ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
Dinesh Gundu Rao Archives » Dynamic Leader
December 3, 2024
Home Posts tagged Dinesh Gundu Rao
ಬೆಂಗಳೂರು

ಬೆಂಗಳೂರು: ಗಾಂಧಿನಗರ ಕ್ಷೇತ್ರದ ಕಾಟನ್‌ಪೇಟೆಯಲ್ಲಿ ಅನೇಕ ಬೀದಿಗಳಲ್ಲಿ ಹೊಗೆಯಾಡಿಸುವ ಅಭಿಯಾನದ ನೇತೃತ್ವ ವಹಿಸಿ ಡೆಂಗ್ಯೂ ಬಗ್ಗೆ ಜಾಗೃತಿ ಮೂಡಿಸಲು ತಿಳಿವಳಿಕೆ ಕರಪತ್ರಗಳನ್ನು ವಿತರಿಸಿದ ಆರೋಗ್ಯ ಸಚಿವ ದಿನೇಶ್ ಗುಂಡೂ ರಾವ್.

“ಈ ರೋಗವನ್ನು ಎದುರಿಸಲು ನಾವು ನಮ್ಮ ಪ್ರಯತ್ನಗಳನ್ನು ತೀವ್ರಗೊಳಿಸುತ್ತಿರುವಾಗ, ಡೆಂಗ್ಯೂ ಬಗ್ಗೆ ತಿಳುವಳಿಕೆಯನ್ನು ಉಳಿಸಿಕೊಳ್ಳುವ ಮೂಲಕ ಮತ್ತು ಅದರ ಹರಡುವಿಕೆಯನ್ನು ತಡೆಗಟ್ಟಲು ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ಸಾರ್ವಜನಿಕರು ತಮ್ಮ ಕೈಲಾದಷ್ಟು ಮಾಡುವಂತೆ ನಾನು ಮನವಿ ಮಾಡುತ್ತೇನೆ” ಎಂದು ಹೇಳಿದ್ದಾರೆ.

ಗುರುತರವಾದ ಈ ಕರಪತ್ರ ಅಭಿಯಾನವನ್ನು ಬೆಂಗಳೂರಿನ ಪ್ರತಿಯೊಂದು ವಾರ್ಡ್‌ಗಳಿಗೂ ವಿಸ್ತರಿಸುವುದರ ಜೊತೆಯಲ್ಲೇ ಚರಂಡಿ, ಒಳಚರಂಡಿಗಳನ್ನು ಸ್ವಚ್ಚಗೊಳಿಸಿ, ಬೀದಿಯಲ್ಲಿ ಅಡ್ಡದಿಡ್ಡಿಯಾಗಿ ಬಿದ್ದಿರುವ ಕಸದ ರಾಶಿಗಳನ್ನು ವಿಲೇ ಮಾಡಿ, ದಿನನಿತ್ಯ ಬೀದಿಗಳಲ್ಲಿ ಹೊಗೆಯಾಡಿಸುವ ಕೆಲಸವೂ ಅತ್ಯಂತ ಜರೂರಾಗಿ ನಡೆಸಲು ಆರೋಗ್ಯ ಸಚಿವರು ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲು ಮುಂದಾಗಬೇಕೆಂಬುದು ಎಲ್ಲರ ಆಗ್ರಹವಾಗಿದೆ.

ರಾಜ್ಯ

ಬೆಂಗಳೂರು: ನಮ್ಮ ಸರ್ಕಾರದ 5 ಗ್ಯಾರಂಟಿ ಯೋಜನೆಗಳು ಸ್ವತಂತ್ರ ಭಾರತದ ಯಾವುದೇ ಸರ್ಕಾರ ಮಾಡಿರದ ಅತ್ಯಂತ ಕ್ರಾಂತಿಕಾರಕ ಯೋಜನೆಯಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂ ರಾವ್ ಹೇಳಿದ್ದಾರೆ.

ಮಹಿಳಾ ಸಬಲೀಕರಣ ಹಾಗೂ ಬಡವರಿಗೆ ಆರ್ಥಿಕ ಸ್ವಾವಲಂಬನೆ ಕಲ್ಪಿಸುವ ಈ ಯೋಜನೆಗಳು ಬಡವರ ಪಾಲಿಗೆ ಆಶಾಕಿರಣವಾಗಿದೆ. ಈ ಯೋಜನೆಗಳನ್ನು ನಮ್ಮ ಸರ್ಕಾರ ನಿಲ್ಲಿಸುವ ಮಾತೇ ಇಲ್ಲ. ಮಾಗಡಿ ಶಾಸಕ ಬಾಲಕೃಷ್ಣ ಹೇಳಿಕೆ ಅವರ ವೈಯಕ್ತಿಕ. ಈಗಾಗಲೇ ಮುಖ್ಯಮಂತ್ರಿಗಳು ಯೋಜನೆ ನಿಲ್ಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ನಮ್ಮ ನಿಲುವು ಕೂಡ ಇದೇ ಆಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಜನರ ಸಾರ್ವತ್ರಿಕ ಕಲ್ಯಾಣದ ದೃಷ್ಟಿಯಿಂದ ಪ್ರಾರಂಭವಾದ ಗ್ಯಾರಂಟಿ ಯೋಜನೆಗಳು, ಈ ನಾಡಿನ ಜನರ ಬದುಕನ್ನು ಬದಲಾಯಿಸಿವೆ. ನಮ್ಮ ಸರ್ಕಾರ 5 ಗ್ಯಾರಂಟಿ ಯೋಜನೆಗಳನ್ನು ಇನ್ನಷ್ಟೂ ಪರಿಣಾಮಕಾರಿಯಾಗಿ ಅನುಷ್ಟಾನಕ್ಕೆ ತರಲು ಪ್ರಯತ್ನಿಸುತ್ತದೆಯೇ ಹೊರತು ಯೋಜನೆ ಸ್ಥಗಿತಗೊಳಿಸುವ ಯಾವ ಉದ್ದೇಶವೂ ಇಲ್ಲ ಎಂದು ಆಶ್ವಾಸನೆ ನೀಡಿದ್ದಾರೆ.

