ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
ಸಿದ್ದರಾಮಯ್ಯ Archives » Page 6 of 13 » Dynamic Leader
November 23, 2024
Home Posts tagged ಸಿದ್ದರಾಮಯ್ಯ (Page 6)
ದೇಶ

ನವದೆಹಲಿ: ಉತ್ತರಪ್ರದೇಶಕ್ಕೆ ಹಂಚಿಕೆಯಾದ ಮೊತ್ತವು ಒಟ್ಟು 5 ರಾಜ್ಯಗಳಿಗೆ ಹಂಚಿಕೆಯಾದ ಮೊತ್ತಕ್ಕಿಂತ ಸುಮಾರು 50 ಸಾವಿರ ಕೋಟಿ ಹೆಚ್ಚು ಎಂದು ತಮಿಳುನಾಡು ಮಾಹಿತಿ ತಂತ್ರಜ್ಞಾನ ಮತ್ತು ಡಿಜಿಟಲ್ ಸೇವೆಗಳ ಸಚಿವ ಡಾ.ಪಳನಿವೇಲ್ ತ್ಯಾಗರಾಜನ್ (ಪಿಟಿಆರ್) ಹೇಳಿದ್ದಾರೆ.

ಕೇರಳ, ತಮಿಳುನಾಡು ದೆಹಲಿ ಹಾಗೂ ಪಂಜಾಬ್ ರಾಜ್ಯಗಳ ನಾಯಕರು “GST ಹಣದ ಮರು ಹಂಚಿಕೆ ಮತ್ತು ಅನುದಾನ ಹಂಚಿಕೆಯಲ್ಲಿ ರಾಜ್ಯಗಳಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿ ರಾಜಧಾನಿ ದೆಹಲಿಯಲ್ಲಿ ನೆನ್ನೆ ಪ್ರತಿಭಟನೆ ನಡೆಸಿದ್ದರು. ಇದರಲ್ಲಿ ತಮಿಳುನಾಡು ಸರ್ಕಾರದ ಪರವಾಗಿ ಭಾಗವಹಿಸಿ ಡಾ.ಪಳನಿವೇಲ್ ತ್ಯಾಗರಾಜನ್ ಮಾತನಾಡಿದರು.

“ಕಳೆದ 5 ವರ್ಷಗಳಲ್ಲಿ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳ ಸೇರಿದಂತೆ ದಕ್ಷಿಣ ರಾಜ್ಯಗಳು GST ಮತ್ತು ನೇರ ತೆರಿಗೆಗಳಿಗೆ ಕೊಡುಗೆ ನೀಡಿದ ಒಟ್ಟು ತೆರಿಗೆ (ಆಮದು ಸುಂಕದ ಮೇಲಿನ GST ಹೊರತುಪಡಿಸಿ) – 22,26,983.39 ಕೋಟಿ.

ಕಳೆದ ಐದು ವರ್ಷಗಳಲ್ಲಿ ಉತ್ತರ ಪ್ರದೇಶ ಕೊಡುಗೆ ನೀಡಿದ ಮೊತ್ತ ರೂ.3,41,817.60 ಕೋಟಿಗಳು.
(Difference in Contribution: Rs.18,85,166 Crores)

ಕಳೆದ 5 ವರ್ಷಗಳಲ್ಲಿ ಮೇಲೆ ತಿಳಿಸಲಾದ ದಕ್ಷಿಣದ ರಾಜ್ಯಗಳಿಗೆ ಬಿಡುಗಡೆಯಾದ ಕೇಂದ್ರ ತೆರಿಗೆಗಳು ಮತ್ತು ಸುಂಕಗಳು (ಒಟ್ಟು) – ರೂ.6,42,295.05 ಕೋಟಿಗಳು.

ಉತ್ತರ ಪ್ರದೇಶಕ್ಕೆ ಬಿಡುಗಡೆಯಾದ ಮೊತ್ತ – 6,91,375.12 ಕೋಟಿ ರೂ.
(Difference in sharing: Rs.49,080 Crores)

ಒಂದು ರಾಜ್ಯಕ್ಕೆ ಹಂಚಿಕೆಯಾದ ಮೊತ್ತವು ಒಟ್ಟು 5 ರಾಜ್ಯಗಳಿಗೆ ಹಂಚಿಕೆಯಾದ ಮೊತ್ತಕ್ಕಿಂತ ಸುಮಾರು 50 ಸಾವಿರ ಕೋಟಿ ಹೆಚ್ಚು” ಎಂದು ಹೇಳಿದ್ದಾರೆ.

ಇದೇ ವಿಚಾರಕ್ಕಾಗಿ ಮೊನ್ನೆ ಕರ್ನಾಟಕ ರಾಜ್ಯ ಸರ್ಕಾರದ ಪರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಮುಂದಾಳುತ್ವದಲ್ಲಿ ದೆಹಲಿ ಜಂತರ್ ಮಂತರ್ ನಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು ಎಂಬುದು ಗಮನಾರ್ಹ.

ರಾಜ್ಯ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ವಿಧಾನಸೌಧದ ಮುಂಭಾಗದಲ್ಲಿ ರಾಜ್ಯಮಟ್ಟದ ಎರಡನೇ ಜನಸ್ಪಂದನ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ಸಾವಿರಾರು ಸಂಖ್ಯೆಯಲ್ಲಿ ಜನರು ತಮ್ಮ ಅಹವಾಲುಗಳನ್ನು ಹೊತ್ತು ಜನಸ್ಪಂದನಕ್ಕೆ ಆಗಮಿಸಿದ್ದಾರೆ. ಇಂದು ಇಡೀ ದಿನ ಇವರೆಲ್ಲರ ಸಮಸ್ಯೆಗಳಿಗೆ ಸ್ಥಳದಲ್ಲೇ ಅಥವಾ ನಿಗದಿತ ಕಾಲಮಿತಿಯೊಳಗೆ ಪರಿಹಾರ ಒದಗಿಸುವ ಮೂಲಕ ಕಣ್ಣೀರು ಒರೆಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಹೇಳಿದರು.

ಕಳೆದ ಬಾರಿಯ ಜನಸ್ಪಂದನದ ಅಭೂತಪೂರ್ವ ಯಶಸ್ಸು ಈ ಬಾರಿ ನಿರೀಕ್ಷೆಗೂ ಮೀರಿದಷ್ಟು ಜನರನ್ನು ಕರೆತಂದಿದೆ. ಎಲ್ಲರ ಸಮಸ್ಯೆಗಳನ್ನು ಆಲಿಸಿ, ಪರಿಹರಿಸುತ್ತೇವೆ, ಆಗಮಿಸಿರುವ ಬಂಧುಗಳು ಯಾವುದೇ ಗೊಂದಲಗಳಿಗೆ ಎಡೆಮಾಡಿಕೊಡದೆ ನಮ್ಮೊಂದಿಗೆ ಸಹಕರಿಸಬೇಕು ಎಂದು ಮನವಿ ಮಾಡುತ್ತೇನೆ ಎಂದು ಹೇಳಿದರು.

ನವೆಂಬರ್‌ 27 ರಂದು ನಡೆದ ಮೊದಲ ಜನಸ್ಪಂದನ ಕಾರ್ಯಕ್ರಮದಲ್ಲಿ ಸ್ವೀಕರಿಸಲಾದ ಅರ್ಜಿಗಳ ಪೈಕಿ ಶೇ.98ರಷ್ಟು ಅರ್ಜಿಗಳನ್ನು ವಿಲೇವಾರಿ ಮಾಡಿ, ಜನರಿಗೆ ಪರಿಹಾರಗಳನ್ನು ಒದಗಿಸಲಾಗಿದೆ. ಸರ್ಕಾರವನ್ನು ಜನರ ಬಳಿಗೇ ಒಯ್ಯಬೇಕೆಂಬುದು ಸರ್ಕಾರದ ಆಶಯ. ಈ ನಿಟ್ಟಿನಲ್ಲಿ ಎಲ್ಲ ಜಿಲ್ಲೆಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಈ ವರೆಗೆ ಒಟ್ಟು 108 ಜನಸ್ಪಂದನ ಕಾರ್ಯಕ್ರಮಗಳನ್ನು ನಡೆಸಿದ್ದಾರೆ ಎಂದು ಹೇಳಿದರು.

ತಾಲ್ಲೂಕು, ಜಿಲ್ಲಾ ಮಟ್ಟದಲ್ಲಿಯೂ ಜನಸ್ಪಂದನ ಕಾರ್ಯಕ್ರಮ ನಡೆಸಲಾಗುತ್ತಿದ್ದು, ಇಲ್ಲಿ ಬಗೆಹರಿಯದ ಸಮಸ್ಯೆಗಳನ್ನು ರಾಜ್ಯಮಟ್ಟದ ಜನಸ್ಪಂದನ ಕಾರ್ಯಕ್ರಮದಲ್ಲಿ ಜನರು ಸಲ್ಲಿಸಬಹುದಾಗಿದೆ. ಕಾನೂನುಬದ್ಧವಾದ ಸಮಸ್ಯೆಗಳಿಗೆ ನಮ್ಮ ಸರ್ಕಾರ ಪರಿಹಾರ ಒದಗಿಸಲಿದೆ ಎಂದು ಹೇಳಿದರು.

