370/400: ಮೋದಿ ಹೇಳುವ ಯಶಸ್ಸಿನ ಪ್ರಮಾಣ - ಉತ್ತರ ರಾಜ್ಯದ ಮತಗಳು ಈ ಬಾರಿ ಕೈ ಕೊಡುತ್ತವೆಯೇ?! » Dynamic Leader
October 22, 2024
ರಾಜಕೀಯ

370/400: ಮೋದಿ ಹೇಳುವ ಯಶಸ್ಸಿನ ಪ್ರಮಾಣ – ಉತ್ತರ ರಾಜ್ಯದ ಮತಗಳು ಈ ಬಾರಿ ಕೈ ಕೊಡುತ್ತವೆಯೇ?!

ಡಿ.ಸಿ.ಪ್ರಕಾಶ್, ಸಂಪಾದಕರು

ಪ್ರಧಾನಿ ಮೋದಿಯವರು, ‘ಈ ಬಾರಿ 370 ಕ್ಷೇತ್ರಗಳಲ್ಲಿ ಬಿಜೆಪಿ ಹಾಗೂ 400ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಎನ್‌ಡಿಎ ಗೆಲ್ಲಲಿದೆ’ ಎಂದು ಹೇಳಿದ ಮೇಲೆ ಬಿಜೆಪಿ ಸದಸ್ಯರು ಉತ್ಸಾಹದಿಂದ ‘ಮತ್ತೊಮ್ಮೆ ಮೋದಿ… ಮತ್ತೊಮ್ಮೆ ಮೋದಿ ‘ ಎಂಬ ಘೋಷಣೆಯನ್ನು ಎತ್ತುತ್ತಿದ್ದಾರೆ. ಆದಾಗ್ಯೂ, ಭಾರತದಾದ್ಯಂತ ನೆಲದ ವಾಸ್ತವತೆ (Ground Reality) ಹೇಗಿದೆ ಎಂಬ ಪ್ರಶ್ನೆ ಉದ್ಭವಿಸುತ್ತದೆ.

ಮೂರನೇ ಬಾರಿ ಗೆದ್ದು ಆಡಳಿತ ಮುಂದುವರಿಸುವ ಹಠಕ್ಕೆ ಬಿದ್ದಿರುವ ಬಿಜೆಪಿ, ಹೇಗಾದರೂ ಮಾಡಿ ಗೆಲ್ಲಲೇಬೇಕೆಂದು ಕ್ಷೇತ್ರದಲ್ಲಿ ಗಂಭೀರತೆ ತೋರಿಸುತ್ತಿದೆ. ಒಟ್ಟು 370 ಕ್ಷೇತ್ರಗಳಲ್ಲಿ ಬಿಜೆಪಿ ಹಾಗೂ 400ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಎನ್‌ಡಿಎ ಗೆಲ್ಲಲಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಅದನ್ನು ಹೇಗಾದರೂ ಮಾಡಿ ಈಡೇರಿಸಬೇಕು ಎಂದು ಪಕ್ಷದ ಕಾರ್ಯಕರ್ತರು ಗಂಭೀರತೆ ತೋರಿಸುತ್ತಿದ್ದಾರೆ.

ಪ್ರಧಾನಿ ಮೋದಿಯವರು 370, 400 ಎಂಬ ಸಂಖ್ಯೆಗಳನ್ನು ಹೇಳಿದ ಮೇಲೆ ಬಿಜೆಪಿಯವರು ‘ಮತ್ತೊಮ್ಮೆ ಮೋದಿ… ಮತ್ತೊಮ್ಮೆ ಮೋದಿ ‘ ಎಂಬ ಘೋಷಣೆಯನ್ನು ಎಲ್ಲಡೆಯೂ ಎತ್ತುತ್ತಿದ್ದಾರೆ. ಆದಾಗ್ಯೂ, ಭಾರತದಾದ್ಯಂತ ಗ್ರೌಂಡ್ ರಿಯಾಲಿಟಿ ಹೇಗಿದೆ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಕೇಂದ್ರದಲ್ಲಿ ಬಿಜೆಪಿ ಮತ್ತೆ ಸರ್ಕಾರ ರಚಿಸುತ್ತದೆಯೇ? ಮೋದಿ ಪ್ರಧಾನಿ ಕುರ್ಚಿ ಉಳಿಸಿಕೊಳ್ಳುತ್ತಾರೆಯೇ? ಎಂಬ ಪ್ರಶ್ನೆಗಳು ಒಂದೆಡೆಯಾದರೇ ಬಿಜೆಪಿಗೆ ಎಷ್ಟು ಸ್ಥಾನ ಸಿಗಲಿದೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ.

