‘ಇಂಟರ್‌ಪೋಲ್’ನಂತೆಯೇ ಭಾರತದಲ್ಲಿ ‘ಭಾರತ್‌ಪೋಲ್’ ರಚನೆ: ಅಮಿತ್ ಶಾ
• ಪ್ರತಿಭನ್ ಡಿಸಿ
ನವದೆಹಲಿ: ಅಂತರಾಷ್ಟ್ರೀಯ ಅಪರಾಧ ತನಿಖಾ ಸಂಸ್ಥೆ ‘ಇಂಟರ್‌ಪೋಲ್’ನಂತೆಯೇ ಭಾರತದಲ್ಲಿ ‘ಭಾರತ್‌ಪೋಲ್’ ಅನ್ನು ರಚಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ದೆಹಲಿಯ ಭಾರತ್ ಮಂಟಪದಲ್ಲಿ ಕೇಂದ್ರೀಯ ತನಿಖಾ ದಳ (ಸಿಬಿಐ) ಅಭಿವೃದ್ಧಿಪಡಿಸಿರುವ ‘ಭಾರತ್‌ಪೋಲ್’ ವೆಬ್‌ಸೈಟ್‌ಗೆ ಇಂದು ಚಾಲನೆ ನೀಡಿದರು. ಭಾರತದಲ್ಲಿ ಅಂತರಾಷ್ಟ್ರೀಯ ಪೊಲೀಸ್ ಇಲಾಖೆಯ ಬ್ಯೂರೋ ಆಗಿರುವ ಸಿಬಿಐ ಸಂಸ್ಥೆ, ಕಾನೂನು ಜಾರಿ ಸಂಸ್ಥೆಗಳು ಸೇರಿದಂತೆ ದೇಶಾದ್ಯಂತ ವಿವಿಧ ತನಿಖಾ ಸಂಸ್ಥೆಗಳೊಂದಿಗೆ ಸೇರಿ ಅಪರಾಧ ಸಂಬಂಧಿತ ವಿಷಯಗಳ ಕುರಿತು ಅಂತರರಾಷ್ಟ್ರೀಯ ಗುಪ್ತಚರ ಸಂಸ್ಥೆಗಳೊಂದಿಗೆ ಸಹಕರಿಸಲು ವೆಬ್‌ಸೈಟ್ ಅನ್ನು ಅಭಿವೃದ್ಧಿಪಡಿಸಿದೆ.
ಈ ಕುರಿತು ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ” ಅಂತರರಾಷ್ಟ್ರೀಯ ಅಪರಾಧ ತನಿಖಾ ಸಂಸ್ಥೆಯಾದ ‘ಇಂಟರ್‌ಪೋಲ್’ನಂತೆಯೇ ಭಾರತದಲ್ಲಿ ‘ಭಾರತ್‌ಪೋಲ್’ಅನ್ನು ರಚಿಸಲಾಗಿದೆ. ಸಿಬಿಐ ಸಂಸ್ಥೆಯ ಅಡಿಯಲ್ಲಿ ಕೆಲಸ ಮಾಡುವ ಸಂಸ್ಥೆಯು ಅಂತರಾಷ್ಟ್ರೀಯ ತನಿಖಾ ಸಂಸ್ಥೆಗಳಿಗೆ ಸಹಾಯ ಮಾಡುತ್ತದೆ. ವಿದೇಶಕ್ಕೆ ಪರಾರಿಯಾಗುವ ಅಪರಾಧಿಗಳನ್ನು ಹಿಡಿಯಲು ‘ಭಾರತ್‌ಪೋಲ್’ ಸಂಸ್ಥೆ ನೆರವಾಗಲಿದೆ.
ಅಂತರರಾಷ್ಟ್ರೀಯ ಪೋಲೀಸ್ ಸಹಾಯವನ್ನು ತ್ವರಿತವಾಗಿ ಸಂಪರ್ಕಿಸಬಹುದು. ಸಿಬಿಐ ಸಂಸ್ಥೆಯಿಂದ ಅಭಿವೃದ್ಧಿಪಡಿಸಿರುವ ‘ಭಾರತ್‌ಪೋಲ್’ ಪೋರ್ಟಲ್ ನಮ್ಮ ತನಿಖಾ ಸಂಸ್ಥೆಗಳ ಜಾಗತಿಕ ವ್ಯಾಪ್ತಿಯನ್ನು ಹೆಚ್ಚಿಸುತ್ತದೆ ಮತ್ತು ಎಲ್ಲರಿಗೂ ‘ಸುರಕ್ಷಿತ ಭಾರತ’ ಎಂಬ ಸರ್ಕಾರದ ದೃಷ್ಟಿಯನ್ನು ಪೂರೈಸುತ್ತದೆ.
ಇಂದು ಮಹತ್ವದ ದಿನವಾಗಿದೆ. ‘ಭಾರತ್‌ಪೋಲ್’ ನಮ್ಮ ದೇಶದ ಅಂತಾರಾಷ್ಟ್ರೀಯ ತನಿಖೆಗಳನ್ನು ಹೊಸ ಯುಗಕ್ಕೆ ಕೊಂಡೊಯ್ಯಲಿದೆ. ಇದರಿಂದ ಅಪರಾಧವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು” ಎಂದು ಅಮಿತ್ ಶಾ ಹೇಳಿದರು.