ಅಮೆರಿಕ ಉಪಾಧ್ಯಕ್ಷ ಅಭ್ಯರ್ಥಿ ಜೆಡಿ ವ್ಯಾನ್ಸ್ ತಮ್ಮ ಹಿಂದೂ ಪತ್ನಿಯ ಬಗ್ಗೆ ಹೇಳಿದ್ದೇನು?!
• ಡಿ.ಸಿ.ಪ್ರಕಾಶ್
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಉಪಾಧ್ಯಕ್ಷ ಅಭ್ಯರ್ಥಿಯಾಗಿ 39 ವರ್ಷದ ಜೆ.ಡಿ.ವ್ಯಾನ್ಸ್ (James David Vance) ಆಯ್ಕೆಯಾಗಿದ್ದಾರೆ. ಅವರ ನಾಮನಿರ್ದೇಶನದ ನಂತರ ಸಂದರ್ಶನವೊಂದರಲ್ಲಿ, ಅವರ ಭಾರತೀಯ ಮೂಲದ ಪತ್ನಿ ಉಷಾ ಚಿಲುಕುರಿ (Usha Chilukuri) ಅವರು ತಮ್ಮ ವೈಯಕ್ತಿಕ ಮತ್ತು ಆಧ್ಯಾತ್ಮಿಕ ಜೀವನವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಹೇಳಿದ್ದಾರೆ.
ಅಮೆರಿಕದಲ್ಲಿ ನವೆಂಬರ್ 5 ರಂದು ಅಧ್ಯಕ್ಷೀಯ ಚುನಾವಣೆ ನಡೆಯಲಿದೆ. ಆಡಳಿತಾರೂಢ ಡೆಮಾಕ್ರಟಿಕ್ ಪಕ್ಷದ ಪರವಾಗಿ ಹಾಲಿ ಅಧ್ಯಕ್ಷ 81 ವರ್ಷದ ಜೋ ಬೈಡನ್ ಮತ್ತೆ ಸ್ಪರ್ಧಿಸುತ್ತಿದ್ದಾರೆ. ಮಾಜಿ ಅಧ್ಯಕ್ಷ ಮತ್ತು ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ (78) ಅವರ ವಿರುದ್ಧ ಸ್ಪರ್ಧಿಸುತ್ತಿದ್ದಾರೆ.
ಅಮೆರಿಕದ ಅಧ್ಯಕ್ಷ ಸ್ಥಾನದಂತೆಯೇ, ಉಪಾಧ್ಯಕ್ಷ ಸ್ಥಾನವೂ ಮುಖ್ಯವಾದದ್ದು. ಬೈಡನ್ ಅವರು ಪ್ರಸ್ತುತ ಉಪಾಧ್ಯಕ್ಷರಾಗಿರುವ ಕಮಲಾ ಹ್ಯಾರಿಸ್ ಅವರನ್ನೆ ಈ ಬಾರಿಯೂ ಉಪಾಧ್ಯಕ್ಷ ಅಭ್ಯರ್ಥಿಯಾಗಿ ಘೋಷಣೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ, ಟ್ರಂಪ್ ತಮ್ಮ ರಿಪಬ್ಲಿಕನ್ ಪಕ್ಷದ ಪರವಾಗಿ ಜೆ.ಡಿ.ವ್ಯಾನ್ಸ್ ಅವರನ್ನು ಉಪಾಧ್ಯಕ್ಷ ಅಭ್ಯರ್ಥಿಯಾಗಿ ಘೋಷಿಸಿದ್ದಾರೆ.
ವ್ಯಾನ್ಸ್ ಪ್ರಸ್ತುತ ಓಹಿಯೋ ರಾಜ್ಯದ ಸೆನೆಟರ್ (Senator) ಆಗಿದ್ದಾರೆ. ಅವರ ಪತ್ನಿ ಭಾರತೀಯ ಮೂಲದ ಉಷಾ ಚಿಲುಕುರಿ ಅವರು ಯೇಲ್ (Yale) ಕಾನೂನು ಶಾಲೆಯಲ್ಲಿ ಓದುತ್ತಿದ್ದಾಗ ಪರಿಚಯವಾಗಿದ್ದರು. ನಂತರ ಅವರು ಪ್ರೀತಿಸಿ 2014ರಲ್ಲಿ ವಿವಾಹವಾದರು. ಅವರ ಮದುವೆ ಹಿಂದೂ ಮತ್ತು ಕ್ರಿಶ್ಚಿಯನ್ ಸಂಪ್ರದಾಯದಂತೆ ನೆರವೇರಿತು. ಅವರಿಗೆ ಐವಾನ್ (6), ವಿವೇಕ್ (4) ಮತ್ತು ಮಿರಾಬೆಲ್ (2) ಎಂಬ ಮೂವರು ಮಕ್ಕಳಿದ್ದಾರೆ.
ಅಭ್ಯರ್ಥಿಯಾಗಿ ಘೋಷಣೆಯಾದ ನಂತರ ವ್ಯಾನ್ಸ್ ಅವರ ಸಂದರ್ಶನ:
“ನಾನು ಕ್ರಿಶ್ಚಿಯನ್ ಆಗಿ ಬೆಳೆದರೂ, ನಾನು ದೀಕ್ಷಾಸ್ನಾನ (Baptism) ಪಡೆದಿರಲಿಲ್ಲ. ನಾನು ಕಥೋಲಿಕ (Catholic) ನಂಬಿಕೆಗಳಿಗೆ ಬದ್ಧನಾಗಿರಲಿಲ್ಲ. ನನ್ನ ಭಾರತೀಯ ಮೂಲದ ಹೆಂಡತಿಯ ಹಿಂದೂ ಧರ್ಮವು ಸವಾಲುಗಳನ್ನು ಎದುರಿಸಲು ನನಗೆ ಸಹಾಯ ಮಾಡಿತು. ಅಲ್ಲದೆ, ಕಥೋಲಿಕ ನಂಬಿಕೆಗಳನ್ನು ಒಪ್ಪಿಕೊಳ್ಳುವಲ್ಲಿ ಇದು ಸಹಕಾರಿಯಾಗಿತ್ತು.
ಹಾಗಾಗಿ ಮದುವೆಯ ನಂತರ ನಾನು ಮೊದಲ ಬಾರಿಗೆ ದೀಕ್ಷಾಸ್ನಾನ ಪಡೆದುಕೊಂಡೆ. ಉಷಾ ನಿಜವಾಗಿಯೂ ಕ್ರಿಶ್ಚಿಯನ್ ಅಲ್ಲದಿದ್ದರೂ, ನಾನು ಕಥೋಲಿಕ ನಂಬಿಕೆಯಲ್ಲಿ ಮತ್ತೆ ತೊಡಗಿಸಿಕೊಳ್ಳಲು ಪ್ರಾರಂಭಿಸಿದಾಗ ನನಗೆ ಉಷಾ ಬೆಂಬಲವಾಗಿ ನಿಂತಿದ್ದರು” ಎಂದು ಹೇಳಿದ್ದಾರೆ.