ದೇಶ Archives » Page 2 of 54 » Dynamic Leader
November 21, 2024
Home Archive by category ದೇಶ (Page 2)

ದೇಶ

ದೇಶ

ನವದೆಹಲಿ: 2026ರ ವೇಳೆಗೆ ದೇಶದಲ್ಲಿ ಎಡಪಂಥೀಯ ಭಯೋತ್ಪಾದನೆಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲಾಗುವುದು ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಮಾವೋವಾದಿ ಪೀಡಿತ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಹಿರಿಯ ಅಧಿಕಾರಿಗಳೊಂದಿಗೆ ಇಂದು ನಡೆದ ಪ್ರಮುಖ ಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾತನಾಡಿದರು:

ಸುಧಾರಿತ ಭದ್ರತಾ ಪರಿಸ್ಥಿತಿಯಿಂದಾಗಿ, ಕಳೆದ ಲೋಕಸಭೆ ಚುನಾವಣೆಯಲ್ಲಿ ಮಾವೋವಾದಿ ಪೀಡಿತ ಪ್ರದೇಶದಲ್ಲಿ ಶೇ.70 ರಷ್ಟು ಹೆಚ್ಚಿನ ಮತದಾನವಾಗಿದೆ. ಮೊದಲು ಈ ಕ್ಷೇತ್ರಗಳಲ್ಲಿ ಶೂನ್ಯ ಮತದಾನವಾಗಿತ್ತು. ಈ ಹಿಂದೆ ಭದ್ರತಾ ಪಡೆಗಳು ರಕ್ಷಣಾ ಕಾರ್ಯದಲ್ಲಿ ಮಾತ್ರ ನಿರತರಾಗಿದ್ದರು. ಈಗ ಅವರು ಆಕ್ರಮಣಕಾರಿ ಕಾರ್ಯಾಚರಣೆಗಳನ್ನು ನಡೆಸುತ್ತಿದ್ದಾರೆ.

ಛತ್ತೀಸ್‌ಗಢ, ಒಡಿಶಾ, ತೆಲಂಗಾಣ, ಮಹಾರಾಷ್ಟ್ರ, ಜಾರ್ಖಂಡ್, ಬಿಹಾರ, ಆಂಧ್ರಪ್ರದೇಶ ಮತ್ತು ಮಧ್ಯಪ್ರದೇಶ ಮಾವೋವಾದಿಗಳ ದಾಳಿಗೆ ತುತ್ತಾಗಿವೆ. ಮೋದಿ ಸರಕಾರದ ಕಾರ್ಯತಂತ್ರದಿಂದ ಎಡಪಂಥೀಯ ಭಯೋತ್ಪಾದನೆ ಶೇ.72ರಷ್ಟು ಕುಸಿದಿದ್ದು, 2010ಕ್ಕೆ ಹೋಲಿಸಿದರೆ 2023ರ ವೇಳೆಗೆ ಸಾವಿನ ಸಂಖ್ಯೆ ಶೇ.86ರಷ್ಟು ಕಡಿಮೆಯಾಗಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನಿರ್ದೇಶನದ ಮೇರೆಗೆ ಕೇಂದ್ರವು ಮಾರ್ಚ್ 2026 ರೊಳಗೆ ಎಡಪಂಥೀಯ ಭಯೋತ್ಪಾದನೆಯ ಪಿಡುಗನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಬದ್ಧವಾಗಿದೆ.

ಎಡಪಂಥೀಯ ಭಯೋತ್ಪಾದನೆಯಿಂದ ಬಾಧಿತವಾಗಿರುವ ಜಿಲ್ಲೆಗಳ ಸಂಖ್ಯೆ ಈಗ ಕೇವಲ 38 ಆಗಿದೆ. ಕೇಂದ್ರ ಸರ್ಕಾರವು ಪೀಡಿತ ರಾಜ್ಯಗಳ ದೂರದ ಪ್ರದೇಶಗಳಿಗೆ ಅಭಿವೃದ್ಧಿ ಯೋಜನೆಗಳನ್ನು ಕೊಂಡೊಯ್ಯುವುದು ಮತ್ತು ರಸ್ತೆ ಹಾಗೂ ಮೊಬೈಲ್ ಸಂಪರ್ಕಕ್ಕೆ ಉತ್ತೇಜನ ನೀಡುವುದು ಸೇರಿದಂತೆ ಹಲವಾರು ಕ್ರಮಗಳನ್ನು ಕೈಗೊಂಡಿದೆ ಎಂದು ಹೇಳಿದರು.

ದೇಶ

ನವದೆಹಲಿ: ಜೈಲುಗಳಲ್ಲಿ ಜಾತಿ ತಾರತಮ್ಯ ತೋರಿದರೆ ರಾಜ್ಯ ಸರ್ಕಾರಗಳೇ ಹೊಣೆಯಾಗಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗುವ ಅಪರಾಧಿಗಳನ್ನು ಅವರ ಜಾತಿ ಹಿನ್ನೆಲೆಯ ಆಧಾರದ ಮೇಲೆ ವರ್ಗೀಕರಿಸುವುದು, ಜೈಲುಗಳಲ್ಲಿ ಕೆಟ್ಟದಾದ ಕೆಲಸಗಳನ್ನು ಮಾಡುವಂತೆ ಹೇಳುವುದು, ತಾರತಮ್ಯದಿಂದ ನಡೆಸಿಕೊಳ್ಳುವುದು ಮುಂತಾದವುಗಳೆಲ್ಲ ವಿವಿಧ ರಾಜ್ಯಗಳ ಜೈಲು ನಿಯಮಾವಳಿಗಳಲ್ಲಿಯೇ ಜಾರಿಯಲ್ಲಿರುವುದು ಕಂಡುಬಂದಿದೆ.

ತರುವಾಯ, 11 ರಾಜ್ಯಗಳ ಕಾರಾಗೃಹಗಳಲ್ಲಿನ ಜಾತಿ ಆಧಾರಿತ ಅನುಸಂಧಾನ ನಿಯಮಾವಳಿಗಳನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಲಾದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಇಂದು ತನ್ನ ತೀರ್ಪು ನೀಡಿದೆ. ಅದರಲ್ಲಿ, “ಸರಣಿ ಅಪರಾಧಗಳಲ್ಲಿ ಭಾಗಿಯಾಗಿರುವ ಅಪರಾಧಿಗಳನ್ನು ಜಾತಿಯ ಆಧಾರದ ಮೇಲೆ ವರ್ಗೀಕರಿಸಬಾರದು. ಜಾತಿವಾರು ವರ್ಗೀಕೃತ ದಾಖಲೆಗಳು ಕಾನೂನು ಬಾಹಿರವಾದದ್ದು; ಅವುಗಳನ್ನು ನಾಶಗೊಳಿಸಬೇಕು.

