ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
ತೃಣಮೂಲ ಕಾಂಗ್ರೆಸ್ Archives » Dynamic Leader
December 3, 2024
Home Posts tagged ತೃಣಮೂಲ ಕಾಂಗ್ರೆಸ್
ದೇಶ ರಾಜಕೀಯ

ನವದೆಹಲಿ: ಕಚ್ಚಾ ತೈಲ ಬೆಲೆ ಇಳಿಕೆಯಾಗಿದ್ದರೂ ಪೆಟ್ರೋಲ್ ಬೆಲೆ ಏಕೆ ಕಡಿಮೆಯಾಗಿಲ್ಲ? ಎಂಬ ಪ್ರಶ್ನೆಯನ್ನು ಕಾಂಗ್ರೆಸ್ ಮತ್ತು ತೃಣಮೂಲ ಕಾಂಗ್ರೆಸ್ ಪಕ್ಷ ಎತ್ತಿದೆ.

ಸಾರ್ವಜನಿಕ ವಲಯದ ತೈಲ ಕಂಪನಿಗಳು ಅಂತಾರಾಷ್ಟ್ರೀಯ ಮಾರುಕಟ್ಟೆಯ ಸ್ಥಿತಿಗತಿಗಳಿಗೆ ಅನುಗುಣವಾಗಿ ಪೆಟ್ರೋಲ್ ಮತ್ತು ಡೀಸೆಲ್‌ನ ದೇಶೀಯ ಬೆಲೆಗಳನ್ನು ಪ್ರತಿದಿನ ನಿಗದಿಪಡಿಸುತ್ತವೆ. ಕಳೆದ ಕೆಲವು ದಿನಗಳಿಂದ ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ ಕಂಡು ಬರುತ್ತಿದ್ದರೂ ಪೆಟ್ರೋಲ್ ಡೀಸೆಲ್ ಬೆಲೆ ಯಾವುದೇ ಬದಲಾವಣೆಯಿಲ್ಲದೆ ಹೆಚ್ಚುತ್ತಲೇ ಇದೆ.

ಈ ಹಿನ್ನೆಲೆಯಲ್ಲಿ, ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿರುವ ಹೇಳಿಕೆಯಲ್ಲಿ, “ಕಚ್ಚಾ ತೈಲ ಬೆಲೆ ಇಳಿಕೆಯಾಗಿದ್ದರೂ ಪೆಟ್ರೋಲ್ ಬೆಲೆ ಕಡಿಮೆ ಮಾಡದಿರುವುದು ಏಕೆ? ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಕಚ್ಚಾ ತೈಲ ಶೇ.32ರಷ್ಟು ಕುಸಿದಿದೆ. ಕಚ್ಚಾ ತೈಲ ಬೆಲೆಯಲ್ಲಿ 32.5% ಇಳಿಕೆಯಾಗಿದ್ದರೂ, ಬಿಜೆಪಿ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಕಡಿಮೆ ಮಾಡಲು ನಿರಾಕರಿಸುತ್ತಿದೆ.

ಪ್ರಸ್ತುತ ಮಾರುಕಟ್ಟೆಯ ಸ್ಥಿತಿಗತಿಗಳ ಪ್ರಕಾರ, ಪೆಟ್ರೋಲ್ ಅನ್ನು ಲೀಟರ್‌ಗೆ ರೂ.48.27 ಮತ್ತು ಡೀಸೆಲ್‌ಗೆ ರೂ.69.00 ರಂತೆ ಮಾರಾಟ ಮಾಡಬೇಕು. 10 ವರ್ಷ 100 ದಿನಗಳಲ್ಲಿ ಬಿಜೆಪಿ ಸರ್ಕಾರ ಇಂಧನದ ಮೇಲೆ ತೆರಿಗೆ ವಿಧಿಸಿ ಜನರ 35 ಲಕ್ಷ ಕೋಟಿ ರೂಪಾಯಿ ಲೂಟಿ ಮಾಡಿದೆ. ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ಮಾಡದ ಬಿಜೆಪಿ ಸರ್ಕಾರವನ್ನು ಚುನಾವಣೆಯಲ್ಲಿ ಜನ ತಿರಸ್ಕರಿಸುತ್ತಾರೆ” ಎಂದು ಹೇಳಿದ್ದಾರೆ.

ತೃಣಮೂಲ ಕಾಂಗ್ರೆಸ್ ಪ್ರಶ್ನೆ:
ಈ ಬಗ್ಗೆ ಮಾತನಾಡಿರುವ ತೃಣಮೂಲ ಕಾಂಗ್ರೆಸ್ ಸಂಸದ ಡೆರೆಕ್ ಒ’ಬ್ರಿಯಾನ್ (Derek O’Brien), “ಕಳೆದ 10 ವರ್ಷಗಳಲ್ಲಿ, ಕಚ್ಚಾ ತೈಲದ ಬೆಲೆ ತೀವ್ರವಾಗಿ ಕುಸಿದಿದ್ದರೂ, ಪೆಟ್ರೋಲ್ ಬೆಲೆ ಶೇ.30ರಷ್ಟು ಹೆಚ್ಚಾಗಿದೆ. ಇದರಿಂದ ತೈಲ ಕಂಪನಿಗಳು ಹೆಚ್ಚಿನ ಲಾಭ ಪಡೆಯುತ್ತವೆ. ಆದರೆ ಇದರ ಪ್ರಯೋಜನ ಜನಸಾಮಾನ್ಯರಿಗೆ ಸಿಗುತ್ತಿಲ್ಲ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಕಡಿಮೆಯಾದರೂ ಪೆಟ್ರೋಲ್ ಬೆಲೆ ಕಡಿಮೆ ಮಾಡದಿರುವುದು ಏಕೆ?” ಎಂದು ಪ್ರಶ್ನಿಸಿದ್ದಾರೆ.

