ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
ನಿರುದ್ಯೋಗ Archives » Dynamic Leader
November 23, 2024
Home Posts tagged ನಿರುದ್ಯೋಗ
ದೇಶ

ಡಿ.ಸಿ.ಪ್ರಕಾಶ್

ಕಾಂಗ್ರೆಸ್ ಪಕ್ಷ ಕಳೆದ ಐದು ವರ್ಷಗಳಿಂದ ಭಾರತದಲ್ಲಿ ನಿರುದ್ಯೋಗದ ಬಗ್ಗೆ ಎಚ್ಚರಿಕೆ ನೀಡುತ್ತಲೇ ಬಂದಿದೆ. ಚೀನಾದ ವಸ್ತುಗಳು ಹೆಚ್ಚಾಗಿ ಆಮದು ಆಗಲು ನೋಟು ಅಮಾನ್ಯೀಕರಣ ಮತ್ತು ಜಿಎಸ್‌ಟಿಯೇ ಕಾರಣ. ದೊಡ್ಡ ಕಂಪನಿಗಳಿಗೆ ಮಾತ್ರ ಅನುಕೂಲವಾಗುವ ತಮ್ಮ ಆರ್ಥಿಕ ನೀತಿಯಿಂದ, ಪ್ರಧಾನಿಯವರು 45 ವರ್ಷಗಳಲ್ಲಿ ಭಾರತದ ಅತಿ ಹೆಚ್ಚು ನಿರುದ್ಯೋಗ ದರವನ್ನು ಸೃಷ್ಟಿಸಿದ್ದಾರೆ. ಅಲ್ಲದೆ, ಯುವ ಪದವೀಧರರಲ್ಲಿ ನಿರುದ್ಯೋಗ ದರವು ಶೇ.42ಕ್ಕೆ ಏರಿಕೆಯಾಗಿದೆ.

ನಿನ್ನೆ, ಅಮೆರಿಕಾದ ಬಹುರಾಷ್ಟ್ರೀಯ ಹೂಡಿಕೆ ಬ್ಯಾಂಕ್ ಸಿಟಿಗ್ರೂಪ್ (CITYGROUP) ಭಾರತದಲ್ಲಿ ನಿರುದ್ಯೋಗ ಸಮಸ್ಯೆಯ ಬಗ್ಗೆ ಹೊಸ ವರದಿಯನ್ನು ಬಿಡುಗಡೆ ಮಾಡಿದೆ. ಮತ್ತು ಚುನಾವಣಾ ಪ್ರಚಾರದುದ್ದಕ್ಕೂ ಕಾಂಗ್ರೆಸ್ ಹೇಳಿರುವುದನ್ನು ಈ ವರದಿ ದೃಢಪಡಿಸುತ್ತದೆ.

ಭಾರತೀಯ ಪದವೀಧರರಲ್ಲಿ ನಿರುದ್ಯೋಗ ದರವು ಶೇ.42ಕ್ಕೆ ಏರಿಕೆಯಾಗಿದೆ. ನಮ್ಮ ಯುವಕರಿಗೆ ಉದ್ಯೋಗ ನೀಡಲು ಭಾರತವು ಮುಂದಿನ 10 ವರ್ಷಗಳಿಗೆ ವರ್ಷಕ್ಕೆ 1.2 ಕೋಟಿ ಉದ್ಯೋಗಗಳನ್ನು ಸೃಷ್ಟಿಸಬೇಕಾಗಿದೆ. 7% GDP ಬೆಳವಣಿಗೆಯು ನಮ್ಮ ಯುವಕರಿಗೆ ಸಾಕಷ್ಟು ಉದ್ಯೋಗಗಳನ್ನು ಸೃಷ್ಟಿಸಲು ಸಾಧ್ಯವಿಲ್ಲ. ಪ್ರಸ್ತುತ ನಾವು ಸರಾಸರಿ 5.8% GDP ಬೆಳವಣಿಗೆಯನ್ನು ಮಾತ್ರ ಹೊಂದಿದ್ದೇವೆ.

ಪ್ರಸ್ತುತ 10 ಲಕ್ಷ ಕೇಂದ್ರ ಸರ್ಕಾರದ ಹುದ್ದೆಗಳು ಖಾಲಿ ಇವೆ. ಇದು ಸರ್ಕಾರದ ಕಾರ್ಯವೈಖರಿಗೆ ಅಡ್ಡಿಯಾಗಿದೆ. ಭಾರತದ ಕಾರ್ಮಿಕ ಪಡೆಯಲ್ಲಿ ಶೇ.21ರಷ್ಟು ಮಂದಿ ಮಾತ್ರ ಸಂಬಳದ ಉದ್ಯೋಗ ಹೊಂದಿದ್ದಾರೆ. ಇದು ಕೋವಿಡ್ ಪೂರ್ವದ 24% ಕ್ಕಿಂತ ಕಡಿಮೆ.

ಕೋವಿಡ್ ನಂತರದ ವರ್ಷಗಳಲ್ಲಿ ಕೇವಲ ಬಿಲಿಯನೇರ್ ವರ್ಗ ಮಾತ್ರ ಪ್ರಯೋಜನ ಪಡೆದಿದೆ. ಗ್ರಾಮೀಣ ಪ್ರದೇಶಗಳಲ್ಲಿನ ನೈಜ ವೇತನವು ವರ್ಷಕ್ಕೆ ಶೇ.1-1.5ರಷ್ಟು ಕುಸಿಯುತ್ತಿದೆ. ಈ ಮೂಲಕ ಮೋದಿಯವರು ಗ್ರಾಮೀಣ ಭಾರತೀಯರನ್ನು ಬಡವರನ್ನಾಗಿ ಮಾಡುತ್ತಿದ್ದಾರೆ ಎಂಬುದು ಬಯಲಾಗಿದೆ. ದೇಶದಲ್ಲಿ ಕೇವಲ ಶೇ.4.4ರಷ್ಟು ಯುವಕರು ಮಾತ್ರವೇ ಔಪಚಾರಿಕ ತರಬೇತಿಯನ್ನು ಹೊಂದಿದ್ದಾರೆ.

ಇದರಿಂದ ವಿಫಲವಾದ ಮೋದಿ ಆರ್ಥಿಕತೆಯೇ ನಿರುದ್ಯೋಗಕ್ಕೆ ಮೂಲ ಕಾರಣ ಎಂಬುದು ಬಯಲಾಗಿದೆ. ಆ ವರದಿಯಲ್ಲಿ ದೊಡ್ಡ ಪ್ರಮಾಣದ ಪುನಃಸ್ಥಾಪನೆ ಬೇಕು ಎಂದೂ ಹೇಳಲಾಗಿದೆ. ಜೊತೆಗೆ ಕಡಿಮೆ ವೇತನದ ಸೇವಾ ಉದ್ಯೋಗಗಳಲ್ಲಿ ಕೆಲಸ ಮಾಡುತ್ತಿರುವ ಭಾರತೀಯರು ಮೋದಿ ಸರ್ಕಾರದ ಅಡಿಯಲ್ಲಿ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಹೇಳಿದೆ.