ಸಮಸ್ಯೆ ಬಗೆಹರಿಸಲು ಕಾನೂನು ತೊಡಕು ಇದ್ದಲ್ಲಿ, ಈ ಕುರಿತು ಅರ್ಜಿದಾರರಿಗೆ ಕಾರಣ ಸಹಿತ ಹಿಂಬರಹ ನೀಡಲಾಗುವುದು. ಜನಸ್ಪಂದನದಲ್ಲಿ ಸ್ವೀಕರಿಸಲಾದ ಅರ್ಜಿಗಳಿಗೆ ಮೂರು ತಿಂಗಳೊಳಗೆ ವಿಲೇವಾರಿ ಮಾಡಬೇಕು, ಜನರ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕು ಎಂದು ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದ್ದೇನೆ ಎಂದು ಹೇಳಿದರು.

ಆಡಳಿತ ವ್ಯವಸ್ಥೆ ಚುರುಕುಗೊಳ್ಳಬೇಕು, ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎನ್ನುವ ಆಶಯದೊಂದಿಗೆ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸರ್ಕಾರ ರೂಪಿಸುವ ಜನೋಪಯೋಗಿ ಕಾರ್ಯಕ್ರಮಗಳು ನೇರವಾಗಿ ಫಲಾನುಭವಿಗಳಿಗೆ ತಲುಪಬೇಕು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದು ಎಂಟು ತಿಂಗಳೊಳಗಾಗಿ ಎಲ್ಲ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ್ದೇವೆ ಎಂದು ಹೇಳಿದರು.

ಗ್ಯಾರಂಟಿ ಯೋಜನೆಯಿಂದ ಕರ್ನಾಟಕ ಆರ್ಥಿಕವಾಗಿ ದಿವಾಳಿಯಾಗುತ್ತದೆ ಎಂದು ಟೀಕಿಸಿದ್ದರು. ಯೋಜನೆ ಜಾರಿಗೊಳಿಸಿದಾಗ ವಿರೋಧ ಪಕ್ಷಗಳ ನಾಯಕರು ‘ಈಗ ಯೋಜನೆ ಜಾರಿಗೊಳಿಸಿ ಆಮೇಲೆ ನಿಲ್ಲಿಸುತ್ತಾರೆ’ ಎಂದಿದ್ದರು. ಆದರೆ ಇಂತಹ ಅಪಪ್ರಚಾರಗಳಿಗೆ ಕಿವಿಗೊಡಬಾರದು. ಗ್ಯಾರಂಟಿ ಯೋಜನೆಗಳು ಬಡವರ ಕಾರ್ಯಕ್ರಮ, ಅಸಮಾನತೆ ನಿವಾರಿಸುವ ಕಾರ್ಯಕ್ರಮ ಎಂದು ವಿರೋಧ ಪಕ್ಷಗಳನ್ನು ಕುಟುಕಿದರು.

ನಾವು ಸಂವಿಧಾನದಲ್ಲಿ, ಬಸವಾದಿ ಶರಣರಲ್ಲಿ ನಂಬಿಕೆ ಇಟ್ಟುಕೊಂಡಿರುವವರು. ಸಮಾಜದಲ್ಲಿ ಭ್ರಾತೃತ್ವ ಬೆಳೆಯಬೇಕು, ಸಮಾನತೆ ಮೂಡಬೇಕು. ಆಗ ಮಾತ್ರ ಸಮಾಜದಲ್ಲಿ ಶಾಂತಿ, ನೆಮ್ಮದಿ ಕಾಪಾಡಲು ಸಾಧ್ಯ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಇದ್ದರೆ ಬಂಡವಾಳ ಹೂಡಿಕೆ ಸಾಧ್ಯವಾಗುತ್ತದೆ. ರಾಜ್ಯದಲ್ಲಿ ಸಾಮಾಜಿಕ ಆರ್ಥಿಕ-ಬದಲಾವಣೆ ತರಲು ಜನಸ್ಪಂದನ ಅಗತ್ಯವಾಗಿದೆ ಎಂದು ಹೇಳಿದರು.

ರಾಜ್ಯ

ಬೆಂಗಳೂರು: ನಮ್ಮ ಸರ್ಕಾರದ 5 ಗ್ಯಾರಂಟಿ ಯೋಜನೆಗಳು ಸ್ವತಂತ್ರ ಭಾರತದ ಯಾವುದೇ ಸರ್ಕಾರ ಮಾಡಿರದ ಅತ್ಯಂತ ಕ್ರಾಂತಿಕಾರಕ ಯೋಜನೆಯಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂ ರಾವ್ ಹೇಳಿದ್ದಾರೆ.

ಮಹಿಳಾ ಸಬಲೀಕರಣ ಹಾಗೂ ಬಡವರಿಗೆ ಆರ್ಥಿಕ ಸ್ವಾವಲಂಬನೆ ಕಲ್ಪಿಸುವ ಈ ಯೋಜನೆಗಳು ಬಡವರ ಪಾಲಿಗೆ ಆಶಾಕಿರಣವಾಗಿದೆ. ಈ ಯೋಜನೆಗಳನ್ನು ನಮ್ಮ ಸರ್ಕಾರ ನಿಲ್ಲಿಸುವ ಮಾತೇ ಇಲ್ಲ. ಮಾಗಡಿ ಶಾಸಕ ಬಾಲಕೃಷ್ಣ ಹೇಳಿಕೆ ಅವರ ವೈಯಕ್ತಿಕ. ಈಗಾಗಲೇ ಮುಖ್ಯಮಂತ್ರಿಗಳು ಯೋಜನೆ ನಿಲ್ಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ನಮ್ಮ ನಿಲುವು ಕೂಡ ಇದೇ ಆಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಜನರ ಸಾರ್ವತ್ರಿಕ ಕಲ್ಯಾಣದ ದೃಷ್ಟಿಯಿಂದ ಪ್ರಾರಂಭವಾದ ಗ್ಯಾರಂಟಿ ಯೋಜನೆಗಳು, ಈ ನಾಡಿನ ಜನರ ಬದುಕನ್ನು ಬದಲಾಯಿಸಿವೆ. ನಮ್ಮ ಸರ್ಕಾರ 5 ಗ್ಯಾರಂಟಿ ಯೋಜನೆಗಳನ್ನು ಇನ್ನಷ್ಟೂ ಪರಿಣಾಮಕಾರಿಯಾಗಿ ಅನುಷ್ಟಾನಕ್ಕೆ ತರಲು ಪ್ರಯತ್ನಿಸುತ್ತದೆಯೇ ಹೊರತು ಯೋಜನೆ ಸ್ಥಗಿತಗೊಳಿಸುವ ಯಾವ ಉದ್ದೇಶವೂ ಇಲ್ಲ ಎಂದು ಆಶ್ವಾಸನೆ ನೀಡಿದ್ದಾರೆ.

ನಾವು ನುಡಿದಂತೆ ನಡೆಯುವವರು ಎಂಬುದನ್ನು ಈಗಾಗಲೇ ಯೋಜನೆಯ ಅನುಷ್ಟಾನದ ಮೂಲಕ ತೋರಿಸಿದ್ದೇವೆ. ಅದೇ ರೀತಿ ಈ ಗ್ಯಾರಂಟಿ ಯೋಜನೆಗಳು ಯಾವುದೇ ವಿಘ್ನವಿಲ್ಲದಂತೆ ಮುಂದುವರೆಯುತ್ತವೆ ಎಂಬ ವಾಗ್ದಾನ ನೀಡುತ್ತೇವೆ ಎಂದು ಹೇಳಿದ್ದಾರೆ.

ರಾಜ್ಯ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಮಲ್ಲೇಶ್ವರಂನ ಕೆ.ಸಿ ಜನರಲ್ ಆಸ್ಪತ್ರೆಯಲ್ಲಿ ನೂತನ ಉಚಿತ ಡಯಾಲಿಸಿಸ್ ಸೇವೆಗಳನ್ನು ಉದ್ಘಾಟಿಸಿ ಮಾತನಾಡಿದರು.

ಆಸ್ಪತ್ರೆಗಳಲ್ಲಿ ಬಡವರಿಗೆ ಹೆಚ್ಚು ಆಸಕ್ತಿಯಿಂದ ಗುಣಮಟ್ಟದ ವೈದ್ಯಕೀಯ ಸೇವೆಯನ್ನು ನೀಡಬೇಕು. ನಮ್ಮ ಸಮಾಜದಲ್ಲಿ ಬಡವರೇ ಹೆಚ್ಚಿದ್ದಾರೆ ಹಾಗಾಗಿ ಸಮಾಜದ ದೃಷ್ಟಿಯಿಂದ ಇದು ಒಳ್ಳೆಯದು ಎಂದು ಹೇಳಿದರು.

