ಸಂತ ಶಿಶುನಾಳ ಷರೀಫ್ ಸೌಹಾರ್ದತೆಯ ಸಂಕೇತ
ನರೇನಹಳ್ಳಿ ಅರುಣ್ ಕುಮಾರ್
ಚಿತ್ರದುರ್ಗ: ಚಿತ್ರದುರ್ಗದ ಮುಸ್ಲಿಂ ಕಲ್ಚರಲ್ ಅಕಾಡೆಮಿ ವತಿಯಿಂದ ಜನವರಿ 4 ಹಮ್ಮಿಕೊಳ್ಳಲಾಗಿದ್ದ ಸಂತ ಶಿಶುನಾಳ ಷರೀಫರ ತತ್ವಪದಗಳ ಗಾಯನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವು ಸಮಯೋಚಿತವಾಗಿತ್ತು.
ಗುರುಗೋವಿಂದ ಭಟ್ ಮತ್ತು ಶಿಶುನಾಳ ಷರೀಫ್ ಅವರು ನಾಡಿಗೆ ನೀಡಿರುವ ಸಂದೇಶವು ಮನುಷ್ಯತ್ವ, ಮಾನವೀಯತೆಗಳನ್ನು ಮೈಗೂಡಿಸಿಕೊಂಡು ಬದುಕು ಕಟ್ಟಿಕೊಳ್ಳಬೇಕು ಮತ್ತು ಸಹಭಾಳ್ವೆಯಿಂದ ಜೀವಿಸಬೇಕು ಎಂಬ ಸಂದೇಶವು ಇಂದಿಗೂ ಪ್ರಸ್ತುತವಾಗಿದೆ.
ಜೀವನ ತತ್ವಗಳನ್ನು ತಮ್ಮ ಸುತ್ತಮುತ್ತಲಿನ ಜನರಲ್ಲಿ ಬೆಳೆಸುವ ಪ್ರಯತ್ನವೂ ಇಂದಿನ ಪೀಳಿಗೆಯ ಜನರಿಗೆ ದಾರಿದೀಪವಾಗಿದೆ.
ಗ್ರಾಮೀಣ ಭಾಗದ ಜನರ ಜೀವನಾಡಿಯಾಗಿ ಕೆಲಸಮಾಡಿರುವ ಗೋವಿಂದಭಟ್ ಮತ್ತು ಶಿಶುನಾಳ ಷರೀಫ್ ಅವರು ಜನಸಾಮಾನ್ಯರಿಗೆ ಕೋಮು ಸಾಮರಸ್ಯ ಪಾಠ ಹೇಳಿದ್ದು, ಸೌಹಾರ್ದತೆ ಹಾಗೂ ಸಹಭಾಳ್ವೆಯ ಜೀವನ ನಡೆಸಲು ಮಾರ್ಗದರ್ಶನ ಮಾಡಿರುವುದು ಇಂದಿನ ಕಾಲಕ್ಕೂ ಸರಿಯಾಗಿದೆ.
ತತ್ವ ಪದಗಳ ಮೂಲಕ ಜೀವನ ಮೌಲ್ಯಗಳನ್ನು ಸಾರಿದ ಷರೀಫ್ ಅವರು ತನ್ನ ಗುರುವಿನ ಮಾರ್ಗದರ್ಶನವನ್ನು ಇಡೀ ಸಮಾಜಕ್ಕೆ ಬಿತ್ತುವ ಮುಖಾಂತರ ಸಮಾಜವನ್ನು ಸಮಾನತೆಯಿಂದ ನೋಡುವ ಪರಿಪಾಠವನ್ನು ಬೆಳೆಸಿದರು.
ಪ್ರಸ್ತುತ ಕಾಲಗಟ್ಟದಲ್ಲಿ, ಮನುಷ್ಯ ಮನುಷ್ಯರ ನಡುವೆ ವಿಷಬೀಜ ಬಿತ್ತುವ ಮೂಲಕ ದ್ವೇಷ ಬೆಳೆ ಪಡೆಯುವ ಹವಣಿಕೆಯಲ್ಲಿರುವ ವಿಷಕಂಕಟಂಕರು, ವಿಶ್ವಕ್ಕೆ ಕಂಟಕರಾಗುವ ದಿನಮಾನಗಳು ದೂರ ಉಳಿದಿಲ್ಲ!
ಯಾವ ಭೂಮಿ ಮಾನವೀಯತೆ, ಮನುಷ್ಯತ್ವ, ಮಾತೃತ್ವವನ್ನು ಬೆಳೆಸಿಕೊಂಡು ಬಂದಿತ್ತೊ ಅಂತಹ ಭೂಮಿಯಲ್ಲಿ ಇಂದು ದ್ವೇಷ, ಹಗೆತನ ಬೆಳೆಸಿ ಧರ್ಮ, ಧರ್ಮಗಳ ನಡುವೆ ಕಚ್ಚಾಟಗಳನ್ನು ಇಡುತ್ತಿರುವುದು ಗೋವಿಂದ ಬಟ್, ಶಿಶುನಾಳ ಷರೀಫ್ ಅವರು ತತ್ವ, ವಿಚಾರ, ಸಂದೇಶಗಳಿಗೆ ಮಾಡಿದಂತ ಅಪಚಾರವಾಗಿದೆ.
ಕನ್ನಡ ನಾಡಿನಲ್ಲಿ ಸಾಧು, ಸಂತರು, ಶರಣರು, ವಚನಕಾರರು ಬಂದು ಹೋಗಿದ್ದಾರೆ. ಎಲ್ಲರ ಸಂದೇಶವು ಒಂದೇ ಆಗಿತ್ತು. ಅದು ಶಾಂತಿ ಮತ್ತು ಸೌಹಾರ್ದತೆ.
ಶಿಶುನಾಳ ಷರೀಫ್ ಅವರು ತತ್ವ ಗೀತಾ ಗಾಯನ ಮಾಡುವ ಮೂಲಕ, ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಕಾರ್ಯವನ್ನು ಗೆಳೆಯ ಮಹಮದ್ ಹನೀಫ್ ಮತ್ತು ತಂಡದವರು ಮುಸ್ಲಿಂ ಕಲ್ಚರಲ್ ಅಕಾಡೆಮಿ (Muslim Cultural Academy) ಮೂಲಕ ಮಾಡುವ ಪ್ರಯತ್ನವು ಅತ್ಯುತ್ತಮವಾಗಿದೆ.