ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
ಹೆಚ್.ಡಿ.ಕುಮಾರಸ್ವಾಮಿ Archives » Page 2 of 5 » Dynamic Leader
December 3, 2024
Home Posts tagged ಹೆಚ್.ಡಿ.ಕುಮಾರಸ್ವಾಮಿ (Page 2)
ರಾಜಕೀಯ

ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಚಾಮರಾಜ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯನ್ನು ಉದ್ಘಾಟಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿದರು.

ಮೈಸೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ಜನರ ಧ್ವನಿ, ಸಂವಿಧಾನ ರಕ್ಷಣೆಯ ಧ್ವನಿ, ರಾಜ್ಯದ ಪರವಾದ ಧ್ವನಿ, ಸಾಮಾಜಿಕ ನ್ಯಾಯದ ಧ್ವನಿ, ಇವರು ನಮ್ಮ-ನಿಮ್ಮಲ್ಲರ ಧ್ವನಿಯಾಗಿ ಸಂಸತ್ತಿಗೆ ಹೋಗ್ತಾರೆ. ಒಗ್ಗಟ್ಟಾಗಿ ಕೆಲಸ ಮಾಡಿ ಗೆಲ್ಲಿಸಿ ಕಳಿಸೋಣ ಎಂದು ಹೇಳಿದರು.

ನಮ್ಮ ಅಭ್ಯರ್ಥಿ ಎಂ.ಲಕ್ಷ್ಮಣ್ ಸಾಮಾನ್ಯ ಒಕ್ಕಲಿಗ ಕುಟುಂಬದಿಂದ ಬಂದು, ಶ್ರಮದಿಂದ ಮೇಲೆ ಬಂದ ಕಾರ್ಯಕರ್ತ. ಇವರು ಒಕ್ಕಲಿಗರೇ ಅಲ್ಲ ಎನ್ನುವ ಅಪಪ್ರಚಾರವನ್ನು ವ್ಯಾಪಕವಾಗಿ ಮಾಡುತ್ತಿದ್ದಾರೆ. ಆದರೆ, ಎಂ.ಲಕ್ಷ್ಮಣ್ ಅವರು ಅಪ್ಪಟ ಒಕ್ಕಲಿಗರು. ಬಿಜೆಪಿ ಒಕ್ಕಲಿಗರಿಗೆ ಟಿಕೆಟ್ ತಪ್ಪಿಸಿದೆ ಎನ್ನುವ ಅಸಮಾಧಾನ ಹಲವರಲ್ಲಿದೆ, ಆ ಕಾರಣಕ್ಕೇ ಲಕ್ಷ್ಮಣ್ ಅವರು ಒಕ್ಕಲಿಗರೇ ಅಲ್ಲ ಎನ್ನುವ ಅಪಪ್ರಚಾರ ಮಾಡುತ್ತಿದ್ದಾರೆ. ಈ ಸುಳ್ಳು ಮತ್ತು ಅಪಪ್ರಚಾರವನ್ನು ನಂಬಬೇಡಿ ಎಂದು ಮತದಾರರಲ್ಲಿ ಮನವಿ ಮಾಡಿದರು.

ನಮ್ಮ ನಾಡಿಗೆ ಪ್ರವಾಹ ಬಂದಾಗ ನರೇಂದ್ರ ಮೋದಿ ಬರಲಿಲ್ಲ; ಬರಗಾಲ ಬಂದಾಗಲೂ ಮೋದಿ ಬರಲಿಲ್ಲ. ತೆರಿಗೆಯಲ್ಲಿ ರಾಜ್ಯಕ್ಕೆ ಅನ್ಯಾಯವಾದಾಗಲೂ ಮೋದಿ ಬರಲಿಲ್ಲ; ಚುನಾವಣೆ ಬಂತು ನೋಡಿ – ಮೋದಿ ರಾಜ್ಯಕ್ಕೆ ಮೇಲಿಂದ ಮೇಲೆ ಬರ್ತಾರೆ ಎಂದು ವ್ಯಂಗ್ಯವಾಡಿದರು.

ಹೆಚ್.ಡಿ.ಕುಮಾರಸ್ವಾಮಿ ಅವರ ಸರ್ಕಾರವನ್ನು ಬೀಳಿಸಿದ್ದೇ ಬಿಜೆಪಿ. ಹಾಗಂತ ಇದೇ ಕುಮಾರಸ್ವಾಮಿ ಬಯ್ಯುತ್ತಿದ್ದರು. ಈಗ ದೇವೇಗೌಡರು ಮತ್ತು ಕುಮಾರಸ್ವಾಮಿ ಇಬ್ಬರೂ ಬಿಜೆಪಿ ಜತೆ ಸೇರಿಕೊಂಡಿದ್ದಾರೆ. ಆದ್ದರಿಂದ ಇವರು ತಮ್ಮ ಪಕ್ಷದ ಹೆಸರಿನಲ್ಲಿರುವ ಸೆಕ್ಯುಲರ್ ಪದವನ್ನು ಕಿತ್ತಾಕೋದು ಉತ್ತಮ ಎಂದೆ. ಇಷ್ಟು ಹೇಳಿದ್ದಕ್ಕೇ ದೇವೇಗೌಡರು ಸಿದ್ದರಾಮಯ್ಯರಿಗೆ ಗರ್ವ ಇದೆ ಎನ್ನುತ್ತಿದ್ದಾರೆ.

ದೇವೇಗೌಡರ ಕುರಿತ ನಮಗಿರುವುದು ರಾಜಕೀಯ ವಿರೋಧ ಮಾತ್ರ. ನಿಮ್ಮ ರಾಜಕೀಯ ನಿಲುವುಗಳಿಗೆ ಮಾಡುವ ವಿರೋಧ. ಯಾವುದೇ ಕಾರಣಕ್ಕೂ ದೇವೇಗೌಡರ ಬಗ್ಗೆ ವೈಯುಕ್ತಿಕ ವಿರೋಧ ಇಲ್ಲವೇ ಇಲ್ಲ. ಚಾಮರಾಜ ಕ್ಷೇತ್ರದ ಶಾಸಕ ಹರೀಶ್ ಗೌಡರನ್ನೂ ಬಳಸಿ ಬಿಸಾಡಿದ ಜೆಡಿಎಸ್ ನವರು, ನನ್ನನ್ನೂ ಪಕ್ಷದಿಂದ ಹೊರಗೆ ಹಾಕಿದರು. ಇದೇ ರೀತಿ ಹಲವು ನಾಯಕರನ್ನು ಬಳಸಿ ಬಿಸಾಕಿದ್ದಾರೆ. ಇವರ ಈ ರಾಜಕೀಯ ವರ್ತನೆಗೆ ಮಾತ್ರ ನಮ್ಮ ವಿರೋಧ ಎಂದು ಪುನರುಚ್ಚಿಸಿದರು.

ಆದ್ದರಿಂದ ದೇವೇಗೌಡರು ಮತ್ತು ಕುಮಾರಸ್ವಾಮಿ ಅವರ ಕಣ್ಣೀರಿಗೆ ಮರಳಾಗದೆ, ಅವರ ಮಾತುಗಳನ್ನು, ಅವರ ವರ್ತನೆಯನ್ನು, ಪದೇ ಪದೇ ಬದಲಾಗುವ ಅವರ ನಿಲುವುಗಳನ್ನು ಪ್ರಶ್ನಿಸಿ ಪ್ರಭುದ್ಧವಾದ ಮತ್ತು ಖಚಿತವಾದ ರಾಜಕೀಯ ನಿರ್ಧಾರ ತೆಗೆದುಕೊಳ್ಳಬೇಕು. ಮೈಸೂರಿನ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರ ಮಾಡಿದ, ನಾನು ಮುಖ್ಯಮಂತ್ರಿಯಾಗಿ ಮಾಡಿದ ಅಭಿವೃದ್ಧಿ ಕೆಲಸಗಳು ಕಣ್ಣ ಮುಂದಿವೆ. ಬಿಜೆಪಿ, ಜೆಡಿಎಸ್ ಸರ್ಕಾರದಲ್ಲಿ ಮೈಸೂರಿಗೆ ಏನು ಕೆಲಸ ಮಾಡಿದ್ದಾರೆ ತೋರಿಸಲಿ ಎಂದು ಸವಾಲೆಸದರು.

