ದೇಶ Archives » Page 15 of 53 » Dynamic Leader
October 24, 2024
Home Archive by category ದೇಶ (Page 15)

ದೇಶ

ದೇಶ

ನವದೆಹಲಿ: ಎಲ್‌ಟಿಟಿಇ ಮೇಲಿನ ನಿಷೇಧವನ್ನು ಇನ್ನೂ 5 ವರ್ಷಗಳ ಕಾಲ ವಿಸ್ತರಿಸಿ ಆದೇಶ ಹೊರಡಿಸಿರುವ ಕೇಂದ್ರ ಸರ್ಕಾರ.

ಶ್ರೀಲಂಕಾದಲ್ಲಿ ಪ್ರತ್ಯೇಕ ದೇಶಕ್ಕಾಗಿ ಸಶಸ್ತ್ರ ಹೋರಾಟ ನಡೆಸುತ್ತಿದ್ದ ಲಿಬರೇಶನ್ ಟೈಗರ್ಸ್ ಆಫ್ ತಮಿಳು ಈಳಂ (LTTE), 1991ರಲ್ಲಿ  ನಮ್ಮ ದೇಶದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರನ್ನು ತಮಿಳುನಾಡಿನ ಶ್ರೀಪೆರುಂಬುದೂರ್ ನಲ್ಲಿ ಹತ್ಯೆ ಮಾಡಿತ್ತು. ಆ ನಂತರ ನಮ್ಮ ದೇಶದಲ್ಲಿ ಎಲ್‌ಟಿಟಿಇ ಸಂಘಟನೆಯನ್ನು ನಿಷೇಧಿಸಲಾಯಿತು.

2009ರಲ್ಲಿ ಎಲ್‌ಟಿಟಿಇ ನಾಯಕ ಪ್ರಭಾಕರನ್ ಅವರು ಶ್ರೀಲಂಕಾ ಸೇನೆಯಿಂದ ಹತ್ಯೆಯಾದ ಬಳಿಕ, ಶ್ರೀಲಂಕಾದಲ್ಲಿ ಅವರ ಚಟುವಟಿಕೆಗಳು ಅಂತ್ಯಗೊಂಡವು. ಆದರೂ ಭಾರತದಲ್ಲಿ ಎಲ್‌ಟಿಟಿಇ ಮೇಲಿನ ನಿಷೇಧವು ಮುಂದುವರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ, ಎಲ್‌ಟಿಟಿಇ ಮೇಲಿನ ನಿಷೇಧವನ್ನು ಇನ್ನೂ 5 ವರ್ಷಗಳ ಕಾಲ ವಿಸ್ತರಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.

ಈ ಸಂಬಂಧ ಕೇಂದ್ರ ಸರ್ಕಾರ ಹೊರಡಿಸಿರುವ ಪ್ರಕಟಣೆಯಲ್ಲಿ, ‘ವಿದೇಶದಲ್ಲಿ ನೆಲೆಸಿರುವ ಎಲ್‌ಟಿಟಿಇ ಬೆಂಬಲಿಗರು ಭಾರತದ ವಿರುದ್ಧ ಪ್ರಚಾರ ಮಾಡುತ್ತಿದ್ದಾರೆ. ಅವರು ಭಾರತದ ಸಂವಿಧಾನದ ವಿರುದ್ಧ ದ್ವೇಷವನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದ್ದಾರೆ. ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆಯಡಿ ನಿಷೇಧವನ್ನು ಇನ್ನೂ 5 ವರ್ಷಗಳವರೆಗೆ ವಿಸ್ತರಿಸಲಾಗಿದೆ’ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ದೇಶ

ಈ ವರ್ಷದ ವೇಳೆಗೆ ಅಮೇರಿಕಾದಲ್ಲಿ ಬಡ್ಡಿದರಗಳನ್ನು ಕಡಿತಗೊಳಿಸಿದರೆ, ಚಿನ್ನದ ಬೆಲೆಗಳು ಮತ್ತಷ್ಟು ಏರಿಕೆಯಾಗುವ ನಿರೀಕ್ಷೆಯಿದೆ!

ಭಾರತೀಯ ರಿಸರ್ವ್ ಬ್ಯಾಂಕ್ ಪ್ರಕಾರ, ಕಳೆದ ಐದು ವರ್ಷಗಳಲ್ಲಿ ಭಾರತದ ಚಿನ್ನದ ಸಂಗ್ರಹವು ಶೇಕಡಾ 40 ರಷ್ಟು ಹೆಚ್ಚಾಗಿದೆ. ಮಾರ್ಚ್ 2019 ರಿಂದ ಮಾರ್ಚ್ 2024 ರವರೆಗಿನ ಐದು ವರ್ಷಗಳಲ್ಲಿ, ಆರ್‌ಬಿಐನಲ್ಲಿ ಚಿನ್ನದ ನಿಕ್ಷೇಪವು 822 ಮೆಟ್ರಿಕ್‌ಟನ್ ಗಳಷ್ಟು ಹೆಚ್ಚಾಗಿದೆ. ಇದರಲ್ಲಿ 408 ಮೆಟ್ರಿಕ್ ಟನ್ ಚಿನ್ನ ಭಾರತದಲ್ಲೇ ಇದೆ. ಅಂದರೆ ಜನರ ಬಳಿ 408 ಮೆಟ್ರಿಕ್ ಟನ್ ಚಿನ್ನವಿದೆ.

2019ರಲ್ಲಿ, ಆರ್‌ಬಿಐ ಚಿನ್ನದ ನಿಕ್ಷೇಪವು 612 ಮೆಟ್ರಿಕ್‌ಟನ್‌ಗಳಷ್ಟಿತ್ತು. ಅದರಲ್ಲಿ 292 ಮೆಟ್ರಿಕ್ ಟನ್ ಭಾರತೀಯ ಜನರ ಬಳಿ ಇತ್ತು. ಆರ್‌ಬಿಐ ನಿನ್ನೆ ಬಿಡುಗಡೆ ಮಾಡಿದ ವಿದೇಶಿ ವಿನಿಮಯ ಮೀಸಲು ವಿವರಗಳ ಪ್ರಕಾರ, ಸೆಪ್ಟೆಂಬರ್ 2023 ಮತ್ತು ಮಾರ್ಚ್ 2024ರ ಅವಧಿಯಲ್ಲಿ, ಒಟ್ಟು ವಿದೇಶಿ ವಿನಿಮಯ ಮೀಸಲುಗಳಲ್ಲಿ ಚಿನ್ನದ ಪಾಲು ಶೇಕಡಾ 7.37 ರಿಂದ ಶೇಕಡಾ 8.15ಕ್ಕೆ ಏರಿಕೆಯಾಗಿದೆ.

ಭಾರತೀಯ ರಿಸರ್ವ್ ಬ್ಯಾಂಕ್ ಇತ್ತೀಚಿನ ವರ್ಷಗಳಲ್ಲಿ ಚಿನ್ನವನ್ನು ಹೆಚ್ಚಾಗಿ ಸಂಗ್ರಹಿಸುತ್ತಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಮಾತ್ರವಲ್ಲ, ಪ್ರಪಂಚದಾದ್ಯಂತದ ಕೇಂದ್ರೀಯ ಬ್ಯಾಂಕ್‌ಗಳು ಇದೇ ರೀತಿ ಹೆಚ್ಚು ಚಿನ್ನವನ್ನು ಖರೀದಿಸುತ್ತಿವೆ. ಇದರಿಂದ ವಿಶ್ವ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯೂ ಏರಿಕೆಯಾಗುತ್ತಿದೆ.

