ಸಂಸತ್ ಭವನದಲ್ಲಿ ಮಳೆ ನೀರು ಸೋರಿಕೆ: ಕಾಂಗ್ರೆಸ್ ನಿಲುವಳಿ ಸೂಚನೆ ಪ್ರಸ್ತಾಪ!
ನವದೆಹಲಿ: ರಾಜಧಾನಿ ದೆಹಲಿಯ ನಾನಾ ಭಾಗಗಳಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು, ನೂತನ ಸಂಸತ್ ಭವನದ ಮಧ್ಯಭಾಗದಲ್ಲಿ ಮಳೆ ನೀರು ಸೋರಿಕೆಯಾಗುತ್ತಿದೆ. ಸೋರುವ ಜಾಗದಲ್ಲಿ ಪ್ಲಾಸ್ಟಿಕ್ ಬಕೆಟ್ ಇಟ್ಟಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಂಸತ್ತಿನ ಸಂಕೀರ್ಣದಲ್ಲಿ ಮಳೆ ನೀರು ಸಂಗ್ರಹವಾಗಿದ್ದು, ಹೊಸ ಕಟ್ಟಡದ ಮಧ್ಯ ಭಾಗದಲ್ಲಿ ಮಳೆ ನೀರು ಸೋರಿಕೆಯಾಗಿರುವುದನ್ನು ಪ್ರತಿಪಕ್ಷಗಳು ತೀವ್ರವಾಗಿ ಟೀಕಿಸಿವೆ.
ಈ ಹಿನ್ನೆಲೆಯಲ್ಲಿ, ನೂತನ ಸಂಸತ್ ಭವನದಲ್ಲಿ ಮಳೆ ನೀರು ಸೋರಿಕೆ ವಿಚಾರವಾಗಿ ಲೋಕಸಭೆಯಲ್ಲಿ ಚರ್ಚಿಸಲು ಕಾಂಗ್ರೆಸ್ ಸಂಸದ ಡಾ.ಮಾಣಿಕಂ ಠಾಕೂರ್ ಮುಂದೂಡಿಕೆ ನಿಲುವಳಿ ಸೂಚನೆ ನೀಡಿದ್ದಾರೆ.
ಆ ನೋಟಿಸ್‌ನಲ್ಲಿ ‘ಸಂಸತ್ತಿನ ಕೇಂದ್ರ ಭಾಗದಲ್ಲಿ ಮಳೆ ನೀರು ಸೋರಿಕೆ ವಿಚಾರವನ್ನು ನಿಲುವಳಿ ಸೂಚನೆಯಡಿ ಚರ್ಚಿಸಬೇಕು. ಸರ್ವ ಪಕ್ಷಗಳ ಸಂಸದರನ್ನೊಳಗೊಂಡ ವಿಶೇಷ ಸಮಿತಿ ರಚಿಸಿ ಸಂಸತ್ ಭವನ ಪರಿಶೀಲನೆ ನಡೆಸಬೇಕು’ ಎಂದು ಕೇಳಿಕೊಂಡಿದ್ದಾರೆ.