ಕೆಲವು ರಾಜ್ಯಗಳು ಜಾರಿಗೊಳಿಸಿರುವ ಜೈಲು ನಿಯಮಾವಳಿಗಳು ಅಸಂವಿಧಾನಿಕ. ಪ್ರಸ್ತುತ ತೀರ್ಪಿನ ಪ್ರಕಾರ, ಜೈಲು ನಿಯಮಾವಳಿಗಳನ್ನು ತಿದ್ದುಪಡಿ ಮಾಡಲು ರಾಜ್ಯ ಸರ್ಕಾರಗಳಿಗೆ ನಿರ್ದೇಶಿಸಲಾಗಿದೆ.

ಶಿಕ್ಷೆಯ ಕಡಿತ, ಜೈಲುಗಳನ್ನು ಸ್ವಚ್ಛಗೊಳಿಸುವುದು, ಅಡುಗೆ ಮಾಡುವುದು ಮುಂತಾದ ಕೆಲಸಗಳಲ್ಲಿ ಜಾತಿ ಭೇದ ಇರಬಾರದು. ಎಸ್‌ಸಿ, ಎಸ್‌ಟಿ ಸೇರಿದಂತೆ ಹಿಂದುಳಿದವರಿಗೆ ಜೈಲುಗಳಲ್ಲಿ ತಾರತಮ್ಯ ಮಾಡಬಾರದು. ಜೈಲುಗಳಲ್ಲಿ ಇಂತಹ ಜಾತಿ ತಾರತಮ್ಯ ತೋರಿದರೆ ಅದಕ್ಕೆ ರಾಜ್ಯ ಸರ್ಕಾರಗಳೇ ಹೊಣೆಯಾಗಬೇಕು” ಎಂದು ಹೇಳಿದೆ.

ದೇಶ

ನವದೆಹಲಿ: ಉತ್ತರ ರಾಜ್ಯಗಳಲ್ಲಿ ಇಂದಿನಿಂದ ಪ್ರಾರಂಭವಾಗುವ ನವರಾತ್ರಿಯ ದಿನಗಳ ನಡುವೆ ಸಾಮಾನ್ಯವಾಗಿ ಗರ್ಬಾ ಎಂಬ ಕೋಲಾಟ ನೃತ್ಯಗಳನ್ನು ನಡೆಸಲಾಗುತ್ತದೆ. ಕಾರ್ಯಕ್ರಮವು ಮಧ್ಯರಾತ್ರಿ ಮತ್ತು ಹಗಲಿನಲ್ಲಿ ಕೆಲವು ಗಂಟೆಗಳ ಕಾಲ ನಡೆಯುತ್ತವೆ.

ಹಿಂದೂಗಳಿಗೆ ಮಾತ್ರ ಅವಕಾಶವಿರುವ ಈ ಕಾರ್ಯಕ್ರಮಕ್ಕೆ ಮುಸ್ಲಿಂ ಯುವಕರೂ ಪ್ರವೇಶ ಮಾಡುತ್ತಿದ್ದಾರೆ ಎಂಬ ದೂರುಗಳಿವೆ. ಇದನ್ನು ತಡೆಯಲು ಸಂಘಟಕರು ಪ್ರತಿ ವರ್ಷವೂ ಹೊಸ ಹೊಸ ತಂತ್ರಗಳನ್ನು ಅನುಸರಿಸುತ್ತಾರೆ. ಈ ವರ್ಷ ಅದಕ್ಕೊಂದು ವಿವಾದಾತ್ಮಕ ಅಲೋಚನೆಯನ್ನು ಇಂದೋರ್ ಗ್ರಾಮಾಂತರ ಜಿಲ್ಲಾ ಬಿಜೆಪಿ ಅಧ್ಯಕ್ಷ ಚಿಂಟು ವರ್ಮಾ ನೀಡಿದ್ದಾರೆ.

ಈ ಬಗ್ಗೆ ಮಾತನಾಡಿರುವ ಚಿಂಟು ವರ್ಮಾ, ‘ಈ ವರ್ಷ ಗರ್ಬಾ ಪಂದಳಕ್ಕೆ ಪ್ರವೇಶಿಸುವ ಮುನ್ನ ನೀಡುವ ಪ್ರಸಾದದಲ್ಲಿ ಬದಲಾವಣೆ ಅವಶ್ಯ. ಇದರಲ್ಲಿ ನಾವು ನಮ್ಮ ಗೋಮಾತೆಯ ಗೋಮಿಯವನ್ನು ಕುಡಿಯಲು ಪ್ರವೇಶಿಸುವ ಎಲ್ಲರಿಗೂ ಅರ್ಪಿಸಬೇಕು. ಇದರೊಂದಿಗೆ ಶ್ರೀಗಂಧದಿಂದ ಹಣೆಯ ಮೇಲೆ ತಿಲಕವನ್ನು ಹಚ್ಚಬೇಕು.

ಪ್ರಸ್ತುತ, ಆಧಾರ್ ಕಾರ್ಡ್ ಮೂಲಕ ಗರ್ಬಾ ಪಂದಳಕ್ಕೆ ಪ್ರವೇಶ ನೀಡಲಾಗುತ್ತದೆ. ಈ ಕಾರ್ಡ್ ಅನ್ನು ಮಾರ್ಫಿಂಗ್ ಮಾಡುವ ಮೂಲಕವೂ ಹೆಸರುಗಳನ್ನು ಬದಲಾಯಿಸಬಹುದು. ಹಾಗಾಗಿ ಗೋವಿನ ಗೋಮಿಯಂ ಕುಡಿಯುವುದರಿಂದ ಗರ್ಬಾ ಪಂದಳದಲ್ಲಿ ರಕ್ಷಣೆ ಸಿಗುತ್ತದೆ. ಇದನ್ನು ಕುಡಿಯದವರನ್ನು ಒಳಗೆ ಬಿಡಬಾರದು’ ಎಂದರು.

