾಗೆಯೇ ಮುಂದುವರಿಯಲು ಅಥವಾ ತನ್ನದೇ ಆದ ಪ್ರತ್ಯೇಕ ಸಂವಿಧಾನವನ್ನು ರಚಿಸುವ ಮತ್ತು ಹಿಂತೆಗೆದುಕೊಳ್ಳುವ ಅವಕಾಶ ನೀಡಲಾಗುವುದು.

ಕ್ರಿಪ್ಸ್ ಒತ್ತು ತಂದ ಬ್ರಿಟನ್ ಸರ್ಕಾರದ ಶಿಪಾರಸ್ಸುಗಳನ್ನು ಒಪ್ಪಿಕೊಳ್ಳಲು ಕಾಂಗ್ರೆಸ್ ನಿರಾಕರಿಸಿತು. ‘ಇದು ದೇಶವನ್ನು ಒಡೆಯುವ ಹೇಳಿಕೆ’ ಎಂದ ಕಾಂಗ್ರೆಸ್ ಇದನ್ನು ತಳ್ಳಿಹಾಕಿತು. ಗಾಂಧಿ ಇದನ್ನು ‘ಪೋಸ್ಟ್ ಡೇಟೆಡ್ ಚೆಕ್’ ಎಂದು ಟೀಕಿಸಿದರು.

ದೇಶವನ್ನು ವಿಭಜಿಸುವ ಯಾವುದೇ ಸಲಹೆಯನ್ನು ಸ್ವೀಕರಿಸಲು ಕಾಂಗ್ರೆಸ್ ಸಿದ್ಧವಿರಲಿಲ್ಲ. ಅಲ್ಲದೇ ‘ಭಾರತೀಯರ ಅಭಿಪ್ರಾಯ ಕೇಳದೆ ತೆಗೆದುಕೊಳ್ಳುವ ಯಾವುದೇ ನಿರ್ಧಾರವನ್ನು ಒಪ್ಪಿಕೊಳ್ಳಲು ಕಾಂಗ್ರೆಸ್ ಸಿದ್ಧವಿಲ್ಲ’ ಎಂದು ಬಹಿರಂಗವಾಗಿಯೇ ಹೇಳಿತ್ತು. ಹಲವಾರು ಸುತ್ತಿನ ಮಾತುಕತೆಗಳ ನಂತರವೂ ಕ್ರಿಪ್ಸ್ನ ಪ್ರಯತ್ನವು ವಿಫಲವಾಯಿತು. ಅದಕ್ಕೆ ಮುಖ್ಯ ಕಾರಣ, ಭಾರತದಲ್ಲಿ ತಕ್ಷಣವೇ ರಾಷ್ಟ್ರ ರಾಜಕಾರಣವನ್ನು ಸ್ಥಾಪಿಸಲು ಬ್ರಿಟಿಷರು ನಿರಾಕರಣೆ ಮಾಡಿದ್ದೆ ಇದಕ್ಕೆ ಕಾರಣವಾಗಿತ್ತು. ವೈಸ್‌ರಾಯ್‌ನ ಅಧಿಕಾರವನ್ನು ಕಡಿಮೆ ಮಾಡಲು ಚರ್ಚಿಲ್ ಸಿದ್ಧರಿರಲಿಲ್ಲ. ಅವರ ಕೈಗೊಂಬೆಯಂತೆ ಕೆಲಸ ಮಾಡಲು ಇಲ್ಲಿ ಯಾವ ರಾಷ್ಟ್ರೀಯ ನಾಯಕರೂ ಸಿದ್ಧವಾಗಿರಲಿಲ್ಲ. ರೂಸ್ವೆಲ್ಟ್ ಅವರ ರಾಯಭಾರಿ ತಮ್ಮ ಅಧ್ಯಕ್ಷರಿಗೆ ಬರೆದ ಪತ್ರದಲ್ಲಿ, ‘ನೆಹರೂ ಮತ್ತು ಕ್ರಿಪ್ಸ್ ಐದು ನಿಮಿಷಗಳಲ್ಲಿ ಪರಿಹರಿಸಬಹುದಾದ ಈ ಸಮಸ್ಯೆಯನ್ನು ಲಂಡನ್ ಬಯಸದ ಕಾರಣ ಪರಿಹರಿಸಲಾಗದಂತಾಯಿತು’ ಎಂದು ವಿವರಿಸಿದ್ದಾರೆ. ಕ್ರಿಪ್ಸ್ನ ಸೋಲು ಗಾಂಧಿಯವರ ನಿಲುವನ್ನು ಸಂಪೂರ್ಣವಾಗಿ ಬದಲಾಯಿಸಿತು. ಬಿಳಿಯರನ್ನು ಹೊರ ಹಾಕಬೇಕಾದರೆ ಜನಪರ ಹೋರಾಟವೇ ಇದಕ್ಕೆ ಸರಿಯಾದ ಮಾರ್ಗ ಎಂಬ ನಿರ್ಧಾರಕ್ಕೆ ಅವರು ಬಂದರು.

