ಪೆನ್ ಡ್ರೈವ್ ಹಗರಣ: ರಾಜಕೀಯ ಚರ್ಚೆ ನಿಲ್ಲಿಸಿ ಆರೋಪಿಯನ್ನು ಬಂಧಿಸಿ! – ವೆಲ್ಫೇರ್ ಪಾರ್ಟಿ
ಬೆಂಗಳೂರು: ಪ್ರಜ್ವಲ್ ಪೆನ್ ಡ್ರೈವ್ ಹಗರಣದಿಂದ ನಾಡಿನ ಜನತೆ ತಲೆ ಎತ್ತಿ ನಡೆಯದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಅನೈತಿಕ ವ್ಯವಹಾರವನ್ನು ಹಿಡಿದು ಎರಡು ಪಕ್ಷಗಳು ಆರೋಪ ಪ್ರತ್ಯರೋಪ ಮಾಡುತ್ತಾ ಮಾತಿನ ಸಮರ ನಡೆಸುತ್ತಿರುವುದು ನಾಚಿಕೆಗೇಡಿನ ವಿಷಯ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಇದರ ರಾಜ್ಯಾಧ್ಯಕ್ಷ ತಾಹೇರ್ ಹುಸೇನ್ ಅಭಿಪ್ರಾಯ ಪಟ್ಟಿದ್ದಾರೆ.
ಹಣ, ಅಧಿಕಾರ ಬಳಸಿ ಅನೈತಿಕ ಸಂಬಂಧ ಬೆಳೆಸಿದ ಪ್ರಜ್ವಲ್ ರೇವಣ್ಣ ಪ್ರಕರಣದಿಂದ ರಾಜ್ಯದ ಮಾನ ಹರಾಜಾಗಿದೆ. ದೇಶದಾದ್ಯಂತ ಈ ಪ್ರಕರಣ ಸುದ್ದಿಯಾಗಿದೆ. ಅತ್ಯಾಚಾರ ಆರೋಪಿ ಪ್ರಜ್ವಲ್ ನನ್ನು ಹಿಡಿದು ಹೆಡೆಮುರಿಕಟ್ಟಿ ಬಂಧಿಸಿ ರಾಜ್ಯದ ಗೌರವ ಕಾಪಾಡುವ ಬದಲು, ಪೆನ್ ಡ್ರೈವ್ ಬಹಿರಂಗ ಪಡಿಸಿದವರು ಯಾರು ಎಂಬ ಚರ್ಚೆಯಾಗುತ್ತಿರುವುದು ಹಾಸ್ಯಾಸ್ಪದ. ರಾಜಕೀಯ ಪ್ರಭಾವ ಬಳಸಿ ದೇಶದಿಂದ ಆರೋಪಿಗಳು ಪರಾರಿಯಾಗುವುದು ಇಲ್ಲಿ ಸಾಮಾನ್ಯವಾಗಿದೆ.
ಇಂತಹ ಬೆಳವಣಿಗೆಗಳಿಗೆ ಅಂತ್ಯ ಹಾಡಬೇಕು. ಮೊದಲು ಆರೋಪಿ ಸ್ಥಾನದಲ್ಲಿರುವವರನ್ನು ಬಂಧಿಸಿ, ಸಂತ್ರಸ್ತರಿಗೆ ನ್ಯಾಯ ಒದಗಿಸಲು ಪಕ್ಷಗಳು ಪ್ರಯತ್ನಿಸಬೇಕಾಗಿದೆ. ಎಷ್ಟೇ ಪ್ರತಿಷ್ಠಿತ ಕುಟುಂಬವಾದರೂ ಸರಿ, ಇಂತಹ ಅನಾಗರಿಕ ಹಗರಣದ ಆರೋಪಿಗಳನ್ನು ಯಾರೂ ಬೆಂಬಲಿಸಬಾರದು. ಕನ್ನಡ ನಾಡಿನ ಮಾನಕ್ಕೆ ದಕ್ಕೆ ತಂದಿರುವ ಪ್ರಕರಣದಲ್ಲಿ ರಾಜಕೀಯವನ್ನು ಬದಿಗಿಟ್ಟು, ಪ್ರಾಮಾಣಿಕವಾಗಿ… ನ್ಯಾಯಬದ್ದವಾಗಿ… ವರ್ತಿಸಿ, ಆರೋಪಿಗಳು ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳದಂತೆ ಕ್ರಮ ಕೈಗೊಂಡು, ಸಂತ್ರಸ್ತರಿಗೆ ನ್ಯಾಯ ಒದಗಿಸಿಕೊಡಬೇಕೆಂದು ತಾಹೇರ್ ಹುಸೇನ್ ಪತ್ರಿಕಾ ಪ್ರಕಟಣೆಯ ಮೂಲಕ ಆಗ್ರಹಿಸಿದ್ದಾರೆ.