ರಾಜಕೀಯ

ಕೋಲಾರ: ಕೋಲಾರ ಜಿಲ್ಲೆಯ ಶಿಡ್ಲಘಟ್ಟದಲ್ಲಿ ಆಯೋಜಿಸಿದ್ದ ರೋಡ್ ಶೋನಲ್ಲಿ ಪಾಲ್ಗೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಅಭ್ಯರ್ಥಿ ಗೌತಮ್ ಅವರಿಗೆ ಮತ ನೀಡುವಂತೆ ಮನವಿ ಮಾಡಿ ಮಾತನಾಡಿದರು.

ವರ್ಷಕ್ಕೆ 2 ಕೋಟಿ ಉದ್ಯೋಗ ಕೊಡ್ತೀನಿ ಅಂತ ಇಡೀ ದೇಶದ ಯುವಕ, ಯುವತಿಯರಿಗೆ ನಂಬಿಸಿದರು. ನರೇಂದ್ರ ಮೋದಿ ಅವರ ಮಾತನ್ನು ನಂಬಿ ಯುವ ಸಮೂಹ ಮತ ಹಾಕಿತು. ಹೀಗೆ ಮತ ಹಾಕಿದವರೆಲ್ಲಾ ಡಿಗ್ರಿ ಮುಗಿಸಿ ಕೆಲ್ಸ ಕೊಡಿ ಎಂದು ಕೇಳಿದರೆ, “ಹೋಗಿ ಪಕೋಡ ಮಾರಾಟ ಮಾಡಿ” ಅಂದರು. ನಿರುದ್ಯೋಗಿ ಯುವಕ, ಯುವತಿಯರಿಗೆ ಪಕೋಡ ಮಾರಿ ಅನ್ನೋಕೆ ಮೋದಿಯೇ ಪ್ರಧಾನಿ ಆಗಬೇಕಿತ್ತಾ? ಎಂದು ಕಿಡಿ ಕಾರಿದರು.

ಮೋದಿಯವರು ಪ್ರಧಾನಿಯಾಗಿರಲು ನಾಲಾಯಕ್ ಎಂದು ವಿದ್ಯಾವಂತ ಯುವ ಸಮೂಹ ತೀರ್ಮಾನಿಸಿದೆ. ಇಂಥಾ ನಾಲಾಯಕ್ ಗೆ ಮತ ಹಾಕ್ತೀರಾ? ಹತ್ತತ್ತು ವರ್ಷ ಮತ ಹಾಕಿದ್ದೀರ ನಿಮಗೆ, ದೇಶಕ್ಕೆ ಏನಾದ್ರೂ ಸಿಕ್ಕಿತಾ? ಈ ಹತ್ತು ವರ್ಷದಲ್ಲಿ ಏನೇನೂ ಕೊಡದವರು ಈ ಬಾರಿ ನಿಮ್ಮ ಮತ ಕೇಳುತ್ತಿದ್ದಾರೆ, ಹೀಗೆ ಮತ ಕೇಳುವ ಯೋಗ್ಯತೆಯಾಗಲೀ, ಅರ್ಹತೆಯಾಗಲೀ ಬಿಜೆಪಿ ಅವರಿಗೆ ಇದೆಯೇ? ಪ್ರಶ್ನಿಸಿದರು.

ನಾಲಾಯಕ್ ನರೇಂದ್ರಮೋದಿ ಅವರು ಬರುವ ಮೊದಲು ಪೆಟ್ರೋಲ್, ಡೀಸೆಲ್, ಗ್ಯಾಸ್, ರಸಗೊಬ್ಬರ, ಬೇಳೆಕಾಳು, ಅಡುಗೆ ಎಣ್ಣೆ ಬೆಲೆ ಎಷ್ಟಿತ್ತು? ಈಗ ಎಷ್ಟಾಗಿದೆ?‌ ಹೀಗಾಗಿ ಬಿಜೆಪಿಯ ಖಾಲಿ ಚೊಂಬಿಗೆ ಮತ ಹಾಕ್ತೀರಾ? ನಿಮ್ಮ ಜೇಬು ತುಂಬಿಸುವ ಮತ್ತು ನಿಮ್ಮ ಬ್ಯಾಂಕ್ ಖಾತೆಗೆ ಹಣ ಹಾಕಿ ನುಡಿದಂತೆ ನಡೆಯುವ ನಮಗೆ, ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕ್ತೀರೋ? ಎನ್ನುವುದನ್ನು ಯೋಚಿಸಿ ತೀರ್ಮಾನಿಸಿ ಎಂದು ಹೇಳಿದರು.

ರಾಜ್ಯ

ಬೆಂಗಳೂರು: ಚುನಾವಣಾ ಬಾಂಡ್ ಪ್ರಕರಣವು ಕೇಂದ್ರ ಸರ್ಕಾರವನ್ನು ತೀವ್ರ ಸ್ವರೂಪದಲ್ಲಿ ಕಾಡುತ್ತಿದೆ. ತನ್ನ ರಕ್ಷಣೆಗಾಗಿ ತರಾತುರಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನು (ಸಿಎಎ) ಕೇಂದ್ರ ಸರಕಾರ ಜಾರಿಗೆ ತಂದಿದೆ. ಸರಕಾರದ ಈ ನಡೆಯು ಜನರ ಗಮನ ಬೇರೆಡೆಗೆ ಸೆಳೆಯುವ ಹುನ್ನಾರವಾಗಿದೆ ಎಂದು ವೆಲ್‌ಫೇರ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಕರ್ನಾಟಕ ರಾಜ್ಯಾಧ್ಯಕ್ಷ ಅಡ್ವಕೇಟ್ ತಾಹೇರ್ ಹುಸೇನ್ ಹೇಳಿದ್ದಾರೆ.

ಈ ಸಂಬಂಧ ಮಾತನಾಡಿದ ತಾಹೇರ್ ಹುಸೇನ್, “ಈಗಿರುವ ಕೇಂದ್ರ ಸರ್ಕಾರಕ್ಕೆ ಈ ದೇಶದ ಜನರ ಬಗ್ಗೆ ಸ್ವಲ್ಪವೂ ಕಾಳಜಿಯಿಲ್ಲ ಎಂಬುದಕ್ಕೆ ಹಲವಾರು ನಿದರ್ಶನಗಳಿವೆ. ಸಿಎಎ ಜಾರಿಗೆ ತರುವ ಮೂಲಕ ಹೊರದೇಶದವರನ್ನು ನಮ್ಮ ದೇಶದಲ್ಲಿ ತುಂಬಿಸಲು ಪ್ರಯತ್ನಿಸುತ್ತಿದ್ದಾರೆ.