ಅದರಲ್ಲೂ ಚೀನಾ ಏಕಾಏಕಿ ಚಿನ್ನವನ್ನು ಭಾರಿ ಪ್ರಮಾಣದಲ್ಲಿ ಖರೀದಿಸಿ ಕೂಡಿಡುತ್ತಿದೆ. ಇದರಿಂದಾಗಿ ಮಾರ್ಚ್ ನಿಂದ ಚಿನ್ನದ ಬೆಲೆ ಶೇ.15ಕ್ಕೂ ಹೆಚ್ಚು ಏರಿಕೆಯಾಗಿದೆ. ಇಸ್ರೇಲ್-ಇರಾನ್ ನಡುವಿನ ಉದ್ವಿಗ್ನತೆ ಸೇರಿದಂತೆ ಜಾಗತಿಕ ರಾಜಕೀಯ ಕಾರಣಗಳಿಂದಲೂ ಚಿನ್ನದ ಬೆಲೆ ಏರುತ್ತಿದೆ. ಈ ವರ್ಷದ ವೇಳೆಗೆ ಅಮೇರಿಕಾದಲ್ಲಿ ಬಡ್ಡಿದರಗಳನ್ನು ಕಡಿತಗೊಳಿಸಿದರೆ, ಚಿನ್ನದ ಬೆಲೆಗಳು ಮತ್ತಷ್ಟು ಏರಿಕೆಯಾಗುವ ನಿರೀಕ್ಷೆಯಿದೆ!

ದೇಶ

ಸಂಸತ್ತಿನ ಸ್ವಾತಂತ್ರ್ಯವು ಪ್ರಜಾಪ್ರಭುತ್ವದ ಕೇಂದ್ರ ಬಿಂದುವಾಗಿದೆ. ಕೇಂದ್ರ ಗೃಹ ಸಚಿವಾಲಯವು ಸ್ಪೀಕರ್ ಅಧಿಕಾರವನ್ನು ಕಸಿದುಕೊಳ್ಳಲು ಪ್ರಯತ್ನಿಸುತ್ತಿದೆ!

ನವದೆಹಲಿ: ಲೋಕಸಭೆ ಮತ್ತು ರಾಜ್ಯಸಭೆಯನ್ನು ಒಳಗೊಂಡಿರುವ ಸಂಸತ್ತಿನ ಭದ್ರತೆಯನ್ನು ಲೋಕಸಭೆಯ ಸ್ಪೀಕರ್ ಅಧ್ಯಕ್ಷತೆಯಲ್ಲಿ ರಚಿಸಲಾದ ಸಮಿತಿಯ ಸಲಹೆಯಂತೆ ನಿರ್ವಹಿಸಲಾಗುತ್ತದೆ. ಈ ಪದ್ಧತಿಯನ್ನು 1929 ರಿಂದ ಅನುಸರಿಸಲಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಗೃಹ ಸಚಿವಾಲಯವು, ಈ ಪದ್ಧತಿಯನ್ನು ಬದಲಿಸುವ ರೀತಿಯಲ್ಲಿ ಮೇ 3 ರಂದು ಆದೇಶವೊಂದನ್ನು ಹೊರಡಿಸಿದೆ. ಅದರಲ್ಲಿ ಸಂಸತ್ತಿನ ಭದ್ರತೆಯನ್ನು ಪರಿಶೀಲಿಸಲು ಸಮಿತಿಯನ್ನು ರಚಿಸಲಾಗಿದ್ದು, ಭದ್ರತೆಗಾಗಿ ಹೆಚ್ಚುವರಿ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯನ್ನು ನೇಮಿಸಲಾಗುವುದು ಎಂದು ಹೇಳಿದೆ.

ಆದೇಶದ ಪ್ರಕಾರ, ಸಂಸತ್ತಿನ ಭದ್ರತೆಯನ್ನು ಪರಿಶೀಲಿಸಿ ವರದಿ ಸಲ್ಲಿಸುವಂತೆ ಕೇಂದ್ರ ಕೈಗಾರಿಕಾ ಭದ್ರತಾ ಪಡೆ ನಿರ್ದೇಶಕ ಅಜಯ್ ಕುಮಾರ್ ಅವರು ಆದೇಶಿಸಿದ್ದಾರೆ. ಈ ಆದೇಶವೇ ಸದ್ಯ ವಿವಾದಕ್ಕೆ ಕಾರಣವಾಗಿದೆ.

ಸಂಸತ್ತಿನ ಭದ್ರತೆಯು ಸ್ಪೀಕರ್ ನಿಯಂತ್ರಣದಲ್ಲೇ ಇರಬೇಕು ಎಂದು ಲೋಕಸಭೆಯ ಮಾಜಿ ಕಾರ್ಯದರ್ಶಿ ಆಚಾರಿ ಹೇಳಿದ್ದಾರೆ. “ಸಂಸತ್ತು ವಿಮಾನ ನಿಲ್ದಾಣಗಳಂತೆ ಸಾರ್ವಜನಿಕ ವಲಯದ ಸಂಸ್ಥೆ ಅಲ್ಲ. ದೇಶಾದ್ಯಂತ ಚುನಾಯಿತ ಸಂಸದರ ಭದ್ರತೆಯನ್ನು ಖಾತ್ರಿಪಡಿಸುವುದು ಸ್ಪೀಕರ್ ಮತ್ತು ಲೋಕಸಭೆ ಸಚಿವಾಲಯದ ಅಧಿಕಾರಕ್ಕೆ ಒಳಪಟ್ಟಿರುತ್ತದೆ” ಎಂದು ಅವರು ಹೇಳಿದ್ದಾರೆ.

ಅದೇ ರೀತಿ ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷದ ಸಂಸದ ಜಾನ್ ಬ್ರಿಟಾಸ್, ಕೇಂದ್ರ ಸರ್ಕಾರದ ಈ ನಿರ್ಧಾರವನ್ನು ಟೀಕಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ. ಅದರಲ್ಲಿ, “ಸಂಸತ್ತಿನ ಸ್ವಾತಂತ್ರ್ಯವು ಪ್ರಜಾಪ್ರಭುತ್ವದ ಕೇಂದ್ರ ಬಿಂದುವಾಗಿದೆ. ಕೇಂದ್ರ ಗೃಹ ಸಚಿವಾಲಯವು ಸ್ಪೀಕರ್ ಅಧಿಕಾರವನ್ನು ಕಸಿದುಕೊಳ್ಳಲು ಪ್ರಯತ್ನಿಸುತ್ತಿದೆ” ಎಂದು ಹೇಳಿದ್ದಾರೆ.