ಬಿಜೆಪಿ ನಾಯಕರ ಈ ಘೋಷಣೆಯನ್ನು ಕಾಂಗ್ರೆಸ್ ನ ಮಾಜಿ ಸಚಿವೆ ಹಾಗೂ ಹಾಲಿ ಶಾಸಕಿ ಉಷಾ ಠಾಕೂರ್ (Usha Thakur) ಸ್ವಾಗತಿಸಿದ್ದಾರೆ. ಈ ಕುರಿತು ಮಾತನಾಡಿರುವ ಅವರು ‘ಸನಾತನದಲ್ಲಿ ನಂಬಿಕೆ ಇರುವವರಿಗೆ ಇದೊಂದು ಒಳ್ಳೆಯ ಉಪಾಯ. ಗೋಮಿಯವನ್ನು ಕುಡಿಯುವುದರಿಂದ ನಮ್ಮ ರೋಗಗಳು ದೂರವಾಗುತ್ತವೆ ಮತ್ತು ನಮ್ಮ ದೇಹ ಮತ್ತು ವಾಸಸ್ಥಳವು ಶುದ್ಧವಾಗುತ್ತದೆ. ಪದ್ಧತಿಯ ಪ್ರಕಾರ, ಗೋಮಿಯಂ ಅನ್ನು 21 ಬಟ್ಟೆಗಳ ಮೂಲಕ ಫಿಲ್ಟರ್ ಮಾಡುವುದು ಉತ್ತಮ’ ಎಂದರು.

ಈ ಗರ್ಬಾ ನೃತ್ಯವನ್ನು ಗುಜರಾತ್‌ನಲ್ಲಿ ಮಾತ್ರ ಪ್ರದರ್ಶಿಸಲಾಯಿತು. ಇದು ಬಾಲಿವುಡ್ ಚಿತ್ರಗಳಲ್ಲಿ ಕಾಣಿಸಿಕೊಂಡ ಪರಿಣಾಮವಾಗಿ ಇತರ ರಾಜ್ಯಗಳಿಗೂ ಹರಡಿತು. ಗರ್ಬಾ ನೃತ್ಯಕ್ಕೆ ಹೋಗುವ ಹುಡುಗಿಯರನ್ನು ಓಲೈಸಲು ಯುವಕರು ಪ್ರಯತ್ನಿಸುತ್ತಾರೆ. ಇದನ್ನು ತಡೆಯಲು ಬಾಲಕಿಯರ ಪೋಷಕರು ಖಾಸಗಿ ಗುಪ್ತಚರ ಸಂಸ್ಥೆಗಳ ಮೊರೆ ಹೋಗುವುದೂ ಉಂಟು.

ದೇಶ

ನವದೆಹಲಿ: ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 155ನೇ ಜಯಂತಿಯನ್ನು ಇಂದು ದೇಶಾದ್ಯಂತ ಆಚರಿಸಲಾಗುತ್ತಿದೆ. ಅವರ ಜನ್ಮದಿನದ ಅಂಗವಾಗಿ ದೆಹಲಿಯ ರಾಜ್‌ಗಾಟ್‌ನಲ್ಲಿರುವ ಅವರ ಸ್ಮಾರಕದಲ್ಲಿ ರಾಜಕೀಯ ಪಕ್ಷಗಳ ಮುಖಂಡರು ಪುಷ್ಪ ನಮನ ಸಲ್ಲಿಸುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ, ಕಾಂಗ್ರೆಸ್ ಸಂಸದ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಮಹಾತ್ಮ ಗಾಂಧಿ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿದರು.

ದೇಶ

ನವದೆಹಲಿ: ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 155ನೇ ಜಯಂತಿಯನ್ನು ಇಂದು ದೇಶಾದ್ಯಂತ ಆಚರಿಸಲಾಗುತ್ತಿದೆ. ಅವರ ಜನ್ಮದಿನದ ಅಂಗವಾಗಿ ದೆಹಲಿಯಲ್ಲಿರುವ ಅವರ ಸ್ಮಾರಕಕ್ಕೆ ರಾಜಕೀಯ ಪಕ್ಷಗಳ ಮುಖಂಡರು ಪುಷ್ಪ ನಮನ ಸಲ್ಲಿಸುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ದೆಹಲಿಯ ಮಹಾತ್ಮ ಗಾಂಧಿ ಸ್ಮಾರಕಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ಸಲ್ಲಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರೂ ಗಾಂಧಿ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿದ್ದಾರೆ.

ದೇಶ

ಮಹಾರಾಷ್ಟ್ರದಲ್ಲಿ ಇಸ್ಲಾಂ ಧರ್ಮ ಮತ್ತು ಪ್ರವಾದಿ ಮುಹಮ್ಮದ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಹಿಂದೂ ಧಾರ್ಮಿಕ ಮುಖಂಡ ಮಹಂತ್ ರಾಮಗಿರಿ ಮಹಾರಾಜ್ ವಿರುದ್ಧ 67 ಪ್ರಕರಣಗಳು ದಾಖಲಾಗಿವೆ.

ರಾಮಗಿರಿ ಮಹಾರಾಜರು ಹಂಚಿಕೊಂಡಿರುವ ವಿವಾದಾತ್ಮಕ ಮಾನಹಾನಿಕರ ಅಭಿಪ್ರಾಯಗಳು ಮತ್ತು ಮಾಹಿತಿಗಳನ್ನು ಅಂತರ್ಜಾಲದಿಂದ ತೆಗೆದುಹಾಕುತ್ತಿದ್ದೇವೆ ಎಂದು ಸೈಬರ್ ಕ್ರೈಂ ಬ್ರಾಂಚ್ ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಇಸ್ಲಾಂ ಧರ್ಮ ಮತ್ತು ಪ್ರವಾದಿ ಮುಹಮ್ಮದ್ ಅವರನ್ನು ನಿಂದಿಸಿದ ಮಹಂತ್ ರಾಮಗಿರಿ ಮಹಾರಾಜ್ ವಿರುದ್ಧ ರಾಜ್ಯಾದ್ಯಂತ ಇದುವರೆಗೆ 67 ಪ್ರಕರಣಗಳು ದಾಖಲಾಗಿವೆ.