ಬಡವರಿಗೆ ಡಯಾಲಿಸಿಸ್ ಮಾಡಿಸಿಕೊಳ್ಳುವುದು ದೊಡ್ಡ ಹೊರೆ. ವಾರಕ್ಕೆ ಮೂರು ಬಾರಿ ಮಾಡಿಸಿಕೊಳ್ಳಬೇಕಾಗುತ್ತದೆ. ಒಮ್ಮೆ ಮಾಡಿಸಿದರೆ 2,000 ರೂ.ಗಳಿಗಿಂತ ಹೆಚ್ಚಿದೆ. ಬಡವರಿಗೆ ಇಷ್ಟು ಮೊತ್ತ ನೀಡಿ ಡಯಾಲಿಸಿಸ್ ಮಾಡಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಕಿಡ್ನಿ ವೈಫಲ್ಯವಾದಾಗ ಡಯಾಲಿಸಿಸ್ ಒಂದೇ ಮಾರ್ಗ. ಅದಕ್ಕಾಗಿ ಸರ್ಕಾರ ಬಡವರಿಗೆ ಸಹಾಯಮಾಡಬೇಕೆಂಬ ಉದ್ದೇಶದಿಂದ ಡಯಾಲಿಸಿಸ್ ಸೇವೆಗಳನ್ನು ಉಚಿತವಾಗಿ ನೀಡುತ್ತಿದೆ ಎಂದು ಹೇಳಿದರು.

ರಾಜ್ಯದಲ್ಲಿ 219 ಡಯಾಲಿಸಿಸ್ ಕೇಂದ್ರಗಳಿವೆ. 800 ಯಂತ್ರಗಳನ್ನು ಈ ಕೇಂದ್ರಗಳಲ್ಲಿ ಅಳವಡಿಸುವ ಕೆಲಸವಾಗುತ್ತಿದೆ. ಹಿಂದೆ ನಮ್ಮ ಸರ್ಕಾರವಿದ್ದಾಗ ಹಾಗೂ ಈಗಲೂ ಕೂಡ ಸಾಧ್ಯವಾದ ಮಟ್ಟಿಗೆ ಗುಣಮಟ್ಟದ ಆರೋಗ್ಯ ಸೇವೆಯನ್ನು ಒದಗಿಸಿಕೊಡಬೇಕೆಂಬ ಉದ್ದೇಶ ಹೊಂದಿದ್ದೇವೆ ಎಂದು ಹೇಳಿದರು.

ಸಣ್ಣ ವಯಸ್ಸಿನವರಿಗೂ ಕಿಡ್ನಿ ಸಮಸ್ಯೆ ಬರುತ್ತದೆ. ಅದಕ್ಕಾಗಿ ಸರ್ಕಾರ ಎಷ್ಟು ಸಾಧ್ಯವೋ ಅಷ್ಟು ಜನರಿಗೆ ಡಯಾಲಿಸಿಸ್ ಮಾಡಿಸುವ ಕೆಲಸ ಮಾಡುತ್ತಿದೆ. ಎಲ್ಲಾ ಜಿಲ್ಲಾ ಹಾಗೂ ತಾಲ್ಲೂಕು ಆಸ್ಪತ್ರೆಗಳಲ್ಲಿ ಈ ಸೇವೆ ದೊರಕಬೇಕು. ಜನರಿಗೆ ಹತ್ತಿರದಲ್ಲಿಯೇ ಈ ಸೇವೆ ಪಡೆಯಬಹುದು ಎಂದು ಹೇಳಿದರು.

ಏಕಬಳಕೆ ಮಾಡುವ ಡಯಾಲೈಸರ್ ಗಳನ್ನು ಪರಿಚಯಿಸಲಾಗಿದೆ. ಇದರಿಂದ ಸೋಂಕು ಕಡಿಮೆ ಮಾಡಬಹುದಾಗಿದೆ. ಡಯಾಲಿಸಿಸ್ ಕೇಂದ್ರಗಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡೂ ಅನುದಾನ ಒದಗಿಸಿಕೊಟ್ಟಿದೆ. ರಾಜ್ಯ ಸರ್ಕಾರ ಶೇ.60 ಹಾಗೂ ಕೇಂದ್ರ ಸರ್ಕಾರ ಶೇ.40 ರಷ್ಟು ಅನುದಾನ ನೀಡಲಿದೆ. ಆದರೆ ಹೆಸರು ಮಾತ್ರ ಪ್ರಧಾನಮಂತ್ರಿ ಡಯಾಲಿಸಿಸ್ ಎಂದಿದೆ. ಹೆಚ್ಚಾಗಿ ಅನುದಾನ ಒದಗಿಸುವುದು ರಾಜ್ಯ ಸರ್ಕಾರ ಎಂದು ಕಿಡಿಕಾರಿದರು.

ಸಮಾಜದಲ್ಲಿ ಅಸಮಾನತೆ ಇದ್ದು ಬಹಳ ಜನ ಕಷ್ಟದಲ್ಲಿ ಕೈತೊಳೆಯುವ ಪರಿಸ್ಥಿತಿ ಇದೆ. ಅಸಮಾನತೆ ಹೋಗಲಾಡಿಸಲು ನಮ್ಮ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ಅಸಮಾನತೆ ಹೋಗಲಾಡಿಸಲು 5 ಗ್ಯಾರಂಟಿ ಕಾರ್ಯಕ್ರಮಗಳು ಪ್ರಮುಖ ಪಾತ್ರ ವಹಿಸಲಿವೆ. ಶಕ್ತಿ ಯೋಜನೆಯಡಿ ಮಹಿಳೆಯರು 141 ಕೋಟಿ ಬಾರಿ ಉಚಿತವಾಗಿ ಸರ್ಕಾರಿ ಬಸ್ಸುಗಳಲ್ಲಿ ಪ್ರಯಾಣ ಮಾಡಿದ್ದಾರೆ ಎಂದು ಶಕ್ತಿ ಯೋಜನೆಯನ್ನು ಸಮರ್ಥಿಸಿಕೊಂಡರು.

1.18 ಕೋಟಿ ಮಹಿಳೆಯರಿಗೆ ತಿಂಗಳಿಗೆ 2 ಸಾವಿರ ರೂಪಾಯಿ, 5 ಕೆಜಿ ಅಕ್ಕಿಗೆ 170 ರೂಪಾಯಿ, ಪ್ರತಿ ತಿಂಗಳು 200 ಯೂನಿಟ್ ವರೆಗೆ ಉಚಿತ ವಿದ್ಯುತ್, ಯುವನಿಧಿ ಕಾರ್ಯಕ್ರಮ ನಿರುದ್ಯೋಗಿ ಯುವಕರಿಗೆ ಜಾರಿಯಾಗಿದೆ. ಜನರ ಕೊಳ್ಳುವ ಶಕ್ತಿ ಹೆಚ್ಚು ಮಾಡಲು ಈ ಯೋಜನೆಗಳನ್ನು ಜಾರಿಗೆ ತರುತ್ತಿದ್ದೇವೆ ಎಂದು ಹೇಳಿದರು.

ಡಯಾಲಿಸಿಸ್ ಸೇವೆಯನ್ನು ಹೆಚ್ಚು ಮಾಡುವ ಕೆಲಸ ಮಾಡುತ್ತೇವೆ. ಆರೋಗ್ಯ ಇಲಾಖೆಯನ್ನು ಸಚಿವ ದಿನೇಶ್ ಗುಂಡೂರಾವ್ ಸುಧಾರಣೆ ಮಾಡುತ್ತಾರೆ ಎಂಬ ನಂಬಿಕೆ ಇದೆ. ಕೆ.ಸಿ.ಜನರಲ್ ಆಸ್ಪತ್ರೆ ತಾಯಿ ಮಕ್ಕಳ ಆಸ್ಪತ್ರೆ ಆಗಬೇಕು. ಶವಾಗಾರ, ಅಡುಗೆ ಮನೆ, ಜೈವಿಕ ತ್ಯಾಜ್ಯ ಕೊಠಡಿ, ಮೂಲಭೂತ ಸೌಕರ್ಯಗಳನ್ನು 150 ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾಗುವುದು. ಇದನ್ನು ಸಚಿವ ಸಂಪುದಲ್ಲಿಟ್ಟು ಒಪ್ಪಿಗೆ ಪಡೆಯಲಾಗುವುದು ಎಂದು ಭರವಸೆ ನೀಡಿದರು.

ರಾಜ್ಯ

ಕೊಡಗು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೊಡಗು ಜಿಲ್ಲೆಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿ, ಬೃಹತ್ ಜನ ಸಾಗರವನ್ನು ಉದ್ದೇಶಿಸಿ ಮಾತನಾಡಿದರು.

