"ಕಾವೇರಿಯಲ್ಲಿ ತಮಿಳುನಾಡಿನ ಪಾಲನ್ನು ಪಡೆಯಿರಿ" - ಮುಖ್ಯಮಂತ್ರಿಗೆ ಅಣ್ಣಾಮಲೈ ಒತ್ತಾಯ! » Dynamic Leader
November 21, 2024
ರಾಜಕೀಯ

“ಕಾವೇರಿಯಲ್ಲಿ ತಮಿಳುನಾಡಿನ ಪಾಲನ್ನು ಪಡೆಯಿರಿ” – ಮುಖ್ಯಮಂತ್ರಿಗೆ ಅಣ್ಣಾಮಲೈ ಒತ್ತಾಯ!

ಚೆನ್ನೈ: ಮೈತ್ರಿಕೂಟದ ಲಾಭಕ್ಕಾಗಿ ಮುಖ್ಯಮಂತ್ರಿ ಸ್ಟಾಲಿನ್ ಅವರು ತಮಿಳುನಾಡು ರೈತರ ಹಿತ ಕಡೆಗಣಿಸುವುದನ್ನು ಬಿಟ್ಟು ಕೂಡಲೇ ತಮಿಳುನಾಡಿಗೆ ಕಾವೇರಿ ನೀರು ಕೊಡಿಸಲು ಮುಂದಾಗಬೇಕು ಎಂದು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಹೇಳಿದ್ದಾರೆ.

ಡೆಲ್ಟಾ ಭತ್ತದ ಕೃಷಿಗಾಗಿ ಮೇಟ್ಟೂರು ಅಣೆಕಟ್ಟನ್ನು ಸಾಮಾನ್ಯವಾಗಿ ಪ್ರತಿ ವರ್ಷ ಜೂನ್ 12 ರಂದು ತೆರೆಯಲಾಗುತ್ತದೆ. ಆದರೆ, ಈ ವರ್ಷ ಮೇಟ್ಟೂರು ಅಣೆಕಟ್ಟು ತೆರೆಯುವ ಸಾಧ್ಯತೆ ಇಲ್ಲ ಎಂದು ತಮಿಳುನಾಡು ಸರ್ಕಾರ ಹೇಳಿದೆ. ಈ ಹಿನ್ನೆಲೆಯಲ್ಲಿ, ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ತಮಿಳುನಾಡು ಸರ್ಕಾರವನ್ನು ಖಂಡಿಸಿದ್ದಾರೆ.

ಈ ಸಂಬಂಧ ಅಣ್ಣಾಮಲೈ ತಮ್ಮ ಎಕ್ಸ್ ಪೇಜ್ ನಲ್ಲಿ ಪ್ರಕಟಿಸಿದ ಪೋಸ್ಟ್‌ನಲ್ಲಿ, “ಕಳೆದ ವರ್ಷ ಕಾವೇರಿಯಲ್ಲಿ ಪಡೆದುಕೊಂಡ ನೀರಿನ ಪ್ರಮಾಣ ಕೇವಲ 81.4 ಟಿಎಂಸಿ ಮಾತ್ರ. ವರ್ಷಕ್ಕೆ 177.25 ಟಿಎಂಸಿ ನೀರು ಪಡೆಯಬೇಕಾದ ತಮಿಳುನಾಡಿಗೆ ಅದರಲ್ಲಿ ಅರ್ಧದಷ್ಟೂ ಸಿಗದಿರುವುದು ಡಿಎಂಕೆ ಸರಕಾರದ ಅದಕ್ಷತೆಯನ್ನು ತೋರಿಸುತ್ತದೆ.

ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಅವರು ಡಿಎಂಕೆ-ಕಾಂಗ್ರೆಸ್ ಅವಕಾಶವಾದಿ ಇಂಡಿಯಾ ಮೈತ್ರಿಕೂಟದ ಲಾಭಕ್ಕಾಗಿ ತಮಿಳುನಾಡು ರೈತರ ಕಲ್ಯಾಣವನ್ನು ಸಂಪೂರ್ಣವಾಗಿ ಒತ್ತೆಯಿಟ್ಟಿದ್ದಾರೆ. ಕಾವೇರಿಯಲ್ಲಿ ಸಾಕಷ್ಟು ನೀರು ಹರಿದು ಬರದ ಕಾರಣ, ಈ ವರ್ಷ ಜೂನ್ 12ರಂದು ಕೃಷಿಗೆ ನೀರು ಬಿಡಬೇಕಿದ್ದ ಮೇಟ್ಟೂರು ಅಣೆಕಟ್ಟು ತೆರೆಯಲಿಲ್ಲ. ಇದರಿಂದ ನೀರಾವರಿಗೆ ನೀರಿಲ್ಲದೆ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಆದರೆ ಮುಖ್ಯಮಂತ್ರಿ ಸ್ಟಾಲಿನ್‌ಗೆ ಈ ಬಗ್ಗೆ ಯಾವುದೇ ಚಿಂತೆಯಿಲ್ಲ. ತಾನೊಬ್ಬ ಡೆಲ್ಟಾ ವ್ಯಕ್ತಿ ಎಂದು ಹೇಳಿಕೊಂಡು, ಹೊಲದಲ್ಲಿ ಕಾಂಕ್ರಿಟ್ ರಸ್ತೆಗಳನ್ನು ಹಾಕಿಕೊಂಡು ಓಡಾಡುವ ಮುಖ್ಯಮಂತ್ರಿ ಸ್ಟಾಲಿನ್ ಅವರಿಗೆ ರೈತರ ನೋವು ಅರ್ಥವಾಗುವುದಾದರೂ ಹೇಗೆ?

ಮುಖ್ಯಮಂತ್ರಿ ಸ್ಟಾಲಿನ್ ಅವರು ತಮ್ಮ ಮೈತ್ರಿಯ ಲಾಭಕ್ಕಾಗಿ ತಮಿಳುನಾಡು ರೈತರ ಹಿತವನ್ನು ಕಡೆಗಣಿಸುವುದನ್ನು ಬಿಟ್ಟು ಕೂಡಲೇ ತಮಿಳುನಾಡಿಗೆ ಕಾವೇರಿ ನೀರು ಕೊಡಿಸಲು ಕ್ರಮಕೈಗೊಳ್ಳಬೇಕು” ಎಂದು ಒತ್ತಾಯಿಸಿದ್ದಾರೆ.

Related Posts