ರಾಜಕೀಯ

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಆಡಳಿತರೂಡ ತೃಣಮೂಲ ಕಾಂಗ್ರೆಸ್ ಪಕ್ಷದ ಮೇಲೆ ಜನರು ಹಿಂದೆಂದಿಗಿಂತಲೂ ಹೆಚ್ಚು ಅತೃಪ್ತರಾಗಿರುವುದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಆಘಾತವನ್ನು ಉಂಟುಮಾಡಿದೆ.

ಆರ್.ಜಿ.ಕರ್ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯು ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ಕಾರ್ಯನಿರ್ವಹಿಸುತ್ತದೆ. ಇಲ್ಲಿ ದ್ವಿತೀಯ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿನಿಯಾಗಿದ್ದ 31 ವರ್ಷದ ಟ್ರೈನಿ ವೈದ್ಯೆಯೊಬ್ಬರನ್ನು ಅತ್ಯಾಚಾರವೆಸಗಿ ಕೊಲೆ ಮಾಡಿದ್ದರು.

ಮಹಿಳಾ ವೈದ್ಯೆಯ ಸಾವಿಗೆ ನ್ಯಾಯಕ್ಕಾಗಿ ಆಗ್ರಹಿಸಿ ವೈದ್ಯರು ದೇಶಾದ್ಯಂತ ಪ್ರತಿಭಟನೆ ನಡೆಸಿದ್ದಾರೆ. ಈ ಘಟನೆಯಲ್ಲಿ ಇದುವರೆಗೂ ಪರಿಹಾರ ಸಿಗದ ಕಾರಣ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರದ ವಿರುದ್ಧ ಅಸಮಾಧಾನದ ಅಲೆ ಎದ್ದಿದೆ. ಅದೂ ಅಲ್ಲದೆ, ಈ ವಿಚಾರವಾಗಿ ತೃಣಮೂಲ ಕಾಂಗ್ರೆಸ್ ಪಕ್ಷದ ನಾಯಕರ ವಿವಾದಾತ್ಮಕ ಭಾಷಣಗಳು ಆಡಳಿತ ಪಕ್ಷದ ವಿರುದ್ಧ ಚಿತ್ತ ನೆಟ್ಟಿದೆ ಎನ್ನಬಹುದು.

ಏತನ್ಮಧ್ಯೆ, ಲಂಚ ನೀಡಿ ಪ್ರಕರಣವನ್ನು ಮುಚ್ಚಿಹಾಕಲು ಪೊಲೀಸರು ಯತ್ನಿಸುತ್ತಿದ್ದಾರೆ ಎಂದು ಮಹಿಳಾ ವೈದ್ಯರ ಕುಟುಂಬದವರು ಆರೋಪಿಸಿದ್ದು, ಜನರಲ್ಲಿ ಮತ್ತಷ್ಟು ತಳಮಳ ಮೂಡಿಸಿದೆ.

ಈ ಹಿನ್ನೆಲೆಯಲ್ಲಿ, ಪಶ್ಚಿಮ ಬಂಗಾಳದ ವಿವಿಧೆಡೆ ತೃಣಮೂಲ ಕಾಂಗ್ರೆಸ್ ಪಕ್ಷ ನಡೆಸಿದ ಸಮೀಕ್ಷೆಯಲ್ಲಿ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಜನರಲ್ಲಿ ಅಸಮಾಧಾನ ಇರುವುದು ಬಹಿರಂಗವಾಗಿದೆ. ಕಳೆದ 2019ರ ಲೋಕಸಭೆ ಚುನಾವಣೆಯಿಂದ ಆಗಾಗ್ಗೆ ತೃಣಮೂಲ ಕಾಂಗ್ರೆಸ್ ಜನರಲ್ಲಿ ಸಮೀಕ್ಷೆ ನಡೆಸುವುದನ್ನು ರೂಢಿ ಮಾಡಿಕೊಂಡಿದೆ.

ಆ ರೀತಿಯಲ್ಲಿ, ಸದ್ಯದ ಸಮೀಕ್ಷೆ ಪಕ್ಷಕ್ಕೆ ಆಘಾತವನ್ನು ಉಂಟುಮಾಡಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಆರ್.ಜಿ.ಕರ್ ಆಸ್ಪತ್ರೆಯ ಡೀನ್ ಸಂದೀಪ್ ಘೋಷ್ ವಿರುದ್ಧ ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿರುವುದಕ್ಕೆ ಅವರ ಪಕ್ಷದಲ್ಲೂ ಅಸಮಾಧಾನ ಉಂಟುಮಾಡಿದೆ.

ಈ ಹಿನ್ನೆಲೆಯಲ್ಲಿ, ಮಹಿಳಾ ವೈದ್ಯೆ ಹತ್ಯೆ ಪ್ರಕರಣದಲ್ಲಿ ತನಿಖೆಗೆ ಮುಂದಾಗದೆ ಹಣ ಪಾವತಿಗೆ ಯತ್ನಿಸಿರುವುದು ಯಾರನ್ನೋ ಉಳಿಸುವ ಕೃತ್ಯ ಎನ್ನಲಾಗುತ್ತಿದೆ. ಇದರಿಂದಾಗಿ ಮಮತಾ ಬ್ಯಾನರ್ಜಿ ವಿರುದ್ಧ ಹಿಂದೆಂದೂ ಇಲ್ಲದ ಅಸಮಾಧಾನ ಜನರಲ್ಲಿ ಮೂಡಿದೆ.