“ನಾವು ತಂದ ಗ್ಯಾರಂಟಿಗಳನ್ನು ಮೋದಿಯವರು ಆಡಿಕೊಂಡರು. ಜಾರಿಗೆ ತಂದರೆ ರಾಜ್ಯ ಆರ್ಥಿಕವಾಗಿ ದಿವಾಳಿಯಾಗುತ್ತದೆ ಎಂದರು. ಈಗ ಅದೇ ಮೋದಿಯವರೇ ನಮ್ಮ ಗ್ಯಾರಂಟಿ ಕಾರ್ಯಕ್ರಮಗಳನ್ನು ಕಾಪಿ ಮಾಡುತ್ತಿದ್ದಾರೆ. ನಮ್ಮ ಸರ್ಕಾರ ಐದಕ್ಕೆ ಐದೂ ಗ್ಯಾರಂಟಿಗಳನ್ನು ಜಾರಿ ಮಾಡಿ ಆರ್ಥಿಕವಾಗಿ ಇನ್ನೂ ಸದೃಢವಾಗಿದೆ” ಎಂದು ಹೇಳಿ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಸಮರ್ಥಿಸಿಕೊಂಡರು.

“ಪ್ರಧಾನಿ ನರೇಂದ್ರ ಮೋದಿ ಅವರ ಅವಧಿಯಲ್ಲಿ ದೇಶದ ಸಾಲ 173 ಲಕ್ಷ ಕೋಟಿಗೆ ಏರಿಕೆಯಾಗಿದೆ. ಕಳೆದ 10 ವರ್ಷಗಳ ಮೋದಿ ಅವಧಿಯಲ್ಲಿ 120 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಕಾಂಗ್ರೆಸ್ ಏನು ಮಾಡಿದೆ ಎಂದು ಕೇಳುವ ನೈತಿಕ ಹಕ್ಕು ಬಿಜೆಪಿಗೆ ಇಲ್ಲ. ಏಕೆಂದರೆ ದೇಶದಲ್ಲಿರುವ ಎಲ್ಲಾ ಪ್ರತಿಷ್ಠಿತ ಸಂಸ್ಥೆಗಳು, ವಿಶ್ವವಿದ್ಯಾಲಯಗಳು, ಅಣೆಕಟ್ಟುಗಳು ಆಗಿದ್ದು ಬಿಜೆಪಿಯೇತರ ಕಾಂಗ್ರೆಸ್ ಮತ್ತು ಇತರೆ ಸರ್ಕಾರಗಳ ಅವಧಿಯಲ್ಲಿ ನಿರ್ಮಾಣವಾದವು. ನಿಮ್ಮ ಅವಧಿಯಲ್ಲಿ ಏನು ಮಾಡಿದ್ದೀರಿ ಮೋದಿ ಅವರೇ?” ಎಂದು ಕಿಡಿಕಾರಿದರು.

“ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ರಲ್ಲಾ ಮೋದಿಯವರೇ. ಮಾಡಿದ್ರಾ? ಎಲ್ಲಿ 20 ಕೋಟಿ ಉದ್ಯೋಗ? ಅಡುಗೆ ಅನಿಲ, ಪೆಟ್ರೋಲ್, ಡೀಸೆಲ್, ಗೊಬ್ಬರ, ಕಾಳು ಬೇಳೆ, ಅಡುಗೆ ಎಣ್ಣೆ ಬೆಲೆ ಕಡಿಮೆ ಆಗುತ್ತೆ ಅಂದ್ರಲ್ಲಾ, ಕಡಿಮೆ ಮಾಡಿದ್ರಾ ಮೋದಿಯವರೇ?” ಎಂದು ಪ್ರಧಾನಿಯನ್ನು ಪ್ರಶ್ನಿಸಿದರು.

“ದೇಶದ ಸಾಲ ತೀರಿಸಿ ಬಿಡ್ತೀನಿ ಅಂದ್ರಲ್ಲಾ ತೀರಿದೆಯಾ? ನೀವು ಬರುವ ಮೊದಲು ದೇಶದ ಸಾಲ 53 ಲಕ್ಷ ಕೋಟಿ ಸಾಲ ಇತ್ತು. ನಿಮ್ಮ ಹತ್ತು ವರ್ಷಗಳಲ್ಲಿ ದೇಶದ ಸಾಲ 173 ಲಕ್ಷ ಕೋಟಿ ಆಗಿದೆ. ನಿಮ್ಮೊಬ್ಬರ ಅವಧಿಯಲ್ಲಿ 120 ಲಕ್ಷ ಕೋಟಿ ಮಾಡಿದ್ದೀರಿ. ಇದೆನಾ ನಿಮ್ಮ ಸಾಧನೆ? ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಎಲ್ಲಾದರೂ ಜಾರಿಯಾಗಿದೆಯಾ? ಸಣ್ಣ ಉದಾಹರಣೆ ಇದ್ದರೆ ಹೇಳಿ. ಅಚ್ಛೇ ದಿನ್ ಆಯೆಗಾ ಎಂದಿರಿ? ಕಹಾಂ ಹೈ ಅಚ್ಛೆ ದಿನ್ ಮೋದೀಜಿ?” ಎಂದು ವ್ಯಂಗ್ಯವಾಡಿದರು.

“ಮಂಡಲ್ ಕಮಿಷನ್ ವರದಿ ಹಿಂದುಳಿದ ವರ್ಗಗಳ ಏಳಿಗೆಗಾಗಿ ಶ್ರಮಿಸಿದ್ದು ಪ್ರಧಾನಿಗಳಾಗಿದ್ದ ವಿ.ಪಿ.ಸಿಂಗ್ ಮತ್ತು ನರಸಿಂಹರಾಯರು. ನಿಮ್ಮ‌ಸಾಧನೆ ಏನು? ಈ ಬಗ್ಗೆ ಯಾವ ಕಾರ್ಯಕ್ರಮಗಳನ್ನು ನಿಮ್ಮ ಅವಧಿಯಲ್ಲಿ ಕೊಟ್ಟಿದ್ದೀರಿ?” ಎಂದು ಮೋದಿಯನ್ನು ಪ್ರಶ್ನಿಸಿದರು.

“ಬಿಜೆಪಿಯವರು ತಮ್ಮ ಪ್ರಣಾಳಿಕೆಗಳಲ್ಲಿ ಕೊಟ್ಟ ಆಶ್ವಾಸನೆಗಳಲ್ಲಿ ಶೇ.10 ರಷ್ಟನ್ನೂ ಜಾರಿ ಮಾಡಲೇ ಇಲ್ಲ. ನಾವು ನುಡಿದಂತೆ ನಡೆದಿದ್ದೇವೆ. ಕೊಟ್ಟ ಮಾತಿನಂತೆ ನಡೆದುಕೊಂಡು ಜನರ ಋಣ ತೀರಿಸಿದ್ದೇವೆ. ಇದನ್ನು ಕಾರ್ಯಕರ್ತರು ಮನೆ ಮನೆಗೆ ತಲುಪಿಸಬೇಕು. ನಾಡಿನ ಯುವಕರಿಗೆ ಉದ್ಯೋಗ ನೀಡದೆ, ಕೇವಲ ಯುವ ಸಮೂಹವನ್ನು, ವಿದ್ಯಾರ್ಥಿ ಸಮೂಹವನ್ನು ಭಾವನಾತ್ಮಕವಾಗಿ ಕೆರಳಿಸಿ ಅವರ ಬದುಕಿನ ಜೊತೆ ಚೆಲ್ಲಾಟ ಆಡಿದ್ದಾರೆ. ಈ ಕಾರಣಕ್ಕಾಗಿ ಜನತೆ ಬಿಜೆಪಿಯನ್ನು ತಿರಸ್ಕರಿಸಬೇಕು” ಎಂದು ಜನರಲ್ಲಿ ಮನವಿ ಮಾಡಿದರು.

