ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
ಬಳ್ಳಾರಿ Archives » Dynamic Leader
November 23, 2024
Home Posts tagged ಬಳ್ಳಾರಿ
ರಾಜಕೀಯ ರಾಜ್ಯ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಹಾಸ್ಟೆಲ್ ನಲ್ಲಿ ಕಳಪೆ ಗುಣಮಟ್ಟದ ಆಹಾರ ನೀಡುತ್ತಿರುವುದನ್ನು ಖಂಡಿಸಿ, ಸರಣಿ ಟ್ವೀಟ್ ಮಾಡಿರುವ ಜೆಡಿಎಸ್ ‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಹಾಸ್ಟೆಲ್ ನಲ್ಲಿ ಕಳಪೆ ಗುಣಮಟ್ಟದ ಆಹಾರ ನೀಡುತ್ತಿರುವುದನ್ನು ವಿರೋಧಿಸಿ, ಅಲ್ಲಿನ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಯ ಕಾರಣಕ್ಕೆ ಅವರನ್ನು ಹಾಸ್ಟೆಲ್ ನಿಂದ ಹೊರಹಾಕಲು ಸೂಚಿಸಿರುವ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ. ಮುಖ್ಯಮಂತ್ರಿ ಬೊಮ್ಮಾಯಿ ಅವರೆ, ಇದು ಸರ್ವಾಧಿಕಾರವಲ್ಲವೆ?

ಗುಣಮಟ್ಟದ ಆಹಾರ ಒದಗಿಸುವುದು ಸಮಾಜ ಕಲ್ಯಾಣ ಇಲಾಖೆ ಮತ್ತು ಜಿಲ್ಲಾಡಳಿತದ ಜವಾಬ್ದಾರಿ. ವಿದ್ಯಾರ್ಥಿಗಳ ಅಳಲನ್ನು ಕೇಳಿಸಿಕೊಳ್ಳದೆ, ಈ ಹೀನ ಕೆಲಸಕ್ಕೆ ಆದೇಶಿಸಿದ ಜಿಲ್ಲಾಧಿಕಾರಿ, ವಿದ್ಯಾರ್ಥಿಗಳಿಗೆ ಶಿಕ್ಷಿಸಿದ ಜಿಲ್ಲಾ ಇಲಾಖಾಧಿಕಾರಿಗಳು ಎಲ್ಲರನ್ನೂ ಕೂಡಲೇ ಅಮಾನತು ಮಾಡಬೇಕು. ಈ ಬಗ್ಗೆ ಅಗತ್ಯ ತನಿಖೆ ನಡೆಯಲೇಬೇಕು.

ದಲಿತರ ಬಗ್ಗೆ ಮೊಸಳೆ ಕಣ್ಣೀರು ಸುರಿಸುವ ಈ ಸರ್ಕಾರದ ಆಡಳಿತದಲ್ಲಿ ಶೋಷಿತ ಸಮುದಾಯದ ವಿದ್ಯಾರ್ಥಿಗಳನ್ನು ನಡೆಸಿಕೊಳ್ಳುತ್ತಿರುವ ರೀತಿ ಹೇಸಿಗೆ ತರಿಸುತ್ತಿದೆ. ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು ಅವರೆ, ವಿದ್ಯಾರ್ಥಿಗಳ ಪರ ನಿಲ್ಲದೆ, ಅವರ ವಿರುದ್ಧದ ಕ್ರಮಕ್ಕೆ ಸಾಥ್ ನೀಡಿರುವುದು ಎಷ್ಟು ಸರಿ? ನಿಮ್ಮ ಮುಖವಾಡ ಕಳಚಿದೆ.

ವಿದ್ಯಾರ್ಥಿಗಳ ಹಿತ ಕಾಪಾಡಬೇಕಿರುವ ಆಡಳಿತ ವರ್ಗ ಇಷ್ಟು ಅಪ್ರಜಾತಾಂತ್ರಿಕವಾಗಿ ನಡೆದುಕೊಳ್ಳುವುದು ಖಂಡನೀಯ. ಸಮಸ್ಯೆ ಪರಿಹರಿಸಿ, ವಿದ್ಯಾರ್ಥಿಗಳ ಮನಗೆಲ್ಲಬೇಕು. ಅದು ಬಿಟ್ಟು, ಇಂತಹ ಕೆಟ್ಟ ನಿರ್ಧಾರ ಸರಿಯಲ್ಲ. ಅಂಗೈ ಹುಣ್ಣಿಗೆ ಕನ್ನಡಿ ಯಾಕೆ ಎನ್ನುವ ಹಾಗೆ ಆಡಳಿತ ಎಷ್ಟು ಕುಸಿದಿದೆ ಎಂಬುದಕ್ಕೆ ದೊಡ್ಡ ಸಾಕ್ಷಿ ಏನು ಬೇಕು? ಎಂದು ಸರ್ಕಾರವನ್ನು ಕಾರವಾಗಿ ಪ್ರಶ್ನಿಸಿದೆ.