ಇಲ್ಲಿನ ಜನಸಾಮಾನ್ಯರ ನೈಜ ಸಮಸ್ಯೆಗಳ ಕಡೆ ಗಮನ ಹರಿಸುತ್ತಿಲ್ಲ. ರೈತರ ಸಮಸ್ಯೆಗಳನ್ನು ಪರಿಹರಿಸುತ್ತಿಲ್ಲ. ಕೃಷಿ ಕಾಯ್ದೆ ಹೇರಿ ಅವರನ್ನೂ ಕಾಡಲಾಗುತ್ತಿದೆ. ರೈತರು ಬೀದಿಗಿಳಿದಿದ್ದಾರೆ. ನಿರುದ್ಯೋಗಿಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ‌. ಗ್ರಹಬಳಕೆಯ ಆಹಾರ ವಸ್ತುಗಳ ದರಗಳ ಏರಿಕೆಯಿಂದ ಜನರು ತತ್ತರಿಸುತ್ತಿದ್ದಾರೆ. ಈ ಪ್ರಮುಖ ಸಮಸ್ಯೆಗಳ ಕಡೆಗೆ ಗಮನ ಹರಿಸುತ್ತಿಲ್ಲ.

ಕೇಂದ್ರದ ವೈಫಲ್ಯದ ವಿರುದ್ಧ ಜನ ರೋಸಿ ಹೋಗಿದ್ದಾರೆ. ಜೊತೆಗೆ ಬಿಜೆಪಿ ಚುನಾವಣಾ ಬಾಂಡ್ ಪ್ರಕರಣದಿಂದ ಸಂಕಷ್ಟದಲ್ಲಿದೆ.  ಹೀಗಿರುವಾಗ ಚುನಾವಣೆ ಆಸನ್ನವಾಗಿರುವ ಈ ಹೊತ್ತಿಗೆ ಸರಕಾರದ ನಡೆಯು ಬಹಳಷ್ಟು ಅನುಮಾನಗಳನ್ನು ಹುಟ್ಟು ಹಾಕಿದೆ. ಜನರು ಇದನ್ನು ಅರ್ಥ ಮಾಡಿಕೊಳ್ಳಬೇಕು” ಎಂದು ಅವರು ಹೇಳಿದ್ದಾರೆ.

ದೇಶ

‘ಭಾರತೀಯರೆಲ್ಲರೂ ನನ್ನ ಕುಟುಂಬ’ ಎಂದು ಭಾ‍ಷಣ ಮಾಡಿದ ಪ್ರಧಾನಿ ಮೋದಿಯನ್ನು ಪ್ರಶ್ನಿಸಿದ ನಟ ಪ್ರಕಾಶ್ ರಾಜ್, ‘ಮಣಿಪುರದ ಜನರು ಕೂಡ ನಿಮ್ಮ ಕುಟುಂಬವೇ’ ಎಂದು ಕೇಳಿದ್ದಾರೆ.

ಬಿಹಾರದ ಪಾಟ್ನಾದ ಗಾಂಧಿ ಮೈದಾನದಲ್ಲಿ ಮಾರ್ಚ್ 3 ರಂದು ನಡೆದ “ಜನ್ ವಿಶ್ವಾಸ್” ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್, “ಪ್ರಧಾನಿ ಮೋದಿಯವರು ರಾಷ್ಟ್ರೀಯ ಜನತಾ ದಳ ಸೇರಿದಂತೆ ವಿವಿಧ ಪಕ್ಷಗಳ ವಿರುದ್ಧ ಕುಟುಂಬ ರಾಜಕಾರಣದ ಆರೋಪಗಳನ್ನು ಎತ್ತುತ್ತಿದ್ದಾರೆ. ನರೇಂದ್ರ ಮೋದಿ ಕುಟುಂಬ ಆಡಳಿತದ ಮೇಲೆ ದಾಳಿ ನಡೆಸುತ್ತಿದ್ದಾರೆ.

ನಿಮಗೆ ಏಕೆ ಮಕ್ಕಳು ಅಥವಾ ಕುಟುಂಬವಿಲ್ಲ ಎಂಬುದನ್ನು ನೀವು (ಮೋದಿ) ಹೇಳಬೇಕು? ಹಲವು ಕುಟುಂಬಗಳು ರಾಜಕೀಯದಲ್ಲಿದ್ದರೆ ಅದು ಕುಟುಂಬ ಆಡಳಿತವೇ? ಇದು ಉತ್ತರಾಧಿಕಾರ ರಾಜಕಾರಣವೇ? ನಿಮಗೆ (ಮೋದಿ) ಕುಟುಂಬವಿಲ್ಲದಿದ್ದರೆ, ಯಾರು ಏನು ಮಾಡಲು ಸಾಧ್ಯ?” ಎಂದು ಕಟುವಾಗಿ ಟೀಕಿಸಿದ್ದರು.

ಈ ಹಿನ್ನೆಲೆಯಲ್ಲಿ, ನಿನ್ನೆ ತಮಿಳುನಾಡಿಗೆ ಭೇಟಿ ನೀಡಿದ್ದ ಪ್ರಧಾನಿ ಮೋದಿ ಅವರು ಚೆನ್ನೈನ ನಂದನಂನಲ್ಲಿ ಬಿಜೆಪಿ ವತಿಯಿಂದ ನಡೆದ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. “ನಾನು ಕುಟುಂಬ ಆಡಳಿತ ಎಂದು ಮಾತನಾಡುವುದರಿಂದ ಮೋದಿಗೆ ಕುಟುಂಬವೇ ಇಲ್ಲ ಎಂದು “ಇಂಡಿಯಾ” ಮೈತ್ರಿಕೂಟದ ನಾಯಕರು ಮಾತನಾಡುತ್ತಿದ್ದಾರೆ.

ನನ್ನ ಜೀವನ ಒಂದು ತೆರೆದ ಪುಸ್ತಕ. ದೇಶದ 140 ಕೋಟಿ ಜನರು ನನ್ನ ಕುಟುಂಬದವರೇ ಆಗಿದ್ದಾರೆ. ಕೋಟ್ಯಾಂತರ ಹೆಣ್ಣುಮಕ್ಕಳು, ತಾಯಂದಿರು ಮತ್ತು ಸಹೋದರಿಯರೆಲ್ಲರೂ ಮೋದಿಯ ಕುಟುಂಬಕ್ಕೆ ಸೇರಿದವರೇ” ಎಂದು ಹೇಳುವ ಮೂಲಕ ಲಾಲು ಪ್ರಸಾದ್ ಯಾದವ್ ಅವರ ಪ್ರಶ್ನೆಗೆ ತಕ್ಕ ಉತ್ತರ ನೀಡಿದರು.

