ರಾಜಕೀಯ Archives » Page 17 of 47 » Dynamic Leader
October 24, 2024
Home Archive by category ರಾಜಕೀಯ (Page 17)

ರಾಜಕೀಯ

ರಾಜಕೀಯ

ನವದೆಹಲಿ: ಕೇಂದ್ರದಲ್ಲಿ ಆಡಳಿತಾರೂಢ ಬಿಜೆಪಿಯನ್ನು ಸೋಲಿಸಲು ವಿರೋಧ ಪಕ್ಷಗಳು ಒಟ್ಟಾಗಿ ‘ಇಂಡಿಯಾ’ ಮೈತ್ರಿಕೂಟವನ್ನು ರಚಿಸಿವೆ.

ಕಾಂಗ್ರೆಸ್, ಡಿಎಂಕೆ, ತೃಣಮೂಲ ಕಾಂಗ್ರೆಸ್, ಸಂಯುಕ್ತ ಜನತಾ ದಳ, ಸಮಾಜವಾದಿ ಪಕ್ಷ ಮತ್ತು ಇತರ ಪ್ರಮುಖ ವಿರೋಧ ಪಕ್ಷಗಳಾದ ‘ಇಂಡಿಯಾ’ ಮೈತ್ರಿಕೂಟ ಇದುವರೆಗೆ ಮೂರು ಬಾರಿ ಸಭೆ ನಡೆಸಿದೆ. ಈ ಸಭೆಯಲ್ಲಿ ಮೈತ್ರಿಕೂಟದ ಕಾರ್ಯಚಟುವಟಿಕೆಗಳ ಕುರಿತು ಚರ್ಚಿಸಲಾಯಿತು.

ಆದಾಗ್ಯೂ ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರು? ಎಂಬುದು ಅಧಿಕೃತವಾಗಿ ಘೋಷಣೆಯಾಗಿಲ್ಲ. ಏತನ್ಮಧ್ಯೆ, ‘ಇಂಡಿಯಾ’ ಮೈತ್ರಿಕೂಟದ ಸಂಯೋಜಕರನ್ನಾಗಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಆಯ್ಕೆ ಮಾಡಬೇಕು ಮತ್ತು ಜನವರಿ ಅಂತ್ಯದೊಳಗೆ ಸೀಟು ಹಂಚಿಕೆ ಬಗ್ಗೆ ಚರ್ಚಿಸಬೇಕು ಎಂದು ಒತ್ತಾಯಿಸಲಾಯಿತು.

ಈ ಹಿನ್ನಲೆಯಲ್ಲಿ, ಇಂದು ವೀಡಿಯೋ ಕಾನ್ಫರೆನ್ಸ್ ಮೂಲಕ ‘ಇಂಡಿಯಾ’ ಮೈತ್ರಿಕೂಟದ ಪಕ್ಷದ ನಾಯಕರ ಸಮಾಲೋಚನೆ ಸಭೆ ನಡೆಯಿತು.

ಕಾಂಗ್ರೆಸ್ ಪರವಾಗಿ ಮಲ್ಲಿಕಾರ್ಜುನ ಖರ್ಗೆ, ಡಿ.ಎಂ.ಕೆ ಅಧ್ಯಕ್ಷ ಎಂ.ಕೆ.ಸ್ಟಾಲಿನ್, ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ಶರದ್ ಪವಾರ್ ಸೇರಿದಂತೆ 14 ಪಕ್ಷಗಳ ಮುಖಂಡರುಗಳು ವೀಡಿಯೋ ಕಾನ್ಫರೆನ್ಸ್ ಮೂಲಕ ಸಭೆಯಲ್ಲಿ ಭಾಗವಹಿಸಿದ್ದರು. ಮಮತಾ ಬ್ಯಾನರ್ಜಿ ಈ ಸಭೆಯಲ್ಲಿ ಭಾಗವಹಿಸಲಿಲ್ಲ. ಕ್ಷೇತ್ರ ಹಂಚಿಕೆ ಕುರಿತು ಇಂದಿನ ಸಭೆಯಲ್ಲಿ ಸಮಾಲೋಚನೆ ನಡೆಸಲಾಯಿತು.

ಈ ಸಭೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ‘ಇಂಡಿಯಾ’ ಮೈತ್ರಿಕೂಟದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ. ನಿತೀಶ್ ಕುಮಾರ್ ಅವರು ಅಧ್ಯಕ್ಷರ ಸ್ಥಾನಕ್ಕೆ ನಿರಾಕರಿಸಿದ ಹಿನ್ನೆಲೆಯಲ್ಲಿ ಖರ್ಗೆ ಅವರ ಹೆಸರನ್ನು ಅಧ್ಯಕ್ಷರ ಸ್ಥಾನಕ್ಕೆ ಪ್ರಸ್ತಾಪಿಸಲಾಗಿದೆ ಎಂದು ತಿಳಿದುಬಂದಿದೆ.

ಮೈತ್ರಿಕೂಟದ ಸಂಯೋಜಕರಾಗಿ ನಿತೀಶ್ ಕುಮಾರ್ ಅವರನ್ನು ನೇಮಿಸಲು ನಿರ್ಧರಿಸಿದ್ದಾರೆ. ಎಲ್ಲಾ ಸಮ್ಮಿಶ್ರ ಪಕ್ಷಗಳು ಒಮ್ಮತದ ಬೆಂಬಲ ನೀಡಿದರೆ ಈ ಜವಾಬ್ದಾರಿಯನ್ನು ನಿತೀಶ್ ಕುಮಾರ್ ವಹಿಸಿಕೊಳ್ಳುವುದಾಗಿ ಹೇಳಿದ್ದಾರೆ.

ಮೈತ್ರಿಕೂಟದ ಸಮಾಲೋಚನಾ ಸಭೆಯಲ್ಲಿ ಭಾಗವಹಿಸದ ಉದ್ಧವ್ ಠಾಕ್ರೆಯವರು ಅದರ ಸಂಬಂಧ ವಿವರಣೆ ನೀಡಿದ್ದಾರೆ: “ಈ ವಿಷಯದಲ್ಲಿ ಯಾವುದೇ ತಪ್ಪು ತಿಳುವಳಿಕೆ ಇರಬಾರದು. ನಾನು ನಿಗದಿತ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಬೇಕಾಗಿದ್ದರಿಂದ, ಸಮಾಲೋಚನಾ ಸಭೆಗೆ ಹಾಜರಾಗಿಲ್ಲ. ಇಂತಹ ಪರಿಸ್ಥಿತಿಯಲ್ಲಿ, ಸಭೆಗೆ ಹಾಜರಾಗುವುದು ಕಷ್ಟವಾಗಿರುತ್ತದೆ. ಸಭೆಯಲ್ಲಿ ಭಾಗವಹಿಸಲು ಸಾಧ್ಯವಿಲ್ಲ ಎಂದು ಈಗಾಗಲೇ ತಿಳಿಸಿದ್ದೇನೆ” ಎಂದು ಹೇಳಿದರು.