ಬೆಂಗಳೂರು ರಾಜಕೀಯ ರಾಜ್ಯ
  • ಡಿ.ಸಿ.ಪ್ರಕಾಶ್, ಸಂಪಾದಕರು.

ಬೆಂಗಳೂರು: ಬೆಂಗಳೂರಿನಲ್ಲಿ ಮಾಜಿ ಸಚಿವ, ಗಣಿ ಉದ್ಯಮಿ ಗಾಲಿ ಜನಾರ್ಧನ ರೆಡ್ಡಿ ‘ಕರ್ನಾಟಕ ರಾಜ್ಯ ಪ್ರಗತಿ ಪಕ್ಷ’ ಎಂಬ ಹೊಸ ಪಕ್ಷವನ್ನು ಘೋಷಣೆ ಮಾಡಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಯಾರು ಬೇಕಾದರೂ ಪಕ್ಷ ಕಟ್ಟಬಹುದು. ಸಂವಿಧಾನ ಎಲ್ಲರಿಗೂ ಆ ಅವಕಾಶವನ್ನು ಕಲ್ಪಿಸಿಕೊಟ್ಟಿದೆ. ಆದರೇ ಯಾರು, ಯಾತಕ್ಕಾಗಿ, ಯಾವ ಸನ್ನಿವೇಶದಲ್ಲಿ ಪಕ್ಷವನ್ನು ಸ್ಥಾಪನೆ ಮಾಡುತ್ತಿದ್ದಾರೆ ಎಂಬುದು ಮುಖ್ಯವಾಗುತ್ತದೆ.

2008ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷವು 110 ಸ್ಥಾನಗಳಲ್ಲಿ ಗೆದ್ದು ಬೀಗಿದರೂ ಬಹುಮತವನ್ನು ಪಡೆಯಲು ಅದರಿಂದ ಸಾದ್ಯವಾಗಲಿಲ್ಲ. 6 ಜನ ಪಕ್ಷೇತರರ ಬೆಂಬಲದೊಂದಿಗೆ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿತು. ದಕ್ಷಿಣ ಭಾರತದಲ್ಲಿ ರಚಿತವಾದ ಮೊದಲ ಬಿಜೆಪಿ ಸರ್ಕಾರ ಇದಾಗಿತ್ತು. 2008ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷ 110 ಸ್ಥಾನಗಳನ್ನು ಗೆಲ್ಲಲು ಮತ್ತು 6 ಜನ ಪಕ್ಷೇತರರ ಬೆಂಬಲವನ್ನು ಪಡೆಯುವ ವಿಚಾರದಲ್ಲಿ ಜನಾರ್ಧನ ರೆಡ್ಡಿ ಮತ್ತು ಅವರ ಸಹೋದರರ ಪಾತ್ರವು ಬಹುದೊಡ್ಡದಿತ್ತು. ಆ ಚುನಾವಣೆಯಲ್ಲಿ ಮುಂಚೂಣಿಯಲ್ಲಿದ್ದು ಮಿಂಚಿದ ಹೀರೋ ಅವರೇ ಆಗಿದ್ದರು.

