ಪಾಕಿಸ್ತಾನ ಮೂರು ಭಾಗವಾಗಲಿದೆ; ನೀರಿಗಾಗಿ ಕೈ ಚಾಚಲಿದೆ: ಯೋಗಿ ಆದಿತ್ಯನಾಥ್
‘ಪಾಕಿಸ್ತಾನ ಪ್ರತಿ ಹನಿ ನೀರಿಗೂ ಕೈಚಾಚಲಿದೆ; ಮೂರು ಭಾಗವಾಗಲಿದೆ’ ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಕಾಶ್ಮೀರದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ‘ಪಾಕಿಸ್ತಾನ ಭಯೋತ್ಪಾದನೆಯನ್ನು ಹರಡುತ್ತಲೇ ಇದೆ. 1960ರ ಭಾರತ-ಪಾಕಿಸ್ತಾನ ನದಿ ನೀರಿನ ಒಪ್ಪಂದವನ್ನು ದುರ್ಬಳಕೆ ಮಾಡಿಕೊಂಡಿದೆ. ಇದೇ ರೀತಿ ಮುಂದುವರಿದರೆ ಸದ್ಯ ಭಿಕ್ಷಾಪಾತ್ರೆ ಹೊತ್ತಿರುವ ಪಾಕಿಸ್ತಾನ ಭವಿಷ್ಯದಲ್ಲಿ ಪ್ರತಿ ಹನಿ ನೀರಿಗೂ ಕೈಚಾಚುವ ಪರಿಸ್ಥಿತಿ ಉಂಟಾಗುತ್ತದೆ. ಆ ದೇಶ ಮೂರು ಭಾಗವಾಗಿ ಒಡೆಯುತ್ತದೆ.
ಇದೀಗ ಪಾಕಿಸ್ತಾನ ಎರಡು ಕಾರಣಗಳಿಗಾಗಿ ತತ್ತರಿಸಿ ಹೋಗಿದೆ. ಮೊದಲನೆಯದು, ಆ ದೇಶವು ತನ್ನದೇ ಆದ ಚಟುವಟಿಕೆಗಳಿಂದ ತೊಂದರೆಯಲ್ಲಿ ಸಿಲುಕಿಕೊಂಡಿದೆ. ಎರಡನೆಯದು, ಬಲೂಚಿಸ್ತಾನದ ಜನರನ್ನು ವಿದೇಶಿಯರಂತೆ ಪರಿಗಣಿಸುವುದರಿಂದ ಆ ರಾಜ್ಯದ ಯಾರೂ ಪಾಕಿಸ್ತಾನದೊಂದಿಗೆ ಸಂಬಂಧ ಹೊಂದಲು ಬಯಸುತ್ತಿಲ್ಲ.
ಪಾಕಿಸ್ತಾನ ಆಕ್ರಮಿತ ಕಾಶ್ಮೀರದಿಂದ ಹಿಂದೆ ಸರಿಯಬೇಕು. ಬಿಜೆಪಿ ಸರ್ಕಾರದ ಕ್ರಮಗಳು, ವಿಶೇಷ ಸ್ಥಾನಮಾನವನ್ನು ನೀಡುವ ವಿಧಿ 370 ಮತ್ತು 35A ರದ್ದತಿಯಿಂದಾಗಿ, ಜಮ್ಮು ಮತ್ತು ಕಾಶ್ಮೀರವು ಭಯೋತ್ಪಾದನೆ ಮತ್ತು ಭ್ರಷ್ಟಾಚಾರದಿಂದ ಮುಕ್ತವಾಗಿದೆ. ಪ್ರವಾಸಿಗರು ಸುಲಭವಾಗಿ ಅಲ್ಲಿಗೆ ಹೋಗಬಹುದಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಜಮ್ಮು ಮತ್ತು ಕಾಶ್ಮೀರ ಈಗ ಭಯೋತ್ಪಾದನೆಯ ಬೆದರಿಕೆಯಿಂದ ಬದಲಾಗಿ ಮತ್ತೆ ಪ್ರವಾಸಿ ತಾಣವಾಗಿ ರೂಪುಗೊಳ್ಳುತ್ತಿದೆ. ಅಲ್ಲದೆ, ದೆಹಲಿ-ಕಾಶ್ಮೀರಕ್ಕೆ ವಂದೇ ಭಾರತ್ ರೈಲು ಕೂಡ ಒದಗಿಸಲಾಗಿದೆ.
ಇಲ್ಲಿನ ಬಹರ್ವಾಲ್, ಗುಜ್ಜರ್, ದಲಿತ ಮತ್ತು ವಾಲ್ಮೀಕಿ ಸಮುದಾಯಗಳು ದೀರ್ಘಕಾಲದಿಂದ ತಮ್ಮ ಹಕ್ಕುಗಳನ್ನು ಪಡೆಯಲೂ ಸಾಧ್ಯವಾಗುತ್ತಿರಲಿಲ್ಲ. ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಉಪಕ್ರಮವು ಅವರಿಗೆ ಉದ್ಯೋಗಾವಕಾಶಗಳನ್ನು ಒದಗಿಸಿದೆ ಮತ್ತು ಅವರ ಜೀವನಮಟ್ಟವನ್ನು ಸುಧಾರಿಸಿದೆ.
ಈಗಾಗಲೇ ಕಾಶ್ಮೀರದಲ್ಲಿದ್ದ ರಾಜಕಾರಣಿಗಳು ವಿದೇಶಗಳಲ್ಲಿ ಮತ್ತು ದೆಹಲಿಯನ್ನು ಆಶ್ರಯಿಸಿಕೊಂಡಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಅಭಿವೃದ್ಧಿಯನ್ನು ಮರೆತಿದ್ದಾರೆ’ ಎಂದು ಹೇಳಿದ್ದಾರೆ.