‘ರಾಮಗಿರಿ ಮಹಾರಾಜ್ ವಿರುದ್ಧ ಹಲವು ಪ್ರಕರಣಗಳು ದಾಖಲಾದ ನಂತರ, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದರು ಎಂಬ ಕಾರಣಕ್ಕಾಗಿ ಅವರ ವಿರುದ್ಧವೂ ಪ್ರಕರಣ ದಾಖಲಿಸಬೇಕು ಎಂಬ ಮನವಿಯನ್ನು ವಿರೋಧಿಸಿ, ಮಹಾರಾಷ್ಟ್ರ ಅಡ್ವೊಕೇಟ್ ಜನರಲ್ ವೀರೇಂದ್ರ ಸರಾಫ್ ಅವರು,  ಸಲ್ಲಿಸಿದ ಅರ್ಜಿಯಲ್ಲಿ ಈ ಮಾಹಿತಿ ಬಹಿರಂಗವಾಗಿದೆ.

ವಕೀಲ ವಾಸಿ ಸೈಯದ್ ಮತ್ತು ಇತರರು ಸಲ್ಲಿಸಿದ ಅರ್ಜಿಯಲ್ಲಿ, ‘2014 ರಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರವು ಮುಸ್ಲಿಮರ ವಿರುದ್ಧ ಕೋಮುವಾದಿ ಕ್ರಮಗಳನ್ನು ನಿರಂತರವಾಗಿ ತೆಗೆದುಕೊಳ್ಳುತ್ತಿದೆ. ಮುಸ್ಲಿಮರನ್ನು ಕಡೆಗಣಿಸುವುದು, ಸಾಮೂಹಿಕ ಹತ್ಯೆಗಳನ್ನು ಮಾಡುವುದು, ಗಲಭೆಗಳನ್ನು ಮಾಡುವುದು ಮುಂತಾದ ಹಲವು ವಿಷಯಗಳು ನಿರಂತರವಾಗಿ ನಡೆಯುತ್ತಿವೆ ಎಂದು ಉಲ್ಲೇಖಿಸಲಾಗಿತ್ತು.

ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಇಜಾಜ್ ನಖ್ವಿ, ‘ರಾಮಗಿರಿ ಮಹಾರಾಜ್ ವಿರುದ್ಧ ಕ್ರಮ ಕೈಗೊಳ್ಳುವ ಬದಲು ಶಿಂಧೆ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದಾರೆ ಮತ್ತು ರಾಜ್ಯದ ಧರ್ಮ ಪ್ರಚಾರಕರನ್ನು ರಕ್ಷಿಸುತ್ತಿದ್ದಾರೆ’ ಎಂದು ವಾದಿಸಿದರು. ‘ಅದೇ ರೀತಿ ಬಿಜೆಪಿ ಶಾಸಕ ನಿತೇಶ್ ರಾಣೆ ಅವರ ಅವಹೇಳನಕಾರಿ ಭಾಷಣದ ವಿರುದ್ಧವೂ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ನಖ್ವಿ ಉಲ್ಲೇಖಿಸಿದರು.

ಆದರೆ, ನ್ಯಾಯಮೂರ್ತಿಗಳಾದ ರೇವತಿ ಮೊಹಿತೆ ಮತ್ತು ಪೃಥ್ವಿರಾಜ್ ಚವಾಣ್ ಅವರನ್ನೊಳಗೊಂಡ ಪೀಠವು, ‘ರಾಮಗಿರಿ ಮಹಾರಾಜ್ ಅವರ ವೀಡಿಯೊಗಳನ್ನು ತೆಗೆದುಹಾಕಲು ಮತ್ತು ರಾಣೆ ಅವರು ಮಾಡಿರುವ ಮಾನಹಾನಿ ಭಾಷಣಕ್ಕೆ ಸಂಬಂಧಿಸಿದ ಆರೋಪಗಳಿಗೆ, ಕಾನೂನು ಕ್ರಮಗಳಿಗೆ ಸಂಬಂಧಿಸಿದ ಅರ್ಜಿಗಳ ಮೇಲೆ ಈಗಾಗಲೇ ತಡಮಾಡದೆ ತನಿಖೆ ನಡೆಸಲಾಗುತ್ತಿದೆ’ ಎಂದು ತಿಳಿಸಿದರು.

ದ್ವೇಷದ ಭಾಷಣದ ಬಗ್ಗೆ ಕೇಳಲಾದ ಪ್ರಶ್ನೆಗೆ, ‘ನಾವು ಮಾತನಾಡುವುದನ್ನು ತಡೆಯಲು ಸಾಧ್ಯವಿಲ್ಲ. ಆದರೆ, ಈ ಬಗ್ಗೆ ಪೊಲೀಸರು ಎಲ್ಲಿ ಬೇಕಾದರೂ ಪ್ರಕರಣ ದಾಖಲಿಸಿಕೊಂಡು ಕ್ರಮ ಜರುಗಿಸುತ್ತಾರೆ. ಏಕನಾಥ್ ಶಿಂಧೆ ಮತ್ತು ರಾಮಗಿರಿ ಒಂದೇ ವೇದಿಕೆಯಲ್ಲಿದ್ದರು ಎಂದ ಮಾತ್ರಕ್ಕೆ ಎಫ್‌ಐಆರ್ ದಾಖಲಿಸಬೇಕು ಎಂದಲ್ಲ. ನೀವು ತಪ್ಪು ಉದ್ದೇಶಗಳನ್ನು ಸಾಬೀತು ಪಡಿಸಬೇಕು. ತಪ್ಪು ಕಂಡುಬಂದಲ್ಲಿ ಎಫ್‌ಐಆರ್ ದಾಖಲಿಸಲಾಗುವುದು. ನೀವು (ನಖ್ವಿ) ಇದನ್ನು ರಾಜಕೀಯ ವಿಷಯವಾಗಿ ಪರಿವರ್ತಿಸುತ್ತಿದ್ದೀರಿ. ನೀವು ಮುಖ್ಯ ವಿಷಯದಿಂದ ಹೊರಗುಳಿದರೆ ಅದು ತಪ್ಪಾಗುತ್ತದೆ. ನಿಮ್ಮ ಮುಖ್ಯ ಸಮಸ್ಯೆ ವಿಡಿಯೋಗಳನ್ನು ತೆಗೆದುಹಾಕುವುದು ಅಷ್ಟೇ ಆಗಿದೆ’ ಎಂದು ಹೇಳಿದರು.