ಪಶು ಸಂಗೋಪನಾ ಸಚಿವರಾದ ಕೆ.ವೆಂಕಟೇಶ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ತನ್ವೀರ್ ಸೇಠ್,‌ ಚಾಮರಾಜ ಕ್ಷೇತ್ರದ ಶಾಸಕರಾದ ಹರೀಶ್ ಗೌಡ, ಗ್ಯಾರಂಟಿ ಅನುಷ್ಠಾನ ಸಮಿತಿಯ ಉಪಾಧ್ಯಕ್ಷರಾದ ಪುಷ್ಪಾ ಅಮರನಾಥ್, ಲೋಕಸಭಾ ಅಭ್ಯರ್ಥಿ ಲಕ್ಷ್ಮಣ್ ಮತ್ತು ಜಿಲ್ಲೆಯ ಶಾಸಕರುಗಳು, ಮಾಜಿ ಶಾಸಕರುಗಳು, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಮುಖಂಡರು ಹಾಗೂ ಬ್ಲಾಕ್ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ರಾಜ್ಯ

ಬೆಂಗಳೂರು: ವಿಧಾನ ಪರಿಷತ್ ಉಪ ಚುನಾವಣೆಯಲ್ಲಿ ಪುಟ್ಟಣ್ಣನವರು ಜಯಗಳಿಸಿದ ಹಿನ್ನೆಲೆಯಲ್ಲಿ ಕೆಂಗೇರಿಯಲ್ಲಿ ಆಯೋಜಿಸಿದ್ದ ಶಿಕ್ಷಕರ ಕೃತಜ್ಞತಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, “ಮಾಜಿ ಪ್ರಧಾನಿ ದೇವೇಗೌಡರು ಈಗ ಬಿಜೆಪಿ ಜತೆ ಸೇರಿರುವುದು, ನರೇಂದ್ರ ಮೋದಿ ಅವರನ್ನು ವಿಪರೀತ ಹೊಗಳುತ್ತಿರುವುದು ನನಗೆ ತುಂಬಾ ಆಶ್ಚರ್ಯ ಆಗಿದೆ. ಮುಂದಿನ ಜನ್ಮದಲ್ಲಿ ಮುಸಲ್ಮಾನನಾಗಿ ಹುಟ್ಟಲು ಬಯಸುತ್ತೇನೆ. ಬಿಜೆಪಿಗೆ ಯಾವತ್ತೂ ವಿರುದ್ಧವಾಗಿರುತ್ತೇವೆ” ಎಂದು ಈ ಹಿಂದೆ ದೇವೇಗೌಡರು ಹೇಳಿದ್ದುದನ್ನು ಮುಖ್ಯಮಂತ್ರಿಗಳು ಸ್ಮರಿಸಿದರು.

“ಈಗ ತಮ್ಮ ಪಕ್ಷದ ಉಳಿವಿಗಾಗಿ ಬಿಜೆಪಿ ಜೊತೆಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಇಂದು ನಾಡಿನ ಜನತೆ ಪ್ರಜ್ಞಾವಂತರಾಗಿದ್ದಾರೆ. ಇವರ ಹೇಳಿಕೆಗಳನ್ನು ಪರಿಶೀಲಿಸಿ ತುಲನೆ ಮಾಡುವಷ್ಟು ತಿಳಿವಳಿಕೆ ನಾಡಿನ ಜನರಿಗೆ ಬಂದಿದೆ. ರಾಜಕೀಯವಾಗಿ ದೇವೇಗೌಡರು ತಮ್ಮ ಕುಟುಂಬದ ಉಳಿವಿಗಾಗಿ ಯಾವುದೇ ನಿರ್ಧಾರಕ್ಕೆ ಬಂದರೂ ಜನರು ಕಣ್ಣುಮುಚ್ಚಿಕೊಂಡು ಅವರನ್ನು ಬೆಂಬಲಿಸಬೇಕು ಎನ್ನುವ ಸಂದರ್ಭ ಈಗ ಇಲ್ಲ” ಎಂದು ಹೇಳಿದರು.

“ಹಿಂದೆ ನಾನು ಜೆಡಿಎಸ್ ನಲ್ಲಿದ್ದಾಗ, ಪುಟ್ಟಣ್ಣನವರಿಗೆ ಶಿಕ್ಷಕರು ಬೆಂಬಲಿಸುತ್ತಾರೆ ಎಂಬ ವಿಶ್ವಾಸವಿದ್ದು, ಚುನಾವಣೆಗೆ ನಿಲ್ಲುವುದಾಗಿ ತಿಳಿಸಿದ್ದರು. 2002ರಲ್ಲಿ ಜನರ ಆಶೀರ್ವಾದದಿಂದ ಜಯಗಳಿಸಿದರು. ನಂತರ ಐದು ಬಾರಿ ಗೆದ್ದಿದ್ದಾರೆ. ಜನರ ಧ್ವನಿಯಾಗಿ ಸಮರ್ಥವಾಗಿ ಕೆಲಸ ಮಾಡಿದ್ದು, ಬಿಜೆಪಿಯಿಂದ ಕಾಂಗ್ರೆಸ್ ಗೆ ಬಂದರೂ ಅವರನ್ನು ಬೆಂಬಲಿಸಿದ ಶಿಕ್ಷಕ ಸಮುದಾಯದ ಪ್ರಜ್ಞಾವಂತಿಕೆಗೆ ಮೆಚ್ಚುವಂತದ್ದು” ಎಂದು ಹೇಳಿದರು.

“ಬೆಂಗಳೂರು ಗ್ರಾಮಾಂತರದಿಂದ ಡಿ.ಕೆ.ಸುರೇಶ್ ಅವರನ್ನು ಕಣಕ್ಕೆ 4 ಬಾರಿ ಇಳಿಸಲಾಗಿದೆ. ಈ ಕ್ಷೇತ್ರದಲ್ಲಿ ಅವರು ಖಂಡಿತ ಗೆಲುವು ಸಾಧಿಸಲಿದ್ದಾರೆ ಎಂಬ ವಿಶ್ವಾಸವಿದೆ. ಬಿಜೆಪಿಯವರು ನರೇಂದ್ರ ಮೋದಿಯವರ ಹೆಸರಿನಲ್ಲಿ ಗೆಲ್ಲುವ ವಿಶ್ವಾಸದಲ್ಲಿದ್ದಾರೆಯೇ ಹೊರತು, ಬಿಜೆಪಿಯವರಿಗೆ ಜನರ ಬಳಿ ಹೋಗಲು ಕಾರಣಗಳೇ ಇಲ್ಲ. ನರೇಂದ್ರ ಮೋದಿಯವರ ಹೆಸರಿನ ಮೇಲೆ ಗೆಲ್ಲುತ್ತೇವೆ ಎಂದು  ಬಿಜೆಪಿ ಭಾವಿಸಿದೆ. ನರೇಂದ್ರ ಮೋದಿಯವರು ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಪಾದಯಾತ್ರೆ ಮಾಡಿದ್ದರೂ ನಮಗೆ 136 ಸ್ಥಾನಗಳು ದೊರೆತವು” ಎಂದು ಸಮರ್ಥಿಸಿಕೊಂಡರು.

“ಮೋದಿಯವರು ಪ್ರಚಾರ ಮಾಡಿದ್ದ ಯಾವ ಕ್ಷೇತ್ರದಲ್ಲೂ ಬಿಜೆಪಿ ಗೆಲ್ಲಲೇ ಇಲ್ಲ. ಹೀಗಾಗಿ ನರೇಂದ್ರ ಮೋದಿಯವರ ಹೆಸರಿನ ಮೇಲೆಯೇ ಗೆಲ್ಲುತ್ತೇವೆ ಎನ್ನುವ ಇವರಷ್ಟು ಮೂರ್ಖರು ಯಾರೂ ಇಲ್ಲ. ಕೊಟ್ಟ ಮಾತಿನಂತೆ ನಡೆದುಕೊಳ್ಳವವರು, ಕೆಲಸ ಮಾಡಿರುವವರಿಗೆ ತಾನೇ ಕೂಲಿ ಕೊಡುವುದು. ಗೇಯುವ ಎತ್ತಿಗೆ ಹುಲ್ಲು ಹಾಕಬೇಕು. ಕಳ್ಳ ಎತ್ತಿಗೆ ಹುಲ್ಲು ಹಾಕಬಾರದು. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅವರು 28ಕ್ಕೆ 28 ಗೆಲ್ಲುತ್ತೇವೆ ಎಂದುಕೊಂಡಿದ್ದಾರೆ” ಎಂದು ವ್ಯಂಗ್ಯವಾಡಿದರು.

“ದೇವೇಗೌಡರು ನರೇಂದ್ರ ಮೋದಿ ಅವರನ್ನು ಈಗ ಹೊಗಳಿದ್ದೆ ಹೊಗಳಿದ್ದು. ನನಗೂ ಅವರಿಗೂ ಅವಿನಾಭಾವ ಸಂಬಂಧ ಇದೆ, ಜನ್ಮ ಜನ್ಮದ ಸಂಬಂಧವಿದೆ ಅಂತಲೂ ಎನ್ನುತ್ತಾರೆ. ಗೌಡರು ಹೀಗೇಕಾದರು ಎಂದು ಆಶ್ಚರ್ಯವಾಗಿದೆ. ಇದೇ ದೇವೇಗೌಡರು ನರೇಂದ್ರ ಮೋದಿಯವರು ಪುನಃ ಪ್ರಧಾನಿಯಾದರೆ ನಾನು ದೇಶ ಬಿಟ್ಟು ಹೋಗುತ್ತೇನೆ ಎಂದಿದ್ದರು. ಈಗ ಹೊಗಳುತ್ತಾರೆ. ಇದೆಂತಹ ದ್ವಂದ್ವ? ದೇಶದ ಪ್ರಧಾನಮಂತ್ರಿಯಾಗಿದ್ದವರು ಈ ರೀತಿ ಹೇಳುತ್ತಾರೆ ಎಂದು ನಿರೀಕ್ಷಿಸಿರಲಿಲ್ಲ” ಆಶ್ಚರ್ಯ ವ್ಯಕ್ತಪಡಿಸಿದರು.

ರಾಜ್ಯ

ಬೆಂಗಳೂರು: ಸಾಂಸ್ಕೃತಿಕ ನಗರ ಮೈಸೂರು ಹಾಗೂ ರಾಜಧಾನಿ ಬೆಂಗಳೂರು ನಡುವಿನ ಐತಿಹಾಸಿಕ, ಪಾರಂಪರಿಕ ಮಹತ್ವವುಳ್ಳ ರಾಮನಗರ, ಚನ್ನಪಟ್ಟಣ ರೈಲು ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸಲು ಪ್ರಧಾನಿಗಳಾದ ನರೇಂದ್ರ ಮೋದಿ ಅವರು ಸಂಕಲ್ಪ ಮಾಡಿರುವುದು ನನಗೆ ಅತೀವ ಸಂತಸ ಉಂಟು ಮಾಡಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.  