ಈ ಹಿನ್ನೆಲೆಯಲ್ಲಿ, ದೇಶದ ಜನರೆಲ್ಲ ನನ್ನ ಕುಟುಂಬ ಎಂಬ ಪ್ರಧಾನಿ ಮೋದಿ ಹೇಳಿಕೆ ವಿರುದ್ಧ ನಟ ಪ್ರಕಾಶ್ ರಾಜ್ ಪ್ರಶ್ನೆ ಎತ್ತಿದ್ದಾರೆ. ಈ ಸಂಬಂಧ ಅವರು ತಮ್ಮ ‘ಎಕ್ಸ್’ ಸೈಟ್‌ನಲ್ಲಿ, “ಮಣಿಪುರದ ಜನರು, ದೇಶದ ರೈತರು, ನಿರುದ್ಯೋಗಿ ಯುವಕರು ನಿಮ್ಮ ಕುಟುಂಬವೇ?” ಎಂಬ ಪ್ರಶ್ನೆಯನ್ನು ಎತ್ತಿದ್ದಾರೆ.

ಕಳೆದ ವರ್ಷ ಮೇ ತಿಂಗಳಲ್ಲಿ ಮಣಿಪುರದಲ್ಲಿ ಭುಗಿಲೆದ್ದ ಕೋಮುಗಲಭೆ ಇಂದಿಗೂ ಮುಂದುವರೆದಿದೆ. ಈ ವಿಚಾರದಲ್ಲಿ ಮೋದಿ ಇನ್ನೂ ಆ ರಾಜ್ಯಕ್ಕೆ ಭೇಟಿ ನೀಡಿ ಜನರನ್ನು ಭೇಟಿ ಮಾಡಿಲ್ಲ. ಇನ್ನೂ ಮಣಿಪುರದಲ್ಲಿ ಉದ್ವಿಗ್ನತೆ ಕಡಿಮೆಯಾಗಿಲ್ಲ. ಇದರ ಬೆನ್ನಲ್ಲೇ ನಟ ಪ್ರಕಾಶ್ ರಾಜ್ ಈ ಪ್ರಶ್ನೆ ಎತ್ತಿರುವುದು ಗಮ್ನಾರ್ಹ.

ಉದ್ಯೋಗ

ಬೆಂಗಳೂರು: ಕರ್ನಾಟಕ ಸರ್ಕಾರವು ನಮ್ಮ ಯುವಕರಿಗೆ ಉದ್ಯೋಗ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಇದೇ ಫೆಬ್ರವರಿ 26 ಮತ್ತು 27 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ‘ಯುವ ಸಮೃದ್ಧಿ’ ಮೆಗಾ ಉದ್ಯೋಗ ಮೇಳವನ್ನು ಆಯೋಜಿಸಿದ್ದು ನಾಡಿನ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಅವರು ಈ ಉದ್ಯೋಗ ಮೇಲಕ್ಕೆ ಚಾಲನೆ ನೀಡಲಿದ್ದಾರೆ ಎಂದು ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ತಿಳಿಸಿದರು.

ಇಂದು ವಿಧಾನಸೌಧದಲ್ಲಿ ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ ಸಚಿವರಾದ ಡಾ.ಶರಣ ಪ್ರಕಾಶ್ ಪಾಟೀಲ್ ಹಾಗೂ ಐಟಿ/ಬಿಟಿ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಜಂಟಿ ಸುದ್ದಿಗೋಷ್ಠಿ ನಡೆಸಿ ‘ಯುವ ಸಮೃದ್ಧಿ’ ಮೆಗಾ ಉದ್ಯೋಗ ಮೇಳದ ಕುರಿತು ವಿವರ ಹಂಚಿಕೊಂಡರು.

ಈ ಉದ್ಯೋಗ ಮೇಳದಲ್ಲಿ ರಾಷ್ಟೀಯ, ಅಂತಾರಾಷ್ಟ್ರೀಯ ಮಟ್ಟದ ಸುಮಾರು 500ಕ್ಕೂ ಅಧಿಕ ಕಂಪನಿಗಳು ಭಾಗವಹಿಸುತ್ತಿದ್ದು ಒಂದು ಲಕ್ಷಕ್ಕೂ ಅಧಿಕ ಉದ್ಯೋಗಗಳು ಲಭ್ಯವಿದೆ ಎಂದು ಹೇಳಿದರು.

ಈಗಾಗಲೇ ಆನ್ಲೈನ್ ಮೂಲಕ ರಾಜ್ಯದ 31 ಸಾವಿರಕ್ಕೂ ಅಧಿಕ ಯುವಕರು ಈ ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಲು ನೋಂದಾಯಿಸಿಕೊಂಡಿದ್ದಾರೆ. ಅವರ ಅನುಕೂಲಕ್ಕಾಗಿ 600ಕ್ಕೂ ಅಧಿಕ ಸ್ಟಾಲ್ ಗಳನ್ನು ಹಾಕಲಾಗಿದ್ದು ವಿವಿಧ ಭಾಗಗಳಿಂದ ಆಗಮಿಸುವ ಯುವಕರಿಗಾಗಿ ಉಚಿತ ಬಸ್ ವ್ಯವಸ್ಥೆಯನ್ನೂ ಮಾಡಲಾಗಿದೆ ಎಂಬ ಮಾಹಿತಿಯನ್ನು ಒದಗಿಸಿದರು.

ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿ, ಡಿಪ್ಲೊಮೊ, ಐಟಿಐ, ಎಂಜಿನಿಯರಿಂಗ್ ಸೇರಿದಂತೆ ಯಾವುದೇ ವಿದ್ಯಾರ್ಹತೆ ಹೊಂದಿದವರಿಗೂ ಇಲ್ಲಿ ಉದ್ಯೋಗಾವಕಾಶಗಳು ಲಭ್ಯವಿದ್ದು ನಾಡಿನ ಯುವಜನತೆ ಈ ಉದ್ಯೋಗಮೇಳದಲ್ಲಿ ಪಾಲ್ಗೊಳ್ಳುವ ಮೂಲಕ ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಇದೊಂದು ಅತ್ಯುತ್ತಮ ವೇದಿಕೆಯಾಗಿದೆ ಎಂದು ಹೇಳಿದರು.

ದೇಶ

ಗುಜರಾತ್ ನಲ್ಲಿ ಕಳೆದ 2 ವರ್ಷಗಳಲ್ಲಿ ಕೇವಲ 32 ಯುವಕರಿಗೆ ಮಾತ್ರವೇ ಉದ್ಯೋಗ ನೀಡಿರುವುದು ಆಘಾತಕಾರಿಯಾಗಿದೆ.