ನಂತರ ಕಾಲವು ಬದಲಾಗಿ, ಅಕ್ರಮ ಗಣಿಗಾರಿಕೆಯಲ್ಲಿ ಸಿಲುಕಿಕೊಂಡ ಜನಾರ್ಧನ ರೆಡ್ಡಿ ಜೈಲು ಪಾಲಾದರು. ‘ಅಭಿವೃದ್ಧಿ’, ‘ಭ್ರಷ್ಟಾಚಾರ ಮುಕ್ತ’ ಎಂದೆಲ್ಲ ಹೇಳಿಕೊಂಡ ಬಿಜೆಪಿ, ಜನಾರ್ಧನ ರೆಡ್ಡಿಯನ್ನು ಮೆಲ್ಲೆಗೆ ಕೈತೊಳೆದುಕೊಂಡಿತು. ಇದರಿಂದ ಕುಪಿತರಾದ ಜನಾರ್ಧನ ರೆಡ್ಡಿ, ತಮ್ಮ ಆಪ್ತ ಮಿತ್ರ ಶ್ರೀರಾಮುಲುವನ್ನು ತಮ್ಮ ಶಾಸಕ, ಸಚಿವ ಸ್ಥಾನಕ್ಕೆ ಮತ್ತು ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಕೊಡಿಸಿ, ತಮ್ಮ ವಿರೋಧವನ್ನು ವ್ಯಕ್ತಪಡಿಸಿದರು. ನಂತರ ನಡೆದ ಉಪ ಚುನಾವಣೆಯಲ್ಲಿ ಶ್ರೀರಾಮುಲುವನ್ನು ಸ್ವತಂತ್ರ ಅಭ್ಯರ್ಥಿಯಾಗಿ ಗೆಲ್ಲಿಸಿಕೊಂಡರು. ನಂತರ ಬಿಜೆಪಿಯ ವಿರುದ್ಧ ಸೇಡು ತೀರಿಸಿಕೊಳ್ಳಲು ಆಪ್ತನಾದ ಶ್ರೀರಾಮುಲುವಿನ ಮುಖಾಂತರ 2011ರಲ್ಲಿ ಬಿ.ಎಸ್.ಆರ್ (ಬಡವರ, ಶ್ರಮಿಕರ, ರೈತರ) ಕಾಂಗ್ರೆಸ್ ಪಕ್ಷವನ್ನು ಸ್ಥಾಪಿಸಿ, ಬಿಜೆಪಿಗೆ ಟಕ್ಕರ್ ಕೊಟ್ಟರು.

ಈ ಹಿನ್ನಲೆಯಲ್ಲಿ, ಮತ್ತೊಂದು ಅಕ್ರಮ ಗಣಿಗಾರಿಕೆಯ ವಿಚಾರದಲ್ಲಿ ಸಿಲುಕಿಕೊಂಡ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ಆಪ್ತರು ಮತ್ತು ಸಾವಿರಾರು ಬೆಂಬಲಿಗರೊಂದಿಗೆ ರಾಜಭವನಕ್ಕೆ ತೆರಳಿ, ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ಯಡಿಯೂರಪ್ಪನ ಸೂಚನೆಯ ಮೇರೆಗೆ ಅವರ ಉತ್ತರಾಧಿಕಾರಿಯಾಗಿ ಸದಾನಂದಗೌಡರು ಮುಖ್ಯಮಂತ್ರಿಯಾಗಿ ಅಧಿಕಾರವನ್ನು ಸ್ವೀಕರಿಸಿಕೊಂಡರು. ನಂತರ ಸದಾನಂದಗೌಡರನ್ನು ಬದಲಿಸಿ, ಜಗದೀಶ್ ಶೆಟ್ಟರ್ ಅವರಿಗೆ ಮುಖ್ಯಮಂತ್ರಿ ಮಾಡಲಾಯಿತು. ಭ್ರಷ್ಟಾಚಾರ ವಿಷಯದಲ್ಲಿ ಜೈಲು ಸೇರಿ ಹೊರಬಂದಿದ್ದ ಯಡಿಯೂರಪ್ಪನನ್ನು ಬಿಜೆಪಿ ಪಕ್ಷವು ಸ್ವಲ್ಪ ದೂರವೇ ಇಟ್ಟಿತ್ತು.

