ಜಯಪ್ರಕಾಶ್ ನಾರಾಯಣ್‌ಗೆ ಗೌರವ ಸಲ್ಲಿಸಲು ನಿರಾಕರಣೆ: ಗೋಡೆ ಹತ್ತಿದ ಅಖಿಲೇಶ್ ಯಾದವ್!
ಭಾರತೀಯ ಸ್ವಾತಂತ್ರ್ಯ ಹೋರಾಟಗಾರ ಜಯಪ್ರಕಾಶ್ ನಾರಾಯಣ್ ಅವರ ಪ್ರತಿಮೆಗೆ ಗೌರವ ಸಲ್ಲಿಸಲು ಅನುಮತಿ ನಿರಾಕರಿಸಿದ ಕಾರಣಕ್ಕೆ ಗೋಡೆ ಏರಿ ಜಿಗಿದ ಅಖಿಲೇಶ್ ಯಾದವ್.
ಲಖನೌ: ಭಾರತೀಯ ಸ್ವಾತಂತ್ರ್ಯ ಹೋರಾಟಗಾರ ಜಯಪ್ರಕಾಶ್ ನಾರಾಯಣ್ ಅವರ ಜನ್ಮದಿನವನ್ನು ಇಂದು ಆಚರಿಸಲಾಯಿತು. ಏತನ್ಮಧ್ಯೆ, ಭದ್ರತಾ ಕಾರಣಗಳಿಗಾಗಿ ಉತ್ತರ ಪ್ರದೇಶ ರಾಜಧಾನಿ ಲಕ್ನೋದಲ್ಲಿರುವ ಜಯಪ್ರಕಾಶ್ ನಾರಾಯಣ್ ಅಂತರಾಷ್ಟ್ರೀಯ ಕೇಂದ್ರದ ಗೇಟನ್ನು ಉತ್ತರ ಪ್ರದೇಶ ಸರ್ಕಾರ ಮುಚ್ಚಿತು. ಅಂತರಾಷ್ಟ್ರೀಯ ಕೇಂದ್ರವನ್ನು ಪ್ರವೇಶಿಸಲು ಮತ್ತು ಜಯಪ್ರಕಾಶ್ ನಾರಾಯಣ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಲು ಅನುಮತಿ ನಿರಾಕರಿಸಿತು.
ಈ ಹಿನ್ನಲೆಯಲ್ಲಿ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಮತ್ತು ಅವರ ಪಕ್ಷದ ಕಾರ್ಯಕರ್ತರು ಬ್ಯಾರಿಕೇಡ್ ಮೇಲೆ ಏರಿ ಜಿಗಿದು ಜಯಪ್ರಕಾಶ್ ನಾರಾಯಣ್ ಅಂತರಾಷ್ಟ್ರೀಯ ಕೇಂದ್ರವನ್ನು ಪ್ರವೇಶಿಸಿದರು. ನಂತರ ಸಮಾಜವಾದಿ ಪಕ್ಷದ ಸದಸ್ಯರು ಅಲ್ಲಿನ ಜಯಪ್ರಕಾಶ್ ನಾರಾಯಣ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಇದರಿಂದಾಗಿ ಅಲ್ಲಿ ಸಂಭ್ರಮ ಮನೆ ಮಾಡಿತ್ತು.
ಅಖಿಲೇಶ್ ಯಾದವ್ ಅವರ ಗೋಡೆ ಜಿಗಿಯುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.