ರಾಮಗಿರಿ ಮಹಾರಾಜರ ವಿರುದ್ಧ ಈಗಾಗಲೇ ಸೆಪ್ಟೆಂಬರ್ 19 ರವರೆಗೆ 67 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದ ಅಡ್ವೊಕೇಟ್ ಜನರಲ್ ವೀರೇಂದ್ರ ಸರಾಫ್, ಅರ್ಜಿದಾರರ ಮನವಿಗೆ ವಿರೋಧ ವ್ಯಕ್ತಪಸಿದರು. ಪ್ರಕರಣದಿಂದ ಮುಖ್ಯಮಂತ್ರಿ ಹೆಸರನ್ನು ತೆಗೆದುಹಾಕಬೇಕು ಎಂಬ ವಕೀಲ ಸರಾಫ್ ಅವರ ಮನವಿಗೆ ಸಮ್ಮತಿಸಿದ ಪೀಠ, ಅರ್ಜಿದಾರರಿಗೆ ದಂಡ ವಿಧಿಸುವ ಎಚ್ಚರಿಕೆಯನ್ನು ನೀಡಿತು. ಅಕ್ಟೋಬರ್ 17 ರಂದು ಮತ್ತೊಮ್ಮೆ ಈ ಅರ್ಜಿಯ ವಿಚಾರಣೆಯನ್ನು ನಡೆಸುವುದಾಗಿ ನ್ಯಾಯಾಧೀಶರು ತಿಳಿಸಿದ್ದಾರೆ.

ದೇಶ

ಗುರ್ಗಾನ್: ಮುಂಬರುವ ಸಂಸತ್ತಿನ ಅಧಿವೇಶನದಲ್ಲಿ ವಕ್ಫ್ ಮಸೂದೆಯನ್ನು ಮಂಡಿಸಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಭರವಸೆ ನೀಡಿದ್ದಾರೆ.

ಹರಿಯಾಣದ ಗುರ್ಗಾನ್ನ (Gurgaon) ಬಾದಶಾಪುರದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, “ವಕ್ಫ್ ತಿದ್ದುಪಡಿ ಮಸೂದೆ (Waqf Amendment Bill 2024) ಮುಂಬರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಮಸೂದೆಯನ್ನು ಮಂಡಿಸಲಿದ್ದೇವೆ. ಇದರೊಂದಿಗೆ ಮಂಡಳಿಯ ಕೋರಿಕೆಯಂತೆ ಹಣ ವಿತರಣೆಗೂ ಅನುಮತಿ ನೀಡಲಾಗಿದೆ.

ಈ ಮಸೂದೆಗೆ ಸಂಬಂಧಿಸಿದಂತೆ ವಕ್ಫ್ ಮಂಡಳಿಯ ಪ್ರತಿನಿಧಿಗಳು ಮಾಡಿರುವ ಆರೋಪಗಳನ್ನು ಒಪ್ಪಲು ಸಾಧ್ಯವಿಲ್ಲ. ಪರಿಶೀಲನಾ ಸಮಿತಿಯ ಅಧ್ಯಕ್ಷರಾಗಿರುವ ಬಿಜೆಪಿಯ ಜಗದಾಂಬಿಕಾ ಪಾಲ್ ಅವರು ಮಸೂದೆಯ ಸಂಪೂರ್ಣ ವಿವರಗಳನ್ನು ಅಧ್ಯಯನ ಮಾಡುತ್ತಿದ್ದಾರೆ” ಎಂದು ಹೇಳಿದ್ದಾರೆ.

ದೇಶ

ತಿರುಚ್ಚಿ: ಶ್ರೀರಂಗಂ ದೇವಸ್ಥಾನಕ್ಕೆ ಸ್ವಾಮಿ ದರ್ಶನಕ್ಕಾಗಿ ಬಂದಿದ್ದ ಹೆಚ್.ಡಿ.ಕುಮಾರಸ್ವಾಮಿ ಅವರು ಕಾವೇರಿ ನೀರು ಹಂಚಿಕೆ ಸಮಸ್ಯೆ ಬಗೆಹರಿಸುವ ಕುರಿತು ಮಾತನಾಡಿದರು.

ಕರ್ನಾಟಕ ಮತ್ತು ತಮಿಳುನಾಡು ನಡುವಿನ ದೀರ್ಘಕಾಲದ ಸಮಸ್ಯೆಗಳಲ್ಲಿ ಕಾವೇರಿ ನದಿ ನೀರು ಹಂಚಿಕೆ ಸಮಸ್ಯೆಯೂ ಒಂದು. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಇದುವರೆಗೆ ಯಾವ ಸರಕಾರಕ್ಕೂ ಸಾಧ್ಯವಾಗಿಲ್ಲ. ಕಾವೇರಿ ವಿಚಾರದಲ್ಲಿ ಎರಡು ರಾಜ್ಯ ಸರ್ಕಾರಗಳು ಮಾತ್ರವಲ್ಲದೆ ಕೇಂದ್ರ ಸರ್ಕಾರವೂ ರಾಜಕೀಯ ಮಾಡುತ್ತಿದೆ ಎಂದು ತಮಿಳುನಾಡಿನ ರೈತರು ಆರೋಪ ಮಾಡುತ್ತಿದ್ದಾರೆ. ಬೇಸಿಗೆ ಬಂತೆಂದರೆ ಕಾವೇರಿ ಸಮಸ್ಯೆ ತಲೆದೋರುತ್ತದೆ.