‘ಇಂಡಿಯಾ’ ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಸದ್ಯಕ್ಕೆ ಅಗತ್ಯವಿಲ್ಲ ಎಂದು ಶರದ್ ಪವಾರ್ ಹೇಳಿದ್ದಾರೆ. “ಚುನಾವಣೆಯಲ್ಲಿ ಮತ ಕೇಳಲು ಯಾರನ್ನಾದರೂ ಪ್ರಧಾನಿ ಅಭ್ಯರ್ಥಿಯನ್ನಾಗಿ ಸೂಚಿಸುವ ಅಗತ್ಯವಿಲ್ಲ. ಚುನಾವಣೆ ನಂತರ ನಾಯಕನನ್ನು ಆಯ್ಕೆ ಮಾಡೋಣ. 1977ರ ಚುನಾವಣೆಯ ಸಮಯದಲ್ಲಿ, ವಿರೋಧ ಪಕ್ಷಗಳು ಮೊರಾರ್ಜಿ ದೇಸಾಯಿ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಸೂಚಿಸಲಿಲ್ಲ. ವಿರೋಧ ಪಕ್ಷಗಳು ಗೆದ್ದ ನಂತರ ಅವರು ಪ್ರಧಾನಿಯಾಗಿ ಆಯ್ಕೆಯಾದರು” ಎಂದು ಹೇಳಿದರು.

ರಾಜಕೀಯ

ಬೆಂಗಳೂರು: “ರಾಮನ ಮೇಲಿನ ಭಕ್ತಿಯನ್ನು ಬಿಜೆಪಿ ರಾಜಕೀಯ ಗೊಳಿಸಿ ಲಾಭ ಪಡೆಯಲು ಯತ್ನಿಸುತ್ತಿದೆ. ಮುಂದಿನ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಜನರನ್ನು ಭಾವನಾತ್ಮಕವಾಗಿ ಪ್ರಚೋಧಿಸಿ ಮತ ಬ್ಯಾಂಕ್ ಭದ್ರಗೊಳಿಸುತ್ತಿದೆ. ಈ ಮೂಲಕ ಬಿಜೆಪಿ ಲೋಕಸಭಾ ಚುನಾವಣೆಗೆ ಸಿದ್ದವಾಗುತ್ತಿದೆ” ಎಂದು ವೆಲ್‌ಫೇರ್ ಪಾರ್ಟಿ ಆಫ್ ಇಂಡಿಯಾದ ಕರ್ನಾಟಕ ರಾಜ್ಯಾಧ್ಯಕ್ಷ ಅಡ್ವಕೇಟ್ ತಾಹೇರ್ ಹುಸೇನ್ ಹೇಳಿದ್ದಾರೆ.

ಅವರು ಮುಂದುವರಿಯುತ್ತಾ “ಧಾರ್ಮಿಕ ನಂಬಿಕೆಗಳನ್ನು ಬಳಸಿ ಮುಗ್ದ ಜನರನ್ನು ಭಾವನಾತ್ಮಕವಾಗಿ ಕೆರಳಿಸುವ ಯಾವುದೇ  ಪಕ್ಷಗಳು ರಾಜಕೀಯ ಮಾಡಿದರೂ ಅದು ಖಂಡನಾರ್ಹ. ಕಾಂಗ್ರೆಸ್ ಕೂಡ ಆರಂಭದಲ್ಲಿ ಬಿಜೆಪಿಯ ಹಾದಿಯಲ್ಲಿ ಸಾಗುವ ಸೂಚನೆ ನೀಡಿದ್ದರೂ ಈಗ ಅದರಿಂದ ದೂರ ನಿಲ್ಲುವುದಾಗಿ ಹೇಳಿದ್ದು ಸ್ವಾಗತಾರ್ಹ” ಎಂದು ಹೇಳಿದ್ದಾರೆ.

ರಾಮನ ಮೇಲಿನ ಭಕ್ತಿಗಿಂತ ರಾಜಕೀಯವೇ ಮೇರೆ ಮೀರುತ್ತಿದೆ. ರಾಮ ಮಂದಿರ ಪೂರ್ಣಗೊಳ್ಳುವ ಮುನ್ನವೇ ತರಾತುರಿಯ ಉದ್ಘಾಟನೆಗೆ ಬಿಜೆಪಿ ಮುಂದಾಗುತ್ತಿರುವುದು ಏತಕ್ಕೆ? ಲೋಕಸಭೆ ಚುನಾವಣೆ ಆಸನ್ನವಾಗಿರುವಾಗ, ವಿಷಯವಿಲ್ಲದೇ ತಡಕಾಡುವ ಬಿಜೆಪಿಗೆ ಇದರ ಅಗತ್ಯವಿತ್ತು. ರಾಮಮಂದಿರ ವಿವಾದದಿಂದಲೇ ಸಾಕಷ್ಟು ಫಸಲು ತೆಗೆದ ಪಕ್ಷದಿಂದ ಇನ್ನೇನು ತಾನೇ ನಿರೀಕ್ಷಿಸಬಹುದು?” ಎಂದು ಅವರು ಪ್ರಶ್ನಿಸಿದ್ದಾರೆ.

ರಾಜಕೀಯ

ನವದೆಹಲಿ: (ಪಿಟಿಐ) ಅಯೋಧ್ಯೆಯಲ್ಲಿ ಜನವರಿ 22 ರಂದು ನಡೆಯಲಿರುವ ರಾಮ ಮಂದಿರ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸದಿರಲು ಕಾಂಗ್ರೆಸ್ ನಾಯಕರು ನಿರ್ಧರಿಸಿದ್ದು, ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ನಾಯಕರಾದ ಸೋನಿಯಾ ಗಾಂಧಿ ಮತ್ತು ಅಧೀರ್ ರಂಜನ್ ಚೌಧರಿ ಅವರು ರಾಮ ಮಂದಿರದ ಆಹ್ವಾನವನ್ನು ತಿರಸ್ಕರಿಸಿದ್ದಾರೆ.

ರಾಮ ಮಂದಿರ ಉದ್ಘಾಟನೆ “ಆರ್‌ಎಸ್‌ಎಸ್-ಬಿಜೆಪಿ ಕಾರ್ಯಕ್ರಮ” ಎಂದಿರುವ ಕಾಂಗ್ರೆಸ್, ಧರ್ಮವು ವೈಯಕ್ತಿಕ ವಿಷಯವಾಗಿದೆ. ಆದರೆ ಆರ್‌ಎಸ್‌ಎಸ್ ಮತ್ತು ಬಿಜೆಪಿ ಅಯೋಧ್ಯೆ ಮಂದಿರವನ್ನು ರಾಜಕೀಯ ಯೋಜನೆಯಾಗಿ ಬಳಸಿಕೊಳ್ಳುತ್ತಿದೆ ಎಂದು ಬುಧವಾರ ಹೇಳಿದೆ.