ಇಲ್ಲಿ ಗಮನಿಸಬೇಕಾದ ಅಂಶವೇನಂದರೆ, ಸಂಸತ್ತಿನ ಭದ್ರತೆಯು ಗೃಹ ಸಚಿವಾಲಯದ ನಿಯಂತ್ರಣಕ್ಕೆ ಹೋದರೆ, ಸಂಸತ್ತಿನ ಉಭಯ ಸದನಗಳಲ್ಲಿ ಭದ್ರತಾ ಸಿಬ್ಬಂದಿ ನೇಮಕ, ಸಂಸದರು, ಅವರ ಸಹಾಯಕರು, ಪತ್ರಕರ್ತರು ಮತ್ತು ಸಂದರ್ಶಕರ ಪ್ರವೇಶ ಸೇರಿದಂತೆ ಎಲ್ಲಾ ನಿರ್ಧಾರಗಳನ್ನು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಗಳ ಪಾಲಾಗುತ್ತವೆ ಎಂಬುದು ಗಮನಾರ್ಹ.

ದೇಶ

ಬಿಜೆಪಿ ಎಲ್ಲವನ್ನೂ ಏಕೀಕರಿಸುವ ವಿಚಾರದಿಂದಲೇ ಇದೆಲ್ಲವೂ ಜಟಿಲವಾಗುತ್ತಿದೆ. ‘ಆಫ್ರಿಕನ್ನರಂತೆ’ ಎಂದು ಅವರು ಹೇಳಿದ ಕೂಡಲೇ ನಾವು ಅದನ್ನು ಚರ್ಮದ ಬಣ್ಣಕ್ಕೆ ಹೋಲಿಕೆ ಮಾಡಿ ಮಾತನಾಡುವುದು ಎಷ್ಟು ಸರಿ?

ಕಾಂಗ್ರೆಸ್ ಸಾಗರೋತ್ತರ ಘಟಕದ ಅಧ್ಯಕ್ಷರಾಗಿದ್ದ ಸ್ಯಾಮ್ ಪಿತ್ರೋಡಾ ಅವರು ಆಂಗ್ಲ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ, “ಪೂರ್ವದ ಜನರು ಚೀನಿಯರಂತೆ, ಪಶ್ಚಿಮದ ಜನರು ಅರಬ್ಬರಂತೆ, ಉತ್ತರದ ಜನರು ಬಿಳಿಯರಂತೆ, ದಕ್ಷಿಣದ ಜನರು ಆಫ್ರಿಕನ್ನರಂತೆ ಕಾಣುವ ಭಾರತದಂತಹ ವೈವಿಧ್ಯಮಯ ದೇಶವನ್ನು ನಾವು ಎಕತೆಯಿಂದ ಇಟ್ಟುಕೊಳ್ಳಬಹುದು, ನಾವೆಲ್ಲರೂ ಸಹೋದರ, ಸಹೋದರಿಯರು. ನಾವು ವಿವಿಧ ಧರ್ಮಗಳು, ಭಾಷೆಗಳು, ಪದ್ಧತಿಗಳು, ಜನಾಂಗಗಳಾಗಿದ್ದರೂ ವೈವಿಧ್ಯಮಯ ಆಹಾರಗಳನ್ನು ಗೌರವಿಸುತ್ತೇವೆ. ಇದು ನಾವು ನಂಬಿರುವ ಭಾರತ, ಇಲ್ಲಿ ಎಲ್ಲರಿಗೂ ಅವಕಾಶವಿದೆ” ಎಂದು ಹೇಳಿದ್ದರು.

ಈ ಕುರಿತು ಪ್ರತಿಕ್ರಿಯಿಸಿರುವ ಪ್ರಧಾನಿ ನರೇಂದ್ರ ಮೋದಿ, ” ಚರ್ಮದ ಬಣ್ಣದಿಂದ ಭಾರತೀಯರನ್ನು ನಿರ್ಣಯಿಸುವುದನ್ನು ದೇಶ ಸಹಿಸುವುದಿಲ್ಲ. ರಾಹುಲ್ ಗಾಂಧಿಯವರ ರಾಜಕೀಯ ಸಲಹೆಗಾರ ಪಿತ್ರೋಡಾ ಅವರ ಮಾತು ನನ್ನನ್ನು ದಂಗುಬಡಿಸಿದೆ. ನನ್ನನ್ನು ನಿಂದಿಸಿದಾಗ ನಾನು ಅದನ್ನು ಸಹಿಸಬಲ್ಲೆ, ಆದರೆ ನನ್ನ ಜನರನ್ನು ನಿಂದಿಸಿದಾಗ ನಾನು ಅದನ್ನು ಸಹಿಸಲಾರೆ” ಎಂದು ಹೇಳಿದರು.

ಕಾಂಗ್ರೆಸ್‌ಗೂ ಇದಕ್ಕೂ ಸಂಬಂಧವಿಲ್ಲ:
ಈ ಹಿನ್ನೆಲೆಯಲ್ಲಿ, ಕಾಂಗ್ರೆಸ್ ಪಕ್ಷ ಈ ವಿಚಾರಗಳಿಂದ ಸಂಪೂರ್ಣ ದೂರ ಸರಿಯುವುದಾಗಿ ಹೇಳಿದೆ. ಈ ಕುರಿತು ತಮ್ಮ ‘ಎಕ್ಸ್’ ಪೇಜ್ ನಲ್ಲಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್‌, “ಭಾರತದ ವೈವಿಧ್ಯತೆಯನ್ನು ವಿವರಿಸಲು ಸ್ಯಾಮ್ ಪಿತ್ರೋಡಾ ಬಳಸಿದ ಸಾದೃಶ್ಯಗಳು ದುರದೃಷ್ಟಕರ ಮತ್ತು ಸ್ವೀಕಾರಾರ್ಹವಲ್ಲ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಂತಹ ಸಾದೃಶ್ಯಗಳಿಂದ ಸಂಪೂರ್ಣವಾಗಿ ದೂರ ಸರಿಯುತ್ತದೆ” ಎಂದು ಹೇಳಿದ್ದಾರೆ.

ನಾವು ಆಫ್ರಿಕಾದಿಂದ ಬಂದವರೇ:
ಇಲ್ಲಿಯವರೆಗೆ ನಾವು ನಮ್ಮನ್ನು ಆಫ್ರಿಕಾದಿಂದ ಬಂದವರಾಗಿಯೇ ಕಾಣುತ್ತಿದ್ದೇವೆ. ಅದು ಆರ್ಯರಾಗಿರಲೀ ಅಥವಾ ದ್ರಾವಿಡರಾಗಿರಲೀ ನಾವು ಆಫ್ರಿಕಾ ಖಂಡದಿಂದಲೇ ಇಲ್ಲಿಗೆ ವಲಸೆ ಬಂದಿರುವುದು. ಹೀಗಿರುವಾಗ, ಇದರಲ್ಲಿ ಆಫ್ರಿಕಾ ಎಂದು ಹೇಳುವಾಗ ನಾನು ಅದನ್ನು ಅವಮಾನಿಸುವ ವಿಷಯವಾಗಿ ನೋಡುವುದಿಲ್ಲ. ಚರ್ಮದ ಬಣ್ಣವನ್ನು ಆಧರಿಸಿಯೇ ಪಿತ್ರೋಡಾ ಹೇಳಿದ್ದಾರೆ ಎಂದು ಬಿಜೆಪಿ ಆರೋಪಿಸುತ್ತಿದೆ. ಇದು ಸುಳ್ಳು.