1942 ಜುಲೈ 14 ರಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು ‘ಭಾರತ ಬಿಟ್ಟು ತೊಲಗಿ’ ಎಂಬ ನಿರ್ಣಯವನ್ನು ತೆಗೆದುಕೊಂಡಿತು. ಬ್ರಿಟಿಷ್ ಸರ್ಕಾರವನ್ನು ತಮ್ಮ ಬೇಡಿಕೆಗಳಿಗೆ ಮಣಿಯುವಂತೆ ಒತ್ತಡ ಹೇರುವ ಹೋರಾಟವೇ ‘ಕ್ವಿಟ್ ಇಂಡಿಯಾ ಚಳುವಳಿ’ ಎಂದು ಗಾಂಧಿ ಭಾವಿಸಿದ್ದರು. ಭಾರತದ ವಿಮೋಚನೆಯು ಭಾರತದ ಭದ್ರತೆಗೆ ಮಾತ್ರವಲ್ಲ, ಪ್ರಪಂಚದ ಭದ್ರತೆಗೂ ಸಹ ಅಗತ್ಯವಾಗಿದೆ. ನಾಜಿಸಂ, ಫ್ಯಾಸಿಸಂ, ಮಿಲಿಟರಿ ಸರ್ವಾಧಿಕಾರ ಮತ್ತು ಸಾಮ್ರಾಜ್ಯಶಾಹಿಯಂತಹ ಜನವಿರೋಧಿ ಶಕ್ತಿಗಳನ್ನು ಶಕ್ತಿಯುತವಾಗಿ ಎದುರಿಸಬೇಕಾದರೆ ಭಾರತದ ವಿಮೋಚನೆ ಅತ್ಯಗತ್ಯವೆಂಬುದರಲ್ಲಿ ಕಾಂಗ್ರೆಸ್ ಸ್ಪಷ್ಟವಾಗಿತ್ತು.

ಕ್ವಿಟ್ ಇಂಡಿಯಾ ಚಳುವಳಿ

1942 ಆಗಸ್ಟ್ 8 ರಂದು ಬಾಂಬೆ ಗೊವಾಳಿಯ ಮೈದಾನದಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಸಾಮಾನ್ಯ ಸಭೆಯು ‘ಕ್ವಿಟ್ ಇಂಡಿಯಾ’ ನಿರ್ಣಯವನ್ನು ಅಂಗೀಕರಿಸಿತು. ‘ಮಾಡು ಇಲ್ಲವೇ ಮಡಿ’ ಎಂಬ ಗಾಂಧಿಯವರ ಘೋಷಣೆಯೊಂದಿಗೆ ಚಳುವಳಿಯನ್ನು ಪ್ರಾರಂಭಿಸುವ ಅಗತ್ಯತೆಯ ಬಗ್ಗೆ ಗಾಂಧಿ ಮಾತನಾಡಿದರು. ಅವರು ಸಮ್ಮೇಳನದಲ್ಲಿ 2 ಗಂಟೆ 20 ನಿಮಿಷಗಳ ಕಾಲ ಭಾವುಕರಾಗಿ ಮಾತನಾಡಿದರು. ‘ಸ್ವಾತಂತ್ರ‍್ಯ ತಕ್ಷಣವೇ ಬರಬೇಕು; ಇಂದು ರಾತ್ರಿ ಸ್ವಾತಂತ್ರ‍್ಯವನ್ನು ಖಾತರಿಪಡಿಸಿದರೆ, ಅದು ಬೆಳಗಾಗುವ ಮೊದಲು ಇರಬೇಕು. ಈ ಕ್ಷಣದಿಂದ ದೇಶದ ಪ್ರತಿಯೊಬ್ಬರೂ ನಾನು ಸ್ವತಂತ್ರ ವ್ಯಕ್ತಿ ಎಂದು ಭಾವಿಸಿಕೊಳ್ಳಬೇಕು. ನೀವು ಇನ್ನು ಮುಂದೆ ಗುಲಾಮರಲ್ಲ. ಇದುವೇ ಸ್ವಾತಂತ್ರ‍್ಯದ ಮೂಲತತ್ವ. ನಾನು ಗುಲಾಮನಲ್ಲ ಎಂದು ಭಾವಿಸಿದ ಆ ಕ್ಷಣದಿಂದಲೇ ಗುಲಾಮಗಿರಿಯ ಸಂಕೋಲೆಗಳು ಒಡೆಯುತ್ತವೆ. ನಾನೊಂದು ತಾರಕ ಮಂತ್ರವನ್ನು ಹೇಳುತ್ತೇನೆ; ಇದನ್ನು ಮರೆಯದೆ ನೆನಪಿನಲ್ಲಿಡಿ. ‘ಮಾಡು ಇಲ್ಲವೇ ಮಡಿ’ ಎಂಬುದೇ ನಿಮ್ಮೆಲ್ಲರ ಉಸಿರಾಗಿರಬೇಕು. ಭಾರತವನ್ನು ಮುಕ್ತಗೊಳಿಸೋಣ ಅಥವಾ ಆ ಪ್ರಯತ್ನದಲ್ಲಿ ಸಾಯೋಣ. ಗುಲಾಮಗಿರಿ ಶಾಶ್ವತವಾಗಿರುವುದನ್ನು ನೋಡಲು ನಾವು ಬದುಕಬೇಕಾಗಿಲ್ಲ’ ಎಂದು ಮಹಾತ್ಮಗಾಂಧಿ ಮೊಳಗಿದರು.

