ರಾಜಕೀಯ Archives » Page 22 of 47 » Dynamic Leader
October 24, 2024
Home Archive by category ರಾಜಕೀಯ (Page 22)

ರಾಜಕೀಯ

ರಾಜಕೀಯ

ಡಿ.ಸಿ.ಪ್ರಕಾಶ್, ಸಂಪಾದಕರು

ಸಂಸತ್ತು ಮತ್ತು ಶಾಸಕಾಂಗಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವ ಯೋಜನೆಯನ್ನು ಪರಿಚಯಿಸುವ ಪ್ರಯತ್ನಗಳು ಈಗ ಪ್ರಾರಂಭವಾಗಿದ್ದರೂ, ಇದು 2029 ರಲ್ಲಿ ಜಾರಿಗೆ ಬರಲಿದೆ ಎಂದು ಹೇಳಲಾಗಿದೆ.

ಏಕಕಾಲಕ್ಕೆ ಸಂಸತ್ತು ಮತ್ತು ವಿಧಾನಸಭೆಗಳಿಗೆ ಚುನಾವಣೆ ನಡೆಸುವ ಯೋಜನೆಯನ್ನು ಜಾರಿಗೆ ತರಲು ಕೇಂದ್ರದ ಬಿಜೆಪಿ ಸರ್ಕಾರ ಬಹಳ ದಿನಗಳಿಂದ ಮಾತನಾಡುತ್ತಿದೆ. ಈಗ ಅದನ್ನು ಕಾರ್ಯರೂಪಕ್ಕೆ ತರುವ ಕೆಲಸದಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದೆ. ಸಂಸತ್ತಿನ ವಿಶೇಷ ಅಧಿವೇಶನದ ಘೋಷಣೆಯಾದಾಗಲೇ ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ‘ಒಂದು ದೇಶ; ಒಂದು ಚುನಾವಣೆ’ ಮಸೂದೆ ಮಂಡಿಸಲು ಮುಂದಾಗಿದೆ ಎಂಬ ಮಾತುಗಳೂ ಕೇಳಿ ಬಂದಿದ್ದವು.

ಆದರೆ, ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಯಾವುದೇ ಮಸೂದೆ ಮಂಡನೆಯಾಗಲಿಲ್ಲ. ಬದಲಾಗಿ, ಕೇಂದ್ರ ಸರ್ಕಾರವು ‘ಒಂದು ದೇಶ; ಒಂದು ಚುನಾವಣೆ’ ಯೋಜನೆಯನ್ನು ಪರಿಶೀಲಿಸಲು ಮಾಜಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿತು. ಕೇಂದ್ರ ಗೃಹ ಸಚಿವ ಅಮಿತ್ ಶಾ, ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್, ಹಿರಿಯ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ, ರಾಜ್ಯಸಭಾ ಮಾಜಿ ಅಧ್ಯಕ್ಷ ಗುಲಾಂ ನಬಿ ಆಜಾದ್ ಮತ್ತು ಇತರರು ಇದರ ಸದಸ್ಯರಾಗಿದ್ದಾರೆ.

ಪ್ರಸ್ತುತ, ಕಾನೂನು ಆಯೋಗವು ಸಂಸತ್ತು ಮತ್ತು ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವ ಸೂತ್ರವನ್ನು ರೂಪಿಸುತ್ತಿದ್ದು, ಈ ಯೋಜನೆಯು 2029ರ ಹೊತ್ತಿಗೆ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಕಾರ್ಯಗಳು ನಡೆಯುತ್ತಿವೆ ಎಂದು ವರದಿಗಳು ಹೇಳುತ್ತಿವೆ. ಸಂಸತ್ತು ಮತ್ತು ವಿಧಾನಸಭೆಗಳ ಜೊತೆಗೆ ಸ್ಥಳೀಯ ಸಂಸ್ಥೆಗಳಿಗೂ ಏಕಕಾಲದಲ್ಲಿ ಚುನಾವಣೆ ನಡೆಸುವ ಸಾಧ್ಯತೆಯನ್ನು ಪರಿಶೀಲಿಸುವ ಕಾರ್ಯವನ್ನು ಕಾನೂನು ಆಯೋಗಕ್ಕೆ ವಹಿಸಬಹುದು ಎಂಬ ವರದಿಗಳೂ ಇವೆ.

ಸಂಸತ್ತು, ವಿಧಾನಸಭೆ ಹಾಗೂ ಸ್ಥಳೀಯ ಸಂಸ್ಥೆಗಳಿಗೆ ಏಕಕಾಲಕ್ಕೆ ಚುನಾವಣೆ ನಡೆದರೆ ಸಮಯ, ವೆಚ್ಚ ತಗ್ಗಲಿದೆ ಎಂಬುದು ಕೇಂದ್ರ ಬಿಜೆಪಿ ಸರ್ಕಾರದ ಅಭಿಪ್ರಾಯ. ಮತದಾರರು ಒಮ್ಮೆ ಮತಗಟ್ಟೆಗೆ ಹೋದರೆ ಸಂಸತ್ತು, ವಿಧಾನಸಭೆ, ಸ್ಥಳೀಯ ಸಂಸ್ಥೆಗೆ ಏಕಕಾಲಕ್ಕೆ ಮತ ಚಲಾಯಿಸಬಹುದು ಎನ್ನುತ್ತಾರೆ ಆಡಳಿತಗಾರರು. ಈ ಸಂಬಂಧ ಕಾನೂನು ಆಯೋಗದ ವರದಿ ಇನ್ನಷ್ಟೇ ಸಿದ್ಧವಾಗಬೇಕಿದೆ.

‘ಒಂದು ದೇಶ; ಒಂದು ಚುನಾವಣೆ’ ಯೋಜನೆ ಜಾರಿಗೆ ಕೇಂದ್ರ ಸರ್ಕಾರ ಗಂಭೀರ ಪ್ರಯತ್ನ ನಡೆಸುತ್ತಿದೆ. ಇತ್ತೀಚೆಗೆ ದೆಹಲಿಯಲ್ಲಿ ಉನ್ನತ ಮಟ್ಟದ ಸಮಿತಿಯ ಸಭೆ ನಡೆಯಿತು. ಆ ಸಭೆಯಲ್ಲಿ, ಕೇಂದ್ರ ಕಾನೂನು ಆಯೋಗ, ಮುಖ್ಯ ಚುನಾವಣಾ ಆಯೋಗ ಮತ್ತು ರಾಜಕೀಯ ಪಕ್ಷಗಳ ಅಭಿಪ್ರಾಯ ಕೇಳಲು ನಿರ್ಧರಿಸಲಾಗಿದೆ. ಸಂಸತ್ತು ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸಬೇಕೆಂಬ ಬೇಡಿಕೆ 1983ರಲ್ಲೇ ಹುಟ್ಟಿಕೊಂಡಿತ್ತು. ಅಂದಿನ ಪ್ರಧಾನಿ ಇಂದಿರಾಗಾಂಧಿ ನೇತೃತ್ವದ ಕೇಂದ್ರ ಸರಕಾರ ಇದಕ್ಕೆ ಮಹತ್ವ ನೀಡಲಿಲ್ಲ.

ನಂತರ 1999ರಲ್ಲಿ, ಭಾರತದ ಕಾನೂನು ಆಯೋಗವು ಸಂಸತ್ತು ಮತ್ತು ರಾಜ್ಯ ಶಾಸಕಾಂಗಗಳಿಗೆ ಏಕಕಾಲದಲ್ಲಿ ಚುನಾವಣೆಗಳನ್ನು ನಡೆಸಲು ಶಿಫಾರಸು ಮಾಡಿತು. ಆಗ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ ಅಧಿಕಾರದಲ್ಲಿತ್ತು. ನಂತರ 2014ರ ಲೋಕಸಭೆ ಚುನಾವಣೆ ವೇಳೆ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ‘ಒಂದು ದೇಶ; ಒಂದು ಚುನಾವಣೆ’ ಎಂಬ ಭರವಸೆಯನ್ನು ನೀಡಿತ್ತು.

ಇದೀಗ ಕೇಂದ್ರ ಬಿಜೆಪಿ ಸರ್ಕಾರ ಆ ಭರವಸೆಯನ್ನು ಜಾರಿಗೆ ತರಲು ಪ್ರಯತ್ನ ನಡೆಸಿದೆ. ಆದರೆ ಕೇಂದ್ರ ಸರ್ಕಾರದ ಈ ಕ್ರಮಕ್ಕೆ ವಿರೋಧ ಪಕ್ಷಗಳು ವಿರೋಧ ವ್ಯಕ್ತಪಡಿಸುತ್ತಿವೆ. ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ, ‘ಭಾರತವು ರಾಜ್ಯಗಳ ಒಕ್ಕೂಟವಾಗಿದೆ. ‘ಒಂದು ದೇಶ; ಒಂದು ಚುನಾವಣೆ’ಯ ಕಲ್ಪನೆಯು ಎಲ್ಲಾ ರಾಜ್ಯಗಳ ಮೇಲಿನ ದಾಳಿಯಾಗಿದೆ” ಎಂದು ಎಕ್ಸ್ ಟ್ವಿಟರ್‌ನಲ್ಲಿ ಹೇಳಿದ್ದಾರೆ.

‘ಒಂದು ದೇಶ, ಒಂದೇ ಚುನಾವಣೆಯಾದರೆ ಸಾಮಾನ್ಯ ಜನರಿಗೆ ಏನು ಪ್ರಯೋಜನ. ಇದರ ಬದಲಾಗಿ ನಮಗೆ ಒಂದು ದೇಶ; ಒಂದು ಶಿಕ್ಷಣ, ಒಂದು ದೇಶ; ಒಂದು ಗುಣಮಟ್ಟದ ವೈದ್ಯಕೀಯ ಚಿಕಿತ್ಸೆ ಮುಂತಾದವುಗಳೇ ಬೇಕು’ ಎಂದು ದೆಹಲಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

ರಾಜಕೀಯ

ಬೆಂಗಳೂರು: ಜಾತ್ಯತೀತ ಎನ್ನುವ ಟ್ಯಾಗ್ ಲೈನ್ ಇಟ್ಟುಕೊಂಡು ಜಾತಿ ಸಭೆಗಳನ್ನು ಮಾಡಿ ಕುಕ್ಕರ್, ಇಸ್ತ್ರೀ ಪೆಟ್ಟಿಗೆ ಹಂಚುವುದು ಜಾತ್ಯತೀತವೇ? ಅಹಿಂದ ಎಂದು ಹೇಳಿಕೊಂಡು ಧರ್ಮಕ್ಕೊಂದು ಸಮಾವೇಶ, ಜಾತಿಗೊಂದು ಸಭೆ ನಡೆಸುವುದು ಜಾತ್ಯತೀತವೇ? ಸ್ವಲ್ಪ ಹೇಳುವಿರಾ ಸಿದ್ದರಾಮಯ್ಯನವರೇ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ.   

ಕೋಮುವಾದಿ ಎಂದು ಬಿಜೆಪಿಯನ್ನು ಹೀಗಳೆಯುತ್ತಾ ಆ ಪದದಿಂದಲೇ ರಾಜಕೀಯ ಲಾಭ ಗಿಟ್ಟಿಸಿಕೊಳ್ಳುವ ಡೋಂಗಿ ಸಮಾಜವಾದಿ ನೀವು. ನಿಮ್ಮ ಅಡ್ಜಸ್ಟ್ ಮೆಂಟ್ ರಾಜಕಾರಣ ಜಗತ್ಪ್ರಸಿದ್ಧಿ. I.N.D.I.A ಎಂಬ ಮೈತ್ರಿಕೂಟದಲ್ಲಿ ಅದೇ ಬಿಜೆಪಿಯ ಬಿ ಟೀಂಗಳನ್ನು ಇಟ್ಟುಕೊಂಡು, ಅವುಗಳ ಬಾಲಂಗೋಚಿ ಆಗಿರುವ ಕಾಂಗ್ರೆಸ್ ಪಕ್ಷ ಜಾತ್ಯತೀತವೇ? ಉತ್ತರಿಸಿ ಮುಖ್ಯಮಂತ್ರಿಗಳೇ? ಎಂದು ವ್ಯಂಗ್ಯವಾಡಿದ್ದಾರೆ.