ಇದರಿಂದ ರೊಚ್ಚಿಗೆದ್ದ ಯಡಿಯೂರಪ್ಪ, 30 ನವಂಬರ್ 2012 ರಂದು ತಮ್ಮ ಶಾಸಕಾಂಗ ಸದಸ್ಯತ್ವಕ್ಕೆ ಮತ್ತು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ, 9 ಡಿಸಂಬರ್ 2012ರಲ್ಲಿ ಪದ್ಮನಾಭ ಪ್ರಸನ್ನ ಕುಮಾರ್ ಸ್ಥಾಪಿತ ಕರ್ನಾಟಕ ಜನತಾ ಪಕ್ಷದಲ್ಲಿ ಸೇರ್ಪಡೆಯಾದರು. ಬಿಜೆಪಿ ಪಕ್ಷವನ್ನು ತೊರೆದು, ಪ್ರಾದೇಶಿಕ ಪಕ್ಷಗಳನ್ನು ಪ್ರಾರಂಭಿಸಿದ ಶ್ರೀರಾಮುಲು ಮತ್ತು ಯಡಿಯೂರಪ್ಪ 2013ರ ವಿಧಾನಸಭಾ ಚುನಾವಣೆಯಲ್ಲಿ 224 ಕ್ಷೇತ್ರಗಳಲ್ಲಿಯೂ ತಮ್ಮ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದರು. ಇದರಿಂದ ಬಿಜೆಪಿಯ ಮತಗಳು ವಿಭಜನೆಯಾಗಿ ಬಿಜೆಪಿ ಪಕ್ಷಕ್ಕೆ ಭಾರೀ ಹಿನ್ನಡೆಯಾದವು. ಅಧಿಕಾರದಲ್ಲಿದ್ದ ಬಿಜೆಪಿ ಪಕ್ಷವು ಬರೀ 40 ಶೀಟುಗಳನ್ನು ಮಾತ್ರವೇ ಪಡೆದು, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬರಲು ಅನುವು ಮಾಡಿಕೊಟ್ಟಿತು.

ಇವರಂತೆಯೇ 1993 ರಿಂದ 2003 ರವರೆಗೆ ಬಿಜೆಪಿ ಪಕ್ಷದಲ್ಲಿದ್ದ ವಿಜಯ ಸಂಕೇಶ್ವರ್, ಕೆಲವು ಬಿನ್ನಾಭಿಪ್ರಾಯಗಳಿಂದ ಪಕ್ಷ ತೊರೆದು, ‘ಕನ್ನಡ ನಾಡು’ ಪಕ್ಷವನ್ನು ಸ್ಥಾಪಿಸಿ ಕೈಸುಟ್ಟುಕೊಂಡರು. ನಂತರ ಜ್ಯಾತ್ಯತೀತ ಜನತಾದಳದೊಂದಿಗೆ ಪಕ್ಷವನ್ನು ವಿಲೀನಗೊಳಿಸಿ 2004ರಲ್ಲಿ ಚುನಾವಣೆಗೆ ಸ್ಪರ್ದಿಸಿದರು. ಜೆಡಿಎಸ್‍ನಲ್ಲೂ ಅವರು ಬಹಳಕಾಲ ಉಳಿಯಲಿಲ್ಲ. ನಂತರ ಯಡಿಯೂರಪ್ಪನವರ ಕರ್ನಾಟಕ ಜನತಾ ಪಕ್ಷಕ್ಕೆ ಸೇರಿಕೊಂಡರು. ನಂತರದ ದಿನಗಳಲ್ಲಿ ಯಡಿಯೂರಪ್ಪನವರೊಂದಿಗೆ ಸೇರಿ ಮತ್ತೆ ಬಿಜೆಪಿ ಪಕ್ಷಕ್ಕೆ ಮರು ಸೇರ್ಪಡೆಯಾದರು.

ಬಿಜೆಪಿಯಿಂದ ಮುನಿಸಿಕೊಂಡು ಪಕ್ಷವನ್ನು ತೈಜಿಸಿದ ವಿಜಯ ಸಂಕೇಶ್ವರ್, ಶ್ರೀರಾಮುಲು, ಬಿ.ಎಸ್.ಯಡಿಯೂರಪ್ಪ ಮುಂತಾದವರೆಲ್ಲ ‘ನನ್ನಿಂದಲೇ ಪಕ್ಷ-ಪಕ್ಷದಿಂದ ನಾನಲ್ಲ’ ಎಂದು ಹೇಳಿಕೊಂಡು, ರಾಜಾರೋಷವಾಗಿ ಪ್ರಾದೇಶಿಕ ಪಕ್ಷಗಳನ್ನು ಸ್ಥಾಪಿಸಿ, ಏನೂ ಮಾಡಲಾಗದೇ ಹೊಡೆದ ಚೆಂಡಿನಂತೆ ಮತ್ತೆ ಬಿಜೆಪಿ ಅಂಗಳಕ್ಕೆ ಬಂದು ಬಿದ್ದಿದ್ದು ಇತಿಹಾಸ.