ಆಗಸ್ಟ್ 9 ರಂದು ‘ಕ್ವಿಟ್ ಇಂಡಿಯಾ’ ಆಂದೋಲನವು ದೇಶದಾದ್ಯಂತ ವ್ಯಾಪಕವಾಗಿ ಹರಡಿತು. ಕಸ್ತೂರಿ ಭಾಯ್ ಗಾಂಧಿ, ಮೀರಾ ಬೆನ್, ವಲ್ಲಭಭಾಯಿ ಪಟೇಲ್, ಜವಾಹರ್‌ಲಾಲ್ ನೆಹರು, ಮೌಲಾನಾ ಅಬುಲ್ ಕಲಾಂ ಆಜಾದ್ ಮುಂತಾದ ಅನೇಕ ನಾಯಕರನ್ನು ಬಂಧಿಸಿ ಬೇರೆ ಬೇರೆ ಜೈಲುಗಳಿಗೆ ಕರೆದೊಯ್ಯಲಾಯಿತು. ಆಗಸ್ಟ್ 11ರ ವೇಳೆಗೆ ಕಾಂಗ್ರೆಸ್ ಪಕ್ಷದ ಎಲ್ಲ ಪ್ರಮುಖ ನಾಯಕರನ್ನೂ ಬಂಧಿಸಲಾಗಿತ್ತು. ಪುಣೆಯ ಆಗಾಖಾನ್ ಅರಮನೆಯಲ್ಲಿ ಗಾಂಧಿಯನ್ನು ಎರಡು ವರ್ಷಗಳ ಕಾಲ ಬಂಧನದಲ್ಲಿ ಇಡಲಾಯಿತು. ಅವರು ಜೈಲಿನಲ್ಲಿ 21 ದಿನಗಳ ಕಾಲ ಉಪವಾಸ ಇದ್ದರು. ಗಾಂಧಿಯವರ ಪತ್ನಿ ಕಸ್ತೂರಿಭಾಯ್ ಗಾಂಧಿ ಫೆಬ್ರವರಿ 22, 1944 ರಂದು ಜೈಲುವಾಸದ 18ನೇ ತಿಂಗಳಲ್ಲಿ ನಿಧನರಾದರು. ನೆಹರೂ ಮತ್ತು ಅಬುಲ್ ಕಲಾಂ ಆಜಾದ್ ಮುಂತಾದ ನಾಯಕರು, ಅಹಮದ್ ನಗರ ಕೋಟೆಯಲ್ಲಿ ಜೈಲು ಸೇರಿದ್ದರು. ಎರಡನೇ ಮಹಾಯುದ್ಧ ಮುಗಿಯುವವರೆಗೂ ನೆಹರೂವನ್ನು ಬಿಡುಗಡೆ ಮಾಡಿರಲಿಲ್ಲ. ಕಾಂಗ್ರೆಸ್ ಪಕ್ಷ ಯೋಜಿಸಿದ್ದ ಪ್ರತಿಭಟನೆಯನ್ನು, ಮುಂದುವರಿಸಲು ಬಿಡದ ಬ್ರಿಟಿಷ್ ಸರ್ಕಾರ, ಕಾಂಗ್ರೆಸ್ ಪಕ್ಷವನ್ನು ಎಲ್ಲಾ ರೀತಿಯಲ್ಲೂ ದಮನ ಮಾಡಿತು. ಆದರೆ ‘ಭಾರತ ಬಿಟ್ಟು ತೊಲಗಿ’ ಎಂಬ ಘೋಷವಾಕ್ಯ ಮಾತ್ರ ಜನರನ್ನು ಹಿಡಿದಿಟ್ಟುಕೊಂಡು ಜನಪರ ಹೋರಾಟವಾಗಿ ಮಾರ್ಪಟ್ಟಿತು.

ಮಹಾಯುದ್ಧದ ಕಾರಣದಿಂದಾಗಿ ಭಾರತದಲ್ಲಿ ಆರ್ಥಿಕ ಬಿಕ್ಕಟ್ಟು, ಮಹಾ ಕ್ಷಾಮ ಮತ್ತು ನಿರುದ್ಯೋಗ ಸಮಸ್ಯೆಯು ದೇಶದಾದ್ಯಂತ ಜನರನ್ನು ಪ್ರಕ್ಷುಬ್ಧಗೊಳಿಸಿತ್ತು. ಬ್ರಿಟಿಷ್ ವಸಾಹತುಶಾಹಿ ಸರ್ಕಾರದ ಬಗೆಗಿನ ದ್ವೇಷ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಬ್ರಿಟಿಷ್ ಸರ್ಕಾರದ ವಿರುದ್ಧ ಹೋರಾಟ ನಡೆಸುತ್ತಿದ್ದ ಕಾಂಗ್ರೆಸ್ ನಾಯಕರನ್ನು ಬಂಧಿಸಲು ಬ್ರಿಟಿಷ್ ಸರ್ಕಾರ ಮುಂದಾಗಿದ್ದು, ಜನರನ್ನು ಮತ್ತಷ್ಟು ಕೆರಳಿಸಿತ್ತು. ಇದರಿಂದ ಜನರು ಗುಂಪು ಗುಂಪಾಗಿ ಪ್ರತಿಭಟನೆಗೆ ಇಳಿಯಲು ಆರಂಭಿಸಿದರು. ಹೋರಾಟವು ದೊಡ್ಡ ಜನಸಮೂಹವನ್ನು ಹಿಡಿದುಕೊಂಡ ನಂತರ ಹೋರಾಟದ ಸ್ವರೂಪವೇ ಬದಲಾಯಿತು. ಗಾಂಧಿಯ ಅಹಿಂಸಾ ಮಾರ್ಗವು ಮಿತಿಯಿಲ್ಲದ ಮತ್ತು ಹುರುಪಿನ ದಿಕ್ಕಿನಲ್ಲಿ ಮುನ್ನಡೆಯಿತು.

