ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಹಾಸ್ಟೆಲ್ ನಲ್ಲಿ ಕಳಪೆ ಗುಣಮಟ್ಟದ ಆಹಾರ ನೀಡುತ್ತಿರುವುದನ್ನು ಖಂಡಿಸಿ, ಸರಣಿ ಟ್ವೀಟ್ ಮಾಡಿರುವ ಜೆಡಿಎಸ್ ‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಹಾಸ್ಟೆಲ್ ನಲ್ಲಿ ಕಳಪೆ ಗುಣಮಟ್ಟದ ಆಹಾರ ನೀಡುತ್ತಿರುವುದನ್ನು ವಿರೋಧಿಸಿ, ಅಲ್ಲಿನ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಯ ಕಾರಣಕ್ಕೆ ಅವರನ್ನು ಹಾಸ್ಟೆಲ್ ನಿಂದ ಹೊರಹಾಕಲು ಸೂಚಿಸಿರುವ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ. ಮುಖ್ಯಮಂತ್ರಿ ಬೊಮ್ಮಾಯಿ ಅವರೆ, ಇದು ಸರ್ವಾಧಿಕಾರವಲ್ಲವೆ?
ಗುಣಮಟ್ಟದ ಆಹಾರ ಒದಗಿಸುವುದು ಸಮಾಜ ಕಲ್ಯಾಣ ಇಲಾಖೆ ಮತ್ತು ಜಿಲ್ಲಾಡಳಿತದ ಜವಾಬ್ದಾರಿ. ವಿದ್ಯಾರ್ಥಿಗಳ ಅಳಲನ್ನು ಕೇಳಿಸಿಕೊಳ್ಳದೆ, ಈ ಹೀನ ಕೆಲಸಕ್ಕೆ ಆದೇಶಿಸಿದ ಜಿಲ್ಲಾಧಿಕಾರಿ, ವಿದ್ಯಾರ್ಥಿಗಳಿಗೆ ಶಿಕ್ಷಿಸಿದ ಜಿಲ್ಲಾ ಇಲಾಖಾಧಿಕಾರಿಗಳು ಎಲ್ಲರನ್ನೂ ಕೂಡಲೇ ಅಮಾನತು ಮಾಡಬೇಕು. ಈ ಬಗ್ಗೆ ಅಗತ್ಯ ತನಿಖೆ ನಡೆಯಲೇಬೇಕು.
ದಲಿತರ ಬಗ್ಗೆ ಮೊಸಳೆ ಕಣ್ಣೀರು ಸುರಿಸುವ ಈ ಸರ್ಕಾರದ ಆಡಳಿತದಲ್ಲಿ ಶೋಷಿತ ಸಮುದಾಯದ ವಿದ್ಯಾರ್ಥಿಗಳನ್ನು ನಡೆಸಿಕೊಳ್ಳುತ್ತಿರುವ ರೀತಿ ಹೇಸಿಗೆ ತರಿಸುತ್ತಿದೆ. ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು ಅವರೆ, ವಿದ್ಯಾರ್ಥಿಗಳ ಪರ ನಿಲ್ಲದೆ, ಅವರ ವಿರುದ್ಧದ ಕ್ರಮಕ್ಕೆ ಸಾಥ್ ನೀಡಿರುವುದು ಎಷ್ಟು ಸರಿ? ನಿಮ್ಮ ಮುಖವಾಡ ಕಳಚಿದೆ.
ವಿದ್ಯಾರ್ಥಿಗಳ ಹಿತ ಕಾಪಾಡಬೇಕಿರುವ ಆಡಳಿತ ವರ್ಗ ಇಷ್ಟು ಅಪ್ರಜಾತಾಂತ್ರಿಕವಾಗಿ ನಡೆದುಕೊಳ್ಳುವುದು ಖಂಡನೀಯ. ಸಮಸ್ಯೆ ಪರಿಹರಿಸಿ, ವಿದ್ಯಾರ್ಥಿಗಳ ಮನಗೆಲ್ಲಬೇಕು. ಅದು ಬಿಟ್ಟು, ಇಂತಹ ಕೆಟ್ಟ ನಿರ್ಧಾರ ಸರಿಯಲ್ಲ. ಅಂಗೈ ಹುಣ್ಣಿಗೆ ಕನ್ನಡಿ ಯಾಕೆ ಎನ್ನುವ ಹಾಗೆ ಆಡಳಿತ ಎಷ್ಟು ಕುಸಿದಿದೆ ಎಂಬುದಕ್ಕೆ ದೊಡ್ಡ ಸಾಕ್ಷಿ ಏನು ಬೇಕು? ಎಂದು ಸರ್ಕಾರವನ್ನು ಕಾರವಾಗಿ ಪ್ರಶ್ನಿಸಿದೆ.
 
  
 

 
  
 










 
 