ಈ ಸರದಿಯಲ್ಲಿ ಈಗ ಮತ್ತೊಂದು ಹೊಸ ಸೇರ್ಪಡೆ ಗಾಲಿ ಜನಾರ್ಧನ ರೆಡ್ಡಿ. ಬಿಜೆಪಿ ಪಕ್ಷದಲ್ಲಿ ಸಕ್ರಿಯರಾಗಿದ್ದ ಜನಾರ್ಧನ ರೆಡ್ಡಿ ಎಂಎಲ್‍ಸಿಯಾಗಿ, ಸಚಿವರಾಗಿ ನಂತರ ಗಣಿಗಾರಿಕೆ ಅಕ್ರಮಗಳ ವಿಚಾರದಲ್ಲಿ ಜೈಲು ಸೇರಿಕೊಂಡರು. ನಂತರ ಸುಪ್ರೀಂ ಕೋರ್ಟ್ ನೀಡಿದ ಷರತ್ತುಬದ್ಧ ಜಾಮೀನಿನ ಮೇಲೆ ಹೊರ ಬಂದಿದ್ದಾರೆ. ಇಷ್ಟು ದಿನಗಳು ಅವರು ಎಲ್ಲಿದ್ದರು, ಏನು ಮಾಡುತ್ತಿದ್ದರು ಎಂಬ ವಿಚಾರಗಳೆಲ್ಲ ನಮಗೆ ಸ್ವಲ್ಪ ಮಟ್ಟಕ್ಕೆ ತಿಳಿದಿದ್ದೆ. ಆದ್ದರಿಂದ ನಾವು ಹಳೆಯ ವಿಚಾರಕ್ಕೆ ಹೋಗುವುದು ಈ ಸಂದರ್ಭದಲ್ಲಿ ಸೂಕ್ತವಲ್ಲ.

ಈ ಹಿನ್ನಲೆಯಲ್ಲಿ ಜನಾರ್ಧನ ರೆಡ್ಡಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷವನ್ನು ಘೋಷಿಸಿರುವುದು ಅನುಮಾನಕ್ಕೆ ಎಡೆಮಾಡಿ ಕೊಟ್ಟಿದೆ.

ಹಿಂದಿನ ಸನ್ನಿವೇಶಗಳು ಬೇರೆಯೇ ಆಗಿತ್ತು. ಕಟ್ಟಿ ಬೆಳೆಸಿದ ಪಕ್ಷವೇ ಚೂರಿ ಹಾಕಿದಾಗ, ‘ಕ್ರಿಯೆಗೆ ಪ್ರತಿಕ್ರಿಯೆ’ ಎಂಬಂತೆ ಬಿಜೆಪಿಯನ್ನು ಬಗ್ಗುಬಡಿದು, ಸೇಡನ್ನು ತೀರಿಸಿಕೊಳ್ಳಲು ವೇದಿಕೆಯನ್ನು ಸಜ್ಜುಗೊಳಿಸಲಾಯಿತು. ಅದರಲ್ಲಿ ಯಶಸ್ವಿಯನ್ನೂ ಕಂಡರು. ಇಬ್ಬರ ಜಗಳ ಮೂರನೇಯವನಿಗೆ ಲಾಭ ಎಂಬಂತೆ ಕಾಂಗ್ರೆಸ್ ಪಕ್ಷವು 122 ಸ್ಥಾನಗಳಲ್ಲಿ ಗೆದ್ದು ಬಹುಮತದೊಂದಿಗೆ 5 ವರ್ಷಗಳು ರಾಜ್ಯವನ್ನಾಳಿತು. ಇದರ ಅನುಭವ ಯಾರಿಗೆ ಇದೆಯೋ ಇಲ್ಲವೋ ಖಂಡಿತ ಬಿಜೆಪಿ ಪಕ್ಷಕ್ಕೆ ಇದ್ದೇ ಇರುತ್ತದೆ.

