"ವೈಕಂ ಚಳುವಳಿ" ಶತಮಾನೋತ್ಸವ ಆಚರಣೆ: ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್-ಪಿಣರಾಯಿ ವಿಜಯನ್ ಭಾಗಿ! » Dynamic Leader
October 31, 2024
ದೇಶ

“ವೈಕಂ ಚಳುವಳಿ” ಶತಮಾನೋತ್ಸವ ಆಚರಣೆ: ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್-ಪಿಣರಾಯಿ ವಿಜಯನ್ ಭಾಗಿ!

ಚೆನ್ನೈ: ಭಾರತದ ಸಾಮಾಜಿಕ ನ್ಯಾಯ ಸಮರದಲ್ಲಿ “ವೈಕಂ ಚಳುವಳಿ” ಮೊದಲನೆಯದು. ಕೇರಳದ ವೈಕಂನಲ್ಲಿ, ಮಹಾದೇವ ದೇವಸ್ಥಾನದ ಸುತ್ತಲಿನ ಬೀದಿಗಳಲ್ಲಿ ದಲಿತರು ನಡೆದಾಡುವುದನ್ನು ನಿಷೇಧಿಸಲಾಗಿತ್ತು. ಇದರ ವಿರುದ್ಧ 1924ರಲ್ಲಿ ಅಲ್ಲಿ ಬೃಹತ್ ಪ್ರತಿಭಟನೆಗಳು ನಡೆದವು.

ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಎಲ್ಲಾ ಮುಖಂಡರುಗಳನ್ನು ಬಂಧಿಸಿದ್ದರಿಂದ ಪ್ರತಿಭಟನೆ ಮುಂದುವರಿಸಲು ಸಾಧ್ಯವಾಗಲಿಲ್ಲ. ಆಗ ಕೇರಳದ ಮುಖಂಡರುಗಳು ತಂದೆ ಪೆರಿಯಾರ್ ಅವರಿಗೆ ಪತ್ರ ಬರೆದು, ಈ ಹೋರಾಟಕ್ಕೆ ಜೀವ ತುಂಬುವಂತೆ ಒತ್ತಾಯಿಸಿದರು.

ಈ ಪತ್ರವನ್ನು ಸ್ವೀಕರಿಸಿದ ತಂದೆ ಪೆರಿಯಾರ್ ತಮಿಳುನಾಡಿನಿಂದ ಕೇರಳಕ್ಕೆ ತೆರಳಿ ವೈಕಂ ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಈ ಹೋರಾಟ ಆ ಸಮಯದಲ್ಲಿ ದೊಡ್ಡ ಕೋಲಾಹಲಕ್ಕೆ ಕಾರಣವಾಯಿತು. ಜನರು ದೊಡ್ದಮಟ್ಟದಲ್ಲಿ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದರು.

ಇದರ ಪರಿಣಾಮವಾಗಿ ತಂದೆ ಪೆರಿಯಾರ್ ಎರಡು ಬಾರಿ ಬಂಧನಕ್ಕೊಳಗಾದರು. ಅವರು ಮೊದಲ ಬಾರಿಗೆ ಒಂದು ತಿಂಗಳು ಮತ್ತು ಎರಡನೇ ಬಾರಿಗೆ ಆರು ತಿಂಗಳು ಜೈಲು ಶಿಕ್ಷೆ ಅನುಭವಿಸಿದರು.

ಜೈಲಿನಲ್ಲಿ ಕೈಕಾಲು ಸರಪಳಿಯಿಂದ ಬಿಗಿದು ಚಿತ್ರಹಿಂಸೆ ನೀಡಲಾಗಿತ್ತು. ಆ ಸಮಯದಲ್ಲಿ ತಿರುವಾಂಕೂರಿನ ಮಹಾರಾಜರು ಮರಣಹೊಂದಿದ್ದರಿಂದ ರಾಣಿಯವರು ಅವರೆಲ್ಲರನ್ನೂ ಬಿಡುಗಡೆಗೊಳಿಸಿದರು.

ಅದಲ್ಲದೆ, ವೈಕಂ ಬೀದಿಯಲ್ಲಿ ದಲಿತರು ನಡೆದಾಡಬಾರದು ಎಂಬ ನಿಷೇಧವನ್ನೂ ರಾಣಿ ತೆಗೆದುಹಾಕಿದರು. ಪರಿಣಾಮವಾಗಿ, ಪೆರಿಯಾರ್ ಅವರ ಹೋರಾಟವು ವಿಜಯದಲ್ಲಿ ಕೊನೆಗೊಂಡಿದ್ದ ಕಾರಣ ಅವರನ್ನು ‘ವೈಕಂ ವೀರರ್’ ಎಂದು ಕರೆಯಲಾಯಿತು.

