ಬಿಜೆಪಿ ಸೋಲು ಅನಿವಾರ್ಯ: ಕಾರಣಗಳನ್ನು ಪಟ್ಟಿ ಮಾಡಿದ ಅಖಿಲೇಶ್!
ಬಿಜೆಪಿಯ ಸೋಲು ಅನಿವಾರ್ಯ ಎಂದು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ದೃಢವಾಗಿ ಹೇಳಿದ್ದಾರೆ.!
18ನೇ ಲೋಕಸಭೆ ಚುನಾವಣೆ 7 ಹಂತಗಳಲ್ಲಿ ನಡೆಯಲಿದ್ದು, ಮೊದಲ 3 ಹಂತದ ಚುನಾವಣೆ ಪೂರ್ಣಗೊಂಡಿದೆ. ಈ ಲೋಕಸಭೆ ಚುನಾವಣೆಯಲ್ಲಿ 10 ವರ್ಷಗಳ ಫ್ಯಾಸಿಸ್ಟ್ ಬಿಜೆಪಿ ಆಡಳಿತವನ್ನು ಕಿತ್ತೊಗೆಯುವ ಏಕೈಕ ಉದ್ದೇಶದೊಂದಿಗೆ ವಿರೋಧ ಪಕ್ಷಗಳು ಒಗ್ಗೂಡಿ ಇಂಡಿಯಾ ಮೈತ್ರಿಕೂಟವನ್ನು ರಚಿಸಿಕೊಂಡು ಚುನಾವಣೆಯನ್ನು ಎದುರಿಸುತ್ತಿದೆ.
ಇಂಡಿಯಾ ಮೈತ್ರಿಕೂಟ ರಚನೆಯಾದಂದಿನಿಂದ ಬಿಜೆಪಿಯ ಸೋಲು ಆರಂಭವಾಗಿದೆ. ಇದೀಗ ಪೂರ್ಣಗೊಂಡಿರುವ ಮೂರು ಹಂತದ ಚುನಾವಣಾ ಸಮೀಕ್ಷೆಗಳು ಬಿಜೆಪಿಯ ಸೋಲನ್ನು ಖಚಿತಪಡಿಸಿವೆ ಎಂದು ಇಂಡಿಯಾ ಮೈತ್ರಿಕೂಟದ ನಾಯಕರು ಹೇಳುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ, ಬಿಜೆಪಿ ಸೋಲು ಅನಿವಾರ್ಯ ಎಂದಿರುವ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್, ಅದಕ್ಕಾದ ಕಾರಣಗಳನ್ನು ಪಟ್ಟಿ ಮಾಡಿ ತಮ್ಮ ‘ಎಕ್ಸ್’ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಪ್ರಕಟಿಸಿದ್ದಾರೆ. ಅದರಲ್ಲಿ ಹಣದುಬ್ಬರ, ನಿರುದ್ಯೋಗ ಮತ್ತು ಭ್ರಷ್ಟಾಚಾರದಿಂದಾಗಿ ಬಿಜೆಪಿ ಜನಬೆಂಬಲವನ್ನು ಕಳೆದುಕೊಂಡಿದೆ. ಸಾಮಾಜಿಕ ನ್ಯಾಯದ ವಿರುದ್ಧ ನಿರಂತರವಾಗಿ ಮಾತನಾಡುತ್ತಿರುವುದರಿಂದ ಬಿಜೆಪಿ ಪರಿಶಿಷ್ಟ ಜಾತಿ/ಪಂಗಡಗಳು, ಹಿಂದುಳಿದ ಮತ್ತು ಅತ್ಯಂತ ಹಿಂದುಳಿದ ವರ್ಗದ ತನ್ನದೇ ಪಕ್ಷದ ಕಾರ್ಯಕರ್ತರ ಬೆಂಬಲವನ್ನು ಕಳೆದುಕೊಂಡಿದೆ.
ರೈತರ ಕಲ್ಯಾಣಕ್ಕೆ ವಿರುದ್ಧವಾದ ಕೃಷಿ ಕಾನೂನುಗಳನ್ನು ಜಾರಿಗೆ ತಂದ ನಂತರ ಬಿಜೆಪಿ ರೈತರ ಬೆಂಬಲವನ್ನು ಕಳೆದುಕೊಂಡಿದೆ. ಇರುವ ವೃತ್ತಿಗಳನ್ನು ಹಾಳು ಮಾಡಿ ಭವಿಷ್ಯವನ್ನು ಪ್ರಶ್ನಿಸುತ್ತಿರುವ ಬಿಜೆಪಿ, ಯುವಕರ ಬೆಂಬಲ ಕಳೆದುಕೊಂಡಿದೆ.
ಮಹಿಳೆಯರಿಗೆ ಆಗುತ್ತಿರುವ ಅನ್ಯಾಯದಿಂದ ಬಿಜೆಪಿ ಮಹಿಳೆಯರ ಬೆಂಬಲ ಕಳೆದುಕೊಂಡಿದೆ. ಸ್ಪರ್ದೆಯಲ್ಲಿ ಸೋಲಲು ಹೊರಟಿರುವ ಕುದುರೆಗೆ ನಾವೇಕೆ ಉಣಬಡಿಸಬೇಕು ಎಂದಿರುವ ಉದ್ಯಮಿಗಳ ಬೆಂಬಲವನ್ನು ಬಿಜೆಪಿ ಕಳೆದುಕೊಂಡಿದೆ. ಸೋಲನ್ನು ಎದುರಿಸುತ್ತಿರುವವರಿಗೆ ನಾವೇಕೆ ಬೆಂಬಲಿಸಬೇಕು ಎಂದಿರುವ ಮಾದ್ಯಮಗಳ ಬೆಂಬಲವನ್ನು ಬಿಜೆಪಿ ಕಳೆದುಕೊಂಡಿದೆ. ಇದರಿಂದ ಅನಿವಾರ್ಯ ಸೋಲಿನತ್ತ ಮುಖ ಮಾಡಿರುವ ಬಿಜೆಪಿ ಏನು ಮಾಡಬೇಕೆಂದು ತೋಚದೇ ತಮ್ಮ ದೋಣಿಗಳಲ್ಲೇ ರಂಧ್ರಗಳನ್ನು ಕೊರೆಯುತ್ತಿದ್ದಾರೆ ” ಎಂದು ಹೇಳಿದ್ದಾರೆ.