ಸ್ಟಾಲಿನ್, ಮಮತಾ ಬ್ಯಾನರ್ಜಿ, ಫಾರೂಕ್ ಅಬ್ದುಲ್ಲಾ, ನಿತೀಶ್ ಕುಮಾರ್, ಹೇಮಂತ್ ಸೊರೇನ್, ವೈಕೋ, ಮೆಹಬೂಬಾ ಮುಫ್ತಿ, ಅಖೈರಿಗೆ ಶಿವಸೇನೆಯ ಉದ್ಧವ್ ಠಾಕ್ರೆ ಇವರೆಲ್ಲರೂ ಬಿಜೆಪಿ ಪಡಸಾಲೆಯಲ್ಲಿ ಪೊಗದಸ್ತಾಗಿ ಅಧಿಕಾರದ ಭೋಜನ ಉಂಡವರಲ್ಲವೇ? ಅವರ ಪಕ್ಕ ಕುರ್ಚಿ ಹಾಕಿಕೊಂಡು ಕೂರಲು ನಿಮಗೆ ನಾಚಿಕೆ ಆಗುವುದಿಲ್ಲವೇ? ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ: ಖಲಿಸ್ತಾನಿ ಪ್ರತ್ಯೇಕತಾವಾದಿ ನಿಜ್ಜರ್ ಹತ್ಯೆ ಪ್ರಕರಣದ ಪ್ರಮುಖ ಮಾಹಿತಿಯನ್ನು ಕೆನಡಾ ಹಂಚಿಕೊಂಡರೆ ತನಿಖೆಗೆ ಸಿದ್ಧ!

2006ರಲ್ಲಿ ಜಿಜೆಪಿ ಜತೆ ಸರಕಾರ ರಚಿಸಿದ ಏಕೈಕ ಕಾರಣಕ್ಕೆ ಬಿಜೆಪಿ ಬಿ ಟೀಂ ಎಂದು ಜೆಡಿಎಸ್ ಗೆ ಮುದ್ರೆ ಹಾಕಿದಿರಿ. 2018ರಲ್ಲಿ ಅದೇ ಬಿ ಟೀಂ ಜತೆ ಸರಕಾರ ರಚಿಸಲು ಮಾನ್ಯ ದೇವೇಗೌಡರ ಮನೆಗೆ ಬಂದು ಸಾಲಾಗಿ ಕೈಕಟ್ಟಿ ನಿಂತುಕೊಂಡಿರಿ!! ಮರೆತಿರಾ ಛದ್ಮವೇಷಧಾರಿ? ಪಾಪ.. ನಿಮಗೆ ಕೋಮುವಾದ, ಜಾತ್ಯತೀತ ಸಿದ್ಧಾಂತದ ಕನಸು ಈಗ ಬಿದ್ದಿದೆ. ನಿಮ್ಮ ರಾಜಕೀಯ ಬದುಕಿಗಾಗಿ ಜಾತಿಜಾತಿಗಳನ್ನು ಒಡೆದು ಬೆಂಕಿ ಇಟ್ಟು ಆ ಕೆನ್ನಾಲಗೆಯಲ್ಲೇ ಚಳಿ ಕಾಯಿಸಿಕೊಳ್ಳುವುದಷ್ಟೇ ನಿಮಗೆ ಗೊತ್ತು ಎಂದು ಮೂದಲಿಸಿದ್ದಾರೆ.

ಜಾತ್ಯತೀತ ಎನ್ನುವುದು ನಾಲಿಗೆ ಮೇಲಿನ ಮಾತಲ್ಲ, ಹೃದಯದ ಆಳದಲ್ಲಿರುವ ನಿಷ್ಠೆ. ಸ್ವಾರ್ಥ ರಾಜಕಾರಣವನ್ನೇ ಹಾಸಿಹೊದ್ದು, ಅಧಿಕಾರ ದಾಹವೇ ಹಾಸುಹೊಕ್ಕಾಗಿರುವ ನಿಮಗೆ ಜಾತ್ಯತೀತತೆ ಕೇವಲ ಭಾಷಣದ ಸರಕಷ್ಟೇ. ಜಾತ್ಯತೀತತೆ ಕುರಿತು ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ದೇವೇಗೌಡರು ಹಾಗೂ ನಾನು ಈಗಾಗಲೇ ಸ್ಪಷ್ಟವಾಗಿ ಹೇಳಿದ್ದೇವೆ, ಅದೂ ಜನರಿಗೆ? ನಮ್ಮ ಬದ್ಧತೆ, ಅಚಲತೆ, ಜಾತ್ಯತೀತತೆಯನ್ನು ಪ್ರಶ್ನಿಸುವ ಯೋಗ್ಯತೆ ನಿಮಗೆ ಖಂಡಿತಾ ಇಲ್ಲ. ಈ ಗುಣಗಳು ನಿಮಗೆ ಅನ್ವಯ ಆಗುವುದೂ ಇಲ್ಲ. ಏನಂತೀರಿ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಖಾರವಾಗಿ ಪ್ರಶ್ನಿಸಿದ್ದಾರೆ.

ರಾಜಕೀಯ

ಡಿ.ಸಿ.ಪ್ರಕಾಶ್ ಸಂಪಾದಕರು

ಮಧ್ಯಪ್ರದೇಶದಲ್ಲಿ ಸೋಲನ್ನು ತಪ್ಪಿಸಲು ಬಿಜೆಪಿಯಿಂದ ಕೇಂದ್ರ ಸಚಿವರಿಗೆ ಶಾಸಕ ಟಿಕೆಟ್ ನೀಡಲಾಗಿದೆ. ಮಧ್ಯಪ್ರದೇಶದಲ್ಲಿ 2018ರ ವಿಧಾನಸಭಾ ಚುನಾವಣೆಯಲ್ಲಿ ಒಟ್ಟು 230 ಸ್ಥಳಗಳಲ್ಲಿ ಕಾಂಗ್ರೆಸ್ ಪಕ್ಷ 114 ಸ್ಥಾನಗಳನ್ನು ಗೆದ್ದುಕೊಂಡಿತು. ಆ ನಂತರ ಸಣ್ಣ ಪಕ್ಷಗಳ ಬೆಂಬಲದೊಂದಿಗೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿತ್ತು.

ಆದರೆ ಕಳೆದ 2020ರಲ್ಲಿ 6 ಸಚಿವರು ಸೇರಿದಂತೆ 22 ಶಾಸಕರು ಜ್ಯೋತಿರಾದಿತ್ಯ ಸಿಂಧಿಯಾ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷವನ್ನು ತೊರೆದು ಬಿಜೆಪಿ ಸೇರಿದರು. ಇದರಿಂದ ಕಾಂಗ್ರೆಸ್ ಸರ್ಕಾರ ಉರುಳಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದಿತು. ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದಲೂ ಅಲ್ಲಿ ಅಸಮಾಧಾನದ ಅಲೆ ಎದ್ದಿದೆ.

ಸದ್ಯದಲ್ಲೇ ಅಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವುದರಿಂದ ಕಾಂಗ್ರೆಸ್ ಬಹುಮತಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆದ್ದು ಅಧಿಕಾರಕ್ಕೆ ಬರಲಿದೆ ಎಂದು ಇತ್ತೀಚಿನ ಸಮೀಕ್ಷೆಗಳು ಬಹಿರಂಗಪಡಿಸಿವೆ. ಇದರಿಂದ ಬಿಜೆಪಿ ನಾಯಕತ್ವ ತೀವ್ರ ಆಘಾತಕ್ಕೊಳಗಾಗಿದೆ.

ಈ ಹಿನ್ನಲೆಯಲ್ಲಿ, ಮಧ್ಯಪ್ರದೇಶದಲ್ಲಿ ಸೋಲು ತಪ್ಪಿಸಲು ಬಿಜೆಪಿಯಿಂದ ಕೇಂದ್ರ ಸಚಿವರಿಗೆ ವಿಧಾನಸಭೆಗೆ ಟಿಕೆಟ್ ನೀಡಲಾಗಿದೆ. ಸದ್ಯದಲ್ಲೇ ವಿಧಾನಸಭೆ ಚುನಾವಣೆ ನಡೆಯಲಿದ್ದು, ಕೇಂದ್ರ ಸಚಿವರಾದ ನರೇಂದ್ರ ಸಿಂಗ್ ತೋಮರ್, ಪ್ರಹ್ಲಾದ್ ಸಿಂಗ್ ಪಟೇಲ್ ಮತ್ತು ಫಗನ್ ಸಿಂಗ್ ಕುಲಸ್ತೆ ಸೇರಿದಂತೆ 7 ಸಂಸದರನ್ನು ಬಿಜೆಪಿ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳನ್ನಾಗಿ ಘೋಷಿಸಿದೆ.

ವಿಧಾನಸಭಾ ಚುನಾವಣೆಯಲ್ಲಿ ಕೇಂದ್ರ ಸಚಿವರನ್ನು ಅಭ್ಯರ್ಥಿಗಳನ್ನಾಗಿ ಘೋಷಿಸುವ ಮೂಲಕ ಬಿಜೆಪಿಗೆ ಸೋಲಿನ ಭಯ ಕಾಡುತ್ತಿದೆ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಿದ್ದಾರೆ. ಈಗಾಗಲೇ ಅಲ್ಲಿ ಬಿಜೆಪಿ ವರ್ಚಸ್ಸು ಕುಸಿದಿದ್ದು, ಜನರಿಗೆ ಒಂದಷ್ಟು ಪರಿಚಿತ ಮುಖಗಳನ್ನು ಬಳಸಿಕೊಂಡರೆ ಅಲ್ಲಿ ಆಗಿರುವ ಹಾನಿಯನ್ನು ಸ್ವಲ್ಪ ಕಡಿಮೆ ಮಾಡಬಹುದು ಎಂದು ಬಿಜೆಪಿ ಭಾವಿಸಿದೆ ಎನ್ನಲಾಗಿದೆ.

ರಾಜಕೀಯ

ಬೆಂಗಳೂರು: ಕಾವೇರಿ ವಿವಾದ ಕುರಿತಂತೆ ರಾಜ್ಯ ಕಬ್ಬು ಬೆಳೆಗಾರರ ರಾಜ್ಯಾಧ್ಯಕ್ಷರಾದ ಕುರುಬೂರು ಶಾಂತಕುಮಾರ್ ಹಾಗೂ ಮುಖ್ಯಮಂತ್ರಿ ಚಂದ್ರು ಅವರ ನೇತೃತ್ವದ ಹೋರಾಟಗಾರರ ನಿಯೋಗದೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಹತ್ವದ ಸಭೆ ಸಭೆ ನಡೆಸಿದರು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, “ತಮಿಳುನಾಡಿಗೆ ಕಾವೇರಿ ನೀರು ಬಿಡಬಾರದೆನ್ನುವುದೇ ನಮ್ಮ ನಿಲುವು. ಇಂದು ಸಂಜೆ ಕಾನೂನು ಮತ್ತು ನೀರಾವರಿ ತಜ್ಞರ ತಂಡದ ಜತೆಗಿನ ಸಭೆ ಬಳಿಕ ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುವುದು” ಎಂದು ಹೇಳಿದರು.