ನಾವು ನುಡಿದಂತೆ ನಡೆಯುವವರು ಎಂಬುದನ್ನು ಈಗಾಗಲೇ ಯೋಜನೆಯ ಅನುಷ್ಟಾನದ ಮೂಲಕ ತೋರಿಸಿದ್ದೇವೆ. ಅದೇ ರೀತಿ ಈ ಗ್ಯಾರಂಟಿ ಯೋಜನೆಗಳು ಯಾವುದೇ ವಿಘ್ನವಿಲ್ಲದಂತೆ ಮುಂದುವರೆಯುತ್ತವೆ ಎಂಬ ವಾಗ್ದಾನ ನೀಡುತ್ತೇವೆ ಎಂದು ಹೇಳಿದ್ದಾರೆ.

ರಾಜ್ಯ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಮಲ್ಲೇಶ್ವರಂನ ಕೆ.ಸಿ ಜನರಲ್ ಆಸ್ಪತ್ರೆಯಲ್ಲಿ ನೂತನ ಉಚಿತ ಡಯಾಲಿಸಿಸ್ ಸೇವೆಗಳನ್ನು ಉದ್ಘಾಟಿಸಿ ಮಾತನಾಡಿದರು.

ಆಸ್ಪತ್ರೆಗಳಲ್ಲಿ ಬಡವರಿಗೆ ಹೆಚ್ಚು ಆಸಕ್ತಿಯಿಂದ ಗುಣಮಟ್ಟದ ವೈದ್ಯಕೀಯ ಸೇವೆಯನ್ನು ನೀಡಬೇಕು. ನಮ್ಮ ಸಮಾಜದಲ್ಲಿ ಬಡವರೇ ಹೆಚ್ಚಿದ್ದಾರೆ ಹಾಗಾಗಿ ಸಮಾಜದ ದೃಷ್ಟಿಯಿಂದ ಇದು ಒಳ್ಳೆಯದು ಎಂದು ಹೇಳಿದರು.

ಬಡವರಿಗೆ ಡಯಾಲಿಸಿಸ್ ಮಾಡಿಸಿಕೊಳ್ಳುವುದು ದೊಡ್ಡ ಹೊರೆ. ವಾರಕ್ಕೆ ಮೂರು ಬಾರಿ ಮಾಡಿಸಿಕೊಳ್ಳಬೇಕಾಗುತ್ತದೆ. ಒಮ್ಮೆ ಮಾಡಿಸಿದರೆ 2,000 ರೂ.ಗಳಿಗಿಂತ ಹೆಚ್ಚಿದೆ. ಬಡವರಿಗೆ ಇಷ್ಟು ಮೊತ್ತ ನೀಡಿ ಡಯಾಲಿಸಿಸ್ ಮಾಡಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಕಿಡ್ನಿ ವೈಫಲ್ಯವಾದಾಗ ಡಯಾಲಿಸಿಸ್ ಒಂದೇ ಮಾರ್ಗ. ಅದಕ್ಕಾಗಿ ಸರ್ಕಾರ ಬಡವರಿಗೆ ಸಹಾಯಮಾಡಬೇಕೆಂಬ ಉದ್ದೇಶದಿಂದ ಡಯಾಲಿಸಿಸ್ ಸೇವೆಗಳನ್ನು ಉಚಿತವಾಗಿ ನೀಡುತ್ತಿದೆ ಎಂದು ಹೇಳಿದರು.

ರಾಜ್ಯದಲ್ಲಿ 219 ಡಯಾಲಿಸಿಸ್ ಕೇಂದ್ರಗಳಿವೆ. 800 ಯಂತ್ರಗಳನ್ನು ಈ ಕೇಂದ್ರಗಳಲ್ಲಿ ಅಳವಡಿಸುವ ಕೆಲಸವಾಗುತ್ತಿದೆ. ಹಿಂದೆ ನಮ್ಮ ಸರ್ಕಾರವಿದ್ದಾಗ ಹಾಗೂ ಈಗಲೂ ಕೂಡ ಸಾಧ್ಯವಾದ ಮಟ್ಟಿಗೆ ಗುಣಮಟ್ಟದ ಆರೋಗ್ಯ ಸೇವೆಯನ್ನು ಒದಗಿಸಿಕೊಡಬೇಕೆಂಬ ಉದ್ದೇಶ ಹೊಂದಿದ್ದೇವೆ ಎಂದು ಹೇಳಿದರು.

ಸಣ್ಣ ವಯಸ್ಸಿನವರಿಗೂ ಕಿಡ್ನಿ ಸಮಸ್ಯೆ ಬರುತ್ತದೆ. ಅದಕ್ಕಾಗಿ ಸರ್ಕಾರ ಎಷ್ಟು ಸಾಧ್ಯವೋ ಅಷ್ಟು ಜನರಿಗೆ ಡಯಾಲಿಸಿಸ್ ಮಾಡಿಸುವ ಕೆಲಸ ಮಾಡುತ್ತಿದೆ. ಎಲ್ಲಾ ಜಿಲ್ಲಾ ಹಾಗೂ ತಾಲ್ಲೂಕು ಆಸ್ಪತ್ರೆಗಳಲ್ಲಿ ಈ ಸೇವೆ ದೊರಕಬೇಕು. ಜನರಿಗೆ ಹತ್ತಿರದಲ್ಲಿಯೇ ಈ ಸೇವೆ ಪಡೆಯಬಹುದು ಎಂದು ಹೇಳಿದರು.

ಏಕಬಳಕೆ ಮಾಡುವ ಡಯಾಲೈಸರ್ ಗಳನ್ನು ಪರಿಚಯಿಸಲಾಗಿದೆ. ಇದರಿಂದ ಸೋಂಕು ಕಡಿಮೆ ಮಾಡಬಹುದಾಗಿದೆ. ಡಯಾಲಿಸಿಸ್ ಕೇಂದ್ರಗಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡೂ ಅನುದಾನ ಒದಗಿಸಿಕೊಟ್ಟಿದೆ. ರಾಜ್ಯ ಸರ್ಕಾರ ಶೇ.60 ಹಾಗೂ ಕೇಂದ್ರ ಸರ್ಕಾರ ಶೇ.40 ರಷ್ಟು ಅನುದಾನ ನೀಡಲಿದೆ. ಆದರೆ ಹೆಸರು ಮಾತ್ರ ಪ್ರಧಾನಮಂತ್ರಿ ಡಯಾಲಿಸಿಸ್ ಎಂದಿದೆ. ಹೆಚ್ಚಾಗಿ ಅನುದಾನ ಒದಗಿಸುವುದು ರಾಜ್ಯ ಸರ್ಕಾರ ಎಂದು ಕಿಡಿಕಾರಿದರು.

