ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಆತ್ಮಾಹುತಿ ದಾಳಿಗೆ 21 ಮಂದಿ ಸಾವನ್ನಪ್ಪಿರುವ ದಾರುಣ ಘಟನೆ ಆಘಾತವನ್ನು ಉಂಟು ಮಾಡಿದೆ.
ಪಾಕಿಸ್ತಾನದ ಬಲೂಚಿಸ್ತಾನದ ಕ್ವೆಟ್ಟಾ ರೈಲು ನಿಲ್ದಾಣದಲ್ಲಿ ಇಂದು (ನವೆಂಬರ್ 09) ಬಾಂಬ್ ಸ್ಫೋಟ ಸಂಭವಿಸಿದೆ. ರೈಲು ನಿಲ್ದಾಣದಲ್ಲಿ ಜಮಾಯಿಸಿದ್ದ 21 ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. 30ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದೆ. ಇದರಿಂದ ಸಾವಿನ ಸಂಖ್ಯೆ ಹೆಚ್ಚಾಗುವ ಆತಂಕವಿದೆ.
ಸ್ಫೋಟ ಸಂಭವಿಸಿದಾಗ ಪೇಶಾವರಕ್ಕೆ ಹೋಗುವ ಪ್ಯಾಸೆಂಜರ್ ರೈಲು ಪ್ಲಾಟ್‌ಫಾರ್ಮ್‌ನಲ್ಲಿ ನಿಂತಿತ್ತು. ಸ್ಫೋಟದ ಶಬ್ದ ಕೇಳಿ ರೈಲಿನಲ್ಲಿದ್ದ ಜನರು ಕಿರುಚಿಕೊಂಡು ಓಡುತ್ತಿರುವ ವಿಡಿಯೋವನ್ನು ಅಂತರ್ಜಾಲದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ಬಗ್ಗೆ ಮಾತನಾಡಿದ ಕ್ವೆಟ್ಟಾದ ಎಸ್‌ಎಸ್‌ಪಿ ಮೊಹಮ್ಮದ್ ಬಲೂಚ್, ‘ಇದು ಆತ್ಮಹತ್ಯಾ ದಾಳಿಯಂತೆ ಕಾಣುತ್ತಿದೆ. ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ’ ಎಂದು ಹೇಳಿದರು. ದಾಳಿಯ ಹೊಣೆಯನ್ನು ಇನ್ನೂ ಯಾವುದೇ ಸಂಘಟನೆ ಹೊತ್ತುಕೊಂಡಿಲ್ಲ.