ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
Belagavi Archives » Dynamic Leader
November 21, 2024
Home Posts tagged Belagavi
ರಾಜಕೀಯ

ಬೆಳಗಾವಿ: ಬೆಳಗಾವಿಯಲ್ಲಿ ಇಂದು ಆಯೋಜಿಸಿದ್ದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಲೋಕಸಭಾ ಚುನಾವಣೆಯಲ್ಲಿ 400 ಸ್ಥಾನಗಳನ್ನು ನೀಡಿದರೆ ಸಂವಿಧಾನವನ್ನು ಬದಲಾವಣೆ ಮಾಡುವುದಾಗಿ ಬಿಜೆಪಿ ಹಾಗೂ ಆರ್.ಎಸ್.ಎಸ್ ಹೇಳುತ್ತಿದ್ದು, ಇವರಿಂದ ಸಂವಿಧಾನ ಉಳಿಸಬೇಕಾದ ಅನಿವಾರ್ಯ ಸ್ಥಿತಿ ಇದೆ. ಹಾಗಾಗಿ ಈ ಚುನಾವಣೆ ಎರಡನೇ ಸ್ವಾತಂತ್ರ್ಯ ಹೋರಾಟವಾಗಿದೆ. ಈ ಹೋರಾಟದಲ್ಲಿ ಕಾಂಗ್ರೆಸ್ ಗೆಲ್ಲಲಿದ್ದು, ಬಿಜೆಪಿ 200 ಸ್ಥಾನ ಗೆಲ್ಲುವುದೂ ಕಷ್ಟವಿದೆ ಎಂದು ಹೇಳಿದರು.

ಅಂಬೇಡ್ಕರ್ ಅವರು ನೀಡಿರುವ ಭಾರತೀಯ ಸಂವಿಧಾನವು ಎಲ್ಲರಿಗೂ ಸಮಾನ ಅವಕಾಶ, ಸಮ ಸಮಾಜದ ಗ್ಯಾರಂಟಿ ನೀಡುತ್ತದೆ. ಇದಕ್ಕೆ ವಿರುದ್ಧವಾಗಿ ಬಿಜೆಪಿಯವರು ನಡೆಯುತ್ತಿದ್ದಾರೆ. ಅಂಬೇಡ್ಕರ್ ಅವರು ದೇಶಕ್ಕೆ ಕೇವಲ ರಾಜಕೀಯ ಸ್ವಾತಂತ್ರ್ಯ ಸಾಕಾಗುವುದಿಲ್ಲ, ಎಲ್ಲರಿಗೂ ಆರ್ಥಿಕ, ಸಾಮಾಜಿಕ ಸ್ವಾತಂತ್ರ್ಯ ದೊರೆಯುವಂತಾಗಬೇಕು ಎಂದಿದ್ದಾರೆ. ಈ ಶಕ್ತಿಯನ್ನು ದುರ್ಬಲರಿಗೆ ತುಂಬವ ಸಲುವಾಗಿಯೇ ಕಾಂಗ್ರೆಸ್ ಸರ್ಕಾರ ಗ್ಯಾರಂಟಿಗಳನ್ನು ಜಾರಿ ಮಾಡಿದೆ ಎಂದರು.

ರಾಜ್ಯದ ಬಡ ಜನರ ತುತ್ತಿನ ಚೀಲ ತುಂಬಿಸುವ ಅನ್ನಭಾಗ್ಯ ಯೋಜನೆಗಾಗಿ ಅಕ್ಕಿ ಪೂರೈಸಲು ಕೋರಿದಾಗ, ಅಕ್ಕಿ ದಾಸ್ತಾನಿದ್ದರೂ ಕೇಂದ್ರ ಬಿಜೆಪಿ ಸರ್ಕಾರ ಅಕ್ಕಿ ನೀಡಲು ಒಪ್ಪಲಿಲ್ಲ. ಆದ್ದರಿಂದ ನಮ್ಮ ಸರ್ಕಾರ ಅಕ್ಕಿ ಬದಲು ಕೆಜಿಗೆ 34 ರೂ.ನಂತೆ 5 ಕೆ.ಜಿಗೆ 170 ರೂ. ಹಾಗೆ ಜುಲೈ ತಿಂಗಳಿನಿಂದ ಫಲಾನುಭವಿಗಳ ಖಾತೆಗೆ ಜಮೆ ಮಾಡುತ್ತಿದೆ ಎಂದು ಹೇಳಿದರು.

ಗೃಹಜ್ಯೋತಿಯನ್ನು ಜುಲೈ ತಿಂಗಳಲ್ಲಿ ಜಾರಿ ಮಾಡಲಾಯಿತು. 1.60 ಕೋಟಿ ಫಲಾನುಭವಿಗಳಿಗೆ ಅಂದರೆ ರಾಜ್ಯದ ಸುಮಾರು 92% ಜನರಿಗೆ ಇದರಿಂದ ಲಾಭವಾಗುತ್ತಿದೆ. ಗೃಹಲಕ್ಷ್ಮಿ ಯೋಜನೆಯಡಿ 1.21 ಕೋಟಿ ಮನೆ ಯಜಮಾನಿಯರಿಗೆ ತಲಾ 2,000 ರೂ.ನಂತೆ ಆಗಸ್ಟ್ ತಿಂಗಳಿನಿಂದ ಜಾರಿ ಮಾಡಲಾಯಿತು.