2014 ಮತ್ತು 2019ರ ಲೋಕಸಭಾ ಚುನಾವಣೆಗಿಂತ 2024ರ ಚುನಾವಣೆ ಅಖಾಡ ಭಿನ್ನವಾಗಿದೆ. 2014ರಲ್ಲಿ ಮೋದಿ ಅಲೆ ಭಾರತವನ್ನು ಆವರಿಸಿದ್ದು ಸ್ಪಷ್ಟವಾಗಿತ್ತು. ಆದರೆ, 2019ರಲ್ಲಿ ಮೋದಿ ಪರ ಅಲೆ ಎದ್ದಂತೆ ಕಾಣಲಿಲ್ಲ. ನೋಟು ಅಮಾನ್ಯೀಕರಣ, ಜಿಎಸ್‌ಟಿ, ಎರಡು ಕೋಟಿ ಜನರಿಗೆ ಉದ್ಯೋಗದ ಭರವಸೆಗಳನ್ನು ಈಡೇರಿಸದಿರುವುದು ಮತ್ತು ರೈತರ ಆಕ್ರೋಶದ ಹಿನ್ನೆಲೆಯಲ್ಲಿ 2019ರ ಚುನಾವಣೆ ನಡೆಯಿತು. ಅದರಲ್ಲಿ ಬಿಜೆಪಿ 303 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತು. ಆ ಯಶಸ್ಸಿಗೆ ಕಾರಣ ಮೋದಿ ಅಲೆಯಲ್ಲ ಎಂಬುದು ಎಲ್ಲರ ಅಭಿಪ್ರಾಯ.

ಪುಲ್ವಾಮಾ ದಾಳಿಯಲ್ಲಿ ಅರೆಸೇನಾ ಪಡೆ ಯೋಧರ ಹತ್ಯೆಯ ಘಟನೆಯನ್ನು ಬಿಜೆಪಿ ತನ್ನ ಚುನಾವಣಾ ಗೆಲುವಿಗೆ ಬಳಸಿಕೊಂಡಿತು ಎಂದು ವಿರೋಧ ಪಕ್ಷಗಳು ಇನ್ನೂ ಟೀಕಿಸುತ್ತಿವೆ. ಆ ವಿಷಯದಲ್ಲಿ ಪುಲ್ವಾಮಾ ದಾಳಿಯ ವೇಳೆ ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಆಗಿದ್ದ ಸತ್ಯಪಾಲ್ ಮಲಿಕ್ ಮಾಡಿರುವ ಆರೋಪಗಳು ಕೂಡ ಆರೋಪಕ್ಕೆ ಪುಷ್ಟಿ ನೀಡಿವೆ.

ಹತ್ತು ವರ್ಷಗಳ ಕಾಲ ನಿರಂತರವಾಗಿ ಸರ್ಕಾರ ಅಧಿಕಾರದಲ್ಲಿದ್ದರೆ ನಾನಾ ಕಾರಣಗಳಿಂದ ಜನರಲ್ಲಿ ಆಡಳಿತ ವಿರೋಧಿ ಭಾವನೆ ಮೂಡುವುದು ಸಹಜ. ಅಲ್ಲದೆ ಕರ್ನಾಟಕ ಹೊರತುಪಡಿಸಿ ದಕ್ಷಿಣದ ರಾಜ್ಯಗಳಲ್ಲಿ ಬಿಜೆಪಿಗೆ ಹೆಚ್ಚಿನ ಸ್ಥಾನ ಸಿಗುವ ಸಾಧ್ಯತೆ ಇಲ್ಲ ಎಂದು ವಿವಿಧ ಸಮೀಕ್ಷೆಗಳು ಹೇಳುತ್ತಿವೆ.

