ಆದಿ ಪುರುಷ ಚಿತ್ರದ ಬಗ್ಗೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಹಾಗೂ ಕೇಂದ್ರ ಸೆನ್ಸಾರ್ ಮಂಡಳಿ ವಿವರಣೆ ನೀಡಬೇಕು ಎಂದು ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿಗಳು ಆದೇಶ ನೀಡಿದ್ದಾರೆ.
ರಾಮಾಯಣವನ್ನು ಆಧರಿಸಿದ ‘ಆದಿ ಪುರುಷ’ ಚಿತ್ರ ಜೂನ್ 16 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ. ಓಂರಾವತ್ ನಿರ್ದೇಶನದಲ್ಲಿ ಪ್ರಭಾಸ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಕೃತಿ ಸನೋನ್, ಸೈಪ್ ಅಲಿ ಖಾನ್, ಸನ್ನಿ ಸಿಂಗ್ ಮತ್ತು ಇತರರು ನಟಿಸಿದ್ದಾರೆ. ಬಿಡುಗಡೆಗೂ ಮುನ್ನ ಚಿತ್ರ ಸಾಕಷ್ಟು ಟೀಕೆ ಮತ್ತು ವಿವಾದಗಳನ್ನು ಎದುರಿಸಿತ್ತು. ಅದರಲ್ಲೂ ಚಿತ್ರದ ಗ್ರಾಫಿಕ್ಸ್ ತುಂಬಾ ಕಳಪೆಯಾಗಿದೆ ಎಂಬ ಟೀಕೆ ವ್ಯಕ್ತವಾಗಿತ್ತು. ಆದರೂ ಚಿತ್ರ ಬಿಡುಗಡೆಯಾದ ನಂತರ ಬಾಕ್ಸ್ ಆಫೀಸ್ ಹಿಟ್ ಆಗಿತ್ತು.
ಈ ಹಿನ್ನಲೆಯಲ್ಲಿ ‘ಆದಿ ಪುರುಷ’ ಚಿತ್ರದಲ್ಲಿನ ಸಂಭಾಷಣೆ ಮತ್ತು ದೃಶ್ಯಗಳ ವಿರುದ್ಧ ಅಲಹಾಬಾದ್ ಹೈಕೋರ್ಟ್ನಲ್ಲಿ ಎರಡು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಸಲ್ಲಿಕೆಯಾಗಿದ್ದವು. ಈ ಅರ್ಜಿಗಳು ನ್ಯಾಯಮೂರ್ತಿಗಳಾದ ರಾಜೇಶ್ ಸಿಂಗ್ ಚೌಹಾಣ್ ಮತ್ತು ಶ್ರೀಪ್ರಕಾಶ್ ಸಿಂಗ್ ಅವರನ್ನೊಳಗೊಂಡ ಪೀಠದ ಮುಂದೆ ವಿಚಾರಣೆಗೆ ಬಂದವು. ಆಗ ಚಿತ್ರದ ದೃಶ್ಯಗಳ ಕುರಿತು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಹಾಗೂ ಕೇಂದ್ರ ಸೆನ್ಸಾರ್ ಮಂಡಳಿ ವಿವರಣೆ ನೀಡಬೇಕು ಎಂದು ನ್ಯಾಯಮೂರ್ತಿಗಳು ಆದೇಶಿಸಿದರು. ಮುಂದುವರೆದು, ಚಿತ್ರದ ನಿರ್ಮಾಪಕರ ಮನಸ್ಥಿತಿಯನ್ನು ಪ್ರಶ್ನಿಸಿದ ನ್ಯಾಯಮೂರ್ತಿಗಳು, “ಅವರು ಕುರಾನ್, ಬೈಬಲ್ ಇತ್ಯಾದಿಗಳ ವಾಕ್ಯಗಳನ್ನು ಮುಟ್ಟಬಾರದು ಎಂಬ ಗಾಬರಿಯಲ್ಲಿ ಇರುತ್ತಾರೆ” ಎಂದರು.
“ಇತ್ತೀಚೆಗೆ ಬಿಡುಗಡೆಯಾಗುವ ಕೆಲವು ಚಲನಚಿತ್ರಗಳಲ್ಲಿ ಹಿಂದೂ ದೇವರುಗಳು ಮತ್ತು ಸ್ವಾಮೀಜಿಗಳನ್ನು ಅಪಹಾಸ್ಯ ಮಾಡುವುದು ಸಾಮಾನ್ಯವಾಗಿದೆ. ಆದಿ ಪುರುಷ ಚಿತ್ರಕ್ಕೆ ಕೇಂದ್ರ ಸೆನ್ಸಾರ್ ಮಂಡಳಿ ಅನುಮತಿ ನೀಡಿದ್ದು ದೊಡ್ಡ ತಪ್ಪು; ಚಿತ್ರದಲ್ಲಿ ರಾಮಾಯಣದ ಧಾರ್ಮಿಕ ಪಾತ್ರಗಳನ್ನು ಚಿತ್ರಿಸಿರುವ ರೀತಿ ಹಲವರ ಭಾವನೆಗಳಿಗೆ ಧಕ್ಕೆ ತಂದಿದೆ. ಹಲವು ವಿವಾದಗಳಿರುವ ಚಿತ್ರದಲ್ಲಿ ‘ನಾವು ಹಕ್ಕು ನಿರಾಕರಣೆ ಪೋಸ್ಟ್ ಮಾಡಿದ್ದೇವೆ’ ಎಂದು ಚಿತ್ರತಂಡ ವಾದಿಸುತ್ತಿರುವುದು ವಿಚಿತ್ರವಾಗಿದೆ.
ಕುರಾನ್, ಬೈಬಲ್ ಬಗ್ಗೆ ಸಾಕ್ಷ್ಯಚಿತ್ರವನ್ನು ನಿರ್ಮಿಸಿ ನೋಡಿ; ಏನಾಗುತ್ತೆ ಎಂದು ನಂತರ ತಿಳಿಯುತ್ತೆ” ಎಂದು ತಿಳಿಸಿದ ನ್ಯಾಯಾಧೀಶರು, ವಿಚಾರಣೆ ವೇಳೆ ಗೈರಾಗಿದ್ದ ನಿರ್ಮಾಪಕ ಹಾಗೂ ನಿರ್ದೇಶಕರಿಗೆ ನೋಟಿಸ್ ಕಳುಹಿಸುವಂತೆ ಆದೇಶಿಸಿ ಮುಂದಿನ ವಿಚಾರಣೆಯನ್ನು ಮುಂದಿನ ಬುಧವಾರಕ್ಕೆ ಮುಂದೂಡಿದರು.