ಸಮಾಜದಲ್ಲಿ ಅಸಮಾನತೆ ಇದ್ದು ಬಹಳ ಜನ ಕಷ್ಟದಲ್ಲಿ ಕೈತೊಳೆಯುವ ಪರಿಸ್ಥಿತಿ ಇದೆ. ಅಸಮಾನತೆ ಹೋಗಲಾಡಿಸಲು ನಮ್ಮ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ಅಸಮಾನತೆ ಹೋಗಲಾಡಿಸಲು 5 ಗ್ಯಾರಂಟಿ ಕಾರ್ಯಕ್ರಮಗಳು ಪ್ರಮುಖ ಪಾತ್ರ ವಹಿಸಲಿವೆ. ಶಕ್ತಿ ಯೋಜನೆಯಡಿ ಮಹಿಳೆಯರು 141 ಕೋಟಿ ಬಾರಿ ಉಚಿತವಾಗಿ ಸರ್ಕಾರಿ ಬಸ್ಸುಗಳಲ್ಲಿ ಪ್ರಯಾಣ ಮಾಡಿದ್ದಾರೆ ಎಂದು ಶಕ್ತಿ ಯೋಜನೆಯನ್ನು ಸಮರ್ಥಿಸಿಕೊಂಡರು.

1.18 ಕೋಟಿ ಮಹಿಳೆಯರಿಗೆ ತಿಂಗಳಿಗೆ 2 ಸಾವಿರ ರೂಪಾಯಿ, 5 ಕೆಜಿ ಅಕ್ಕಿಗೆ 170 ರೂಪಾಯಿ, ಪ್ರತಿ ತಿಂಗಳು 200 ಯೂನಿಟ್ ವರೆಗೆ ಉಚಿತ ವಿದ್ಯುತ್, ಯುವನಿಧಿ ಕಾರ್ಯಕ್ರಮ ನಿರುದ್ಯೋಗಿ ಯುವಕರಿಗೆ ಜಾರಿಯಾಗಿದೆ. ಜನರ ಕೊಳ್ಳುವ ಶಕ್ತಿ ಹೆಚ್ಚು ಮಾಡಲು ಈ ಯೋಜನೆಗಳನ್ನು ಜಾರಿಗೆ ತರುತ್ತಿದ್ದೇವೆ ಎಂದು ಹೇಳಿದರು.

ಡಯಾಲಿಸಿಸ್ ಸೇವೆಯನ್ನು ಹೆಚ್ಚು ಮಾಡುವ ಕೆಲಸ ಮಾಡುತ್ತೇವೆ. ಆರೋಗ್ಯ ಇಲಾಖೆಯನ್ನು ಸಚಿವ ದಿನೇಶ್ ಗುಂಡೂರಾವ್ ಸುಧಾರಣೆ ಮಾಡುತ್ತಾರೆ ಎಂಬ ನಂಬಿಕೆ ಇದೆ. ಕೆ.ಸಿ.ಜನರಲ್ ಆಸ್ಪತ್ರೆ ತಾಯಿ ಮಕ್ಕಳ ಆಸ್ಪತ್ರೆ ಆಗಬೇಕು. ಶವಾಗಾರ, ಅಡುಗೆ ಮನೆ, ಜೈವಿಕ ತ್ಯಾಜ್ಯ ಕೊಠಡಿ, ಮೂಲಭೂತ ಸೌಕರ್ಯಗಳನ್ನು 150 ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾಗುವುದು. ಇದನ್ನು ಸಚಿವ ಸಂಪುದಲ್ಲಿಟ್ಟು ಒಪ್ಪಿಗೆ ಪಡೆಯಲಾಗುವುದು ಎಂದು ಭರವಸೆ ನೀಡಿದರು.

ರಾಜಕೀಯ

ಕರ್ನಾಟಕ ಬ್ಯಾಂಕ್ ಸೇರಿದಂತೆ ಕೆಲ ಖಾಸಗಿ ಬ್ಯಾಂಕ್‌ಗಳಲ್ಲಿ ಸುಸ್ತಿದಾರ ರೈತರು/ಬೆಳೆಗಾರರ ವಿಚಾರದಲ್ಲಿ ಬ್ಯಾಂಕ್‌ಗಳು ಮಾನವೀಯತೆಯಿಂದ ವರ್ತಿಸಬೇಕು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಖಾಸಗಿ ಬ್ಯಾಂಕ್‌ಗಳ ವಸೂಲಾತಿ ಕಿರುಕುಳದ ಬಗ್ಗೆ ಅನೇಕ ದೂರುಗಳು ಬರುತ್ತಿವೆ. ಇದು ರೈತರ ಆತ್ಮಹತ್ಯೆಯಂತಹ ಘಟನೆಗೆ ಕಾರಣವಾಗುತ್ತದೆ. ಖಾಸಗಿ ಬ್ಯಾಂಕುಗಳು ಈ ವಿಚಾರದಲ್ಲಿ ಎಚ್ಚರಿಕೆ ವಹಿಸಬೇಕು ಎಂದು ಕೇಳಿಕೊಂಡಿದ್ದಾರೆ.

ಖಾಸಗಿ ಬ್ಯಾಂಕ್‌ಗಳಲ್ಲಿ ಸುಸ್ತಿದಾರ ರೈತರು/ಬೆಳೆಗಾರರು ಸಾಲ ಮರುಪಾವತಿಸಲು OTS ಅವಕಾಶವಿದೆ‌. RBIನ ಕೂಲಿಂಗ್ ಆಫ್ ನಿಯಮದ ಪ್ರಕಾರ ಕಂತುಗಳ ರೂಪದಲ್ಲಿ ಸಾಲ ಮರುಪಾವತಿಸಲು 12 ತಿಂಗಳ ಕಾಲಾವಕಾಶವಿದೆ. ಆದರೆ ಕೆಲ ಖಾಸಗಿ ಬ್ಯಾಂಕುಗಳು ಸಮಯಾವಕಾಶ ಕೊಡದೆ ತಕ್ಷಣವೇ ಸಾಲ ಮರುಪಾವತಿಸಲು ಒತ್ತಡ ಹೇರುವುದು ಸರಿಯಲ್ಲ.