ಗುಜರಾತ್ ರಾಜ್ಯದಲ್ಲಿ ವಿಧಾನಸಭೆ ಅಧಿವೇಶನ ನಡೆಯುತ್ತಿದೆ. ಈ ಹಿನ್ನಲೆಯಲ್ಲಿ ಕಾಂಗ್ರೆಸ್ ಶಾಸಕರು ‘ಬಿಜೆಪಿ ಆಡಳಿತದಲ್ಲಿ ಎಷ್ಟು ಯುವಕರಿಗೆ ಸರ್ಕಾರಿ ಉದ್ಯೋಗ ಸಿಕ್ಕಿದೆ’ ಎಂದು ಪ್ರಶ್ನೆ ಎತ್ತಿದರು.

ಇದಕ್ಕೆ ಕೈಗಾರಿಕಾ ಸಚಿವ ಬಲವಂತ್ ಸಿಂಗ್ ರಜಪೂತ್ ನೀಡಿರುವ ಪ್ರತಿಕ್ರಿಯೆ ಭಾರೀ ಆಘಾತವನ್ನುಂಟು ಮಾಡಿದೆ. ಕಳೆದ ಎರಡು ವರ್ಷಗಳಲ್ಲಿ 29 ಜಿಲ್ಲೆಗಳಿಂದ 2,38,978 ಪದವೀಧರರು ಸರ್ಕಾರಿ ಉದ್ಯೋಗಗಳಿಗೆ ನೋಂದಾಯಿಸಿಕೊಂಡಿದ್ದಾರೆ. ಇದರಲ್ಲಿ ಆನಂದ್ ಜಿಲ್ಲೆಯಲ್ಲಿ 21,633, ವಡೋದರಾದಲ್ಲಿ 18,732 ಮತ್ತು ಅಹಮದಾಬಾದ್‌ನಲ್ಲಿ 16,400 ಜನರು ನೋಂದಾಯಿಸಿಕೊಂಡಿದ್ದಾರೆ.

ಕಳೆದ 2 ವರ್ಷಗಳಲ್ಲಿ ಇಷ್ಟು ಲಕ್ಷ ಮಂದಿ ಸರ್ಕಾರಿ ಉದ್ಯೋಗಕ್ಕೆ ಹೆಸರು ನೋಂದಾಯಿಸಿಕೊಂಡಿದ್ದು ಕೇವಲ 32 ಯುವಕರಿಗೆ ಮಾತ್ರ ಸರ್ಕಾರಿ ನೌಕರಿ ನೀಡಲಾಗಿದೆ’ ಎಂದು ಸಚಿವರು ವಿಧಾನಸಭೆಯಲ್ಲಿ ಘೋಷಣೆ ಮಾಡಿರುವುದು ಭಾರೀ ಆಘಾತವನ್ನುಂಟು ಮಾಡಿದೆ.

ಇದಕ್ಕೆ ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಬಿಜೆಪಿ ಸರ್ಕಾರದ ವಿರುದ್ಧ ಬಲವಾದ ಆಕ್ಷೇಪಣೆಗಳನ್ನು ದಾಖಲಿಸುತ್ತಿದೆ. ‘ಗುಜರಾತ್ ಮಾದರಿ ಭಾರತಕ್ಕೆ ಮಾರ್ಗದರ್ಶಿಯಾಗಿದೆ ಎಂದು ಪ್ರಧಾನಿಯಿಂದ ಹಿಡಿದು ಬಿಜೆಪಿ ಕಾರ್ಯಕರ್ತರವರೆಗೆ ಬಡಾಯಿ ಕೊಚ್ಚಿಕೊಳ್ಳುತ್ತಿರುವ ಹಿನ್ನಲೆಯಲ್ಲಿ, ಗುಜರಾತ್ ವಿಧಾನಸಭೆಯಲ್ಲಿಯೇ ಗುಜರಾತ್ ಮಾದರಿಯ ಯೋಗ್ಯತೆ ಏನು ಎಂಬುದು ಬಹಿರಂಗವಾಗಿದೆ’ ಎಂದು ಕಿಡಿಕಾರಿದ್ದಾರೆ.

ಉದ್ಯೋಗ ರಾಜ್ಯ

ಬೆಂಗಳೂರು: ‘2014ರಲ್ಲಿ ಕೋಟಿಗಳ ಲೆಕ್ಕದಲ್ಲಿ ಉದ್ಯೋಗ ನೀಡುವ ಭರವಸೆ ನೀಡಿ ಹತ್ತು ವರ್ಷಗಳ ನಂತರ ಲಕ್ಷಗಳ ಲೆಕ್ಕದಲ್ಲಿ ಉದ್ಯೋಗ ನೀಡಿದ್ದನ್ನು ಸಾಧನೆ ಎಂದು ಬಿಂಬಿಸುತ್ತಿರುವುದು ತಮಾಷೆಯಾಗಿ ಕಾಣುತ್ತಿಲ್ಲವೇ? ಎಲ್ಲಿಯ 20 ಕೋಟಿ ಉದ್ಯೋಗಗಳು? ಎಲ್ಲಿಯ ರೋಜಗಾರ್ ಮೇಳದ ಲಕ್ಷಗಳ ಲೆಕ್ಕದ ಉದ್ಯೋಗಗಳು? ನಿಜ ಹೇಳಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೇ ನೀವು ಸೃಷ್ಟಿಸಿರುವ ಉದ್ಯೋಗಗಳ ಸಂಖ್ಯೆ ಎಷ್ಟು?’ ಎಂದು ಪ್ರಧಾನಿ ನರೇಂದ್ರ ಮೋದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನೆಗಳ ಸುರಿಮಳೆ ಗೈದಿದ್ದಾರೆ.

‘ನರೇಂದ್ರ ಮೋದಿಯವರೇ, ನಿಮ್ಮದೇ ಬಿಜೆಪಿ ಸರ್ಕಾರದ ಸಚಿವ ಸಂಪುಟದ ಜಿತೇಂದರ್ ಸಿಂಗ್ ಅವರು 2022ರ ಜುಲೈ ನಲ್ಲಿ ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ “2014-15 ಮತ್ತು 2021-22ರ ಅವಧಿಯ ನಡುವೆ ಕೇವಲ 7 ಲಕ್ಷ ಹೊಸ ಉದ್ಯೋಗಗಳು ಮಾತ್ರ ಸೃಷ್ಟಿಯಾಗಿತ್ತು ಎಂದು ಹೇಳಿದ್ದರು. ಅಂತಿಮ ಸತ್ಯ ಇದೇ ಇರಬಹುದಾ?’ ಎಂದು ಕೇಳಿದ್ದಾರೆ.