ಡಿ.ಸಿ.ಪ್ರಕಾಶ್

ಪಿತ್ರೋಡಾ ಹೇಳಿದ್ದರಲ್ಲಿ ಎಂತಹ ವಿಭಜಕತೆ ಇದೆ?
ಪಿತ್ರೋಡಾ ಹೇಳಿದ್ದರಲ್ಲಿ ಎಂತಹ ವಿಭಜಕತೆ ಇದೆ ಎಂದು ಅರ್ಥವಾಗುತ್ತಿಲ್ಲ. ಜನರು ವಿಭಿನ್ನ ಜನಾಂಗಕ್ಕೆ (Racial) ಸೇರಿದವರು; ಪ್ರತಿಯೊಬ್ಬರೂ ವಿಭಿನ್ನ ಮುಖದ ಆಕಾರ, ವಿಭಿನ್ನ ಬಣ್ಣಗಳನ್ನು ಹೊಂದಿರುತ್ತಾರೆ. ಮಂಗೋಲಿಯನ್ ಅಥವಾ ಸಂಬಂಧಿತ ಜನಾಂಗೀಯ ಗುಂಪುಗಳಿಗೆ ಸೇರಿದ ಈಶಾನ್ಯದ ಜನರ ಮುಖವಾಡ ಒಂದೇ ಆಗಿರುತ್ತದೆ.

ದಕ್ಷಿಣದ ಜನರನ್ನು ಜನಾಂಗೀಯ ಗುಂಪುಗಳಾಗಿ ನೋಡುವಾಗ ನಾವು ದ್ರಾವಿಡರು ಎಂದೇ ಗುರುತಿಸಿಕೊಳ್ಳುತ್ತೇವೆ. ನಾವು ದ್ರಾವಿಡರು ಎಂದು ಹೇಳುವಾಗ, ಅದಕ್ಕೆ ಸೇರಿದ ಅಂಶಗಳಾಗಿ ನಮ್ಮಲ್ಲಿ ಕಪ್ಪು ಮೈಬಣ್ಣ, ಗುಂಗುರು ಕೂದಲು, ದೃಢವಾದ ದೇಹ ಮೈಕಟ್ಟು ಮುಂತಾದ ವಿಶಿಷ್ಟ ಗುಣಲಕ್ಷಣಗಳಿರುತ್ತವೆ. ಹೀಗೆ ಪ್ರತಿಯೊಬ್ಬರಲ್ಲೂ ಒಂದೊಂದು ರೀತಿಯ ಗುಣಲಕ್ಷಣಗಳಿರುವಾಗ ಹೀಗೆ ಹೇಳುವುದರಲ್ಲಿ ತಪ್ಪೇನೂ ಕಾಣುತ್ತಿಲ್ಲ.

ಬಿಜೆಪಿಯವರು ಇದನ್ನು ವಿಭಜನೆಯ ವಿಷಯವಾಗಿದೆ ತೆಗೆದುಕೊಂಡು ರಾಜಕೀಯ ಮಾಡುತ್ತಿದ್ದಾರೆ. ಇಷ್ಟೆಲ್ಲಾ ಭಿನ್ನತೆಗಳಿದ್ದರೂ ಭಾರತೀಯರು ತಮ್ಮ ವೈವಿಧ್ಯತೆಯಲ್ಲಿ ಏಕತೆಯನ್ನು ಹೊಂದಿದ್ದಾರೆ ಎಂದೇ ಪಿತ್ರೋಡಾ ಹೇಳಿದ್ದಾರೆ. ಬಿಜೆಪಿ ಎಲ್ಲವನ್ನೂ ಏಕೀಕರಿಸುವ ವಿಚಾರದಿಂದಲೇ ಇದೆಲ್ಲವೂ ಜಟಿಲವಾಗುತ್ತಿದೆ. ‘ಆಫ್ರಿಕನ್ನರಂತೆ’ ಎಂದು ಅವರು ಹೇಳಿದ ಕೂಡಲೇ ನಾವು ಅದನ್ನು ಚರ್ಮದ ಬಣ್ಣಕ್ಕೆ ಹೋಲಿಕೆ ಮಾಡಿ ಮಾತನಾಡುವುದು ಎಷ್ಟು ಸರಿ? ಅವರು ಎಲ್ಲಿಯೂ ಬಣ್ಣದ ಬಗ್ಗೆ ಮಾತನಾಡಲಿಲ್ಲ.

ಆಫ್ರಿಕನ್ನರು ಎಂದು ಹೇಳುವುದು ಅವಹೇಳನಕಾರಿಯೇ?
ಹಾಗಿದ್ದರೆ ಯಾರಲ್ಲಿ ವರ್ಣಭೇದ (Racism) ನೀತಿ ಇದೆ. ಆಫ್ರಿಕಾದಲ್ಲಿಯೂ ಸಹ, ವಿವಿಧ ಬಣ್ಣಗಳ ಜನರು ಅಸ್ತಿತ್ವದಲ್ಲಿದ್ದಾರೆ. ನಾವೆಲ್ಲರೂ ಒಂದೇ ಮಂಗನಿಂದಲೇ ಬಂದಿದ್ದೇವೆ ಎಂಬುದನ್ನು ಮರೆಯಬಾರದು. ಪೂರ್ವದ ಜನರು ಚೀನಿಯರಂತೆ, ಉತ್ತರದ ಜನರು ಬಿಳಿಯರಂತೆ, ದಕ್ಷಿಣದ ಜನರು ಆಫ್ರಿಕನ್ನರಂತೆ ಎಂಬುದೆಲ್ಲವೂ ಬಿಜೆಪಿಗೆ ಸಮಸ್ಯೆಯಿಲ್ಲ ಪಶ್ಚಿಮದ ಜನರು ಅರಬ್ಬರಂತೆ ಎಂದು ಸ್ಯಾಮ್ ಪಿತ್ರೋಡಾ ಹೇಳಿರುವುದೇ ಬಿಜೆಪಿ ಮತ್ತು ಮೋದಿಯವರಿಗೆ ಸಮಸ್ಯೆ ಆಗಿರುವಂತೆ ಕಾಣುತ್ತದೆ.

ಡಿ.ಸಿ.ಪ್ರಕಾಶ್, ಸಂಪಾದಕರು
Email:dynamicleaderdesk@gmail.com

ದೇಶ

“ನೂರಾರು ಮಹಿಳೆಯರ ಮೇಲೆ ಅತ್ಯಾಚಾರವೆಸಗಿ, ವಿಡಿಯೊ ಮಾಡಿಕೊಂಡಿದ್ದ ಕರ್ನಾಟಕದ ಸಂಸದ ಪ್ರಜ್ವಲ್ ರೇವಣ್ಣ ಅವರಂತಹವರಿಗೆ ದೇಶ ತೊರೆಯಲು ಅವಕಾಶ ನೀಡಿ, ಬದಲಾಗಿ ಬಿಜೆಪಿ ಸರಕಾರ ನಮ್ಮಂತಹ ಪ್ರತಿಪಕ್ಷ ನಾಯಕರನ್ನು ಬಂಧಿಸಿದೆ” – ಕೆ.ಕವಿತಾ 

ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ನಾಯಕಿ ಹಾಗೂ ತೆಲಂಗಾಣ ವಿಧಾನ ಪರಿಷತ್ ಸದಸ್ಯೆ ಕೆ.ಕವಿತಾ ಅವರನ್ನು ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದ ಪ್ರಕರಣದಲ್ಲಿ ಬಂಧಿಸಲಾಗಿದೆ. ಅವರ ವಿರುದ್ಧ ಜಾರಿ ನಿರ್ದೇಶನಾಲಯ (ಇಡಿ) ಮತ್ತು ಸಿಬಿಐ ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿವೆ. ಅವರ ಎಲ್ಲಾ ಜಾಮೀನು ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ಈ ಹಿನ್ನೆಲೆಯಲ್ಲಿ, ಕೆ.ಕವಿತಾ ಅವರ ರಿಮಾಂಡ್ ಅವಧಿ ಪೂರ್ಣಗೊಂಡಿದ್ದ ಕಾರಣ ನಿನ್ನೆ ದೆಹಲಿ ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆಗೆ ಬಂದಿತ್ತು.