ತೃಣಮೂಲದ ಮಾಜಿ ಸಚಿವರಾದ ಪಾರ್ಥ ಚಟರ್ಜಿ ಮತ್ತು ಜ್ಯೋತಿಪ್ರಿಯಾ ಮಲ್ಲಿಕ್ ವಿರುದ್ಧದ ಭ್ರಷ್ಟಾಚಾರ ಆರೋಪಗಳು ಸಾಕಷ್ಟು ಚರ್ಚೆಯಾಗುತ್ತಿವೆ.

ಕೋಲ್ಕತ್ತಾ ವೈದ್ಯೆ ಹತ್ಯೆಯ ಪರಿಣಾಮ ನಗರ ಪ್ರದೇಶದಲ್ಲಿ ಮಾತ್ರವಲ್ಲದೆ ಗ್ರಾಮೀಣ ಪ್ರದೇಶದಲ್ಲೂ ಸದ್ದು ಮಾಡುತ್ತಿದೆ ಎಂದು ಸಮೀಕ್ಷೆಯಿಂದ ತಿಳಿದುಬಂದಿದೆ. ಈ ಫಲಿತಾಂಶಗಳಿಂದ ಮಮತಾ ಆಘತಕ್ಕೆ ಒಳಗಾಗಿದ್ದಾರೆ ಎಂಬ ವರದಿಗಳಿವೆ.

“ಸಂದೀಪ್ ಘೋಷ್ ಅವರಂತಹ ಆರೋಪಿಯನ್ನು ಮಮತಾ ಬ್ಯಾನರ್ಜಿ ಏಕೆ ಬೆಂಬಲಿಸುತ್ತಿದ್ದಾರೆಂದು ನಮಗೆ ಅರ್ಥವಾಗುತ್ತಿಲ್ಲ” ಎಂದು ಹೆಸರು ಹೇಳಲು ಇಚ್ಛಿಸದ ತೃಣಮೂಲ ಕಾಂಗ್ರೆಸ್ ನ ಹಿರಿಯ ನಾಯಕರೊಬ್ಬರು ಅಸಮಾಧಾನ ಹೊರಹಾಕಿದ್ದಾರೆ.

ರಾಜಕೀಯ

ಏಪ್ರಿಲ್ 19 ರಿಂದ ಸಂಸತ್ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಎಲ್ಲಾ ಪಕ್ಷಗಳು ಚುನಾವಣಾ ಪ್ರಚಾರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿವೆ. ಆ ಮೂಲಕ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡ ಪ್ರಚಾರದಲ್ಲಿ ತೊಡಗಿದ್ದಾರೆ. ಇತ್ತೀಚಿಗೆ ತಲೆಗೆ ಪೆಟ್ಟಾದ ಕಾರಣ, ಕೆಲ ದಿನಗಳ ನಂತರ ಮತ್ತೆ ಸಕ್ರಿಯ ಪ್ರಚಾರದಲ್ಲಿ ತೊಡಗಿದ್ದಾರೆ.

ಅದರಂತೆ ನಿನ್ನೆ ಕೃಷ್ಣಾ ನಗರ ಕ್ಷೇತ್ರದ ತೃಣಮೂಲ ಕಾಂಗ್ರೆಸ್ ಅಭ್ಯರ್ಥಿ ಮಹುವಾ ಮೊಯಿತ್ರಾ ಅವರಿಗಾಗಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದರು. ಈ ಕುರಿತು ಮಾತನಾಡಿದ ಅವರು, “ಬಿಜೆಪಿ ಮತ್ತು ಅದರ ಮೈತ್ರಿಕೂಟ ದೇಶಾದ್ಯಂತ 400 ಸ್ಥಾನಗಳನ್ನು ಗೆಲ್ಲುವ ಬಗ್ಗೆ ಮಾತನಾಡುತ್ತಿದೆ. ನಾನು ನಿಮಗೆ (ಬಿಜೆಪಿ) ಸವಾಲು ಹಾಕುತ್ತೇನೆ. 400 ಸ್ಥಾನಗಳಲ್ಲಿ ಬೇಡ; ಬರೀ 200 ಸ್ಥಾನಗಳಲ್ಲಿ ಗೆದ್ದು ತೋರಿಸಿ.

ಅದೇ ರೀತಿ ಕಳೆದ 2021ರ ವಿಧಾನಸಭೆ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ 200ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂದು ಹೇಳಿತ್ತು. ಆದರೆ ಅಂತಿಮವಾಗಿ ಅವರಿಗೆ ಕೇವಲ 77 ಸ್ಥಾನಗಳು ಮಾತ್ರವೇ ಸಿಕ್ಕಿದ್ದು. ಆ 77 ರಲ್ಲಿ ಕೂಡ ಕೆಲವರು ನಮ್ಮಲ್ಲಿ (ತೃಣಮೂಲ ಕಾಂಗ್ರೆಸ್‌) ಸೇರಿಕೊಂಡಿದ್ದಾರೆ. ಹೀಗಾಗಿ ಬಿಜೆಪಿಯವರು ಹೇಳುವುದನ್ನು ಗಂಭೀರವಾಗಿ ಪರಿಗಣಿಸಬೇಡಿ’’ ಎಂದು ಹೇಳಿದರು.