ಬ್ಯಾಂಕುಗಳ ಕಿರುಕುಳದಿಂದ ರೈತ/ಬೆಳೆಗಾರ ಆತ್ಮಹತ್ಯೆಗೆ ಶರಣಾದರೆ ಅದರ ಕಳಂಕವನ್ನು ಸರ್ಕಾರ ಹೊರಬೇಕು. ಸರ್ಫೇಸಿ ಕಾಯ್ದೆಯನ್ನೇ ಅಸ್ತ್ರವಾಗಿಸಿಕೊಂಡು ಖಾಸಗಿ ಬ್ಯಾಂಕ್‌ಗಳು ಬೆಳೆಗಾರರ ಜಮೀನನ್ನು ಹರಾಜಿಗೆ ಇಡುವುದು ಸೂಕ್ತವಲ್ಲ. ಯಾರು ಉದ್ದೇಶಪೂರ್ವಕ ಸುಸ್ತಿದಾರರಲ್ಲವೋ ಅಂತಹವರಿಗೆ ಸಾಲ ಮರು ಪಾವತಿಗೆ ಖಾಸಗಿ ಬ್ಯಾಂಕುಗಳು ಕಾಲಾವಕಾಶ ನೀಡಲಿ

ಅತಿವೃಷ್ಟಿಯಿಂದಾಗಿ ಕಳೆದ ಮೂರ್ನಾಲ್ಕು ವರ್ಷಗಳಿಂದ ಬೆಳೆಗಾರರು ಬೆಳೆ ನಷ್ಟ ಅನುಭವಿಸುತ್ತಿದ್ದಾರೆ. ಬೆಳೆನಷ್ಟದ ಪರಿಣಾಮ ಕೆಲ ಬೆಳೆಗಾರರಿಗೆ ಬ್ಯಾಂಕುಗಳ ಸಾಲ ಮರುಪಾವತಿಸಲು ಸಾಧ್ಯವಾಗಿರುವುದಿಲ್ಲ. ಸಾಲ ವಸೂಲಾತಿ ಮಾಡುವಾಗ ಖಾಸಗಿ ಬ್ಯಾಂಕುಗಳು ಈ ಅಂಶವನ್ನು ಪರಿಗಣಿಸಬೇಕು. ಖಾಸಗಿ ಬ್ಯಾಂಕ್ ಆಡಳಿತ ಮಂಡಳಿಗಳು ಈ ಬಗ್ಗೆ ಪರಾಮರ್ಶೆ ಮಾಡಬೇಕು ಎಂದು ಹೇಳಿದ್ದಾರೆ. ‌

ರಾಜಕೀಯ

ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಕ್ಷಣದಿಂದಲೂ ಹೆಚ್.ಡಿ.ಕುಮಾರಸ್ವಾಮಿ ಅವರ ನಿದ್ರೆ-ನೆಮ್ಮದಿ ಹಾರಿ ಹೋಗಿದೆ‌. ಹತಾಶೆಯ ಕೂಪದಲ್ಲಿ ಬಿದ್ದು ವಿಲ ವಿಲ ಒದ್ದಾಡುತ್ತಿರುವ ಕುಮಾರಸ್ವಾಮಿ ನಮ್ಮ ಸರ್ಕಾರದ ವಿರುದ್ಧ ಸುಳ್ಳು ಆರೋಪ ಮಾಡುವುದನ್ನೇ ಪೂರ್ಣಕಾಲಿಕ ಉದ್ಯೋಗ ಮಾಡಿಕೊಂಡಿದ್ದಾರೆ. ಆರೋಪ ಮಾಡಿದರೆ ಅದನ್ನು ಸಾಬೀತುಪಡಿಸಲಿ. ಸುಮ್ಮನೆ ಗಾಳಿಯಲ್ಲಿ ಗುಂಡು ಹಾರಿಸುವುದ್ಯಾಕೆ? ಎಂದು ಕಿಡಿಕಾರಿದ್ದಾರೆ.

“ಕುಮಾರಸ್ವಾಮಿ ಅವರು ನಮ್ಮ ಸರ್ಕಾರದ ವಿರುದ್ಧ ಆರೋಪ ಮಾಡಲು ಒಮ್ಮೆ ಪೆನ್‌ಡ್ರೈವ್ ತೋರಿಸುತ್ತಾರೆ ಮತ್ತೊಮ್ಮೆ ಸಿಡಿ ತೋರಿಸುತ್ತಾರೆ. ನಿಜವಾಗಿಯೂ ಅವರ ಬಳಿ ದಾಖಲೆಗಳಿದ್ದರೆ ಬಿಡುಗಡೆ ಮಾಡಲಿ. ಕುಮಾರಸ್ವಾಮಿಯವರ ಕೈಯನ್ನು ನಾವ್ಯಾರು ಕಟ್ಟಿ ಹಾಕಿಲ್ಲ. ಕುಮಾರಸ್ವಾಮಿಯವರು ಪದೇ ಪದೇ ತೋಳ ಬಂತು ತೋಳದ ಕಥೆಯ ಕಥಾನಾಯಕನ ರೀತಿ ವರ್ತಿಸಿದರೆ ಹೆದರುವರು ಯಾರು?

ಕುಮಾರಸ್ವಾಮಿಯವರು ಚುನಾವಣೆಗೂ ಮುನ್ನ ‘ಕಿಂಗ್ ಮೇಕರ್’ ಆಗುವ ಕನಸು ಕಂಡಿದ್ದರು. ಆದರೆ ಜನರು ಚುನಾವಣೆಯಲ್ಲಿ ಕುಮಾರಸ್ವಾಮಿ ‘ಕಿಂಗ್ ಮೇಕರ್’ ಕನಸನ್ನು ನುಚ್ಚುನೂರು ಮಾಡಿದರು. ಕನಸು ಭಗ್ನಗೊಂಡ HDK, ಭಗ್ನಪ್ರೇಮಿಯಂತೆ ವ್ಯಗ್ರರಾಗಿದ್ದಾರೆ. ಹಾಗಾಗಿ ಬಾಯಿಗೆ ಬಂದಂತೆ ನಮ್ಮ ಸರ್ಕಾರದ ವಿರುದ್ಧ ಇಲ್ಲ ಸಲ್ಲದ ಸುಳ್ಳು ಆರೋಪ ಮಾಡುತ್ತಾ ತಿರುಗಾಡುತ್ತಿದ್ದಾರೆ” ಎಂದು ಲೇವಡಿ ಮಾಡಿದ್ದಾರೆ.