ನಿರುದ್ಯೋಗಿ ಪದವೀಧರರಿಗೆ 2 ವರ್ಷಗಳವರೆಗೆ ತಿಂಗಳಿಗೆ 3000 ರೂ. ಹಾಗೂ ಡಿಪ್ಲೋಮಾ ಮಾಡಿದವರಿಗೆ ತಲಾ 2000 ರೂ. ನೀಡುವ ಯುವನಿಧಿ ಯೋಜನೆಯನ್ನು ವಿವೇಕಾನಂದರ ಜನ್ಮದಿನಾಚರಣೆಯಂದು ಜಾರಿ ಮಾಡಲಾಯಿತು. ಈ ಅವಧಿಯಲ್ಲಿ ಬೇಡಿಕೆಯಿರುವ ತರಬೇತಿಯನ್ನು ಯುವಜನರಿಗೆ ನೀಡಿ, ಅವರಿಗೆ ಉದ್ಯೋಗ ದೊರೆಯಲು ಶಕ್ತಿ ತುಂಬಲಾಗುವುದು.

ಹಿಂದೆಯೂ ನಾವು ನೀಡಿದ ಭರವಸೆಗಳನ್ನು ಈಡೇರಿಸಿದ್ದೆವು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ 8 ತಿಂಗಳಲ್ಲಿ 5 ಗ್ಯಾರಂಟಿಗಳನ್ನು ನೀಡಿದ್ದು ಜನರಿಗೆ ವಿಶ್ವಾಸ ಬಂದಿದೆ. ಕಾಂಗ್ರೆಸ್ ಪಕ್ಷ ನುಡಿದಂತೆ ನಡೆದಿದೆ ಎಂದು ಗ್ಯಾರಂಟಿ ಯೋಜನೆಗಳನ್ನು ಸಮರ್ಥಿಸಿಕೊಂಡರು.

ಬಿಜೆಪಿಯವರು ಮೊದಲು ನಮ್ಮ ಗ್ಯಾರಂಟಿಗಳನ್ನು ಆಡಿಕೊಂಡರು. ಬಳಿಕ ಗ್ಯಾರಂಟಿಗಳನ್ನು ಜಾರಿ ಮಾಡಿದರೆ ರಾಜ್ಯ ಆರ್ಥಿಕವಾಗಿ ದಿವಾಳಿಯಾಗುತ್ತದೆ ಎನ್ನುವ ಸುಳ್ಳು ಹರಡಿದರು. ಅಭಿವೃದ್ಧಿ ಕೆಲಸಗಳು ನಿಲ್ಲುತ್ತವೆ ಎಂದರು, ಲೋಕಸಭಾ ಚುನಾವಣೆ ತನಕ ಮಾತ್ರ ನೀಡಿ, ನಂತರ ನಿಲ್ಲಿಸುತ್ತಾರೆ ಎಂಬ ಸುಳ್ಳುಗಳನ್ನು ಸೃಷ್ಟಿಸಿದ್ದಾರೆ. ಬಜೆಟ್ ನಲ್ಲಿ ಗ್ಯಾರಂಟಿಗಳಿಗೆ 52,009 ಕೋಟಿ ರೂ.ಗನ್ನು ಇಟ್ಟಿದ್ದೇವೆ. ಅಭಿವೃದ್ಧಿ ಕೆಲಸಗಳಿಗೆ 68 ಸಾವಿರ ಕೋಟಿಗಳನ್ನೂ ಸೇರಿದಂತೆ 2024-25 ರಲ್ಲಿ ಒಟ್ಟು 1.20 ಲಕ್ಷ ಕೋಟಿ ಇಟ್ಟಿದ್ದೇವೆ.

ನಮ್ಮ ಸರ್ಕಾರದ ಬಜೆಟ್ ಗಾತ್ರ 3.71 ಲಕ್ಷ ಕೋಟಿ, ಬೊಮ್ಮಾಯಿಯವರ ಬಜೆಟ್ 23-24ರಲ್ಲಿ 3.09 ಲಕ್ಷ ಕೋಟಿ. ಬಿಜೆಪಿಯವರು ಸುಳ್ಳು ಆರೋಪಗಳನ್ನು ಮಾಡುತ್ತಿದ್ದು, ಜನರಿಗೆ ಕಾಂಗ್ರೆಸ್ ನ ಮೇಲೆ ವಿಶ್ವಾಸ ಕಡಿಮೆಯಾಗಲಿ ಎಂದು ಹುನ್ನಾರ ಮಾಡುತ್ತಿದ್ದಾರೆ. ಬಿಜೆಪಿ ಅವರಿಗೆ ಗ್ಯಾರಂಟಿ ಯೋಜನೆಗಳನ್ನು ಕಂಡರೆ ಆಗುವುದಿಲ್ಲ. ಅದನ್ನು ನಿಲ್ಲಿಸಬೇಕೆಂಬುದು ಅವರ ಪಿತೂರಿಯಾಗಿದೆ. ಬಡವರು, ರೈತರು, ಮಹಿಳೆಯರು, ದಲಿತರು, ಅಲ್ಪಸಂಖ್ಯಾತರ ಏಳಿಗೆ ಅವರಿಗೆ ಮುಖ್ಯವಲ್ಲ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರು 10 ವರ್ಷಗಳಿಂದ ಯಾವುದೇ ಸಾಧನೆಗಳನ್ನು ಮಾಡಿಲ್ಲ. 2014ರಲ್ಲಿ ನೀಡಿರುವ ಯಾವುದೇ ಭರವಸೆಗಳನ್ನು ಈಡೇರಿಸಿಲ್ಲ. ಆದರೆ ಮೋದಿಯವರು ದ್ವೇಷದ ಭಾಷಣ ಮಾಡುತ್ತಿದ್ದಾರೆ. ಮತಗಳ ಕ್ರೋಢೀಕರಣ, ಧರ್ಮದ್ವೇಷ ಬಿತ್ತುವ ಕೆಲಸ ಮಾಡುತ್ತಿದ್ದಾರೆ. ಆದ್ದರಿಂದ ರಾಹುಲ್ ಗಾಂಧಿ ಅವರು ದೇಶದ ಉದ್ದಗಲಕ್ಕೂ ಪಾದಯಾತ್ರೆ ಹಾಗೂ ನ್ಯಾಯ ಯಾತ್ರೆ ಮಾಡಿದರು. ದೇಶ ವಿಭಜನೆ ಮಾಡಲು ಮೋದಿಯವರು ಮಾಡಿರುವ ಪ್ರಯತ್ನಗಳಿಂದ ಬೇಸತ್ತಿದ್ದ ಜನರ ಒಡೆದ ಮನಸ್ಸನ್ನು ಒಗ್ಗೂಡಿಸಲು ಯಾತ್ರೆ ಕೈಗೊಂಡು ಯಶಸ್ವಿಯಾದರು ಎಂದು ಭಾರತ್ ಜೋಡೋ ಯಾತ್ರೆಗಳನ್ನು ಸಮರ್ಥಿಸಿಕೊಂಡರು.