ಮುಂದುವರಿದು ಮಾತನಾಡಿದ ಅವರು, “ಬಿಜೆಪಿ ಖಾಲಿ (ಡಮ್ಮಿ) ಪಕ್ಷ. ಬಿಜೆಪಿಯವರು ಜನರಿಗೆ ಸುಳ್ಳು ಭರವಸೆಗಳನ್ನು ಮಾತ್ರವೇ ನೀಡುತ್ತಾರೆ. ಸಿಎಎ (CAA) ಕಾನೂನು ಬದ್ಧವಾದ ನಾಗರಿಕರನ್ನು ವಿದೇಶಿಯರನ್ನಾಗಿ ಮಾಡುವ ತಂತ್ರವಾಗಿದೆ. ಸಿಎಎ ಮೊದಲು ಬಂದರೆ, ನಂತರ ಎನ್‌ಆರ್‌ಸಿ (NRC) ಬರುತ್ತದೆ. ಪಶ್ಚಿಮ ಬಂಗಾಳದಲ್ಲಿ ಸಿಎಎ, ಎನ್‌ಆರ್‌ಸಿಯಂತಹ ಯಾವುದನ್ನೂ ನಾವು ಅನುಮತಿಸುವುದಿಲ್ಲ.

ನೀವು ಮತ್ತೆ ಕೇಂದ್ರ ಬಿಜೆಪಿ ಸರ್ಕಾರವನ್ನು ನಂಬಿದರೆ, ಅವರು ನಿಮ್ಮನ್ನೂ ವಿದೇಶಿಯರನ್ನಾಗಿ ಮಾಡುತ್ತಾರೆ. ಬಿಜೆಪಿಯವರನ್ನು ಎಂದಿಗೂ ನಂಬಬೇಡಿ. ‘ಬಿಜೆಪಿ ನಾಯಕರು ಸಿಎಎಗೆ ಏಕೆ ಅರ್ಜಿ ಸಲ್ಲಿಸಲಿಲ್ಲ? ಏಕೆಂದರೆ ಅವರು ಅರ್ಜಿ ಸಲ್ಲಿಸಿದರೆ, ಅವರು ತಮ್ಮನ್ನು ವಿದೇಶಿಯರೆಂದು ಘೋಷಿಸಬೇಕು. ಹಾಗಾಗಿ ಅವರು ಇನ್ನು ಮುಂದೆ ಚುನಾವಣೆಗೆ ಸ್ಪರ್ಧಿಸುವಂತಿಲ್ಲ.” ಎಂದರು.

ರಾಜಕೀಯ

ಕೊಲ್ಕತ್ತಾ: 2024ರ ಸಂಸತ್ತಿನ ಚುನಾವಣೆಗಳು ಹತ್ತಿರವಾಗುತ್ತಿದ್ದಂತೆ, ಸೀಟು ಹಂಚಿಕೆಗೆ ಸಂಬಂಧಿಸಿದಂತೆ ರಾಜಕೀಯ ಪಕ್ಷಗಳ ನಡುವೆ ಮಾತುಕತೆಗಳು ತೀವ್ರಗೊಂಡಿವೆ. ಈ ಹಿನ್ನಲೆಯಲ್ಲಿ, ವಿರೋಧ ಪಕ್ಷಗಳ ‘ಇಂಡಿಯಾ’ ಮೈತ್ರಿಕೂಟದ ಸೀಟು ಹಂಚಿಕೆಗೆ ಸಂಬಂಧಿಸಿದಂತೆ ಹಲವು ಹಂತಗಳಲ್ಲಿ ಮಾತುಕತೆ ನಡೆಸಲಾಗುತ್ತಿದೆ.

ಪಶ್ಚಿಮ ಬಂಗಾಳದಲ್ಲಿ, ಕಾಂಗ್ರೆಸ್ 8 ರಿಂದ 14 ಸ್ಥಾನಗಳನ್ನು ಕೇಳುವ ಮೂಲಕ ತೃಣಮೂಲ ಕಾಂಗ್ರೆಸ್ ಜೊತೆ ಮಾತುಕತೆ ಆರಂಭಿಸಿತು. ಆದರೆ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ, ‘ಪಶ್ಚಿಮ ಬಂಗಾಳದಲ್ಲಿ ನಿಮಗೆ ಒಬ್ಬ ಶಾಸಕರೂ ಇಲ್ಲ. ಎರಡು ಲೋಕಸಭಾ ಕ್ಷೇತ್ರಗಳನ್ನು ನೀಡುತ್ತೇನೆ. ಆ ಎರಡು ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲುವನ್ನು ಖಚಿತಪಡಿಸಿಕೊಳ್ಳೋಣ’ ಎಂದರು. ಅಂತಿಮವಾಗಿ ಕಾಂಗ್ರೆಸ್‌ಗೆ 6 ಲೋಕಸಭಾ ಕ್ಷೇತ್ರಗಳನ್ನು ನೀಡುವಂತೆ ಒತ್ತಾಯಿಸಿತು.

ಈ ಹಿನ್ನಲೆಯಲ್ಲಿ, ಇತ್ತೀಚೆಗೆ ಮಾಲ್ದಾ ಪ್ರದೇಶದಲ್ಲಿ ನಡೆದ ಸಭೆಯೊಂದರಲ್ಲಿ ಮಾತನಾಡಿದ ಮಮತಾ ಬ್ಯಾನರ್ಜಿ, ‘ಕಾಂಗ್ರೆಸ್‌ಗೆ ಒಂದು ಸ್ಥಾನವನ್ನೂ ನೀಡುವುದಿಲ್ಲ’ ಎಂದು ಹೇಳಿದರು. ಅಲ್ಲದೆ, ‘ಇಂಡಿಯಾ’ ಮೈತ್ರಿಕೂಟದಲ್ಲಿ ತನ್ನ ಭಾಗವಹಿಸುವಿಕೆಯನ್ನು ಸದ್ಯಕ್ಕೆ ತಡೆಹಿಡಿದಿರುವುದಾಗಿಯೂ ಚುನಾವಣೆಯ ಫಲಿತಾಂಶವನ್ನು ಆಧರಿಸಿ, ಚುನಾವಣೆಯ ನಂತರ ಈ ನಿರ್ಧಾರವನ್ನು ಮರುಪರಿಶೀಲನೆ ಮಾಡುವುದಾಗಿಯೂ ಅವರು ಹೇಳಿದರು.