ವಿಚಾರಣೆಯ ಕೊನೆಯಲ್ಲಿ ನ್ಯಾಯಾಲಯವು ಮೇ 14ರ ವರೆಗೆ ಬಂಧನವನ್ನು ವಿಸ್ತರಿಸಿ ಆದೇಶ ನೀಡಿತು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕೆ.ಕವಿತಾ, “ನೂರಾರು ಮಹಿಳೆಯರ ಮೇಲೆ ಅತ್ಯಾಚಾರವೆಸಗಿ, ವಿಡಿಯೊ ಮಾಡಿಕೊಂಡಿದ್ದ ಕರ್ನಾಟಕದ ಸಂಸದ ಪ್ರಜ್ವಲ್ ರೇವಣ್ಣ ಅವರಂತಹವರಿಗೆ ದೇಶ ತೊರೆಯಲು ಅವಕಾಶ ನೀಡಿ, ಬದಲಾಗಿ ಬಿಜೆಪಿ ಸರಕಾರ ನಮ್ಮಂತಹ ಪ್ರತಿಪಕ್ಷ ನಾಯಕರನ್ನು ಬಂಧಿಸಿದೆ. ಈ ಅನ್ಯಾಯವನ್ನು ದೇಶದ ಜನರು ಗಮನಿಸಬೇಕು’’ ಎಂದರು.

ದೇಶ

ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ಎಂದು ಹೆಸರಾಗಿರುವ ಭಾರತ ಪ್ರಸ್ತುತ ತನ್ನ ಪ್ರಜಾಪ್ರಭುತ್ವವನ್ನು ಕಳೆದುಕೊಳ್ಳುತ್ತಿದೆ!

ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನದಂದು (03.05.2024), ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕವು (Press Freedom Index) ಮಾಧ್ಯಮ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವ ಬಿಜೆಪಿ ಸರ್ಕಾರದ ಕ್ರಮವನ್ನು ಶ್ರೇಣೀಕರಿಸಿದೆ.

Reporters Without Borders ಎಂಬ ಸಂಸ್ಥೆ ಪ್ರಕಟಿಸಿದ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕವು, ಪ್ರಜಾಪ್ರಭುತ್ವವನ್ನು ಕಳೆದುಕೊಳ್ಳುತ್ತಿರುವ ದೇಶಗಳನ್ನು ಶ್ರೇಣೀಕರಿಸಿದೆ. ಒಟ್ಟು 176 ದೇಶಗಳ ಪೈಕಿ ಭಾರತ 159ನೇ ಸ್ಥಾನದಲ್ಲಿದೆ. “2014ರಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಅಂಬಾನಿ, ಅದಾನಿಯೊಂದಿಗೆ ಸೇರಿ ಮಾಧ್ಯಮಗಳನ್ನು ತನ್ನ ಲಾಭಕ್ಕೆ ಬಳಸಿಕೊಂಡಿದ್ದು ಇದಕ್ಕೆ ಕಾರಣವಾಗಿದೆ.

ಇದರ ಪರಿಣಾಮದಿಂದಾಗಿ ಅಂಬಾನಿಯ ರಿಲಯನ್ಸ್ ಗ್ರೂಪ್ ಒಡೆತನದ ಸುಮಾರು 70 ಮಾಧ್ಯಮಗಳು ಮತ್ತು ಅದಾನಿ ಒಡೆತನದ NDTV ಬಿಜೆಪಿಯ ‘Go(mo)di Media’ಗಳಾಗಿ ಪರಿವರ್ತನೆಗೊಂಡಿವೆ. ಇಂತಹ ಮಾಧ್ಯಮಗಳಿಂದ ಸುಮಾರು 80 ಕೋಟಿಗೂ ಹೆಚ್ಚು ಜನರು ಸುಳ್ಳು ಸುದ್ದಿಗಳನ್ನು ಓದುತ್ತಿದ್ದಾರೆ.

ಅಲ್ಲದೆ, ಭಾರತದಲ್ಲಿ ಪತ್ರಕರ್ತರ ಮೇಲೆ ದಬ್ಬಾಳಿಕೆ ಹೆಚ್ಚಾಗಿದೆ. ಮಾಧ್ಯಮಗಳ ತಟಸ್ಥತೆ ಪ್ರಶ್ನಾರ್ಹವಾಗಿದೆ. ಪತ್ರಿಕಾ ಸ್ವಾತಂತ್ರ್ಯವೂ ಪ್ರಶ್ನಾರ್ಹವಾಗಿದೆ” ಎಂದು RSF ಹೇಳಿದೆ. ಶ್ರೇಯಾಂಕ ಪಟ್ಟಿಯಲ್ಲಿ ಭಾರತಕ್ಕಿಂತ ನೆರೆಯ ರಾಷ್ಟ್ರಗಳಾದ ಶ್ರೀಲಂಕಾ, ಪಾಕಿಸ್ತಾನ, ನೇಪಾಳ ಮತ್ತು ಮಾಲ್ಡೀವ್ಸ್ ಹೆಚ್ಚು ಪತ್ರಿಕಾ ಸ್ವಾತಂತ್ರ್ಯವನ್ನು ಉತ್ತೇಜಿಸುವ ದೇಶಗಳಾಗಿವೆ ಎಂದು RSF ಸೂಚ್ಯಂಕ ಬಹಿರಂಗಪಡಿಸಿದೆ.

ಈ ಬಗ್ಗೆ, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಮಾತನಾಡಿ, ಬಿಜೆಪಿ ಆಡಳಿತದಲ್ಲಿ ಪತ್ರಿಕಾ ಸ್ವಾತಂತ್ರ್ಯ ತೀವ್ರ ಹದಗೆಟ್ಟಿದೆ. ಗೌರಿ ಲಂಕೇಶ್, ಕಲಬುರ್ಗಿ ಸೇರಿದಂತೆ ಹಿರಿಯ ಪತ್ರಕರ್ತರನ್ನು ಹತ್ಯೆ ಮಾಡಲಾಗಿದೆ. ಸಿದ್ದಿಕ್ ಕಪ್ಪನ್, ರಾಣಾ ಅವರಂತಹ ಪ್ರಾಮಾಣಿಕ ಪತ್ರಕರ್ತರಿಗೆ ಬೆದರಿಕೆ ಹಾಕಿ ಸತ್ಯವನ್ನು ಮರೆಮಾಚಲಾಗುತ್ತಿದೆ.