ರೂ.20.93 ಕೋಟಿ ವೆಚ್ಚದಲ್ಲಿ ಚನ್ನಪಟ್ಟಣ ರೈಲು ನಿಲ್ದಾಣ, ರೂ.20.96 ಕೋಟಿ ವೆಚ್ಚದಲ್ಲಿ ರಾಮನಗರ ರೈಲು ನಿಲ್ದಾಣವನ್ನು ಸ್ಥಳೀಯ ಸಾಂಸ್ಕೃತಿಕ ಸೊಗಡಿನ ಮಾದರಿಯಲ್ಲಿಯೇ ಉನ್ನತೀಕರಿಸುತ್ತಿರುವುದು ಈ ಭಾಗದ ಜನರ ಆಶೋತ್ತರಗಳನ್ನು ಈಡೇರಿಸುವ ಬೃಹತ್ ಪ್ರಯತ್ನವಾಗಿದೆ ಎಂದು ಹೇಳಿದ್ದಾರೆ.

ನಿತ್ಯವೂ ಉದ್ಯೋಗ, ವ್ಯವಹಾರಕ್ಕಾಗಿ ಎರಡೂ ನಗರಗಳ ನಡುವೆ ಸಂಚರಿಸುವ ಜಿಲ್ಲೆಯ ಅಸಂಖ್ಯಾತ ಜನರಿಗೆ ಅನುಕೂಲವೂ ಆಗಲಿದೆ. ಈ ಕಾರಣಕ್ಕಾಗಿ ನಾನು ಮಾನ್ಯ ಪ್ರಧಾನಿಗಳು ಹಾಗೂ ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಶ್ನವ್ ಅವರಿಗೆ ತುಂಬು ಹೃದಯದ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.

ರಾಜಕೀಯ

ಬೆಂಗಳೂರು: ಮಂಡ್ಯದ ಕೆರೆಗೋಡು ಗ್ರಾಮದಲ್ಲಿ ಹಾರಿಸಲಾಗಿದ್ದ ಹನುಮ ಧ್ವಜವನ್ನು ಕೆಳಗಿಳಿಸಿ, ರಾಷ್ಟ್ರ ಧ್ವಜ ಹಾರಿಸಿದ್ದನ್ನು ರಾಜಕೀಯ ಗೊಳಿಸಿ, ಜನರನ್ನು ದಾರಿತಪ್ಪಿಸುವ ಬಿಜೆಪಿ ಮತ್ತು ಜೆಡಿಎಸ್ ನಾಯಕರ ವರ್ತನೆ ಖಂಡನೀಯ ಎಂದು ವೆಲ್‌ಫೇರ್ ಪಾರ್ಟಿಯ ರಾಜ್ಯ ಅಧ್ಯಕ್ಷ ಅಡ್ವಕೇಟ್ ತಾಹೇರ್ ಹುಸೇನ್ ಹೇಳಿದ್ದಾರೆ.

ರಾಷ್ಟ್ರ ಧ್ವಜ ಅಥವಾ ಕನ್ನಡ ಧ್ವಜ ಹಾರಿಸಲು ಅನುಮತಿ ಪಡೆದು, ಕೇಸರಿ ಧ್ವಜ ಹಾರಿಸಲು ಪ್ರಯತ್ನಿಸುವುದು ಎಷ್ಟು ಸರಿ. ಮಾತ್ರವಲ್ಲ, 60 ಅಡಿ ಎತ್ತರದ ಸ್ಥಂಭಕ್ಕೆ ಅನುಮತಿ ಪಡೆದು 108 ಅಡಿ ಎತ್ತರದ ಸ್ಥಂಭ ಸ್ಥಾಪಿಸಲಾಗಿದೆ ಎಂದು ತಿಳಿದು ಬಂದಿದೆ. ಇದು ಸ್ಪಷ್ಟವಾದ ನಿಯಮ ಉಲ್ಲಂಘನೆಯಲ್ಲವೇ? ಸರ್ಕಾರದ ವಿರುದ್ಧ ಜನರನ್ನು ಈ ರೀತಿ ಎತ್ತಿ ಕಟ್ಟುವುದನ್ನು ಸಮರ್ಥಿಸಲಾಗದು.

ಈ ಮೂಲಕ ಜನರನ್ನು ಭಾವನಾತ್ಮಕವಾಗಿ ಕೆರಳಿಸುವ ರಾಜಕೀಯಕ್ಕೆ ಬಿಜೆಪಿ ಮತ್ತು ಜೆಡಿಎಸ್ ಮುಂದಾಗಿದೆಯೇ? ಎಂದು ಪ್ರಶ್ನಿಸಿರುವ ತಾಹೇರ್ ಹುಸೇನ್, ಸರಕಾರ ನಾಡಿನ ಜನತೆಗೆ ವಾಸ್ತವಾಂಶಗಳನ್ನು ತಿಳಿಸಿಕೊಡುವ ಪ್ರಯತ್ನ ಮಾಡಬೇಕು ಎಂದು ಕೇಳಿಕೊಂಡಿದ್ದಾರೆ.

ಜನರು ನಿಜಾಂಶಗಳನ್ನು ಅರಿತು ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ  ಕಾಪಾಡಲು ಶ್ರಮಿಸಬೇಕು. ದ್ವೇಷದ ರಾಜಕೀಯಕ್ಕೆ ಯಾರೂ ಬಲಿಯಾಗಬಾರದು ಎಂದು ಅವರು ನಾಡಿನ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ರಾಜಕೀಯ

ಬೆಂಗಳೂರು: ರಾಜ್ಯ ಸರಕಾರ ಮಕ್ಮಲ್ ಟೋಪಿ ಹಾಕುವ ತನ್ನ ಚಾಳಿ ಮುಂದುವರಿಸಿದೆ. ಗೌರವಾನ್ವಿತ ಸುಪ್ರಿಂ ಕೋರ್ಟ್ ಆದೇಶವನ್ನು ಕೇಂದ್ರ ಸರಕಾರ ಈಗಾಗಲೇ ಪಾಲಿಸಿದೆ. ಈ ಒತ್ತಡಕ್ಕೆ ಸಿಲುಕಿದ ರಾಜ್ಯ ಸರಕಾರ ಹಳೆ ಪಿಂಚಣಿ ಯೋಜನೆ (OPS) ಬಗ್ಗೆ ಅರೆಬರೆ, ತರಾತುರಿ ಆದೇಶ ಹೊರಡಿಸಿದೆಯೇ ಹೊರತು, ಸರಕಾರಿ ನೌಕರರ ಮೇಲೆ ಪ್ರೀತಿ ಉಕ್ಕಿ ಅಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಕೇಂದ್ರ ಸರಕಾರವು 1-4-2006ಕ್ಕೂ ಮೊದಲು ಅಧಿಸೂಚನೆಯಾಗಿ ನೇಮಕಗೊಂಡವರಿಗೆ OPS ಕೊಟ್ಟಿದೆ. ನಂತರ ಎಲ್ಲಾ ರಾಜ್ಯಗಳು ಈ ಆದೇಶ ಜಾರಿ ಮಾಡುತ್ತಿವೆ. ಕರ್ನಾಟಕದಲ್ಲೂ ಆಗಿದೆ ಅಷ್ಟೇ. ಇದರಲ್ಲಿ ಸರಕಾರದ ಘನಂದಾರಿ ಸಾಧನೆ ಏನೂ ಇಲ್ಲ ಎಂದು ಹೇಳಿದ್ದಾರೆ.

ಮೇ ತಿಂಗಳಲ್ಲಿಯೇ OPS ಜಾರಿ ಮಾಡುವ ಭರವಸೆ ನೀಡಿದ್ದರು ಸಿದ್ದರಾಮಯ್ಯ. 2023 ಮೇ 20 ರಂದು ಪ್ರಮಾಣ ಸ್ವೀಕರಿಸಿದ ಅವರು, ಸರಕಾರ ಬಂದ ಎರಡೇ ದಿನಕ್ಕೆ ಈ ಬಗ್ಗೆ ನಿರ್ಧಾರ ಕೈಗೊಳ್ಳಬಹುದಿತ್ತು. ಅವರು ಚುನಾವಣಾ ಫಸಲು ತೆಗೆಯಲು ಹತ್ತು ತಿಂಗಳು ಹೊಂಚು ಹಾಕಿ ಕೂತರು. ಇದು ಚುನಾವಣೆ ಗಿಮಿಕ್ ಅಷ್ಟೇ, ಅನುಮಾನವೇ ಇಲ್ಲ ಎಂದು ವ್ಯಂಗ್ಯವಾಡಿದ್ದಾರೆ.

2006 ಏಪ್ರಿಲ್‌ ಪೂರ್ವ ನೇಮಕಾತಿ ಅಧಿಸೂಚನೆಯಾಗಿ 2006ರ ನಂತರ ನೇಮಕಗೊಂಡ 13,000 ನೌಕರರು ಹಳೆ ಪಿಂಚಣಿ ವ್ಯಾಪ್ತಿಗೆ ಬರುತ್ತಾರೆ ಎಂದು ಈ ಆದೇಶ ಹೇಳುತ್ತದೆ. ಈ ಗ್ಯಾರಂಟಿ ಸರಕಾರಕ್ಕೆ ಈ ನಿರ್ಧಾರ ತೆಗೆದುಕೊಳ್ಳುವುದಕ್ಕೆ 10 ತಿಂಗಳೇ ಬೇಕಾಯಿತು! ಮಾತೆತ್ತಿದರೆ ಮೋದಿ ಅವರನ್ನು ನಿಂದಿಸುವ ಸಿದ್ದರಾಮಯ್ಯ ಅವರದ್ದು ಕೆಲಸದಲ್ಲಿ ಆಮೆವೇಗ ಎನ್ನುವುದಕ್ಕೆ ಇದೇ ಸಾಕ್ಷಿ ಎಂದು ಹೇಳಿದ್ದಾರೆ.