ಈ ಹಿನ್ನಲೆಯಲ್ಲಿ, ಕಾಂಗ್ರೆಸ್ ಮತ್ತು ತೃಣಮೂಲ ಕಾಂಗ್ರೆಸ್ ಪಕ್ಷಗಳ ನಡುವಿನ ಮಾತುಕತೆ ಪುನರಾರಂಭವಾಗಿದ್ದು, ಸಕಾರಾತ್ಮಕ ದಿಕ್ಕಿನಲ್ಲಿ ಸಾಗುತ್ತಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. ಒಮ್ಮತಕ್ಕೆ ಬಂದರೆ, ಸದ್ಯದಲ್ಲೇ ಘೋಷಣೆ ಹೊರಬೀಳಲಿದೆ ಎಂದು ವರದಿಯಾಗಿದೆ.

ಕಾಂಗ್ರೆಸ್ ಪಕ್ಷವು, ಪಶ್ಚಿಮ ಬಂಗಾಳದ 42 ಸ್ಥಾನಗಳ ಪೈಕಿ ಬರ್ಹಾಂಪುರ್, ದಕ್ಷಿಣ ಮಾಲ್ದಾ, ಉತ್ತರ ಮಾಲ್ದಾ, ರಾಯ್‌ಗಂಜ್, ಡಾರ್ಜಿಲಿಂಗ್ ಮತ್ತು ಪುರುಲಿಯಾ ಮುಂತಾದ 6 ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಬಯಸುತ್ತಿದೆ. ಈ ಪೈಕಿ 5 ಸ್ಥಾನಗಳನ್ನು ಕಾಂಗ್ರೆಸ್ ಪಡೆಯಲಿದೆ ಎಂದು ನಂಬುವುದಾಗಿ ಆ ಪಕ್ಷದ ಮೂಲಗಳು ತಿಳಿಸಿವೆ.

ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ ಮತ್ತು ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷದೊಂದಿಗೆ ಸೀಟು ಹಂಚಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಮಾತುಕತೆ ನಡೆಸಿತ್ತು. ಅದರಂತೆ ಉತ್ತರ ಪ್ರದೇಶದ 80 ಕ್ಷೇತ್ರಗಳ ಪೈಕಿ 17 ಕ್ಷೇತ್ರಗಳಲ್ಲಿ ಮತ್ತು ದೆಹಲಿಯ 7 ಕ್ಷೇತ್ರಗಳ ಪೈಕಿ 3 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸ್ಪರ್ಧಿಸುತ್ತಿದೆ ಎಂಬುದು ಗಮನಾರ್ಹ.

ದೇಶ

ಕೋಲ್ಕತ್ತಾ: ಅಯೋಧ್ಯೆಯಲ್ಲಿ ರಾಮ ಮಂದಿರದ ಶಂಕುಸ್ಥಾಪನೆ ಸಮಾರಂಭದ ನಡುವೆ ಜನವರಿ 22 ರಂದು ಕೋಲ್ಕತ್ತಾದಲ್ಲಿ ಎಲ್ಲಾ ಧರ್ಮಗಳ ಜನರೊಂದಿಗೆ ‘ಸಾಮರಸ್ಯಕ್ಕಾಗಿ ರ‍್ಯಾಲಿ’ಯನ್ನು ಮುನ್ನಡೆಸುವುದಾಗಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ ಘೋಷಿಸಿದ್ದಾರೆ.

ಇಂದು ಪಶ್ಚಿಮ ಬಂಗಾಳದ ರಾಜ್ಯ ಕಾರ್ಯಾಲಯದ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, “ಜನವರಿ 22 ರಂದು ಕಾಳಿಘಾಟ್ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತೇನೆ. ನಂತರ ಎಲ್ಲ ಧರ್ಮದವರೊಂದಿಗೆ ‘ಸಾಮರಸ್ಯ ರ‍್ಯಾಲಿಯಲ್ಲಿ ಪಾಲ್ಗೊಳ್ಳುತ್ತೇನೆ. ಇದಕ್ಕೂ ಬೇರೆ ಯಾವುದೇ ಕಾರ್ಯಕ್ರಮಕ್ಕೂ ಸಂಬಂಧವಿಲ್ಲ” ಎಂದು ಹೇಳಿದ್ದಾರೆ.

ಆಡಳಿತಾರೂಢ ಟಿಎಂಸಿಯ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ಕಾಳಿಘಾಟ್ ದೇವಸ್ಥಾನದಲ್ಲಿ ಕಾಳಿ ದೇವಿಗೆ ಪೂಜೆ ಸಲ್ಲಿಸಿದ ನಂತರ ದಕ್ಷಿಣ ಕೋಲ್ಕತ್ತಾದ ಹಜ್ರಾ ಕ್ರಾಸಿಂಗ್‌ನಿಂದ ಮೆರವಣಿಗೆಯನ್ನು ಪ್ರಾರಂಭಿಸುತ್ತಾರೆ ಎಂದು ತಿಳಿದು ಬಂದಿದೆ. ಅಯೋಧ್ಯೆಯಲ್ಲಿ ರಾಮ ಮಂದಿರದ ಶಂಕುಸ್ಥಾಪನೆ ಸಮಾರಂಭ ನಡೆಯುವ ಅದೇ ದಿನ ಕೋಲ್ಕತ್ತಾದಲ್ಲಿ ‘ಸಾಮರಸ್ಯ ರ‍್ಯಾಲಿ’ ಆಯೋಜಿಸಿರುವುದು ಗಮನಾರ್ಹ.