ಈ ಹಿನ್ನೆಲೆಯಲ್ಲಿ, ಕಾವೇರಿ ವಿಚಾರವಾಗಿ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಸಂದರ್ಶನ ನೀಡಿದ್ದಾರೆ. ಅದರಲ್ಲಿ, “ಶಾಸನಬದ್ಧ ಕಾವೇರಿ ವಿತರಣಾ ಯೋಜನೆಯು ಬರಗಾಲದಲ್ಲಿ ಕಾವೇರಿ ನೀರಿನ ಸಮಸ್ಯೆಗೆ ಸಹಾಯ ಮಾಡುವುದಿಲ್ಲ. ಕಾವೇರಿ ವಿಚಾರದಲ್ಲಿ ರಾಜಕೀಯ ಹಸ್ತಕ್ಷೇಪ ಮಾಡಬಾರದು. ಎರಡು ರಾಜ್ಯ ಸರ್ಕಾರಗಳು ಚರ್ಚಿಸಿ ನೀರು ಹಂಚಿಕೆ ಸಮಸ್ಯೆ ಬಗೆಹರಿಸಲು ಕ್ರಮಕೈಗೊಳ್ಳಬೇಕು. ಕಾವೇರಿ ಸಮಸ್ಯೆಗೆ Give and take policy ನೀತಿಯೊಂದೇ ಪರಿಹಾರ” ಎಂದು ಹೇಳಿದರು

ದೇಶ

ಡಿ.ಸಿ.ಪ್ರಕಾಶ್

ವಕ್ಫ್ ಬೋರ್ಡ್ ತಿದ್ದುಪಡಿ ಕುರಿತು ಅಧ್ಯಯನ ನಡೆಸಲು ರಚಿಸಲಾದ ಜಂಟಿ ಸದನ ಸಮಿತಿಗೆ 1.25 ಕೋಟಿ ಪ್ರತಿಕ್ರಿಯೆಗಳು ಬಂದಿವೆ. ಇದರಲ್ಲಿ ವಿದೇಶಿಯರ ಪಾತ್ರವಿರಬಹುದೆಂದು ಬಿಜೆಪಿ, ಸಂಸದ ನಿಶಿಕಾಂತ್ ದುಬೆ ಅನುಮಾನ ವ್ಯಕ್ತಪಡಿಸಿದ್ದಾರೆ. ಇದನ್ನು ಕಾಂಗ್ರೆಸ್ ಖಂಡಿಸಿದೆ.

ವಕ್ಫ್ ಬೋರ್ಡ್ (Waqf Board) ಕಾಯ್ದೆಗೆ ತಿದ್ದುಪಡಿ ತರಲು ಕೇಂದ್ರ ಸರ್ಕಾರ ಹೊಸ ಮಸೂದೆಯನ್ನು ತಂದಿತು. ಲೋಕಸಭೆಯಲ್ಲಿ ಮಂಡನೆಯಾದ ಈ ಮಸೂದೆಯನ್ನು ಪ್ರತಿಪಕ್ಷಗಳು ತೀವ್ರವಾಗಿ ಖಂಡಿಸಿತು. ಚರ್ಚೆಯ ಸಂದರ್ಭದಲ್ಲಿ ಮಸೂದೆಯನ್ನು ಜಂಟಿ ಸದನ ಸಮಿತಿಯ ಪರಿಗಣನೆಗೆ ಕಳುಹಿಸಬೇಕು ಎಂದು ಅವರು ಒತ್ತಾಯಿಸಿದರು. ಇದರ ನಂತರ, ವಕ್ಫ್ ತಿದ್ದುಪಡಿ ಮಸೂದೆಯನ್ನು ಸಂಸತ್ತಿನ ಜಂಟಿ ಸಮಿತಿಗೆ ಕಳುಹಿಸಲಾಯಿತು.

ಬಿಜೆಪಿ ಸಂಸದ ಜಗದಾಂಬಿಕಾ ಪಾಲ್ (Jagdambika Pal) ನೇತೃತ್ವದ ಈ ಸಮಿತಿಗೆ ವಿವಿಧ ಪಕ್ಷಗಳ ಸದಸ್ಯರನ್ನು ನೇಮಿಸಲಾಗಿದೆ. ತಂಡವು ವಿವಿಧ ಪಕ್ಷಗಳಿಂದ ಸಲಹೆ ಪಡೆಯುತ್ತಿದೆ. ಸಾರ್ವಜನಿಕರು, ದತ್ತಿ ಸಂಸ್ಥೆಗಳು ಮತ್ತು ತಜ್ಞರು ಇಮೇಲ್ ಮೂಲಕ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಬಹುದು ಎಂದು ಸಮಿತಿ ತಿಳಿಸಿತ್ತು. ಇದೀಗ ಇಮೇಲ್ ಮೂಲಕ 1.25 ಕೋಟಿ ಅಭಿಪ್ರಾಯಗಳು ದಾಖಲಾಗಿವೆ. ಈ ಮಟ್ಟಿಗೆ ಅಭಿಪ್ರಾಯಗಳು ಬರುತ್ತವೆ ಎಂದು ಸಂಸತ್ತಿನ ಜಂಟಿ ಸಮಿತಿಯೇ ನಿರೀಕ್ಷಿಸಿರಲಿಲ್ಲ.

ಅನುಮಾನ
ಈ ಬಗ್ಗೆ ಅನುಮಾನ ವ್ಯಕ್ತಪಡಿಸಿ, ಜಗದಾಂಬಿಕಾ ಪಾಲ್ ಅವರಿಗೆ ಪತ್ರ ಕಳುಹಿಸಿರುವ ಬಿಜೆಪಿ ಸಂಸದ ನಿಶಿಕಾಂತ್ ದುಬೆ (Nishikant Dubey),  ‘ಜಂಟಿ ಸಮಿತಿಗೆ ಬಂದಿರುವ ಪ್ರತಿಕ್ರಿಯೆಗಳು ಹಿಂದೆಂದೂ ಕಾಣದು. ಇದು ವಿಶ್ವದಾಖಲೆ ಸೃಷ್ಟಿಸಿದೆ. ಇದರ ಹಿಂದೆ ಚೀನಾ, ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಐಎಸ್‌ಐ, ಝಾಕಿರ್ ನಾಯಕ್ ಮುಂತಾದವರ ಕೈವಾಡ ಇರುವ ಸಾಧ್ಯತೆ ಇದೆ.