ಆದರೇ ಇಂದಿನ ಪರಿಸ್ಥಿತಿ ಬೇರೆಯದಾಗಿದೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‍ಷಾ ಜೋಡಿ ಅಷ್ಟು ಸುಲುಭವಾಗಿ ಇಂತಹ ಬಂಡಾಯಕ್ಕೆಲ್ಲ ಅವಕಾಶ ಮಾಡಿಕೊಡುವುದಿಲ್ಲ. 2023ರಲ್ಲಿ ನಡೆಯಲಿರುವ ಕರ್ನಾಟಕ ವಿಧಾನಸಭೆ ಚುನಾವಣೆ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಪ್ರತಿಷ್ಠೆಯ ಚುನಾವಣೆಯಾಗಿದೆ. ಕರ್ನಾಟಕದಲ್ಲಿ ಈ ಬಾರಿ ಬಿಜೆಪಿಯನ್ನು ಗೆಲ್ಲಿಸಲೇಬೇಕು ಎಂದು ಪಣತೊಟ್ಟಿರುವ ಬಿಜೆಪಿ ವರಿಷ್ಠರು, ಅದಕ್ಕೆ ಮಾಡಬೇಕಾದ ಎಲ್ಲಾ ಸಿದ್ದತೆಗಳನ್ನು ತಮ್ಮದೇ ಆದ ತತ್ವ ಸಿದ್ಧಾಂತಗಳ ಅಡಿಯಲ್ಲಿ ಅಚ್ಚುಕಟ್ಟಾಗಿ ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ ಮತ್ತೊಮ್ಮೆ ಬಿಜೆಪಿಯನ್ನು ಗೆಲ್ಲಿಸಿಕೊಂಡರೆ ‘ಕಾಂಗ್ರೆಸ್ ಮುಕ್ತ ಭಾರತ’ ಅಭಿಯಾನ ಯಶಸ್ವಿಯಾಗಿದೆ ಎಂದು ಹೇಳಿಕೊಳ್ಳುವ ಮೂಲಕ ದಕ್ಷಿಣ ಭಾರತದಲ್ಲಿ ಬಿಜೆಪಿಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಬೆಳೆಸಲು ಅವರಿಗೆ ಅನುಕೂಲವಾಗುತ್ತದೆ. ಮತ್ತು 2024ರಲ್ಲಿ ನಡೆಯುವ ಲೋಕಸಭಾ ಚುನಾವಣೆಯಲ್ಲಿ ನರೇಂದ್ರಮೋದಿಯವರು ಬಹುಮತದೊಂದಿಗೆ ಮೂರನೇ ಬಾರಿಗೆ ಪ್ರಧಾನಿಯ ಪಟ್ಟಕ್ಕೆ ಏರಲು ಇದು ಸಹಕಾರಿಯೂ ಆಗುತ್ತದೆ. ಅದೇ ರೀತಿ ಕಾಂಗ್ರೆಸ್ ಪಕ್ಷವು ಕರ್ನಾಟಕದಲ್ಲಿ ಅಧಿಕಾರದ ಚುಕ್ಕಾಣಿಯನ್ನು ಹಿಡಿದರೆ, ರೈತ ವಿರೋಧಿ, ಅಲ್ಪಸಂಖ್ಯಾತ ವಿರೋಧಿ, ಮೀಸಲಾತಿ ವಿರೋಧಿ, ಭ್ರಷ್ಟಾಚಾರಿಯಾದ 40% ಕಮಿಷನ್ ಸರ್ಕಾರವನ್ನು ಕರ್ನಾಟಕದಿಂದ ಕಿತ್ತೊಗೆಯಲಾಗಿದೆ ಎಂಬ ಸಂದೇಶವನ್ನು ದೇಶಾದ್ಯಂತ ಬಿತ್ತರಿಸುತ್ತಾರೆ. ಇದರಿಂದ ಕಾಂಗ್ರೆಸ್ ಪಕ್ಷವು ದೇಶದಲ್ಲಿ ಮತ್ತೊಮ್ಮೆ ಪುನಶ್ಚೇತನಗೊಳ್ಳುತ್ತದೆ. ದಕ್ಷಿಣ ಭಾರತದಲ್ಲಿ ಬಿಜೆಪಿಯ ಓಟಕ್ಕೆ ಕಡಿವಾಣ ಬೀಳುವುದರೊಂದಿಗೆ 2024ರ ಲೋಕಸಭಾ ಚುನಾವಣೆಯಲ್ಲಿ ಇದುವೇ ಬಿಜೆಪಿ ಪಕ್ಷಕ್ಕೆ ಮತ್ತು ಪ್ರಧಾನಿ ನರೇಂದ್ರ ಮೋದಿಗೆ ಮುಳುವಾಗುತ್ತದೆ.