ಲೋಕಸಭೆ ಚುನಾವಣಾ ಲಾಭಕ್ಕಾಗಿ ಬಿಜೆಪಿ ಮತ್ತು ಆರ್‌ಎಸ್‌ಎಸ್ ನಾಯಕರು ಅಯೋಧ್ಯೆಯ ಅಪೂರ್ಣ ದೇವಾಲಯವನ್ನು ಉದ್ಘಾಟನೆ ಮಾಡಲಾಗುತ್ತಿದೆ. ಎಂದು ಕಾಂಗ್ರೆಸ್ ಪ್ರಕಟಣೆಯಲ್ಲಿ ತಿಳಿಸಿದೆ.

ರಾಮಮಂದಿರ ಉದ್ಘಾಟನೆಗೆ ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಅವರಿಗೆ ಆಹ್ವಾನ ನೀಡಲಾಗಿತ್ತು.

ಜನವರಿ 22 ರಂದು ರಾಮ ಮಂದಿರ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ 6,000ಕ್ಕೂ ಹೆಚ್ಚು ಗಣ್ಯರು ಪಾಲ್ಗೊಳ್ಳುವ ನಿರೀಕ್ಷೆಯಿದೆ.

ರಾಜಕೀಯ

ಇದೇ ತಿಂಗಳು 15 ರಿಂದ 22ರ ನಡುವೆ ಯಾವುದೇ ದಿನದಲ್ಲಿ ಭಾರತೀಯ ಜನತಾ ಪಕ್ಷ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸುವ ನಿರೀಕ್ಷೆಯಿದೆ.

ಸಂಸತ್ ಚುನಾವಣೆ ಸಮೀಪಿಸುತ್ತಿದೆ. ಮುಖ್ಯ ಚುನಾವಣಾ ಆಯೋಗದಿಂದ ಚುನಾವಣಾ ಕಾರ್ಯ ಚುರುಕುಗೊಂಡಿದೆ. ಇದೇ ತಿಂಗಳು 22 ರಂದು ಅಯೋಧ್ಯೆ ಮಂದಿರದ ಶಂಕುಸ್ಥಾಪನೆ ಮತ್ತು ಫೆಬ್ರವರಿ 1 ರಂದು ಮಧ್ಯಂತರ ಬಜೆಟ್ ನಂತರ ಯಾವುದೇ ಸಮಯದಲ್ಲಿ ಚುನಾವಣಾ ದಿನಾಂಕವನ್ನು ಘೋಷಿಸಬಹುದು ಎಂದು ನಿರೀಕ್ಷಿಸಲಾಗಿದೆ.

ಮೇ ತಿಂಗಳಿನಲ್ಲಿ ನೂತನ ಸರ್ಕಾರ ಅಧಿಕಾರ ಸ್ವೀಕರಿಸುವ ನಿರೀಕ್ಷೆಯಿರುವುದರಿಂದ ಅವಧಿಗೂ ಮುನ್ನ ಚುನಾವಣೆ ನಡೆಯುವ ಸಾಧ್ಯತೆಯೂ ಇದೆ ಎಂದು ಹೇಳಲಾಗುತ್ತಿದೆ. ಏತನ್ಮಧ್ಯೆ, ಆಡಳಿತಾರೂಢ ಭಾರತೀಯ ಜನತಾ ಪಕ್ಷವು ಈ ಬಾರಿ 400 ರಿಂದ 450 ಸ್ಥಾನಗಳನ್ನು ಗಳಿಸುವ ಗುರಿ ಹೊಂದಿದೆ. ಅಂದರೆ ಚಲಾವಣೆಯಾಗುವ ಒಟ್ಟು ಮತಗಳ ಪೈಕಿ ಶೇ.50ರಷ್ಟು ಮತಗಳನ್ನು ವಶಪಡಿಸಿಕೊಳ್ಳುವ ಸಲುವಾಗಿ ಪ್ರಧಾನಿ ಮೋದಿ ಗಂಭೀರವಾಗಿ ಚಿಂತಿಸುತ್ತಿದ್ದಾರೆ.

ಇದಕ್ಕಾಗಿ ಭಾರತೀಯ ಜನತಾ ಪಕ್ಷವು 3 ವಿಭಾಗಗಳಾಗಿ ವಿಂಗಡಿಸಲಾದ ಎಲ್ಲಾ 543 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಆಯ್ಕೆ ನಡೆಸುತ್ತಿದೆ.  ಇದರಲ್ಲಿ 150 ರಿಂದ 170 ಕ್ಷೇತ್ರಗಳನ್ನು ದುರ್ಬಲ ಕ್ಷೇತ್ರಗಳೆಂದು ಪರಿಗಣಿಸಲಾಗಿದೆ.

ಬಿಜೆಪಿಗೆ ಗೆಲುವಿನ ಸಾಧ್ಯತೆಗಳು ಕಡಿಮೆ ಇರುವ ತಮಿಳುನಾಡು, ಕೇರಳ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಒಡಿಶಾ, ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ ಮುಂತಾದ 9 ಕ್ಷೇತ್ರಗಳು ಭಾರತೀಯ ಜನತಾ ಪಕ್ಷಕ್ಕೆ ದುರ್ಬಲವೆಂದು ಪರಿಗಣಿಸಲಾಗಿದೆ. ತಮಿಳುನಾಡಿನಲ್ಲಿ 36, ಆಂಧ್ರಪ್ರದೇಶದಲ್ಲಿ 25, ಮಹಾರಾಷ್ಟ್ರದಲ್ಲಿ 24, ಪಶ್ಚಿಮ ಬಂಗಾಳದಲ್ಲಿ 23, ಕೇರಳದಲ್ಲಿ 20, ಉತ್ತರ ಪ್ರದೇಶದಲ್ಲಿ 12, ಬಿಹಾರದಲ್ಲಿ 12, ಒಡಿಶಾದಲ್ಲಿ 12 ಮತ್ತು ತೆಲಂಗಾಣದಲ್ಲಿ 14 ಅತ್ಯಂತ ದುರ್ಬಲ ಕ್ಷೇತ್ರಗಳೆಂದು ಪರಿಗಣಿಸಲಾಗಿದೆ.