ಎರಡು ನಾಲಿಗೆಯ ಕಾಂಗ್ರೆಸ್ ನವರು ನುಡಿದಂತೆ ನಡೆದಿದ್ದೇವೆ ಎಂದು ಕೊಚ್ಚಿಕೊಳ್ಳುತ್ತಾರೆ. ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಎಷ್ಟು ನೌಕರರಿಗೆ OPS ನೀಡುವುದಾಗಿ ಭರವಸೆ ನೀಡಿತ್ತು? ಆದರೆ, ಸರಕಾರದ ಆದೇಶದಿಂದ 13,000 ನೌಕರರಿಗೆ ಮಾತ್ರ OPS ಭಾಗ್ಯ ಕೊಡುತ್ತಿದೆ. ಉಳಿದವರು ಅಭಾಗ್ಯವಂತರೇ? ಹೋಗಲಿ, OPSಗೆ ಅರ್ಹ ನೌಕರರು ಎಷ್ಟಿದ್ದಾರೆ? ಸರಕಾರಕ್ಕೆ ಮಾಹಿತಿ ಇದೆಯಾ? ಎಂದು ಪ್ರಶ್ನಿಸಿದ್ದಾರೆ.

ಹೇಳುವುದು ಒಂದು, ಮಾಡುವುದು ಇನ್ನೊಂದು ಎನ್ನುವ ತನ್ನ ಪರಂಪರಾಗತ ವರ್ತನೆಯನ್ನು ಕಾಂಗ್ರೆಸ್ ಇನ್ನಾದರೂ ಬದಲಿಸಿಕೊಳ್ಳಬೇಕು. ಪ್ರಣಾಳಿಕೆ ಮತ್ತು ಬಜೆಟ್ ನಲ್ಲಿ ಭರವಸೆ ನೀಡಿದಂತೆ ಸರಕಾರಿ ನೌಕರರಿಗೆ OPS ಕೊಡಲೇಬೇಕು. ಅದನ್ನು ಬಿಟ್ಟು ನೌಕರರ ಕಣ್ಣಿಗೆ ಮಣ್ಣೆರಚುವುದು ಸರಿಯಲ್ಲ. ನೌಕರರ ಬದುಕನ್ನು ಚುನಾವಣೆ ಸರಕನ್ನಾಗಿ ಮಾಡಿಕೊಳ್ಳುವುದು ಹೇಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯ

ಬೆಂಗಳೂರು: ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ಶ್ರೀರಾಮ ಮಂದಿರದಲ್ಲಿ ಜನವರಿ 22 ರಂದು ನಡೆಯಲಿರುವ ಶ್ರೀರಾಮದೇವರ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ (RSS) ದ ಅಖಿಲ ಭಾರತೀಯ ಸಂಪರ್ಕ್ ಪ್ರಮುಖ್ ಆಗಿರುವ ರಾಮಲಾಲ್ ಅವರು ಹಾಗೂ ಇತರರು ಶ್ರೀರಾಮ ಜನ್ಮಭೂಮಿ ಟ್ರಸ್ಟ್‌ ಪರವಾಗಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಆಹ್ವಾನ ಪತ್ರಿಕೆ ನೀಡಿದ್ದಾರೆ.

ಆಹ್ವಾನ ಪತ್ರಿಕೆಯನ್ನು ತುಂಬು ಹೃದಯದಿಂದ ಸ್ವೀಕರಿಸಿಕೊಂಡ ಹೆಚ್.ಡಿ.ಕುಮಾರಸ್ವಾಮಿ ಅವರು “ನನ್ನನ್ನು ಆಹ್ವಾನಿಸಿದ ಅವರೆಲ್ಲರಿಗೂ (ಸ್ವಯಂ ಸೇವಕ ಸಂಘ-RSS) ಧನ್ಯವಾದಗಳು. ಶ್ರೀರಾಮದೇವರ ಪ್ರಾಣ ಪ್ರತಿಷ್ಠೆ ಹಾಗೂ ಶ್ರೀರಾಮ ಸೇವಾ ಕೈಂಕರ್ಯದಲ್ಲಿ ಕುಟುಂಬ ಸಮೇತವಾಗಿ ಸಂತೋಷದಿಂದ ಭಾಗಿಯಾಗುತ್ತೇನೆ” ಎಂದು ಹೇಳಿದ್ದಾರೆ. ಕೆಲವು ದಿನಗಳ ಹಿಂದೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದು ಗಮನಾರ್ಹ.

ರಾಜಕೀಯ

ಬೆಂಗಳೂರು: ಪೊಳ್ಳು ಗ್ಯಾರಂಟಿಗಳ ಮೂಲಕ ದೀಪಾವಳಿ ಹೊತ್ತಿಗೆ ರಾಜ್ಯವನ್ನು ದಿವಾಳಿ ಅಂಚಿಗೆ ನೂಕಿರುವ ಕಾಂಗ್ರೆಸ್ ಸರಕಾರ, ರೈತರ ಮೇಲೆಯೂ ವಕ್ರದೃಷ್ಟಿ ಬೀರಿದೆ. ಬರ, ವಿದ್ಯುತ್ ಕ್ಷಾಮದಿಂದ ಕಂಗೆಟ್ಟು ಹೋಗಿರುವ ಅನ್ನದಾತರಿಗೆ ಮತ್ತೊಂದು ಬರೆ ಎಳೆದು, ತಾನು ರೈತದ್ರೋಹಿ ಎಂದು ಸಾಬೀತು ಮಾಡಿಕೊಂಡಿದೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾಸ್ವಾಮಿ ಹೇಳಿದ್ದಾರೆ.

‘ಗ್ಯಾರಂಟಿಗಳಿಗೆ ಪ್ರಚಾರ ಜಾಸ್ತಿ, ಅಭಿವೃದ್ದಿಗೆ ಹಣ ನಾಸ್ತಿ’ ಎನ್ನುವ ಪರಿಸ್ಥಿತಿ ರಾಜ್ಯದಲ್ಲಿ ತಲೆದೋರಿದೆ. ರೈತರಿಗೆ ಹೊಸ ವಿದ್ಯುತ್ ಸಂಪರ್ಕಕ್ಕೆ ಕೊಡುತ್ತಿದ್ದ ಸಬ್ಸಿಡಿಗೆ ಕಾಂಗ್ರೆಸ್ ಸರಕಾರ ಕತ್ತರಿ ಹಾಕಿದೆ ಎನ್ನುವ ಸರಕಾರಿ ಆದೇಶ ನೋಡಿ ನನಗೆ ತೀವ್ರ ಆಘಾತ ಉಂಟಾಯಿತು. ಕೇಡುಗಾಲಕ್ಕೆ ಕೋಳಿಯು ಮೊಟ್ಟೆ ಬದಲು ಮರಿಯನ್ನೇ ಹಾಕಿತು ಎನ್ನುವ ಹಾಗೆ ಕಾಂಗ್ರೆಸ್ ಸರಕಾರ ಎರಡು ಕೈಗಳಿಂದಲೂ ರೈತರ ಮೇಲೆ ಮಣ್ಣು ಹಾಕುತ್ತಿದೆ ಎಂದು

ಹೊಸದಾಗಿ ವಿದ್ಯುತ್ ಸಂಪರ್ಕ ಪಡೆಯುತ್ತಿದ್ದ ಅನ್ನದಾತರಿಗೆ ಇದುವರೆಗೆ ಟ್ರಾನ್ಸ್ ಫಾರ್ಮ್, ವಿದ್ಯುತ್ ಕಂಬ, ಅಲ್ಯುಮಿನಿಯಂ ತಂತಿ ಇತ್ಯಾದಿಗಳಿಗೆ ಸರಕಾರವೇ ಸಬ್ಸಿಡಿ ಕೊಡುತ್ತಿತ್ತು. ಚುನಾವಣೆಯಲ್ಲಿ ಮತಕ್ಕಾಗಿ ಯಾವ ಹಸ್ತ ರೈತರ ಪಾದ ಮುಟ್ಟಿ ಮತಯಾಚನೆ ಮಾಡಿತೋ, ಈಗ ಅದೇ ಹಸ್ತ ಅಧಿಕಾರ ಸಿಕ್ಕ ಮೇಲೆ ಅನ್ನದಾತನ ಕೊರಳಿಗೆ ಹಗ್ಗ ಬಿಗಿಯತೊಡಗಿದೆ! ಇದಕ್ಕಿಂತ ಪೈಶಾಚಿಕ ಮನಃಸ್ಥಿತಿ ಮತ್ತೊಂದು ಇರಲು ಸಾಧ್ಯವೇ? ಎಂದು ಕಟಕಿಯಾಡಿದ್ದಾರೆ.