ದೇಶ

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಪಡಿತರ ಹಗರಣದ ತನಿಖೆಗೆ ತೆರಳಿದ್ದ ಜಾರಿ ಅಧಿಕಾರಿಗಳ ಮೇಲೆ ಆ ಪ್ರದೇಶದ ಜನರು ಹಲ್ಲೆ ನಡೆಸಿದ್ದಾರೆ. ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಪಶ್ಚಿಮ ಬಂಗಾಳದಲ್ಲಿ ಆಡಳಿತ ನಡೆಸುತ್ತಿದೆ. ಪಡಿತರ ಹಗರಣಕ್ಕೆ ಸಂಬಂಧಿಸಿದಂತೆ ಕಳೆದ ಹಲವು ತಿಂಗಳಿಂದ ಜಾರಿ ಅಧಿಕಾರಿಗಳು ದಾಳಿ ನಡೆಸುತ್ತಿದ್ದಾರೆ. ಆ ಮೂಲಕ ಇಂದು (ಜ.5) ಬೆಳಗ್ಗೆ ತೃಣಮೂಲ ಕಾಂಗ್ರೆಸ್ ಪಕ್ಷದ ಷಹಜಹಾನ್ ಶೇಖ್ ಅವರ ಮನೆಯ ಶೋಧಕ್ಕೆ ತೆರಳಿದ್ದರು.

ಅವರು ಸಂದೇಶಕಲಿ ಪ್ರದೇಶದ ಬಳಿ ಹೋದಾಗ, ಸದರಿ ಪ್ರದೇಶದಲ್ಲಿ ವಾಸಿಸುತ್ತಿದ್ದ 200ಕ್ಕೂ ಹೆಚ್ಚು ಸ್ಥಳೀಯ ಜನರು ಜಾರಿ ಅಧಿಕಾರಿಗಳು ಮತ್ತು ಅರೆಸೇನಾ ಪಡೆಗಳನ್ನು ಸುತ್ತುವರಿದು ಹೊಡೆದು ಓಡಿಸಿದ್ದಾರೆ. ಇದರಲ್ಲಿ ಅವರ ಕಾರಿನ ಗಾಜುಗಳು ಮುರಿದು ಹಾನಿಗೊಳಗಾಗಿವೆ; ಕೆಲ ಅಧಿಕಾರಿಗಳ ತಲೆಯಿಂದ ರಕ್ತ ಸುರಿಯುತ್ತಿತ್ತು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ತನಿಖೆಗೆ ಹೋದ ಜಾರಿ ಅಧಿಕಾರಿಗಳ ಮೇಲೆ ಸಾರ್ವಜನಿಕರು ಹಲ್ಲೆ ನಡೆಸಿದ ಘಟನೆಯಿಂದ ಅಲ್ಲಿ ಗದ್ದಲ ಉಂಟಾಗಿದೆ.

ದೇಶ ರಾಜಕೀಯ

ಡಿ.ಸಿ.ಪ್ರಕಾಶ್
dynamicleaderdesk@gmail.com

ಸಂಸತ್ತಿನ ಚಳಿಗಾಲದ ಅಧಿವೇಶನದ 5ನೇ ದಿನವಾದ ಇಂದು (ಡಿ.8) ಲೋಕಸಭೆಯಲ್ಲಿ ಪ್ರಶ್ನೋತ್ತರ ಸಮಯ ಆರಂಭವಾದಾಗ ತೃಣಮೂಲ ಕಾಂಗ್ರೆಸ್ ಎಂ.ಪಿ. ಮಹುವಾ ಮೊಯಿತ್ರಾ ಅವರ ಉಚ್ಚಾಟನೆಗೆ ಸಂಬಂಧಿಸಿದಂತೆ ಲೋಕಸಭೆಯ ನೈತಿಕ ಸಮಿತಿಯ ವರದಿ ಮಂಡನೆಯಾಗಬೇಕಿದ್ದ ಸಂದರ್ಭದಲ್ಲಿ ಉಂಟಾದ ಗಲಭೆಯಿಂದ ಸ್ಪೀಕರ್ ಸದನವನ್ನು 12 ಗಂಟೆಗೆ ಮುಂದೂಡಿದರು.

ನಂತರ ಮತ್ತೆ 12 ಗಂಟೆಗೆ ಲೋಕಸಭೆ ಪ್ರಾರಂಭವಾಯಿತು. ಆಗ ಬಿಜೆಪಿ ಸಂಸದ ವಿಜಯ್ ಸೋಂಕರ್ ಲೋಕಸಭೆಯಲ್ಲಿ ತೃಣಮೂಲ ಕಾಂಗ್ರೆಸ್ ಸದಸ್ಯೆ ಮಹುವಾ ಮೊಯಿತ್ರಾ ಅವರನ್ನು ವಜಾಗೊಳಿಸುವ ವರದಿಯನ್ನು ಮಂಡಿಸಿದರು. ಈ ನಿರ್ಣಯವನ್ನು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಪ್ರಸ್ತಾಪಿಸಿದರು. ಇದರ ಬೆನ್ನಲ್ಲೇ ತೃಣಮೂಲ ಮತ್ತು ಕಾಂಗ್ರೆಸ್ ಸದಸ್ಯರು ವರದಿಯ ನಕಲು ಪ್ರತಿ ನೀಡುವಂತೆ ಒತ್ತಾಯಿಸಿ ಧರಣಿ ನಡೆಸಿದರು.