ಈ ಪಟ್ಟಿಗೆ ಇನ್ನೂ 20 ಕ್ಷೇತ್ರಗಳನ್ನು ಸೇರಿಸಿ ಒಟ್ಟು 160 ಕ್ಷೇತ್ರಗಳ ಮೇಲೆ ಹೆಚ್ಚಿನ ಗಮನಕೊಡಲು ಬಿಜೆಪಿ ಚಿಂತಿಸುತ್ತಿದೆ. ಈ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸುವ ಕೆಲಸವೂ ಸದ್ದಿಲ್ಲದೇ ನಡೆಯುತ್ತಿದೆ; ಎನ್ನಲಾಗುತ್ತಿದೆ. ಉತ್ತರದ ರಾಜ್ಯಗಳಲ್ಲಿ ಮಕರ ಸಂಕ್ರಾಂತಿಯವರೆಗೆ ಯಾವುದೇ ಒಳ್ಳೆಯ ಕೆಲಸವನ್ನು ಪ್ರಾರಂಭಿಸುವುದಿಲ್ಲ. 15ರ ನಂತರವೇ ಹೊಸ ಕಾರ್ಯಗಳನ್ನು ತೊಡಗಿಸಿಕೊಳ್ಳುತ್ತಾರೆ. ಹಾಗಾಗಿ ಭಾರತೀಯ ಜನತಾ ಪಕ್ಷ ಮುಂದಿನ ವಾರ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ ಎಂಬ ವರದಿಗಳಿವೆ.

ಅದರಲ್ಲೂ 15 ರಿಂದ 22ರ ನಡುವೆ ಯಾವುದೇ ದಿನದಲ್ಲಿ ಭಾರತೀಯ ಜನತಾ ಪಕ್ಷ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸುವ ನಿರೀಕ್ಷೆಯಿದೆ. ಮುಂದಿನ ಹಂತದಲ್ಲಿ ಭಾರತೀಯ ಜನತಾ ಪಕ್ಷವು ಫೆಬ್ರವರಿ 14 ರೊಳಗೆ ಅಭ್ಯರ್ಥಿಗಳ 2ನೇ ಪಟ್ಟಿಯನ್ನು ಪ್ರಕಟಿಸಲಿದೆ ಎಂದು ಬಿಹಾರ ರಾಜ್ಯ ಬಿಜೆಪಿ ಹಿರಿಯ ಮುಖಂಡರೊಬ್ಬರು ಹೇಳಿದ್ದಾರೆ.

ಮೊದಲ ಮತ್ತು 2ನೇ ಪಟ್ಟಿಯ ಅಭ್ಯರ್ಥಿಗಳಲ್ಲಿ ಶೇ.70 ರಿಂದ ಶೇ.75 ರಷ್ಟು ಹೊಸ ಅಭ್ಯರ್ಥಿಗಳಾಗಿರುತ್ತಾರೆ ಎಂದು ಬಿಜೆಪಿ ವಲಯದಲ್ಲಿ ಹೇಳಲಾಗುತ್ತಿದೆ. ಕರ್ನಾಟಕದಲ್ಲೂ ಅಭ್ಯರ್ಥಿಗಳ ಆಯ್ಕೆ ಸದ್ದು ಮಾಡದೆ ನಡೆಯುತ್ತಿದೆ ಎನ್ನಲಾಗಿದೆ. ಕರ್ನಾಟಕ ಬಿಜೆಪಿ ನಾಯಕರಿಗೆ ತಿಳಿಯದಂತೆ ಕೆಲವು ಪಟ್ಟಿಗಳನ್ನು ಕೇಂದ್ರ ವರಿಷ್ಠರು ಸಿದ್ಧಪಡಿಸಿದ್ದಾರೆ ಎಂದೂ ಹೇಳಲಾಗುತ್ತಿದೆ.

ರಾಜಕೀಯ

ಬೆಂಗಳೂರು: ಬೆಂಗಳೂರಿನ ಯಲಹಂಕಾದಲ್ಲಿ ಇಂದು ರಾಜ್ಯ ಬಿಜೆಪಿ ಆಯೋಜಿಸಿರುವ ಲೋಕಸಭಾ ಚುನಾವಣೆಯ ಯೋಜನಾ ಸಭೆಯನ್ನು ಉದ್ಘಾಟಿಸಲಾಯಿತು. ಮುಂಬರುವ ಲೋಕಸಭಾ ಚುನಾವಣೆ-2024ರ ಕುರಿತು ಅನುಸರಿಸಬೇಕಾದ ಕಾರ್ಯತಂತ್ರಗಳು ಹಾಗೂ ಸಂಘಟನಾತ್ಮಕ ಯೋಜನೆಗಳ ಕುರಿತು ಸುದೀರ್ಘ ಚರ್ಚೆ ನಡೆಸಲಾಯಿತು ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಯಡಿಯೂರಪ್ಪ ತಮ್ಮ ‘ಎಕ್ಸ್’ ಸೈಟ್ ನಲ್ಲಿ ಹೇಳಿಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಕೇಂದ್ರೀಯ ಸಂಸದೀಯ ಮಂಡಳಿ ಹಾಗೂ ಚುನಾವಣಾ ಸಮಿತಿ ಸದಸ್ಯರು ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು ಹಾಗೂ ರಾಜ್ಯ ಬಿಜೆಪಿ ಉಸ್ತುವಾರಿಗಳಾದ ಅರುಣ್ ಸಿಂಗ್, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯ್, ಸದಾನಂದ ಗೌಡ, ವಿರೋಧ ಪಕ್ಷ ನಾಯಕರಾದ ಆರ್.ಅಶೋಕ್, ವಿಧಾನಪರಿಷತ್ ವಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಹಾಗೂ ಪಕ್ಷದ ಪ್ರಮುಖ ನಾಯಕರು ಉಪಸ್ಥಿತರಿದ್ದರು ಎಂದು ತಿಳಿದು ಬಂದಿದೆ.

ರಾಜಕೀಯ

ಲಕ್ಷದ್ವೀಪಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ.

ನವದೆಹಲಿ: ಮಣಿಪುರದಲ್ಲಿ ಜನವರಿ 14 ರಿಂದ ಆರಂಭವಾಗಲಿರುವ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ನ್ಯಾಯ ಯಾತ್ರೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಇಂದು ದೆಹಲಿಯಲ್ಲಿ ಮಾಧ್ಯಮದವರನ್ನು ಭೇಟಿ ಮಾಡಿದರು.

ಆಗ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, “ಭಾರತ್ ಜೋಡೋ ನ್ಯಾಯ ಯಾತ್ರೆ ಜನವರಿ 14 ರಂದು ಮಣಿಪುರದ ಇಂಫಾಲ್‌ನಲ್ಲಿ ರಾಹುಲ್ ಗಾಂಧಿ ನೇತೃತ್ವದಲ್ಲಿ ಪ್ರಾರಂಭವಾಗಲಿದೆ. ಪಾದಯಾತ್ರೆಯು 15 ರಾಜ್ಯಗಳು, 110 ಜಿಲ್ಲೆಗಳು, 100 ಲೋಕಸಭೆ ಕ್ಷೇತ್ರಗಳು ಮತ್ತು 337 ವಿಧಾನಸಭಾ ಕ್ಷೇತ್ರಗಳ ಮೂಲಕ ಮುಂಬೈ ತಲುಪಲಿದೆ. ಈ ಯಾತ್ರೆಯಲ್ಲಿ ಮೋದಿ ಸರ್ಕಾರದಿಂದ ಜನರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ರಾಹುಲ್ ಗಾಂಧಿ ಮಾತನಾಡಲಿದ್ದಾರೆ.