ರಾಜಕೀಯ

ಪ್ರಧಾನಿ ನರೇಂದ್ರ ಮೋದಿಯವರು ಮೌನವಾಗುವ ಮತ್ತು ಮಾತನಾಡುವ ಸಂದರ್ಭಗಳು ಯಾವುದು ಎಂಬುದರ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪಟ್ಟಿಮಾಡಿ ಟ್ವೀಟ್ ಮಾಡಿದ್ದಾರೆ. ಅದು ಯಾವುದೆಂದು ನೋಡೋಣ.

ಮೋದಿಯವರು ಮೌನವಾಗುವ ಸಂದರ್ಭಗಳು: ಗಲಭೆಗಳಾದಾಗ, ಸಾಮೂಹಿಕ ನರಮೇಧಗಳಾಗುವಾಗ, ಮಹಿಳೆಯರ ನಗ್ನ ಮೆರೆವಣಿಗೆಯಾಗುವಾಗ, ಬೆಲೆಯೇರಿಕೆಯಾದಾಗ, PMCares ಫಂಡ್ ಬಗ್ಗೆ ಕೇಳಿದಾಗ, 2 ಕೋಟಿ ಉದ್ಯೋಗದ ಬಗ್ಗೆ ಕೇಳಿದಾಗ, ಕಪ್ಪುಹಣದ ಬಗ್ಗೆ ಕೇಳಿದಾಗ, ಟೆಲಿಪ್ರಾಂಪ್ಟರ್ ಕೈ ಕೊಟ್ಟಾಗ ಈ ಸಂದರ್ಭಗಳಲ್ಲಿ ಮೋದಿ ಕಠೋರ ಮೌನ ತಪಸ್ವಿಗಳಾಗುತ್ತಾರೆ.

ಇದನ್ನೂ ಓದಿ: ರಾಜಧರ್ಮವನ್ನು ಪಾಲಿಸುವವರು ಮಾತ್ರ ಅದನ್ನು ಬೋಧಿಸಲು ಸಾಧ್ಯ: ಮಣಿಪುರ ಮುಖ್ಯಮಂತ್ರಿ ರಾಜೀನಾಮೆಗೆ ಪಿ.ಚಿದಂಬರಂ ಒತ್ತಾಯ!

ಮೋದಿಯವರು ಮಾತನಾಡುವ ಸಂದರ್ಭಗಳು: ಚುನಾವಣೆ ಬಂದಾಗ,  ಪ್ರಚಾರಕ್ಕೆ ಕರೆದಾಗ, ಮನ್ ಕಿ ಬಾತ್ ಕಾರ್ಯಕ್ರಮವಿದ್ದಾಗ, ಎದುರಿಗೆ ಪ್ರಶ್ನೆ ಮಾಡದ ಪತ್ರಕರ್ತರಿಲ್ಲದಿದ್ದಾಗ, ಜೀ ಹುಜೂರ್ ಎಂದು ಅಡ್ಡಡ್ಡ ಬೀಳುವ ತಮ್ಮ‌ ಪಕ್ಷದ ನಾಯಕರು ಎದುರಿರುವಾಗ ಈ ಸಂದರ್ಭಗಳಲ್ಲಿ ‌ಮೋದಿಯವರು ನಿರಂತರವಾಗಿ, ನಿರರ್ಗಳವಾಗಿ, ಮಾತಾಡುತ್ತಲೇ ಇರುತ್ತಾರೆ.

ಇದನ್ನೂ ಓದಿ: ಆ್ಯಂಟಿ ಕಮ್ಯುನಲ್ ವಿಂಗ್‌ಗೆ ಶಕ್ತಿ ತುಂಬಿ ಸಕ್ರಿಯಗೊಳಿಸಿ; ಕರ್ನಾಟಕ ಮುಸ್ಲಿಮ್ ಯೂನಿಟಿಯ ಖಾಸಿಂ ಸಾಬ್ ಆಗ್ರಹ!

ಮೋದಿಯವರು ಮೌನವಾಗಿರುವುದು ಬುದ್ಧಿವಂತರ ಲಕ್ಷಣ ಎಂಬುದನ್ನು ಬಲವಾಗಿ ನಂಬಿದ್ದಾರೆ. ಆದರೆ ಕೆಲವೊಮ್ಮೆ ಕೆಲವು ವಿಚಾರಗಳ ಸಮರ್ಥನೆಗೆ ಪದಗಳು ಸಿಗದಿರುವ ಅಜ್ಞಾನವೂ ಮೌನಕ್ಕೆ ಕಾರಣವಾಗುತ್ತದೆ. ಮಣಿಪುರ ಗಲಭೆಗೆ ಸಂಬಂಧಪಟ್ಟಂತೆ ಮೋದಿಯವರ ಮೌನವನ್ನು ಬುದ್ಧಿವಂತರ ಲಕ್ಷಣವೆನ್ನಬೇಕೋ ಅಥವಾ ಸಮರ್ಥಿಸಿಕೊಳ್ಳಲು ಆಗದ ಅಜ್ಞಾನವೆನ್ನಬೇಕೋ? ಎಂದು ಹೇಳಿದ್ದಾರೆ.

ರಾಜಕೀಯ

ಉಡುಪಿ ವೀಡಿಯೊ ಪ್ರಕರಣವನ್ನು ಬಿಜೆಪಿ ಉದ್ದೇಶಪೂರ್ವಕವಾಗಿ ರಾಜಕೀಯಗೊಳಿಸುತ್ತಿದ್ದಾರೆ. ಈ ಪ್ರಕರಣದಲ್ಲಿ ಯಾವುದೇ ವೀಡಿಯೊ ಹರಿದಾಡಿಲ್ಲ. ಹರಿದಾಡುತ್ತಿರುವ ವೀಡಿಯೊ ಕೂಡ ನಕಲಿ. ಪೊಲೀಸರು ವಿದ್ಯಾರ್ಥಿನಿಯರ ಮೊಬೈಲ್ ರಿಟ್ರೀವ್ ಮಾಡಿದ್ದಾರೆ. ಅಲ್ಲಿ ಯಾವುದೇ ವೀಡಿಯೊಗಳಿಲ್ಲ. ಮತ್ಯಾಕೆ ಈ ರಾದ್ಧಾಂತ? ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂ ರಾವ್ ಪ್ರಶ್ನಿಸಿದ್ದಾರೆ.

