ದೆಹಲಿಯಲ್ಲಿ ಪೊಂಗಲ್ ಆಚರಿಸಿದ ಮೋದಿ: ಮಹಿಳೆಯರು ತಮ್ಮ ಮನೆಗಳಲ್ಲಿ ಹಾಕುವ ಬಣ್ಣಬಣ್ಣದ ರಂಗೋಲಿಗಳಲ್ಲಿ ದೊಡ್ಡ ವೈಭವ ಅಡಗಿದೆ! » Dynamic Leader
October 31, 2024
ದೇಶ

ದೆಹಲಿಯಲ್ಲಿ ಪೊಂಗಲ್ ಆಚರಿಸಿದ ಮೋದಿ: ಮಹಿಳೆಯರು ತಮ್ಮ ಮನೆಗಳಲ್ಲಿ ಹಾಕುವ ಬಣ್ಣಬಣ್ಣದ ರಂಗೋಲಿಗಳಲ್ಲಿ ದೊಡ್ಡ ವೈಭವ ಅಡಗಿದೆ!

ನವದೆಹಲಿ: ಇಂದು (ಜನವರಿ 14) ನವದೆಹಲಿಯಲ್ಲಿ ಕೇಂದ್ರ ಸಚಿವ ಎಲ್.ಮುರುಗನ್ ಅವರ ನಿವಾಸದಲ್ಲಿ ನಡೆದ ಪೊಂಗಲ್ ಆಚರಣೆಯಲ್ಲಿ ಪ್ರಧಾನಿ ಮೋದಿ ಭಾಗವಹಿಸಿದ್ದರು.

ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ಎಲ್.ಮುರುಗನ್ ಪ್ರತಿ ವರ್ಷ ದೆಹಲಿಯ ತಮ್ಮ ಮನೆಯಲ್ಲಿ ಪೊಂಗಲ್ ಆಚರಿಸುತ್ತಾರೆ. ಈ ವರ್ಷ ಪೊಂಗಲ್ ಹಬ್ಬದ ನಿಮಿತ್ತ ಕರಗಾಟ್ಟಂ, ಪರಯಾಟ್ಟಾಂ, ಸಿಲಂಬಾಟ್ಟಂ ಸೇರಿದಂತೆ ವಿವಿಧ ಕಲಾತ್ಮಕ ಕಾರ್ಯಕ್ರಮಗಳು ನಡೆದವು. ಮುರುಗನ್ ಅವರ ಮನೆಯನ್ನು ಕಬ್ಬು, ಅರಿಶಿನ ಮತ್ತು ಬಾಳೆ ತೋರಣಗಳಿಂದ ಅಲಂಕರಿಸಲಾಗಿತ್ತು. ಮನೆಯ ಮುಂದೆ ಹಸು ಮತ್ತು ಜಲ್ಲಿಕಟ್ಟು ಗೂಳಿಯನ್ನು ಕಟ್ಟಲಾಗಿತ್ತು.

ಪ್ರಧಾನಿ ಮೋದಿ ಅವರು ತಮಿಳು ಸಾಂಪ್ರದಾಯಿಕ ಉಡುಗೆಯಾದ ಪಂಚೆ ಮತ್ತು ಶರ್ಟ್ ಧರಿಸಿ ಸಮಾರಂಭದಲ್ಲಿ ಭಾಗವಹಿಸಿದ್ದರು. ತರುವಾಯ, ಮೋದಿ ಅವರು ಮಡಕೆಯಲ್ಲಿ ಪೊಂಗಲ್ ಹಾಕಿ, ಎಲ್ಲರಿಗೂ ತಮಿಳು ಭಾಷೆಯಲ್ಲಿ ಪೊಂಗಲ್ ಶುಭಾಶಯ ಕೋರಿದರು.

ಪೊಂಗಲ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮೋದಿ ಅವರು ತಿರುಕ್ಕುರಳ್ ಅನ್ನು ಉಲ್ಲೇಖಿಸಿ ಮಾತನಾಡಿದರು: 

“ತಳ್ಳಾ ವಿಳೈಯುಳುಂ ತಕ್ಕಾರುಂ ತಾಳ್ವಿಲಾ
ಸೆಲ್ವರುಂ ಸೇರ್ವದು ನಾಡು”
(ಅರ್ಥ: ಕಡಿಮೆಯಾಗದ ಉತ್ಪನ್ನ, ಯೋಗ್ಯ ವಿದ್ವಾಂಸರು, ಅನಂತ ಸಂಪತ್ತಿನ ಒಡೆಯರು ಎಲ್ಲರೂ ಕೂಡಿ ಬಾಳುವುದೇ ದೇಶ)

“ಪೊಂಗಲ್ ಸಮಯದಲ್ಲಿ ಕೊಯ್ಲು ಮಾಡಿದ ಭತ್ತವನ್ನು ದೇವರಿಗೆ ಅರ್ಪಿಸುವುದು ಸಾಂಪ್ರದಾಯಿಕವಾಗಿದೆ. ನಮ್ಮ ಪ್ರತಿಯೊಂದು ಹಬ್ಬಗಳು ರೈತರೊಂದಿಗೆ ಸಂಬಂಧ ಹೊಂದಿವೆ. ತಮಿಳು ಮಹಿಳೆಯರು ತಮ್ಮ ಮನೆಗಳಲ್ಲಿ ಹಾಕುವ ಬಣ್ಣಬಣ್ಣದ ರಂಗೋಲಿ (ಕೋಲಂ) ಗಳಲ್ಲಿ ದೊಡ್ಡ ವೈಭವ ಅಡಗಿದೆ. ಅನೇಕ ಬಿಂದುಗಳು ಸೇರಿ ಒಂದು ರಂಗೋಲಿಯಾದಂತೆ, ವೈವಿಧ್ಯಮಯವಾದ ಜನರು ಒಂದಾಗುವುದರಿಂದ ದೇಶ ಸುಂದರವಾಗುತ್ತದೆ. ವೈವಿಧ್ಯಮಯವಾದ ಜನರನ್ನು ಒಂದುಗೂಡಿಸುವ ಕೆಲಸವನ್ನು ಕಾಶಿ ತಮಿಳು ಸಂಗಮ್ ಮಾಡುತ್ತಿದೆ” ಎಂದು ಹೇಳಿದರು.

ಪೊಂಗಲ್ ಹಬ್ಬದ ಕಾರ್ಯಕ್ರಮದಲ್ಲಿ  ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ತೆಲಂಗಾಣ ಮತ್ತು ಪುದುಚೇರಿ ರಾಜ್ಯಪಾಲರಾದ ತಮಿಳಿಸೈ, ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ, ಜಾರ್ಖಂಡ್ ರಾಜ್ಯಪಾಲ ಸಿ.ಪಿ.ರಾಧಾಕೃಷ್ಣನ್, ಬಿಜೆಪಿಯ ಹಿರಿಯ ಮುಖಂಡರುಗಳು ಮತ್ತು ಉದ್ಯಮಿಗಳು ಭಾಗವಹಿಸಿದ್ದರು.

Related Posts