ಮೊದಲನೇ ಸ್ವಾತಂತ್ರ‍್ಯ ದಿನದ ಸಂದರ್ಭದಲ್ಲಿ

ನಾಯಕರಿಲ್ಲದೆ ಜನರೇ ಮುಂದಾಳುತ್ವ ವಹಿಸಿ ದೇಶದೆಲ್ಲೆಡೆ ಹೋರಾಟವನ್ನು ಮುನ್ನಡೆಸಿದರು. ಜನರ ಯುದ್ಧೋಚಿತ ಪ್ರತಿಭಟನೆಯು ನಗರ ಪ್ರದೇಶಗಳಲ್ಲಿ ಪ್ರಾರಂಭವಾಗಿ ಗ್ರಾಮೀಣ ಪ್ರದೇಶಗಳಿಗೂ ಹರಡಿತು. ಉತ್ತರ ಪ್ರದೇಶ ಮತ್ತು ಬಿಹಾರದ ಅನೇಕ ಹಳ್ಳಿಗಳು ಸ್ವಾತಂತ್ರ‍್ಯವನ್ನು ಘೋಷಿಸಿದವು. ಜಯಪ್ರಕಾಶ್ ನಾರಾಯಣ್, ಅರುಣಾ ಆಸಫ್ ಅಲಿ, ಸುಷೇತಾ ಕೃಪಲಾನಿ ಮುಂತಾದ ಮುಖಂಡರು ಪ್ರತಿಭಟನೆಯ ನೇತೃತ್ವವನ್ನು ವಹಿಸಿದ್ದರು. ಬ್ರಿಟಿಷ್ ಸರ್ಕಾರ ಪ್ರತಿಭಟನಕಾರರ ಮೇಲೆ ವಿಮಾನಗಳಿಂದ ಗುಂಡಿನ ದಾಳಿಯಂತಹ ದುಷ್ಕೃತ್ಯಗಳನ್ನು ಮಾಡುತ್ತಿತ್ತು. ಕನಿಷ್ಠ ಹತ್ತು ಸಾವಿರ ಜನ ಪ್ರಾಣ ಕಳೆದುಕೊಂಡಿರಬಹುದು ಎಂದು ನೆಹರೂ ಹೇಳಿದರು.

ಬ್ರಿಟಿಷ್ ಸರ್ಕಾರ ಜನರ ಪ್ರತಿಭಟನೆಯನ್ನು ನಿರ್ದಯವಾಗಿ ಹತ್ತಿಕ್ಕಲು ಎಲ್ಲಾ ರೀತಿಯಲ್ಲೂ ಪ್ರಯತ್ನಿಸಿತು. ಪ್ರತಿಭಟನೆಯನ್ನು ಹತ್ತಿಕ್ಕಲು 57 ಬೆಟಾಲಿಯನ್ ಯೋಧರನ್ನು ನಿಯೋಜಿಸಿತ್ತು. ಕೆಲವೇ ದಿನಗಳಲ್ಲಿ ಬಂಧಿತರ ಸಂಖ್ಯೆ 1 ಲಕ್ಷವನ್ನು ದಾಟಿತ್ತು. ಒಟ್ಟು 538 ಬಾರಿ ಗುಂಡು ಹಾರಿಸಲಾಗಿತ್ತು. ಅದಾಗ್ಯೂ, ಸ್ವಾತಂತ್ರ‍್ಯಕ್ಕಾಗಿ ಜನರ ಬೇಡಿಕೆಯ ಮುಂದೆ ಬ್ರಿಟಿಷ್ ಪಡೆಗಳು ಸಿಲುಕಿ ನುಚ್ಚುನೂರಾದವು. ಒಂದು ವರ್ಷಕ್ಕೂ ಹೆಚ್ಚು ಕಾಲ ನಡೆದ ಹೋರಾಟವು, ‘ಭಾರತದಲ್ಲಿ ತಮ್ಮ ಪ್ರಾಬಲ್ಯವನ್ನು ಇನ್ನು ಮುಂದೆ ಸುಲಭವಾಗಿ ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದನ್ನು ಬ್ರಿಟಿಷರಿಗೆ ಮನವರಿಕೆ ಮಾಡಿಕೊಟ್ಟಿತು’ ಜನರು ತಮ್ಮ ಹೋರಾಟದ ಮೂಲಕ ತಮ್ಮ ಮಹಾನ್ ಶಕ್ತಿಯನ್ನು ಸಹ ಅರಿತುಕೊಂಡರು.

‘ಕ್ವಿಟ್ ಇಂಡಿಯಾ’ ಚಳುವಳಿಯನ್ನು ಭಾರತೀಯ ಇತಿಹಾಸದಲ್ಲಿ ‘ಆಗಸ್ಟ್ ಕ್ರಾಂತಿ’ ಎಂದೇ ಕರೆಯಲಾಗುತ್ತದೆ. ಈ ಕ್ರಾಂತಿಯ ಇತಿಹಾಸವನ್ನು 77ನೇ ಸ್ವಾತಂತ್ರ‍್ಯ ದಿನದಂದು ನೆನಪಿಸಿಕೊಳ್ಳುವುದು ಸೂಕ್ತವಾಗಿರುತ್ತದೆ.

ಭಾರತದ ವೈಸ್‌ರಾಯ್ ಮತ್ತು ಗವರ್ನರ್ ಜನರಲ್‌ಗಳ ಹೆಸರು ಹಾಗೂ ಅವರ ಕಾಲದ ಪ್ರಮುಖ ಘಟನೆಗಳು:

1. ವಾರನ್ ಹೇಸ್ಟಿಂಗ್ಸ್ (1774-1785)
ಮೊದಲ ಬಂಗಾಳದ ಗವರ್ನರ್ ಜನರಲ್. ಈತನ ಅಧಿಕಾರವಧಿಯಲ್ಲಿ ರ‍್ಯೆಗ್ಯುಲೇಟಿಂಗ್ ಕಾಯಿದೆಯನ್ನು (1773) ಪರಿಚಯಿಸಲಾಯಿತು. ಈ ಕಾಯ್ದೆ ಬಂಗಾಳದಲ್ಲಿದ್ದ ದ್ವಿಮುಖ ಸರ್ಕಾರವನ್ನು ಅಂತ್ಯಗೊಳಿಸಿತು. ಈತನನ್ನು ಕಳಪೆ ಆಡಳಿತ ನಿರ್ವಹಣೆ ಮತ್ತು ವೈಯಕ್ತಿಕ ಭ್ರಷ್ಟಾಚಾರ ಕಾರಣಗಳಿಂದ ವಜಾಗೊಳಿಸಲಾಯಿತು. ಆದರೆ, ಅಂತಿಮವಾಗಿ ನಿರ್ದೋಷಿಯೆಂದು ತೀರ್ಮಾನಿಸಲಾಯಿತು. ಕಂದಾಯ ಮಂಡಳಿ ಮತ್ತು ವ್ಯಾಪಾರ ಮಂಡಳಿಯ ರಚನೆ. ಜಿಲ್ಲಾಧಿಕಾರಿ ಹುದ್ದೆ ಸೃಷ್ಟಿ.