ಸಂಸತ್ತಿನಲ್ಲಿ 28 ಪಕ್ಷಗಳ ಸದಸ್ಯರು ವಿವಿಧ ವಿಷಯಗಳ ಕುರಿತು ಪ್ರಶ್ನೆಗಳನ್ನು ಎತ್ತಿದ್ದರು. ಆದರೆ, ಕೇಂದ್ರ ಸರ್ಕಾರ ಉತ್ತರ ನೀಡದೆ 146 ಸಂಸದರನ್ನು ಅಮಾನತು ಮಾಡಿತು. ಕಳೆದ ವರ್ಷ ಮೇ ತಿಂಗಳಿನಿಂದ ಮಣಿಪುರ ಹೊತ್ತಿ ಉರಿಯುತ್ತಿದೆ. ಆದರೆ ದೇಶದ ಪ್ರಧಾನಿಯಾಗಿರುವ ಮೋದಿ ಇನ್ನೂ ಅಲ್ಲಿಗೆ ಹೋಗಲಿಲ್ಲ. ಆದರೆ ಅವರು ಬೇರೆಡೆಗೆ ಹೋಗುತ್ತಿದ್ದಾರೆ.

ಲಕ್ಷದ್ವೀಪಕ್ಕೆ ಭೇಟಿ ನೀಡಲು ಮತ್ತು ಛಾಯಾಚಿತ್ರ ತೆಗೆಯಲು ಪ್ರಧಾನಿ ಮೋದಿ ಅವರಿಗೆ ತುಂಬಾ ಸಮಯವಿದೆ. ಮಣಿಪುರಕ್ಕೆ ಹೋಗಿ ಸಂತ್ರಸ್ತರನ್ನು ಭೇಟಿಯಾಗಲು ಮಾತ್ರ ಅವರಿಗೆ ಸಮಯವಿಲ್ಲ. ಕಾರ್ಮಿಕರನ್ನು ಗುಲಾಮರನ್ನಾಗಿ ಮಾಡುವುದಕ್ಕಾಗಿಯೇ ಕೇಂದ್ರ ಸರ್ಕಾರ ಕ್ರಿಮಿನಲ್ ಮತ್ತು ಕಾರ್ಮಿಕ ಕಾನೂನುಗಳನ್ನು ಜಾರಿಗೊಳಿಸಿದೆ. ಬಿಜೆಪಿ ಸರ್ಕಾರ ಇಡಿ, ಸಿಬಿಐ, ಆದಾಯ ತೆರಿಗೆ ಇಲಾಖೆಯಂತಹ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡು ವಿರೋಧ ಪಕ್ಷದ ನಾಯಕರನ್ನು ಬೆದರಿಸುತ್ತಿದೆ” ಎಂದು ಹೇಳಿದರು.

ರಾಜಕೀಯ

ಬೆಂಗಳೂರು: ಶ್ರೀಕಾಂತ್ ಪೂಜಾರಿ ಪರ ಬಿಜೆಪಿ ಬೀದಿಗಿಳಿದಿರುವುದರಲ್ಲಿ ಕೋಮು ಬಣ್ಣ ಲೇಪಿಸಿ ಜನರನ್ನು ಪ್ರಚೋದಿಸಿ ರಾಜಕೀಯ ಲಾಭಗಳಿಸುವ ಹುನ್ನಾರವಿದೆ ಎಂದು ವೆಲ್‌ಫೇರ್ ಪಾರ್ಟಿಯ ಕರ್ನಾಟಕ ರಾಜ್ಯಾಧ್ಯಕ್ಷ ಅಡ್ವಕೇಟ್ ತಾಹೇರ್ ಹುಸೇನ್ ಹೇಳಿದ್ದಾರೆ.

ಜವಾಬ್ದಾರಿಯುತ ಪ್ರತಿಪಕ್ಷವಾಗಿ ಕಾರ್ಯಾಚರಿಸಿ ಇಲ್ಲಿನ ಬಡವರ, ರೈತರ, ನೊಂದವರ ಸಮಸ್ಯೆಗಳ ಪರವಾಗಿ ಹೋರಾಡಬೇಕಿದ್ದ ಬಿಜೆಪಿ, ಓರ್ವ 16 ಕ್ರಿಮಿನಲ್ ಮೊಕದ್ದಮೆಗಳಲ್ಲಿ ಸಿಲುಕಿರುವ ಆರೋಪಿಯ ಪರವಾಗಿ ಅಲ್ಲಲ್ಲಿ ಪ್ರತಿಭಟನೆ ನಡೆಸುವಂತಹ ಕಾರ್ಯಕ್ಕೆ ಇಳಿದಿರುವುದು ವಿಪರ್ಯಾಸ.

ಕರಸೇವಕರು ಎಂದು ಹೇಳಿಕೊಂಡು ಪ್ರಕರಣವನ್ನುಗಂಭೀರಗೊಳಿಸಿ ಪ್ರಚೋದಿಸುವ ಮೂಲಕ ಲೋಕಸಭಾ ಚುನಾವಣಾ ದಿನಗಳು ಸಮೀಪಿಸುತ್ತಿದ್ದಂತೆ ರಾಜಕೀಯ ಲಾಭ ಗಳಿಸುವ ಯತ್ನದಲ್ಲಿ ಬಿಜೆಪಿ ತೊಡಗಿದೆ. ಇಷ್ಟಕ್ಕೂ ಈ ಪ್ರತಿಭಟನಾಕಾರರು ತಾವು ನಡೆಸುತ್ತಿರುವ ಪ್ರತಿಭಟನೆಯ ಬಗ್ಗೆ ಒಮ್ಮೆ ಸ್ವಯಂ ಆತ್ಮಾವಲೋಕನ ನಡೆಸಬೇಕಾಗಿದೆ.

ರಾಜ್ಯದ ಬಿಜೆಪಿ ನಾಯಕರು ಈ ಆರೋಪಿಯ ಪರವಾಗಿ ಬೀದಿಗಿಳಿದಿರುವುದರಲ್ಲಿನ ಪ್ರಾಮಾಣಿಕತೆಯ ಬಗ್ಗೆ ಜನರಲ್ಲಿ ಅನುಮಾನವಿದೆ. ಇಲ್ಲಿನ ರೈತರ ಬಡ ಕಾರ್ಮಿಕರ ಸಮಸ್ಯೆಗಳ ಬಗ್ಗೆ ಇಷ್ಟೊಂದು ಮಹತ್ವ ನೀಡಿದ್ದರೆ ಅದಕ್ಕೊಂದು ಅರ್ಥವಿರುತ್ತಿತ್ತು ಎಂದು ಅವರು ಹೇಳಿದ್ದಾರೆ.