“ಕಾವೇರಿ ನೀರು ಹಂಚಿಕೆಗೆ ಸಂಬಂಧಿಸಿದ ವಿವಾದ ಬಗೆಹರಿಸಲು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮತ್ತು ಕಾವೇರಿ ನೀರು ನಿಯಂತ್ರಣ ಸಮಿತಿಗಳನ್ನು ಸುಪ್ರೀಂ ಕೋರ್ಟ್ ಆದೇಶದಂತೆ ಕೇಂದ್ರ ಸರ್ಕಾರ ರಚನೆ ಮಾಡಿದೆ. ಅವುಗಳು ವಾಸ್ತವ ಸ್ಥಿತಿಯ ಅವಲೋಕನ ಮಾಡಿ ತನ್ನ ಅಭಿಪ್ರಾಯವನ್ನು ನೀಡುತ್ತವೆ. ನಾವು ತಮಿಳುನಾಡಿಗೆ ಹರಿಸುವ ನೀರನ್ನು ಬಿಳಿಗುಂಡ್ಲುವಿನಲ್ಲಿ ಕೇಂದ್ರ ಜಲ ಆಯೋಗದ ಸುಪರ್ದಿಯಲ್ಲಿರುವ ಜಲಮಾಪನ ಕೇಂದ್ರ ಲೆಕ್ಕ ಹಾಕುತ್ತದೆ. ಸಾಮಾನ್ಯ ಪರಿಸ್ಥಿತಿಯಲ್ಲಿ 177.25 ಟಿಎಂಸಿ ನೀರನ್ನು ಒಂದು ವರ್ಷದಲ್ಲಿ ಬಿಡಬೇಕೆಂದು ಆದೇಶವಿದೆ. ನಮ್ಮ ರಾಜ್ಯಕ್ಕೆ 284.85 ಟಿಎಂಸಿ ನೀರು ಅಗತ್ಯವಿದೆ. ಆದರೆ ಸಂಕಷ್ಟ ಕಾಲದಲ್ಲಿ ನೀರು ಹೇಗೆ ಹಂಚಿಕೊಳ್ಳುವ ಸೂತ್ರವನ್ನು ಸುಪ್ರೀಂಕೋರ್ಟ್ ಇಲ್ಲವೆ ಪ್ರಾಧಿಕಾರ ಸಿದ್ಧಪಡಿಸಿಲ್ಲ” ಎಂದು ದೂರಿದರು.

“ಆಗಸ್ಟ್ ನಲ್ಲಿ ಮಳೆ ಕೈಕೊಟ್ಟಿದ್ದರಿಂದ ಸಮಸ್ಯೆ ಉಂಟಾಯಿತು. ಈ ತಿಂಗಳೂ ಕೂಡ ಮಳೆ ಅಷ್ಟೇನೂ ಆಗಿಲ್ಲ. ತಮಿಳುನಾಡಿಗೆ ಹಿಂಗಾರು ಮಳೆಯಿದೆ. ನಾವು ಇಲ್ಲಿಯ ವರೆಗೆ 123 ಟಿಎಂಸಿ ನೀರು ಬಿಡಬೇಕಾಗಿತ್ತು, ಈ ವರೆಗೆ 43 ಟಿಎಂಸಿ ನೀರು ಹೋಗಿದೆ. ಈಗ ನಮ್ಮ ರೈತರಿಗೂ ನೀರಿಲ್ಲ, ಕುಡಿಯಲು ಬೇಕಾದಷ್ಟು ಕೂಡಾ ನೀರಿಲ್ಲ. ಕಾವೇರಿ ಪ್ರಾಧಿಕಾರ ಪ್ರತಿ ಬಾರಿ ಸಭೆ ಕರೆದಾಗಲೂ ನಮ್ಮ ಅಧಿಕಾರಿಗಳು ಮಳೆಯ ಕೊರತೆ, ಜಲಾಶಯಗಳ ನೀರಿನ ಸಂಗ್ರಹ ಇತ್ಯಾದಿ ವಿವರಗಳನ್ನು ಮುಂದಿಟ್ಟು ನಮ್ಮ ವಾದ ಮಂಡಿಸಿದ್ದಾರೆ. ಇದರ ಹೊರತಾಗಿಯೂ ನೀಡಿರುವ ಆದೇಶವನ್ನು ವಿರೋಧಿಸುತ್ತಾ ಬಂದಿದ್ದೇವೆ; ನೀರಿಲ್ಲ ಎಂದೇ ಹೇಳಿದ್ದೇವೆ. ಸುಪ್ರೀಂಕೋರ್ಟ್ ಮುಂದೆಯೂ ಅರ್ಜಿ ಹಾಕಿ ನಮಗೆ ಬೆಳೆ ಉಳಿಸಿಕೊಳ್ಳಲು 70 ಟಿಎಂಸಿ ನೀರು, ನೀರಾವರಿಗೆ 30 ಟಿಎಂಸಿ, ಕುಡಿಯುವ ನೀರಿಗೆ ಹಾಗೂ ಕೈಗಾರಿಕೆಗಳಿಗೆ 3 ಟಿಎಂಸಿ ನೀರು ಅಗತ್ಯವಿದೆ ಎಂದು ಹೇಳಿದ್ದೇವೆ. ಒಟ್ಟು 106 ಟಿಎಂಸಿ ನೀರಿನ ಅವಶ್ಯಕತೆ ರಾಜ್ಯಕ್ಕೆ ಇದೆ. ಆದರೆ ನಮ್ಮ ಬಳಿ ಇರುವುದು ಕೇವಲ 50 ಟಿಎಂಸಿ ನೀರು. ನಮ್ಮ ಮೊದಲ ಆದ್ಯತೆ ಕುಡಿಯುವ ನೀರಾಗಿದೆ” ಎಂಬುದನ್ನು ಮನವರಿಕೆ ಮಾಡಿಕೊಟ್ಟರು.  

“ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಗಳೊಂದಿಗೆ ನೀರಾವರಿ ತಜ್ಞರು, ಮಾಜಿ ಅಡ್ವೊಕೇಟ್ ಜನರಲ್ ಗಳೊಂದಿಗೆ ಇಂದು ಸಂಜೆ ಸಭೆ ಕರೆಯಲಾಗಿದ್ದು, ಮುಂದಿನ ಕ್ರಮಗಳ ಬಗ್ಗೆ ಚರ್ಚಿಸಲಾಗುವುದು. ನೀರು ಕೊಡಬಾರದೆಂಬುದು ನಮ್ಮ ನಿಲುವು. ಅಂತಹ ನಿರ್ಧಾರ ಕೈಗೊಂಡರೆ ಏನಾಗಬಹುದೆಂಬ ಬಗ್ಗೆ ಚರ್ಚೆ ಮಾಡುತ್ತೇವೆ. ನೀರು ಬಿಡದಿದ್ದರೆ, ಜಲಾಶಯಗಳನ್ನು ಕೇಂದ್ರ ಸರ್ಕಾರ ವಶಕ್ಕೆ ಪಡೆಯಬಹುದೇ? ನ್ಯಾಯಾಂಗ ನಿಂದನೆ ಆಗಬಹುದೇ? ಸರ್ಕಾರವನ್ನೇ ವಜಾ ಮಾಡಬಹುದೇ? ಈ ಎಲ್ಲ ಪರಿಣಾಮಗಳ ಬಗ್ಗೆ ಚರ್ಚೆ ಮಾಡುತ್ತೇವೆ” ಎಂದು ಹೇಳಿದ್ದಾರೆ.

ರಾಜಕೀಯ

ಅಹಮದಾಬಾದ್: ಗುಜರಾತ್ ನಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಆಗಮಿಸಿದ್ದ ಪ್ರಧಾನಿ ಮೋದಿ ಅವರನ್ನು ಅಹಮದಾಬಾದ್ ನಗರದಲ್ಲಿ ಜನರು ಸಂಭ್ರಮದಿಂದ ಸ್ವಾಗತಿಸಿದರು.

ಎರಡು ದಿನಗಳ ಭೇಟಿಗಾಗಿ ಪ್ರಧಾನಿ ಮೋದಿ ಇಂದು ಗುಜರಾತ್‌ಗೆ ಆಗಮಿಸಿದರು. ಅವರು ಇಲ್ಲಿ ವಿವಿಧ ಕಲ್ಯಾಣ ಕಾರ್ಯಕ್ರಮಗಳನ್ನು ಉದ್ಘಾಟಿಸಿದರು. ಸಂಸತ್ತಿನ ಉಭಯ ಸದನಗಳಲ್ಲಿ ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರದ ನಂತರ ಮೋದಿ ಮೊದಲ ಬಾರಿಗೆ ಗುಜರಾತ್‌ಗೆ ಭೇಟಿ ನೀಡುತ್ತಿದ್ದಂತೆ ಅಹಮದಾಬಾದ್‌ನಲ್ಲಿ ಬೃಹತ್ ವಾಹನ ಮೆರವಣಿಗೆ ನಡೆಸಲಾಯಿತು.

ಇದನ್ನೂ ಓದಿ: ಕಾವೇರಿ ಜಲ ನಿಯಂತ್ರಣ ಸಮಿತಿ ಆದೇಶ ಕನ್ನಡಿಗರ ಪಾಲಿಗೆ ಮರಣಶಾಸನ: ಹೆಚ್.ಡಿ.ಕುಮಾರಸ್ವಾಮಿ

ರಸ್ತೆಯುದ್ದಕ್ಕೂ ಮಹಿಳೆಯರು ಉತ್ಸಾಹದಿಂದ ಮೋದಿ ಅವರನ್ನು ಸ್ವಾಗತಿಸಿದರು. ನಂತರ ಬಿಜೆಪಿ ಮಹಿಳಾ ಮೋರ್ಚಾದ ನಾಯಕಿಯರು ಪ್ರಧಾನಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ, “ಮಹಿಳಾ ಮೀಸಲಾತಿ ಮಸೂದೆ ನಾನು ನಿಮಗೆ ನೀಡಿದ ಉಡುಗರೆ” ಎಂದು ಹೇಳಿದರು.

ಇದನ್ನೂ ಓದಿ: ಬಿಜೆಪಿಯ 25 ಸಂಸದರು ಪ್ರಧಾನಿಯವರ ಮೇಲೆ ಒತ್ತಡ ಹೇರಿ ಕಾವೇರಿ ಸಮಸ್ಯೆಗೆ ಪರಿಹಾರ ದೊರಕಿಸಬೇಕು!

ರಾಜಕೀಯ

ಮೈಸೂರು: ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಕಾವೇರಿ ವಿಷಯವನ್ನು ರಾಜಕೀಯಗೊಳಿಸುತ್ತಿರುವುದು ಸ್ವಂತ ಲಾಭಕ್ಕೆ ಹೊರತು ಜನರ ಹಾಗೂ ನಾಡಿನ ಹಿತದೃಷ್ಟಿಯಿಂದ ಅಲ್ಲ ಎಂದು ಇಂದು (ಸೆ.26) ಮೈಸೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಾ ಹೇಳಿದರು.  

ಬಂದ್ ಮಾಡಲು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಅವಕಾಶವಿದೆ. ಆದರೆ ನ್ಯಾಯಾಲಯ ಯಾವುದೇ ಸಭೆ, ಮೆರವಣಿಗೆಯನ್ನು ನಡೆಸಬಾರದು, ಪ್ರತಿಭಟನೆ ಮಾಡಬಾರದು ಎಂದು ಹೇಳಿದೆ. ನಾವು ನಮ್ಮ ಮೂಲಭೂತ ಹಕ್ಕುಗಳನ್ನು ಚಲಾಯಿಸುವಾಗ ಇತರರ ಮೂಲಭೂತ ಹಕ್ಕುಗಳನ್ನು ಕೂಡ ಗಮನದಲ್ಲಿರಿಸಿಕೊಳ್ಳಬೇಕು ಎಂದು ಹೇಳಿದರು.