ತಮ್ಮ ಪಾಲಿನ 24,000 ರೂಪಾಯಿ ಭರಿಸುವುದಕ್ಕೇ ಇನ್ನಿಲ್ಲದ ಕಡುಕಷ್ಟ ಅನುಭವಿಸುತ್ತಿರುವ ರೈತರು, ಇನ್ನು ಮುಂದೆ ಪೂರ್ಣ ವೆಚ್ಚ ಭರಿಸಬೇಕು ಎಂದು ಸರಕಾರ ಆದೇಶ ಹೊರಡಿಸಿದೆ. ಕಟುಕರ ಕೈಗೆ ಕರ್ನಾಟಕ ಸಿಕ್ಕಿ ನರಳುತ್ತಿದೆ ಎನ್ನುವುದಕ್ಕೆ ಇದಕ್ಕಿಂತ ಪುರಾವೆ ಬೇಕೆ? ಅಧಿಕಾರಕ್ಕೆ ಬಂದಾಗಿನಿಂದ ಸಮಾಧಿ ಸ್ಥಿತಿಯಲ್ಲಿರುವ ಈ ಸರಕಾರವು, ಇಂಥ ಜನದ್ರೋಹಿ ಕೃತ್ಯಗಳಲ್ಲಿ ಬಹಳ ಕ್ರಿಯಾಶೀಲವಾಗಿದೆ! ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಸರಕಾರ ಕೂಡಲೇ ಈ ಆದೇಶವನ್ನು ವಾಪಸ್ ಪಡೆಯಲೇಬೇಕು. ಮೊದಲಿನಂತೆ ರೈತರಿಗೆ ಸಬ್ಸಿಡಿ ಕೊಡಬೇಕು. ಒಂದು ವೇಳೆ ಆದೇಶ ವಾಪಸ್ ಪಡೆಯದಿದ್ದರೆ ಜೆಡಿಎಸ್ ಪಕ್ಷ ಸದನದ ಒಳಗೆ, ಹೊರಗೆ ಹೋರಾಟಕ್ಕೆ ಇಳಿಯುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಕಾಂಗ್ರೆಸ್ ಬಂಡವಾಳಶಾಹಿ ಮನಃಸ್ಥಿತಿಯ ಲಾಭಕೋರ ಪಕ್ಷ. ಕಸಾಯಿ ಸಂಸ್ಕೃತಿಯ ಕಟುಕ ಪಕ್ಷ. ಅದಕ್ಕೆ ಕರುಣೆ, ದಯೆ, ದಾಕ್ಷಿಣ್ಯ ಎನ್ನುವುದು ಇರುವುದಿಲ್ಲ. ಇಡೀ ಕರ್ನಾಟಕವನ್ನೇ ಎಟಿಎಂ ಮಾಡಿಕೊಂಡು ಲೂಟಿ ಮಾಡುತ್ತಿರುವ ಕಾಂಗ್ರೆಸ್ ಸರಕಾರ, ಈಗ ರೈತರನ್ನೂ ಕೊಳ್ಳೆ ಹೊಡೆಯುತ್ತಿದೆ. ಒಂದು ಕೈಲಿ ಕೊಟ್ಟು ಹತ್ತು ಕೈಗಳಲ್ಲಿ ಕಿತ್ತುಕೊಳ್ಳುವ ರಾವಣರೂಪಿ ಕಾಂಗ್ರೆಸ್ ಸರಕಾರದ ಪಾಪದ ಕೊಡ ತುಂಬಿದೆ. ವಿನಾಶಕಾಲೇ ವಿಪರೀತ ಬುದ್ಧಿ! ವಿನಾಶಕಾಲೇ ವಿಪರೀತ ಆಸೆ!! ಎಂದು ಕಿಡಿಕಾರಿದ್ದಾರೆ.

ರಾಜಕೀಯ

ಬೆಂಗಳೂರು: ಜಾತ್ಯತೀತ ಜನತಾ ದಳ ನಾಡಿನ ಬರಪರಿಸ್ಥಿತಿಯ ವೀಕ್ಷಣೆಗೆ ‘ರೈತ ಸಾಂತ್ವನ ಯಾತ್ರೆ’ ಕೈಗೊಳ್ಳುವುದನ್ನು ನಾನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ. ಇದು ಒಂದು ಜವಾಬ್ದಾರಿಯುತ ವಿರೋಧ ಪಕ್ಷವಾಗಿ ಮಾಡಬೇಕಾದ ಕೆಲಸ. ಈ ಯಾತ್ರೆಯ ನಂತರ ಅವರು ಕೊಡುವ ವರದಿಯನ್ನು ನಮ್ಮ ಸರ್ಕಾರ ಗಂಭೀರವಾಗಿ ಪರಿಶೀಲಿಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೆನ್ನೆ ವ್ಯಂಗ್ಯವಾಗಿ ಹೇಳಿದ್ದರು. ಇದಕ್ಕೆ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿ ಅವರು ಇಂದು ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ಪ್ರತಿಪಕ್ಷಗಳ ಕೆಲಸ ಗುರುತಿಸುವ ನಿಮ್ಮ ʼಹೃದಯ ವೈಶಾಲ್ಯತೆʼಗೆ ನಾನು ಆಭಾರಿ. ರೈತ ಸಾಂತ್ವನ ಯಾತ್ರೆಯನ್ನು ಸ್ವಾಗತ ಮಾಡಿರುವ ನಿಮ್ಮ ʼದೊಡ್ಡʼ ಗುಣವನ್ನು ಮನಸಾರೆ ಕೊಂಡಾಡುತ್ತೇನೆ. ಜೆಡಿಎಸ್ ಸಲ್ಲಿಸಲಿರುವ ಬರ ಅಧ್ಯಯನ ವರದಿಯನ್ನು ಗಂಭೀರವಾಗಿ ಪರಿಗಣಿಸುವುದಾಗಿ ಹೇಳಿದ್ದೀರಿ, ಬಹಳ ಸಂತೋಷ ಎಂದು ಹೇಳಿದ್ದಾರೆ.

‘ರೈತ ಸಾಂತ್ವನ ಯಾತ್ರೆ’ಯ ಅನುಭವವನ್ನು ಕೇಂದ್ರದ ಜತೆಗೂ ಹಂಚಿಕೊಳ್ಳುತ್ತೇವೆ. ನಿಮಗೆ ಸಂಶಯ ಬೇಡ. ರಾಜ್ಯದ ಅಗತ್ಯಗಳಿಗೆ ಕೇಂದ್ರ ಸರಕಾರ ಹೇಗೆ ಸ್ಪಂದಿಸುತ್ತಿದೆ? ಅದಕ್ಕೆ ನಿಮ್ಮ ನೇತೃತ್ವದ ಸರಕಾರ ಎಷ್ಟು ʼಗಂಭೀರ(!?)ʼ ಪ್ರಯತ್ನ ಮಾಡಿದೆ, ಮಾಡುತ್ತಿದೆ ಎನ್ನುವುದು ನನಗೂ ತಿಳಿದಿದೆ. ಬರದ ಜತೆಗೆ, ವಿದ್ಯುತ್‌ ಬಿಕ್ಕಟ್ಟು, ಕಾವೇರಿ ಸಂಕಷ್ಟದ ವಿಷಯದಲ್ಲಿ ನಿಮ್ಮ ಸರಕಾರದ ʼಅಪರಿಮಿತ ಅಸಡ್ಡೆʼಯನ್ನು ಅರಿಯದಷ್ಟು ಮುಗ್ಧನೇ ನಾನು? ಎಂದು ವ್ಯಂಗ್ಯವಾಡಿದ್ದಾರೆ.

ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಅವರ ಜತೆ ಹೆಚ್.ಡಿ.ದೇವೇಗೌಡರು ಮತ್ತವರ ಕುಟುಂಬಕ್ಕೆ ಆತ್ಮೀಯತೆ ಇದೆ ಎಂಬುದರಲ್ಲಿ ಎರಡು ಮಾತಿಲ್ಲ. ಬಿಜೆಪಿ-ಜೆಡಿಎಸ್‌ ನಡುವೆ ಮೈತ್ರಿ ಏರ್ಪಟ್ಟಿದೆ ಎನ್ನುವುದೂ ನಿಜ. ರಾಜ್ಯದ ಹಿತಕ್ಕಾಗಿ ನಾವು ಪ್ರಧಾನಿಯವರ ಮುಂದೆಯೂ ದನಿ ಎತ್ತುತ್ತೇವೆ, ಅದು ನಮ್ಮ ಬದ್ಧತೆ. ಆದರೆ, ನಿಮಗೆ ರಾಜ್ಯದ ಬರ ಮತ್ತಿತರೆ ಸಂಕಷ್ಟಗಳಿಗಿಂತ ಈ ಮೈತ್ರಿಯೇ ಬಹುದೊಡ್ಡ ಸಂಕಷ್ಟವಾಗಿ ಪರಿಣಮಿಸಿದಂತೆ ತೋರುತ್ತಿದೆ! ಅಲ್ಲವೇ? ಎಂದು ಹೇಳಿದ್ದಾರೆ.

ಇದನ್ನೂ ಓದಿ: ಜಾತಿವಾರು ಜನಗಣತಿ: “ಸುಳ್ಳುಗಳನ್ನು ಹರಡುವ ಬದಲು ಉತ್ತರಿಸಿ..” – ಅಮಿತ್ ಶಾ ಅವರನ್ನು ಪ್ರಶ್ನಿಸಿದ ತೇಜಸ್ವಿ ಯಾದವ್!