‘ಲೋಕಸಭಾ ಚುನಾವಣೆಯಲ್ಲಿ 400 ಸ್ಥಾನಗಳನ್ನು ಗೆಲ್ಲುವ ಆತ್ಮವಿಶ್ವಾಸ ವ್ಯಕ್ತಪಡಿಸುವ ಪ್ರಧಾನಿ ನರೇಂದ್ರ ಮೋದಿ ಅವರು ಈಗ ತರಾತುರಿಯಿಂದ ಉದ್ಯೋಗ ಮೇಳಗಳನ್ನು ಆಯೋಜಿಸಲು ಕಾರಣ ಯುವಜನರ ಮೇಲಿನ ಕಾಳಜಿಯೇ? ಇಲ್ಲವೇ ಉದ್ಯೋಗ ಇಲ್ಲದೆ ರೊಚ್ಚಿಗೆದ್ದಿರುವ ನಿರುದ್ಯೋಗಿ ಯುವಜನರ ಆಕ್ರೋಶವೇ?

ಪ್ರಧಾನಿಯವರೇ, ಈಗ ನಿಮ್ಮದೇ ಬಿಜೆಪಿ ಸರ್ಕಾರದ ಅಧಿಕೃತ ಅಂಕಿಅಂಶಗಳನ್ನು ಮುಂದಿಟ್ಟುಕೊಂಡು ಮಾತಾಡೋಣ. 2017-18ರ ಎನ್.ಎಸ್.ಎಸ್.ಒ ವರದಿಯ ಪ್ರಕಾರ ಕಳೆದ 45 ವರ್ಷಗಳಲ್ಲೇ ದೇಶದ ನಿರುದ್ಯೋಗ ಪ್ರಮಾಣ ಅತಿ ಗರಿಷ್ಠ ಮಟ್ಟಕ್ಕೆ, ಅಂದರೆ 6.1 ಗೆ ತಲುಪಿದೆ. 2011-12ರಲ್ಲಿ ಈ ಪ್ರಮಾಣ ಶೇ 2.2 ಆಗಿತ್ತು.

ನೆನಪಿರಲಿ, ಕೋವಿಡ್ ಕಾಲದಲ್ಲಿ ನಿರುದ್ಯೋಗದ ಪ್ರಮಾಣ ಜಗತ್ತಿನಾದ್ಯಂತ ಹೆಚ್ಚಾಗಿದ್ದು ನಿಜ. ಆದರೆ ನಮ್ಮಲ್ಲಿ ಇದು 2014-15ರಿಂದಲೇ ಇದು ಪ್ರಾರಂಭವಾಗಿತ್ತು. 2016ರಲ್ಲಿ ನಡೆದ ನೋಟು ಅಮಾನ್ಯೀಕರಣದಿಂದ ಕೈಗಾರಿಕೆಗಳೆಲ್ಲ ಮುಚ್ಚಿಹೋಗಿ ನಿರುದ್ಯೋಗ ಪ್ರಮಾಣ ಮಿತಿ ಮೀರತೊಡಗಿದ್ದನ್ನು ಹಲವಾರು ಆರ್ಥಿಕ ತಜ್ಞರೇ ವಿವರಿಸಿ ಹೇಳಿದ್ದಾರೆ. ಈ ಕಾರಣಕ್ಕಾಗಿಯೇ, 2017-18ರ ಎನ್.ಎಸ್.ಎಸ್.ಒ ಸರ್ವೇಯನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಲು ವಿಳಂಬ ಮಾಡಿತ್ತೇ?

ವಿಶ್ವಬ್ಯಾಂಕ್ 2022ರಲ್ಲಿ ನೀಡಿದ್ದ ವರದಿ ಪ್ರಕಾರ ನಿರುದ್ಯೋಗದ ಪ್ರಮಾಣ ಪಾಕಿಸ್ತಾನದಲ್ಲಿ ಶೇ.11.3ರಷ್ಟಿದ್ದರೆ, ಬಾಂಗ್ಲಾದೇಶದಲ್ಲಿ 12.9 ರಷ್ಟಿತ್ತು. ಭೂತಾನ್ ನಲ್ಲಿ ಶೇ. 14.4 ರಷ್ಟಿದ್ದರೆ, ಚೀನಾದಲ್ಲಿ 13.2 ರಷ್ಟಿತ್ತು. ಆದರೆ, ಅದೇ ಅವಧಿಯಲ್ಲಿ ನಮ್ಮ ಭಾರತದಲ್ಲಿ ನಿರುದ್ಯೋಗ ದರ ಶೇ 23.22 ರಷ್ಟಿತ್ತು. ಇತ್ತೀಚೆಗೆ ಅಂತಾರಾಷ್ಟ್ರೀಯ ಲೇಬರ್ ಆರ್ಗನೈಸೆಷನ್ ಬಿಡುಗಡೆ ಮಾಡಿರುವ ಪಟ್ಟಿ ಪ್ರಕಾರ ನಿರುದ್ಯೋಗದ ಪ್ರಮಾಣದಲ್ಲಿ ನಮ್ಮ ದೇಶ, ನೆರೆಯ ದೇಶಗಳಾದ ಮ್ಯಾನ್ಮರ್, ಬಾಂಗ್ಲಾ, ಮಾರಿಷಸ್ ಗಿಂತಲೂ ಕೆಳಗಿನ ಸ್ಥಾನದಲ್ಲಿರುವುದು ನಿಜವಲ್ಲವೇ ನರೇಂದ್ರ ಮೋದಿ ಅವರೇ?’ ಎಂದು ವ್ಯಂಗ್ಯವಾಡಿದ್ದಾರೆ.

‘ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್‌ ಎಕನಾಮಿ ವರದಿ ಪ್ರಕಾರ ದೇಶದ ನಿರುದ್ಯೋಗ ಪ್ರಮಾಣ 2014ರಲ್ಲಿ 5.44% ಇದ್ದದ್ದು 2023ರ ಅಕ್ಟೋಬರ್‌ನಲ್ಲಿ 10.05% ತಲುಪಿದೆ. ಇನ್ನು ವಯಸ್ಸಿನ ಆಧಾರದಲ್ಲಿ ನೋಡೋದಾದ್ರೆ 20 ರಿಂದ 24ರ ವಯೋಮಾನ – 43.65% ನಿರುದ್ಯೋಗಿಗಳಿದ್ದರೆ; 25 ರಿಂದ 29 ವಯೋಮಾನದವರಲ್ಲಿ -14.33%; 30 ರಿಂದ 34 ವಯೋಮಾನದವರಲ್ಲಿ -2.49% ನಿರುದ್ಯೋಗಿಗಳಿದ್ದಾರೆ.

ಕೇಂದ್ರ ಬಿಜೆಪಿ ಸರ್ಕಾರವೇ ಪ್ರತಿ ಮೂರು ತಿಂಗಳಿಗೊಮ್ಮೆ ಪೀರಿಯಾಡಿಕ್ ಲೇಬರ್ ಫೋರ್ಸ್ ಸರ್ವೇ (ಪಿಎಲ್ಎಫ್ ಎಸ್) ಪ್ರಕಾರ 2019 ರಿಂದ 2022 ರವರೆಗಿನ ಅವಧಿಯಲ್ಲಿ ದೇಶದ ನಿರುದ್ಯೋಗ ಪ್ರಮಾಣ 22.9% ಏರಿಕೆಯಾಗಿದೆ. ಏರಿಕೆಯಾಗಿರುವುದು ಉದ್ಯೋಗಗಳ ಸಂಖ್ಯೆ ಅಲ್ಲ, ಸುಳ್ಳುಗಳ ಸಂಖ್ಯೆ ಅಷ್ಟೆ ಅಲ್ಲವೇ?’ ಎಂದು ಪ್ರಶ್ನಿಸಿದ್ದಾರೆ.