ಯಾರೊಬ್ಬರೂ ಕಾನೂನನ್ನು ಕೈಗೆತ್ತಿಕೊಳ್ಳಬಾರದು ಮತ್ತು ಸಾರ್ವಜನಿಕರಿಗೆ ತೊಂದರೆಯಾಗಬಾರದೆಂದು 144 ಸೆಕ್ಷನ್ ಜಾರಿ ಮಾಡಲಾಗಿದೆ. ರಾಜ್ಯದ ಹಾಗೂ ಜನತೆಯ ಹಿತದೃಷ್ಟಿಯಿಂದ ಆದೇಶ ಮಾಡಲಾಗಿದೆ. ಬಿಜೆಪಿಯವರನ್ನು ಮೊದಲು ಚಡ್ಡಿಗಳು ಎಂದೇ ಕರೆಯಲಾಗುತ್ತಿತ್ತು, ಈಗ ಚಡ್ಡಿ ಹಾಕಿಕೊಂಡು ಪ್ರತಿಭಟನೆ ನಡೆಸುತ್ತಿದ್ದಾರೆ. ಅವರ ಪ್ರತಿಭಟನೆಗೆ ನಮ್ಮ ತಕರಾರಿಲ್ಲ. ಆದರೆ ರಾಜಕೀಯ ಲಾಭಕ್ಕಾಗಿ ನೆಲ, ಜಲ, ಭಾಷೆಯ ವಿಷಯವನ್ನು ರಾಜಕಾರಣ ಮಾಡಬಾರದು ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.

ರಾಜ್ಯ ಕಾಂಗ್ರೆಸ್ ಸರ್ಕಾರ ಡಿಎಂಕೆ ‘ಬಿ ಟೀಮ್’ ಎಂಬ ಬಿಜೆಪಿ ಆರೋಪ ರಾಜಕೀಯಪ್ರೇರಿತವಾದುದ್ದು. ಡಿಎಂಕೆ ತಮಿಳುನಾಡಿನವರು. ಬಿಜೆಪಿ ಪಕ್ಷ ಎಐಎಡಿಎಂಕೆ ಜೊತೆ ಮೈತ್ರಿ ಮಾಡಿಕೊಂಡಿತ್ತು. ಅವರನ್ನು ಏನೆಂದು ಹೇಳಬೇಕು? ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಪ್ರಧಾನಿಗಳಿಗೆ ಪತ್ರ ಬರೆದಿರುವುದು ಸಂತೋಷದ ವಿಷಯ. ಅದನ್ನು ನಾನು ಸ್ವಾಗತಿಸಿದ್ದೇನೆ. ಆದರೆ ರಾಜ್ಯ ಸರ್ಕಾರ ವಿಫಲವಾಗಿದೆ ಎನ್ನುವುದು ಸುಳ್ಳು ಎಂದರು.

ಇದನ್ನೂ ಓದಿ: ಕಾವೇರಿ ಜಲ ನಿಯಂತ್ರಣ ಸಮಿತಿ ಆದೇಶ ಕನ್ನಡಿಗರ ಪಾಲಿಗೆ ಮರಣಶಾಸನ: ಹೆಚ್.ಡಿ.ಕುಮಾರಸ್ವಾಮಿ

ರಾಜ್ಯ ಸರ್ಕಾರ ಈ ರಾಜ್ಯದ ರೈತರ ಹಾಗೂ ರಾಜ್ಯದ ಹಿತರಕ್ಷಣೆಗೆ ಯಾವತ್ತೂ ಹಿಂದೆ ಬಿದ್ದಿಲ್ಲ; ಬೀಳುವುದೂ ಇಲ್ಲ. ನಮಗೆ ಅಧಿಕಾರ ಮುಖ್ಯವಲ್ಲ; ರಾಜ್ಯದ ಜನರ ಹಿತ ಮುಖ್ಯ. ಇದರಲ್ಲಿ ನಾವು ಬಲವಾದ ನಂಬಿಕೆ ಇಟ್ಟುಕೊಂಡಿರುವವರು. ಜನರು ಬಂದ್ ಮಾಡುವುದಕ್ಕೆ ನಮ್ಮ ವಿರೋಧ ಇಲ್ಲ. ಆದರೆ ಬಂದ್, ಮೆರವಣಿಗೆ, ಪ್ರತಿಭಟನೆ ಮಾಡಬಾರದು ಎಂದು ಸರ್ವೋಚ್ಚ ನ್ಯಾಯಾಲಯ ಆದೇಶ ಮಾಡಿದೆ. ಪ್ರತಿಭಟನೆ ಮಾಡುವವರು ಇದನ್ನು ಕೂಡ ಗಮನದಲ್ಲಿಟ್ಟುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಕಾವೇರಿ ನೀರು ನಿಯಂತ್ರಣ ಮಂಡಳಿ ಹಾಗೂ ಸರ್ವೋಚ್ಚ ನ್ಯಾಯಾಲಯದ ಮುಂದೆ ಸಂಕಷ್ಟ ಸೂತ್ರ ರೂಪಿಸಲು ನಾವು ಒತ್ತಡ ಹೇರುತ್ತಿದ್ದೇವೆ. ಏಕೆಂದರೆ, ಮಳೆ ಕೈಕೊಟ್ಟ ಸಂದರ್ಭದಲ್ಲಿ ಎರಡೂ ಕಡೆ ಸಂಕಷ್ಟ ಶುರುವಾಗುತ್ತದೆ. ಅಂಥ ಸಂದರ್ಭದಲ್ಲಿ ನಾವು ಸಂಕಷ್ಟ ಹಂಚಿಕೊಳ್ಳಬೇಕು. ಇಂತಹ ಸನ್ನಿವೇಶದಲ್ಲಿ ನೀರು ಹಂಚಿಕೆಯ ವಿಚಾರದಲ್ಲಿ ಸಂಕಷ್ಟ ಸೂತ್ರವಿರಬೇಕು. ಮತ್ತೊಂದು ಪರಿಹಾರವೆಂದರೆ, ಮೇಕೆದಾಟು ಯೋಜನೆ ಅನುಷ್ಠಾನ. ಈ ಜಲಾಶಯವಿದ್ದಿದ್ದರೆ 67 ಟಿಎಂಸಿ ನೀರು ಇರುತ್ತಿದ್ದು, ಅಲ್ಲಿ ನೀರಿದ್ದರೆ ತಮಿಳುನಾಡಿಗೆ ನೀರು ಬಿಡಲು ಅನುಕೂಲವಾಗುತ್ತಿತ್ತು. ಈ ಜಲಾಶಯದಿಂದ ಕರ್ನಾಟಕ ಹಾಗೂ ತಮಿಳುನಾಡು ಎರಡೂ ರಾಜ್ಯಗಳಿಗೆ ಅನುಕೂಲವಾಗುತ್ತಿತ್ತು ಎಂಬುದನ್ನು ಒತ್ತಿ ಹೇಳಿದರು.

ಕೇಂದ್ರದ ತಜ್ಞರು ರಾಜ್ಯದಲ್ಲಿ ಕಾವೇರಿ ನೀರಿನ ಲಭ್ಯತೆಯನ್ನು ವಾಸ್ತವವಾಗಿ ಪರಿಶೀಲಿಸುವ ಬಗ್ಗೆ ಕೇಂದ್ರಕ್ಕೆ ಪತ್ರ ಬರೆಯಲಾಗಿದೆ. ಜನತಾದಳದ ವರಿಷ್ಠರಾದ ದೇವೇಗೌಡರು, ಈ ಬಗ್ಗೆ ಭೇಟಿಯಾಗಿದ್ದು, ಕೇಂದ್ರದೊಂದಿಗೆ ಅವರ ಹೊಸ ಸ್ನೇಹದಿಂದ ಪರಿಹಾರ ದೊರೆಯಬಹುದೇ ನೋಡಬೇಕಿದೆ. ರಾಜ್ಯ ಸರ್ಕಾರ ಪರಿಹಾರ ಸೂತ್ರ ಕೋರಿ ಬರೆದಿರುವ ಪತ್ರಕ್ಕೆ ಕೇಂದ್ರದಿಂದ ಯಾವುದೇ ಪ್ರತಿಕ್ರಿಯೆ ದೊರೆತಿಲ್ಲ. ಬಿಜೆಪಿಯ 25 ಸಂಸದರು ಪ್ರಧಾನಿಯವರ ಮೇಲೆ ಒತ್ತಡ ಹೇರಿ, ಕಾವೇರಿ ಸಮಸ್ಯೆಗೆ ಪರಿಹಾರ ದೊರಕಿಸಬೇಕು ಎಂದು ಒತ್ತಾಯಿಸಿದರು.

ಸಾಮಾನ್ಯ ವರ್ಷಗಳಲ್ಲಿ ತಮಿಳುನಾಡಿಗೆ ನೀರು ಬಿಡಬೇಕಾದ ಪ್ರಮಾಣದ ಬಗ್ಗೆ ಸುಪ್ರೀಂ ಕೋರ್ಟ್ ಈಗಾಗಲೇ ಆದೇಶ ನೀಡಿದೆ. ಆದರೆ ಸಂಕಷ್ಟದ ಸಮಯದಲ್ಲಿ ಆ ರಾಜ್ಯಕ್ಕೆ ನೀರು ಬಿಡುವ ಪ್ರಮಾಣ ತಿಳಿಸುವ ಸಂಕಷ್ಟ ಸೂತ್ರ ಇನ್ನೂ ನಿರ್ಧಾರವಾಗಿಲ್ಲ. ಇಂತಹ ಸಂದರ್ಭದಲ್ಲಿ ಒಂದು ಸೌಹಾರ್ದ ಇತ್ಯರ್ಥಕ್ಕೆ ಬರುವುದೇ ಉತ್ತಮ. ಆದ್ದರಿಂದ ಕಾವೇರಿ ವಿವಾದದ ಇತ್ಯರ್ಥಕ್ಕೆ ಪ್ರಧಾನಮಂತ್ರಿಗಳು ಮಧ್ಯಸ್ಥಿಕೆ ವಹಿಸಬೇಕು. ಕಾವೇರಿ ವಿಷಯದ ವಾದಮಂಡನೆಗೆ ಮೊದಲಿನಿಂದಲೂ ಇರುವ ಕಾನೂನೂ ತಂಡವೇ ಈಗಲೂ ಇದ್ದು, ಎಲ್ಲ ಪಕ್ಷದ ಸರ್ಕಾರದ ಅವಧಿಯಲ್ಲಿ ಇದ್ದ ತಂಡವೇ ಆಗಿದೆ ಎಂದು ಪ್ರತಿಕ್ರಿಯಿಸಿದರು.