ಇದು ಭಾರತದ ಪ್ರಜಾಪ್ರಭುತ್ವವನ್ನು ಹದಗೆಡಿಸಿದೆ. ಆದ್ದರಿಂದ ನಾವು ಪತ್ರಕರ್ತರ ಸ್ವಾತಂತ್ರ್ಯ ರಕ್ಷಣೆ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯ ಸ್ಥಾಪಿಸಲು ಕ್ರಮಕೈಗೊಳ್ಳುತ್ತೇವೆ’’ ಎಂದು ಹೇಳಿದ್ದಾರೆ.

ದೇಶ

ನವದೆಹಲಿ: ಲೋಕಸಭೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಜಾಮೀನು ನೀಡುವ ಬಗ್ಗೆ ಚಿಂತನೆ ನಡೆಸಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿದ್ದು, ಜಾಮೀನು ನೀಡಿದರೆ ವಿಧಿಸುವ ಷರತ್ತುಗಳ ಬಗ್ಗೆ 7 ರಂದು ವರದಿ ನೀಡುವಂತೆ ಜಾರಿ ಇಲಾಖೆಗೆ ಆದೇಶಿಸಿದೆ.

ದೆಹಲಿ ಮದ್ಯ ನೀತಿ ಹಗರಣ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿದೆ. ಇದರ ವಿರುದ್ಧ ಕೇಜ್ರಿವಾಲ್ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಸಂಜೀವ್ ಖನ್ನಾ, ಕೇಜ್ರಿವಾಲ್ ವಿಷಯದಲ್ಲಿ ಏನನ್ನೂ ವಶಪಡಿಸಿಕೊಂಡಿಲ್ಲ. ಅಂತಹ ಜಪ್ತಿ ಮಾಡಲಾಗಿದ್ದರೆ, ಕೇಜ್ರಿವಾಲ್ ಅವರು ಈ ದುಷ್ಕೃತ್ಯದಲ್ಲಿ ಹೇಗೆ ತೊಡಗಿದ್ದರು ಎಂಬುದನ್ನು ವಿವರಿಸಬೇಕು. ಚುನಾವಣೆಗೂ ಮುನ್ನ ಕೇಜ್ರಿವಾಲ್ ಅವರನ್ನು ಬಂಧಿಸಿದ್ದು ಏಕೆ? ಎಂದು ಪ್ರಶ್ನಿಸಿದ್ದರು.

ಇಂದು (ಮೇ 3) ಪ್ರಕರಣ ವಿಚಾರಣೆಗೆ ಬಂದಾಗ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು ಲೋಕಸಭೆ ಚುನಾವಣೆಯನ್ನು ಪರಿಗಣಿಸಿ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಮಧ್ಯಂತರ ಜಾಮೀನು ನೀಡುವುದನ್ನು ಪರಿಗಣಿಸಬಹುದು ಎಂದು ಹೇಳಿದರು. ಮತ್ತು ಅವರು ಉಲ್ಲೇಖಿಸಿ ಮಾತನಾಡುತ್ತಾ, ಅವರಿಗೆ ಜಾಮೀನು ನೀಡಲು ನಿರ್ಧರಿಸಲಾಗಿಲ್ಲ; ಈ ವಿಷಯದಲ್ಲಿ ನಾವು ಅಭಿಪ್ರಾಯ ಮಂಡಿಸಿದ್ದೇವೆ ಅಷ್ಟೆ; ಯಾವುದೇ ಊಹೆಗಳನ್ನು ಮಾಡಬೇಡಿ. ಒಂದುವೇಳೆ ಕೇಜ್ರಿವಾಲ್ ಅವರಿಗೆ ಜಾಮೀನು ನೀಡಿದರೆ ವಿಧಿಸುವ ಷರತ್ತುಗಳ ಬಗ್ಗೆ ಇದೇ 7 ರಂದು ವರದಿ ನೀಡುವಂತೆ ಜಾರಿ ಇಲಾಖೆಗೆ ನ್ಯಾಯಾಧೀಶರು ಆದೇಶಿಸಿದರು.

ಆಗ ಜಾರಿ ನಿರ್ದೇಶನಾಲಯ ಪರ ವಾದ ಮಂಡಿಸಿದ ವಕೀಲರು, ಕೇಜ್ರಿವಾಲ್‌ಗೆ ಮಧ್ಯಂತರ ಜಾಮೀನು ನೀಡಿದರೆ, ಅದು ವಿಚಾರಣೆಗೆ ಹಿನ್ನಡೆಯಾಗುತ್ತದೆ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಧೀಶರು, ‘‘ಕೇಜ್ರಿವಾಲ್ ಅವರಿಗೆ ಏಕೆ ಜಾಮೀನು ನೀಡಬಾರದು ಎಂಬ ಬಗ್ಗೆ ಜಾರಿ ನಿರ್ದೇಶನಾಲಯದಿಂದ ವಿಸ್ತೃತ ವಾದವನ್ನು ಇದೇ 7ರಂದು ಆಲಿಸುತ್ತೇವೆ. ಜೈಲಿನಲ್ಲಿದ್ದಾಗ ಕಡತಗಳಿಗೆ ಸಹಿ ಹಾಕಿರುವ ಬಗ್ಗೆಯೂ ವಿವರಣೆ ನೀಡಬೇಕಿದೆ. ಎಂದು ಹೇಳಿ ಪ್ರಕರಣದ ವಿಚಾರಣೆಯನ್ನು ಮೇ 7ಕ್ಕೆ ಮುಂದೂಡಿದರು.

ಕ್ರೈಂ ರಿಪೋರ್ಟ್ಸ್ ದೇಶ

ನವದೆಹಲಿ: ಭಾರತೀಯ ದಂಡ ಸಂಹಿತೆ (IPC), ಭಾರತೀಯ ಅಪರಾಧ ಪ್ರಕ್ರಿಯಾ ಸಂಹಿತೆ (CRPC) ಮತ್ತು ಭಾರತೀಯ ಸಾಕ್ಷಿ ಕಾಯಿದೆ (IEC) ಬದಲಿಗೆ ಭಾರತೀಯ ನ್ಯಾಯ ಸಂಹಿತಾ 2023, ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ 2023 ಮತ್ತು ಭಾರತೀಯ ಸಾಕ್ಷಿ ಅಧಿನಿಯಮ್ 2023 ಅನ್ನು ಪರಿಚಯಿಸಲಾಗಿದೆ.

ಈ ಹೊಸ ಕ್ರಿಮಿನಲ್ ತಿದ್ದುಪಡಿ ಕಾಯ್ದೆಗಳು ಜುಲೈ 1 ರಿಂದ ಜಾರಿಗೆ ಬರಲಿವೆ ಎಂದು ಕೇಂದ್ರ ಸರ್ಕಾರ ಕಳೆದ ಫೆಬ್ರವರಿಯಲ್ಲಿ ಘೋಷಿಸಿತು. ತರುವಾಯ, ಕೇಂದ್ರ ಗೃಹ ಸಚಿವಾಲಯವು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕಳುಹಿಸಿದ ಸುತ್ತೋಲೆಯಲ್ಲಿ, “ವಸಾಹತುಶಾಹಿ ಆಳ್ವಿಕೆಗೆ ಅನುಗುಣವಾಗಿ ಬ್ರಿಟಿಷರ ಆಳ್ವಿಕೆಯಲ್ಲಿ ಜಾರಿಗೆ ಬಂದ ಕಾನೂನುಗಳನ್ನು ಎಲ್ಲರಿಗೂ ನ್ಯಾಯ ಒದಗಿಸುವ ಕಾನೂನುಗಳಾಗಿ ಬದಲಾಯಿಸುವುದು ಈ ತಿದ್ದುಪಡಿಯ ಉದ್ದೇಶವಾಗಿದೆ.