ಪ್ರತಿಪಕ್ಷಗಳಾಗಿ ನಮ್ಮ ಪ್ರಯತ್ನ ನಾವು ಮಾಡುತ್ತೇವೆ, ಸರಕಾರವಾಗಿ ನಿಮ್ಮ ಸಾಧನೆ ಏನು? ಎಷ್ಟು ರೈತರಿಗೆ ಬೆಳೆ ವಿಮೆ ಕೊಡಿಸಿದ್ದೀರಿ? ಸರಕಾರದ ವತಿಯಿಂದ ಎಷ್ಟು ಪರಿಹಾರ ನೀಡಿದ್ದೀರಿ? ಅದನ್ನು ಹೇಳಬೇಕೆ ಹೊರತು, ಮಿತ್ರರ ನಡುವೆ ಹುಳಿ ಹಿಂಡುವ ಉಡಾಳತನ ತಮಗ್ಯಾಕೆ? ಎನ್ನುವುದು ನನ್ನ ವಿನಮ್ರ ಪ್ರಶ್ನೆ. ಎಂದು ಕಿಡಿಕಾರಿದ್ದಾರೆ.

236 ತಾಲೂಕುಗಳಲ್ಲಿ 216 ಬರಪೀಡಿತ ಎಂದು ಲೆಕ್ಕ ಕೊಟ್ಟಿದ್ದೀರಿ. 33,710 ಕೋಟಿ ರೂ. ಮೌಲ್ಯದ ಬೆಳೆಹಾನಿ ಆಗಿದ್ದು, ಕೇಂದ್ರಕ್ಕೆ 17,901 ಕೋಟಿ ರೂ. ಪರಿಹಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಹೇಳಿದ್ದೀರಿ, ಸರಿ. ಜತೆಗೆ; 343 ಕೋಟಿ ರೂ. ಬಿಡುಗಡೆ ಮಾಡಿದ್ದೇವೆ ಎಂದೂ ತಿಳಿಸಿದ್ದೀರಿ. ಅದನ್ನು ಯಾರಿಗೆ ಹಂಚಿದ್ದೀರಿ? ಎಂದು ಪ್ರಶ್ನಿಸಿದ್ದಾರೆ.

ಈ ರಾಜ್ಯದಲ್ಲಿ ಅತಿ ಹೆಚ್ಚು ಬಜೆಟ್‌ ಮಂಡಿಸಿ ‘ವಿಶ್ವವಿಖ್ಯಾತ ವಿತ್ತತಜ್ಞ’ರಾಗಿ ಮೆರೆಯುತ್ತಿರುವವರು ನೀವು. ಅಧಿಕಾರಕ್ಕೆ ಬಂದೊಡನೆ ವಿಶೇಷವಾಗಿ ವಿತ್ತಖಾತೆಯನ್ನು ತಮ್ಮಲ್ಲಿಯೇ ‘ಜೋಪಾನ’ ಮಾಡಿಕೊಳ್ಳುವ ನಿಮಗೆ, ಕೇಂದ್ರ ಸರಕಾರವು ಬರಕ್ಕೆ, ಪ್ರವಾಹಕ್ಕೆ ಯಾವ ರೀತಿ ಪರಿಹಾರ ಕೊಡುತ್ತದೆ ಎನ್ನುವ ಸಾಮಾನ್ಯ ತಿಳಿವಳಿಕೆಯೂ ಇಲ್ಲವೇ? ಎಂದು ಚೇಡಿಸಿದ್ದಾರೆ

ಹೋಗಲಿ, ನೀವು ಈ ರಾಜ್ಯದ ಮುಖ್ಯಮಂತ್ರಿ… ದೆಹಲಿಗೆ ಹೋಗಿ ಪ್ರಧಾನಿಗಳಿಗೆ ವಸ್ತುಸ್ಥಿತಿ ಮನವರಿಕೆ ಮಾಡಿಕೊಡಬೇಕಿತ್ತು. ಅದನ್ನೂ ಮಾಡಲಿಲ್ಲ, ಪ್ರತಿಷ್ಠೆ ನಿಮಗೆ. ಪ್ರಧಾನಿಗಳನ್ನು ಸದಾ ನಿಂದಿಸುತ್ತಾ ಕುಳಿತರೆ ಲಾಭವೇನು? ಇಲ್ಲಿ ವರ್ಗಾವಣೆ ದಂಧೆ, ಕಮೀಷನ್ ವಸೂಲಿ, ಆಪರೇಷನ್‌ ಹಸ್ತ, ಡಿನ್ನರ್‌-ಬ್ರೇಕ್‌ ಫಾಸ್ಟ್‌ ಮೀಟಿಂಗುಗಳಲ್ಲಿಯೇ ʼಭಾರೀʼ ಬ್ಯುಸಿ‌ ಆಗಿರುವ ನಿಮಗೆ ದೆಹಲಿಗೆ ಜನರ ಅಹವಾಲು ತೆಗೆದುಕೊಂಡು ಹೋಗಲು ಸಮಯವಾದರೂ ಎಲ್ಲಿದೆ? ಎಂದು ಪ್ರಶ್ನಿಸಿದ್ದಾರೆ  

ಇದನ್ನೂ ಓದಿ: ಜೆಡಿಎಸ್ ‘ರೈತ ಸಾಂತ್ವನ ಯಾತ್ರೆ’ ಕೈಗೊಳ್ಳುವುದನ್ನು ನಾನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ: ಸಿದ್ದರಾಮಯ್ಯ

ನೀವು ಕರೆದೊಯ್ಯುವ ಸರ್ವಪಕ್ಷ ನಿಯೋಗದಲ್ಲಿ ಜೆಡಿಎಸ್ ಪಕ್ಷವೂ ಇರುತ್ತದೆ, ನಮ್ಮ ಮಿತ್ರಪಕ್ಷ ಬಿಜೆಪಿಯೂ ಇರುತ್ತದೆ. ಇನ್ನೊಬ್ಬರ ಧೈರ್ಯದ ಬಗ್ಗೆ ಮಾತನಾಡುವ ನೀವು, ನಿಮ್ಮ ಸ್ಥೈರ್ಯದ ಬಗ್ಗೆಯೂ ಕೊಂಚ ಹೇಳಬೇಕಲ್ಲವೇ? ಮುಖ್ಯಮಂತ್ರಿಯಾಗಿ ನೀವು ರಾಜ್ಯಕ್ಕೆ ಸಂಬಂಧಿಸಿ ಪ್ರಧಾನಿಗಳನ್ನು,‌ ಸಂಬಂಧಿಸಿದ ಕೇಂದ್ರ ಸಚಿವರನ್ನು ಎಷ್ಟು ಸಲ ಭೇಟಿ ಆಗಿದ್ದೀರಿ? ಎಷ್ಟು ಅರ್ಜಿ ಕೊಟ್ಟಿದ್ದೀರಿ? ರಾಜ್ಯದ ನೆಲ-ಜಲ, ಇನ್ನಿತರೆ ಸಂಕಷ್ಟದ ವೇಳೆ ಈ ಇಳಿವಯಸ್ಸಿನಲ್ಲಿಯೂ ಮಾನ್ಯ ದೇವೇಗೌಡರು ನಡೆಸುತ್ತಿರುವ ಹೋರಾಟ ನಿಮಗೆ ಕಾಣಿಸಿಲ್ಲವೇ? ಕಾವೇರಿ ಬಗ್ಗೆ ಅವರು ಸಂಸತ್ತಿನಲ್ಲಿ ಸಿಡಿದೆದ್ದಾಗ ನಿಮ್ಮ ಪಕ್ಷದ ಸದಸ್ಯರೆಲ್ಲರೂ ಎಲ್ಲಿ ಅವಿತು ಕುಳಿತಿದ್ದರು? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಡಿನ್ನರ್‌-ಬ್ರೇಕ್‌ ಫಾಸ್ಟ್ ಮೀಟಿಂಗ್‌‌ ಮಾಡಿಕೊಂಡು ಆಪರೇಷನ್‌ ಹಸ್ತದ ಬಗ್ಗೆಯೇ ನಿಮ್ಮ ಸಚಿವರ ಬಳಿ ಅಲವತ್ತುಕೊಳ್ಳುತ್ತಿದ್ದೀರಿ. ಪಂಚರಾಜ್ಯಗಳಿಗೆ ಹಣ ಹಂಚಲು ರಾಜ್ಯವನ್ನು ದೋಚುವುದು ಹೇಗೆಂದು ಗುಟ್ಟು ಗುಟ್ಟಾಗಿ ಪಾಠ ಮಾಡುತ್ತಿದ್ದೀರಿ. ಜೆಡಿಎಸ್‌, ಬಿಜೆಪಿ ಶಾಸಕರು ಹಾಗೂ ಸೋತ ಅಭ್ಯರ್ಥಿಗಳನ್ನು ಆಪರೇಷನ್‌ ಮಾಡಲು ಗುಳ್ಳೆನರಿಗಳಂತೆ ಅವರ ಮನೆಗಳ ಮುಂದೆ ಕತ್ತಲಾದ ಮೇಲೆ ಹೊಂಚು ಹಾಕಿ ಕೂರುತ್ತಿದ್ದೀರಿ ಎಂದು ಕಟಕಿಯಾಡಿದ್ದಾರೆ.