ರಾಷ್ಟ್ರ ರಾಜಕಾರಣದಲ್ಲಿ ಅತ್ಯಂತ ಮಹತ್ವದ ಮತ್ತು ಪ್ರತಿಷ್ಠೆಯ ಚುನಾವಣೆಯಾಗಿರುವ 2023ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಅನಾನುಕೂಲವಾಗುವ ವಾತಾರಣಗಳೇ ಹೆಚ್ಚಾಗಿ ಕಂಡುಬರುತ್ತಿದೆ. 40% ಕಮಿಷನ್, ಪೇಸಿಎಂ, ಪಿಎಸ್‍ಐ ಹಗರಣ, ಅಲ್ಪಸಂಖ್ಯಾತ ವಿರೋಧಿ, ರೈತ ವಿರೋಧಿ, ಮೀಸಲಾತಿ ಗೊಂದಲ, ಗಡಿ ವಿಚಾರ, ಹಳೆಯ ಪಿಂಚಣಿ ವ್ಯವಸ್ಥೆ ಜಾರಿ ಮುಂತಾದ ಹಲವಾರು ಪ್ರಮುಕವಾದ ವಿಷಯಗಳನ್ನು ಜೀವಂತವಾಗಿಟ್ಟುಕೊಂಡು ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ನಿರಂತರವಾಗಿ ದಾಳಿ ನಡೆಸುತ್ತಿದೆ. ಇಂದರಿಂದ ಬಿಜೆಪಿಗೆ ಭಾರೀ ಮುಖಭಂಗ ಮತ್ತು ಹಿನ್ನಡೆಯಾಗುತ್ತಿರುವುದು ಸತ್ಯದ ಮಾತು. ಅದುಮಾತ್ರವಲ್ಲ ಹಿಂದೂಗಳನ್ನು ರಕ್ಷಣೆ ಮಾಡಲು ಬಿಜೆಪಿ ಸರ್ಕಾರ ವಿಫಲವಾಗಿದೆ ಎಂದು ಹಿಂದೂಪರ ಸಂಘಟನೆಗಳು ಕೂಡ ಧ್ವನಿ ಎತ್ತಿ ಸರ್ಕಾರದ ವಿರುದ್ಧ ಬಂಡಾಯ ನಿಂತಿರುವುದು ಸುಳ್ಳೇನಲ್ಲ.

ಉತ್ತರ ಕರ್ನಾಟಕ ಭಾಗದಲ್ಲಿ ಬಿಜೆಪಿ ಪಕ್ಷಕ್ಕೆ ಭಾರೀ ಹಿನ್ನಡೆಯಾಗುವ ಲಕ್ಷಣಗಳೂ ಕಂಡುಬರುತ್ತಿವೆ ಎಂದು ಹೇಳಲಾಗುತ್ತಿದೆ. ಆದ್ದರಿಂದ ಬಿಜೆಪಿ ವಿರೋಧಿ ಮತಗಳು ಕಾಂಗ್ರೆಸ್-ಜೆಡಿಎಸ್ ಪಕ್ಷಗಳಿಗೆ ಬೀಳುವುದನ್ನು ತೆಡೆಯಲಿಕ್ಕಾಗಿ ಬಿಜೆಪಿ ಮತ್ತು ಸಂಘಪರಿವಾರವು ಜನಾರ್ಧನ ರೆಡ್ಡಿಯ ಮೂಲಕ ಹೊಸ ತಾಲೀಮು ನಡೆಸುತ್ತಿದೆ ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಣೆ ಮಾಡಲಾಗುತ್ತಿದೆ.