ಹೊಸ ಕ್ರಿಮಿನಲ್ ಕಾನೂನುಗಳಲ್ಲಿನ ಸಕಾರಾತ್ಮಕ ಅಂಶಗಳು ಮತ್ತು ನವೀಕೃತ ಬದಲಾವಣೆಗಳ ಕುರಿತು ದೇಶದ ಎಲ್ಲಾ ಪೊಲೀಸ್ ಮತ್ತು ಜೈಲು ಅಧಿಕಾರಿಗಳಿಗೆ ತರಬೇತಿ ನೀಡಲು ಭಾರತ ಸರ್ಕಾರ ಬದ್ಧವಾಗಿದೆ. ಇದಕ್ಕಾಗಿ ತರಬೇತಿ ಪಡೆಯುವ ಮೂಲಕ ಅವರು ಹೊಸ ಕಾನೂನುಗಳ ಬಗ್ಗೆ ಸರಿಯಾದ ತಿಳುವಳಿಕೆಯನ್ನು ಹೊಂದಿರುತ್ತಾರೆ ಮತ್ತು ಸರಿಯಾದ ರೀತಿಯಲ್ಲಿ ಆತ್ಮ ವಿಶ್ವಾಸವನ್ನೂ ತೋರಿಸುತ್ತಾರೆ.

ಭಾರತ ಸರ್ಕಾರದ ಪೊಲೀಸ್ ಸಂಶೋಧನೆ ಮತ್ತು ಅಭಿವೃದ್ಧಿ ಬ್ಯೂರೋ ತರಬೇತುದಾರರಿಗೆ ತರಬೇತಿ ನೀಡಲು ಕಾರ್ಯಕ್ರಮ ರೂಪಿಸಿದೆ. ವಿವಿಧ ಸ್ತರಗಳಿಗೆ ಸೇರಿದ ಪೊಲೀಸ್ ಮತ್ತು ಜೈಲು ಸಿಬ್ಬಂದಿಗೆ ಈ ತರಬೇತಿಯನ್ನು ಯೋಜಿಸಲಾಗಿದೆ. ಸಂಯೋಜಿತ ಸರ್ಕಾರಿ ಆನ್‌ಲೈನ್ ತರಬೇತಿ ವೇದಿಕೆಯಲ್ಲಿ ಅನುಗುಣವಾದ ಪಠ್ಯಕ್ರಮಗಳನ್ನು ಅಪ್‌ಲೋಡ್ ಮಾಡಲಾಗಿದೆ.

ದೇಶದಾದ್ಯಂತ ಪೊಲೀಸ್ ತರಬೇತಿ ಶಾಲೆಗಳಲ್ಲಿ ವಿಶೇಷ ಶಿಬಿರಗಳನ್ನು ನಡೆಸಲು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹೊಸ ಕ್ರಿಮಿನಲ್ ಕಾನೂನುಗಳ ಕುರಿತು ಆನ್‌ಲೈನ್ ಕೋರ್ಸ್‌ಗಳನ್ನು ಪೊಲೀಸ್ ಸಂಶೋಧನೆ ಮತ್ತು ಅಭಿವೃದ್ಧಿ ಬ್ಯೂರೋ ಕಳುಹಿಸಿದೆ ಎಂದು” ಅದರಲ್ಲಿ ಹೇಳಲಾಗಿದೆ.

ದೇಶ

ಚೀನಾದಲ್ಲಿ ಹುಟ್ಟಿಕೊಂಡ ಕೊರೊನಾ ವೈರಸ್, ಪ್ರಪಂಚದಾದ್ಯಂತ ಹರಡಿ ಸಾಕಷ್ಟು ಹಾನಿಯನ್ನು ಉಂಟುಮಾಡಿತು. ನಂತರ, ವಿವಿಧ ದೇಶಗಳು ಕೊರೊನಾ ಲಸಿಕೆಯನ್ನು ಕಂಡುಹಿಡಿದವು.

ಇಂಗ್ಲೆಂಡ್ ಮೂಲದ ಅಸ್ಟ್ರಾಜೆನೆಕಾ ಮತ್ತು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಜಂಟಿಯಾಗಿ ಲಸಿಕೆಯನ್ನು ಅಭಿವೃದ್ಧಿಪಡಿಸಿತು. ಈ ಲಸಿಕೆಯನ್ನು ಭಾರತದಲ್ಲಿ ಕೋವಿಶೀಲ್ಡ್ ಎಂಬ ಹೆಸರಿನಲ್ಲಿ ವಿತರಿಸಲಾಯಿತು. ಈ ಲಸಿಕೆಯನ್ನೇ ಅನೇಕ ದೇಶಗಳಲ್ಲಿ ನೀಡಲಾಯಿತು.

ಕೇಂದ್ರ ಆರೋಗ್ಯ ಇಲಾಖೆಯ ಪ್ರಕಾರ, ಭಾರತದಲ್ಲಿ 175 ಕೋಟಿಗೂ ಹೆಚ್ಚು ಕೋವಿಶೀಲ್ಡ್ ಲಸಿಕೆಗಳನ್ನು ನೀಡಲಾಗಿದೆ. ಈ ಹಿನ್ನಲೆಯಲ್ಲಿ, ಕೋವಿಶೀಲ್ಡ್ ಲಸಿಕೆ ಅಡ್ಡ ಪರಿಣಾಮ ಬೀರುತ್ತದೆ ಎಂದು ಅಸ್ಟ್ರಾಜೆನೆಕಾ ಕಂಪನಿ ಒಪ್ಪಿಕೊಂಡಿರುವ ಬಗ್ಗೆ  ಪ್ರಸ್ತಾಪಿಸಿರುವ ಭಾರತೀಯ ವೈದ್ಯರು,

‘ಇದು ಹೊಸ ಮಾಹಿತಿಯೇನಲ್ಲ. ಕೋವಿಶೀಲ್ಡ್ ಲಸಿಕೆಯನ್ನು ಸಾರ್ವಜನಿಕರಿಗೆ ಪರಿಚಯಿಸಿದಾಗಿನಿಂದ ಅದರ ಬಗ್ಗೆ ಎಚ್ಚರಿಕೆಯನ್ನು ನಾವು ತಿಳಿದಿದ್ದೇವೆ. ವಿಶ್ವ ಆರೋಗ್ಯ ಸಂಸ್ಥೆಯು ಈ ಲಸಿಕೆಯನ್ನು ನೀಡುವುದರಿಂದ ಅಪರೂಪದ ರಕ್ತ ಹೆಪ್ಪುಗಟ್ಟುವಿಕೆಯ ಅಪಾಯವು ತುಂಬಾ ಕಡಿಮೆ ಎಂದು ಘೋಷಿಸಿದೆ.