ರಾಜಕೀಯ

ಬೆಂಗಳೂರು: ರಾಜ್ಯ ಸರಕಾರ ಮಕ್ಮಲ್ ಟೋಪಿ ಹಾಕುವ ತನ್ನ ಚಾಳಿ ಮುಂದುವರಿಸಿದೆ. ಗೌರವಾನ್ವಿತ ಸುಪ್ರಿಂ ಕೋರ್ಟ್ ಆದೇಶವನ್ನು ಕೇಂದ್ರ ಸರಕಾರ ಈಗಾಗಲೇ ಪಾಲಿಸಿದೆ. ಈ ಒತ್ತಡಕ್ಕೆ ಸಿಲುಕಿದ ರಾಜ್ಯ ಸರಕಾರ ಹಳೆ ಪಿಂಚಣಿ ಯೋಜನೆ (OPS) ಬಗ್ಗೆ ಅರೆಬರೆ, ತರಾತುರಿ ಆದೇಶ ಹೊರಡಿಸಿದೆಯೇ ಹೊರತು, ಸರಕಾರಿ ನೌಕರರ ಮೇಲೆ ಪ್ರೀತಿ ಉಕ್ಕಿ ಅಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಕೇಂದ್ರ ಸರಕಾರವು 1-4-2006ಕ್ಕೂ ಮೊದಲು ಅಧಿಸೂಚನೆಯಾಗಿ ನೇಮಕಗೊಂಡವರಿಗೆ OPS ಕೊಟ್ಟಿದೆ. ನಂತರ ಎಲ್ಲಾ ರಾಜ್ಯಗಳು ಈ ಆದೇಶ ಜಾರಿ ಮಾಡುತ್ತಿವೆ. ಕರ್ನಾಟಕದಲ್ಲೂ ಆಗಿದೆ ಅಷ್ಟೇ. ಇದರಲ್ಲಿ ಸರಕಾರದ ಘನಂದಾರಿ ಸಾಧನೆ ಏನೂ ಇಲ್ಲ ಎಂದು ಹೇಳಿದ್ದಾರೆ.

ಮೇ ತಿಂಗಳಲ್ಲಿಯೇ OPS ಜಾರಿ ಮಾಡುವ ಭರವಸೆ ನೀಡಿದ್ದರು ಸಿದ್ದರಾಮಯ್ಯ. 2023 ಮೇ 20 ರಂದು ಪ್ರಮಾಣ ಸ್ವೀಕರಿಸಿದ ಅವರು, ಸರಕಾರ ಬಂದ ಎರಡೇ ದಿನಕ್ಕೆ ಈ ಬಗ್ಗೆ ನಿರ್ಧಾರ ಕೈಗೊಳ್ಳಬಹುದಿತ್ತು. ಅವರು ಚುನಾವಣಾ ಫಸಲು ತೆಗೆಯಲು ಹತ್ತು ತಿಂಗಳು ಹೊಂಚು ಹಾಕಿ ಕೂತರು. ಇದು ಚುನಾವಣೆ ಗಿಮಿಕ್ ಅಷ್ಟೇ, ಅನುಮಾನವೇ ಇಲ್ಲ ಎಂದು ವ್ಯಂಗ್ಯವಾಡಿದ್ದಾರೆ.

2006 ಏಪ್ರಿಲ್‌ ಪೂರ್ವ ನೇಮಕಾತಿ ಅಧಿಸೂಚನೆಯಾಗಿ 2006ರ ನಂತರ ನೇಮಕಗೊಂಡ 13,000 ನೌಕರರು ಹಳೆ ಪಿಂಚಣಿ ವ್ಯಾಪ್ತಿಗೆ ಬರುತ್ತಾರೆ ಎಂದು ಈ ಆದೇಶ ಹೇಳುತ್ತದೆ. ಈ ಗ್ಯಾರಂಟಿ ಸರಕಾರಕ್ಕೆ ಈ ನಿರ್ಧಾರ ತೆಗೆದುಕೊಳ್ಳುವುದಕ್ಕೆ 10 ತಿಂಗಳೇ ಬೇಕಾಯಿತು! ಮಾತೆತ್ತಿದರೆ ಮೋದಿ ಅವರನ್ನು ನಿಂದಿಸುವ ಸಿದ್ದರಾಮಯ್ಯ ಅವರದ್ದು ಕೆಲಸದಲ್ಲಿ ಆಮೆವೇಗ ಎನ್ನುವುದಕ್ಕೆ ಇದೇ ಸಾಕ್ಷಿ ಎಂದು ಹೇಳಿದ್ದಾರೆ.

ಎರಡು ನಾಲಿಗೆಯ ಕಾಂಗ್ರೆಸ್ ನವರು ನುಡಿದಂತೆ ನಡೆದಿದ್ದೇವೆ ಎಂದು ಕೊಚ್ಚಿಕೊಳ್ಳುತ್ತಾರೆ. ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಎಷ್ಟು ನೌಕರರಿಗೆ OPS ನೀಡುವುದಾಗಿ ಭರವಸೆ ನೀಡಿತ್ತು? ಆದರೆ, ಸರಕಾರದ ಆದೇಶದಿಂದ 13,000 ನೌಕರರಿಗೆ ಮಾತ್ರ OPS ಭಾಗ್ಯ ಕೊಡುತ್ತಿದೆ. ಉಳಿದವರು ಅಭಾಗ್ಯವಂತರೇ? ಹೋಗಲಿ, OPSಗೆ ಅರ್ಹ ನೌಕರರು ಎಷ್ಟಿದ್ದಾರೆ? ಸರಕಾರಕ್ಕೆ ಮಾಹಿತಿ ಇದೆಯಾ? ಎಂದು ಪ್ರಶ್ನಿಸಿದ್ದಾರೆ.

ಹೇಳುವುದು ಒಂದು, ಮಾಡುವುದು ಇನ್ನೊಂದು ಎನ್ನುವ ತನ್ನ ಪರಂಪರಾಗತ ವರ್ತನೆಯನ್ನು ಕಾಂಗ್ರೆಸ್ ಇನ್ನಾದರೂ ಬದಲಿಸಿಕೊಳ್ಳಬೇಕು. ಪ್ರಣಾಳಿಕೆ ಮತ್ತು ಬಜೆಟ್ ನಲ್ಲಿ ಭರವಸೆ ನೀಡಿದಂತೆ ಸರಕಾರಿ ನೌಕರರಿಗೆ OPS ಕೊಡಲೇಬೇಕು. ಅದನ್ನು ಬಿಟ್ಟು ನೌಕರರ ಕಣ್ಣಿಗೆ ಮಣ್ಣೆರಚುವುದು ಸರಿಯಲ್ಲ. ನೌಕರರ ಬದುಕನ್ನು ಚುನಾವಣೆ ಸರಕನ್ನಾಗಿ ಮಾಡಿಕೊಳ್ಳುವುದು ಹೇಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಬೈಲಹೊಂಗಲ ತಾಲ್ಲೂಕಿನಲ್ಲಿ ಸೈನಿಕ ಶಾಲೆ ಉದ್ಘಾಟನೆ ಕಾರ್ಯಕ್ರಮಕ್ಕೆ ತೆರಳುವ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದರು.

ಕರ್ನಾಟಕದ ಗಡಿ ಭಾಗದ 865 ಗ್ರಾಮಗಳಲ್ಲಿ ಮಹಾರಾಷ್ಟ್ರ ಸರ್ಕಾರ ಆರೋಗ್ಯ ವಿಮೆ ಜಾರಿ ಮಾಡಲು ಮುಂದಾಗಿರುವ ಬಗ್ಗೆ ರಾಜ್ಯ ಸರ್ಕಾರವು ಅಗತ್ಯ ಕ್ರಮ ಕೈಗೊಂಡಿದೆ. ಮಹಾರಾಷ್ಟ್ರ ಕರ್ನಾಟಕದೊಳಗೆ ಬರಬಾರದು ಎಂದು ಮುಖ್ಯಕಾರ್ಯದರ್ಶಿಗಳು ಈಗಾಗಲೇ ಮಹಾರಾಷ್ಟ್ರದವರಿಗೆ ಸೂಚಿಸಿದ್ದಾರೆ ಎಂದು ಹೇಳಿದರು.

ಸೈನಿಕ ಶಾಲೆಯಲ್ಲಿ ಕನ್ನಡದವರಿಗೆ ಸೀಟುಗಳನ್ನು ಶೇ.65 ರಷ್ಟು ಹಾಗೂ ಇತರರಿಗೆ ಶೇ.35ರಷ್ಟು ಸೀಟುಗಳು ಹಂಚಿಕೆಯಾಗಬೇಕೆಂದು ಕ್ರಮ ಕೈಗೊಳ್ಳಲಾಗಿದೆ. ಗುಣಮಟ್ಟದ ಶಿಕ್ಷಣದೊಂದಿಗೆ ದೇಶಪ್ರೇಮವನ್ನು ಮಕ್ಕಳಲ್ಲಿ ಬೆಳೆಸಲಾಗುವುದು. ಇಲ್ಲಿ ಕಲಿತವರು ಸೇನೆಗೆ ಸೇರ್ಪಡೆಯಾಗುವ ಅವಕಾಶವಿದೆ ಎಂದರು.

