POCSO: ಬಿ.ಎಸ್.ಯಡಿಯೂರಪ್ಪ ಬಂಧನಕ್ಕೆ ಹೈಕೋರ್ಟ್ ಜೂನ್ 17 ರವರೆಗೆ ತಡೆ!
ಬೆಂಗಳೂರು: ‘ಪೋಕ್ಸೊ’ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಇದೇ 17 ರವರೆಗೆ ಬಂಧಿಸದಂತೆ ಕರ್ನಾಟಕ ಹೈಕೋರ್ಟ್ ಆದೇಶಿಸಿದೆ.
ಅದೇ ಸಮಯದಲ್ಲಿ ಜೂನ್ 17 ರಂದು (ಸೋಮವಾರ) ತಪ್ಪದೇ ವಿಚಾರಣೆಗೆ ಹಾಜರಾಗಬೇಕು ಎಂದೂ ಆದೇಶ ಹೊರಡಿಸಿದೆ. 82 ವರ್ಷದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಮನೆ ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿದೆ. ಫೆ.2ರಂದು ಸದಾಶಿವ ನಗರದ ನಿವಾಸಿ ಮಮತಾ (55) ಎಂಬ ಮಹಿಳೆ ತನ್ನ 17 ವರ್ಷದ ಮಗಳೊಂದಿಗೆ ಯಡಿಯೂರಪ್ಪನ ಮನೆಗೆ ತೆರಳಿದ್ದರು.
ಈ ಹಿನ್ನೆಲೆಯಲ್ಲಿ, ಸಹಾಯ ಕೇಳಲು ಹೋದ ನನ್ನ ಮಗಳಿಗೆ ಯಡಿಯೂರಪ್ಪ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಮಾ.14 ರಂದು ಸದಾಶಿವನಗರ ಪೊಲೀಸರಿಗೆ ಮಮತಾ ದೂರು ನೀಡಿದ್ದರು. ಯಡಿಯೂರಪ್ಪ ವಿರುದ್ಧ ‘ಪೋಕ್ಸೊ’ ಪ್ರಕರಣ ದಾಖಲಾದವು. ನಂತರ ಈ ಪ್ರಕರಣವನ್ನು ಸರ್ಕಾರ ಸಿಐಡಿ ತನಿಖೆಗೆ ಒಪ್ಪಿಸಿತು.
ಮೊದಲ ಹಂತದ ತನಿಖೆಯಲ್ಲಿ ದೂರುದಾರರಾದ ಮಹಿಳೆ ಮಾನಸಿಕ ಅಸ್ವಸ್ಥರಾಗಿದ್ದು, ಈಗಾಗಲೇ 53 ಸೆಲೆಬ್ರಿಟಿಗಳ ವಿರುದ್ಧ ಅತ್ಯಾಚಾರ ದೂರು ದಾಖಲಿಸಿದ್ದಾರೆ ಎಂದು ತಿಳಿದುಬಂದಿತು. ಏತನ್ಮಧ್ಯೆ ದೂರುದಾರರಾದ ಮಮತಾ ಕ್ಯಾನ್ಸರ್‌ಗೆ ತುತ್ತಾಗಿ ಮೇ 27 ರಂದು ಮೃತಪಟ್ಟರು. ತರುವಾಯ ಪ್ರಕರಣ ಮುಗಿಯುವ ನಿರೀಕ್ಷೆ ಇತ್ತು.
ಅಲ್ಲದೆ, ತಮ್ಮ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸುವಂತೆ ಯಡಿಯೂರಪ್ಪ ಅವರು ಹೈಕೋರ್ಟ್‌ನಲ್ಲಿ ಮೊಕದ್ದಮೆ ಹೂಡಿದ್ದರು. ಇದನ್ನು ತಿಳಿದ ಮಮತಾ ಸಹೋದರ, ಪ್ರಕರಣ ದಾಖಲಿಸಿ ಹಲವು ದಿನಗಳು ಕಳೆದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದರು.
ಮೊನ್ನೆ (ಜೂನ್ 12) ವಿಚಾರಣೆಗೆ ಹಾಜರಾಗುವಂತೆ ಸಿಐಡಿ ಸಮನ್ಸ್ ನೀಡಿತ್ತು. ಆದರೇ ಯಡಿಯೂರಪ್ಪ ವಿಚಾರಣೆಗೆ ಹಾಜರಾಗಿರಲಿಲ್ಲ. ಸಿಐಡಿ ಅಧಿಕಾರಿಗಳಿಗೆ ಪತ್ರ ಬರೆದು ತಾವು ದೆಹಲಿಯಲ್ಲಿದ್ದು ಮೂರು ದಿನಗಳ ಕಾಲಾವಕಾಶ ನೀಡುವಂತೆ ಕೋರಿದ್ದರು.
ಈ ಹಿನ್ನೆಲೆಯಲ್ಲಿ, ಯಡಿಯೂರಪ್ಪನವರ ಬಂಧನಕ್ಕೆ ಜಾಮೀನು ರಹಿತ ವಾರೆಂಟ್ ಹೊರಡಿಸುವಂತೆ ನಿನ್ನೆ ಬೆಂಗಳೂರಿನ 51ನೇ ಸಿಟಿ ಸಿವಿಲ್ ಮತ್ತು ಪೋಕ್ಸೋ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಇದನ್ನು ಆಲಿಸಿದ ನ್ಯಾಯಾಲಯ ಯಡಿಯೂರಪ್ಪ ಬಂಧನಕ್ಕೆ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿತು.
ಈ ಮಧ್ಯೆ ಪ್ರಕರಣ ರದ್ದು ಕೋರಿ ಯಡಿಯೂರಪ್ಪ ಅವರು ಹೈಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯ ವಿಚಾರಣೆ ಇಂದು ನಡೆಯಿತು. ಆಗ ಯಡಿಯೂರಪ್ಪ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಂತೆ ಹಾಗೂ ಇದೇ 17ರ ವರೆಗೆ ಬಂಧಿಸಬಾರದೆಂದು ಕೋರ್ಟ್ ಆದೇಶ ನೀಡಿದೆ. ಅಲ್ಲದೇ ಇದೇ 17 ರಂದು ಪೊಲೀಸರ ಮುಂದೆ ಹಾಜರಾಗುವಂತೆಯೂ ಯಡಿಯೂರಪ್ಪ ಅವರಿಗೆ ಆದೇಶ ನೀಡಲಾಗಿದೆ.