2. ಲಾರ್ಡ್ ಕಾರ್ನ್ ವಾಲಿಸ್ (1786- 1793)
ಬಂಗಾಳದಲ್ಲಿ ಖಾಯಂ ಜಮೀನ್ದಾರಿ ಪದ್ಧತಿ ಜಾರಿ (1793). ಪೊಲೀಸ್ ಠಾಣೆಗಳ ಸ್ಥಾಪನೆ. ಪೊಲೀಸ್ ಸುಧಾರಣೆಗಳು ಜಾರಿ. ಟಿಪ್ಪು ಸುಲ್ತಾನನನ್ನು ಸೋಲಿಸಲು ಮೂರನೇ ಆಂಗ್ಲೋ-ಮೈಸೂರು ಯುದ್ಧದಲ್ಲಿ ಬ್ರಿಟಿಷ್ ಪಡೆಗಳು ಭಾಗಿ.

3. ಲಾರ್ಡ್ ವೆಲ್ಲೆಸ್ಲಿ (1798-1805)
ಭಾರತೀಯ ರಾಜರನ್ನು ನಿಯಂತ್ರಿಸಲು ಸಹಾಯಕ ಸೈನ್ಯ ಪದ್ಧತಿ (Policy of Subsidiary Alliance) ಪರಿಚಯ. ಹೈದರಾಬಾದ್ ಪ್ರಾಂತ್ಯವು ಈ ಸಹಾಯಕ ಸೈನ್ಯ ಪದ್ಧತಿಗೆ ಒಳಗಾದ ಮೊದಲ ದೇಶಿಯ ಸಂಸ್ಥಾನ.

4. ಲಾರ್ಡ್ ಮಿಂಟೋ-1 (1807-1813)
ಮಹಾರಾಜ ರಂಜಿತ್ ಸಿಂಗ್‌ನೊಂದಿಗೆ ಅಮೃತಸರ ಒಡಂಬಡಿಕೆ.

5. ಮಾರ್ಕ್ವೆಸ್ಟ್ ಆಫ್ ಹೇಸ್ಟಿಂಗ್ (1813-1823)
ಉನ್ನತ ಹುದ್ದೆಗಳಿಗೆ ಭಾರತೀಯರನ್ನು ನೇಮಿಸಿದ ಮೊದಲಿಗ. ಟೆನೆನ್ಸಿ ಕಾಯಿದೆ ಜಾರಿ (1828)

6. ಲಾರ್ಡ್ ವಿಲಿಯಂ ಬೆಂಟಿಕ್ (1828-1835)
ಭಾರತದ ಮೊದಲ ಗವರ್ನರ್ ಜನರಲ್‌ (ಈ ಮೊದಲು ಬಂಗಾಳದ ಗವರ್ನರ್ ಜನರಲ್ ಎಂಬ ಹುದ್ದೆ ಇತ್ತು). ಸತಿ ಪದ್ಧತಿಯ ನಿಷೇಧ. ಭಾರತೀಯರನ್ನು ಮತ್ತೆ ಅಧೀನ ನ್ಯಾಯಾಧೀಶರಾಗಿ ನೇಮಕ ಜಾರಿ. ಇಂಗ್ಲಿಷ್ ಉನ್ನತ ಶಿಕ್ಷಣದ ಭಾಷೆಯಾಯಿತು. ಮಧ್ಯ ಭಾರತದಲ್ಲಿ ಥಗ್ಗರನ್ನು ನಿಗ್ರಹಿಸಲಾಯಿತು. 1835ರಲ್ಲಿ ಕಲ್ಕತ್ತಾದಲ್ಲಿ ವೈದ್ಯಕೀಯ ಕಾಲೇಜು ಆರಂಭ.

7. ಸರ್.ಚಾರ್ಲ್ಸ್ ಮೆಟಾಕೆಫ್ (1835-1836)
ಮೊದಲ ಬಾರಿಗೆ ದೇಶಿಯ ಪತ್ರಿಕೆಗಳಿಗೆ ಸ್ವಾತಂತ್ರ‍್ಯ. ಎಲ್ಲಾ ನಿರ್ಭಂಧಗಳು ರದ್ದು. (ಭಾರತದ ವೃತ್ತ ಪತ್ರಿಕೆಗಳ ನಿರ್ಭಂಧ ವಿಮೋಚಕ)

8. ಲಾರ್ಡ್ ಆಕ್ಲೆಂಡ್ (1836-1842)
ಮೊದಲ ಅಫ್ಘಾನ್ ಯುದ್ಧ.