ಈ ಹೋರಾಟಕ್ಕೆ 100 ವರ್ಷ ತುಂಬಿದ ಹಿನ್ನೆಲೆಯಲ್ಲಿ ತಮಿಳುನಾಡು ಸರ್ಕಾರದ ವತಿಯಿಂದ ವೈಕಂ ಚಳುವಳಿಯ ಶತಮಾನೋತ್ಸವದ ವಿಶೇಷ ಆಚರಣೆಯನ್ನು ಚೆನ್ನೈನಲ್ಲಿ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಘೋಷಿಸಿದ್ದರು.

ಅದರಂತೆ, ವೈಕಂ ಚಳುವಳಿಯ ಶತಮಾನೋತ್ಸವ ನಂದಂಪಾಕ್ಕಂ ಟ್ರೇಡ್ ಸೆಂಟರ್‌ನಲ್ಲಿ ಇಂದು ನಡೆಯಬೇಕಿತ್ತು. ಖ್ಯಾತ ಚಿತ್ರನಟ ಮತ್ತು ಮಾಜಿ ವಿರೋಧಪಕ್ಷದ ನಾಯಕ ಹಾಗೂ ಎಂಡಿಎಂಕೆ ಪಕ್ಷದ ಅಧ್ಯಕ್ಷ ವಿಜಯಕಾಂತ್ ನಿಧನ ಹೊಂದಿದ್ದರಿಂದ ಇಂದು ಬೆಳಗ್ಗೆ ಇದ್ದಕ್ಕಿದ್ದಂತೆ ಸಮಾರಂಭವನ್ನು ವೇಪ್ಪೇರಿ ಪೆರಿಯಾರ್ ಸಭಾಂಗಣಕ್ಕೆ ಸ್ಥಳಾಂತರಿಸಲಾಯಿತು.

ಸಮಾರಂಭದಲ್ಲಿ ಪಾಲ್ಗೊಳ್ಳಲು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನಿನ್ನೆ ಚೆನ್ನೈಗೆ ಆಗಮಿಸಿದ್ದರು. ಅವರನ್ನು ಸಚಿವರಾದ ಅನ್ಬರಸನ್ ಮತ್ತು ಮಾ.ಸುಬ್ರಮಣ್ಯನ್ ಅವರು ಬರಮಾಡಿಕೊಂಡರು.

ಇಂದು ಬೆಳಗ್ಗೆ ಕಾರ್ಯಕ್ರಮ ನಡೆಯುವ ವೇಪ್ಪೇರಿ ಪೆರಿಯಾರ್ ಸಭಾಂಗಣಕ್ಕೆ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ಪಿಣರಾಯಿ ವಿಜಯನ್ ಮತ್ತು ಎಲ್ಲಾ ಸಚಿವರುಗಳು ಆಗಮಿಸಿದ್ದರು. ಅವರೆಲ್ಲರನ್ನು “ದ್ರಾವಿಡರ್ ಕಳಗಂ” ಅಧ್ಯಕ್ಷ ಕೆ.ವೀರಮಣಿ ಸ್ವಾಗತಿಸಿದರು.

ಆ ಬಳಿಕ ಅಲ್ಲಿನ ಪೆರಿಯಾರ್ ಸ್ಮಾರಕದಲ್ಲಿ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಮತ್ತು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪುಷ್ಪ ನಮನ ಸಲ್ಲಿಸಿದರು. ಬಳಿಕ ಪೆರಿಯಾರ್ ಸಭಾಂಗಣದಲ್ಲಿರುವ ಸ್ಮಾರಕ ಸ್ತಂಭದ ಬಳಿ ಸರಳ ರೀತಿಯಲ್ಲಿ ಸಮಾರಂಭ ನಡೆಯಿತು.

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಪೆರಿಯಾರ್ ಸ್ಮರಣಿಕೆ ನೀಡಿ ಗೌರವಿಸಿದರು. ಇದಾದ ನಂತರ ಶತಮಾನೋತ್ಸವದ ವಿಶೇಷ ಸಂಚಿಕೆ ಬಿಡುಗಡೆ ಸಮಾರಂಭ ನಡೆಯಿತು. ಮುಖ್ಯಮಂತ್ರಿ ಸ್ಟಾಲಿನ್ ವಿಶೇಷ ಸಂಚಿಕೆ ಬಿಡುಗಡೆ ಮಾಡಿದರು. ಪಿಣರಾಯಿ ವಿಜಯನ್ ಅದನ್ನು ಸ್ವೀಕರಿಸಿಕೊಂಡರು.

ಹಾಗೆಯೇ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, “ಪೆರಿಯಾರ್ ಮತ್ತು ವೈಕಂ ಚಳುವಳಿ” ಎಂಬ ಪುಸ್ತಕವನ್ನು ಬಿಡುಗಡೆಗೊಳಿಸಿದರು. ಅದನ್ನು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಸ್ವೀಕರಿಸಿಕೊಂಡರು.

Related Posts