ಇಂಗ್ಲೆಂಡ್ ನಲ್ಲಿ ಪ್ರತಿ ಮಿಲಿಯನ್ ಜನರಿಗೆ 4 ಪ್ರಕರಣಗಳು, ಯುರೋಪ್ ನಲ್ಲಿ 1,00,000 ಜನರಿಗೆ 1 ಪ್ರಕರಣ ಮತ್ತು ಭಾರತದಲ್ಲಿ ಪ್ರತಿ ಮಿಲಿಯನ್ ಡೋಸ್‌ಗಳಿಗೆ 0.61 ಪ್ರಕರಣಗಳು ದಾಖಲಾಗಿದೆ” ಎಂದು ಹೇಳಿದ್ದಾರೆ.

ದೇಶ

ಸಂಸತ್ತಿನ ಚುನಾವಣೆಗೆ ಮುನ್ನ ಕೇಜ್ರಿವಾಲ್ ಅವರನ್ನು ಏಕೆ ಬಂಧಿಸಲಾಯಿತು ಮತ್ತು ತನಿಖೆಯ ಪ್ರಾರಂಭ ಮತ್ತು ಬಂಧನದ ನಡುವೆ ಏಕೆ ದೊಡ್ಡ ಅಂತರವಿದೆ ಎಂಬುದನ್ನು ವಿವರಿಸಿ- ಸುಪ್ರೀಂ ಕೋರ್ಟ್

ದೆಹಲಿ ಮದ್ಯ ನೀತಿ ಹಗರಣ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ ಸಮನ್ಸ್ ಅನ್ನು ಪದೇ ಪದೇ ನಿರ್ಲಕ್ಷಿಸಿದ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಸಂಸತ್ ಚುನಾವಣೆ ಘೋಷಣೆಯಾದ ಐದನೇ ದಿನದಲ್ಲಿ ಜಾರಿ ನಿರ್ದೇಶನಾಲಯ ಬಂಧಿಸಿತು. ಆಮ್ ಆದ್ಮಿ ಪಕ್ಷವನ್ನು ಚುನಾವಣೆಯಲ್ಲಿ ಸೋಲಿಸಲು ಚುನಾವಣೆಗೆ ಮುನ್ನವೇ ಕೇಜ್ರಿವಾಲ್ ಅವರನ್ನು ಬಂಧಿಸಲಾಯಿತು ಎಂದು ಆಮ್ ಆದ್ಮಿ ಪಕ್ಷದ ಸಚಿವರು ಮತ್ತು ವಿರೋಧ ಪಕ್ಷಗಳು ಹೇಳುತ್ತಿವೆ.

ಪ್ರಸ್ತುತ ತಿಹಾರ್ ಜೈಲಿನಲ್ಲಿರುವ ಕೇಜ್ರಿವಾಲ್ ಅವರ ನ್ಯಾಯಾಲಯದ ಕಸ್ಟಡಿಯನ್ನು ಮೇ 7 ರವರೆಗೆ ವಿಸ್ತರಿಸಲಾಗಿದೆ. ಮತ್ತೊಂದೆಡೆ, ಮಧುಮೇಹಿಯಾಗಿರುವ ಕೇಜ್ರಿವಾಲ್‌ಗೆ ಜೈಲಿನಲ್ಲಿ ಹೆಚ್ಚು ಸಕ್ಕರೆ ಅಂಶವಿರುವ ಆಹಾರವನ್ನು ನೀಡಲಾಗುತ್ತಿದ್ದು, ಅವರ ಭೇಟಿಗೆ ಪತ್ನಿಗೂ ಅನುಮತಿ ನಿರಾಕರಿಸಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.

ಈ ಹಿನ್ನಲೆಯಲ್ಲಿ, ಸಂಸತ್ ಚುನಾವಣೆಗೂ ಮುನ್ನವೇ ಕೇಜ್ರಿವಾಲ್ ಅವರನ್ನು ಬಂಧಿಸಿದ್ದು ಏಕೆ ಎಂದು ಜಾರಿ ಇಲಾಖೆಯನ್ನು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ. ಜಾರಿ ಇಲಾಖೆಯ ಬಂಧನದ ವಿರುದ್ಧ ಕೇಜ್ರಿವಾಲ್ ಅವರು ಸಲ್ಲಿಸಿರುವ ಮನವಿ ಇಂದು ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಮೂರ್ತಿ ದೀಪಂಕರ್ ದತ್ತಾ ನೇತೃತ್ವದ ಪೀಠದಲ್ಲಿ ವಿಚಾರಣೆಗೆ ಬಂದಿತು.

ಆಗ ಜಾರಿ ಇಲಾಖೆ ಪರವಾಗಿ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ.ರಾಜು ಅವರನ್ನು ಪ್ರಶ್ನಿಸಿದ ಪೀಠ, “ಜೀವನ ಮತ್ತು ಸ್ವಾತಂತ್ರ್ಯ ಅತಿಮುಖ್ಯ. ನೀವು ಅದನ್ನು ಅಲ್ಲಗಳೆಯುವಂತಿಲ್ಲ. ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾಗೆ ಸಂಬಂಧಿಸಿದ ಪ್ರಕರಣದಲ್ಲಿ, ತನಿಖಾಧಿಕಾರಿಗಳು ತಮಗೆ ಕೆಲವು ಮಾಹಿತಿಗಳು ಸಿಕ್ಕಿರುವುದಾಗಿ ಹೇಳಿದ್ದರು.

ಆದರೆ ಕೇಜ್ರಿವಾಲ್ ಪ್ರಕರಣದಲ್ಲಿ ಅಂಥದ್ದೇನೂ ತರಲಾಗಿಲ್ಲ. ಈ ಪ್ರಕರಣದಲ್ಲಿ ಇದುವರೆಗೆ ಯಾವುದೇ ಸಂಪರ್ಕ ಕ್ರಮ ಕೈಗೊಂಡಿಲ್ಲ. ಬಹುಶಃ ಅಂತಹ ಕ್ರಮ ಕೈಗೊಂಡಿದ್ದರೆ, ಕೇಜ್ರಿವಾಲ್ ಈ ವಿಷಯದಲ್ಲಿ ಹೇಗೆ ಭಾಗಿಯಾಗಿದ್ದಾರೆ ಎಂಬುದನ್ನು ತಿಳಿಸಿ.

ಅಲ್ಲದೆ, ಸಂಸತ್ತಿನ ಚುನಾವಣೆಗೆ ಮುನ್ನ ಕೇಜ್ರಿವಾಲ್ ಅವರನ್ನು ಏಕೆ ಬಂಧಿಸಲಾಯಿತು ಮತ್ತು ತನಿಖೆಯ ಪ್ರಾರಂಭ ಮತ್ತು ಬಂಧನದ ನಡುವೆ ಏಕೆ ದೊಡ್ಡ ಅಂತರವಿದೆ ಎಂಬುದನ್ನು ವಿವರಿಸಿ” ಎಂದು ಹೇಳಿ ಶುಕ್ರವಾರ ಪ್ರತಿಕ್ರಿಯೆ ನೀಡುವಂತೆ ಜಾರಿ ಇಲಾಖೆಗೆ ಸೂಚಿಸಿದೆ.