ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ನೈತಿಕ ಅಧಃಪತನದ ಪರಮಾವಧಿ ಎಂದ ವೆಲ್ಫೇರ್ ಪಾರ್ಟಿ! » Dynamic Leader
November 21, 2024
ರಾಜಕೀಯ

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ನೈತಿಕ ಅಧಃಪತನದ ಪರಮಾವಧಿ ಎಂದ ವೆಲ್ಫೇರ್ ಪಾರ್ಟಿ!

ಬೆಂಗಳೂರು: ಹಾಸನದ  ಸಂಸದ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯದ ಪೆನ್ ಡ್ರೈವ್ ಪ್ರಕರಣದಿಂದ ರಾಜ್ಯವು ದೇಶದ ಮುಂದೆ ತಲೆತಗ್ಗಿಸುವಂತೆ ಮಾಡಿದೆ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಇದರ ರಾಜ್ಯ ಅಧ್ಯಕ್ಷ ಅಡ್ವೊಕೇಟ್ ತಾಹೇರ್ ಹುಸೇನ್ ಹೇಳಿದ್ದಾರೆ.

ಇಂತಹ ವಿಕೃತಿ ಹೊಂದಿರುವವ ಜನ ಪ್ರತಿನಿಧಿಯಾಗಿರುವುದು ಸಂಸತ್ತಿನ ಇತಿಹಾಸಕ್ಕೆ ಕಪ್ಪು ಚುಕ್ಕೆ. ನೈತಿಕ ಅ ಅಧಃಪತನದ ಪರಮಾವಧಿಯಿದು. ಇಂತಹ ಜನಪ್ರತಿನಿಧಿಯಿಂದ ಸಮಾಜ ದೇಶ ಹೇಗೆ ಉದ್ದಾರವಾದೀತು?

ಹಿಂದೂ ಹೆಣ್ಣು ಮಕ್ಕಳ ವಕ್ತಾರರಂತೆ ಪೋಸು ಕೊಟ್ಟು ಮಾಧ್ಯಮಗಳ ಮುಂದೆ ನಾಲಗೆ ಹರಿಯ ಬಿಡುವ ಬಿಜೆಪಿಯ ವಾಕ್ಚತುರ ಹೋರಾಟಗಾರರು ಏಕೆ ಮೌನವಾಗಿದ್ದಾರೆ? ಅಲ್ಪಸಂಖ್ಯಾತ ವರ್ಗದ ಯುವಕರಿಂದ ಲೈಂಗಿಕ ಅಪರಾಧ ನಡೆದರೆ ಮಾತ್ರ ಹೋರಾಟವೇ? ಈ ಸಂತ್ರಸ್ತ ಹೆಣ್ಮಕ್ಕಳ ಪರ ಹೋರಾಡದೆ ಏಕೆ ಇವರೆಲ್ಲ ತೆಪ್ಪಗಿದ್ದಾರೆ ಎಂದು ಕಿಡಿಕಾರಿದ್ದಾರೆ.

ಸಂತ್ರಸ್ತ ಮಹಿಳೆಯರು ಪ್ರಜ್ವಲ್ ಜೊತೆಗೆ ಅವರ ತಂದೆ ಮಾಜಿ ಸಚಿವ ಹೆಚ್.ಡಿ.ರೇವಣ್ಣನವರ ಮೇಲೆಯೂ ಆರೋಪ ಹೊರಿಸಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆ ನಡೆಯಬೇಕು. ಬುಗಿಲೆದ್ದ ಪ್ರತಿಭಟನೆಗಳಿಂದ ಪಾರಾಗಲು ಕಾಟಾಚಾರದ ತನಿಖೆ ಆಗಬಾರದು. ಯಾಕೆಂದರೆ ಇಂತಹ ತನಿಖೆಗಳು ದಡ ಸೇರಿದ್ದು ವಿರಳ ಎಂದು ಹೇಳಿದ್ದಾರೆ.

ರಾಜ್ಯ ಸರ್ಕಾರದ ಗ್ಯಾರಂಟಿ ಹಣದಿಂದ ಗ್ರಾಮೀಣ ಹೆಣ್ಣು ಮಕ್ಕಳು ಅಡ್ಡ ದಾರಿ ಹಿಡಿಯುತ್ತಾರೆಂಬ ಅರ್ಥದಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಮೊದಲು ತಮ್ಮ ಪರಿವಾರದ ಕಡೆಗೆ ತಿರುಗಿ ನೋಡಲಿ. ನಂತರ  ಬಡ ಹೆಣ್ಣುಮಕ್ಕಳ ಬಗ್ಗೆ ಮಾತನಾಡಲಿ ಎಂದು ವ್ಯಂಗ್ಯವಾಡಿದ್ದಾರೆ.

ಹೆಣ್ಮಕ್ಕಳ ಅಸಹಾಯಕತೆಯನ್ನು ದುರುಪಯೋಗ ಪಡಿಸಿಕೊಂಡು ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಸತ್ಯಾಸತ್ಯತೆ ಹೊರ ಬರಲೇಬೇಕು. ತಪ್ಪು ಮಾಡಿ ದೇಶ ಬಿಟ್ಟು ವಿದೇಶಕ್ಕೆ ಪಲಾಯನ ಮಾಡುವುದು ಇಂದು ಸಾಮಾನ್ಯವಾಗಿದೆ. ಈ ವಿದೇಶ ಪಲಾಯನದಲ್ಲಿ ಯಾರದ್ದಾದರೂ ಪ್ರಭಾವ ಇದೆಯೇ ಎಂಬ ಕುರಿತೂ ತನಿಖೆ ಆಗಬೇಕಾಗಿದೆ ಎಂದು ಅವರು ಹೇಳಿದ್ದಾರೆ.

Related Posts