ರಾಜಕೀಯ

ಬೆಂಗಳೂರು: ಕರ್ನಾಟಕದ ನಿರಂತರ ಹೋರಾಟ, ಬಂದ್‌ ನಡುವೆಯೂ ದೆಹಲಿಯ ಕಾವೇರಿ ಜಲ ನಿಯಂತ್ರಣ ಸಮಿತಿ (CWRC) ತಮಿಳುನಾಡಿಗೆ ನೀರು ಹರಿಸುವಂತೆ ಸೂಚಿಸಿದೆ. 18 ದಿನಗಳ ಕಾಲ ಪ್ರತಿನಿತ್ಯ 3 ಸಾವಿರ ಕ್ಯೂಸೆಕ್ಸ್ ನೀರು ಹರಿಸುವಂತೆ ತಿಳಿಸಿದೆ. ಈ ಹಿನ್ನಡೆಗೆ ಕಾಂಗ್ರೆಸ್ ಸರ್ಕಾರ ಕಾರಣವೆಂದು ಮಾಜಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಪೆಟ್ಟಿನ ಮೇಲೆ ಪೆಟ್ಟು ತಿನ್ನುತ್ತಿರುವ ಕರ್ನಾಟಕಕ್ಕೆ ಈಗ ಮತ್ತೆ ದೊಡ್ಡ ಹಿನ್ನಡೆ ಆಗಿದೆ. ಹಿನ್ನಡೆ ಎನ್ನುವುದು ನಿರಂತರವಾಗಿದ್ದು, ಕಾವೇರಿ ಜಲ ನಿಯಂತ್ರಣ ಸಮಿತಿ (CWRC) ತಮಿಳುನಾಡಿಗೆ ಇನ್ನೂ 18 ದಿನಗಳ ಕಾಲ ನಿತ್ಯವೂ 3000 ಕ್ಯೂಸೆಕ್ಸ್ ಹರಿಸಲು ಕರ್ನಾಟಕಕ್ಕೆ ಇಂದು ಆದೇಶ ನೀಡಿದೆ. ಇದು ನಿಜಕ್ಕೂ ಆಘಾತಕಾರಿ; ಕಾವೇರಿ ಮತ್ತು ಕನ್ನಡಿಗರ ಪಾಲಿಗೆ ಮರಣಶಾಸನ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಕಾವೇರಿ ಕೊಳ್ಳ ಮತ್ತು ಬೆಂಗಳೂರು ನಗರದ ಜನರ ಕತ್ತು ಹಿಚುಕುವುದಕ್ಕೆಂದೇ ಕಾಂಗ್ರೆಸ್ ಸರಕಾರ ಬಂದಿದೆಯೇನೋ ಎಂದು ಬಹಳ ನೋವಿನಿಂದ ಹೇಳಲೇಬೇಕಾಗಿದೆ

‘ಕೆಆರ್ಎಸ್ ಜಲಾಶಯಕ್ಕೆ ನಿತ್ಯವೂ 10,000 ಕ್ಯೂಸೆಕ್ ಒಳಹರಿವು ಇದೆ’ ಎನ್ನುತ್ತಾರೆ ಜಲ ಸಂಪನ್ಮೂಲ ಸಚಿವರು. ಇದಕ್ಕೆ ತದ್ವಿರುದ್ಧವಾಗಿ ಸಮಿತಿಯ ಸಭೆಯಲ್ಲಿ ಭಾಗವಹಿಸಿದ್ದ ಅಧಿಕಾರಿಗಳು ‘ನಮ್ಮಲ್ಲಿ ನೀರೇ ಇಲ್ಲ’ ಎಂಬ ಮಾಹಿತಿ ನೀಡುತ್ತಾರೆ. ಇನ್ನೊಂದೆಡೆ ಹಿರಿಯ ಅಧಿಕಾರಿಯೊಬ್ಬರು ‘ಈ ಆದೇಶದಿಂದ ರಾಜ್ಯಕ್ಕೆ 2.5 ಟಿಎಂಸಿ ನೀರು ಉಳಿತಾಯವಾಗಿದೆ’ ಎನ್ನುತ್ತಾರೆ. ‘ಎತ್ತು ಏರಿಗೆ, ಕೋಣ ನೀರಿಗೆ’ ಎನ್ನುವಂತಿದೆ ಜಲ ಸಂಪನ್ಮೂಲ ಇಲಾಖೆ ಮತ್ತು ಸರಕಾರದ ಪರಿಸ್ಥಿತಿ. ಹೆಜ್ಜೆಹೆಜ್ಜೆಗೂ ಅನರ್ಥಗಳನ್ನೇ ಮಾಡುತ್ತಿರುವ ಈ ಸರಕಾರದ ವೈಫಲ್ಯದ ಲಾಭವನ್ನು ತಮಿಳುನಾಡು ಅತ್ಯಂತ ಜಾಣತನದಿಂದ ಪಡೆದುಕೊಳ್ಳುತ್ತಿದೆ ಎಂದು ಕಿಡಿಕಾರಿದ್ದಾರೆ.

ನಾವು ಕುಡಿಯಲು ನೀರು ಕೇಳುತ್ತಿದ್ದೇವೆ, ತಮಿಳುನಾಡು ಅಕ್ರಮವಾಗಿ ಮಿತಿಮೀರಿದ ವಿಸ್ತೀರ್ಣದಲ್ಲಿ ಬೆಳೆದ ‘ಕುರುವೈ’ ಬೆಳೆಗೆ ನೀರು ಕೇಳುತ್ತಿದೆ. ಅಲ್ಲಿ ಸ್ವಾರ್ಥ ಇದೆ; ಇಲ್ಲಿ ಜನರ ಬದುಕಿದೆ. ಮಾನವೀಯ ನ್ಯಾಯಕ್ಕೆ ವಿರುದ್ಧವಾದ ತಮಿಳುನಾಡು ನಡೆಯನ್ನು ಒಪ್ಪಲು ಸಾಧ್ಯವೇ ಇಲ್ಲ. ಆ ರಾಜ್ಯದ ಇಂಥ ಮನಃಸ್ಥಿತಿಯ ವಿರುದ್ಧ ಪ್ರಬಲ ಹೋರಾಟ ಮಾಡುವ ಇಚ್ಛಾಶಕ್ತಿ ಈ ಸರ್ಕಾರಕ್ಕೆ ಇಲ್ಲದಾಗಿದೆ. ಕೇವಲ ಪಾಲುದಾರ ಪಕ್ಷ ಡಿಎಂಕೆಯ ಯೋಗಕ್ಷೇಮವನ್ನೇ ಕೈ ಸರಕಾರ ನೋಡುತ್ತಾ, ಕರ್ನಾಟಕದ ಹಿತವನ್ನು ಸಂಪೂರ್ಣ ಬಲಿ ಕೊಟ್ಟಿದೆ. ಕನ್ನಡಿಗರ ಮೇಲೆ ‘ಬಂಡೆ’ ಎಳೆದಿದೆ ಎಂದು ಆಡಳಿತ ರೂಢ ಡಿಎಂಕೆ ಮತ್ತು ಕಾಂಗ್ರೆಸ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಒಕ್ಕೂಟ ವ್ಯವಸ್ಥೆಯಲ್ಲಿ ಎಲ್ಲರೂ ಸಮಾನರು. ಈಗಾಗಲೇ ಕಾವೇರಿ ನೀರು ಹಂಚಿಕೆಯನ್ನು ನ್ಯಾಯಾಧಿಕರಣ ಅಖೈರುಗೊಳಿಸಿದ್ದು, ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ಆದರೆ, ಸಂಕಷ್ಟ ಕಾಲದಲ್ಲಿ ಪರಿಹಾರವೇನು? ಮಾತೆತ್ತಿದರೆ ನೀರು ಬಿಡಿ ಎಂದು ಆದೇಶಿಸುವ ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರ (CWMA) & ಕಾವೇರಿ ಜಲ ನಿಯಂತ್ರಣ ಸಮಿತಿ (CWRC) ಈ ಕೂಡಲೇ ‘ಸಂಕಷ್ಟ ಹಂಚಿಕೆ ಸೂತ್ರ’ವನ್ನು ರೂಪಿಸಲೇಬೇಕು. ಆ ನಿಟ್ಟಿನಲ್ಲಿ ಸರ್ಕಾರ ಒತ್ತಡ ಹೇರಿ, ಆ ಸೂತ್ರ ರೂಪಿಸದ ಹೊರತು ತಮಿಳುನಾಡಿಗೆ ನೀರು ಹರಿಸುವ ಪ್ರಶ್ನೆಯೇ ಇಲ್ಲವೆಂದು ಕಡ್ಡಿ ತುಂಡು ಮಾಡಿದಂತೆ ಸ್ಪಷ್ಟವಾಗಿ ಹೇಳಲೇಬೇಕು. ಯಾವುದೇ ಕಾರಣಕ್ಕೂ ಈಗ ನೀರು ಹರಿಸಬಾರದು ಎಂದು ಹೆಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

ರಾಜಕೀಯ

ಚೆನ್ನೈ: ಡಿಎಂಕೆ ಅಧ್ಯಕ್ಷ ಮತ್ತು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು, ಸಿಎಜಿ ಬಿಡುಗಡೆ ಮಾಡಿದ “7.5 ಲಕ್ಷ ಕೋಟಿ ರೂಪಾಯಿ ಅಕ್ರಮಗಳು ಹಾಗೂ ಪ್ರಧಾನಿಯ ಮೌನ” ಎಂಬ ಶೀರ್ಷಿಕೆಯಡಿ ಇಂದು (ಶನಿವಾರ) ಬಿಡುಗಡೆಯಾದ ‘ಸ್ಪೀಕಿಂಗ್ ಫಾರ್ ಇಂಡಿಯಾ’ ‘ಪಾಡ್‌ಕಾಸ್ಟ್’ ಸರಣಿಯ ಎರಡನೇ ಸಂಚಿಕೆಯಲ್ಲಿ ಹೇಳಿರುವುದು:

“ಈ ಸ್ಪೀಕಿಂಗ್ ಫಾರ್ ಇಂಡಿಯಾ ಪಾಡ್‌ಕಾಸ್ಟ್‌ನ ಮೊದಲ ಸಂಚಿಕೆಯ ನಂತರ, ‘ಕರುಣಾನಿಧಿ ಮಹಿಳಾ ಹಕ್ಕುಭತ್ಯೆ ಯೋಜನೆ’ ಮತ್ತು ಡಿಎಂಕೆ ಪಕ್ಷದ ‘ಅಮೃತ್ ಮಹೋತ್ಸವ’ ಪ್ರಾರಂಭ ಇತ್ಯಾದಿಗಳನ್ನು ಮುಗಿಸಿಕೊಂಡು ಈಗ ನಿಮ್ಮೊಂದಿಗೆ ಮಾತನಾಡುತ್ತಿದ್ದೇನೆ. ಕರುಣಾನಿಧಿ ಮಹಿಳಾ ಹಕ್ಕುಭತ್ಯೆ ಯೋಜನೆಯನ್ನು ಪ್ರಾರಂಭಸಿದಾಗ, ಸಾಮಾಜಿಕ ಜಾಲತಾಣದಲ್ಲಿ ಪ್ರಕಟವಾದ ಒಂದು ಪೋಸ್ಟನ್ನು ನಾನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ. ಒಬ್ಬ ತಾಯಿ ಪ್ರಶ್ನಿಸುತ್ತಿರುವ ಪೋಸ್ಟ್ ಅದು. “ನಮ್ಮ ಮುಖ್ಯಮಂತ್ರಿ ಹೇಳಿದ ಸಾವಿರ ರೂಪಾಯಿ ಬಂದಾಯ್ತು, ಪ್ರಧಾನಿ ಹೇಳಿದ 15 ಲಕ್ಷ ಏನಾಯ್ತು? ಎಂಬುದಾಗಿದೆ. ಇದು ತಮಿಳುನಾಡಿನಲ್ಲಿ ವೈರಲ್ ಆಗಿದೆ.

