ಅದಾನಿ ಪಿಕ್ ಪಾಕೆಟ್ ಹೊಡೆಯುವಾಗ ಜನರ ದಿಕ್ಕು ತಪ್ಪಿಸುವುದು ಮೋದಿಯ ಕೆಲಸ.! ರಾಹುಲ್ ಗಾಂಧಿ ಟೀಕೆ
ರಾಜಸ್ಥಾನ: ರಾಜಸ್ಥಾನದ ವಲ್ಲಭನಗರದಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ರಾಹುಲ್ ಗಾಂಧಿ ಮಾತನಾಡಿದರು: “ನಾವು ಬಡವರಿಗೆ ಸಹಾಯ ಮಾಡಿದಾಗ, ಬಿಜೆಪಿ ಪ್ರತಿ ಯೋಜನೆಯಲ್ಲಿ ಕೋಟ್ಯಾಧಿಪತಿಗಳಿಗೆ ಸಹಾಯ ಮಾಡುತ್ತಿದೆ. ಅವರು ಒಂದು ತಂಡವಾಗಿದ್ದಾರೆ. ಅದಾನಿ ಪಿಕ್ ಪಾಕೆಟ್ ಹೊಡೆಯುವಾಗ ಜನರ ದಿಕ್ಕು ತಪ್ಪಿಸುವುದು ಮೋದಿಯ ಕೆಲಸ” ಎಂದು ಹೇಳಿದ್ದಾರೆ.
“ಜಾತಿವಾರು ಜನಗಣತಿಯು ದೇಶದ ಎಕ್ಸ್-ರೇ ( ಕ್ಷ-ಕಿರಣ) ಆಗಿದೆ. ಅದನ್ನು ಮಾಡಬೇಕಾದ ಅವಶ್ಯಕತೆ ಇದೆ. ಕಾಂಗ್ರೆಸ್ ಪಕ್ಷ ಆದಿವಾಸಿಗಳ ಹಕ್ಕುಗಳನ್ನು ರಕ್ಷಿಸುತ್ತದೆ. ಪ್ರಧಾನಿ ಅವರನ್ನು ಒಬಿಸಿ ಎಂದು ಕರೆದುಕೊಳ್ಳುತ್ತಾರೆ. ಆದರೆ ನಾನು ಜಾತಿವಾರು ಜನಗಣತಿಯ ಬಗ್ಗೆ ಮಾತನಾಡುವಾಗ, ಭಾರತದಲ್ಲಿ ಬಡವರು ಎಂಬ ಒಂದೇ ಜಾತಿ ಇದೆ ಎಂದು ಹೇಳುತ್ತಾರೆ. ಆದರೆ ಅದಾನಿ, ಅಂಬಾನಿಯಂತಹ ಕೋಟ್ಯಾಧಿಪತಿಗಳ ಮತ್ತೊಂದು ಜಾತಿ ಅವರಲ್ಲಿದ್ದಾರೆ” ಎಂದು ರಾಹುಲ್ ಗಾಂಧಿ ವ್ಯಂಗ್ಯವಾಡಿದ್ದಾರೆ.
ನವಂಬರ್ 25 ರಂದು ರಾಜಸ್ಥಾನದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಚುನಾವಣಾ ಪ್ರಚಾರಕ್ಕೆ ಇನ್ನು 3 ದಿನ ಮಾತ್ರ ಬಾಕಿ ಉಳಿದಿರುವ ಹಿನ್ನಲೆಯಲ್ಲಿ, ಕಾಂಗ್ರೆಸ್ ಪಕ್ಷ ತನ್ನ ಚುನಾವಣಾ ಭರವಸೆಯನ್ನು ಇಂದು ಬಿಡುಗಡೆ ಮಾಡಿದೆ. ಅದರಲ್ಲಿ “ರೈತರಿಗೆ 2 ಲಕ್ಷ ರೂ ಬಡ್ಡಿ ರಹಿತ ಸಾಲವನ್ನು ನೀಡಲಾಗುವುದು. ಸ್ವಾಮಿನಾಥನ್ ವರದಿ ಪ್ರಕಾರ ಕನಿಷ್ಠ ಬೆಂಬಲ ಬೆಲೆ ನೀಡಲಾಗುವುದು. ಕಾಂಗ್ರೆಸ್ ಪಕ್ಷ 10 ಲಕ್ಷ ಉದ್ಯೋಗ ಸೃಷ್ಟಿಸಲಿದೆ. ಇದರಲ್ಲಿ 4 ಲಕ್ಷ ಉದ್ಯೋಗಗಳು ಸರ್ಕಾರಿ ವಲಯದಲ್ಲಿ ಸೃಷ್ಟಿಯಾಗಲಿವೆ.
ಪಂಚಾಯತಿ ಮಟ್ಟದ ನೇಮಕಾತಿ ಯೋಜನೆಯನ್ನು ಜಾರಿಗೆ ತರಲಾಗುವುದು. ಜಾತಿವಾರು ಜನಗಣತಿ ನಡೆಸಲಾಗುವುದು. ಈ ವರ್ಷದ ಅಂತ್ಯದ ವೇಳೆಗೆ ರಾಜಸ್ಥಾನದ ಆರ್ಥಿಕತೆ 15 ಸಾವಿರ ಕೋಟಿ ರೂ ಇರಲಿದೆ. ಇದನ್ನು 2030ರ ವೇಳೆಗೆ 30 ಲಕ್ಷ ಕೋಟಿ ರೂಪಾಯಿಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ” ಎಂದು ಹೇಳಿದರು.