ಮೂಲಭೂತ ಹಕ್ಕುಗಳನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ: ಹೊಸ ವರ್ಷದ ಪ್ರಾರ್ಥನೆ ಪ್ರಕರಣದಲ್ಲಿ ಮಧ್ಯಪ್ರದೇಶ ಹೈಕೋರ್ಟ್ ಆದೇಶ!
ಭೋಪಾಲ್: ಸಂವಿಧಾನದ 25ನೇ ಪರಿಚ್ಛೇದದ ಪ್ರಕಾರ ಧರ್ಮದ ಆಧಾರದ ಮೇಲೆ ಸಭೆ ಸೇರಿ ಪ್ರಾರ್ಥನೆ ಮಾಡುವುದು ಅವರವರ ಮೂಲಭೂತ ಹಕ್ಕಾಗಿದೆ. ಬೇರೆ ಸಮುದಾಯದವರ ಆಕ್ಷೇಪದ ಆಧಾರದ ಮೇಲೆ ಅದನ್ನು ತಡೆಗಟ್ಟಲು ಸಾಧ್ಯವಿಲ್ಲ ಎಂದು ಮಧ್ಯಪ್ರದೇಶ ಹೈಕೋರ್ಟ್ ಹೇಳಿದೆ.
ಮಧ್ಯಪ್ರದೇಶದ ಜಬುವಾ ಜಿಲ್ಲೆಯ ಕಥ್ವಾಡ ಗ್ರಾಮದಲ್ಲಿ ಜ.1ರಂದು ಸಭೆ ನಡೆಸಿ ಪ್ರಾರ್ಥನೆ ಸಲ್ಲಿಸಲು ಅನುಮತಿ ನೀಡುವಂತೆ ಕ್ರೈಸ್ತ ಸಮುದಾಯದ ಸದಸ್ಯರೊಬ್ಬರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದರು. ಜಿಲ್ಲಾಡಳಿತ ಇದಕ್ಕೆ ಆರಂಭದಲ್ಲಿ ಅನುಮತಿ ನೀಡಿದ್ದರೂ, ಹಿಂದೂ ಸಂಘಟನೆಯ ಆಕ್ಷೇಪದಿಂದ ಅನುಮತಿಯನ್ನು ರದ್ದುಗೊಳಿಸಿತ್ತು.
ಇದರ ನಂತರ, ಅನುಮತಿ ಕೋರಿದ ವ್ಯಕ್ತಿ ಮಧ್ಯಪ್ರದೇಶದ ಉಚ್ಚ ನ್ಯಾಯಾಲಯದಲ್ಲಿ ಸಂವಿಧಾನದ 226ನೇ ವಿಧಿಯ ಅಡಿಯಲ್ಲಿ ಅರ್ಜಿಯನ್ನು ಸಲ್ಲಿಸಿದರು. ಅದರಲ್ಲಿ ‘ಹೊಸ ವರ್ಷದ ದಿನದಂದು ಕ್ರೈಸ್ತರು ಕೂಡಿ ಪ್ರಾರ್ಥನೆ ಸಲ್ಲಿಸಲು ಅನುಮತಿ ನೀಡುವಂತೆ ಜಿಲ್ಲಾಡಳಿತಕ್ಕೆ ಆದೇಶಿಸಬೇಕು’ ಎಂದು ಕೇಳಲಾಗಿತ್ತು.
ಈ ಕುರಿತು ವಿಚಾರಣೆ ನಡೆಸಿದ ನ್ಯಾಯಾಧೀಶ ಸುಬೋಧ ಅಭ್ಯಂಕರ್ (Justice Subodh Abhyankar) ಅವರು ಹೊರಡಿಸಿದ ಆದೇಶ: ‘ಪ್ರಾರ್ಥನೆ ಸಲ್ಲಿಸಲು ಅನುಮತಿ ಕೋರಿ ಅರ್ಜಿ ಸಲ್ಲಿಸಿದ ಅರ್ಜಿದಾರರು, ಜಿಲ್ಲಾಡಳಿತ ವಿಧಿಸುವ ನಿಯಮಗಳನ್ನು ಪಾಲಿಸುವುದಾಗಿ ತಿಳಿಸಿದ್ದಾರೆ. ಇದಕ್ಕೆ ಅನುಮತಿ ನೀಡಿದ್ದ ಜಿಲ್ಲಾಡಳಿತ, ಹಿಂದೂ ಸಂಘಟನೆಯಿಂದ ವಿರೋಧ ವ್ಯಕ್ತವಾದ ಕಾರಣ ಈ ಹಿಂದೆ ನೀಡಿದ್ದ ಅನುಮತಿಯನ್ನು ರದ್ದುಗೊಳಿಸಿತ್ತು. ಆದರೆ, ಇದಕ್ಕೂ ಮುನ್ನ ಅರ್ಜಿದಾರರಿಂದ ಯಾವುದೇ ವಿವರಣೆಯನ್ನು ಕೇಳಿಲ್ಲ.
ಅರ್ಜಿದಾರರು ಕಳೆದ ಕೆಲವು ವರ್ಷಗಳಿಂದ ವರ್ಷದ ಆರಂಭದಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಇದಕ್ಕೆ ದಾಖಲೆಗಳಿವೆ. ಇಂತಹ ಸಂದರ್ಭಗಳಲ್ಲಿ, ಕೇವಲ ಒಂದು ಸಮುದಾಯದ ಸದಸ್ಯರು ಆಕ್ಷೇಪಿಸುತ್ತಿದ್ದಾರೆ ಎಂಬ ಕಾರಣಕ್ಕೆ, ಸಂವಿಧಾನದ 25ನೇ ವಿಧಿಯ ಅಡಿಯಲ್ಲಿ ಒಂದು ಸ್ಥಳದಲ್ಲಿ ಸಭೆ ಸೇರಿ ಪ್ರಾರ್ಥನೆ ಮಾಡಲು ನೀಡಿದ ಅನುಮತಿಯನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ.
ಜಿಲ್ಲಾಧಿಕಾರಿ, ಅರ್ಜಿದಾರರಿಂದ ಯಾವುದೇ ವಿವರಣೆ ಪಡೆಯದೆ, ಅನ್ಯ ಧರ್ಮದ ವ್ಯಕ್ತಿಯೊಬ್ಬರು ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂಬ ಕಾರಣಕ್ಕೆ ಈ ಹಿಂದೆ ನೀಡಿದ್ದ ಅನುಮತಿಯನ್ನು ರದ್ದುಗೊಳಿಸಿದ್ದಾರೆ. ಹೀಗಾಗಿ ಜಿಲ್ಲಾಧಿಕಾರಿ ಹೊರಡಿಸಿದ್ದ ಆದೇಶವನ್ನು ರದ್ದುಗೊಳಿಸುತ್ತಿದ್ದೇವೆ. ಪ್ರಾರ್ಥನಾ ಸಭೆ ಯಾವುದೇ ಗೊಂದಲವಿಲ್ಲದೆ ನಡೆಯುವುದನ್ನು ಜಿಲ್ಲಾಡಳಿತ ಖಚಿತಪಡಿಸಬೇಕು” ಎಂದು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.