‘2004-2012ರ ಅವಧಿಯಲ್ಲಿ, ಅಂದರೆ ಯುಪಿಎ ಅವಧಿಯಲ್ಲಿ ಪ್ರತಿವರ್ಷ 75 ಲಕ್ಷ ಉದ್ಯೋಗಗಳು ಸೃಷ್ಟಿಯಾಗುತ್ತಿದ್ದವು. ಆದರೆ ಈ ಪ್ರಮಾಣ 2013ರ ನಂತರದಲ್ಲಿ 29 ಲಕ್ಷಕ್ಕೆ ಇಳಿದಿದೆ. ನಿರುದ್ಯೋಗದ ತೀವ್ರತೆ ನಮ್ಮ ದೇಶದಲ್ಲಿ ಎಷ್ಟರಮಟ್ಟಿಗೆ ಇದೆಯೆಂದರೆ, ಎನ್.ಸಿ.ಆರ್.ಬಿ ಪ್ರಕಾರ ಪ್ರತಿ ಗಂಟೆಗೆ ಇಬ್ಬರು ನಿರುದ್ಯೋಗಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ! ಕರ್ನಾಟಕವೊಂದರಲ್ಲೇ 2021ರಲ್ಲಿ 1,129 ನಿರುದ್ಯೋಗಿಗಳು ಆತ್ಮಹತ್ಯೆ ಮಾಡಿಕೊಂಡಿದ್ದರು. ಇವರಿಗೆಲ್ಲಿಯ ರೋಜಗಾರ್ ಮೇಳ ನರೇಂದ್ರ ಮೋದಿ ಅವರೇ?

ಉದ್ಯೋಗ ಅರಸಿ, ದೇಶದಿಂದ ವಿದೇಶಕ್ಕೆ ವಲಸೆ ಹೋಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇತ್ತೀಚೆಗೆ ಫ್ರಾನ್ಸ್ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದ ವಿಮಾನದಲ್ಲಿ 66 ಮಂದಿ ಗುಜರಾತಿಗಳಿದ್ದರು. ತಮ್ಮನ್ನು ಗುಜರಾತಿನಿಂದ ಅಮೆರಿಕಾಗೆ ಅಕ್ರಮವಾಗಿ ಕರೆದೊಯ್ಯಲು ಏಜೆಂಟ್ ಗಳಿಗೆ ತಲಾ 60-80 ಲಕ್ಷ ರೂಪಾಯಿಗಳನ್ನು ನೀಡಿದ್ದರು ಎಂಬ ಅಂಶ ವಿಚಾರಣೆಯಲ್ಲಿ ಬಹಿರಂಗವಾಗಿತ್ತು.

2018 ರಿಂದ 2019ರ ವರೆಗೆ 8,027 ಮಂದಿ, 2019 ರಿಂದ 2020ರ ವರೆಗೆ 19,883 ಮಂದಿ, 2020 ರಿಂದ 2021ರ ವರೆಗೆ 30,662 ಮಂದಿ, 2021 ರಿಂದ 2022ರ ವರೆಗೆ 63,927 ಮಂದಿ ಭಾರತೀಯರು ಅಕ್ರಮವಾಗಿ ಅಮೆರಿಕ ಪ್ರವೇಶಿಸಲು ಯತ್ನಿಸಿ ಬಂಧನಕ್ಕೊಳಗಾಗಿದ್ದಾರೆ. ಈ ಅಕ್ರಮ ವಲಸಿಗರ ಪೈಕಿ ಬಹುಪಾಲು ಜನರು ಗುಜರಾತ್ ಮತ್ತು ಪಂಜಾಬ್ ರಾಜ್ಯಗಳಿಗೆ ಸೇರಿದವರು ಎಂಬುದು ಗಮನಿಸಬೇಕಾದ ಅಂಶ ಅಲ್ಲವೇ?

ಇದು ಹೊಸ ಉದ್ಯೋಗಗಳ ಸೃಷ್ಟಿಯ ಕಥೆಯಾದರೆ, ಇರುವ ಸರ್ಕಾರಿ ಉದ್ಯೋಗಗಳ ಭರ್ತಿಯಲ್ಲೂ ತೀರಾ ನಿರ್ಲಕ್ಷ್ಯ ವಹಿಸಲಾಗುತ್ತಿದೆ. ಬಿಜೆಪಿ ಆಡಳಿತದಲ್ಲಿ ವಿವಿಧ ಇಲಾಖೆಯ 9.79 ಲಕ್ಷ ಹುದ್ದೆಗಳು ಖಾಲಿ ಇವೆ. ಸಣ್ಣಪುಟ್ಟ ಹುದ್ದೆಗಳಿಗೂ ಸ್ನಾತಕೋತ್ತರ ಪದವೀಧರ, ಬಿಇ, ಎಂಬಿಬಿಎಸ್ ಪದವಿ ಪಡೆದವರು ಅರ್ಜಿ ಸಲ್ಲಿಸುವ ವಿದ್ಯಮಾನ ಇತ್ತೀಚೆಗೆ ಸಾಮಾನ್ಯವಾಗುತ್ತಿದೆ. ದೇಶದ ಯುವಜನರು ನಿರುದ್ಯೋಗದ ದಳ್ಳುರಿಯಲ್ಲಿ ಬೇಯ್ತಾ ಇದ್ದಾರೆ. ಕಳೆದ ವರ್ಷಾಂತ್ಯದಲ್ಲಿ ಸಂಸತ್ತಿನ ಭದ್ರತೆಯನ್ನು ಬೇಧಿಸಿ, ಒಳನುಸುಳಿ ಹೊಗೆಬಾಂಬ್ ಸಿಡಿಸುವ ಮಟ್ಟಿಗೆ ಹತಾಶರಾಗಿದ್ದ ಯುವಕರು ಕೂಡಾ ನಿರುದ್ಯೋಗಕ್ಕೆ ಬಲಿಯಾದವರಲ್ಲವೇ  ನರೇಂದ್ರ ಮೋದಿ ಅವರೇ?