“ಮೊಯಿತ್ರಾ ಅವರನ್ನು ಸದನದಿಂದ ಹೊರಹಾಕಲು ಶಿಫಾರಸು ಮಾಡುವ ವರದಿಯ ಮೇಲಿನ ಮತದಾನದ ಮೊದಲು ಚರ್ಚೆ ನಡೆಸಬೇಕು” ಎಂದು ತೃಣಮೂಲ ಕಾಂಗ್ರೆಸ್ ಸಂಸದ ಕಲ್ಯಾಣ್ ಬ್ಯಾನರ್ಜಿ ಆಗ್ರಹಿಸಿದರು. ವಿರೋಧ ಪಕ್ಷಗಳು ಪ್ರತಿಭಟನೆ ಮುಂದುವರಿಸಿದ್ದರಿಂದ ಲೋಕಸಭೆಯನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಯಿತು. ಆಗ ಸ್ಪೀಕರ್ ಆಗಿದ್ದ ಬಿಜೆಪಿ ಸಂಸದ ರಾಜೇಂದ್ರ ಅಗರ್ವಾಲ್, “ಸದ್ಯ ವರದಿ ಮಾತ್ರ ಸಲ್ಲಿಕೆಯಾಗಿದೆ. ಈ ಬಗ್ಗೆ ಸದನ ನಿರ್ಧರಿಸಲಿದೆ” ಎಂದರು.

ನಂತರ 2 ಗಂಟೆಗೆ ಸದನ ಆರಂಭವಾದಾಗ, ಮಹುವಾ ಕುರಿತ ನಿರ್ಣಯದ ಮೇಲೆ ಚರ್ಚೆ ನಡೆಯಿತು. ಚರ್ಚೆಯ ನಂತರ ನಿರ್ಣಯವನ್ನು ಅಂಗೀಕರಿಸಲಾಯಿತು. ಈ ನಿರ್ಣಯವನ್ನು ಅಂಗೀಕರಿಸಿದ ನಂತರ, ಮಹುವಾ ಮೊಯಿತ್ರಾ ಅವರನ್ನು ಸಂಸದ ಸ್ಥಾನದಿಂದ ವಜಾಗೊಳಿಸುವುದಾಗಿ ಸ್ಪೀಕರ್ ಓಂ ಬಿರ್ಲಾ ಅವರು ಘೋಷಿಸಿದರು. ಈ ನಿರ್ಧಾರವನ್ನು ವಿರೋಧಿಸಿ ಪ್ರತಿಪಕ್ಷ ಸದಸ್ಯರು ಸಭಾತ್ಯಾಗ ಮಾಡಿದರು.

ಈ ವಿಚಾರದಲ್ಲಿ ಮಹುವಾ ಮೊಯಿತ್ರಾ ಅವರು ಆರೋಪ ಮಾಡಿದ ದಿನದಿಂದಲೂ ಅದನ್ನು ನಿರಾಕರಿಸುತ್ತಲೇ ಬಂದಿರುವುದು ಗಮನಾರ್ಹ. ನಂತರ ಸಂಸತ್ತಿನ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಮಹುವಾ ಮೊಯಿತ್ರಾ, “ಸಂಪೂರ್ಣ ತನಿಖೆ ನಡೆಸದೆ ನನ್ನ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಇಡೀ ಸರ್ಕಾರ ಅದಾನಿ ಎಂಬ ಒಬ್ಬ ವ್ಯಕ್ತಿಗಾಗಿ ಕಾರ್ಯನಿರ್ವಹಿಸುತ್ತಿದೆ. ಜನರ ವೇದಿಕೆಯಲ್ಲಿ ಅದಾನಿ ವಿರುದ್ಧ ಮಾಡಿರುವ ಆರೋಪಗಳ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ.

ಬದಲಾಗಿ ಅದಾನಿಯನ್ನು ಉಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಮಹಿಳೆಯರು ಮತ್ತು ಅಲ್ಪಸಂಖ್ಯಾತರ ಹಕ್ಕುಗಳನ್ನು ಕೇಂದ್ರ ಸರ್ಕಾರ ಕಸಿದುಕೊಳ್ಳುತ್ತಿದೆ. ಸಂಸತ್ತಿನಲ್ಲಿ 300ಕ್ಕೂ ಹೆಚ್ಚು ಸದಸ್ಯರಿರುವ ಬಿಜೆಪಿಗೆ ಒಬ್ಬ ಮುಸ್ಲಿಂ ಸದಸ್ಯರಿಲ್ಲ. ದಮನಕಾರಿ ನೀತಿಯನ್ನು ಅನುಸರಿಸುತ್ತಿರುವ ಬಿಜೆಪಿ ಸರ್ಕಾರದ ಅಂತ್ಯ ಸಮೀಪಿಸಿದೆ” ಎಂದು ಭಾವೋದ್ವೇಗದಿಂದ ಹೇಳಿದರು.