ಸುಮಾರು 110 ಎಕರೆ ಜಮೀನನ್ನು ಸರ್ಕಾರದ ವತಿಯಿಂದ ರಾಕ್ ಗಾರ್ಡನ್ ಮತ್ತು ವಸ್ತುಸಂಗ್ರಹಾಲಯ ನಿರ್ಮಾಣಕ್ಕಾಗಿ ಅನುದಾನವನ್ನೂ ನಮ್ಮ ಸರ್ಕಾರದ ಹಿಂದಿನ ಅವಧಿಯಲ್ಲಿ ನೀಡಲಾಗಿತ್ತು. ಮುಖ್ಯಮಂತ್ರಿಯಾಗಿ ಶಂಕುಸ್ಥಾಪನೆ ಮಾಡಿ, ಉದ್ಘಾಟನೆಯನ್ನೂ ಮಾಡುತ್ತಿದ್ದೇನೆ. ಎಲ್ಲವೂ ಉತ್ತಮವಾಗಿ ಮೂಡಿಬಂದಿದೆ. ರಾಯಣ್ಣ ಅವರ ಜ್ಞಾಪಕಾರ್ಥವಾಗಿ ಇಲ್ಲಿ ರಾಕ್ ಗಾರ್ಡನ್ ಮತ್ತು ವಸ್ತು ಸಂಗ್ರಹಾಲಯ ನಿರ್ಮಾಣವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ರಾಜ್ಯ

ಹಾವೇರಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ನಿಜಶರಣ ಶ್ರೀ ಅಂಬಿಗರ ಚೌಡಯ್ಯನವರ 6ನೇ ಶರಣ ಸಂಸ್ಕೃತಿ ಉತ್ಸವ ಹಾಗೂ ನಿಜಶರಣ ಅಂಬಿಗರ ಚೌಡಯ್ಯನವರ 904ನೇ ಜಯಂತೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಅಂಬಿಗ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಈಗಾಗಲೇ ಎರಡು ಬಾರಿ ರಾಜ್ಯ ಸರ್ಕಾರ ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಿದೆ. ಪರಿಶಿಷ್ಟ ವರ್ಗಕ್ಕೆ ಸೇರಲು ಸಮುದಾಯ ಸಂಪೂರ್ಣ ಅರ್ಹತೆ ಪಡೆದಿದ್ದು, ಕೇಂದ್ರ ಸರ್ಕಾರ ಈಗ ಪುನಃ ಕೇಳಿರುವ ಸ್ಪಷ್ಟೀಕರಣವನ್ನು ಕೂಡಲೇ ಮಾಹಿತಿ ತರಿಸಿ ಸ್ಪಷ್ಟೀಕರಣ ನೀಡಲಾಗುವುದು. ನಂತರದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಕ್ರಮ ವಹಿಸಬೇಕು. 96-97 ರಲ್ಲಿಯೇ ಶಾಸಕರಾದ ದಿವಂಗತ ನಾರಾಯಣ ರಾವ್ ಎಸ್.ಟಿ ಗೆ ಸೇರಿಸಲು ಪ್ರಯತ್ನಿಸಿದ್ದರು ಎಂದು ಹೇಳಿದರು.

ದೋಣಿ ನಡೆಸುವುದು ಹಾಗೂ ಮೀನು ಹಿಡಿಯುವ ಕಾಯಕ ಅಂಬಿಗರದ್ದು. ಕಾಯಕದಲ್ಲಿ ಮೇಲುಕೀಳು ಎಂಬುದಿಲ್ಲ. ಮನುಷ್ಯರ ನಡುವೆ ತಾರತಮ್ಯ ಇರಬಾರದು. ಕಾಯಕವನ್ನು ಆಧರಿಸಿ ಮೇಲು ಕೀಳು ಎಂದು ತಾರತಮ್ಯ ಮಾಡಿದ್ದರ ವಿರುದ್ಧ ಬಸವಾದಿ ಶರಣರು ಹೋರಾಟ ಮಾಡಿದರು. ಈ ಸಾಲಿನಲ್ಲಿ ಅಂಬಿಗರ ಚೌಡಯ್ಯ ಮೊದಲನೇ ಸಾಲಿನಲ್ಲಿ ನಿಲ್ಲುತ್ತಾರೆ. ಅದಕ್ಕೆ ಬಸವಣ್ಣನವರು ಇವರಿಗೆ ನಿಜಶರಣ ಎಂದು ಕರೆದರು ಎಂದು ಹೇಳಿದರು.

ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ ಸ್ಥಾಪನೆಯನ್ನು ಹಿಂದೆ ನಮ್ಮ ಅವಧಿಯಲ್ಲಿಯೇ ಮಾಡಲಾಯಿತು. ಆರ್ಥಿಕ ಶಕ್ತಿ ಇಲ್ಲದ ಸಮಾಜ ಮುಖ್ಯ ವಾಹಿನಿಗೆ ಬರಲು ಸಾಧ್ಯವಿಲ್ಲ. ಸಮಸಮಾಜದ ಕನಸು ನನಸಾಗಲು ಆರ್ಥಿಕ, ಸಾಮಾಜಿಕ ಶಕ್ತಿ ಪ್ರತಿಯೊಬ್ಬರಲ್ಲೂ ಬರಬೇಕು. ಬಸವಾದಿ ಶರಣರು ಕಾಯಕ ಮತ್ತು ದಾಸೋಹ ಎಂಬ ಎರಡು ತತ್ವಗಳನ್ನು ನೀಡಿದ್ದಾರೆ ಎಂದರು.

ಕಾಯಕ ಎಂದರೆ ಉತ್ಪಾದನೆ, ದಾಸೋಹ ಎಂದರೆ ವಿತರಣೆ. ಕಾಯಕದಲ್ಲಿ ಎಲ್ಲರೂ ತೊಡಗಿ ಉತ್ಪಾದನೆಯನ್ನು ಎಲ್ಲರೂ ಹಂಚಿಕೊಳ್ಳಬೇಕು ಎನ್ನುವುದು ಇದರ ಅರ್ಥ. ಇನ್ನೊಬ್ಬರ ಗಳಿಕೆಯನ್ನು ಕುಳಿತು ಅನುಭವಿಸಬಾರದು. ಜಾತಿ ವ್ಯವಸ್ಥೆಗೆ ಚಾಲನೆ ಇಲ್ಲದಿರುವುದು ಆರ್ಥಿಕ, ಸಾಮಾಜಿಕ ಚಟುವಟಿಕೆ ಇಲ್ಲದಿರುವುದರಿಂದ. ಇದಕ್ಕೆ ಚಾಲನೆ ನೀಡಬೇಕೆಂದು ಬಸವಾದಿ ಶರಣರು ಹೇಳಿದ್ದರು ಎಂದು ಹೇಳಿದರು.

ಅಂಬಿಗರ ಚೌಡಯ್ಯನವರ ಹಾದಿಯಲ್ಲಿ ನಡೆಯುವುದು ನಾವು ಅವರಿಗೆ ಸಲ್ಲಿಸುವ ನಿಜವಾದ ಗೌರವ. ಅವರ ವಿಚಾರಗಳನ್ನು ಜನರಿಗೆ ತಿಳಿಸಲು ಜಯಂತ್ಯೋತ್ಸವವನ್ನು ಆಚರಿಸಲಾಗುತ್ತದೆ. ನಮ್ಮ ಮಕ್ಕಳು ಯಾವ ಕಾರಣದಿಂದಲೂ ವಿದ್ಯೆಯಿಂದ ವಂಚಿತರಾಗಬಾರದು. ಸಮಾಜದ ಅಸಮಾನತೆಯನ್ನು ಹೋಗಲಾಡಿಸಬೇಕು. ಪಟ್ಟಭದ್ರ ಹಿತಾಸಕ್ತಿಯ ವಿರುದ್ಧ ನಿಲ್ಲಬೇಕಾಗುತ್ತದೆ. ಬದಲಾವಣೆ ಬಯಸದ ಜನ ಆಗಲೂ ಇದ್ದರು, ಈಗಲೂ ಇದ್ದಾರೆ. ನಾನು ಹಿಂದುಳಿದ ಸಮಾಜದೊಂದಿಗೆ ಸದಾ ಇರುತ್ತೇನೆ ಎಂದು ಹೇಳಿದರು.

ರಾಜ್ಯ

“ಯಾವ ಧರ್ಮದಲ್ಲಿ ಹಸಿದವರಿಗೆ ಅನ್ನ ಕೊಡುವುದಿಲ್ಲವೋ ಅಂಥ ಧರ್ಮದಲ್ಲಿ ನನಗೆ ನಂಬಿಕೆ ಇಲ್ಲ” ಎಂದು ವಿವೇಕಾನಂದರು ತಿಳಿಸಿದರು: ಸಿದ್ದರಾಮಯ್ಯ

ಶಿವಮೊಗ್ಗ: ಶಿವಮೊಗ್ಗದಲ್ಲಿ ಲಕ್ಷಾಂತರ ಯುವಸಮೂಹದ ಸಮ್ಮುಖದಲ್ಲಿ ರಾಜ್ಯ ಸರ್ಕಾರದ ಐತಿಹಾಸಿಕ ಗ್ಯಾರಂಟಿ “ಯುವನಿಧಿ” ಯೋಜನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಿ ಮಾತನಾಡಿದರು.