ಕಾಂಗ್ರೆಸ್ ಪಕ್ಷ ನೀಡಿರುವ 25 ಗ್ಯಾರಂಟಿಗಳಿಗೆ ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಯವರು ಸಹಿ ಮಾಡಿ ಹಂಚಿದ್ದಾರೆ. ಬಡಕುಟುಂಬದ ಮಹಿಳೆಯರಿಗೆ ವರ್ಷಕ್ಕೆ 1 ಲಕ್ಷ ರೂ. ನೀಡುವ ಮಹಾಲಕ್ಷ್ಮಿ ಯೋಜನೆ, ಯುವನ್ಯಾಯದಡಿ ಮೊದಲ ಉದ್ಯೋಗದ ಜೊತೆಗೆ ವರ್ಷಕ್ಕೆ 1 ಲಕ್ಷ ರೂ. ನೀಡುವ ಯೋಜನೆ, ರೈತರ ಬೆಳೆಗೆ ನ್ಯಾಯಯುತ ಬೆಲೆ, ಸಾಲ ಮನ್ನಾ, ಸ್ವಾಮಿನಾಥನ್ ವರದಿ ಜಾರಿ ಬೇಡಿಕೆಗಳನ್ನು ಈಡೇರಿಸುವ ‘ರೈತ ನ್ಯಾಯ’ ಯೋಜನೆಗಳ ಭರವಸೆ ನೀಡಿದರು.

ನರೇಂದ್ರ ಮೋದಿ ಅವರು ರೈತರ ಸಾಲ ಮನ್ನಾ ಮಾಡಲಿಲ್ಲ. ಸ್ವಾಮಿನಾಥನ್ ವರದಿ ಜಾರಿ ಮಾಡಲಿಲ್ಲ. ಆದರೆ ಅಂಬಾನಿ, ಅದಾನಿಗಳಿಗೆ 16 ಲಕ್ಷ ಕೋಟಿ ಸಾಲ ಮನ್ನಾ ಮಾಡಿದರು. ರೈತರ ಸಾಲ ಮನ್ನಾ ಮಾಡಲು ನೋಟ್ ಪ್ರಿಂಟ್ ಮಾಡುವ ಮಿಷನ್ ಇಲ್ಲ ಎಂದು ಬಿಜೆಪಿಯವರು ಹೇಳುತ್ತಾರೆ. ಸಂಸದ ತೇಜಸ್ವಿ ಸೂರ್ಯ, ರೈತರ ಸಾಲ ಮನ್ನಾ ಮಾಡಿದರೆ ದೇಶಕ್ಕೆ ಒಳಿತಲ್ಲ ಎಂದಿದ್ದಾರೆ. ರೈತರ ಸಾಲ ಮನ್ನಾ ಮಾಡಬಾರದೆಂಬುದು ಬಿಜೆಪಿ ಅವರ ಹಿಡೆನ್ ಅಜೆಂಡಾ ಎಂದು ಕಿಡಿಕಾರಿದರು.