ಕುತ್ತಿಗೆಗೆ ಗ್ಯಾರಂಟಿ ಬೋರ್ಡ್‌ ತಕಲಾಕ್ಕೊಂಡು ಹಾದಿಬೀದಿಯಲ್ಲಿ ಓಡಾಡುತ್ತಿದ್ದೀರಿ. ಐದು ತಿಂಗಳಿಗೇ ಭದ್ರತೆಯ ಗ್ಯಾರಂಟಿ ಇಲ್ಲದೆ ಬಾಲಗ್ರಹಪೀಡಿತ ನಿಮ್ಮ ಸರಕಾರ ಭಿನ್ನಮತಪೀಡಿತವಾಗಿದೆ. ಕುರ್ಚಿ ಉಳಿಸಿಕೊಳ್ಳಲು ನೀವೂ ಹೆಣಗಾಡುತ್ತಿದ್ದೀರಿ. ಹೌದಲ್ಲವೇ? ಆನ್ಸರ್ ಮಾಡಿ ಸನ್ಮಾನ್ಯ  ಸಿದ್ದರಾಮಯ್ಯನವರೇ? ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

ರಾಜಕೀಯ

ಬೆಂಗಳೂರು: ಜಾತ್ಯತೀತ ಜನತಾ ದಳ ನಾಡಿನ ಬರಪರಿಸ್ಥಿತಿಯ ವೀಕ್ಷಣೆಗೆ ‘ರೈತ ಸಾಂತ್ವನ ಯಾತ್ರೆ’ ಕೈಗೊಳ್ಳುವುದನ್ನು ನಾನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ. ಇದು ಒಂದು ಜವಾಬ್ದಾರಿಯುತ ವಿರೋಧ ಪಕ್ಷವಾಗಿ ಮಾಡಬೇಕಾದ ಕೆಲಸ. ಈ ಯಾತ್ರೆಯ ನಂತರ ಅವರು ಕೊಡುವ ವರದಿಯನ್ನು ನಮ್ಮ ಸರ್ಕಾರ ಗಂಭೀರವಾಗಿ ಪರಿಶೀಲಿಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ರೈತ ಸಾಂತ್ವನ ಯಾತ್ರೆಯ ನಂತರ ತಮ್ಮ ಅನುಭವವನ್ನು ರಾಜ್ಯ ಸರ್ಕಾರದ ಜೊತೆಯಲ್ಲಿ ಮಾತ್ರವಲ್ಲ ಕೇಂದ್ರ ಬಿಜೆಪಿ ಸರ್ಕಾರದ ಜೊತೆಯಲ್ಲಿಯೂ ಹಂಚಿಕೊಂಡರೆ ರಾಜ್ಯಕ್ಕೆ ಅನುಕೂಲವಾಗಬಹುದು. ಒಂದು ಪ್ರಾದೇಶಿಕ ಪಕ್ಷದ ಮುಖ್ಯಸ್ಥರಾಗಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಬರಪರಿಹಾರದ ವಿಷಯದಲ್ಲಿ ನಿರಂತರವಾಗಿ ಕರ್ನಾಟಕ ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ಆಗುತ್ತಿರುವ ಅನ್ಯಾಯದ ವಿವರ ಖಂಡಿತ ತಿಳಿದಿದೆ ಎಂದು ಭಾವಿಸುವೆ ಎಂದು ಹೇಳಿದ್ದಾರೆ.

ಹೊಸ ಬೆಳವಣಿಗೆಯಲ್ಲಿ ಸನ್ಮಾನ್ಯ ಹೆಚ್.ಡಿ.ಕುಮಾರಸ್ವಾಮಿ ಅವರು ಈಗ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಭಾರತೀಯ ಜನತಾ ಪಕ್ಷದ ಜೊತೆ ತಮ್ಮ ಪಕ್ಷದ ಮೈತ್ರಿಗೆ ಮುಂದಾಗಿದ್ದಾರೆ. ರಾಜ್ಯದ ಬಿಜೆಪಿ ನಾಯಕರನ್ನು ದೂರ ಇಟ್ಟಿರುವ ಪ್ರಧಾನಿ ನರೇಂದ್ರ ಮೋದಿ ಅವರು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಮತ್ತು ಕುಟುಂಬದ ಸದಸ್ಯರ ಜೊತೆ ಆತ್ಮೀಯವಾಗಿ ಸಂಬಂಧ ಇಟ್ಟುಕೊಂಡಿದ್ದಾರೆ. ಈ ಸೌಹಾರ್ದ ಸಂಬಂಧವನ್ನು ಬಳಸಿಕೊಂಡು ಕೇಂದ್ರದಿಂದ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಿ ನ್ಯಾಯ ದೊರಕಿಸಿಕೊಟ್ಟರೆ ಕನ್ನಡಿಗರು ಋಣಿಯಾಗಿರುತ್ತಾರೆ ಎಂದು ಹೇಳಿದ್ದಾರೆ.

ರಾಜ್ಯದ 236 ತಾಲೂಕುಗಳ ಪೈಕಿ 216 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದ್ದು, ಒಟ್ಟು ರೂ.33,710 ಕೋಟಿ ಮೌಲ್ಯದ ಬೆಳೆಹಾನಿಯಾಗಿದೆ. ಕೇಂದ್ರದಿಂದ ರೂ.17,901 ಕೋಟಿ ಪರಿಹಾರಕ್ಕೆ ಮನವಿ ನೀಡಲಾಗಿದೆ. ರಾಜ್ಯಕ್ಕೆ ಕೇಂದ್ರದ ಬರ ಅಧ್ಯಯನ ತಂಡ ಆಗಮಿಸಿದ್ದ ಸಂದರ್ಭದಲ್ಲಿ ಹಸಿರು ಬರವೂ ಸೇರಿದಂತೆ ಬರ ಪರಿಸ್ಥಿತಿಯ ಕುರಿತು ಮನವರಿಕೆ ಮಾಡಿಕೊಡಲಾಗಿದೆ. ಹೀಗಿದ್ದರೂ ಕೇಂದ್ರ ಬಿಜೆಪಿ ಸರ್ಕಾರದಿಂದ ಸಕಾರಾತ್ಮಕ ಸ್ಪಂದನೆಯೂ ಇಲ್ಲ, ಅನುದಾನವೂ ಇಲ್ಲ ಎಂದು ಕಿಡಿಕಾರಿದ್ದಾರೆ.

ಬರಪರಿಹಾರಕ್ಕಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಲು ನಮ್ಮ ಸರ್ಕಾರ ಸರ್ವಪಕ್ಷಗಳ ನಿಯೋಗವನ್ನು ಕರೆದೊಯ್ಯಲು ಸಿದ್ಧ ಇದೆ. ತಮ್ಮದೇ ಪಕ್ಷಕ್ಕೆ ಸೇರಿರುವ ಪ್ರಧಾನಮಂತ್ರಿಯವರನ್ನು ಭೇಟಿ ಮಾಡುವ ಧೈರ್ಯ ರಾಜ್ಯದ ಬಿಜೆಪಿ ನಾಯಕರಲ್ಲಿ ಇಲ್ಲ, ಕೇಂದ್ರದ ಬಿಜೆಪಿ ನಾಯಕರು ಕೂಡಾ ರಾಜ್ಯದ ಬಿಜೆಪಿ ನಾಯಕರನ್ನು ಲೆಕ್ಕಕ್ಕೆ ಇಟ್ಟುಕೊಂಡಿಲ್ಲ. ಈ ವಿಷಯದಲ್ಲಿ ಸನ್ಮಾನ್ಯ ಹೆಚ್.ಡಿ.ದೇವೇಗೌಡರು ಮತ್ತು ಅವರ ಪಕ್ಷ ಹೆಚ್ಚಿನ ಮುತುವರ್ಜಿ ವಹಿಸಿದರೆ ಇದು ಸಾಧ್ಯವಾಗಬಹುದು ಎಂದು ವ್ಯಂಗ್ಯವಾಡಿದ್ದಾರೆ.

ರಾಜಕೀಯ

ಬೆಂಗಳೂರು: ‘ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ರಾಮನಗರ ಜಿಲ್ಲೆಯಿಂದ ಕನಕಪುರ ತಾಲೂಕನ್ನು ಬೇರ್ಪಡಿಸಿ, ಬೆಂಗಳೂರಿಗೆ ಸೇರಿಸುವೆ’ ಎಂದು ನೀಡಿರುವ ಹೇಳಿಕೆ ಸರಿಯಲ್ಲ. ಕನಕಪುರ ಸುತ್ತಮುತ್ತ ಇರುವ ತಮ್ಮ ಆಸ್ತಿಗಳ ಮೌಲ್ಯವನ್ನು ಹೆಚ್ಚಿಸಿಕೊಂಡು, ತಮ್ಮ ಖಜಾನೆ ವೃದ್ಧಿ ಮಾಡಿಕೊಳ್ಳುವ ಏಕೈಕ ದುರುದ್ದೇಶದಿಂದ ಅವರು ಕನಕಪುರ ಜನರ ನೆಪ ಹೇಳಿಕೊಂಡು ಈ ಹೊಸ ನಾಟಕ ಶುರು ಮಾಡಿದ್ದಾರೆ ಎಂದು ಹೇಳಿದ್ದಾರೆ.

‘ಕನಕಪುರದವರು ರಾಮನಗರ ಜಿಲ್ಲೆಯವರಲ್ಲ, ಬೆಂಗಳೂರು ಜಿಲ್ಲೆಯವರು ಎಂಬುದನ್ನು ನೆನಪಿಟ್ಟುಕೊಳ್ಳಿ’ ಎನ್ನುವ ಅವರ ಮಾತು ರಾಮನಗರ ಜಿಲ್ಲೆಗೆ ಎಸಗುವ ಮಹಾದ್ರೋಹ. ಅಷ್ಟೇ ಅಲ್ಲ; ಕನಕಪುರ ಜನರಿಗೆ ಮಂಕುಬೂದಿ ಎರಚುವ ಹುನ್ನಾರ ಎಂದು ಕಿಡಿಕಾರಿದ್ದಾರೆ.