ರಾಜಕೀಯ

ನವದೆಹಲಿ: ಲೋಕಸಭೆ ಚುನಾವಣೆ ಸಮೀಪಿಸುತ್ತಿರುವಂತೆಯೇ ಪಕ್ಷದ ನಾಯಕರಲ್ಲಿ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಮುಂದಿನ ಮೂರು ತಿಂಗಳ ಕಾಲ ಪಕ್ಷದ ಗೆಲುವಿಗೆ ಮುಡಿಪಾಗಿಡಬೇಕು ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಒತ್ತಾಯಿಸಿದ್ದಾರೆ.

ಹಗಲಿರುಳು ಶ್ರಮಿಸಿದರೆ ಲೋಕಸಭೆ ಚುನಾವಣೆಯ ನಂತರ ಪರ್ಯಾಯ ಸರ್ಕಾರವನ್ನು ನೀಡಬಹುದು ಎಂದು ದೇಶಾದ್ಯಂತದ ಪಕ್ಷದ ನಾಯಕರ ಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದರು ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಮುಖಂಡರು ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಆಂತರಿಕ ವಿಚಾರಗಳನ್ನು ಮಾಧ್ಯಮಗಳಿಗೆ ಬಿತ್ತರಿಸದೇ ತಂಡೋಪತಂಡವಾಗಿ ಪಕ್ಷದ ಯಶಸ್ಸಿಗೆ ಶ್ರಮಿಸುವಂತೆ ಮಲ್ಲಿಕಾರ್ಜುನ ಖರ್ಗೆ ಕಿವಿಮಾತು ಹೇಳಿದರು.

“ಕಳೆದ 10 ವರ್ಷಗಳ ತನ್ನ ಸರ್ಕಾರದ ವೈಫಲ್ಯಗಳನ್ನು ಮುಚ್ಚಿಹಾಕಲು ಬಿಜೆಪಿ ಸೂಕ್ಷ್ಮ ವಿಷಯಗಳನ್ನು ಎತ್ತುತ್ತಿದೆ. ಪ್ರತಿಯೊಂದು ಸಂದರ್ಭದಲ್ಲೂ ಅವರು ಉದ್ದೇಶಪೂರ್ವಕವಾಗಿ ಕಾಂಗ್ರೆಸ್ ಅನ್ನು ಎಳೆಯುತ್ತಿದ್ದಾರೆ” ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ನರೇಂದ್ರ ಮೋದಿ ಸರ್ಕಾರ “ಆಧುನಿಕ ಭಾರತ ನಿರ್ಮಾಣದಲ್ಲಿ ಕಾಂಗ್ರೆಸ್ ಕೊಡುಗೆಯನ್ನು ನಿರ್ಲಕ್ಷಿಸುತ್ತಲೇ ಇದೆ” ಎಂದು ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದರು. ಹಾಗಾಗಿ “ಅವರಿಗೆ ತಕ್ಕ ಉತ್ತರ ನೀಡಬೇಕು” ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ರಾಜಕೀಯ

“ಮುಸ್ಲಿಮರ ನಂಬಿಕೆಗೆ-ವಿಶ್ವಾಸಕ್ಕೆ ಘಾಸಿಯುಂಟು ಮಾಡಿ, ಸಮಾಜ ಒಡೆದು ಗಲಭೆಯೆಬ್ಬಿಸಿ ಅಧಿಕಾರಕ್ಕೇರುವ ಷಡ್ಯಂತ್ರ ಇದಾಗಿದೆ. ಈ ಸಂವಿಧಾನ ವಿರೋಧಿ ಕೃತ್ಯವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು” ವೆಲ್‌ಫೇರ್ ಪಾರ್ಟಿ.

ಮುಸ್ಲಿಮರ ವಿರುದ್ದ ಕೊಳಕು ನಾಲಗೆ ಹರಿಬಿಟ್ಟು ಸಮಾಜದಲ್ಲಿ ಅಶಾಂತಿಗೆ ಕಾರಣವಾಗುತ್ತಿರುವ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪರ ವಿರುದ್ದ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ವೆಲ್‌ಫೇರ್ ಪಾರ್ಟಿ ಆಫ್ ಇಂಡಿಯಾದ ಕರ್ನಾಟಕ ರಾಜ್ಯಾಧ್ಯಕ್ಷ ಅಡ್ವಕೇಟ್ ತಾಹೇರ್ ಹುಸೇನ್ ಸರ್ಕಾರವನ್ನು ಆಗ್ರಹಿಸಿದ್ದಾರೆ .

‌ರಾಜಕೀಯದಲ್ಲಿ ಅಸ್ತಿತ್ವ ಉಳಿಸಿಕೊಳ್ಳಲು ಹೆಣಗಾಡುತ್ತಿರುವ ಈಶ್ವರಪ್ಪ, ಮುಸ್ಲಿಮರ ವಿರುದ್ದ ಕೊಳಕು ನಾಲಿಗೆ ಹೊರಚಾಚಿ ಹರಿಯಬಿಟ್ಟು ತಮ್ಮ ಹಳೆಯ ಚಾಳಿ ಮುಂದುವರಿಸಿದ್ದಾರೆ. ಲಂಗುಲಗಾಮಿಲ್ಲದೆ ಮಾತನಾಡುತ್ತಿರುವ ಈಶ್ವರಪ್ಪರ ಮಾನಸಿಕ ಆರೋಗ್ಯವನ್ನು ಪರೀಕ್ಷಿಸಲು ಸರ್ಕಾರ ಮುಂದಾಗಬೇಕು ಎಂದು ಹೇಳಿದ್ದಾರೆ.

ಮಸೀದಿ ಒಡೆದು ಪುಡಿ ಮಾಡುತ್ತೇವೆ ಎಂದು ಬಹಿರಂಗವಾಗಿ ಸರ್ಕಾರಕ್ಕೆ ಅವಾಝ್ ನೀಡಿ, ಮುಸಲ್ಮಾನ ಸಮುದಾಯವನ್ನು ಕೆಣಕುವ ಹುನ್ನಾರ ಮಾಡಿದ್ದಾರೆ. ಲೋಕಸಭಾ ಚುನಾವಣಾ ಸಿದ್ದತೆಯಲ್ಲಿರುವ ಬಿಜೆಪಿ, ಇಂತಹ ಕೋಮು ಪ್ರಚೋದಕ ಮಾತುಗಳನ್ನೇ ಅಸ್ತ್ರ ಮಾಡಿಕೊಳ್ಳುವ ಸೂಚನೆ ದಟ್ಟವಾಗಿದೆ ಎಂದು ಕಿಡಿಕಾರಿದ್ದಾರೆ.