ಅವಕಾಶ ವಂಚಿತರಿಗೆ ನ್ಯಾಯ ನೀಡಲು, ಸರ್ಕಾರದ ಅನುಕೂಲ ದೊರಕಿಸಿಕೊಡಲು ಜಾತಿಗಣತಿ ಅತಿ ಮುಖ್ಯ. ಪಾಲುದಾರಿಕೆ ನ್ಯಾಯ, ಶ್ರಮಿಕ ನ್ಯಾಯ ಯೋಜನೆ ಗ್ಯಾರಂಟಿಗಳನ್ನು ಜಾರಿ ಮಾಡಲಾಗುವುದು. ಕರ್ನಾಟಕ ಹಾಗೂ ತೆಲಂಗಾಣದಲ್ಲಿ ಗ್ಯಾರಂಟಿಗಳನ್ನು ಜಾರಿ ಮಾಡಲಾಗಿದೆ. ಹೀಗೆ ದೇಶಾದ್ಯಂತ ಜಾರಿಯಾಗಲಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕಕ್ಕೆ ದೊಡ್ಡ ಅನ್ಯಾಯ ಮಾಡಿದ್ದಾರೆ. ರಾಜ್ಯದಿಂದ 4.30 ಲಕ್ಷ ಕೋಟಿ ತೆರಿಗೆ ಹೋಗುತ್ತದೆ. ಆದರೆ ರಾಜ್ಯಕ್ಕೆ 100 ರೂ.ಗೆ ಕೇವಲ 13 ರೂ. ಮರಳಿ ಬರುತ್ತಿದೆ. 11,495 ಕೋಟಿ ರೂ.ಗಳನ್ನು 15ನೇ ಹಣಕಾಸು ಆಯೋಗ ನಿರ್ಧರಿಸಿತ್ತು. ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಮಾಡಲು ತಿಳಿಸಿದ್ದರೂ ಅವರು ಮಾಡಲಿಲ್ಲ. ರಾಜ್ಯಕ್ಕಾಗಿರುವ ಇಷ್ಟೆಲ್ಲಾ ಅನ್ಯಾಯವನ್ನು ರಾಜ್ಯದ 25 ಸಂಸದರಲ್ಲಿ ಯಾರೊಬ್ಬರೂ ಧ್ವನಿ ಎತ್ತಲಿಲ್ಲ. ಮೋದಿಯವರ ಎದುರು ನಿಂತು ಮಾತನಾಡಲು ಹೆದರುತ್ತಾರೆ. ಆದರೆ ಡಿ.ಕೆ.ಸುರೇಶ್ ಮಾತ್ರ ಪ್ರಶ್ನಿಸಿದ್ದರು.

ರಾಜ್ಯದ ಬಹುತೇಕ ತಾಲ್ಲೂಕುಗಳು ಬರಪೀಡಿತ ಎಂದು ಘೋಷಣೆ ಮಾಡಲಾಗಿದೆ. ಸೆಪ್ಟೆಂಬರ್ 23 ರಂದು ಬರಪರಿಹಾರಕ್ಕೆ ಮನವಿ ಮಾಡಲಾಗಿದೆ. ರೂ.18,172 ಕೋಟಿ ಎನ್.ಡಿ.ಆರ್.ಎಫ್ ಮಾರ್ಗಸೂಚಿಯಂತೆ ಕೇಳಿದೆವು. 48 ಲಕ್ಷ ಹೆಕ್ಟೇರ್ ನಲ್ಲಿ ಬೆಳೆ ನಾಶವಾಗಿದೆ. ಕೇಂದ್ರ ತಂಡ ಬರಪರಿಹಾರ ಅಧ್ಯಯನ ಮಾಡಿದ್ದಾರೆ. ರಾಜ್ಯದ ಮಂತ್ರಿಗಳು, ನಾನು ಕೇಂದ್ರ ಸಚಿವರು, ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಕೋರಿದರೂ ಮನ್ನಣೆ ಸಿಗಲಿಲ್ಲ. ಆದ್ದರಿಂದ ಮನವಿ ಸಲ್ಲಿಸಿದ 7 ತಿಂಗಳ ನಂತರ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದೆವು. ಸುಪ್ರೀಂ ಕೋರ್ಟ್ ಚಾಟಿ ಬೀಸುವ ತನಕ ಒಂದು ರೂ. ಕೊಡಲಿಲ್ಲ. ರೂ.3,454 ಕೋಟಿ ನಂತರ ಕೊಟ್ಟರು.

ರಾಜ್ಯದ ಜನರಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ಬದಲಿಸಲು ಅವಕಾಶ ಸಿಕ್ಕಿದೆ. ಕರ್ನಾಟಕಕ್ಕೆ ಮೋದಿಯವರು ಕೇವಲ ಚೊಂಬು ನೀಡಿದ್ದಾರೆ. ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ. ಜನರು ತಮ್ಮ ಮತಗಳ ಮೂಲಕ ಛಾಟಿ ಬೀಸುತ್ತಾರೆ. ಈ ಬಾರಿ ಜನ ಕಾಂಗ್ರೆಸ್ ಮೇಲೆ ವಿಶ್ವಾಸ ಇಟ್ಟಿದ್ದಾರೆ. ರಾಜ್ಯದಿಂದ 20ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ವಿಶ್ವಾಸವಿದೆ. ಕನ್ನಡಿಗರ ಸ್ವಾಭಿಮಾನವನ್ನು ಕೆಣಕಿರುವ ಮೋದಿಯವರಿಗೆ ಜನ ತಕ್ಕ ಪಾಠ ಕಲಿಸಬೇಕು ಎಂದು ರಾಜ್ಯದ ಜನರಿಗೆ ಮತದಾರರಲ್ಲಿ ಮನವಿ ಮಾಡುತ್ತೇನೆ ಎಂದು ಹೇಳಿದರು.