ವಿದೇಶಿ ಸಂಘಟನೆಗಳು ಅಥವಾ ಸಂಸ್ಥೆಗಳು ಪ್ರಜಾಸತ್ತಾತ್ಮಕ ಪ್ರಕ್ರಿಯೆಯನ್ನು ದುರ್ಬಲಗೊಳಿಸಲು ಅತಿಯಾಗಿ ಪ್ರತಿಕ್ರಿಯಿಸುವಲ್ಲಿ ತೊಡಗಿರುವ ಶಂಕೆ ಇದೆ. ಎಲ್ಲ ಉತ್ತರಗಳು ಎಲ್ಲಿಂದ ಬರುತ್ತಿವೆ ಎಂದು ಕೇಂದ್ರ ಗೃಹ ಸಚಿವಾಲಯದಿಂದ ವಿವರವಾದ ತನಿಖೆಯಾಗಬೇಕು’ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಕಲ್ಪನೆ
ಇದಕ್ಕೆ ಪ್ರತಿಕ್ರಿಯಿಸಿರುವ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ವಕ್ತಾರರು, ‘ಇಷ್ಟೊಂದು ಪ್ರತಿಕ್ರಿಯೆಗಳು ಬರುತ್ತವೆ ಎಂದು ನಿರೀಕ್ಷಿಸಲಾಗಿತ್ತು. ವಾಸ್ತವವಾಗಿ, ಜಂಟಿ ಸದನ ಸಮಿತಿಗೆ 1.25 ಕೋಟಿ ಅಭಿಪ್ರಾಯಗಳು ಬಂದಿದೆ ಎಂದು ಕಡಿಮೆಗೊಳಿಸಿ ಹೇಳಲಾಗುತ್ತಿದೆ. 3.7 ಕೋಟಿ ಮುಸ್ಲಿಮರು ನಮ್ಮ ಪರವಾಗಿ ಅಭಿಪ್ರಾಯಗಳನ್ನು ಕಳುಹಿಸಿದ್ದಾರೆ. ಇತರ ಮುಸ್ಲಿಂ ಸಂಘಟನೆಗಳೂ ವಕ್ಫ್ ಬೋರ್ಡ್ ಕಾಯಿದೆ ತಿದ್ದುಪಡಿ ಕುರಿತು ಪ್ರತಿಕ್ರಿಯೆಗಳನ್ನು ಕಳುಹಿಸಿವೆ. ಈ ಮೂಲಕ ಜಂಟಿ ಸದನ ಸಮಿತಿಗೆ 5 ಕೋಟಿ ಪ್ರತಿಕ್ರಿಯೆಗಳು ಬಂದಿರಬಹುದು.

ಸರ್ಕಾರ ಕೇಳಿದ್ದಕ್ಕೆ ಉತ್ತರಗಳು ಬಂದಿವೆ; ಇಷ್ಟೊಂದು ಜನ ಸ್ಪಂದಿಸಿರುವುದರಲ್ಲಿ ಸಮಸ್ಯೆ ಏನಿದೆ? ವಿದೇಶಿಯರ ಪಾತ್ರ ಎಂಬುದೆಲ್ಲ ಕಾಲ್ಪನಿಕ. ಏಕರೂಪ ನಾಗರಿಕ ಸಂಹಿತೆಯ (UCC) ಬಗ್ಗೆ 4.85 ಕೋಟಿ ಜನರು ಅಭಿಪ್ರಾಯಗಳನ್ನು ಕಳುಹಿಸಿದ್ದರು’ ಎಂದು ಹೇಳಿದ್ದಾರೆ.

ಖಂಡನೆ
ಇದಕ್ಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ವಕ್ತಾರ ಶಕ್ತಿ ಸಿನ್ಹಾ ಗೋಹಿಲ್ (Shaktisinh Gohil), ‘ಭಾರತದಂತಹ ದೊಡ್ಡ ದೇಶದಲ್ಲಿ 1.5 ಕೋಟಿ ಜನರು ತಮ್ಮ ಅಭಿಪ್ರಾಯವನ್ನು ದಾಖಲಿಸಿದ್ದು ಬಿಜೆಪಿಗೆ ನೋವು ತಂದಿದೆ. ಈ ಮೂಲಕ ಅವರಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ ಎಂಬುದನ್ನು ತೋರಿಸುತ್ತದೆ’ ಎಂದು ಹೇಳಿದ್ದಾರೆ.

ದೇಶ

ಡಿ.ಸಿ.ಪ್ರಕಾಶ್

ಚಿದಂಬರಂ ನಟರಾಜ ದೇಗುಲಕ್ಕೆ ಸೇರಿದ 2 ಸಾವಿರ ಎಕರೆ ಭೂಮಿಯನ್ನು ದೇವಸ್ಥಾನದ ದೀಕ್ಷಿತರು ಮಾರಾಟ ಮಾಡಿದ್ದಾರೆ ಎಂದು ಮುಜರಾಯಿ ಇಲಾಖೆ ಮಾಡಿರುವ ಆರೋಪಕ್ಕೆ ಸಂಬಂಧಿಸಿದ ವಿವರಗಳನ್ನು ವರದಿಯಾಗಿ ಸಲ್ಲಿಸುವಂತೆ ಮದ್ರಾಸ್ ಹೈಕೋರ್ಟ್ ಆದೇಶಿಸಿದೆ.

ಚಿದಂಬರಂ ನಟರಾಜ ದೇವಸ್ಥಾನವು 2008 ರಿಂದ 2014 ರವರೆಗೆ ಮುಜರಾಯಿ ಇಲಾಖೆಯ ನಿಯಂತ್ರಣದಲ್ಲಿದ್ದಾಗ ವಾರ್ಷಿಕ ರೂ.3 ಕೋಟಿಗೂ ಹೆಚ್ಚು ಆದಾಯ ಗಳಿಸಿತ್ತು. ದೀಕ್ಷಿತರ ಹಿಡಿತಕ್ಕೆ ಬಂದ ನಂತರ ವಾರ್ಷಿಕ ಕೇವಲ 2 ಲಕ್ಷ ರೂ.ಗಳು ಮಾತ್ರ ಆದಾಯ ಬರುತ್ತಿರುವುದರಿಂದ ದೇವಸ್ಥಾನದ ಆಯವ್ಯಯವನ್ನು ಸಲ್ಲಿಸಲು ಆದೇಶ ನೀಡುವಂತೆ ಮುಜರಾಯಿ ಇಲಾಖೆ ಆಯುಕ್ತರು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಪ್ರಕರಣವು ನ್ಯಾಯಾಧೀಶರಾದ ಆರ್.ಸುರೇಶ್ ಕುಮಾರ್, ಎಸ್.ಸೌಂದರ್ ಅವರನ್ನೊಳಗೊಂಡ ಪೀಠದಲ್ಲಿ ಗುರುವಾರ ಮತ್ತೆ ವಿಚಾರಣೆಗೆ ಬಂದಿತ್ತು.

