ದೀಪಾವಳಿಯ ದಿನದಂದು ತಮಿಳುನಾಡಿನಲ್ಲಿ ಜನರ ಹೃದಯ ಕದಡುವ ಜಾತಿ ಅಸ್ಪೃಶ್ಯತೆಯ ಘಟನೆ.!
ಪುದುಕೋಟ್ಟೈ: ಪುದುಕೋಟ್ಟೈ ಜಿಲ್ಲೆಯ ಆಯಪಟ್ಟಿಯ ಅಣ್ಣಾನಗರದ ಪರಿಶಿಷ್ಟ ಜಾತಿಯ ಯುವಕ ಪ್ರಕಾಶ್ ಅವರು ಪಟಾಕಿ ಖರೀದಿಸಿ ತನ್ನ ದ್ವಿಚಕ್ರ ವಾಹನದಲ್ಲಿ ಮನೆಗೆ ತೆರಳುತ್ತಿದ್ದಾಗ, ಮೋಲುಡಯಾನ್ ಪಟ್ಟಿ, ನಾಲ್ಕು ರಸ್ತೆಯ ಹತ್ತಿರ ಕೀಳ್ ತೊಂಡೈಮಾನ್ ಗ್ರಾಮದ ಕಳ್ಳರ್ ಸಮುದಾಯಕ್ಕೆ ಸೇರಿದ ಸಾರಥಿ ಮತ್ತು ಆತನ ಸಹಚರು ಸೇರಿ, ಅಡ್ಡಗಟ್ಟಿ ಪ್ರಕಾಶ್ ಅವರನ್ನು ಜಾತಿ ನಿಂದನೆ ಮಾಡಿ, ಬಿಯರ್ ಬಾಟಲಿಯಿಂದ ತಲೆಗೆ 15 ಬಾರಿ ಬರ್ಬರವಾಗಿ ಹೊಡೆದು ಕೊಲೆ ಬೆದರಿಕೆ ಹಾಕಿದ್ದಾರೆ.
ಪುದುಕೊಟ್ಟೈ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಕಾಶ್ ಅವರನ್ನು ದಾಖಲಿಸಲಾಗಿದೆ. “ನೀಲಂ ಸಾಂಸ್ಕೃತಿಕ ಕೇಂದ್ರ”ದ ಸ್ಥಳೀಯ ಮುಖಂಡ ಮುರುಗಾನಂದನ್ ಅವರು ಕಾರ್ಯಕರ್ತರೊಂದಿಗೆ ಆಸ್ಪತ್ರೆಗೆ ಖುದ್ದು ತೆರಳಿ ಸಾಂತ್ವನ ಹೇಳಿದ್ದಾರೆ. ಈ ಕುರಿತು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರನ್ನೂ ಸಲ್ಲಿಸಲಾಗಿದೆ.
ಈ ಕುರಿತು ಮಾತನಾಡಿರುವ ಮುರುಗಾನಂದನ್, “ರಾಷ್ಟ್ರೀಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಆಯೋಗದ ನಿರ್ದೇಶಕರಿಗೂ ಮಾಹಿತಿ ನೀಡಿದ್ದೇವೆ. ಜಾತಿ ಮನಸ್ಥಿತಿಯ ಅಪರಾಧಿಗಳನ್ನು ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿ, ಬಂಧಿಸಿ ನ್ಯಾಯ ಒದಗಿಸಿಕೊಡಬೇಕು.
ತಮಿಳುನಾಡಿನ ದಕ್ಷಿಣದ ಜಿಲ್ಲೆಗಳಲ್ಲಿ ಪರಿಶಿಷ್ಟ ಜನರ ಮೇಲೆ ನಿರಂತರವಾಗಿ ನಡೆಯುತ್ತಿರುವ ಜಾತಿ ಅಸ್ಪೃಶ್ಯತೆ ಹಿಂಸಾಚಾರವನ್ನು ತಡೆಯಲು ತಮಿಳುನಾಡು ಸರ್ಕಾರ ಮತ್ತು ಮುಖ್ಯಮಂತ್ರಿ ಸ್ಟಾಲಿನ್ ಕೂಡಲೇ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು” ಎಂದು ಮನವಿ ಮಾಡಿದ್ದಾರೆ.