Uncategorized

ಬೆಳಗಾವಿ: ಪ್ರಜಾಧ್ವನಿ-2 ಲೋಕಸಭಾ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮೃಣಾಳ್ ಹೆಬ್ಬಾಳ್ಕರ್ ಅವರನ್ನು ಗೆಲ್ಲಿಸಿಕೊಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತದಾರರಲ್ಲಿ ಮನವಿ ಮಾಡಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಬಿಜೆಪಿಯೇತರ ಪಕ್ಷಗಳು ದಲಿತರ ಮೀಸಲಾತಿಯನ್ನು ಕಿತ್ತು ಮುಸಲ್ಮಾನರಿಗೆ ನೀಡಲಿದೆ ಎಂದು ಹಸಿ ಹಸಿ ಸುಳ್ಳು ಹೇಳುತ್ತಿದ್ದಾರೆ. ಕಾಂಗ್ರೆಸ್ ಎಂದಿಗೂ ಸಂವಿಧಾನಕ್ಕೆ ವಿರುದ್ಧವಾಗಿ ಕೆಲಸ ಮಾಡದೇ, ಸಾಮಾಜಿಕ ನ್ಯಾಯದ ಪರವಾಗಿದೆ ಎನ್ನುವುದು ಇಡೀ ವಿಶ್ವಕ್ಕೆ ಗೊತ್ತಿದೆ. ಮೋದಿಯವರ ಮಾತು ನಂಬಲು ಜನ ಮೂರ್ಖರಲ್ಲ ಎಂದು ಹೇಳಿದರು.

ನಾವು ಸರ್ಕಾರಿ ನೌಕರರ ಸಂಬಳವನ್ನು ಎಂದಿಗೂ ನಿಲ್ಲಿಸಿಲ್ಲ. ಅಭಿವೃದ್ಧಿ ಜೊತೆಗೆ ಐದು ಗ್ಯಾರಂಟಿಗಳನ್ನು ಈಡೇರಿಸಿದ್ದೇವೆ. ಗ್ಯಾರಂಟಿಗಳಿಗೆ ರೂ.52,009 ಕೋಟಿ, ರೂ.1,20,000 ಕೋಟಿ ಅಭಿವೃದ್ಧಿಗೆ ನೀಡಲಾಗಿದೆ. ಅನ್ನಭಾಗ್ಯ, ಗೃಹ ಜ್ಯೋತಿ, ಗೃಹ ಲಕ್ಷ್ಮಿ, ಶಕ್ತಿ ಹಾಗೂ ಯುವನಿಧಿ ಗ್ಯಾರಂಟಿಗಳನ್ನು ಜನರಿಗೆ ನೀಡಲಾಗಿದೆ. ಸರ್ಕಾರಿ ಅಧಿಕಾರಿಗಳಿಗೆ ಸಂಬಳ ಕೊಡಲು ದುಡ್ಡಿಲ್ಲ. ಕರ್ನಾಟಕ ಸರ್ಕಾರದ ಖಜಾನೆ ಖಾಲಿಯಾಗಿದೆ ಎಂಬುದು ಅಪ್ಪಟ ಸುಳ್ಳು ಎಂದು ಹೇಳಿದರು.

ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರೈತರ ಸಾಲಗಳನ್ನು ಪೂರ್ಣವಾಗಿ ಮನ್ನಾ ಮಾಡಲಾಗುವುದು. 25 ಲಕ್ಷದವರೆಗೆ ಆರೋಗ್ಯ ವಿಮೆ ಸೌಲಭ್ಯ ನೀಡಲಾಗುವುದು. ಸಾಮಾಜಿಕ ನ್ಯಾಯ ತರಲು ದೇಶದಾದ್ಯಂತ ಜಾತಿ ಸಮೀಕ್ಷೆಯನ್ನು ಕೈಗೊಳ್ಳಲಾಗುವುದು. ಆದ್ದರಿಂದ ಜನರಿಗೆ ಅನುಕೂಲ ಮಾಡಿಕೊಡುವ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕೇ? ಅಥವಾ ಸುಳ್ಳು ಹೇಳುವ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬರಬೇಕೇ? ಎಂಬುದನ್ನು ಯೋಚಿಸಿ ನಿರ್ಧರಿಸಿ ಎಂದು ಹೇಳಿದರು.

ಚುನಾವಣೆಯ ಮೂಲಕ ಜನತೆ ಕೊಡುವ ತೀರ್ಪು ದೇಶದ ಭವಿಷ್ಯವನ್ನು ರೂಪಿಸಲಿದೆ. ಯಾವ ಪಕ್ಷ ಅಧಿಕಾರದಲಿದ್ದರೆ ಈ ದೇಶದ ದಲಿತರ, ಹಿಂದುಳಿದವರ, ಅಲ್ಪಸಂಖ್ಯಾತರ ಅಭಿವೃದ್ಧಿಯಾಗುತ್ತದೆ? ದೇಶದ ಸರ್ವತೋಮುಖ ಅಭಿವೃದ್ಧಿಗೆ ಯಾರು ಅಧಿಕಾರದಲ್ಲಿರಬೇಕೆಂದು ಜನರು ತೀರ್ಮಾನ ಮಾಡಬೇಕಾಗುತ್ತದೆ.

ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಇಡಿ ದೇಶದ ರೈತರ ಸಾಲ ಮನ್ನಾ ಮಾಡಿದ್ದರು. ಅವರು ಈ ದೇಶದ ಮೂಲಭೂತ ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದರು. ಆಹಾರ ಭದ್ರತಾ ಕಾಯ್ದೆಯನ್ನು, ಉದ್ಯೋಗ ಖಾತ್ರಿ ಅಧಿನಿಯಮ, ಮಾಹಿತಿ ಹಕ್ಕು ಅಧಿನಿಯಮ, ಶಿಕ್ಷಣದ ಹಕ್ಕು ಇವುಗಳನ್ನು ಜಾರಿಗೆ ತಂದವರು ಮನಮೋಹನ್ ಸಿಂಗ್ ಅವರು. ಸಾಮಾನ್ಯ ಜನರ ಸಮಸ್ಯೆಗಳನ್ನು ಬಗೆಹರಿಸುವ ಕಾನೂನುಗಳು ಇವು ಎಂದು ಅರ್ಥ ಮಡಿಕೊಳ್ಳಬೇಕು. ಆಹಾರ ಭದ್ರತಾ ಕಾಯ್ದೆ ಇಲ್ಲದೇ ಹೋಗಿದ್ದರೆ ಬಡವರಿಗೆ ಉಚಿತ ಅಕ್ಕಿ ಕೊಡಲು ಸಾಧ್ಯವಾಗುತ್ತಿರಲಿಲ್ಲ. ಇದನ್ನು ಜಾರಿ ಮಾಡಿದ್ದು ನರೇಂದ್ರ ಮೋದಿ ಅಲ್ಲ. ಅದರ ಶ್ರೇಯಸನ್ನು ಪಡೆಯಲು ಮೋದಿ ಅವರು ಪ್ರಯತ್ನ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ರಾಜಕೀಯ

“ಮಹಾರಾಷ್ಟ್ರದಲ್ಲಿರುವ ಬಿಜೆಪಿ ಡಬಲ್ ಎಂಜಿನ್ ಸರಕಾರ ಪದೇಪದೆ ಕಾಲುಕೆರೆದು ಕಿತಾಪತಿ ಮಾಡುತ್ತಿದೆ. ಚೀನಾ ಮನಸ್ಥಿತಿಯ ಆ ರಾಜ್ಯವು ಕರ್ನಾಟಕವನ್ನು ಶತ್ರು ದೇಶದಂತೆ ನೋಡುತ್ತಿದೆ. ಕೇಂದ್ರ ಬಿಜೆಪಿ ಸರಕಾರ ಇದೆಲ್ಲವನ್ನು ನೋಡಿಕೊಂಡು ಮೌನವಾಗಿದೆ. ಒಕ್ಕೂಟ ವ್ಯವಸ್ಥೆಯ ಅವಸಾನಕ್ಕೆ ಇದೇ ಕಾರಣವಾಗಬಹುದು” ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.

“ಒಂದಲ್ಲ ಎರಡಲ್ಲ, ಪ್ರತಿಯೊಂದು ವಿಷಯದಲ್ಲೂ ಮಹಾರಾಷ್ಟ್ರವು ಕರ್ನಾಟಕವನ್ನು ಕೆರಳಿಸುತ್ತಿದೆ. ರಾಜ್ಯದ ಗಡಿ ಒಳಗಿರುವ 865 ಗ್ರಾಮಗಳ ಜನರಿಗೆ ಆರೋಗ್ಯ ವಿಮೆ ಜಾರಿ ಮಾಡಿದ ಆ ರಾಜ್ಯ ಸರಕಾರದ ನಡೆ ಒಕ್ಕೂಟ ವ್ಯವಸ್ಥೆಯನ್ನು ಒಡೆಯುವ ನೇರ, ಧೂರ್ತ ಪ್ರಯತ್ನವಾಗಿದೆ.

ಮಹಾರಾಷ್ಟ್ರವು ಒಕ್ಕೂಟ ವ್ಯವಸ್ಥೆಯ ಎಲ್ಲಾ ಎಲ್ಲೆಗಳನ್ನು ಮೀರಿ ಅಹಂಕಾರದಿಂದ ವರ್ತಿಸುತ್ತಿದೆ. ಬಿಜೆಪಿ ಸರ್ಕಾರ ‘ಶಿಂಧೆ ಸೂತ್ರದ ಗೊಂಬೆ’ ಯಾಗಿ ಅಂತಹ ರಾಜಕಾರಣಕ್ಕೆ ಕರ್ನಾಟಕವನ್ನು ಬಲಿ ಕೊಡಲು ಹೊರಟಿದೆಯಾ? ಎನ್ನುವ ಅನುಮಾನ ನನ್ನದು. ಇಲ್ಲವಾದರೆ, ಮಹಾರಾಷ್ಟ್ರ ಈ ಪರಿಯ ಉದ್ಧಟತನ ತೋರುತ್ತಿದ್ದರೂ ಮೋದಿ ಸರಕಾರದ ಮೌನವೇಕೆ?

ಕರ್ನಾಟಕದಲ್ಲಿ ಇಡೀ ಭಾರತವೇ ಅಡಗಿದೆ. ಕಾಶ್ಮೀರದಿಂದ ಕನ್ಯಾಕಮಾರಿಯವರೆಗೆ, ಗುಜರಾತಿನಿಂದ ಒಡಿಶಾವರೆಗೆ ಎಲ್ಲ ಕಡೆಯಿಂದಲೂ ಅನ್ನ ಅರಸಿಕೊಂಡು ಬಂದವರಿಗೆ ಆಶ್ರಯ ನೀಡಿದೆ. ಆ ಅನ್ನಕ್ಕೆ ಮಣ್ಣು ಹುಯ್ಯುವ ಹೀನ ಕೆಲಸವನ್ನು ಮಹಾರಾಷ್ಟ್ರ ಎಗ್ಗಿಲ್ಲದೆ ಮಾಡುತ್ತಿದೆ. ಕನ್ನಡಿಗರು ಸುಮ್ಮನಿರುವ ಕಾಲ ಮುಗಿದಿದೆ.