9. ಲಾರ್ಡ್ ಡಾಲ್ ಹೌಸಿ (1848-1856)
ಬಾಂಬೆಯಿಂದ ಥಾಣೆಯವರೆಗೆ ಮೊದಲ ಭಾರತೀಯ ರೈಲ್ವೆ ಮಾರ್ಗ ನಿರ್ಮಾಣ (1853). ಕೊಲ್ಕತ್ತಾದಿಂದ ಆಗ್ರದವರೆಗೆ ಟೆಲಿಗ್ರಾಫ್ ತಂತಿಯ ನಿರ್ಮಾಣ (1853). ‘ದತ್ತು ಮಕ್ಕಳಿಗೆ ಹಕ್ಕಿಲ್ಲ’ ಪದ್ಧತಿ ಜಾರಿ. ಸತಾರ (1848), ಜೈಪುರ ಮತ್ತು ಸಂಬಲ್ ಪುರ (1849), ಉದಯ್ ಪುರ (1852), ಝಾನ್ಸಿ (1853) ಮತ್ತು ನಾಗ್ಪುರ (1854) ರಾಜ್ಯಗಳನ್ನು ವಸಪಡಿಸಿಕೊಳ್ಳಲಾಯಿತು. ಶಿಮ್ಲಾವನ್ನು ಬೇಸಿಗೆ ರಾಜಧಾನಿಯಾಗಿ ಘೋಷಣೆ. ಲೋಕೋಪಯೋಗಿ ಇಲಾಖೆ ರಚನೆ. ವಿಧವಾ ಮರುವಿವಾಹ ಕಾಯಿದೆ (1856) ಅನುಷ್ಠಾನದೊಂದಿಗೆ ವಿಧವೆಯರ ಮರುಮದುವೆಯನ್ನು ಕಾನೂನು ಬದ್ಧಗೊಳಿಸಲಾಯಿತು. ಭಾರತೀಯ ನಾಗರೀಕ ಸೇವೆಗಳ ಸ್ಪರ್ದಾತ್ಮಕ ಪರೀಕ್ಷೆ ಪ್ರಾರಂಭ (1853).

10. ಲಾರ್ಡ್ ಕ್ಯಾನಿಂಗ್ (1856-1862)
1857ರ (ಭಾರತದ ಮೊದಲ ಸ್ವಾತಂತ್ರ‍್ಯ ಸಂಗ್ರಾಮ) ಸಿಪಾಯಿ ದಂಗೆಯ ಸಮಯದಲ್ಲಿದ್ದ ಗವರ್ನರ್ ಜನರಲನ್ನು ದಂಗೆಯ ನಂತರ ಭಾರತದ ಮೊದಲ ವೈಸ್‌ರಾಯನಾಗಿ ನೇಮಕ. ‘ದತ್ತು ಮಕ್ಕಳಿಗೆ ಹಕ್ಕಿಲ್ಲ’ ಪದ್ಧತಿ ರದ್ದು. 1861ರಲ್ಲಿ ಭಾರತೀಯ ಕೌನ್ಸಿಲ್ ಕಾಯ್ದೆ ಜಾರಿ. 1854ರ ‘ವುಡ್ಸ್ ಡಿಸ್ ಪ್ಯಾಚ್’ನ ಪ್ರಕಾರ ಕಲ್ಕತ್ತಾ, ಬಾಂಬೆ ಮತ್ತು ಮದ್ರಾಸ್ ವಿಶ್ವವಿದ್ಯಾಲಯಗಳ ಆರಂಭ. 1858ರ ವಿಕ್ಟೋರಿಯ ಮಹಾರಾಣಿಯ ಮಹಾಸನ್ನದು ‘ಭಾರತದ ಮ್ಯಾಗ್ನಾಕಾರ್ಟಾ’ ಪ್ರಕಟಣೆ. 1837ರಲ್ಲಿ ಮೆಕಾಲೆಯು ತಯಾರಿಸಿದ್ದ ‘ಭಾರತೀಯ ದಂಡ ಸಂಹಿತೆ’ ಜಾರಿ (1860). ಸಿವಿಲ್ ಪ್ರೊಸೀಜರ್ ಕೋಡ್ಸ್ ಜಾರಿ (1861).

11. ಲಾರ್ಡ್ ಲಾರೆನ್ಸ್ (1864-1869)
ಎರಡನೇ ಸಿಖ್ ಯುದ್ಧದ ನಂತರ ಈತನು ಪಂಜಾಬ್ ಆಡಳಿತ ಇಲಾಖೆಯ ಸದಸ್ಯನಾದನು. ಮತ್ತು ಪಂಜಾಬಿನಲ್ಲಿ ಹಲವಾರು ಜವಾಬ್ದಾರಿಯುತ ಸುಧಾರಣೆಗಳನ್ನು ಜಾರಿಗೆ ತಂದು ‘ಪಂಜಾಬ್‌ನ ರಕ್ಷಕ’ ನೆಂದು ಖ್ಯಾತನಾದನು. 1865ರಲ್ಲಿ ಕಲ್ಕತ್ತಾ, ಬಾಂಬೆ ಮತ್ತು ಮದ್ರಾಸ್‌ಗಳಲ್ಲಿ ಹೈಕೋರ್ಟ್ ಗಳನ್ನು ಸ್ಥಾಪಿಸಲಾಯಿತು.

12. ಲಾರ್ಡ್ ಮಾಯೋ (1869-1872)
ಭಾರತದಲ್ಲಿ ಪ್ರಥಮ ಜನಗಣತಿ (1871). 1872ರಲ್ಲಿ ಅಂಡಮಾನ್ ದ್ವೀಪಗಳ ಭೇಟಿ ಸಂದರ್ಭದಲ್ಲಿ (ಕೈದಿ ಶೇರ್ ಅಲಿಯಿಂದ) ಭಾರದಲ್ಲಿ ಕೊಲ್ಲಲ್ಪಟ್ಟ ಏಕ ಮಾತ್ರ ವೈಸ್‌ರಾಯ್. ಕೃಷಿ ಇಲಾಖೆ ಸ್ಥಾಪನೆ.