ಮಹುವಾ ಮೊಯಿತ್ರಾ ಅವರನ್ನು ವಜಾಗೊಳಿಸಿರುವುದನ್ನು ವಿರೋಧ ಪಕ್ಷಗಳು ಖಂಡಿಸಿವೆ. “ಮಹುವಾ ಮೊಯಿತ್ರಾ ಅವರ ಕಡೆಯಿಂದ ವಿವರಣೆ ಕೇಳದೆ ಕ್ರಮ ಕೈಗೊಳ್ಳಲಾಗಿದೆ” ಎಂದು ವಿರೋಧ ಪಕ್ಷಗಳು ಖಂಡಿಸಿವೆ.

ಏತನ್ಮಧ್ಯೆ, ಸಭೆಯಲ್ಲಿ ಪಾಲ್ಗೊಳ್ಳುವ ಮೊದಲು ಮಹುವಾ ಮೊಯಿತ್ರಾ ಅವರು ಸಂಸತ್ತಿನ ಸಂಕೀರ್ಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. “ದುರ್ಗಾ ಮಾತೆ ಬಂದಿದ್ದಾಳೆ; ಈಗ ನಾವು ನೋಡೋಣ. ಒಬ್ಬ ವ್ಯಕ್ತಿಯ ಮೇಲೆ ದುಷ್ಟ ಶಕ್ತಿ ಬಿದ್ದಾಗ, ಜ್ಞಾನವು ಮೊದಲು ನಾಶವಾಗುತ್ತದೆ. ವಸ್ತ್ರಾಹರಣ ಆರಂಭಿಸಿದ್ದಾರೆ; ಈಗ ನೀವು ಮಹಾಭಾರತ ಯುದ್ಧವನ್ನು ನೋಡುತ್ತೀರಿ” ಎಂದು ಹೇಳಿದರು.

ದೇಶ

ಕೋಲ್ಕತ್ತಾ: ಸಂಸತ್ತಿನಲ್ಲಿ ಆಡಳಿತಾರೂಢ ಬಿಜೆಪಿ ಸರ್ಕಾರದ ವಿರುದ್ಧ ಹಾಗೂ ಮೋದಿ ಮತ್ತು ಅದಾನಿ ವಿರುದ್ಧ ಪ್ರಬಲವಾಗಿ ವಾದ ಮಂಡಿಸುತ್ತಿರುವವರಲ್ಲಿ ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಪ್ರಮುಖರು. ಇವರು, ಸಂಸತ್ತಿನಲ್ಲಿ ಅದಾನಿಯ ಕುರಿತು ಪ್ರಶ್ನಿಸಲು ಉದ್ಯಮಿ ಹಿರಾನಂದಾನಿಯಿಂದ ಹಣ ಮತ್ತು ಉಡುಗೊರೆಗಳನ್ನು ಲಂಚವಾಗಿ ಪಡೆದರು ಎಂದು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಸಾರ್ವಜನಿಕವಾಗಿ ಆರೋಪ ಮಾಡಿದ್ದಾರೆ.

ಅಲ್ಲದೆ, ಹಿರಾನಂದಾನಿ ಮತ್ತು ಅವರ ರಿಯಲ್ ಎಸ್ಟೇಟ್ ಕಂಪನಿ ತಮ್ಮ ಸ್ವಂತ ಲಾಭಕ್ಕಾಗಿ ಬಳಸಿಕೊಳ್ಳಲು ಲೋಕಸಭೆಯ ವೆಬ್‌ಸೈಟ್ ಮತ್ತು ತಮ್ಮ ಲಾಗಿನ್ ಐಡಿಯನ್ನು ಮಹುವಾ ಮೊಯಿತ್ರಾ ನೀಡಿದ್ದಾರೆ ಎಂದು ನಿಶಿಕಾಂತ್ ದುಬೆ ಆರೋಪಿಸಿದ್ದಾರೆ. ಈ ಬಗ್ಗೆ ನಿಶಿಕಾಂತ್ ದುಬೆ ಅವರು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ದೂರು ಪತ್ರ ಬರೆದ ನಂತರ, ಈ ವಿಚಾರದಲ್ಲಿ ಕ್ರಮ ಕೈಗೊಂಡಿರುವ ಸಂಸದೀಯ ನೈತಿಕ ಸಮಿತಿ, ನವೆಂಬರ್ 2 ರಂದು ವಿಚಾರಣೆಗೆ ಹಾಜರಾಗುವಂತೆ ಮಹುವಾ ಮೊಯಿತ್ರಾ ಅವರಿಗೆ ಆದೇಶ ಮಾಡಿತು.

ಈ ಹಿನ್ನಲೆಯಲ್ಲಿ, ನನ್ನನ್ನು ಸಂಸತ್ತಿನಿಂದ ಹೊರಹಾಕಲು ಬಯಸುವವರು ನನ್ನ ತಲೆ ಕೂದಲನ್ನೂ ಮುಟ್ಟಲಾಗದು ಎಂದು ತೃಣಮೂಲ ಕಾಂಗ್ರೆಸ್ ಸಂಸದ ಮಹುವಾ ಮೊಯಿತ್ರಾ ಹೇಳಿದ್ದಾರೆ. ಸಂಸತ್ತಿನಲ್ಲಿ ಅದಾನಿಯ ಕುರಿತು ಪ್ರಶ್ನಿಸಲು ಉದ್ಯಮಿ ದರ್ಶನ್ ಹಿರಾನಂದಾನಿ ಅವರಿಂದ ಲಂಚವಾಗಿ ಉಡುಗೊರೆ ಪಡೆದಿರುವ ಆರೋಪಕ್ಕೆ ಮೇಲಿನಂತೆ ಮಹುವಾ ತೀಕ್ಷಣವಾಗಿ ಪ್ರತಿಕ್ರಿಯಿಸಿದ್ದಾರೆ.