ಕಲ್ಲಡಕ ಪ್ರಭಾಕರ್ ಭಟ್ ಮೂಲಕ ಅದಕ್ಕೆ ಚಾಲನೆ ನೀಡಿ, ಅದನ್ನು ಈಶ್ವರಪ್ಪ ಮುಂದುವರಿಸುತ್ತಿದ್ದಾರೆ. ಮುಸ್ಲಿಮರ ನಂಬಿಕೆಗೆ- ವಿಶ್ವಾಸಕ್ಕೆ ಘಾಸಿಯುಂಟು ಮಾಡಿ, ಸಮಾಜ ಒಡೆದು ಗಲಭೆಯೆಬ್ಬಿಸಿ ಅಧಿಕಾರಕ್ಕೇರುವ ಷಡ್ಯಂತ್ರ ಇದಾಗಿದೆ. ಈ ಸಂವಿಧಾನ ವಿರೋಧಿ ಕೃತ್ಯವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸದಿದ್ದರೆ ಈ ಸರಣಿ ಮುಂದುವರಿಯಲಿದೆ ಎಂದು ಅಸಮಾಧಾನವನ್ನು ಹೊರ ಹಾಕಿದ್ದಾರೆ.

ಬಾಯಲ್ಲಿ ಶ್ರೀರಾಮನ ಹೆಸರು ಹೇಳಿಕೊಂಡು, ರಾಕ್ಷಸೀಯ ಮುಖ ಪ್ರದರ್ಶಿಸುವ ಮೂಲಕ ಈಶ್ವರಪ್ಪ ವರಿಷ್ಟರ ಕೃಪೆ ಗಿಟ್ಟಿಸಲು ಹವಣಿಸುತ್ತಿದ್ದಾರೆ. ಈಗಾಗಲೇ ಮೂಲೆಗುಂಪಾಗಿರುವ ಈಶ್ವರಪ್ಪರ ಬಳಿ ಕೊಳಕು ನಾಲಿಗೆ ಮಾತ್ರ ಅಸ್ತ್ರವಾಗಿದೆ. ಮಗನ ರಾಜಕೀಯ ಭವಿಷ್ಯದ ದೃಷ್ಟಿಯಿಂದ ಅದನ್ನು ಪ್ರಯೋಗಿಸುತ್ತಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.

ಇವರನ್ನು ಬಂಧಿಸಿ ಈ ರಾಜ್ಯದ ಜನರ ಹಿತ ಹಾಗೂ ನೆಮ್ಮದಿಯನ್ನು ಕಾಪಾಡಲು ಸರ್ಕಾರ ಬದ್ದವಾಗಿರಬೇಕು. ಸರ್ಕಾರ ಇಂತಹ ಘಟನೆಗಳನ್ನು ಗಂಭೀರವಾಗಿ ಪರಿಗಣಿಸದೇ ಇರವುದರಿಂದ ಇಂಥ ಸಮಾಜ ಘಾತಕ ಶಕ್ತಿಗಳಿಗೆ ಧ್ಯರ್ಯ ಸಿಗುತಿದ್ದೆ. ರಾಜಕೀಯ ಲೆಕ್ಕಚಾರ ಬಿಟ್ಟು ಸರ್ಕಾರ ಸಮಾಜದ ಹಿತದೃಷ್ಟಿಯಿಂದ ಕಠಿಣ ಕ್ರಮ ಜರುಗಿಸಬೇಕೆಂದು ಅವರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ರಾಜಕೀಯ

ಬೆಂಗಳೂರು: ಶ್ರೀರಂಗಪಟ್ಟಣದ ಹನುಮಯಾತ್ರೆಯ ಸಂದರ್ಭದಲ್ಲಿ ಮಂಡ್ಯದ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದ ಕಲ್ಲಡ್ಕ ಪ್ರಭಾಕರ್ ಭಟ್, ಮುಸ್ಲಿಂ ಮಹಿಳೆಯರ ಬಗ್ಗೆ ಅಸಾಂವಿಧಾನಿಕ ಮತ್ತು ಅಸಹ್ಯವಾದ ಅಶ್ಲೀಲ ಮಾತುಗಳನ್ನಾಡಿರುವುದನ್ನು ವೆಲ್‌ಫೇರ್ ಪಾರ್ಟಿ ಮಹಿಳಾ ವಿಭಾಗದ ರಾಜ್ಯ ಘಟಕದ ಅಧ್ಯಕ್ಷೆ ಸಬೀಹಾ ಪಟೇಲ್ ತೀವ್ರವಾಗಿ ಖಂಡಿಸಿದ್ದಾರೆ.

“ಪದೇ ಪದೇ ಒಂದು ಸಮುದಾಯದ ವಿರುದ್ದ ಪ್ರಚೋದನಾಕಾರಿ ಹೇಳಿಕೆಗಳನ್ನು ಕೊಡುತ್ತಿರುವ ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ರಾಜ್ಯ ಸರಕಾರ ಯಾವುದೇ ಕ್ರಮ ಯಾಕೆ ತೆಗೆದುಕೊಳ್ಳುತ್ತಿಲ್ಲ? ವಿಶೇಷವಾಗಿ ಅಲ್ಪಸಂಖ್ಯಾತ ಹಿಂದುಳಿದ ವರ್ಗಗಳ ಮಹಿಳೆಯರ ಪರವಾಗಿ ಸಹಾನುಭೂತಿ ತೋರಿಸುವ ರಾಜ್ಯ ಸರ್ಕಾರ ಈಗ ಕೇವಲ ಮೂಕ ಪ್ರೇಕ್ಷಕವಾಗಿದೆ. ಇಂತಹ ತುಚ್ಛ ಹೇಳಿಕೆ ಕೊಟ್ಟ ಕಲ್ಲಡ್ಕ ಪ್ರಭಾಕರ್ ಭಟ್ ಕೇವಲ ಮುಸ್ಲಿಂ ಸಮುದಾಯದ ಮಹಿಳೆಯರಿಗೆ ಮಾತ್ರ ಹೇಳಿದ ಮಾತುಗಳಲ್ಲ ಬದಲಾಗಿ ಇದು ಇಡೀ ಮಹಿಳಾ ಸಮಾಜಕ್ಕೆ ಅವಮಾನ ಮಾಡಿದ ಹೇಳಿಕೆಯಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಸ್ತ್ರೀ ವಿರೋಧಿಯಾದ ಇವರು ಈ ಹಿಂದೆ ಎಷ್ಟೋ ಬಾರಿ ಹಿಂದೂ ಮಹಿಳೆಯರಿಗೆ ಅಪಮಾನ ಮಾಡಿದ್ದಾರೆ. ‘ಮುಸ್ಲಿಂ ಯುವಕರು ಸೆಂಟ್ ಹೊಡೆದು ಬಂದರೆ ಹಿಂದೂ ಯುವತಿಯರು ಅವರ ಹಿಂದೆ ಓಡಿ ಹೋಗುತ್ತಾರೆ’ ಎಂದು ಈ ಹಿಂದೆ ಅಸಭ್ಯ ಹೇಳಿಕೆಯೊಂದನ್ನು ನೀಡಿದ್ದರು. ಇನ್ನೊಂದು ಕಡೆ ಕ್ರಿಶ್ಚಿಯನ್ ಮಹಿಳೆಯರಿಗೆ ಮತ್ತು ಅವರ ಸೇವೆಗಳನ್ನು ಕೂಡಾ ವ್ಯಂಗ್ಯ ಮಾಡಿದ್ದಾರೆ. ಒಂದು ಸಂದರ್ಭದಲ್ಲಿ ಮಸೀದಿ ದರ್ಶನಕ್ಕೆ ಹೋದ ಸಹಧರ್ಮೀಯ ಮಹಿಳೆಯರಿಗೂ ಅಶ್ಲೀಲವಾದ ಮಾತುಗಳನ್ನಾಡಿದ್ದರು. ಇದು ಚುನಾವಣಾ ದಿನಗಳು ಹತ್ತಿರ ಬರುವಾಗ ಕೋಮುವಾದದ ವಿಷ ಬೀಜ ಬಿತ್ತುವ ಹುನ್ನಾರವಾಗಿದೆ.  ಒಂದು ಧಾರ್ಮಿಕ ಕಾರ್ಯಕ್ರಮದಲ್ಲಿ ಇಂತಹ ಕೊಳಕು ಮಾತುಗಳು ಅವರ ಸಂಸ್ಕಾರವನ್ನು ಬಿಂಬಿಸುತ್ತಿದೆ” ಎಂದು ಹೇಳಿದ್ದಾರೆ.