ಬೊಮ್ಮಾಯಿ, ಸೇರಿದಂತೆ ರಾಜ್ಯ ಬಿಜೆಪಿ ನಾಯಕರು, ಉಡುಪಿ ಪ್ರಕರಣದಲ್ಲಿ ಇಲಿ ಹೋಗಿದನ್ನೇ ಹುಲಿ ಹೋದಂತೆ ಬಿಂಬಿಸುತ್ತಿದ್ದಾರೆ. ಬೊಮ್ಮಾಯಿಯವರಿಗೊಂದು ಪ್ರಶ್ನೆ. ಉಡುಪಿ ಪ್ರಕರಣದಲ್ಲಿ ಇಷ್ಟು ಬಟ್ಟೆ ಹರಿದುಕೊಳ್ಳುತ್ತಿರುವ ನೀವು, ಪ್ರತೀಕ್ ಗೌಡ ಎಂಬ ತೀರ್ಥಹಳ್ಳಿಯ ಎಬಿವಿಪಿ ಘಟಕದ ಅಧ್ಯಕ್ಷ ಹಿಂದೂ ಯುವತಿಯರ ಅಶ್ಲೀಲ ವೀಡಿಯೊ ಬಿಟ್ಟಾಗ ಎಲ್ಲಿದ್ದಿರೀ?

ಪ್ರತೀಕ್ ಗೌಡ ಎಂಬ ಎಬಿವಿಪಿ ಯವನೊಬ್ಬ ಹಿಂದೂ ಯುವತಿಯರ ಅಶ್ಲೀಲ ವೀಡಿಯೊ ಹರಿಬಿಟ್ಟಾಗ ಬೊಮ್ಮಾಯಿ ಸೇರಿದಂತೆ ಬಿಜೆಪಿಯ ಎಲ್ಲಾ ನಾಯಕರ ನವರಂದ್ರಗಳೂ ಬಂದ್ ಆಗಿತ್ತು. ಈಗ ಧರ್ಮರಕ್ಷಕರ ಮುಖವಾಡ ತೊಟ್ಟು ಅಖಾಡಕ್ಕಿಳಿದಿದ್ದಾರೆ‌. ಹಿಂದೂ ಯುವತಿಯರ ಅಶ್ಲೀಲ ವೀಡಿಯೊ ಹರಿಬಿಟ್ಟ ‘ಪ್ರತೀಕ್’ನ ಸ್ಥಾನದಲ್ಲಿ ‘ಅತೀಕ್’ ಇದ್ದರೆ ಮಾತ್ರ ಇವರ ಹೋರಾಟವೇ?

ಬೊಮ್ಮಾಯಿಯವರೇ, ಪೊಲೀಸರು ನಿಮ್ಮ ಆಡಳಿತದಲ್ಲಿ ರಾಜಕೀಯದ ಒತ್ತಡಕ್ಕೆ ಮಣಿದಿರಬಹುದು. ಆದರೆ ನಾವು ಪೋಲಿಸರಿಗೆ ಫ್ರೀ ಹ್ಯಾಂಡ್ ಕೊಟ್ಟಿದ್ದೇವೆ. ಹಿಂದೂ ಯುವತಿಯರ ಅಶ್ಲೀಲ ವೀಡಿಯೊ ಹರಿಬಿಟ್ಟ ಪ್ರತೀಕ್ ಗೌಡ ಎಂಬಾತನನ್ನು ನಮ್ಮ ಪೊಲೀಸರು ಒದ್ದು ಒಳಗಾಕ್ಕಿದ್ದಾರೆ. ಬಹುಶಃ ಧರ್ಮ ರಕ್ಷಣೆಯ ಗ್ರಾಫ್ ನಿಮಗಿಂತ ನಮ್ಮದ್ದೇ ಜಾಸ್ತಿ ಇದೆಯಲ್ಲವೇ?

ಪ್ರಾಜ್ಞರಾದ ಬೊಮ್ಮಾಯಿಯವರು ಬಿಜೆಪಿಯ ಟೂಲ್‌ಕಿಟ್‌ನ ಭಾಗವಾಗಬಾರದು. ಉಡುಪಿ ಪ್ರಕರಣ ವಯೋಸಹಜ ಚೇಷ್ಟೆ ಮತ್ತು ಹುಡುಗಾಟ ಎಂದು ಬೊಮ್ಮಾಯಿಯವರಿಗೂ ಕೂಡ ತಿಳಿದಿದೆ. ಆದರೂ ಪಾಪ ಬಿಜೆಪಿಯಲ್ಲಿ ತಮ್ಮ ಅಸ್ತಿತ್ವಕ್ಕಾಗಿ ಬೊಮ್ಮಾಯಿಯವರು ಈ ರೀತಿಯ ಹೇಳಿಕೆ ಕೊಡುತ್ತಿದ್ದಾರೆ. ಕುತೂಹಲವೆಂದರೆ ಸಿಎಂ ಆದವರು ವಿಪಕ್ಷ ಸ್ಥಾನ ಪಡೆಯಲು ಇಷ್ಟೆಲ್ಲಾ ಮಾಡಬೇಕೆ? ಎಂದು ಟೀಕಿಸಿದ್ದಾರೆ

