ಕೋಲ್ಕತ್ತಾ: ಅಯೋಧ್ಯೆಯಲ್ಲಿ ರಾಮ ಮಂದಿರದ ಶಂಕುಸ್ಥಾಪನೆ ಸಮಾರಂಭದ ನಡುವೆ ಜನವರಿ 22 ರಂದು ಕೋಲ್ಕತ್ತಾದಲ್ಲಿ ಎಲ್ಲಾ ಧರ್ಮಗಳ ಜನರೊಂದಿಗೆ ‘ಸಾಮರಸ್ಯಕ್ಕಾಗಿ ರ‍್ಯಾಲಿ’ಯನ್ನು ಮುನ್ನಡೆಸುವುದಾಗಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ ಘೋಷಿಸಿದ್ದಾರೆ.
ಇಂದು ಪಶ್ಚಿಮ ಬಂಗಾಳದ ರಾಜ್ಯ ಕಾರ್ಯಾಲಯದ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, “ಜನವರಿ 22 ರಂದು ಕಾಳಿಘಾಟ್ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತೇನೆ. ನಂತರ ಎಲ್ಲ ಧರ್ಮದವರೊಂದಿಗೆ ‘ಸಾಮರಸ್ಯ ರ‍್ಯಾಲಿಯಲ್ಲಿ ಪಾಲ್ಗೊಳ್ಳುತ್ತೇನೆ. ಇದಕ್ಕೂ ಬೇರೆ ಯಾವುದೇ ಕಾರ್ಯಕ್ರಮಕ್ಕೂ ಸಂಬಂಧವಿಲ್ಲ” ಎಂದು ಹೇಳಿದ್ದಾರೆ.
ಆಡಳಿತಾರೂಢ ಟಿಎಂಸಿಯ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ಕಾಳಿಘಾಟ್ ದೇವಸ್ಥಾನದಲ್ಲಿ ಕಾಳಿ ದೇವಿಗೆ ಪೂಜೆ ಸಲ್ಲಿಸಿದ ನಂತರ ದಕ್ಷಿಣ ಕೋಲ್ಕತ್ತಾದ ಹಜ್ರಾ ಕ್ರಾಸಿಂಗ್‌ನಿಂದ ಮೆರವಣಿಗೆಯನ್ನು ಪ್ರಾರಂಭಿಸುತ್ತಾರೆ ಎಂದು ತಿಳಿದು ಬಂದಿದೆ. ಅಯೋಧ್ಯೆಯಲ್ಲಿ ರಾಮ ಮಂದಿರದ ಶಂಕುಸ್ಥಾಪನೆ ಸಮಾರಂಭ ನಡೆಯುವ ಅದೇ ದಿನ ಕೋಲ್ಕತ್ತಾದಲ್ಲಿ ‘ಸಾಮರಸ್ಯ ರ‍್ಯಾಲಿ’ ಆಯೋಜಿಸಿರುವುದು ಗಮನಾರ್ಹ.