ಆಗ, ಸಾಮಾನ್ಯ ದೀಕ್ಷಿತರ ಕಡೆಯಿಂದ, ದೇವಸ್ಥಾನದ ಲೆಕ್ಕಪರಿಶೋಧಕ ಬಜೆಟ್‌ನ ವಿವರಗಳನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಲಾಯಿತು. ಅಲ್ಲದೆ, “ದೇವಸ್ಥಾನಕ್ಕೆ ಸೇರಿದ ಸಾವಿರ ಎಕರೆ ಭೂಮಿಯನ್ನು ಮುಜರಾಯಿ ಇಲಾಖೆಯ ಜಿಲ್ಲಾಧಿಕಾರಿ ನಿರ್ವಹಣೆ ಮಾಡುತ್ತಿದ್ದಾರೆ. ಆ ಜಮೀನಿನಿಂದ ಬಾಡಿಗೆ ಆದಾಯವಾಗಿ ಕೇವಲ ರೂ.93 ಸಾವಿರ ಮಾತ್ರ ಸಿಗುತ್ತದೆ. ರಾಜರು ಮತ್ತು ದಾನಿಗಳು ನಟರಾಜ ದೇವಸ್ಥಾನಕ್ಕೆ ಸುಮಾರು ಮೂರು ಸಾವಿರ ಎಕರೆ ಭೂಮಿಯನ್ನು ದಾನವಾಗಿ ನೀಡಿದ್ದು, ಈಗ ಕೇವಲ ಒಂದು ಸಾವಿರ ಎಕರೆ ಮಾತ್ರ ಬಾಕಿ ಉಳಿದಿದೆ. ಆದ್ದರಿಂದ ಆ ನಿಟ್ಟಿನಲ್ಲಿಯೂ ವರದಿ ಸಲ್ಲಿಸಲು ಆದೇಶಿಸಬೇಕು.

ಅದೇ ರೀತಿ ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರು ಅರ್ಪಿಸುವ ಕಾಣಿಕೆಯನ್ನು ದೀಕ್ಷಿತರು ತೆಗೆದುಕೊಂಡು ಹೋದರೂ ಅಗತ್ಯ ಬಿದ್ದರೆ ದೇವಸ್ಥಾನ ಆಡಳಿತ ಮಂಡಳಿಗೆ ಕಾಣಿಕೆ ಮೊತ್ತದಲ್ಲಿ ಭಾಗವನ್ನೂ ನೀಡಲಾಗುತ್ತದೆ. ದೇಣಿಗೆಯ ಆದಾಯ ಮತ್ತು ವೆಚ್ಚದ ಖಾತೆಯನ್ನು ನಿರ್ವಹಿಸಲು ನಾವು ಪ್ರತ್ಯೇಕ ಯೋಜನೆಯನ್ನು ಸಿದ್ಧಪಡಿಸಲು ಸಿದ್ಧರಿದ್ದೇವೆ” ಎಂದು ಹೇಳಲಾಯಿತು. ಆಗ ಮುಜರಾಯಿ ಇಲಾಖೆ ವತಿಯಿಂದ, “ಚಿದಂಬರ ನಟರಾಜ ದೇವಸ್ಥಾನಕ್ಕೆ 3 ಸಾವಿರ ಎಕರೆ ಜಮೀನಿದ್ದು, ಅದರಲ್ಲಿ 2 ಸಾವಿರ ಎಕರೆ ಜಮೀನನ್ನು ದೇವಸ್ಥಾನದ ದೀಕ್ಷಿತರು ತಮ್ಮ ಇಚ್ಛೆಯಂತೆ ವ್ಯಕ್ತಿಗಳಿಗೆ ಮಾರಾಟ ಮಾಡಿದ್ದಾರೆ” ಎಂದು ಗಂಭೀರ ಆರೋಪ ಮಾಡಲಾಯಿತು.

“ಎರಡೂ ಕಡೆಯ ವಾದಗಳಿಂದ ತಾವು ತೀವ್ರ ಆಘಾತಕ್ಕೊಳಗಾಗಿದ್ದೇವೆ” ಎಂದು ಹೇಳಿದ ನ್ಯಾಯಾಧೀಶರು, ಕಳೆದ 2017-18 ರಿಂದ 2021-22ರ ಅವಧಿಯ ವರೆಗಿನ ಲೆಕ್ಕಪತ್ರಗಳನ್ನು ಸಲ್ಲಿಸುವಂತೆ ದೀಕ್ಷಿತರ ಕಡೆಯವರಿಗೆ ಸೂಚಿಸಿದರು. ಅಲ್ಲದೆ, ಭಕ್ತಾದಿಗಳಿಂದ ಬರುವ ಕಾಣಿಕೆ ಮತ್ತು ವೆಚ್ಚಗಳ ಕುರಿತು ಲೆಕ್ಕ ಇಡುವ ಕಾರ್ಯವಿಧಾನವನ್ನು ಅಭಿವೃದ್ಧಿಪಡಿಸಿ; ಅದರ ಕರಡು ವರದಿಯನ್ನು ಸಲ್ಲಿಸುವಂತೆಯೂ ನ್ಯಾಯಾಧೀಶರು ದೀಕ್ಷಿತರ ಕಡೆಯವರಿಗೆ ಆದೇಶಿಸಿದರು.

ಪ್ರಸ್ತುತ ದೇವಸ್ಥಾನ ಎಷ್ಟು ಎಕರೆ ಜಮೀನು ಹೊಂದಿದೆ ಎಂಬ ಬಗ್ಗೆ ವರದಿ ಸಲ್ಲಿಸುವಂತೆಯೂ ಜಿಲ್ಲಾಧಿಕಾರಿಗಳಿಗೆ ಆದೇಶಿಸಿದರು. ಹಾಗೆಯೇ ದೇವಸ್ಥಾನಕ್ಕೆ ಸೇರಿದ 2,000 ಎಕರೆ ಜಮೀನನ್ನು ದೇವಸ್ಥಾನ ದೀಕ್ಷಿತರು ವ್ಯಕ್ತಿಗಳಿಗೆ ಮಾರಾಟ ಮಾಡಿದ್ದಕ್ಕೆ ಸಂಬಂಧಿಸಿದ ದಾಖಲೆಗಳೊಂದಿಗೆ ವರದಿ ಸಲ್ಲಿಸುವಂತೆ ಮುಜರಾಯಿ ಇಲಾಖೆಗೆ ಆದೇಶಿಸಿ ವಿಚಾರಣೆಯನ್ನು ಅಕ್ಟೋಬರ್ 3ಕ್ಕೆ ಮುಂದೂಡಿದ್ದಾರೆ.