ಭಾರತ ಸ್ವತಂತ್ರ್ಯಗೊಂಡಾಗ ಎಲ್ಲರಿಗಿಂತ ಮೊದಲೇ ಒಕ್ಕೂಟ ವ್ಯವಸ್ಥೆಗೆ ಒಳಪಟ್ಟವರು ನಾವು. ನಮ್ಮ ಉದಾರತೆಯೇ ನಮಗೆ ಇಂದು ಮುಳುವಾಗಿದೆಯಾ? ನೆಲ, ಜಲ, ಭಾಷೆ, ಅನುದಾನ ಸೇರಿ ಪ್ರತಿ ವಿಷಯದಲ್ಲೂ ಕನ್ನಡಿಗರು ಮಲತಾಯಿ ಮಕ್ಕಳಾಗಿದ್ದಾರೆ!! ಇನ್ನೆಷ್ಟು ದಿನ ಈ ಅನ್ಯಾಯ?” ಎಂದು ಮಹಾರಾಷ್ಟ್ರ ಬಿಜೆಪಿ ಡಬಲ್ ಎಂಜಿನ್ ಸರ್ಕಾರವನ್ನು ಮತ್ತು ಬಿಜೆಪಿಯ ಕೇಂದ್ರ ನಾಯಕರ ವಿರುದ್ಧ ತಮ್ಮ ಆಕ್ರೊಷವನ್ನು ವ್ಯಕ್ತ ಪಡಿಸಿ ಸರಣಿ ಟ್ವೀಟ್ ಮಾಡಿದ್ದಾರೆ. Ahead of elections in Karnataka, Maharashtra issues order to extend medical benefits to border villages.

ಬೆಂಗಳೂರು ರಾಜಕೀಯ ರಾಜ್ಯ

ಡಿ.ಸಿ.ಪ್ರಕಾಶ್, ಸಂಪಾದಕರು

ಬೆಂಗಳೂರು: ಜೆ.ಪಿ.ಭವನದಿಂದ ನೂರಾರು ಕಾರ್ಯಕರ್ತರೊಂದಿಗೆ ಮೆರವಣಿಗೆ ನಡೆಸಿದ ಮಹಾನಗರ ಜೆಡಿಎಸ್ ಅಧ್ಯಕ್ಷ ಆರ್.ಪ್ರಕಾಶ್, ಕಾರ್ಯಾಧ್ಯಕ್ಷ ಕೆ.ವಿ.ನಾರಾಯಣ ಸ್ವಾಮಿ ಮತ್ತಿತರರು ಕೃಷ್ಣ ಫ್ಲೋರ್ ಮಿಲ್ ವೃತ್ತದಲ್ಲಿ ಪ್ರತಿಭಟನೆ ನಡಿಸಿದರು. ಪ್ರತಿಭಟನಾ ನಿರತರು ರಸ್ತೆಯನ್ನು ತಡೆಯಲು ಮುಂದಾದಾಗ ಅವರನ್ನು ಅಡ್ಡಗಟ್ಟಿದ ಪೊಲೀಸರು ವಶಕ್ಕೆ ಪಡೆದರು.

ಕರ್ನಾಟಕದ ಬೆಳಗಾವಿ, ಕಾರವಾರ, ಬೀದರ್, ನಿಪ್ಪಾಣಿ ಮತ್ತು ಭಾಲ್ಕಿ ಸೇರಿದಂತೆ ಮೂರು ಜಿಲ್ಲೆಗಳ 865 ಗ್ರಾಮಗಳು ಮತ್ತು ಕರ್ನಾಟಕದ ನಗರಗಳ ಮೇಲೆ ರಾಜ್ಯದ ಹಕ್ಕು ಪುನರುಚ್ಚರಿಸುವ ನಿರ್ಣಯವನ್ನು ಮಹಾರಾಷ್ಟ್ರ ವಿಧಾನಸಭೆ ಮಂಗಳವಾರ ಸರ್ವಾನುಮತದಿಂದ ಅಂಗೀಕರಿಸಿತು. ಇದು ಎರಡು ರಾಜ್ಯಗಳ ನಡುವಿನ ಜಗಳವನ್ನು ಮತ್ತಷ್ಟು ಹೆಚ್ಚಿಸಿದೆ. ಡಿಸೆಂಬರ್ 22 ರಂದು ಕರ್ನಾಟಕ ವಿಧಾನಸಭೆಯು ಮಹಾರಾಷ್ಟ್ರಕ್ಕೆ “ಒಂದು ಇಂಚು ಭೂಮಿಯನ್ನೂ ಬಿಟ್ಟುಕೊಡುವುದಿಲ್ಲ” ಎಂದು ಪ್ರತಿಜ್ಞೆ ಮಾಡಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡುವ ಉದ್ದೇಶದಿಂದ ಮಹಾರಾಷ್ಟ್ರ ಸರಕಾರವು ಇಂತಹ ನಿರ್ಣಯವನ್ನು ಕೈಗೊಂಡಿದೆ.

