ಪದ್ಮನಾಭ ಸಾಮಿ ದೇವಸ್ಥಾನದ ಕಚೇರಿಯಲ್ಲಿ ಚಿಕನ್ ಬಿರಿಯಾನಿ ತಿಂದ ನೌಕರ; ಅಮಾನತುಗೊಳಿಸಿದ ಆಡಳಿತ ಮಂಡಳಿ!
ತಿರುವನಂತಪುರಂ: ಪ್ರಸಿದ್ಧ ಶ್ರೀಪದ್ಮನಾಬಸ್ವಾಮಿ ದೇವಾಲಯವು ಕೇರಳದ ತಿರುವನಂತಪುರಂನಲ್ಲಿದೆ. ಈ ದೇವಾಲಯದಲ್ಲಿ ಅನಂತ ಪದ್ಮನಾಭ ಸ್ವಾಮಿಯು ಮಲಗಿರುವಂತೆ ಕಾಣಸಿಗುತ್ತಾನೆ. ಮೂರು ದ್ವಾರಗಳ ಮೂಲಕ ಸ್ವಾಮಿಯ ದರ್ಶನ ಪಡೆಯುವ ರೀತಿಯಲ್ಲಿ ಗರ್ಭಗುಡಿ ನೆಲೆಗೊಂಡಿದೆ. ಈ ದೇವಾಲಯದ ರಹಸ್ಯ ಕೊಠಡಿಯಲ್ಲಿ ನಿಧಿಗಳು ಪತ್ತೆಯಾದ ನಂತರ, ಇದು ವಿಶ್ವ ಖ್ಯಾತಿಯನ್ನು ಗಳಿಸಿತು. ಅಲ್ಲದೇ ಭದ್ರತೆಯನ್ನೂ ಹೆಚ್ಚಿಸಲಾಗಿದೆ.
ಈ ದೇವಸ್ಥಾನದಲ್ಲಿ ದರ್ಶನಕ್ಕೆ ತೆರಳುವ ಭಕ್ತರು ಮೊಬೈಲ್ ಫೋನ್, ಡಿಜಿಟಲ್ ವಾಚ್ ಇತ್ಯಾದಿಗಳನ್ನು ಒಯ್ಯುವಂತಿಲ್ಲ. ತಿರುವಾಂಕೂರು ರಾಜರ ಕುಲದೈವವಾಗಿದ್ದ ಶ್ರೀಪದ್ಮನಾಭ ಸ್ವಾಮಿಗೆ ಪೂಜೆಗಳು ನಡೆಯುತ್ತಿವೆ. ಭಕ್ತರು ಸಾಂಪ್ರದಾಯಿಕ ಉಡುಗೆಯನ್ನು ಧರಿಸಿಯೇ ದೇವಾಲಯದ ಆವರಣವನ್ನು ಪ್ರವೇಶಿಸಬೇಕು.
ದೇವಸ್ಥಾನದ ಪಕ್ಕದಲ್ಲಿ ಬಾಹ್ಯ ಕಚೇರಿ ಕಾರ್ಯನಿರ್ವಹಿಸುತ್ತಿದೆ. ಈ ಹಿನ್ನೆಲೆಯಲ್ಲಿ, ದೇವಸ್ಥಾನದ ಕಚೇರಿ ಆವರಣದಲ್ಲಿ ಅಧಿಕಾರಿಯೊಬ್ಬರು ಮಾಂಸಾಹಾರ ಸೇವಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ವಿಚಾರಣೆ ನಡೆಸಿದಾಗ ಚಾಲಕನಾಗಿದ್ದ ಉದ್ಯೋಗಿಯೊಬ್ಬರು ಇತರ ನೌಕರರೊಂದಿಗೆ ಕುಳಿತು ಚಿಕನ್ ಬಿರಿಯಾನಿ ತಿನ್ನುತ್ತಿದ್ದರು ಎಂದು ತಿಳಿದುಬಂದಿದೆ. ಈ ಸಂಬಂಧ ಅಸ್ಪಷ್ಟ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ದೇವಸ್ಥಾನಕ್ಕೆ ಸಂಬಂಧಿಸಿದ ಯಾವುದೇ ಸ್ಥಳದಲ್ಲಿ ಮಾಂಸಾಹಾರ ಸೇವಿಸಬಾರದು ಎಂದು ತಂತ್ರಿ ಈಗಾಗಲೇ ಘೋಷಿಸಿದ್ದಾರೆ. ಈ ವೇಳೆ ದೇವಸ್ಥಾನದ ಮದಿಲಗಂ ಕಚೇರಿ ಸಂಕೀರ್ಣದಲ್ಲಿ ಚಿಕನ್ ಬಿರಿಯಾನಿ ತಿಂದಿದ್ದಾರೆ ಎಂಬ ಆರೋಪವಿದೆ. ದೇವಸ್ಥಾನದ ತಂತ್ರಿ ತರನಲ್ಲೂರು ನಂಬೂದಿರಿಪಾಡ್ ಮತ್ತು ಕವಡಿಯಾರ್ ಕೊಟ್ಟಾರ ಅಧಿಕಾರಿಗಳು ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಿಶ್ವ ಹಿಂದೂ ಪರಿಷತ್ ಮತ್ತು ಹಿಂದೂ ಸಂಯುಕ್ತ ವೇದಿಕೆಯ ಸಂಘಟನೆಗಳು ಕೂಡ ಘಟನೆಯನ್ನು ಖಂಡಿಸಿವೆ. ಚಿಕನ್ ಬಿರಿಯಾನಿ ತಿಂದ ನೌಕರನನ್ನು ಅಮಾನತು ಮಾಡಲಾಗಿದೆ ಎಂದು ವರದಿಯಾಗಿದೆ. ಮತ್ತು ಈ ಸಂಬಂಧ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಆಡಳಿತ ಸಮಿತಿ ನಿರ್ಧರಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.