ಯಾವ ಧರ್ಮದಲ್ಲಿ ಹಸಿದವರಿಗೆ ಅನ್ನ ಕೊಡುವುದಿಲ್ಲವೋ ಅಂಥ ಧರ್ಮದಲ್ಲಿ ನನಗೆ ನಂಬಿಕೆ ಇಲ್ಲ ಎಂದು ವಿವೇಕಾನಂದರು ಘೋಷಿಸಿದ್ದರು. ಇವರ ಜನ್ಮ ದಿನದಂದೇ ನನ್ನ ಯುವಕ, ಯುವತಿಯರು ಭ್ರಮ‌ನಿರಸನರಾಗದಂತೆ ಅವರ ಭವಿಷ್ಯಕ್ಕೆ ಶಕ್ತಿ ತುಂಬುವ ಸಲುವಾಗಿ ಯುವನಿಧಿ ಜಾರಿ ಮಾಡುತ್ತಿದ್ದೇವೆ ಎಂದು ಹೇಳಿದರು.

ನಾನು ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಸುರ್ಜೇವಾಲ ಅವರು ಚುನಾವಣಾ ಪೂರ್ವ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಐದೂ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ ಎಂದು ಹೇಳಿದರು.

ನಿರುದ್ಯೋಗ ಸಮಸ್ಯೆ, ರೈತರ ಸಮಸ್ಯೆ ಹೆಚ್ಚಾಗಿ, ಆಹಾರ ಪದಾರ್ಥಗಳ ಬೆಲೆ ಗಗನಕ್ಕೆ ಏರಿರುವ ಸಂದರ್ಭದಲ್ಲಿ ಸಮಾಜದ ಎಲ್ಲಾ ವರ್ಗಗಳ ಸಮಸ್ಯೆಗೆ ಪರಿಹಾರವಾಗಿ ನಾವು ಗ್ಯಾರಂಟಿ ಯೋಜನೆಗಳನ್ನು ರೂಪಿಸಿದೆವು; ಪ್ರಣಾಳಿಕೆಯಲ್ಲಿ ಘೋಷಿಸಿದೆವು. ಘೋಷಿಸಿದಂತೆ ಜಾರಿ ಮಾಡಿದ್ದೇವೆ ಎಂದು ಸಮರ್ಥಿಸಿಕೊಂಡರು.

ಮೊದಲ ಗ್ಯಾರಂಟಿ ಶಕ್ತಿ ಯೋಜನೆಯಿಂದಾಗಿ ಮಹಿಳೆಯರು, ಯುವತಿಯರು 130 ಕೋಟಿ 28 ಲಕ್ಷ ಉಚಿತ ಟಿಕೇಟ್ ಪಡೆದು ಪ್ರಯಾಣ ಮಾಡಿದ್ದಾರೆ. 1 ಕೋಟಿ 65 ಲಕ್ಷ ಕುಟುಂಬಗಳಿಗೆ ಉಚಿತವಾಗಿ 200 ಯೂನಿಟ್ ವರೆಗೂ ಉಚಿತ ವಿದ್ಯುತ್ ನೀಡುತ್ತಿದ್ದೇವೆ. ಈ ಕೋಟಿ ಕುಟುಂಬಗಳು ನಯಾಪೈಸೆ ವಿದ್ಯುತ್ ಬಿಲ್ ಕಟ್ಟುವ ಹಾಗಿಲ್ಲ ಎಂದು ಹೇಳಿದರು.

ಇದೇ ರೀತಿ 5 ಕೆಜಿ ಅಕ್ಕಿ, 5 ಕೆಜಿ ಅಕ್ಕಿಯ ಬದಲಿಗೆ ಹಣವನ್ನು ಪ್ರತೀ ಕುಟುಂಬಗಳಿಗೆ ಕೊಡುತ್ತಿದ್ದೇವೆ. 1 ಕೋಟಿ 17 ಲಕ್ಷ ಮಹಿಳೆಯರಿಗೆ, ಯುವತಿಯರಿಗೆ ಪ್ರತೀ ತಿಂಗಳು 2,000 ರೂ ತಲುಪಿಸುತ್ತಿದ್ದೇವೆ‌. ಇಂಥ ಸಾಧನೆ ಹಿಂದೆ ಯಾವ ಕಾಲದಲ್ಲೂ ಆಗಿಲ್ಲ. ಇದನ್ನೆಲ್ಲಾ ಮಾಡಿದ್ದು ನಾವು. ನಮ್ಮದು ನುಡಿದಂತೆ ಮಾಡಿ ತೋರಿಸಿದ ಸರ್ಕಾರ ಎಂದು ಹೇಳಿದರು.

ಯುವಕ ಯುವತಿಯರಿಗೆ ಹಣದ ಜತೆಗೆ ಉದ್ಯೋಗ ಪಡೆದುಕೊಳ್ಳಲು ಅಗತ್ಯವಾದ ಕೌಶಲ್ಯ ತರಬೇತಿಯನ್ನೂ ನೀಡಿ ಅವರಿಗೆ ಉದ್ಯೋಗ ಕೊಡಿಸುವ ದಿಕ್ಕಿನಲ್ಲಿ ನಮ್ಮ ಪ್ರಯತ್ನ ಮುಂದುವರೆಯಲಿದೆ. ಯುವಕ ಯುವತಿಯರು ಭ್ರಮ‌ನಿರಸನರಾಗದಂತೆ ಅವರ ಭವಿಷ್ಯಕ್ಕೆ ಶಕ್ತಿ ತುಂಬುವ ಸಲುವಾಗಿ ಈ ಯುವನಿಧಿ ಯೋಜನೆ ಜಾರಿ ಮಾಡಿದ್ದೇವೆ ಎಂದು ಹೇಳಿದರು.

ವಿವೇಕಾನಂದರ ಜನ್ಮ ದಿನದಂದೇ ಯುವನಿಧಿ ಯೋಜನೆಯನ್ನು ನಾವು ಜಾರಿ ಮಾಡಿದ್ದೇವೆ. ಈಗಾಗಲೇ 70 ಸಾವಿರ ಯುವಕ-ಯುವತಿಯರು ಯೋಜನೆಗೆ ನೋಂದಣಿ ಮಾಡಿಕೊಂಡಿದ್ದಾರೆ‌. ರಾಜೀವ್ ಗಾಂಧಿ ಅವರು ದೇಶದ ಯುವಕರ ಭವಿಷ್ಯಕ್ಕಾಗಿ ಸದಾ ತುಡಿಯುತ್ತಿದ್ದರು. ಅವರ ಆಶಯಕ್ಕೆ ಪೂರಕವಾಗಿ ಯುವನಿಧಿ ಯೋಜನೆ ಮತ್ತು ನಮ್ಮ ಸರ್ಕಾರ ಕೆಲಸ ಮಾಡಲಿದೆ. ಪ್ರತಿ ನಿರುದ್ಯೋಗಿ ಯುವಕ ಯುವತಿಯರು ಯೋಜನೆಗೆ ನೋಂದಾಯಿಸಿಕೊಂಡು ಅನುಕೂಲ ಪಡೆದುಕೊಳ್ಳಬೇಕು ಎಂದು ಮನವಿ ಮಾಡೀದರು.

ಯಾವ ಧರ್ಮದಲ್ಲಿ ಹಸಿದವರಿಗೆ ಅನ್ನ ಕೊಡುವುದಿಲ್ಲವೋ ಅಂಥ ಧರ್ಮದಲ್ಲಿ ನನಗೆ ನಂಬಿಕೆ ಇಲ್ಲ ಎಂದು ವಿವೇಕಾನಂದರು ತಿಳಿಸಿದರು. 1985ರಲ್ಲಿ ರಾಜೀವ್ ಗಾಂಧಿ ಅವರು ದೇಶದಲ್ಲಿ ಮೊದಲ ಬಾರಿಗೆ ವಿವೇಕಾನಂದ ಜಯಂತಿಯನ್ನು ಆರಂಭಿಸಿದರು. ಸಾಮಾಜಿಕ ನ್ಯಾಯದ ಬಗ್ಗೆ ಕೇವಲ ಭಾಷಣ ಮಾಡಿದರೆ ಸಾಲದು, ಅದಕ್ಕೆ ಕಾರ್ಯಕ್ರಮಗಳನ್ನು ರೂಪಿಸಬೇಕು; ಜಾರಿಗೆ ತರಬೇಕು. ನಮ್ಮ ಕಾಂಗ್ರೆಸ್ ಸರ್ಕಾರ ಮಾಡುತ್ತಿರುವುದು ಅದನ್ನೇ. ಹೋರಾಟದ ಹಿನ್ನೆಲೆಯ ಜಿಲ್ಲೆ ಶಿವಮೊಗ್ಗದಿಂದಲೇ “ರಾಜ್ಯ ಸರ್ವ ಜನಾಂಗದ ಶಾಂತಿಯ ತೋಟ” ಆಗಲಿ. ಇದಕ್ಕಾಗಿ ಜನ ಚಳವಳಿ ನಡೆಯಲಿ ಎಂದು ಹೇಳಿದರು.