ನಮ್ಮ ದೇಶ ಮತ್ತು ದೇಶದ ಜನರು, ಮತ್ತೆ ಬಿಜೆಪಿಯಿಂದ ಮೋಸ ಹೋಗಬಾರದು ಎಂಬುದಕ್ಕಾಗಿಯೇ ನಾನು ಈ ಸ್ಪೀಕಿಂಗ್ ಫಾರ್ ಇಂಡಿಯಾ ಪಾಡ್‌ಕಾಸ್ಟ್ ಸರಣಿಯನ್ನು ಪ್ರಾರಂಭಿಸಿದ್ದೇನೆ. 2014ರಲ್ಲಿ ಮೋಸ ಹೋದಂತೆ; 2019ರಲ್ಲಿ ಮೋಸ ಹೋದಂತೆ, 2024ರಲ್ಲಿ ದೇಶ ಮೋಸ ಹೋಗಬಾರದು. 2014ರಲ್ಲಿ ಅಧಿಕಾರಕ್ಕೆ ಬರುವ ಮೊದಲು, ಗುಜರಾತ್ ರಾಜ್ಯವನ್ನು ಅಭಿವೃದ್ಧಿಪಡಿಸಿ, ಅಲ್ಲಿ ಜೇನಿನ ನದಿ – ಹಾಲಿನ ನದಿಯೆಲ್ಲ ಹರಿಯುತ್ತಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಿ, ಅದರ ಮೂಲಕ ತನ್ನನ್ನು ಅಭಿವೃದ್ಧಿಯ ನಾಯಕನಾಗಿ ಬಿಂಬಿಸಿಕೊಂಡವರು ಪ್ರಧಾನಿ ನರೇಂದ್ರ ಮೋದಿ.

ಗುಜರಾತ್ ಮಾದರಿ

‘ಕಾಂಗ್ರೆಸ್ ಪಕ್ಷ 60 ವರ್ಷಗಳ ಕಾಲ ಭಾರತವನ್ನು ಆಳಿದೆ, ನನಗೆ 60 ತಿಂಗಳು ಕೊಡಿ; ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡುತ್ತೇನೆ’ ಎಂದು ಮೋದಿ ಹೇಳಿದರು. ಅವರಿಗೆ 60 ತಿಂಗಳು ಮಾತ್ರವಲ್ಲ ಹೆಚ್ಚುವರಿಯಾಗಿ, ಇನ್ನೂ 60 ತಿಂಗಳು ಆಳುವ ಅವಕಾಶವನ್ನು ಭಾರತದ ಜನರು ನೀಡಿದರು. ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡಿದರೇ? ಎಂಬುದನ್ನು ಅವರೇ ಉತ್ತರಿಸಬೇಕಾದ ಪ್ರಶ್ನೆಯಾಗಿದೆ. ಅವರು ಭಾರತವನ್ನು ಯಾವ ರೀತಿಯಲ್ಲಿ ಅಭಿವೃದ್ಧಿಪಡಿಸಿದ್ದಾರೆ ಎಂದು ಪಟ್ಟಿ ಮಾಡಲು ಅವರಿಂದ ಸಾಧ್ಯವೇ?

ನರೇಂದ್ರ ಮೋದಿ ಅವರು ಮೊದಲ ಬಾರಿಗೆ ಪ್ರಧಾನಿಯಾದಾಗ ನನಗೆ 5 T-ಯೇ ಮುಖ್ಯ ಎಂದು ಹೇಳಿದರು. (Talent-ಪ್ರತಿಭೆ, Trading-ವ್ಯಾಪಾರ, Tradition-ಸಂಪ್ರದಾಯ, Tourism-ಪ್ರವಾಸೋದ್ಯಮ, Technology-ತಂತ್ರಜ್ಞಾನ) ಆದರೆ, ಈ 5 T ಗಳಲ್ಲಿ ಯಾವುದರಲ್ಲೂ ಅವರು ಸಾಧನೆ ಮಾಡಲಿಲ್ಲ?

ನನ್ನ ಪ್ರಕಾರ ಈ ಕೆಳಕಂಡ 5 C ಗಳನ್ನು ಒಳಗೊಂಡಂತೆಯೇ ಇಂದಿನ ಬಿ.ಜೆ.ಪಿ ಸರ್ಕಾರವಿದೆ. Communalism-ಕೋಮುವಾದ, Corruption-ಭ್ರಷ್ಟಾಚಾರ, Corporate Capitalism-ಕಾರ್ಪೊರೇಟ್ ಬಂಡವಾಳಶಾಹಿ, Cheating-ವಂಚನೆ, Character Assassination-ಪಾತ್ರ ಹತ್ಯೆ. ಈ ಸರ್ಕಾರವನ್ನು ಹೀಗೆಯೇ ಕರೆಯಬೇಕು. ಬಿಜೆಪಿ ಇಲ್ಲಿಯವರೆಗೆ ಇದನ್ನು ಜಾಹೀರಾತು ಎಂಬ ಬೆಳಕಿನ ಮೂಲಕ ಮರೆಮಾಡಿ ಇಟ್ಟಿತ್ತು. ಆದರೆ ಈಗ ರೂಪುಗೊಂಡಿರುವ ‘ಇಂಡಿಯಾ ಮೈತ್ರಿಕೂಟ’ ಹಾಗೂ ಇಂಡಿಯಾ ಮೈತ್ರಿ ಕೂಟದ ನಾಯಕರ ಅಬ್ಬರದ ಪ್ರಚಾರ, ಬಿಜೆಪಿ ಪಕ್ಷದ ಮುಖವಾಡವನ್ನು-ಪ್ರಧಾನಿ ನರೇಂದ್ರ ಮೋದಿಯವರ ಬಿಂಬವನ್ನು ಹರಿದುಹಾಕಿದೆ.

ಇಂಡಿಯಾ ಮೈತ್ರಿಕೂಟ

ಇದನ್ನು ನಾವು ರಾಜಕೀಯಕ್ಕಾಗಿ ಹೇಳುತ್ತಿಲ್ಲ. ನಿಜವಾದ ಅಂಕಿಅಂಶಗಳನ್ನು ಆಧರಿಸಿಯೇ ಹೇಳುತ್ತಿದ್ದೇವೆ. ಇದನ್ನು ಸಿಎಜಿ ವರದಿ ಬಹಿರಂಗಪಡಿಸಿದೆ. ಇಂಡಿಯಾ ಮೈತ್ರಿಕೂಟವನ್ನು ಭ್ರಷ್ಟರ ಮೈತ್ರಿಕೂಟ ಎಂದು ಆರೋಪಿಸುತ್ತಿರುವ ಮೋದಿ ಅವರೇ! ನಿಮ್ಮ ಆಡಳಿತದ ಬಗ್ಗೆ ಸಿಎಜಿ ವರದಿ ಏನು ಹೇಳುತ್ತದೆ ಎಂಬುದನ್ನು ನೀವು ಓದಿದ್ದೀರಾ? ಈ ಬಗ್ಗೆ ವಿಶೇಷ ಅಧಿವೇಶನದಲ್ಲಿ ಚರ್ಚಿಸಿದ್ದೀರಾ? ಕನಿಷ್ಠ ಇದರ ಬಗ್ಗೆ ಉತ್ತರವನ್ನಾದರೂ ನೀಡಿದ್ದಿರಾ? ಅಯೋಧ್ಯೆ ಯೋಜನೆಯಲ್ಲಿಯೂ ಭ್ರಷ್ಟಾಚಾರ ಮಾಡಿದ ಪಕ್ಷ ಬಿಜೆಪಿ ಎಂದು ಸಿಎಜಿ ವರದಿ ಹೇಳಿದೆ.

ರಾಮಾಯಣ ನಡೆದ ಸ್ಥಳಗಳಿಗೆ ಪ್ರವಾಸಿಗರನ್ನು ಕರೆದುಕೊಂಡು ಹೋಗುವ ಪ್ರವಾಸ ಯೋಜನೆಯೊಂದನ್ನು ಪ್ರಾರಂಭಿಸಿ, ಉತ್ತರ ಪ್ರದೇಶ, ಮಧ್ಯಪ್ರದೇಶ, ಹಿಮಾಚಲ ಪ್ರದೇಶ, ಸಿಕ್ಕಿಂ, ಗೋವಾ ಮತ್ತು ತೆಲಂಗಾಣ ಮುಂತಾದ 6 ರಾಜ್ಯಗಳಲ್ಲಿ ಇದನ್ನು ಜಾರಿಗೊಳಿಸಲಾಗುವುದು ಎಂದು ಹೇಳಿದರು. ಈ ಯೋಜನೆ ಅನುಷ್ಠಾನದಲ್ಲಿ ಕೋಟ್ಯಂತರ ರೂಪಾಯಿ ವ್ಯರ್ಥವಾಗಿದೆ ಎಂದು ಸಿಎಜಿ ಆರೋಪ ಮಾಡಿದೆ. ಗುತ್ತಿಗೆ ನೀಡಿಕೆಯಲ್ಲಿ ಯಾವ ರೀತಿಯ ಉಲ್ಲಂಘನೆಗಳಾಗಿವೆ ಎಂಬುದನ್ನು ಈ ವರದಿಯಲ್ಲಿ ವಿವರಿಸಲಾಗಿದೆ.

ಬಿಜೆಪಿ ಘೋಷಿಸಿದ್ದನ್ನು ಈಡೇರಿಸುವುದಿಲ್ಲ ಎಂಬುದಕ್ಕೆ ಸಿಎಜಿ ವರದಿಯು ಒಂದು ಉದಾಹರಣೆಯನ್ನು ಉಲ್ಲೇಖಿಸಿದೆ. ಅದುವೇ ಉಡಾನ್ ಯೋಜನೆ. ಈ ಯೋಜನೆಯನ್ನು ಬಹಳ ಸಂಭ್ರಮದಿಂದ ಪ್ರಾರಂಭಿಸಲಾಯಿತು. ಬಡವರು ವಿಮಾನದಲ್ಲಿ ಪ್ರಯಾಣಿಸಬಹುದು, ಮಧ್ಯಮ ನಗರಗಳಲ್ಲೂ ವಿಮಾನ ನಿಲ್ದಾಣ ಸ್ಥಾಪಿಸಲಿದ್ದೇವೆ ಎಂದು ಹೇಳಿ ಈ ಯೋಜನೆಯನ್ನು 2016ರಲ್ಲಿ ಪ್ರಾರಂಭಿಸಿದರು. ಉಡಾನ್ ಯೋಜನೆಗಾಗಿ ಕೇಂದ್ರ ಸರ್ಕಾರ 1,089 ಕೋಟಿ ರೂಪಾಯಿಗಳನ್ನು ಮಂಜೂರು ಮಾಡಿತು. ಯೋಜಿತ 774 ಮಾರ್ಗಗಳಲ್ಲಿ ಕಾರ್ಯನಿರ್ವಹಿಸಲು ನಿರ್ಧರಿಸಲಾಯಿತು, ಅದು ಈಗ ಕೇವಲ 7% ಮಾರ್ಗಗಳಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತಿವೆ. 93% ಮಾರ್ಗಗಳು ಕಾರ್ಯನಿರ್ವಹಿಸುತ್ತಿಲ್ಲ.

ಉಡಾನ್ ಯೋಜನೆ

ಉದಾಹರಣೆಗೆ, ತಮಿಳುನಾಡಿನಲ್ಲಿ, ಉಡಾನ್ ಯೋಜನೆಯಡಿ ಸೇಲಂ, ತಂಜಾವೂರು, ರಾಮನಾಥಪುರಂ ಮತ್ತು ವೆಲ್ಲೂರು ನಗರಗಳಿಗೆ ವಿಮಾನ ಸೇವೆಗಳನ್ನು ಪರಿಚಯಿಸಲು ಯೋಜಿಸಲಾಗಿತ್ತು. ಆದರೆ, ಈ 4 ಯೋಜಿತ ನಗರಗಳಲ್ಲಿ, ಸೇಲಂ ಮಾತ್ರ ಉಡಾನ್ ಯೋಜನೆ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಅದನ್ನೂ ಈಗ ಕಡಿತಗೊಳಿಸಲಾಗಿದೆ. ಒಟ್ಟು 774 ಯೋಜಿತ ಮಾರ್ಗಗಳ ಪೈಕಿ 720 ಮಾರ್ಗಗಳು ಕಾರ್ಯನಿರ್ವಹಿಸಿಲ್ಲ ಎಂದು ಸಿಎಜಿ ವರದಿ ಹೇಳುತ್ತದೆ.