13. ಲಾರ್ಡ್ ಲಿಟ್ಟನ್ (1876-1880)
1877ರಲ್ಲಿ ದೆಹಲಿಯಲ್ಲಿ ದರ್ಬಾರ್ ಆಯೋಜಿಸಿ, ರಾಣಿ ವಿಕ್ಟೋರಿಯಾಗೆ ‘ಕೈಸರ್ ಇ ಹಿಂದ್’ ಬಿರುದು ಪ್ರಧಾನ. ಭಾರತದ ವೃತ್ತ ಪತ್ರಿಕೆಗಳ ಮೇಲೆ ನಿರ್ಭಂಧ ವಿಧಿಸುವ ‘ದೇಶಿಯ ಪತ್ರಿಕಾ ಕಾಯ್ದೆ’ ಜಾರಿ (1878). ಶಸ್ತ್ರಾಸ್ತ್ರ ಕಾಯ್ದೆ (1878). ಸರ್.ಸಯ್ಯದ್ ಅಹ್ಮದ್ ಖಾನರಿಂದ ಅಲಿಘಡದಲ್ಲಿ ‘ಮಹಮ್ಮದನ್ ಆಂಗ್ಲೋ ಓರಿಯಂಟಲ್ ಕಾಲೇಜು’ ಸ್ಥಾಪನೆ (1877) ನಾಗರಿಕ ಸೇವಾ ಪರೀಕ್ಷೆ ಪ್ರವೇಶ ವಯಸ್ಸನ್ನು 21 ರಿಂದ 19ಕ್ಕೆ ಇಳಿಸಲಾಯಿತು.

14. ಲಾರ್ಡ್ ರಿಪ್ಪನ್ (1880-1884)
ಭಾರತದ ವೃತ್ತ ಪತ್ರಿಕೆಗಳ ಮೇಲೆ ನಿರ್ಭಂಧ ವಿಧಿಸುವ ‘ದೇಶಿಯ ಪತ್ರಿಕಾ ಕಾಯ್ದೆ’ ರದ್ದು (1882). ನಾಗರಿಕ ಸೇವಾ ಪರೀಕ್ಷೆ ಪ್ರವೇಶ ವಯಸ್ಸನ್ನು ಪುನಃ 19 ರಿಂದ 21ಕ್ಕೆ ಏರಿಸಲಾಯಿತು. ಬಾಲಕಾರ್ಮಿಕ ಪದ್ಧತಿಯನ್ನು ನಿಷೇಧಿಸಲು ಮೊದಲ ಫ್ಯಾಕ್ಟರಿ ಕಾಯ್ದೆ ಅಂಗೀಕಾರ (1881). ಭಾರತೀಯ ಸ್ಥಳೀಯ ಸರ್ಕಾರಗಳ ‘ಪಿತಾಮಹ’. ದೇಶದಲ್ಲಿ ನಗರ ಸಭೆಗಳು, ಜಿಲ್ಲಾ ಮತ್ತು ಸ್ಥಳೀಯ ಮಂಡಳಿಗಳ ಸ್ಥಾಪನೆ (1882). ಇಲ್ಬರ್ಟ್ ಬಿಲ್ ಕಾಯ್ದೆ ಜಾರಿ (1883).

15. ಲಾರ್ಡ್ ಡಫೆರಿನ್ನ (1884-1894)
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ರಚಿಸಲಾಯಿತು.

16. ಲಾರ್ಡ್ ಲಾನ್ಸ್ ಡೌನ್ (1888-1894)
ಭಾರತೀಯ ಕೌನ್ಸಿಲ್ ಕಾಯ್ದೆ (1892). ಬ್ರಿಟಿಷ್ ಭಾರತ ಮತ್ತು ಆಫ್ಘಾನಿಸ್ಥಾನ ನಡುವೆ ಗಡಿರೇಖೆ ಗುರುತಿಸಲು ಡುರಾಂಡ್ ಆಯೋಗದ ನೇಮಕ.

17. ಲಾರ್ಡ್ ಕರ್ಜನ್ (1899-1905)
ಬಂಗಾಳದ ವಿಭಜನೆ (1905). ಸ್ವದೇಶಿ ಚಳುವಳಿಯ ಆರಂಭ. ಕೃಷಿ ಬ್ಯಾಂಕುಗಳ ಸ್ಥಾಪನೆ. ಬಂಗಾಳದ ಪೂಸಾದಲ್ಲಿ ಕೃಷಿ ಸಂಶೋಧನಾ ಸಂಸ್ಥೆ ಸ್ಥಾಪನೆ (1904). ಪುರಾತನ ಸ್ಮಾರಕಗಳ ಸಂರಕ್ಷಣಾ ಕಾಯ್ದೆ ಜಾರಿ. ಪುರಾತತ್ವ ಇಲಾಖೆ ಜಾರಿ. (1901). ಸರ್.ಥಾಮಸ್ ರಾಲೆ ಅಧ್ಯಕ್ಷತೆಯಲ್ಲಿ ವಿಶ್ವವಿದ್ಯಾಲಯಗಳ ಕಾಯ್ದೆ ಜಾರಿ (1904). ಪೊಲೀಸ್ ಆಯೋಗ ರಚನೆ. ಕ್ರಿಮಿನಲ್ ಇಲಾಖೆ ರಚನೆ.

18. ಲಾರ್ಡ್ ಮಿಂಟೋ (1905-1910)
ಭಾರತೀಯ ಮಂಡಳಿ ಕಾಯ್ದೆ (1909) ಮಾರ್ಲೆ-ಮಿಂಟೊ ಸುಧಾರಣೆಗಳನ್ನು ಅಂಗೀಕರಿಸಿತು. ಮುಸ್ಲಿಮರಿಗೆ ಪ್ರತ್ಯೇಕ ಮತಕ್ಷೇತ್ರ ಪ್ರಾತಿನಿಧ್ಯ.

