ರಷ್ಯಾ: “ಲೈಂಗಿಕ ಸಚಿವಾಲಯ” ಹೆರಿಗೆಯನ್ನು ಉತ್ತೇಜಿಸಲು ಹೊಸ ಸಚಿವಾಲಯವನ್ನು ರಚಿಸಲಿರುವ ಪುಟಿನ್ ಸರ್ಕಾರ?
ರಷ್ಯಾದಲ್ಲಿ ಕ್ಷೀಣಿಸುತ್ತಿರುವ ಜನಸಂಖ್ಯೆಯನ್ನು ಹೆಚ್ಚಿಸಲು ಆ ದೇಶ ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ರಷ್ಯಾದ ಸರ್ಕಾರವು ಕೆಲಸದ ಸ್ಥಳದಲ್ಲಿ ಉದ್ಯೋಗಿಗಳಲ್ಲಿ ಲೈಂಗಿಕತೆಯನ್ನು ಉತ್ತೇಜಿಸಲು ಮತ್ತು ಮೊದಲ ಬಾರಿಗೆ ಡೇಟಿಂಗ್ ಹೋಗುವವರಿಗೆ ಸ್ಟೈಪೆಂಡ್ ನೀಡಲು ಕಾರ್ಯಕ್ರಮಗಳನ್ನು ಪರಿಚಯಿಸಿದೆ.
ರಷ್ಯಾದ ಮಿಲಿಟರಿ ಮತ್ತು ಆರ್ಥಿಕತೆಯು ಜನಸಂಖ್ಯೆಯನ್ನು ಅವಲಂಬಿಸಿರುವುದರಿಂದ ಸರ್ಕಾರವು ಈ ವಿಷಯಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಿದೆ.
ಈಗ, ಮಾಸ್ಕ್ವಿಚ್ ಮ್ಯಾಗಜೀನ್ (Moskvich Magazine) ಎಂಬ ರಷ್ಯಾದ ಪ್ರಕಟಣೆಯ ಪ್ರಕಾರ, ಜನಸಂಖ್ಯೆಯ ಬಿಕ್ಕಟ್ಟನ್ನು ಎದುರಿಸಲು “ಲೈಂಗಿಕ ಸಚಿವಾಲಯ” (Ministry of Sex) ಎಂಬ ಪ್ರತ್ಯೇಕ ವಿಭಾಗವನ್ನು ರಚಿಸಲು ಅಧಿಕಾರಿಗಳು ಚಿಂತನೆ ನಡೆಸುತ್ತಿದ್ದಾರೆ ಎಂದು ವರದಿ ಮಾಡಿದೆ.
ರಾತ್ರಿ 10 ಗಂಟೆಯಿಂದ ಇಂಟರ್ನೆಟ್ ಮತ್ತು ದೀಪಗಳನ್ನು ಸ್ವಿಚ್ ಆಫ್ (Switch off) ಮಾಡಲು ಜನರನ್ನು ಒತ್ತಾಯಿಸುವುದು, ಮೊದಲ ಬಾರಿಗೆ ಡೇಟಿಂಗ್ ಹೋಗುವವರಿಗೆ ಐದು ಸಾವಿರ ರೂಬಲ್ (ಭಾರತೀಯ ಕರೆನ್ಸಿಯಲ್ಲಿ ರೂ.4,302) ನೀಡುವುದು, ನವವಿವಾಹಿತರಿಗೆ ಮೊದಲ ರಾತ್ರಿಯ ವೆಚ್ಚವನ್ನು (26,300 ರೂಬಲ್ಸ್ ವರೆಗೆ) ಸರ್ಕಾರವೇ ಭರಿಸುವುದು ಒಳಗೊಂಡಂತೆ ಹಲವಾರು ವಿಚಾರಗಳನ್ನು ಚರ್ಚಿಸಲಾಗಿದೆ.
ಗೃಹಿಣಿಯರಿಗೆ ಪ್ರಶಸ್ತಿ ನೀಡುವಂತಹ ಯೋಜನೆಗಳನ್ನು ಸಹ ಪರಿಗಣಿಸಲಾಗಿದೆ. ರಷ್ಯಾಯಾದ ಕೆಲವು ಪ್ರಾಂತ್ಯಗಳು ಜನನ ಪ್ರಮಾಣವನ್ನು ಹೆಚ್ಚಿಸಲು ಗಂಭೀರ ಪ್ರಯತ್ನಗಳನ್ನು ಪ್ರಾರಂಭಿಸಿವೆ.