2021-22 ರಲ್ಲಿ, ರೈಲ್ವೆ ವಲಯವು 100 ರೂಪಾಯಿಗಳ ಆದಾಯವನ್ನು ಗಳಿಸಲು 107 ರೂಪಾಯಿಗಳನ್ನು ಖರ್ಚು ಮಾಡುತ್ತಿದೆ, ಹೀಗಾಗಿ ಭಾರತೀಯ ರೈಲ್ವೆಯ ಆರ್ಥಿಕ ಸ್ಥಿತಿಯು ಆತಂಕಕಾರಿಯಾಗಿ ಪರಿಣಮಿಸಿದೆ ಎಂದು ಸಿಎಜಿ ವರದಿ ತಿಳಿಸಿದೆ.

ಜಾಹೀರಾತುಗಳ ಮೂಲಕ ಬಿಜೆಪಿ ಸರ್ಕಾರ ಸುಳ್ಳು ಚಿತ್ರಣ ನಿರ್ಮಿಸಿದೆ ಎಂದು ನಾವು ಆಗಾಗ್ಗೆ ಹೇಳುತ್ತಿರುತ್ತೇವೆ. ಆ ಜಾಹೀರಾತುಗಳಿಗೆ ಅವರು ಏನು ಮಾಡಿದ್ದಾರೆ ಗೊತ್ತಾ? 2017 ರಿಂದ 2021 ರವರೆಗೆ ಕೇಂದ್ರ ಸರ್ಕಾರದ ವಿವಿಧ ಪಿಂಚಣಿ ಯೋಜನೆಗಳಲ್ಲಿ ಮಂಜೂರಾದ ಹಣವನ್ನು ಕೇಂದ್ರ ಸರ್ಕಾರದ ಜಾಹೀರಾತಿಗೆ ಬಳಸಿರುವುದು ಈಗ ಬಯಲಾಗಿದೆ.

ಈ ಎಲ್ಲ ಅಕ್ರಮಗಳಿಗಿಂತ ದೊಡ್ಡ ಅಕ್ರಮವೆಂದರೆ ಅದು ಟೋಲ್ ಪ್ಲಾಜಾ ಅಕ್ರಮ. ಪ್ರಯಾಣಿಸುವ ಸಾರ್ವಜನಿಕರಿಂದ ಟೋಲ್ ಪ್ಲಾಜಾ ಮೂಲಕ ಪ್ರತಿ ದಿನವೂ ಅಕ್ರಮ ವಸೂಲಿ ನಡೆದಿರುತ್ತದೆ. ಕೇವಲ 5 ಟೋಲ್ ಪ್ಲಾಜಾಗಳನ್ನು ಮಾತ್ರ ಲೆಕ್ಕಪರಿಶೋಧನೆ ಮಾಡಿದಾಗ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ವಾಹನ ಚಾಲಕರಿಂದ 132 ಕೋಟಿ 5 ಲಕ್ಷ ರೂಗಳನ್ನು ವಸೂಲಿ ಮಾಡಿದೆ ಎಂದು ಸಿಎಜಿ ವರದಿ ಆರೋಪಿಸಿದೆ. ಹಾಗೇ ನೋಡಿದರೆ, ಭಾರತದಾದ್ಯಂತ ಎಷ್ಟು ಟೋಲ್ ಪ್ಲಾಜಾಗಳಿವೆ? ಅದರ ಮೂಲಕ ಎಷ್ಟು ಲಕ್ಷ ಕೋಟಿ ರೂಪಾಯಿ ಅಕ್ರಮವಾಗಿ ಸಂಗ್ರಹವಾಗಿರುತ್ತದೆ ಎಂದು ಲೆಕ್ಕ ಮಾಡಿ?

ಟೋಲ್ ಪ್ಲಾಜಾ

ದೇಶಾದ್ಯಂತ ಅಸ್ತಿತ್ವದಲ್ಲಿರುವ ರಸ್ತೆಗಳನ್ನು ಸಂಪರ್ಕಿಸಲು 2015ರಲ್ಲಿ ‘ಭಾರತಮಾಲಾ’ ಎಂಬ ಯೋಜನೆಯನ್ನು ತಂದರು. ಅದರಲ್ಲಿ ಪ್ರತಿ ಕಿಲೋಮೀಟರ್ ಗೆ 15 ಕೋಟಿ 37 ಲಕ್ಷ ರೂಪಾಯಿ ಎಂಬುದನ್ನು ಬದಲಿಸಿ, 32 ಕೋಟಿ 17 ಲಕ್ಷ ರೂಪಾಯಿಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಈ 8 ವರ್ಷಗಳ ಅವಧಿಯಲ್ಲಿ ಕೇವಲ 13,000 ಕಿ.ಮೀ ರಸ್ತೆಗಳನ್ನು ಮಾತ್ರ ಹಾಕಲಾಗಿದೆ. ಇನ್ನೂ ಶೇ.40 ರಷ್ಟು ಕೆಲಸಗಳು ಪೂರ್ಣಗೊಂಡಿಲ್ಲ. “ಭಾರತಮಾಲಾ ಪರಿಯೋಜನೆ-1 ರಲ್ಲಿಯೂ ಅಕ್ರಮ ನಡೆದಿದೆ. ಅದೇ ರೀತಿ, “ದ್ವಾರಕಾ ಎಕ್ಸ್‌ಪ್ರೆಸ್‌ವೇ” ಯೋಜನೆ. “ಭಾರತಮಾಲಾ ಪರಿಯೋಜನೆ-1 ರಲ್ಲಿಯೂ ಅಕ್ರಮ ನಡೆದಿದೆ. ಯೋಜಿತ ಮೊತ್ತಕ್ಕಿಂತ 1,278 ಪಟ್ಟು ಹೆಚ್ಚು ಖರ್ಚು ಮಾಡಲಾಗಿದೆ.

ಭಾರತದಲ್ಲೇ ಪ್ರಪ್ರಥಮವಾಗಿ ತಮಿಳುನಾಡಿನಲ್ಲಿ 2009ರಲ್ಲಿ ‘ಕಲೈಜ್ಞರ್ ವಿಮಾ ಯೋಜನೆ’ ಯನ್ನು ಜಾರಿಗೆ ತರಲಾಯಿತು. ಸುಮಾರು 9 ವರ್ಷಗಳ ನಂತರ, 2018ರಲ್ಲಿ ಪ್ರಧಾನ ಮಂತ್ರಿ ಘೋಷಿಸಿದ ದೊಡ್ಡ ಯೋಜನೆಗಳಲ್ಲಿ “ಆಯುಷ್ಮಾನ್ ಭಾರತ್” ಯೋಜನೆಯೂ ಒಂದಾಗಿದೆ. ಬಡ ಕುಟುಂಬಗಳಿಗೆ 5 ಲಕ್ಷ ರೂಪಾಯಿವರೆಗೆ ವಿಮೆ ನೀಡಲಾಗುತ್ತಿದೆ ಎಂದು ಬಿಜೆಪಿ ಹೇಳುತ್ತಿದೆ. “ಆಯುಷ್ಮಾನ್ ಭಾರತ್” ಯೋಜನೆಯಡಿ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಸಾವನ್ನಪ್ಪಿದ ರೋಗಿಗಳಿಗೆ, ಮರಣದ ನಂತರವೂ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸುಳ್ಳು ಹೇಳಿ, ವಿಮಾ ಕ್ಲೇಮ್ ಅರ್ಜಿಗಳನ್ನು ಸ್ವೀಕರಿಸಿ, ವಿಮಾ ಮೊತ್ತವನ್ನು ನೀಡಲಾಗುತ್ತಿದೆ.

ಏಕ ಕಾಲದಲ್ಲಿ, ಒಂದೇ ರೋಗಿ ಹಲವಾರು ಆಸ್ಪತ್ರೆಗಳಲ್ಲಿ ದಾಖಲಾಗಿರುವ ಬಗ್ಗೆ ಲೆಕ್ಕ ತೋರಿಸಿವುದು, ಒಂದೇ ಆಧಾರ್ ಸಂಖ್ಯೆಯನ್ನು ಹಲವರಿಗೆ ನೀಡುವುದು, ಒಂದೇ ಪೋನ್ ನಂಬರನ್ನು ಹಲವರು ನೋಂದಣಿ ಮಾಡುವುದು, ಪೋನ್ ನಂಬರ್ ನೀಡದೆ ನೋಂದಣಿ ಮಾಡುವುದು ಮುಂತಾದ ಹಲವಾರು ಅಕ್ರಮಗಳು ನಡೆದಿರುತ್ತದೆ. ಎಷ್ಟು ಜನ, ಎಷ್ಟು ಕೋಟಿ ಎಂದು ಪ್ರತ್ಯೇಕ ಸಂಖ್ಯೆಗಳಾಗಿ ಹೇಳಿದರೆ, ಕೇಳುವವರು ಗಾಬರಿ ಗೊಳ್ಳುತ್ತಾರೆ!

ಆಯುಷ್ಮಾನ್ ಭಾರತ್

ಹೀಗೆ ಅಯೋಧ್ಯೆ ಯೋಜನೆಯಿಂದ ಹಿಡಿದು ಆಯುಷ್ಮಾನ್ ಭಾರತ್ ಯೋಜನೆಯವರೆಗೆ 7.5 ಲಕ್ಷ ಕೋಟಿ ರೂಪಾಯಿ ಅವ್ಯವಹಾರ ನಡೆದಿದೆ ಎಂದು ಸಿಎಜಿ ಅಂದಾಜು ಮಾಡಿದೆ. ಇದುವರೆಗೂ ಪ್ರಧಾನಿಯಾಗಲಿ, ಸಂಬಂಧಪಟ್ಟ ಕೇಂದ್ರ ಸಚಿವರಾಗಲಿ ಇದಕ್ಕೆ ಉತ್ತರಿಸಲಿಲ್ಲ; ಅವರು ಉತ್ತರಿಸಲು ಸಾಧ್ಯವೂ ಇಲ್ಲ. ಇದರಿಂದ ಜನರನ್ನು ದಿಕ್ಕು ತಪ್ಪಿಸಲು ವಿಭಿನ್ನ ರಾಜಕೀಯ ಮಾಡುತ್ತಿದ್ದಾರೆ.

ಆದರೆ ಬಡವರು, ಹಿಂದುಳಿದವರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವಿರುದ್ಧ, ಪ್ರಧಾನಿ ನರೇಂದ್ರ ಮೋದಿಯವರು ಕೆಲಸ ಮಾಡುತ್ತಿದ್ದಾರೆ ಎಂಬುದನ್ನು ಈಗ ದೇಶದ ಜನತೆ ಚೆನ್ನಾಗಿ ಅರಿತುಕೊಂಡಿದ್ದಾರೆ. ಭಾರತದ ವಿವಿಧ ರಾಜ್ಯಗಳಲ್ಲಿ ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಸೋತಿರುವುದು ಇದರ ಸಂಕೇತವಾಗಿದೆ.

2024ರ ಚುನಾವಣೆಯಲ್ಲಿ ಬಿಜೆಪಿಯನ್ನು ಸಂಪೂರ್ಣವಾಗಿ ಸೋಲಿಸಬೇಕು. ಬಿಜೆಪಿಯ ಕೋಮುವಾದ-ಭ್ರಷ್ಟ-ಕಾರ್ಪೊರೇಟ್ ರಾಜಕಾರಣವನ್ನು ಕೊನೆಗಾಣಿಸಲು ಭಾರತದ ಎಲ್ಲಾ ಜನರು ಒಂದೇ ಧ್ವನಿಯಾಗಿ ಗಟ್ಟಿ ನಿಲ್ಲಬೇಕು. ನಮ್ಮ ವಿಶಾಲ ಭಾರತ ದೇಶವನ್ನು ಉಳಿಸುವ ಕರ್ತವ್ಯ ನಮ್ಮೆಲ್ಲರ ಕೈಯಲ್ಲಿದೆ!