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ, ಇಂಧನ ಸಚಿವ ಕೆ.ಜೆ.ಜಾರ್ಜ್, ಪ್ರಾಥಮಿಕ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಕ್ರೀಡಾ ಸಚಿವ ನಾಗೇಂದ್ರ, ಮೀನುಗಾರಿಕಾ ಸಚಿವ ಮಾಂಕಳ ವೈದ್ಯ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಕೆ.ಗೋವಿಂದರಾಜು, ಸಂಸದ ಬಿ.ವೈ.ರಾಘವೇಂದ್ರ, ಶಾಸಕರಾದ ಭೀಮಣ್ಣ ನಾಯಕ್, ಸಂಗಮೇಶ್, ತಮ್ಮಯ್ಯ, ಬೇಳೂರು ಗೋಪಾಲಕೃಷ್ಣ, ರಾಜೇಗೌಡ, ಶಾರದಾ ಪೂರ್ಯಾನಾಯಕ, ಚನ್ನಬಸಪ್ಪ, ತರೀಕೆರೆ ಶ್ರೀನಿವಾಸ್, ಅರುಣ್ ಕುಮಾರ್ ಸೇರಿ ಹಲವು ಪ್ರಮುಖರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ರಾಜ್ಯ

ಬೆಂಗಳೂರು: ಸವಿತಾ ಸಮಾಜ ಗಾಂಧಿ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಲೇಖಕ ಡಾ.ಎಂ.ಎಸ್.ಮುತ್ತುರಾಜ್ ಅವರ “ಮಂಗಳವಾದ್ಯ” ಕಾದಂಬರಿಯನ್ನು ಲೋಕಾರ್ಪಣೆಗೊಳಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತನಾಡಿದರು.

ನಟರಾಗಿ ಜನಪ್ರಿಯತೆಗಳಿಸಿರುವ ಎಂ.ಆರ್.ಮುತ್ತುರಾಜ್ ಅವರು ಬಹುಮುಖ ಪ್ರತಿಭೆ. ವೃತ್ತಿ ಘನತೆಯನ್ನು ಕಾಪಾಡುವ ವ್ಯಕ್ತಿತ್ವ. ಇವರು ಕಾಯಕ ಜೀವಿ. ಪ್ರತಿಯೊಬ್ಬರೂ ಘನತೆಯಿಂದ ಕಾಯಕ ಮಾಡಬೇಕು. ಇದನ್ನೇ ಬಸವಣ್ಣನವರು ಕಾಯಕವೇ ಕೈಲಾಸ ಎಂದು ಹೇಳಿದ್ದಾರೆ. ಕೈಲಾಸ, ಸ್ವರ್ಗ, ನರಕ ಎನ್ನುವುದು ಬೇರೆಲ್ಲೂ ಇಲ್ಲ. ಎಲ್ಲವೂ ಇಲ್ಲೇ ಇದೆ. ಯಾವ ಕಾಯಕವು ಮೇಲೂ ಅಲ್ಲ, ಯಾವುದು ಕೀಳು ಅಲ್ಲ. ಎಲ್ಲ ಕಾಯಕವೂ ಸಮಾನ ಮಹತ್ವ ಮತ್ತು ಸಮಾನ ಘನತೆ ಹೊಂದಿವೆ ಎಂದು ಹೇಳಿದರು.

ಅಯ್ಯಾ ಎಂದರೆ ಸ್ವರ್ಗ, ಎಲವೋ ಎಂದರೆ ನರಕ ಎಂದು ಬಸವಣ್ಣನವರು ಹೇಳಿದ್ದು ಇದೇ ಕಾರಣಕ್ಕೆ. ಪರಸ್ಪರ ಮನುಷ್ಯರನ್ನು ಮನುಷ್ಯರು ಗೌರವಿಸುವುದೇ ದೊಡ್ಡ ಮೌಲ್ಯ. ಮನುಷ್ಯ ದ್ವೇಷಕ್ಕಿಂತ ಕೆಟ್ಟ ಮೌಲ್ಯ ಬೇರೆ ಇಲ್ಲ. ಅದಕ್ಕೇ ರಾಷ್ಟ್ರಕವಿ ಕುವೆಂಪು ಅವರು “ಸರ್ವ ಜನಾಂಗದ ಶಾಂತಿಯ ತೋಟ” ಎಂದು ಕರೆದಿದ್ದಾರೆ ಎಂದು ಹೇಳಿದರು.

ಧರ್ಮದ ಹೆಸರಲ್ಲಿ, ಜಾತಿಯ ಹೆಸರಲ್ಲಿ ಮುಸ್ಲಿಂಮರನ್ನು, ದಲಿತರನ್ನು, ಶೂದ್ರರನ್ನು, ಶ್ರಮಿಕ‌ ವರ್ಗದವರನ್ನು ದ್ವೇಷಿಸುವುದು ಅತ್ಯಂತ ಅಮಾನವೀಯವಾದ, ಕೆಟ್ಟ ನಡವಳಿಕೆ. ಜನರಿಗೆ ಅರ್ಥ ಆಗುವ ರೀತಿಯಲ್ಲಿ ಸರಳವಾದ ಜನರ ಭಾಷೆಯಲ್ಲಿ ಮನುಷ್ಯನ ಮೌಲ್ಯಗಳನ್ನು ಬಸವಾದಿ ಶರಣರು ಹೇಳಿದ್ದಾರೆ. ನಾರಾಯಣ ಗುರುಗಳು, ಒಂದೇ ಜಾತಿ-ಒಂದೇ ಮತ-ಒಂದೇ ದೇವರು ಎಂದರು. ಕನಕದಾಸರು ಮತ್ತು ಬಸವಾದಿ ಶರಣರು ಹೇಳಿದ್ದೂ ಇದೇ ಮೌಲ್ಯವನ್ನೇ ಎಂದು ಹೇಳಿದರು.

ನಿಮ್ಮನ್ನು ಯಾವ ದೇವಸ್ಥಾನಕ್ಕೆ ಒಳಗೆ ಬಿಡುವುದಿಲ್ಲವೋ ಆ ದೇವಸ್ಥಾನಗಳಿಗೆ ಹೋಗುವುದನ್ನು ನಿಲ್ಲಿಸಿ ನೀವೇ ದೇವಸ್ಥಾನ ಕಟ್ಟಿ, ನೀವೇ ಪೂಜೆ ಮಾಡಿ ಎಂದು ನಾರಾಯಣಗುರುಗಳು ಹೇಳಿದ್ದಾರೆ. ಇದನ್ನು ಪಾಲಿಸಬೇಕು. ದೇವರಿದ್ದಾನೆ. ಆದರೆ ದೇವರು ದೇವಸ್ಥಾನದಲ್ಲಿ ಮಾತ್ರ ಇದ್ದಾನೆ ಎನ್ನುವುದು ಸರಿಯಲ್ಲ. ಎಲ್ಲಾ ಕಡೆಯೂ ದೇವರಿದ್ದಾನೆ. ಅದಕ್ಕೇ ಶರಣರು, “ಉಳ್ಳವರು ದೇವಸ್ಥಾನವ ಮಾಡುವರು. ನಾನೇನು ಮಾಡಲಯ್ಯ ಬಡವ” ಎಂದಿದ್ದಾರೆ.

ನಾನು ಕೊನೆಯವರೆಗೂ ಸಾಮಾಜಿಕ ನ್ಯಾಯ ಮತ್ತು ಸ್ವಾಭಿಮಾನದ ರಾಜಕಾರಣ ಮಾಡುತ್ತೇನೆ. ನಾವು ರೂಪಿಸುವ ಕಾರ್ಯಕ್ರಮಗಳು ಬಡವರ ಪರವಾಗಿ ಇರುತ್ತವೆ. ನಮ್ಮ‌ ಕಾರ್ಯಕ್ರಮಗಳು ಮನೆ ಮನೆ ತಲುಪಿವೆ. ಬಿಜೆಪಿಯವರ ಟೀಕೆಗೆ ಜನ ಬೆಲೆ ಕೊಡಲ್ಲ. ನಾನೂ ಕೊಡಲ್ಲ. ನಾಡಿನ ಜನ ನಮ್ಮ ಜೊತೆಗಿದ್ದಾರೆ ಎಂದರು.

ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ಮಾಜಿ ಸಚಿವ ಎಚ್.ಎಂ.ರೇವಣ್ಣ, ಪ್ರಗತಿಪರ ಚಿಂತಕ ಎಲ್.ಮುಕುಂದರಾಜ್ ಮತ್ತು ಸವಿತ ಸಮಾಜದ ಅಧ್ಯಕ್ಷರಾದ ಕಿರಣ್ ಕುಮಾರ್ ಅವರು ಉಪಸ್ಥಿತರಿದ್ದರು.