ಈ ಹಿನ್ನಲೆಯಲ್ಲಿ, ಉತ್ತರ ಭಾರತದಲ್ಲಿ ಬಿಜೆಪಿಯ ಗೆಲುವಿನ ಮೇಲೆ ಈ ಚುನಾವಣೆಯಲ್ಲಿ ಬಿಜೆಪಿ ಗೆಲುವು ನಿರ್ಧಾರವಾಗಲಿದೆ. ಬಿಜೆಪಿ ಹೇಳುವಂತೆ ಉತ್ತರ ಭಾರತದಲ್ಲಿ ಮೋದಿ ಅಲೆ ಬೀಸಿದರೆ ಬಿಜೆಪಿ ಗಮನಾರ್ಹ ಸ್ಥಾನಗಳನ್ನು ಗೆಲ್ಲಲಿದೆ. ಆದರೆ, ಉತ್ತರ ಪ್ರದೇಶ, ಬಿಹಾರ, ರಾಜಸ್ಥಾನ, ಮಧ್ಯಪ್ರದೇಶ ಸೇರಿದಂತೆ ಉತ್ತರದ ರಾಜ್ಯಗಳಲ್ಲಿ ಸದ್ಯದ ಗ್ರೌಂಡ್ ರಿಯಾಲಿಟಿ ನೋಡಿದರೆ ಬಿಜೆಪಿ ಹೇಳುವಷ್ಟು ಸೀಟು ಪಡೆಯಲು ತೀವ್ರ ಪೈಪೋಟಿ ಇರಲಿದೆ ಎಂದೇ ತೋರುತ್ತದೆ.

ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ತವರು ರಾಜ್ಯವಾದ ಗುಜರಾತ್‌ನಲ್ಲೇ ಪರಿಸ್ಥಿತಿಯು ಪ್ರಸ್ತುತ ಸವಾಲುಗಳನ್ನು ಎದುರಿಸುವಂತಾಗಿದೆ. ಗುಜರಾತ್‌ನಲ್ಲಿ 2014 ಮತ್ತು 2019ರ ಲೋಕಸಭೆ ಚುನಾವಣೆಯಲ್ಲಿ ಅಲ್ಲಿನ ಎಲ್ಲಾ 26 ಕ್ಷೇತ್ರಗಳನ್ನೂ ಬಿಜೆಪಿ ಗೆದ್ದುಕೊಂಡಿತು. ಆದರೆ, ಈ ಬಾರಿ ಬಿಜೆಪಿಯ ಆಂತರಿಕ ಸಂಘರ್ಷ ಗಂಭೀರವಾಗಿ ನಡೆಯುತ್ತಿವೆ. ಹಲವು ಕ್ಷೇತ್ರಗಳಲ್ಲಿ ವರಿಷ್ಠರು ಘೋಷಿಸಿದ ಅಭ್ಯರ್ಥಿಗಳಿಗೆ ಸ್ವ ಪಕ್ಷದಿಂದಲೇ ತೀವ್ರ ವಿರೋಧ ವ್ಯಕ್ತವಾಗಿದ್ದು, ಅಭ್ಯರ್ಥಿಗಳನ್ನು ಬದಲಾಯಿಸಬೇಕಾಯಿತು.

ಗುಜರಾತ್‌ನಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಕೇಂದ್ರ ಸಚಿವ ಪರಶೋತ್ತಮ್ ರೂಪಲಾ, ರಜಪೂತ ಮಹಿಳೆಯರನ್ನು ಅವಮಾನಿಸಿ ಮಾತನಾಡಿದ್ದರು ಎಂಬ ಕಾರಣಕ್ಕೆ ಇಡೀ ರಜಪೂತ ಸಮುದಾಯವು ಬಿಜೆಪಿ ವಿರುದ್ಧ ಒಗ್ಗೂಡಿ ನಿಂತಿದೆ. ಬಿಜೆಪಿ ಕಚೇರಿ ಎದುರು ರಜಪೂತ ಸಮುದಾಯದ ಮಹಿಳೆಯರು ಬೆಂಕಿ ಹಚ್ಚಿಕೊಳ್ಳಲು ಯತ್ನಿಸಿದ ಘಟನೆ ಸಂಚಲನ ಮೂಡಿಸಿದೆ.

ಬಿಹಾರದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಮತ್ತೇ ಬಿಜೆಪಿ ಜೊತೆ ಕೈ ಜೋಡಿಸಿದ್ದಾರೆ. ಆಗಾಗ ಮೈತ್ರಿ ಬದಲಾವಣೆಯಿಂದ ನಿತೀಶ್ ಕುಮಾರ್ ಅವರನ್ನು ಎಲ್ಲರೂ ‘ಪಲ್ಟುಕುಮಾರ್’ ಎಂದು ಮೂದಲಿಸುತ್ತಿರುವ ಹಿನ್ನಲೆಯಲ್ಲಿ, ಆ ಮೈತ್ರಿಗೆ ಹೆಚ್ಚಿನ ಯಶಸ್ಸು ಸಿಗುವುದಿಲ್ಲವೆಂದು ಹೇಳಲಾಗುತ್ತಿದೆ. ತೇಜಸ್ವಿ ಯಾದವ್‌ಗೆ ಬೆಂಬಲ ಹೆಚ್ಚಾಗುತ್ತಿದ್ದಂತೆ, ಬಿಹಾರದಲ್ಲಿ ‘ಇಂಡಿಯಾ’ ಮೈತ್ರಿಕೂಟ ಮಹತ್ವದ ಸ್ಥಾನಗಳನ್ನು ವಶಪಡಿಸಿಕೊಳ್ಳಲಿದೆ ಎಂಬ ವರದಿಗಳಿವೆ. ಉತ್ತರ ಪ್ರದೇಶದಲ್ಲೂ ಇದೇ ಪರಿಸ್ಥಿತಿ ಇದೆ.

ಉತ್ತರಪ್ರದೇಶದಲ್ಲಿ ಸಮಾಜವಾದಿ-ಕಾಂಗ್ರೆಸ್ ಮೈತ್ರಿಕೂಟ ಕಳೆದ ಬಾರಿಗಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎನ್ನುತ್ತಾರೆ ರಾಷ್ಟ್ರ ರಾಜಕಾರಣವನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ರಾಜಕೀಯ ವೀಕ್ಷಕರು. ಯುಪಿಯಲ್ಲಿ ‘ಇಂಡಿಯಾ’ ಮೈತ್ರಿಕೂಟ ಕಳೆದ ಬಾರಿಗಿಂತ ಈ ಬಾರಿಯ ಚುನಾವಣೆಯಲ್ಲಿ ಸ್ವಲ್ಪ ಹೆಚ್ಚು ಸ್ಥಾನಗಳನ್ನು ಗೆದ್ದರೂ ಅದು ಬಿಜೆಪಿಗೆ ಹಿನ್ನಡೆಯಾಗಲಿದೆ.

ಪ್ರಧಾನಿ ಮೋದಿ ತಮ್ಮ ಚುನಾವಣಾ ಪ್ರಚಾರದಲ್ಲಿ ಅವರ ಸಾಧನೆಗಳನ್ನು ಪ್ರಸ್ತಾಪಿಸಿ ಮತ ಕೇಳದೇ ಕಾಂಗ್ರೆಸ್ ಪ್ರಣಾಳಿಕೆಯನ್ನು ಮುಸ್ಲಿಂ ಲೀಗ್ ಜೊತೆ ಹೋಲಿಕೆ ಮಾಡುತ್ತಿದ್ದು, ಉತ್ತರಾಧಿಕಾರ ರಾಜಕಾರಣದ ಬಗ್ಗೆ ಹೆಚ್ಚಾಗಿ ಮಾತನಾಡುತ್ತಿದ್ದಾರೆ. ಇದು ಕೂಡ ಅವರಿಗೆ ಹಿನ್ನಡೆಯಾಗಿದೆ. ಸದ್ಯ ಬಿಜೆಪಿ ಹೇಳಿಕೊಳ್ಳುವಂತಹ ಸಂಖ್ಯಾಬಲ ಗೆಲ್ಲಲು ಬಿಜೆಪಿ ತೀವ್ರ ಪೈಪೋಟಿ ಎದುರಿಸಬೇಕಾಗಿದೆ.

Related Posts