ಖಬರೋವ್ಸ್ಕ್ (Khabarovsk) ಪ್ರಾಂತ್ಯದ ಸರ್ಕಾರವು 18 ರಿಂದ 23 ವರ್ಷದೊಳಗಿನ ಮಹಿಳೆಯರಿಗೆ ತಮ್ಮ ಮೊದಲ ಹೆರಿಗೆಯ ಸಂದರ್ಭದಲ್ಲಿ ಒಂದು ಲಕ್ಷ ರೂಪಾಯಿಗಳ ಸ್ಟೈಫಂಡ್ ನೀಡಲು ಮುಂದಾಗಿದೆ. ಚೆಲ್ಯಾಬಿನ್ಸ್ಕ್ (Chelyabinsk) ಪ್ರಾಂತ್ಯದಲ್ಲಿ ಮೊದಲ ಮಗುವಿಗೆ ರೂ.9.2 ಲಕ್ಷದವರೆಗೆ ಸ್ಟೈಫಂಡ್ ನೀಡಲಾಗುತ್ತದೆ.
ರಷ್ಯಾದಲ್ಲಿ ಮಹಿಳೆಯರ ಕುಟುಂಬ ಯೋಜನೆಗಳು, ಮುಟ್ಟಿನ ಆರೋಗ್ಯ, ಲೈಂಗಿಕ ಉದ್ದೇಶಗಳು ಇತ್ಯಾದಿಗಳ ಡೇಟಾವನ್ನು ದೇಶಾದ್ಯಂತ ಸಂಗ್ರಹಿಸಲಾಗುತ್ತದೆ. ಇದಕ್ಕಾಗಿ ಮಹಿಳೆಯರಿಗೆ ಕೇಳುವ ಪ್ರಶ್ನೆಗಳಲ್ಲಿ, ನೀವು ಯಾವಾಗ ಹೆಚ್ಚು ಲೈಂಗಿಕವಾಗಿ ಸಕ್ರಿಯರಾಗಿರುತ್ತೀರಿ? ನೀವು ಜನನ ನಿಯಂತ್ರಣ ಮಾತ್ರೆಗಳನ್ನು ಬಳಸುತ್ತೀರಾ? ಮುಂಬರುವ ವರ್ಷದಲ್ಲಿ ನೀವು ಮಗುವನ್ನು ಹೊಂದಲು ಯೋಜಿಸುತ್ತಿದ್ದೀರಾ? ಮುಂತಾದ ವೈಯಕ್ತಿಕ ಪ್ರಶ್ನೆಗಳನ್ನು ಕೇಳಲಾಗುತ್ತದೆ.
ಕಂಪನಿಗಳ ಮೂಲಕ ಕೇಳಲಾಗುವ ಇಂತಹ ಪ್ರಶ್ನೆಗಳಿಗೆ ಅನೇಕ ಮಹಿಳೆಯರು ಉತ್ತರಿಸಲು ಬಯಸುವುದಿಲ್ಲ ಎಂದು ಹೇಳಲಾಗುತ್ತದೆ. ಹಾಗೆ ಪ್ರತಿಕ್ರಿಯಿಸದ ಮಹಿಳೆಯರನ್ನು ವೈಯಕ್ತಿಕವಾಗಿ ಪ್ರತಿಕ್ರಿಯಿಸಲು ವೈದ್ಯರ ಬಳಿ ಆಹ್ವಾನಿಸಲಾಗುತ್ತದೆ.
ಮಕ್ಕಳನ್ನು ಹೊಂದಿರದ ‘ಸ್ವತಂತ್ರ ಜೀವನಶೈಲಿ’ಯನ್ನು ಉತ್ತೇಜಿಸುವ ಆನ್‌ಲೈನ್ ಕಂಟೆಂಟ್ (Content) ರಚನೆಕಾರರು ಮತ್ತು ಮಾಧ್ಯಮಗಳಿಗೆ ದಂಡ ವಿಧಿಸಲು ರಷ್ಯಾ ನಿರ್ಧರಿಸಿದೆ ಎಂದು ಬಿಸಿನೆಸ್ ಇನ್ಸೈಡರ್ (Business Insider) ವರದಿ ಮಾಡಿದೆ.
ರಷ್ಯಾದ ಜನನ ಪ್ರಮಾಣವು ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಕಳೆದ ಜೂನ್ ನಲ್ಲಿ ಕೇವಲ 98,000 ಶಿಶುಗಳು ಮಾತ್ರ ಜನಿಸಿದೆ. ಮಾಸಿಕ ಮಕ್ಕಳ ಜನನಗಳ ಸಂಖ್ಯೆ ಒಂದು ಲಕ್ಷಕ್ಕಿಂತ ಕೆಳಗಿಳಿದಿರುವುದು ಇದೇ ಮೊದಲು.
ಉಕ್ರೇನ್ ವಿರುದ್ಧದ ಯುದ್ಧದಲ್ಲಿ ರಷ್ಯಾ ಅನೇಕ ಸೈನಿಕರನ್ನು ಕಳೆದುಕೊಂಡಿದೆ. ಮೂರು ವರ್ಷಗಳಿಂದ ಯುದ್ಧ ನಡೆಯುತ್ತಿರುವುದರಿಂದ ಜನರು ಮಕ್ಕಳನ್ನು ಹೊಂದಲು ಭಯಪಡುತ್ತಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.