ಪತ್ರಿಕಾ ಸಂದರ್ಶನದಲ್ಲಿ ಮಾತನಾಡಿದ ಜನಾರ್ಧನ ರೆಡ್ಡಿ, ‘ನಾನು ಅಡ್ಜಸ್ಟ್ ಮೆಂಟ್ ಪಾಲಿಟಿಕ್ಸ್ ಗಾಗಿ ಪಕ್ಷ ಸ್ಥಾಪಿಸುತ್ತಿಲ್ಲ. ವಾಜಪೇಯಿ ರವರನ್ನು ಸ್ಮರಿಸುತ್ತಾ ಹೊಸ ಪಕ್ಷವನ್ನು ಘೋಷನೆ ಮಾಡಿದ್ದೇನೆ. ಯಡಿಯೂರಪ್ಪ ನನ್ನ ತಂದೆಯ ಸಮಾನರು. ಯಡಿಯೂರಪ್ಪನವರನ್ನು ಅಧಿಕಾರದಿಂದ ದೂರ ಇಡಬಹುದು ಆದರೆ, ಅವರ ಶಕ್ತಿಯನ್ನು ಕಿತ್ತುಕೊಳ್ಳಲು ಆಗುವುದಿಲ್ಲ’ ಎಂದು ಹೇಳಿದ್ದಾರೆ. ಜನಾರ್ಧನ ರೆಡ್ಡಿಯ ಮಾತುಗಳನ್ನು ಗಮನಿಸಿದರೆ ‘ನಮ್ಮ ಪಕ್ಷವು ಬಿಜೆಪಿಯ ವಿರುದ್ಧವಲ್ಲ’ ಎಂದು ಹೇಳಿದಂತಿದೆ. ಇದನ್ನೇ ಹೇಳುವುದು ಅಡ್ಜಸ್ಟ್ ಮೆಂಟ್ ಪಾಲಿಟಿಕ್ಸ್ ಎಂದು.

ಈ ಹಿಂದೆ ಹೊಸದಾಗಿ ರಾಜಕೀಯ ಪಕ್ಷವನ್ನು ಕಟ್ಟಿದವರಿಗೆ (ವಿಜಯ ಸಂಕೇಶ್ವರ್, ಶ್ರೀರಾಮುಲು, ಯಡಿಯೂರಪ್ಪ) ಆದ ಅನುಭವ ಮತ್ತು ಅನಾನುಕೂಲತೆ ಜರ್ನಾಧನ ರೆಡ್ಡಿಗೂ ಆಗಿದೆ. ಶ್ರೀರಾಮುಲು ಮುಖಾಂತರ ಬಿಎಸ್‍ಆರ್ ಕಾಂಗ್ರೆಸ್ ಪಕ್ಷವನ್ನು ಕಟ್ಟಿ, ಬಿಜೆಪಿ ವಿರುದ್ಧ ಬಂಡಾಯವೆದ್ದ ಇವರು ಈಗ ಎರಡನೇ ಸರದಿಯನ್ನು ಆರಂಭಿಸಿದ್ದಾರೆ. ಆದರೇ ಈ ಬಾರಿ ಖಂಡಿತವಾಗಿಯೂ ಬಿಜೆಪಿಯ ವಿರುದ್ಧ ಯುದ್ಧ ಸಾರಲು ಇಲ್ಲವೆಂಬುದು ಮಾತ್ರ ಸ್ಪಷ್ಟ!

ರಾಜ್ಯ ರಾಜಕೀಯದಲ್ಲಿ ಮರೆಮಾಚಲ್ಪಟ್ಟ ತನ್ನ ಗುರುತು ಮತ್ತು ವರ್ಚಸ್ಸನ್ನು ಪುನರ್ ಸ್ಥಾಪಿಸಿಕೋಳ್ಳಲು ನಡೆಸುತ್ತಿರುವ ಕಾರ್ಯ (Task) ಇದಾಗಿದೆ. ಬಿಜೆಪಿ ಪಕ್ಷಕ್ಕೆ ನೇರವಾಗಿ ಪರು ಪ್ರವೇಶ ಮಾಡದೇ ಮುಂದಿನ ವಿಧಾನಸಭಾ ಚುನಾವಣೆಯ ನಂತರ, ಕೆಲವೊಂದು ಎಮ್ಮೆಲ್ಯೆ ಸೀಟುಗಳನ್ನು ಕೈಯಲ್ಲಿ ಇಟ್ಟುಕೊಂಡು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಮುಂತಾದ ಪ್ರಮುಖವಾದ ಖಾತೆಗಳಿಗೆ ಪಟ್ಟು ಹಿಡಿದು, ಅಧಿಕಾರ ಬಲದೊಂದಿಗೆ ಮರುಪ್ರವೇಶ (Reentry) ಮಾಡಬೇಕೆಂಬುದು ಇವರ ಉದ್ದೇಶವಾಗಿರಬಹುದೆಂದೂ ಊಹಿಸಲಾಗುತ್ತಿದೆ. ಶ್ರೀರಾಮುಲುವನ್ನು ಮುಂದಿನ ಮುಖ್ಯಮಂತ್ರಿ ಮಾಡುವ ಉದ್ದೇಶವೂ ಇದರ ಹಿಂದಿದೆ ಎಂದು ಹೇಳುವವರೂ ಉಂಟು.