ಮತದಾನ ಹಕ್ಕು ಮತ್ತು ಮೀಸಲಾತಿ ಇವೆರಡೂ ನಮ್ಮ ಕಣ್ಣುಗಳಿದ್ದಂತೆ; ಅದನ್ನು ಯಾವತ್ತೂ ಕಳೆದುಕೊಳ್ಳಬಾರದು: ಡಿ.ಸಿ.ಪ್ರಕಾಶ್ » Dynamic Leader
October 31, 2024
ಸಂಪಾದಕೀಯ

ಮತದಾನ ಹಕ್ಕು ಮತ್ತು ಮೀಸಲಾತಿ ಇವೆರಡೂ ನಮ್ಮ ಕಣ್ಣುಗಳಿದ್ದಂತೆ; ಅದನ್ನು ಯಾವತ್ತೂ ಕಳೆದುಕೊಳ್ಳಬಾರದು: ಡಿ.ಸಿ.ಪ್ರಕಾಶ್

ಡಿ.ಸಿ.ಪ್ರಕಾಶ್, ಸಂಪಾದಕರು
dynamicleaderdesk@gmail.com

“ಮೂರು ಪರ್ಸೆಂಟ್ ಜನರಿಗಾಗಿ ಬಹುಸಂಖ್ಯಾತರಾದ ದಲಿತ, ಶೂದ್ರ ವರ್ಗದ ಯುವ ಸಮುದಾಯವು ಹಗಲಿರಳು ದುಡಿದು, ಅಪರಾಧ ಕೃತ್ಯಗಳಲ್ಲಿ ಸಿಲುಕಿಕೊಂಡಿರುವುದು ವೇದನೆಯಾಗಿದೆ”

ಜನವರಿ 25, 2011 ರಂದು, ಭಾರತದಲ್ಲಿ ಮೊದಲ ಬಾರಿಗೆ ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಲಾಯಿತು. ಚುನಾವಣಾ ಆಯೋಗವು ಜನವರಿ 1 ರಂದು 18 ವರ್ಷ ತುಂಬಿದ ಅರ್ಹ ಮತದಾರರನ್ನು ಗುರುತಿಸಲು ಪ್ರಾರಂಭಿಸಿದ ಈ ದಿನಕ್ಕೆ ಇತಿಹಾಸವಿದೆ. ತಮ್ಮನ್ನು ಮತದಾರರಾಗಿ ನೋಂದಾಯಿಸಿಕೊಂಡವರಿಗೆ ಮತದಾರ ಗುರುತಿನ ಚೀಟಿ (EPIC) ನೀಡಲಾಗುತ್ತದೆ.

ಪ್ರತಿ ವರ್ಷ ಮತದಾರರ ದಿನವು ಜನವರಿ 25 ರಂದು ಆಚರಿಸಲಾಗುತ್ತದೆ; ಇದು ಭಾರತದ ಚುನಾವಣಾ ಆಯೋಗದ ಸಂಸ್ಥಾಪನಾ ದಿನವನ್ನು ಸಹ ಸೂಚಿಸುತ್ತದೆ. 1950ರಲ್ಲಿ ಭಾರತದ ಮೊದಲ ಚುನಾವಣಾ ಆಯೋಗವು ಜಾರಿಗೆ ಬಂದಿತು. ಈ ದಿನವು ಮತದಾನದ ಹಕ್ಕನ್ನು ನೆನಪಿಸುತ್ತದೆ ಮತ್ತು ಮತದಾನ ಹಾಗೂ ಮತದಾರರ ನೋಂದಣಿಯ ಪರಿಕಲ್ಪನೆಯ ಮೇಲೆ ಕೇಂದ್ರೀಕರಿಸುತ್ತದೆ.

ಭಾರತದ ಪ್ರಜಾಪ್ರಭುತ್ವವು ಮತದಾನದಲ್ಲಿ ಅಡಗಿದೆ. ಮತ್ತು ಈ ದಿನವನ್ನು ಆಚರಿಸುವುದರಿಂದ ದೇಶದ ಚುನಾವಣಾ ಪ್ರಕ್ರಿಯೆಯ ಭಾಗವಾಗಿರುವ ಮಹತ್ವವನ್ನು ಹರಡುತ್ತದೆ. ಭಾರತದಲ್ಲಿ ಮತದಾರರ ಸಕ್ರಿಯ ಭಾಗವಹಿಸುವಿಕೆಯನ್ನು ಹೆಚ್ಚಿಸಲು ದಿನವು ತನ್ನ ಪ್ರಾಮುಖ್ಯತೆಯನ್ನು ಹೊಂದಿದೆ.