ರಾಜಕೀಯ

ಬಿಜೆಪಿ ಬಿ ಟೀಂ ಜೆಡಿಎಸ್ ಎಂದು ನಾವು ಅನೇಕ ಬಾರಿ ಹೇಳಿದ್ದೆವು. ಈಗ  ಹೆಚ್.ಡಿ.ಕುಮಾರಸ್ವಾಮಿ ನಮ್ಮ‌ ಮಾತು ಸತ್ಯ ಎಂಬುದನ್ನು ನಿರೂಪಿಸಲು ಹೊರಟಿದ್ದಾರೆ. ಜೆಡಿಎಸ್ ಪಕ್ಷಕ್ಕೆ ಯಾವುದೇ ತತ್ವ ಸಿದ್ದಾಂತಗಳಿಲ್ಲ.‌ ಕೋಮುವಾದಿ ಪಕ್ಷ ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಳ್ಳಲು ಹೊರಟಿರುವ ಜೆಡಿಎಸ್‌ಗೆ ಯಾವ ಸಿದ್ದಾಂತವಿದೆ? ಅದೊಂದು ಅವಕಾಶವಾದಿ ಪಕ್ಷ.‌ ಅಧಿಕಾರಕ್ಕಾಗಿ ಯಾರ ಜೊತೆಗಾದರೂ ಸೈ ಎನ್ನುತ್ತದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಜೆಡಿಎಸ್ ಮುಂದಿರುವ ಜಾತ್ಯಾತೀತ ಎಂಬ ಪದ ಕೇವಲ ಸೋಗಲಾಡಿತನವಷ್ಟೆ. 2006ರಲ್ಲಿ ಬಿಜೆಪಿ ಜೊತೆ ಸೇರಿ 20-20 ಸರ್ಕಾರ ಮಾಡಿದಾಗಲೇ ಜಾತ್ಯಾತೀತ ತತ್ವಕ್ಕೆ ಕುಮಾರಸ್ವಾಮಿ ಎಳ್ಳು‌ ನೀರು ಬಿಟ್ಟಿದ್ದರು. ಆಗಲೇ ಜೆಡಿಎಸ್ ಅವನತಿ ಶುರುವಾಗಿದ್ದು. 2004ರಲ್ಲಿ 59 ಸ್ಥಾನ ಗೆದ್ದಿದ್ದ ಜೆಡಿಎಸ್ ಈ ಬಾರಿ 19 ಸ್ಥಾನಕ್ಕೆ ಕುಸಿಯಲು ಈ ನಕಲಿ ಜಾತ್ಯತೀತ ಸಿದ್ದಾಂತವೇ ಕಾರಣ.

ಬಿಜೆಪಿಗೆ ವಿಪಕ್ಷ ನಾಯಕನ ಎರವಲು ಸೇವೆ ನೀಡುತ್ತಿರುವ ಹೆಚ್.ಡಿ.ಕುಮಾರಸ್ವಾಮಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ಬದಲು ವಿಲೀನ ಮಾಡಿಕೊಳ್ಳಲಿ. ಆಗ ತಾವೇ ಅಧಿಕೃತವಾಗಿ ವಿಪಕ್ಷ ನಾಯಕನಾಗಬಹುದು. ಈ ಮೂಲಕವಾದರೂ ಕುಮಾರಸ್ವಾಮಿ ಅವರ ಸುಳ್ಳು ಜಾತ್ಯತೀತತೆಯ ನಕಲಿ‌ ಶ್ಯಾಮನ ಅವತಾರ ಕೊನೆಯಾಗಲಿ‌. ಎಂದು ವ್ಯಂಗ್ಯವಾಡಿದ್ದಾರೆ.

ರಾಜಕೀಯ

ಮೇಕೆದಾಟು ಅಣೆಕಟ್ಟು ಸಮಸ್ಯೆ, ಲೋಕಸಭಾ ಚುನಾವಣೆಗೆ ಡಿಎಂಕೆಯಿಂದ ಹೆಚ್ಚುವರಿ ಸ್ಥಾನಗಳನ್ನು ಪಡೆಯುವ ವಿಚಾರಕ್ಕೆ ಸಂಬಂಧಿಸಿದಂತೆ ತಮಿಳುನಾಡು ಕಾಂಗ್ರೆಸ್ ಅಧ್ಯಕ್ಷ ಅಳಗಿರಿ, ತಮಿಳುನಾಡು ಕಾಂಗ್ರೆಸ್ ಉಸ್ತುವಾರಿಯಾಗಿರುವ ಸಚಿವ ದಿನೇಶ್ ಗುಂಡೂರಾವ್ ಅವರೊಂದಿಗೆ ರಹಸ್ಯ ಸಭೆ ನಡೆಸಿರುವುದು ಬಹಿರಂಗವಾಗಿದೆ.

ತಮಿಳುನಾಡು ಕಾಂಗ್ರೆಸ್ ಉಸ್ತುವಾರಿ ಹಾಗೂ ಕರ್ನಾಟಕ ರಾಜ್ಯ ಸಚಿವ ದಿನೇಶ್ ಗುಂಡೂರಾವ್ ಅವರನ್ನು ಮೊನ್ನೆ ಮತ್ತು ನಿನ್ನೆ ಅಳಗಿರಿ ಅವರು ಸಚಿವರ ನಿವಾಸದಲ್ಲಿ ಗೌಪ್ಯವಾಗಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ ಎಂದು ವರದಿಯಾಗಿದೆ.

ಮೇಕೆದಾಟು ಅಣೆಕಟ್ಟು ವಿಚಾರಕ್ಕೆ ಸಂಬಂಧಿಸಿದಂತೆ, ಕಾಂಗ್ರೆಸ್ ಪಕ್ಷವನ್ನು ಮೈತ್ರಿಯಿಂದ ಹೊರತೆಗೆಯಿರಿ ಎಂದು, ಬಿಜೆಪಿ ವರಿಷ್ಟರು ಡಿಎಂಕೆ ಮೇಲೆ ಒತ್ತಡ ಹೇರುತ್ತಿದ್ದಾರೆ. ಡಿಎಂಕೆ-ಕಾಂಗ್ರೆಸ್ ಮೈತ್ರಿ ಮುಂದುವರಿಯಬೇಕಾದರೆ ಮೇಕೆದಾಟು ಅಣೆಕಟ್ಟು ವಿಚಾರದಲ್ಲಿ ಕರ್ನಾಟಕ ಸರ್ಕಾರ ತಮಿಳುನಾಡಿನ ವಿರುದ್ಧ ನಿಲುವು ತಳೆಯಬಾರದು.

ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಜೂನ್ ಮತ್ತು ಜುಲೈನಲ್ಲಿ ತಮಿಳುನಾಡಿಗೆ ಹರಿಸಬೇಕಾದ ಕಾವೇರಿ ನೀರನ್ನು ಬಿಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಮಾತನಾಡಬೇಕು. ತಮಿಳುನಾಡಿನ ಜನತೆಯ ಹಿತಕ್ಕೆ ವಿರುದ್ಧವಾಗಿ, ಕರ್ನಾಟಕ ಸರ್ಕಾರ ತೆಗೆದುಕೊಳ್ಳುವ ನಿರ್ಧಾರಕ್ಕೆ, ತಮಿಳುನಾಡು ಕಾಂಗ್ರೆಸ್ ತಲೆಬಾಗುವುದಿಲ್ಲ. ಅಗತ್ಯಬಿದ್ದರೆ ವಿರುದ್ಧ ನಿಲುವು ತೆಗೆದುಕೊಳ್ಳಬೇಕಾಗುತ್ತದೆ.

ಆಗ ಮಾತ್ರ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಡಿಎಂಕೆ ಮೈತ್ರಿಕೂಟದಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗುತ್ತದೆ. ಡಿಎಂಕೆ ವಿರುದ್ಧ ಕಣಕ್ಕಿಳಿದರೆ ಕ್ಷೇತ್ರಗಳನ್ನು ಕಡಿಮೆ ಮಾಡುವ ಸಾಧ್ಯತೆ ಇದೆ. ಆದ್ದರಿಂದ ಮುಂದಿನ ಹೆಜ್ಜೆಯನ್ನು ಅತ್ಯಂತ ಎಚ್ಚರಿಕೆಯಿಂದ ಮತ್ತು ಜಾಣ್ಮೆಯಿಂದ ನಿಭಾಯಿಸಬೇಕೆಂದು ಅಳಗಿರಿ ದಿನೇಶ್ ಗುಂಡೂರಾವ್ ಅವರನ್ನು ಒತ್ತಾಯಿಸಿದ್ದಾರೆ ಎಂದು ತಿಳಿದು ಬಂದಿದೆ.

ರಾಜಕೀಯ

“BJP-JDSನವರು ನಾವು ಕೊಟ್ಟ ಗ್ಯಾರಂಟಿಗಳು ಜಾರಿಯಾಗಲ್ಲ ಎಂದು ಕಂಡ ಕಂಡಲ್ಲಿ ಹೇಳಿಕೊಂಡು ತಿರುಗಾಡುತ್ತಿದ್ದರು. ಹಾಗೆ ಹೇಳಿಕೊಂಡು ತಿರುಗಾಡುವುದು ಅವರ ಸಹಜ ಗುಣ. ತಾನು ಕಳ್ಳ ಪರರ ನಂಬ ಮನಃಸ್ಥಿತಿ ಅವರದ್ದು”

ಬೆಂಗಳೂರು: ಚುನಾವಣಾ ಪೂರ್ವದಲ್ಲಿ ನಾವು ಕೊಟ್ಟ 5 ಗ್ಯಾರಂಟಿಗಳ ಪೈಕಿ ಗೃಹಜ್ಯೋತಿ ಹಾಗೂ ಅನ್ನಭಾಗ್ಯ ಯೋಜನೆ ಇಂದಿನಿಂದ ಆರಂಭವಾಗಲಿದೆ. ಗೃಹಜ್ಯೋತಿ ಯೋಜನೆಯಡಿ ಈ ತಿಂಗಳಿನಿಂದ ನಮ್ಮ ಸರ್ಕಾರ 200 ಯೂನಿಟ್‌ವರೆಗೆ ವಿದ್ಯುತ್ ಉಚಿತವಾಗಿ ನೀಡಲಿದೆ. ಅನ್ನಭಾಗ್ಯ ಯೋಜನೆಯಡಿ 5 kg ಅಕ್ಕಿ ಹಾಗೂ ಇನ್ನುಳಿದ 5 kg ಅಕ್ಕಿಯ ಬದಲಾಗಿ ರೂ. 170 ನೀಡಲಿದ್ದೇವೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

“BJP-JDS ನವರು ನಾವು ಕೊಟ್ಟ ಗ್ಯಾರಂಟಿಗಳು ಜಾರಿಯಾಗಲ್ಲ ಎಂದು ಕಂಡ ಕಂಡಲ್ಲಿ ಹೇಳಿಕೊಂಡು ತಿರುಗಾಡುತ್ತಿದ್ದರು. ಹಾಗೆ ಹೇಳಿಕೊಂಡು ತಿರುಗಾಡುವುದು ಅವರ ಸಹಜ ಗುಣ. ತಾನು ಕಳ್ಳ ಪರರ ನಂಬ ಮನಃಸ್ಥಿತಿ ಅವರದ್ದು. ಆದರೆ ನಾವು ಅಧಿಕಾರಕ್ಕೆ ಬಂದ ಹದಿನೈದೇ ದಿನದಲ್ಲಿ ಶಕ್ತಿ ಯೋಜನೆ ತಂದೆವು. ಇಂದಿನಿಂದ‌ ಗೃಹಜ್ಯೋತಿ/ಅನ್ನಭಾಗ್ಯ ಜಾರಿಗೆ ಬರಲಿದೆ.

ಗೃಹಜ್ಯೋತಿ ಹಾಗೂ ಅನ್ನಭಾಗ್ಯ ಯೋಜನೆ ಇಂದಿನಿಂದ ಜಾರಿಯಾಗುವ ಮೂಲಕ ನಾವು ಕೊಟ್ಟ 5 ಗ್ಯಾರಂಟಿಗಳ ಪೈಕಿ ‌ಮೂರು ಈಡೇರಿದಂತಾಗಿದೆ. ಗೃಹಲಕ್ಷ್ಮಿ ಯೋಜನೆ ಆಗಸ್ಟ್ 15 ರಂದು ಪ್ರಾರಂಭವಾಗಲಿದೆ. ಮಾತು ಕೊಡುವುದು ದೊಡ್ಡದಲ್ಲ. ಆದರೆ ಕೊಟ್ಟ ಮಾತನ್ನು ಉಳಿಸಿಕೊಳ್ಳುವುದು ನಿಜವಾದ ಸವಾಲು. ಆ ಸವಾಲನ್ನು ನಾವು ಇಂದು ಮೆಟ್ಟಿ ನಿಂತಿದ್ದೇವೆ” ಎಂದು ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.