ಎಂ.ಕೆ.ಸ್ಟಾಲಿನ್ ಅವರ ಈ ಧ್ವನಿಯನ್ನು ಭಾರತದ ಧ್ವನಿಯಾಗಿ ಪ್ರತಿಯೊಬ್ಬರಿಗೂ ಕೊಂಡೊಯ್ಯಬೇಕೆಂದು ನಾನು ನಿಮ್ಮೆಲ್ಲರಲ್ಲಿ ವಿನಂತಿಸುತ್ತೇನೆ. ಭಾರತಕ್ಕಾಗಿ ಮಾತನಾಡುವುದನ್ನು ಮುಂದುವರಿಸೋಣ; ಭಾರತವನ್ನು ಉಳಿಸೋಣ! ಎಂದು ಹೇಳಿದ್ದಾರೆ.

ದೇಶ ರಾಜಕೀಯ

ನವದೆಹಲಿ: ದ್ವೇಷ ಭಾಷಣದಿಂದ ಪ್ರಭಾವಿತರಾದ ಬಹುಜನ ಸಾಮಾಜ ಪಾರ್ಟಿಯ ಸಂಸದ ಕುನ್ವರ್ ಡ್ಯಾನಿಶ್ ಅಲಿ ಅವರನ್ನು ಕಾಂಗ್ರೆಸ್ ಸಂಸದ ರಾಹುಲ್ ಭೇಟಿ ಮಾಡಿದ್ದಾರೆ.

ಸಂಸತ್ತಿನಲ್ಲಿ ಚರ್ಚೆಯ ಸಂದರ್ಭದಲ್ಲಿ ದೆಹಲಿ ಬಿಜೆಪಿ ಸಂಸದ ರಮೇಶ್ ಬಿಧುರಿ ಚಂದ್ರಯಾನ-3 ವಿಚಾರವಾಗಿ ಮಾತನಾಡುತ್ತಿದ್ದರು. ಆಗ ಮಾಯಾವತಿ ಅವರ ಬಹುಜನ ಸಮಾಜ ಪಕ್ಷದ ಸಂಸದ ಡ್ಯಾನಿಶ್ ಅಲಿ ಅಡ್ಡಿಪಡಿಸುತ್ತಿದ್ದಂತೆ, ಇದರಿಂದ ಕೆರಳಿದ ರಮೇಶ್ ಬಿಧುರಿ, ಡ್ಯಾನಿಶ್ ಅವರನ್ನು ‘ಭಯೋತ್ಪಾದಕ’ ಎಂದು ಸಂಭೋಧಿಸಿದರು. ಇದು ವಿವಾದಕ್ಕೆ ಕಾರಣವಾಗಿತ್ತು.

ಇದನ್ನೂ ಓದಿ: ವಿಕ್ರಮ್ ಲ್ಯಾಂಡರ್, ಪ್ರಗ್ಯಾನ್ ರೋವರ್‌ನಿಂದ ಸಿಗ್ನಲ್ ಸ್ವೀಕರಿಸಲು ಸಾಧ್ಯವಾಗುತ್ತಿಲ್ಲ: ಇಸ್ರೋ

ಈ ವಿಚಾರ, ವಿವಾದ ಸೃಷ್ಟಿಸಿದ ನಂತರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಡ್ಯಾನಿಶ್ ಅಲಿ ಅವರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು. ರಾಹುಲ್ ಜೊತೆಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಉಪಸ್ಥಿತರಿದ್ದರು.

ಇಂಡಿಯಾ ಮೈತ್ರಿಕೂಟದ ಪರವಾಗಿ ಲೋಕಸಭೆಯ ಸ್ಪೀಕರ್‌ಗೆ ಕಳುಹಿಸಿರುವ ಪತ್ರದಲ್ಲಿ, ದ್ವೇಷ ಭಾಷಣ ಮಾಡಿದ ಬಿಜೆಪಿ ಸಂಸದ ರಮೇಶ್ ಬಿಧುರಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಉಲ್ಲೇಖಿಸಿದ್ದಾರೆ.  

ರಾಜಕೀಯ

ಬೆಂಗಳೂರು: ‘ಬಾಳೆಗೊಂದು ಏಟು, ಬಾಳಿಗೊಂದು ಮಾತು’ ಎನ್ನುವ ಮಾತಿದೆ. ಸುಳ್ಳುಪೊಳ್ಳುಗಳ ಸೌಧದ ಮೇಲೆ ನಿಂತಿರುವ ಕಾಂಗ್ರೆಸ್ ಪಕ್ಷಕ್ಕೆ ಅಸತ್ಯವೇ ಅಷ್ಟೈಶ್ವರ್ಯ! ಆತ್ಮವಂಚನೆಯೇ ಅಧಿಕಾರದ ಮೂಲ ಬಂಡವಾಳ!! ಮೂರ್ಖರಿಗೆ ಎಷ್ಟು ಹೇಳಿದರೂ ಅಷ್ಟೇ, ಅರ್ಥವೇ ಆಗುವುದಿಲ್ಲ ಎಂದು ಜೆಡಿಎಸ್ ಪಕ್ಷ ಕಾಂಗ್ರೆಸನ್ನು ತರಾಟೆಗೆ ತೆಗೆದುಕೊಂಡಿದೆ.

ಹೆಚ್.ಡಿ.ಕುಮಾರಸ್ವಾಮಿ ಅವರು ಪಂಚರತ್ನ ಯಾತ್ರೆಯಲ್ಲಿ ಪಕ್ಷ ವಿಸರ್ಜನೆ ಮಾತು ಹೇಳಿದ್ದು ನಿಜ. “ನನಗೆ ಬಹುಮತದ ಸರಕಾರ ಕೊಟ್ಟರೆ 5 ವರ್ಷದಲ್ಲಿ ಪಂಚರತ್ನಗಳನ್ನು ಜಾರಿ ಮಾಡುವೆ. ಮಾತು ತಪ್ಪಿದರೆ ಮತ್ತೆಂದೂ ಬಾರಿ ಮತ ಕೇಳಲು ಬರುವುದಿಲ್ಲ, ಪಕ್ಷವನ್ನೇ ವಿಸರ್ಜಿಸುತ್ತೇನೆ” ಎಂದಿದ್ದರು. ಈ ಹೇಳಿಕೆಯ ವಿಡಿಯೋ, ಸುದ್ದಿಗಳಿವೆ ಗಮನಿಸಬಹುದು.

ಕಾಂಗ್ರೆಸ್ ಪಕ್ಷಕ್ಕೆ ಈ ಪರಿಯ ಅಜ್ಞಾನವೇ? ಪರಮಾಶ್ಚರ್ಯ!! ವರ್ಷದ ಕೂಳಿನ ಪಂಚರತ್ನಗಳಿಗೂ, ಒಪ್ಪೊತ್ತಿನ ಹರುಷದ ನಕಲಿ ಗ್ಯಾರಂಟಿಗಳಿಗೂ ಹೋಲಿಕೆಯೇ? ಎಲ್ಲರಿಗೂ ಫ್ರೀ ಫ್ರೀ ಎಂದು ಹೇಳಿ ಪಂಗನಾಮ ಹಾಕಿದ್ದು ಗೊತ್ತಿಲ್ಲದ ಸಂಗತಿಯೇ? ಎಲ್ಲಾ ಕಾಲದಲ್ಲಿಯೂ ಟೋಪಿ ಹಾಕಬಹುದು ಎನ್ನುವ ಅಹಂಕಾರವೇ?

ಇದನ್ನೂ ಓದಿ: ದೀಪಾವಳಿಯಂದು 2 ಗಂಟೆಗಳ ಕಾಲ ಮಾತ್ರ ಪಟಾಕಿ ಸಿಡಿಸಬಹುದು: ಸುಪ್ರೀಂ ಕೋರ್ಟ್

ಕೆಟ್ಟ ದಾರಿಯಲ್ಲಿ ಅಧಿಕಾರ ಹಿಡಿಯುವುದು ಕಾಂಗ್ರೆಸ್ ಚಾಳಿ. ಶೆಟ್ಟರ್, ಸವದಿಯಂಥ ಬಿಜೆಪಿಗರನ್ನು ಬಲೆಬೀಸಿ ಬಿಗಿದಪ್ಪಿಕೊಂಡ ಹಸ್ತಪಕ್ಷಕ್ಕೆ, ಮೈಯ್ಯೆಲ್ಲಾ ಉರಿ ಹತ್ತಿಕೊಂಡಿದೆ. ಸ್ವಇಚ್ಛೆಯಿಂದಲೇ ಉರಿ ಇಟ್ಟುಕೊಂಡರೆ ಹೊಣೆ ಯಾರು? ಬಹುಶಃ,ಅಂಗೈಲಿ ಕೇಶವೇಕೆ ಬೆಳೆಯುತ್ತಿಲ್ಲವೆಂದು ಕೈಕೈ ಉಜ್ಜಿಕೊಳ್ಳುತ್ತಿದೆಯಾ ಕಾಂಗ್ರೆಸ್?

ಜೆಡಿಎಸ್‌ ಬಿಜೆಪಿ ಬಾಗಿಲಿಗೆ ಪದೇಪದೆ ಹೋಗುತ್ತದೆಂದು ಹಲ್ಲು ಗಿಂಜುವ ಕಾಂಗ್ರೆಸ್ಸಿಗರಿಗೆ; ಅದೇ ಬಿಜೆಪಿ ಜತೆ ಅಧಿಕಾರ ಅನುಭವಿಸಿದ ನಿತೀಶ್‌ ಕುಮಾರ್‌, ಮಮತಾ ಬ್ಯಾನರ್ಜಿ, ಸ್ಟಾಲಿನ್, ಉದ್ಧವಠಾಕ್ರೆ ಮನೆಗಳ ಸುತ್ತ ಗಿರಕಿ ಹೊಡೆಯಲು ಸಂಕೋಚವಿಲ್ಲ! ಗಂಗೆಯಲ್ಲಿ ಮಿಂದರೆ ಕಾಗೆ ಕೋಗಿಲೆ ಆಗುತ್ತದೆಯೇ ಕಾಮಾಲೆ ಕಣ್ಣಿನ ಕಾಂಗ್ರೆಸ್ಸಿಗರೇ?

ಪ್ರಜಾಪ್ರಭುತ್ವದಲ್ಲಿ ಮೈತ್ರಿ, ಹೊಂದಾಣಿಕೆ ಸಾಮಾನ್ಯ. ಆಯಾ ಸಂದರ್ಭಕ್ಕೆ ತಕ್ಕಂತೆ ಮೈತ್ರಿ ಆಗುತ್ತದೆ. ದೇಶ ವಿದೇಶದಲ್ಲೂ ಇದ್ದದ್ದೇ. ಆದರೆ, ನಮ್ಮ ಪಕ್ಷವನ್ನು ಬಿಜೆಪಿ ಬೀ ಟೀಂ ಎಂದು ಮೂದಲಿಸುವ ಕಾಂಗ್ರೆಸ್ಸಿಗೆ, ಸ್ವತಃ ತಾನೇ ಪ್ರಾದೇಶಿಕ ಪಕ್ಷಗಳ ಬಾಲಂಗೋಚಿ ಎನ್ನುವುದು ಮರೆತಿದೆ. ದುರದೃಷ್ಟಕ್ಕೆ ಇಂಥ ಜಾಣರೋಗಕ್ಕೆ ಮದ್ದಿಲ್ಲ!! ಎಂದು ಹೇಳಿದೆ.