ದೇಶದ ಭವಿಷ್ಯದ ಅಭಿವೃದ್ಧಿಗಾಗಿ ಯುವ ಪೀಳಿಗೆಯಿಂದ ಆಯ್ಕೆಯಾಗುವ ಸರಿಯಾದ ನಾಯಕತ್ವ ರಾಷ್ಟ್ರಕ್ಕೆ ಅಗತ್ಯವಿದೆ. ಆದರೆ, ಪ್ರಜಾಭುತ್ವಕ್ಕೆ ಮತ್ತು ಸಂವಿಧಾನಕ್ಕೆ ಮಾರಕವಾಗಿರುವ ನಾಯಕತ್ವಕ್ಕೆ ನಾವು ಮತ ಚಲಾಯಿಸಿದ್ದೇವೆ ಎಂಬ ಆತಂಕವನ್ನು ಸೃಷ್ಟಿಸಲಾಗಿದೆ. ಇದನ್ನು ಹೆಚ್ಚಿನ ಮತದಾರರಲ್ಲಿ ಕಾಣಬಹುದು.

ಕೇಂದ್ರದಲ್ಲಿ ನಮ್ಮನ್ನು ಆಳುತ್ತಿರುವ ಮೋದಿ ನೇತೃತ್ವದ ಬಿಜೆಪಿ ಸರ್ಕಾರ, ಕಾರ್ಪೊರೇಟ್ ಪರವಾದ ಸರ್ಕಾರವಾಗಿದ್ದರೂ ನಿರುದ್ಯೋಗ ಸಮಸ್ಯೆ ಬಗೆಹರಿಯಲಿಲ್ಲ. ಯಾಂತ್ರೀಕರಣ, ಕಂಪ್ಯೂಟರೀಕರಣ ಹಾಗೂ ವಿಪರೀತವಾದ ಉದ್ಯೋಗ ಕಡಿತವೇ ನಿರುದ್ಯೋಗಕ್ಕೆ ಕಾರಣವಾಗಿದೆ. ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಎಂಬುದು ಚುನಾವಣೆಯ “ಮೋಡಿ ಮಸ್ತಾನ್” ಗಿಮಿಕ್ ಎಂಬುದನ್ನು ಮತದಾರ ಬಂಧುಗಳಿಗೆ ಅರ್ಥವಾಗಿದೆ.

ನಿರೋದ್ಯೋಗಿ ಯುವಕರಿಗೆ ಸಂಘಪರಿವಾರಗಳಲ್ಲಿ ಫುಲ್ ಟೈಂ ಬಿಟ್ಟಿ ನೌಕರಿ ಕೊಡಿಸುವುದೇ ದೊಡ್ಡ ಸಾದನೆಯಾಗಿದೆ. ರಾಷ್ಟ್ರಸೇವೆ ಎಂಬ ಹೆಸರಿನಲ್ಲಿ, ಅಲ್ಪಸಂಖ್ಯಾತರಾದ ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರ ವಿರುದ್ಧ ವರ್ತಿಸುವುದು, ಸಾಮೂಹಿಕ ಅತ್ಯಾಚಾರ ಮಾಡುವುದು, ಸಂಘಟಿತ ಅಪರಾಧ ಕೃತ್ಯಗಳಲ್ಲಿ ತೊಡಗಿಸಿಕೊಳ್ಳುವುದು, ದ್ವೇಶ ಭಾಷಣ ಮಾಡುವುದು, ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾನ್ ನಾಯಕರುಗಳನ್ನು ಅವಮಾನಿಸಿ ಮಾತನಾಡುವುದು ಇತ್ಯಾದಿಗಳು ಇವರಿಗೆ ನೀಡಿದ ಜವಾಬ್ದಾರಿಗಳಾಗಿವೆ.