ಸುಪ್ರೀಂ ಕೋರ್ಟ್‌ನಲ್ಲಿ ವಿವಾದಿತ ಪ್ರದೇಶಗಳಿಗಾಗಿ ಕಾನೂನು ಹೋರಾಟವನ್ನು ಮುಂದುವರಿಸುವುದಾಗಿ ಮತ್ತು ಈ ಪ್ರದೇಶಗಳಲ್ಲಿ ವಾಸಿಸುವ ಮಹಾರಾಷ್ಟ್ರೀಯರಿಗೆ ಸಾಧ್ಯವಿರುವ ಎಲ್ಲಾ ರೀತಿಯ ಬೆಂಬಲವನ್ನೂ ಕೊಡುವುದಾಗಿ ಮಹಾರಾಷ್ಟ್ರ ಸರ್ಕಾರ ಮಂಗಳವಾರ ಹೇಳಿಕೊಂಡಿದೆ. ಡಿಸೆಂಬರ್ 14 ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಇಬ್ಬರು ಮುಖ್ಯಮಂತ್ರಿಗಳ ನಡುವೆ ನಡೆದ ಸಭೆಯಲ್ಲಿ ಕೈಗೊಂಡ ನಿರ್ಧಾರಗಳನ್ನು ಜಾರಿಗೆ ತರಲು ಕೇಂದ್ರ ಸರ್ಕಾರವು ಮಧ್ಯಸ್ಥಿಕೆ ವಹಿಸಬೇಕೆಂದೂ ನಿರ್ಣಯದಲ್ಲಿ ಒತ್ತಾಯಿಸಲಾಗಿದೆ.

“ಎರಡೂ ರಾಜ್ಯಗಳು ಒಪ್ಪಿಕೊಂಡಿರುವ ನಿರ್ಣಯದ ಮೇಲೆ ಕಾರ್ಯನಿರ್ವಹಿಸಲು ಕೇಂದ್ರವು ಕರ್ನಾಟಕಕ್ಕೆ ನಿರ್ದೇಶಿಸಬೇಕು ಮತ್ತು ವಿವಾದಿತ ಪ್ರದೇಶಗಳಲ್ಲಿ ಮರಾಠಿ ಮಾತನಾಡುವ ಜನರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ನೆರೆಯ ರಾಜ್ಯವನ್ನು ಕೇಳಬೇಕು. ಪೊಲೀಸರು ಪ್ರತಿಭಟನಾಕಾರರ ಮೇಲೆ ಕ್ರೂರವಾಗಿ ದಾಳಿ ಮಾಡುತ್ತಾರೆ, ಮಹಾರಾಷ್ಟ್ರ ನಂಬರ್ ಪ್ಲೇಟ್ ಹೊಂದಿರುವ ವಾಹನಗಳ ಮೇಲೆ ದಾಳಿ ಮಾಡಲಾಗುತ್ತದೆ, ಮರಾಠಿ ಮಾತನಾಡುವ ಜನರ ಒಡೆತನದ ಭೂಮಿಯನ್ನು ಬಲವಂತವಾಗಿ ಸ್ವಾಧೀನಪಡಿಸಿಕೊಳ್ಳಲಾಗಿದೆ. ಉಭಯ ರಾಜ್ಯಗಳ ನಡುವೆ ಉತ್ತಮ ಸಮನ್ವಯಕ್ಕಾಗಿ ರಾಜ್ಯ ಸರ್ಕಾರ ನೇಮಿಸಿದ ಸಚಿವರು, ವಿವಾದಿತ ಪ್ರದೇಶಕ್ಕೆ ಪ್ರವೇಶಿಸಲು ಅವಕಾಶವಿಲ್ಲದಂತಾಗಿದೆ. ಇದೆಲ್ಲವೂ ಅಲ್ಲಿ ವಾಸಿಸುವ ನಮ್ಮ ಜನರ ಮೇಲೆ ದಬ್ಬಾಳಿಕೆ ನಡೆಸಲು ಕರ್ನಾಟಕ ಸರಕಾರವು ಉದ್ದೇಶಪೂರ್ವಕವಾಗಿ ಪ್ರಯತ್ನಿಸುತ್ತಿದೆ” ಎಂದು ನಿರ್ಣಯದಲ್ಲಿ ಹೇಳಲಾಗಿತ್ತು.

ಇದನ್ನು ಖಂಡಿಸಿ ಬೆಂಗಳೂರು ಮಹಾನಗರ ಜನತಾದಳ (ಜಾತ್ಯತೀತ) ಪಕ್ಷವು ಇಂದು ಮೆರವಣಿಗೆ ಮತ್ತು ಪ್ರತಿಭಟನೆಯನ್ನು ಹಮ್ಮಿಕೊಂಡಿತ್ತು.

ಇಂದು ಮಧ್ಯಾಹ್ನ ಪಕ್ಷದ ಕಚೇರಿ ಜೆ.ಪಿ.ಭವನದಿಂದ ನೂರಾರು ಕಾರ್ಯಕರ್ತರೊಂದಿಗೆ ಮೆರವಣಿಗೆ ನಡೆಸಿದ ಮಹಾನಗರ ಜೆಡಿಎಸ್ ಅಧ್ಯಕ್ಷ ಆರ್.ಪ್ರಕಾಶ್, ಕಾರ್ಯಾಧ್ಯಕ್ಷ ಕೆ.ವಿ.ನಾರಾಯಣ ಸ್ವಾಮಿ ಮತ್ತಿತರರು ಕೃಷ್ಣ ಫ್ಲೋರ್ ಮಿಲ್ ವೃತ್ತದಲ್ಲಿ ಪ್ರತಿಭಟನೆ ನಡಿಸಿದರು. ಪ್ರತಿಭಟನಾ ನಿರತರು ರಸ್ತೆಯನ್ನು ತಡೆಯಲು ಮುಂದಾದಾಗ ಅವರನ್ನು ಅಡ್ಡಗಟ್ಟಿದ ಪೊಲೀಸರು ವಶಕ್ಕೆ ಪಡೆದರು. ನಂತರ ಎಲ್ಲರನ್ನು ಬಿಡುಗಡೆ ಮಾಡಲಾಯಿತು.