‘ನಿಮ್ಮ ಜೇಬಿಗೆ ನಾನು ನೇರವಾಗಿ ದುಡ್ಡು ಹಾಕಲು ಆಗುವುದಿಲ್ಲ, ಮನೆ ಕಟ್ಟಿಸಿಕೊಡಲು ಆಗುವುದಿಲ್ಲ’ ಎನ್ನುವ ಇವರು; ಇಷ್ಟು ದಿನ ಶಾಸಕರಾಗಿ, ಸಚಿವರಾಗಿ ಉಪ ಮುಖ್ಯಮಂತ್ರಿ ಆಗಿ ಮಾಡಿದ್ದೇನು? ತಮ್ಮ ಜೇಬು ತುಂಬಿಸಿಕೊಂಡಿದ್ದು, ತಮ್ಮ ಮನೆಯನ್ನು ಉದ್ಧಾರ ಮಾಡಿಕೊಂಡಿದ್ದಷ್ಟೇ. ಇಷ್ಟಕ್ಕೂ ಕನಕಪುರ ಸುತ್ತಮುತ್ತ ಯಾರ ಆಸ್ತಿಗಳಿವೆ? ಅದರಲ್ಲಿ ಬೇನಾಮಿಗಳು ಎಷ್ಟು? ಎಲ್ಲೆಲ್ಲಿ ಅಕ್ರಮವಾಗಿ ಬೇಲಿ ಹಾಕಲಾಗಿದೆ? ಅವೆಲ್ಲಾ ಅಕ್ರಮಗಳನ್ನು ಸಕ್ರಮ ಮಾಡಿಕೊಳ್ಳಲು ಬೆಂಗಳೂರು ಸೇರ್ಪಡೆಯ ನಾಟಕ! ಎಂದು ಪ್ರಶ್ನಿಸಿದ್ದಾರೆ.

ಈಗಾಗಲೇ ಕನಕಪುರಕ್ಕೆ ಒಂದು ಮೆಡಿಕಲ್ ಕೊಟ್ಟಿದ್ದರೂ ರಾಮನಗರ ಮೆಡಿಕಲ್ ಕಾಲೇಜನ್ನು ಕದ್ದು ಒಯ್ಯವುದರ ಹಿಂದೆಯೂ ಇದೇ ದುಷ್ಟ ತಂತ್ರ ಅಡಗಿದೆ. ಕನಕಪುರಕ್ಕೆ 52 ಕೀ.ಮೀ. ದೂರದಲ್ಲಿದೆ ಬೆಂಗಳೂರು. 25 ಕೀ.ಮೀ. ದೂರದಲ್ಲಿದೆ ರಾಮನಗರ. ಜನರಿಗೆ ಯಾವುದು ಅನುಕೂಲ? ದಿನ ಬೆಳಗಾದರೆ ಕನಕಪುರದವರು ಬೆಂಗಳೂರಿಗೆ ಅಲೆಯಬೇಕೆ? ಉಪ ಮುಖ್ಯಮಂತ್ರಿಗಳ ಒಳ ಉದ್ದೇಶದ ಬಗ್ಗೆ ಅನೇಕ ಅನುಮಾನಗಳು ಸಹಜವಾಗಿಯೇ ಮೂಡುತ್ತವೆ ಎಂದು ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಕನಕಪುರ ತಾಲೂಕನ್ನು ಬೆಂಗಳೂರು ನಗರದೊಂದಿಗೆ ಸೇರಿಸಲು ಡಿ.ಕೆ.ಶಿವಕುಮಾರ್ ಭರವಸೆ!

2006-2007ರಲ್ಲಿ ಕನಕಪುರ ಹೇಗಿತ್ತು? ಡಿಕೆಶಿ ಅವರು ನೆನಪು ಮಾಡಿಕೊಳ್ಳಬೇಕು. ಆಗಲೇ ಪಟ್ಟಣದ ಡಬಲ್ ರಸ್ತೆ ನಿರ್ಮಾಣ, ಕನಕಪುರ ಹೆಬ್ಬಾಗಿಲಿನಲ್ಲಿರುವ ಸೇತುವೆ ನಿರ್ಮಾಣಕ್ಕೆ ಯೋಜನೆ ಕೊಟ್ಟವನು ನಾನು. ಸಂಗಮದಲ್ಲಿ ಪ್ರವಾಹ ಬಂದಾಗಲೆಲ್ಲಾ ಅನೇಕರು ಹಗ್ಗ ಕಟ್ಟಿಕೊಂಡು ರಸ್ತೆ ದಾಟಲು ಹೋಗಿ ಸಾವನ್ನಪ್ಪುತ್ತಿದ್ದರು. ಇದನ್ನು ತಪ್ಪಿಸಲು ಅಲ್ಲಿ ಸೇತುವೆ ನಿರ್ಮಿಸಿ ಮಹದೇಶ್ವರ ಬೆಟ್ಟಕ್ಕೆ ಸುಲಭ ಸಂಪರ್ಕ ಕಲ್ಪಿಸುವ ಯೋಜನೆಗೆ ಇದೇ ಡಿ.ಕೆ.ಶಿವಕುಮಾರ್ ಅವರು 2006ರಲ್ಲಿಯೇ ವಿರೋಧ ಮಾಡಿದ್ದರು!

ಈಗ ಕನಕಪುರವನ್ನು ಬೆಂಗಳೂರು ಜಿಲ್ಲೆಗೆ ಸೇರಿಸುವ ಮಾತು!! ನದಿಯಲ್ಲಿ ಜನರು ಕೊಚ್ಚಿಕೊಂಡು ಹೋಗಿ ಸತ್ತರೂ ಪರವಾಗಿಲ್ಲ. ಆದರೆ, ಇವರ ರಿಯಲ್ ಎಸ್ಟೇಟ್ ವ್ಯವಹಾರ ಪೊಗದಸ್ತಾಗಿ ಸಾಗಬೇಕು. ಸದ್ಯ ಬೆಂಗಳೂರಿನಿಂದ ಕನಕಪುರಕ್ಕೆ ಸುರಂಗ ಕೊರೆಸುವೆ ಎಂದು ಹೇಳಲಿಲ್ಲ.. ಅದೇ ನಮ್ಮ ಪುಣ್ಯ ಎಂದು ವ್ಯಂಗ್ಯವಾಡಿದರು.

ಕನಕಪುರ ಮೆಡಿಕಲ್ ಕಾಲೇಜು ಚಿಕ್ಕಬಳ್ಳಾಪುರ ಪಾಲಾದ ಮೇಲೆ ಮೈತ್ರಿ ಸರಕಾರದ ಅವಧಿಯಲ್ಲಿ ಕನಕಪುರಕ್ಕೆ ಮತ್ತೊಂದು ಮೆಡಿಕಲ್ ಕಾಲೇಜ್ ಮಂಜೂರು ಮಾಡಿದ್ದೆ. ಆದರೆ, ಇದೇ ಮಹಾನುಭಾವರೇ ಮೈತ್ರಿ ಸರಕಾರವನ್ನು ತೆಗೆದ ಪರಿಣಾಮ ಆ ಯೋಜನೆ ನೆನೆಗುದಿಗೆ ಬಿತ್ತು. ಯೋಜನೆಯೂ, ಅದರ 350 ಕೋಟಿ ರೂ.ಗಳಿಗೂ ಹೆಚ್ಚಿನ ಅನುದಾನವೂ ಅಲ್ಲಿಯೇ ಉಳಿಯಿತು. ಉಪ ಮುಖ್ಯಮಂತ್ರಿ ಆದವರು ಆ ಯೋಜನೆಯನ್ನು ಪೂರ್ಣಗೊಳಿಸಬೇಕೆ? ಅಥವಾ ರಾಮನಗರ ಮೆಡಿಕಲ್ ಕಾಲೇಜ್ ಅನ್ನು ಹೈಜಾಕ್ ಮಾಡಲು ಹುನ್ನಾರ ನಡೆಸಬೇಕೇ? ಎಂದು ಪ್ರಶ್ನಿಸಿದರು.

ರಾಮನಗರ ಜಿಲ್ಲೆ ಕನಕಪುರ, ರಾಮನಗರ, ಚನ್ನಪಟ್ಟಣ, ಮಾಗಡಿ ಕ್ಷೇತ್ರಗಳ ಜನರ ಬಹುಕಾಲದ ಕನಸು. ಆ ಕನಸನ್ನು ನಾನು ನನಸು ಮಾಡಿದ್ದೇನೆ. ಈಗ ತಮ್ಮ ಸ್ವಾರ್ಥಕ್ಕಾಗಿ ರಾಮನಗರ ಜಿಲ್ಲೆ ಜನರ ಬೆನ್ನಿಗೆ ಚೂರಿ ಹಾಕಿ ಕನಕಪುರದ ಜನರ ಹಿತಕ್ಕೆ ಕೊಡಲಿಪೆಟ್ಟು ಹಾಕುವ ಹುನ್ನಾರ ನಡೆದಿದೆ. ಇದನ್ನು ಸಹಿಸುವ ಪ್ರಶ್ನೆಯೇ ಇಲ್ಲ. ಕನಕಪುರ ಸೇರಿ 4 ವಿಧಾನಸಭೆ ಕ್ಷೇತ್ರಗಳ ಜನರೂ ಒಟ್ಟಾಗಿ ಒಂದೇ ಜಿಲ್ಲೆಯಲ್ಲಿ ಉಳಿಯಲಿದ್ದಾರೆ. ಡಿ.ಕೆ.ಶಿವಕುಮಾರ್ ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.

ಇದನ್ನೂ ಓದಿ: ಇಸ್ರೇಲ್‌ಗೆ ತನ್ನನ್ನು ತಾನು ರಕ್ಷಿಸಿಕೊಳ್ಳುವ ಹಕ್ಕಿದೆ: ತನ್ನ ನಿಲುವನ್ನು ಬದಲಿಸಿಕೊಂಡ ಚೀನಾ!