ರಾಷ್ಟ್ರಸೇವೆ, ದೇಶಭಕ್ತಿಯ ಅಮಲಿನಲ್ಲಿ ಸಿಲುಕಿಕೊಂಡಿರುವ ಯುವ ಪೀಳಿಗೆಯನ್ನು ಅದರಿಂದ ಹೊರತೆಗೆಯುವುದು ನಮ್ಮ ಮೊದಲ ಆದ್ಯತೆಯಾಗಿರಬೇಕು. ಮೂರು ಪರ್ಸೆಂಟ್ ಜನರಿಗಾಗಿ ಬಹುಸಂಖ್ಯಾತರಾದ ದಲಿತ, ಶೂದ್ರ ವರ್ಗದ ಯುವ ಸಮುದಾಯವು ಹಗಲಿರಳು ದುಡಿದು, ಅಪರಾಧ ಕೃತ್ಯಗಳಲ್ಲಿ ಸಿಲುಕಿಕೊಂಡಿರುವುದು ವೇದನೆಯಾಗಿದೆ. ರಾಷ್ಟ್ರೀಯ ಮತದಾರರ ದಿನವಾದ ಇಂದು ಮೊದಲ ಬಾರಿಗೆ ಮತದಾರರಾಗಿರುವ ಯುವ ಸಮುದಾಯಕ್ಕೆ ಭಾರತೀಯ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಆಶಯಗಳನ್ನು ಹೇಳಿಕೊಡುವ ಕೆಲಸಗಳು ಆಗಬೇಕಿದೆ.

ಅದರ ಜೊತೆಯಲ್ಲಿ, ಸಂಘಪರಿವಾರದ ಜೊತೆಗೆ ಗುರುತಿಸಿಕೊಂಡು, ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ, ಜೈಲು ಶಿಕ್ಷೆ ಅನುಭವಿಸುತ್ತಿರುವ ದಲಿತ, ಶೂದ್ರ ಯುವಕರಿಗೆ ಜೈಲಿನಲ್ಲಿ ವಿಶೇಷ ತರಗತಿಗಳನ್ನು ನಡೆಸಿ, ಭಾರತೀಯ ಇತಿಹಾಸ, ಸ್ವಾತಂತ್ರ್ಯ ಚಳುವಳಿ, ಪ್ರಜಾಪ್ರಭುತ್ವ, ಸಂವಿಧಾನ, ರಾಜಕೀಯ ವ್ಯವಸ್ಥೆ, ಬಹುಸಂಸ್ಕೃತಿ, ಭಾಷಾ ಸಂಸ್ಕೃತಿ, ಜಾತಿ ರಚನೆ, ಭಕ್ತಿ ಚಳುವಳಿ, ಸಾಮಾಜಿಕ ನ್ಯಾಯ ಚಳುವಳಿ ಹಾಗೂ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ನಮ್ಮ ನಾಯಕರುಗಳ ಬಗ್ಗೆ ತಿಳಿಸಿಕೊಡುವ ಪ್ರಯತ್ನವಾಗಬೇಕು. ಇದಕ್ಕೆ ನಮ್ಮ ಸರ್ಕಾರ ಜೈಲಿನಲ್ಲಿ ಕೊಳೆಯುತ್ತಿರುವ ಯುವ ಸಮುದಾಯದ ಮನ ಪರಿವರ್ತನೆಗಾಗಿ ನೂತನ ಯೋಜನೆಯೊಂದನ್ನು ರೂಪಿಸಬೇಕೆಂದು ಈ ಸಂದರ್ಭದಲ್ಲಿ ನಾವು ಸರ್ಕಾರವನ್ನು ಒತ್ತಯಿಸುತ್ತೇವೆ.

ಮತದಾನ ಹಕ್ಕು ಮತ್ತು ಮೀಸಲಾತಿ ಇವೆರಡೂ ನಮ್ಮ ಕಣ್ಣುಗಳಿದ್ದಂತೆ. ಅದನ್ನು ತಂದುಕೊಟ್ಟವರು ನಮ್ಮ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು. ಅದನ್ನು ಯಾವತ್ತೂ ಕಳೆದುಕೊಳ್ಳಬಾರದು. ಪ್ರಾಣತೆತ್ತಾದರೂ ಪ್ರಜಾಸತ್ತಾತ್ಮಕವಾಗಿ ಹೋರಾಡಿ ಅದನ್ನು ರಕ್ಷಿಸಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.

ಮತದಾರ ಬಂಧುಗಳಿಗೆ ರಾಷ್ಟ್ರೀಯ ಮತದಾರರ ದಿನ ಶುಭಾಶಯಗಳು.

Related Posts