19. ಲಾರ್ಡ್ ಹಾರ್ಡಿಂಗ್ (1910-1916)
ಇಂಗ್ಲೆಂಡ್‌ ದೊರೆ 4ನೇ ಜಾರ್ಜ್ ನ ಪಟ್ಟಾಭಿಷೇಕ – ದೆಹಲಿ ದರ್ಬಾರ್ (1911). ಭಾರತದ ರಾಜಧಾನಿಯಾಗಿದ್ದ ಕಲ್ಕತ್ತಾ ದೆಹಲಿಗೆ ಸ್ಥಾಳಾಂತರ (1911). ಅನ್ನಿ ಬೆಸೆಂಟ್ ರಿಂದ ಹೋಂ ರೂಲ್ ಚಳುವಳಿ ಆರಂಭಿಸಲಾಯಿತು (1916). ಮಹಾತ್ಮ ಗಾಂಧಿ ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಆಗಮನ (1915).

20. ಲಾರ್ಡ್ ಚೆಲ್ಮೆಸ್ ಫೋರ್ಡ್ (1916-1921)
ಭಾರತ ಸರ್ಕಾರದ ಕಾಯ್ದೆ (1919). (ಮೊಂಟಾಗು ಚೆಲ್ಮೆಸ್ ಫೋರ್ಡ್ ಸುಧಾರಣೆಗಳು) ರೌಲಟ್ ಕಾಯ್ದೆ ಜಾರಿ (1919) ಜಲಿಯನ್ ವಾಲಾ ಬಾಗ್ ದುರಂತ (ಏಪ್ರೀಲ್ 13, 1919). ಖಿಲಾಪತ್ ಚಳುವಳಿ. ಅಸಹಕಾರ ಚಳುವಳಿ.

21. ಲಾರ್ಡ್ ರೆಡಿಂಗ್ (1921-1931)
ರೌಲಟ್ ಆಕ್ಟ್ ರದ್ದುಗೊಳಿಸಲಾಯಿತು. ಸ್ವರಾಜ್ ಪಕ್ಷ ರಚನೆ. ಚೌರಿ ಚೌರ್ ಘಟನೆ.

22. ಲಾರ್ಡ್ ಇರ್ವಿನ್ (1926-1931)
ಸೈಮನ್ ಆಯೋಗ ಭಾರತಕ್ಕೆ ಭೇಟಿ (1928). ದಂಡಿ ಸತ್ಯಾಗ್ರಹ ಪ್ರಾರಂಭಿಸಲಾಯಿತು. ನಾಗರಿಕ ಅಸಹಕಾರ ಚಳುವಳಿಯನ್ನು ಆರಂಭಿಸಲಾಯಿತು. (1930) ಗಾಂಧಿ – ಇರ್ವಿನ್ ಒಪ್ಪಂದಕ್ಕೆ ಸಹಿ. ಮೊದಲ ದುಂಡು ಮೇಜಿನ ಸಭೆ.

23. ಲಾರ್ಡ್ ವಿಲ್ಲಿಂಗ್ಡನ್ (1031-1931)
1931ರಲ್ಲಿ ಎರಡನೇ ಮತ್ತು ಮೂರನೇ ದುಂಡು ಮೇಜಿನ ಸಭೆ. ಬಿಟಿಷ್ ಪ್ರಧಾನಮಂತ್ರಿ ರಾಮ್ಸೆ ಮ್ಯಾಕ್ ಡೊನಾಲ್ಡ್ ರಿಂದ ಕಮ್ಯುನಲ್ ಅವಾರ್ಡ್ ಪ್ರಾರಂಭ. ಪೂನಾ ಒಪ್ಪಂದದ ಸಹಿ. ಭಾರತ ಸರ್ಕಾರದ ಆಕ್ಟನ್ನು ಪ್ರಾಂತ್ಯಗಳಲ್ಲಿ ಜಾರಿ (1935).

24. ಲಾರ್ಡ್ ಲಿನ್ಲಿತ್ಗೋ (1936-1944)
2ನೇ ಮಹಾಯುದ್ಧದ ಆರಂಭ. ಕ್ರಿಪ್ಸ್ ಸಮಿತಿ 1942ರಲ್ಲಿ ಭಾರತಕ್ಕೆ ಭೇಟಿ. ಭಾರತ ಬಿಟ್ಟು ತೊಲಗಿ ಚಳುವಳಿ ಪ್ರಾರಂಭ.

25. ಲಾರ್ಡ್ ವಾವೆಲ್ (1944-1947)
ಕ್ಯಾಬಿನೆಟ್ ನಿಯೋಗದ ಯೋಜನೆ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮತ್ತು ಮುಸ್ಲಿಂ ಲೀಗ್ ನಡುವೆ ಶಿಮ್ಲಾ ಸಮ್ಮೇಳನ. ಮುಸ್ಲಿಂ ಲೀಗ್‌ನಿಂದ ಡೈರೆಕ್ಟ್ ಆಕ್ಷನ್ ಡೇ. ನೆಹರೂ ನೇತೃತ್ವದ ಮಧ್ಯಂತರ ಸರ್ಕಾರ ರಚನೆ.

26. ಲಾರ್ಡ್ ಮೌಂಟ್ ಬ್ಯಾಟನ್ (ಮಾರ್ಚ್ 1947-ಆಗಸ್ಟ್ 1947).
ಸ್ವತಂತ್ರ ಭಾರತದ ಮೊದಲ ಗವರ್ನರ್ ಜನರಲ್ ಹಾಗೂ ಬ್ರಿಟಿಷ್ ಭಾರತದ ಕೊನೆಯ ವೈಸ್‌ರಾಯ್. ಸಿ.ರಾಜಗೋಪಾಲಾಚಾರಿ, ಸ್ವಾತಂತ್ರ್ಯ ಭಾರತದ ಮೊದಲ ಮತ್ತು ಕಡೆಯ ಗವರ್ನರ್ ಜನರಲ್ ಉತ್ತರಾಧಿಕಾರಿ.

Related Posts