ಮುಸ್ಲಿಂ ಸಮುದಾಯದ ಮಹಿಳೆಯರಿಗೆ ಯಾರೂ ದಾರಿ ತೋರಿಸುವ ಅವಶ್ಯಕತೆ ಇಲ್ಲ. ಸುಮಾರು 14 ನೂರು ವರ್ಷಗಳ  ಹಿಂದೆಯೇ ಇಸ್ಲಾಂ ಧರ್ಮ ಮಹಿಳೆಯ ಸ್ಥಾನಮಾನ ಹಾಗೂ ಅವಳ ಹಕ್ಕುಗಳನ್ನು ಎತ್ತಿ ಹಿಡಿದಿದೆ. ತ್ರಿವಳಿ ತಲಾಖನ್ನು ಮುಂದಿಟ್ಟುಕೊಂಡು ಯಾವುದೇ ಅಧ್ಯಯನ ಇಲ್ಲದೆ ಇಂತಹ ಹೇಳಿಕೆಗಳನ್ನು ಕೊಡುವುದು ಅಸಾಂವಿಧಾನಿಕ. ಹಲವಾರು ಧಾರ್ಮಿಕ ಸಮಾರಂಭಗಳಲ್ಲಿ ಪಾಲ್ಗೊಳ್ಳುತ್ತಿರುವ ಇವರು ಎಂತಹಾ ಧರ್ಮರಕ್ಷಕ? ಎಂತಹಾ ಮುಖಂಡ? ಎನ್ನುವುದು ಒಂದು ದೊಡ್ಡ ಪ್ರಶ್ನೆಯಾಗಿದೆ. ಒಂದು ಸಮುದಾಯವನ್ನು ಅಶ್ಲೀಲವಾಗಿ ನಿಂದಿಸಿದರೆ ಅವರ ವಿರುದ್ಧ ಜಾಮೀನು ರಹಿತ ಕೇಸ್ ದಾಖಲಾಗಬೇಕು. ರಾಜ್ಯದಲ್ಲಿ ಹಿಜಾಬ್ ವಿಚಾರವನ್ನೆತ್ತಿಕೊಂಡು ರಾಜಕೀಯ ನಡೆಸುತ್ತಿರುವ ಸಂದರ್ಭದಲ್ಲಿ ಪುನಃ ಹೇಳಲಿಕ್ಕಾಗದ ಅಶ್ಲೀಲವಾದ ಮಾತುಗಳನ್ನಾಡಿ ಮುಸ್ಲಿಂ ಯುವತಿ ಮುಸ್ಕಾನ್ ಅವರಿಗೆ ಬೆದರಿಕೆ ಕೂಡ ಹಾಕಿದ್ದಾರೆ. ಇದೇ ತರಹ ಇನ್ನೂ ಹಲವಾರು ಪ್ರಕರಣಗಳನ್ನು ಇವರ ವಿರುದ್ಧ ದಾಖಲಿಸಬೇಕಾಗಿದೆ” ಎಂದು ಆಗ್ರಹಿಸಿದ್ದಾರೆ.

“ಇಂತಹ ಪ್ರಚೋದನಾಕಾರಿ ಹೇಳಿಕೆಗಳು ನಿಲ್ಲದಿದ್ದರೆ, ಸರ್ಕಾರ ಇಂತಹ ಅಸಂಸ್ಕೃತಿಯ ಮುಖಂಡರುಗಳ ವಿರುದ್ಧ ತಕ್ಷಣ ಕಠಿಣ ಕ್ರಮ ತೆಗೆದುಕೊಳ್ಳದೇ ಇದ್ದರೆ ವೆಲ್‌ಫೇರ್ ಪಾರ್ಟಿಯ ರಾಜ್ಯ ಮಹಿಳಾ ಘಟಕದ ವತಿಯಿಂದ ನೆಲದ ಕಾನೂನಿನ ಅಡಿಯಲ್ಲಿ ಉಗ್ರ ಹೋರಾಟವನ್ನು ಮಾಡುತ್ತೇವೆ. ಕಲ್ಲಡ್ಕ ಪ್ರಭಾಕರ್ ಭಟ್ ತಮ್ಮ ಈ ಅಶ್ಲೀಲವಾದ ಹೇಳಿಕೆಯನ್ನು ಕೂಡಲೇ ವಾಪಸ್ ಪಡೆದು ಸಾರ್ವಜನಿಕವಾಗಿ ಮಹಿಳೆಯರಲ್ಲಿ ಕ್ಷಮೆ ಯಾಚಿಸಬೇಕು” ಎಂದು ವೆಲ್‌ಫೇರ್ ಪಾರ್ಟಿಯ ರಾಜ್ಯ ಮಹಿಳಾ ವಿಭಾಗ ಸಬೀಹಾ ಪಟೇಲ್ ಆಗ್ರಹಿಸಿದ್ದಾರೆ.