‘ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಉದ್ಯೋಗ ಭರ್ತಿಗಾಗಿ ಸರ್ಕಾರಗಳು ನಿರ್ದಿಷ್ಟ ನೇಮಕಾತಿ ಪ್ರಕ್ರಿಯೆ ನಡೆಸುತ್ತವೆ. ಇದಕ್ಕಾಗಿಯೇ ಯುಪಿಎಸ್‌ಸಿ, ಎಸ್ಎಸ್‌ಸಿ, ಲೋಕಸೇವಾ ಆಯೋಗಗಳಗಳಿವೆ. ಹೀಗಿರುವಾಗ ಸಾಕ್ಷಾತ್ ಪ್ರಧಾನಿಯವರೇ ವೀಡಿಯೋ ಕಾನ್ಫರೆನ್ಸ್ ಮೂಲಕ ನೇಮಕಾತಿ ಪತ್ರಗಳ ವಿತರಿಸುತ್ತಿರುವುದು ಯಾವ ಉದ್ಯೋಗಗಳಿಗೆ? ರೋಜ್ ಗಾರ್ ಮೇಳದಲ್ಲಿ ನೀಡಲಾಗುತ್ತಿರುವ ಉದ್ಯೋಗಗಳು ಯಾವುದು? ಇವುಗಳು ಖಾಯಂ ಉದ್ಯೋಗವೇ?ತಾತ್ಕಾಲಿಕವೇ? ಅರೆಕಾಲಿಕವೇ? ಪೂರ್ಣಕಾಲಿಕವೇ? ಈ ಉದ್ಯೋಗಗಳನ್ನು ನೀಡುವಾಗ ಮೀಸಲಾತಿಯನ್ನು ಅನುಸರಿಸಲಾಗಿದೆಯೇ? ಅರ್ಹತೆಗಷ್ಟೇ ಪ್ರಾಮುಖ್ಯ ನೀಡಲಾಗಿದೆಯೇ? ರಾಜಕೀಯ ಒಲವು-ನಿಲುವುಗಳನ್ನು ಪರಿಗಣಿಸಲಾಗಿತ್ತೇ? ಪ್ರಧಾನಿಗಳೇ ಈ ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತದೆ’ ಎಂದು ಕಿಡಿಕಾರಿದ್ದಾರೆ.  

ದೇಶ

ಈಗಾಗಲೇ ಚೀನಾವನ್ನು ಹಿಂದಿಕ್ಕಿ ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಭಾರತ, ಸಾಕಷ್ಟು ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿಲ್ಲ ಎಂದು CMIE ವರದಿ ಬೊಟ್ಟು ಮಾಡಿದೆ.

ಪ್ರಪಂಚದಾದ್ಯಂತ ಆರ್ಥಿಕ ಮಂದಗತಿಯಿಂದಾಗಿ ಕಂಪನಿಗಳಲ್ಲಿ ವಜಾಗೊಳಿಸುವ ಪ್ರಕ್ರಿಯೆಗಳು ತೀವ್ರಗೊಂಡಿವೆ. ಈ ಹಿನ್ನಲೆಯಲ್ಲಿ ನಿರುದ್ಯೋಗ ಪ್ರಮಾಣವೂ ಹೆಚ್ಚುತ್ತಿದೆ ಎಂದು ಮುಂಬೈ ಮೂಲದ ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (CMIE) ವರದಿ ಪ್ರಕಟಿಸಿದೆ.

ಈಗಾಗಲೇ ಚೀನಾವನ್ನು ಹಿಂದಿಕ್ಕಿ ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಭಾರತ, ಸಾಕಷ್ಟು ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿಲ್ಲ ಎಂಬುದನ್ನು ಈ ವರದಿ ಎತ್ತಿ ತೋರಿಸುತ್ತಿದೆ.

ಇದರ ಬಗ್ಗೆ ವಿವರಣೆ ನೀಡಿದ ವ್ಯವಸ್ಥಾಪಕ ನಿರ್ದೇಶಕ ಮಹೇಶ್ ವ್ಯಾಸ್, “ಜಾಗತಿಕ ಮಂದಗತಿಯು, ಏಷ್ಯಾದ ಮೂರನೇ ಅತಿದೊಡ್ಡ ಆರ್ಥಿಕತೆಯ ಮೇಲೆ ಪರಿಣಾಮ ಬೀರುತ್ತವೆ ಎಂಬ ಆತಂಕದ ನಡುವೆ, ಭಾರತದ ನಿರುದ್ಯೋಗ ದರವು ಕಳೆದ ಮೂರು ತಿಂಗಳಲ್ಲಿ ಗರಿಷ್ಠ ಮಾರ್ಚ್‌ ತಿಂಗಳಲ್ಲಿ ಶೇ.7.8ಕ್ಕೆ ಏರಿಕೆಯಾಗಿದೆ.

ಭಾರತದ ಆರ್ಥಿಕ ವೀಕ್ಷಣಾಲಯದ ಅಂಕಿ ಅಂಶಗಳ ಪ್ರಕಾರ ನಗರ ನಿರುದ್ಯೋಗವು ಶೇ.8.4ಕ್ಕೆ ಏರಿಕೆಯಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಇದು ಶೇ.7.5 ರಷ್ಟಿದೆ. ಫೆಬ್ರವರಿಯಲ್ಲಿ ಶೇ.7.5 ಇದ್ದ ನಿರುದ್ಯೋಗ ದರವು ಮಾರ್ಚ್‌ ವೇಳೆಗೆ ಶೇ.7.8ಕ್ಕೆ ಏರಿಕೆಯಾಗಿದೆ.

ರಾಜ್ಯವಾರು ನಿರುದ್ಯೋಗ ವಿವರಗಳಲ್ಲಿ ಗರಿಷ್ಠವಾಗಿ, ಹರಿಯಾಣ-26.8%, ರಾಜಸ್ಥಾನ-26.4%, ಜಮ್ಮು ಮತ್ತು ಕಾಶ್ಮೀರ-23.1%, ಸಿಕ್ಕಿಂ-20.7%, ಬಿಹಾರ-17.6%, ಜಾರ್ಖಂಡ್-17.5%. ಛತ್ತೀಸ್‌ಗಢದಲ್ಲಿ ನಿರುದ್ಯೋಗ ಕನಿಷ್ಠ-0.8% ಮತ್ತು ಪುದುಚೇರಿ-1.5% ಆಗಿರುತ್ತದೆ. ಮತ್ತು ಉತ್ತರಾಖಂಡ, ಗುಜರಾತ್, ಕರ್ನಾಟಕ, ಮೇಘಾಲಯ ಮತ್ತು ಒಡಿಶಾ ರಾಜ್ಯಗಳಲ್ಲಿ ಕನಿಷ್ಠ ನಿರುದ್ಯೋಗವಿದೆ” ಎಂದು ಅವರು ಹೇಳಿದರು.

India’s unemployment rate rose for the second consecutive month in March 2023 and is now at 7.8 percent, data from Centre for Monitoring Indian Economy (CMIE) shows. The unemployment rate in urban markets is higher at 8.51 percent compared with 7.47 percent in rural India.